ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಿಗೆ ಹಲವು ವ್ಯಾಖ್ಯಾನ

Published 10 ಮೇ 2024, 23:30 IST
Last Updated 10 ಮೇ 2024, 23:30 IST
ಅಕ್ಷರ ಗಾತ್ರ

ಛಾಪ್‌ ತಿಲಕ್‌ ಸಬ್‌ ಛೀನ್‌ಲಿ ಮೊಸೆ ನೈನಾ ಲಗೈಕೆ... ಈ ಹಾಡು ಕೇಳಿದಾಗಲೆಲ್ಲ ಸಣ್ಣದೊಂದು ನಗಿ ಅರಳ್ತದ. ಅದಕ್ಕ ಎರಡು ಕಾರಣ, ಒಂದು ಪರವೀನ್‌ ಅವರ ಗಡಸು ಧ್ವನಿಯ ಹಾಡು, ಇನ್ನೊಂದು ತಾಯಾನ ಸುಮಕೋಮಲ ಮೃದು ಧ್ವನಿಯ ಹಾಡು.

ಇವೆರಡೂ ಧ್ವನಿ ಕೇಳುವಾಗ ಅದೆಷ್ಟು ಸುರಕ್ಷಿತ ಅನಿಸ್ತಿತ್ತಲ್ಲ... ಆ ಸುರಕ್ಷಿತ ಭಾವ ಮತ್ತ ಮತ್ತ ನನ್ನ ಆವರಸ್ಕೊತದ. ಅದೇ ಬೀದರಿನ ಹದಿನೆಂಟು ಕಮಾನುಗಳ ಮನಿ, ದೊಡ್ಡ ಅಂಗಳ, ನನ್ನನ್ನು ಪ್ರೀತಿಸುವ ಜೀವಗಳು. ಮತ್ತು ಪ್ರೀತಿಯ ಇಂಥ ಹಲವಾರು ವ್ಯಾಖ್ಯಾನಗಳು.

ಅಮೀರ್‌ ಕುಸ್ರೊ ನನಗ ಪರಿಚಯ ಆಗಿದ್ದೇ ಈ ಹಾಡಿನಿಂದ. ಅದ್ಹೆಂಗ ಲಿಂಗಪತಿ ಶರಣಸತಿ ಪರಿಕಲ್ಪನೆ ಈ ಹಾಡಿನೊಳಗ ನಾಜೂಕಾಗಿ ಸೇರಕೊಂಡದ ಅಂದ್ರ, ಪ್ರೀತಿಯೊಳಗ ಸಮರ್ಪಣೆಯ ಭಾವವನ್ನು ಹೇಳಕೊಂತ ಹೋಗ್ತದ.

ಛಾಪ್‌ ತಿಲಕ್‌ ತೂನೆ ಛೀನ್‌ಲಿ... ಅಂದ್ರ ನನ್ನ ತಿಲಕ, ನನ್ನ ಗುರುತು ಇವೆರಡನ್ನೂ ನೀ ಕಸಿದೆಯಲ್ಲ.. ಒಂದೇ ಒಂದು ಕಣ್ನೋಟ ಬೆರೆಸಿ ಅಂತ ಸಣ್ಣ ಹುಸಿಮುನಿಸಿನೊಂದಿಗೆ ಪ್ರೀತಿಯ ವೇದನೆ, ನಿವೇದನೆ ಎರಡನ್ನೂ ಮಾಡ್ಕೊಂತ ಹೋಗ್ತಾರ.

ಪ್ರೇಮವೆಂಬುದು ಅದೆಂಥ ನಶೆ, ಕಣ್ತುಂಬ ನೀನೆ, ಮನಸಿನ ತುಂಬಾನೂ ನೀನೆ.. ಪ್ರೇಮವೆಂಬ ಭಟ್ಟಿಯ ಮಧುವ ಉಣಿಸಿ, ನನ್ನ ಮತವಾಲಿಯಾಗಿಸಿದೆ ಒಂದೇ ಒಂದು ಕಣ್ನೋಟ ಕೂಡಿಸಿ.. ಕಣ್ಣಾಗೊಂದು ಸಣ್ಣ ನಶಾ, ದೂರು ತುಟಿ ಮ್ಯಾಲೊಂದು ನಗಿ ಇಟ್ಕೊಂಡೇ ಕೇಳ್ತಾರ ಕುಸ್ರೊ. ಪ್ರೇಮಕಿ ಭಟ್ಟಿಸೆ ಮಧುವಾ ಪಿಲೈಕೆ/ ಮತ್‌ವಾಲಿ ಕರ್‌ಲೀನಿರೆ ಮೊಸೆ ನೈನಾ ಮಿಲೈಕೆ...ಒಮ್ಮೆ, ಹಂಗ ಆತ್ಮವನ್ನು ಸೀಳುವಂತೆ ನೋಟಗಳೆರಡು ಕೂಡಿದಾಗ, ಈ ಜೀವದ ಮುಂದ ಯಾವ ಗುಟ್ಟುಗಳೂ ಇನ್ನುಳಿಯೂದಿಲ್ಲ ಅನಿಸಿದಾಗ, ಆ ಜೀವದ ಜೊತಿಗೆ ನಾವು ನಮ್ಮ ಸಿಟ್ಟು, ಸೆಡವು, ಸಣ್ಣತನ, ಆಸೆ, ದುರಾಸೆ, ಕನಸು, ಕನವರಿಕೆ ಹಿಂಗ ಎಲ್ಲಾನೂ ಬಯಲಾಗುವಂಥ ಕಣ್ಣು ಕಲೆಯುವ ಆ ಕ್ಷಣ ಹಿಂಗಂತ, ಇಷ್ಟಂತ, ಇಷ್ಟೇ ಅಂತ ಹೇಳೂದೆ ತ್ರಾಸು.

ಆದ್ರ ನನ್ನ ಇಡೀ ವ್ಯಕ್ತಿತ್ವವನ್ನೇ ನಿನಗೆ ಸಮರ್ಪಿಸುತ್ತಲೇ, ನಿನ್ನೊಳಗೆ ಕರಗಿ ಹೋದೆ ಅಂತ ತಾವು ವಿರಹಿನಿಯಾಗಿ, ಪ್ರಣಯಿನಿಯಾಗಿ ಕುಸ್ರೊ ಅವರು ತಮ್ಮ ಪ್ರೀತಿಯ ಸೂಫಿ ಸಂತ ನಿಜಾಮ್‌ ಔಲಿಯಾ ಅವರಲ್ಲಿ ಆರ್ದ್ರಭಾವದಿಂದ ಕೇಳ್ತಾರ.

ಗೋರಿ ಗೋರಿ ಬಯ್ಯಾ, ಹರಿಹರಿ ಚೂಡಿಯಾ ಬಯ್ಯಾ ಪಕಡ್‌ ಧಾರ್‌ಲೀನಿರೇ ಮೊಸೆ ನೈನಾ ಮಿಲೈಕೆ.. ಎಂಥ ಬೆಳ್ಳನೆಯ ದುಂಡನೆಯ ಕೈಗಳು, ಹಸಿರು ಬಳೆಗಳಿರುವ ಮುಂಗೈ ನಿಮ್ಮ ಹಿಡಿತದೊಳಗ ಸೆರೆ ಆಯ್ತಲ್ಲ, ಕಂಗಳೆರಡೂ ಕಲೆತಾಗ ಅಂತಾರ. ತಮ್ಮನ್ನೇ ಬಂಧಿಯಾಗಿಸಿಯೂ, ತಮ್ಮಿಂದ ಮುಕ್ತರಾದ ಭಾವ. ದೇವಾ.. ಈ ಜೀವ ಇನ್ನು ನಿನ್ನೊಳಗ ಬಂಧಿ, ನಿನ್ನ ಹಿಡಿತದೊಳಗ ಸುರಕ್ಷಿತ ನಾನು ಅನ್ನುವ ನಿರಾಳ ಭಾವ.  ಕುಸ್ರೊ ತಮ್ಮನ್ನೇ ನಿಜಾಮ್‌ ಔಲಿಯಾ ಅವರಿಗೆ ಕೊಡ್ತಾರ.

ಇದೇನಿದು, ಪ್ರೇಮ ಕಾವ್ಯವೋ, ಭಕ್ತಿ ಸಮರ್ಪಣೆಯೋ.. ಎರಡೂ ಹೌದನಿಸುವ ಹಂಗ ಕುಸ್ರೊ ಮುಂದವರೀತಾರ.

ಕುಸ್ರೊ ನಿಜಾಮ್‌ ಬಲ್‌ ಬಲ್‌ ಜಾಯಿಯೆ ಮೊಹೆ ಸುಹಾಗನ್‌ ಕೀನಿ ರೆ..ಮೊಸೆ ನೈನಾ ಮಿಲಾಯಿಕೆ.. ನನ್ನ ಜೀವನದ ಪ್ರತಿ ಕ್ಷಣವನ್ನೂ ನಿನಗೆ ಸಮರ್ಪಿಸಿರುವೆ ನಿಜಾಮ್‌.. ನನ್ನ ವಧುವಾಗಿಸಿಕೊಂಡೆ ನೀ ಕಣ್ಣೊಂದಿಗೆ ನಿನ್ನ ದೃಷಿ ಬೆರೆಸಿ.. ಅಂತ್ಹೇಳಿ ಕುಸ್ರೊ ಈ ರಚನೆ ಮುಗಸ್ತಾರ.

ದೇವನೊಂದಿಗೆ ಜೀವದ ಮಿಲನ, ಸಮರ್ಪಣೆ, ಎಲ್ಲವನ್ನೂ ಕಸಿದೂ ವಧುವಾಗಿಸಿದ ಬಗೆಯ ಹೇಳಿದ ಖುಸ್ರೊ, ಅನುಪ್‌ ಜಲೋಠಾ ಧ್ವನಿಯೊಳಗೂ, ತಾಯನ ಧ್ವನಿಯೊಳಗೂ ಬ್ರಹ್ಮಾಂಡದ ನಾದದಲೆಯ ಮೂಲಕ ತಮ್ಮ ನಿಜಾಮನನ್ನ ಪ್ರತಿಸಲವೂ ಮಿಲನದ ಸಂಭ್ರಮದೊಳಗ ಮಿಂದೇಳ್ತಾರ.

ಪದಗಳು ಅಲ್ಲಲ್ಲೇ ಇರ್ತಾವ. ಪ್ರೀತಿನೂ ಇದ್ದೇ ಇರ್ತದ. ಆದ್ರ ಹೇಳೂದು, ಒಪ್ಕೊಳ್ಳೂದು, ನೀನೆ ಎಲ್ಲವೂ ಅಂತ ಅಪ್ಕೊಳ್ಳೂದು, ಹಂಗ ಅಪ್ಕೊಂಡಿದ್ದನ್ನ ಹಿಂಗೆಲ್ಲ ಹೇಳೂದು.. ಪ್ರೇಮವೆನಲು ಸರಳವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT