ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ: ಮೌಢ್ಯದ ಕತ್ತಲಿಗೆ ಅರಿವಿನ ಕಂದೀಲು

ಅನಿತಾ ಪೈಲೂರು- ಅನುವಾದ: ಕೀರ್ತಿಕುಮಾರಿ ಎಂ.
Published 18 ಫೆಬ್ರುವರಿ 2024, 0:27 IST
Last Updated 18 ಫೆಬ್ರುವರಿ 2024, 0:27 IST
ಅಕ್ಷರ ಗಾತ್ರ

ಜಿ.ಕೆ.ಪ್ರೇಮಾ ಅವರಿಗೆ ಆಗ ಹತ್ತು ವರ್ಷ. ಅವರಿಗಿಂತ ಎಂಟು ವರ್ಷ ದೊಡ್ಡವರಾಗಿದ್ದ ಚಿಕ್ಕಮ್ಮ ಹಾವು ಕಡಿತದಿಂದ ಮೃತಪಟ್ಟಿದ್ದರು. ಮುಟ್ಟಾದ ಕಾರಣ ‘ಗಡೀಪಾರಾಗಿ’ ಗ್ರಾಮದ ಹೊರವಲಯದಲ್ಲಿ ಇದ್ದ ಸಂದರ್ಭದಲ್ಲಿ ಅವರಿಗೆ ಹಾವು ಕಚ್ಚಿತ್ತು. ಕರ್ನಾಟಕದಲ್ಲಿರುವ ಕಾಡುಗೊಲ್ಲ ಸಮುದಾಯದ ಹಟ್ಟಿಗಳಲ್ಲಿ ಮುಟ್ಟಾದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಹೆಣ್ಣುಮಕ್ಕಳು ಊರ ಹೊರಗೆ ಇರಬೇಕೆಂಬ ದಮನಕಾರಿ ಸಂಪ್ರದಾಯ ಈಗಲೂ ಅಲ್ಲಲ್ಲಿ ಆಚರಣೆಯಲ್ಲಿದೆ.

ಕಾಡುಗೊಲ್ಲ ಮಹಿಳೆಯರು ಮುಟ್ಟಾದ ಮೊದಲ ಮೂರು ದಿನ ಗ್ರಾಮದ ಹೊರವಲಯದಲ್ಲಿ ಮರದ ಕೆಳಗೆ ಅಥವಾ ರಸ್ತೆಬದಿಯಲ್ಲಿ ನೆಲೆಸಬೇಕೆಂಬ ಅಲಿಖಿತ ಅಂಧಾಚರಣೆ ಚಾಲ್ತಿಯಲ್ಲಿದೆ. ನವಜಾತ ಶಿಶುವಿಗೆ ಜನ್ಮ ನೀಡಿದಾಗಲೂ ಇಂಥದ್ದೇ ನಿಯಮ ಅನ್ವಯಿಸುತ್ತದೆ. ಹೆರಿಗೆ ಆದ ನಂತರ ಮಗು ಮತ್ತು ತಾಯಿ ಗ್ರಾಮದ ಹೊರಗೆ, ಕನಿಷ್ಠ ಸೌಲಭ್ಯಗಳೂ ಇರದ ಗುಡಿಸಲಿನಲ್ಲಿ ಸುಮಾರು ಒಂದು ತಿಂಗಳು ಇರಬೇಕಿದೆ. ದೇವರು ಮತ್ತು ಪಿತೃಪ್ರಭುತ್ವ ಕುರಿತಾದ ಆಳವಾದ ಭಯ ಇದಕ್ಕೆ ಮೂಲ.

‘ಚಿಕ್ಕಮ್ಮ ಮೃತಪಟ್ಟಾಗ ಈ ಸಂಪ್ರದಾಯದ ವಿರುದ್ಧ ಧ್ವನಿ ಎತ್ತಲು ನಾನು ತುಂಬಾ ಚಿಕ್ಕವಳು. ಆದರೆ ಈ ಅನಿಷ್ಟ ಆಚರಣೆಯನ್ನು ಪಾಲನೆ ಮಾಡಬಾರದೆಂದು ಅಂದೇ ನಿರ್ಧರಿಸಿದೆ’ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆಯ ಚಿತ್ತಯ್ಯನಹಟ್ಟಿಯ ಕಾಡುಗೊಲ್ಲ ಕುಟುಂಬದ ಹೆಣ್ಣುಮಗಳು ಪ್ರೇಮಾ.

ಮೂರು ದಶಕಗಳ ನಂತರ ಇಂಥ ಮೂಢನಂಬಿಕೆ ಮತ್ತು ಅಂಧಾಚರಣೆಗಳ ಕಪಿಮುಷ್ಠಿಯಿಂದ ಮಹಿಳೆಯರನ್ನು ಮತ್ತು ಸಮುದಾಯವನ್ನು ಮುಕ್ತಗೊಳಿಸಲು ಪ್ರೇಮಾ ಅವರು ಪ್ರೇರಕ ಶಕ್ತಿಯಾಗಿದ್ದಾರೆ. ಮೌಢ್ಯದ ಕರಿನೆರಳಿನಿಂದ ನೊಂದ, ನರಕಯಾತನೆ ಅನುಭವಿಸಿದ ಅದೆಷ್ಟೋ ಹೆಣ್ಣುಮಕ್ಕಳ ಪಾಲಿಗೆ ಬೆಳಕಾಗಿದ್ದಾರೆ. ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇರುವ ಸಮುದಾಯದ ಹಲವು ಹಟ್ಟಿಗಳಲ್ಲಿ ಪ್ರೇಮಾ ಅವರ ‘ಜಾಗೃತಿ’ಯ ಪ್ರಭಾವವನ್ನು ಕಾಣಬಹುದು.  

ಪ್ರೇಮಾ ಅವರ ನೇರ ಮಧ್ಯಪ್ರವೇಶದ ನಂತರ ಕನಿಷ್ಠ ಹತ್ತು ಹಟ್ಟಿಗಳಲ್ಲಿ ಈ ಅಂಧಾಚರಣೆಗೆ ಪೂರ್ಣವಿರಾಮ ಬಿದ್ದಿದೆ. ಹಲವು ಕಡೆಗಳಲ್ಲಿ ಈ ಅನಿಷ್ಟ ಪದ್ಧತಿಯನ್ನು ಹಂತಹಂತವಾಗಿ ಕೈಬಿಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಪ್ರೇಮಾ ಅವರಿಗೆ ಈ ಯಶಸ್ಸು ಸುಲಭವಾಗಿ ದಕ್ಕಿಲ್ಲ. ಅವರ ಸಂಕಲ್ಪಕ್ಕೆ ಹಲವು ಪರೀಕ್ಷೆಗಳು ಎದುರಾಗಿದ್ದವು. ಕುಟುಂಬಸ್ಥರು ಮತ್ತು ಗ್ರಾಮಸ್ಥರ ನಿಲುವನ್ನು ನೇರವಾಗಿ ವಿರೋಧಿಸಲಾಗದೆ ಮೊದಲು ಮುಟ್ಟಾದ ವಿಷಯವನ್ನು ಸ್ವತಃ ತಾಯಿಗೂ ತಿಳಿಸುತ್ತಿರಲಿಲ್ಲ. ‘ಮೂರು ವರ್ಷ ಮುಟ್ಟಾದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದೆ. ನಾನು ಏನು ಮಾಡುತ್ತಿದ್ದೇನೆ ಎಂದು ನನ್ನ ತಾಯಿಗೂ ಬಹುಶಃ ತಿಳಿದಿತ್ತು. ಆದರೆ ಅವರು ಎಂದೂ ಈ ಬಗ್ಗೆ ಪ್ರಶ್ನಿಸಲಿಲ್ಲ ಮತ್ತು ‘ವನವಾಸ’ ಅನುಭವಿಸುವಂತೆ ಒತ್ತಾಯಿಸಲಿಲ್ಲ’ ಎನ್ನುತ್ತಾರೆ ಪ್ರೇಮಾ.

‘ತಂಗಿ ಮೃತಪಟ್ಟ ನಂತರ ಈ ಪದ್ಧತಿ ಬದಲಾಗಬೇಕೆಂದು ಬಯಸಿದ್ದೆ. ಆದರೆ ಅದರ ವಿರುದ್ಧ ಸೆಟೆದು ಹೋರಾಡುವ ಧೈರ್ಯ ಇರಲಿಲ್ಲ’ ಎನ್ನುತ್ತಾರೆ ಪ್ರೇಮಾ ಅವರ ತಾಯಿ ಯಶೋದಾ. ಇವರು ಏಳು ಮಕ್ಕಳಿಗೆ ಜನ್ಮ ನೀಡಿದ್ದು, ಪ್ರತಿ ಬಾರಿ ಮಗು ಜನಿಸಿದಾಗಲೂ ಊರ ಹೊರಗೆ ತಿಂಗಳು ಕಾಲ ಕಳೆದಿದ್ದರು. ಜೊತೆಗೆ ಪ್ರತಿ ಬಾರಿ ಮುಟ್ಟಿನ ಸಮಯದಲ್ಲೂ ಇಂಥದ್ದೇ ಯಾತನೆ ಅನುಭವಿಸಿದ್ದರು. ಇದೇ ಕಾರಣಕ್ಕೆ ಪ್ರೇಮಾ ಅವರ ‘ರಹಸ್ಯ’ ತಿಳಿದೂ ತಿಳಿಯದಂತೆ ನಟಿಸಿ ಅವರಿಗೆ ಬೆಂಬಲವಾಗಿ ನಿಂತರು.

ಪ್ರೇಮಾ ಅವರು ಮುಚ್ಚಿಟ್ಟಿದ್ದ ‘ಸತ್ಯ’ವನ್ನು ಬಯಲು ಮಾಡಿದಾಗ ನಿರೀಕ್ಷೆಯಂತೆಯೇ ಗ್ರಾಮದಲ್ಲಿ ವಿರೋಧ ಎದುರಾಯಿತು. ಸ್ವಾವಲಂಬಿಯಾಗಲು ಮತ್ತು ಮೌಢ್ಯಾಚರಣೆಗಳ ಕಬಂಧಬಾಹುಗಳಿಂದ ಪಾರಾಗಲು ವಿದ್ಯೆಯೊಂದೇ ಅಸ್ತ್ರ ಎಂದು ಅವರಿಗೆ ತಿಳಿದಿತ್ತು. ಒಂದು ಹೆಜ್ಜೆ ಮುಂದಿಟ್ಟು ಕಡುಬಡತನದ ನಡುವೆಯೂ ಉನ್ನತ ಶಿಕ್ಷಣ ಪಡೆದರು. ಕಾಡುಗೊಲ್ಲ ಸಮುದಾಯದ ಮಹಿಳೆಯರ ಕುರಿತು ಸಂಶೋಧನೆ ಮಾಡಿ ಪಿಎಚ್‌.ಡಿ ಪಡೆದರು. ಕ್ಷೇತ್ರ ಅಧ್ಯಯನದ ಮೂಲಕ ಸಮುದಾಯದ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಸಮುದಾಯದ ಸಂಸ್ಕೃತಿ–ಆಚರಣೆಗಳ ಬಗ್ಗೆ ಪ್ರೇಮಾ ಅವರಿಗಿದ್ದ ತಿಳಿವಳಿಕೆಯನ್ನು ಕಂಡು ಹಿರಿಯರು, ಅದರಲ್ಲೂ ನಿರ್ಧಾರ ಕೈಗೊಳ್ಳುವ ಪ್ರಮುಖರು ಪ್ರಭಾವಿತರಾದರು. ಪಿಎಚ್.ಡಿ ಪೂರ್ಣಗೊಳಿಸುವ ಮೂಲಕ ಡಾಕ್ಟರೇಟ್ ಪಡೆದ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಜನರ ಪ್ರೀತಿಗೂ ಕಾರಣರಾದರು.

ಸಮುದಾಯ ಮತ್ತು ಮಹಿಳೆಯರ ವಿಶ್ವಾಸ ಗಳಿಸಲು ಪ್ರೇಮಾ ಅವರಿಗೆ ಎರಡು ವಿಷಯಗಳು ನೆರವಾದವು. ಅನುಭವ ಆಧಾರಿತ ಪ್ರಯತ್ನ ಒಂದೆಡೆಯಾದರೆ, ಇನ್ನೊಂದೆಡೆ ಅವರು ಸಮುದಾಯವನ್ನಾಗಲಿ, ಅದರ ಸಂಸ್ಕೃತಿಯನ್ನಾಗಲಿ ದೂಷಿಸದೆ, ಕಾಲಕ್ಕೆ ಅನುಗುಣವಾಗಿ ಹೇಗೆ ಬದಲಾವಣೆಗಳನ್ನು ಕಂಡುಕೊಳ್ಳಬೇಕೆಂದು ವಿವರಿಸಿದರು ಎಂದು ಸಮುದಾಯದ ಸಾಮಾಜಿಕ ಕಾರ್ಯಕರ್ತ ಉಜ್ಜಜ್ಜಿ ರಾಜಣ್ಣ ಹೇಳುತ್ತಾರೆ.

ಕಾನೂನಿನಲ್ಲಿ ಈ ಪದ್ಧತಿಗೆ ನಿಷೇಧವಿದ್ದರೂ, ಅರಿವು ಮತ್ತು ಸಮಾಲೋಚನೆಯಿಂದ ಮಾತ್ರ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯ. ಶತಮಾನಗಳಿಂದ ಸ್ವಾಭಾವಿಕವಾಗಿ ಇಂಥ ನಂಬಿಕೆಗಳನ್ನು ಬೆಳೆಸಿಕೊಂಡಿರುವ ಸಮುದಾಯದ ಮೇಲೆ ಏಕಾಏಕಿ ಬದಲಾವಣೆ ಹೇರಲು ಸಾಧ್ಯವಿಲ್ಲ ಎಂಬುದು ಪ್ರೇಮಾ ಅವರ ಅಭಿಪ್ರಾಯ. ಮುಟ್ಟಿನ ಸಮಯದಲ್ಲಿ ಮಹಿಳೆಯರು ವಾಸಿಸಲು ಸರ್ಕಾರದ ಯೋಜನೆಗಳಡಿ ‘ಮುಟ್ಟಿನ ಮನೆ’ ನಿರ್ಮಾಣ ಮಾಡುವುದನ್ನೂ ಅವರು ಒಪ್ಪುವುದಿಲ್ಲ. ಹೀಗೆ ಕಟ್ಟಡ ನಿರ್ಮಾಣ ಮಾಡುವುದರಿಂದ ಇಂಥ ಅನಿಷ್ಟ ಆಚರಣೆಗಳಿಗೆ ಬೆಂಬಲ, ಪ್ರೋತ್ಸಾಹ ನೀಡಿದಂತಾಗುತ್ತದೆ ಎನ್ನುವುದು ಅವರ ಅಭಿಮತ.

ಹಲವು ವರ್ಷಗಳ ಅವಿರತ ಶ್ರಮದ ನಂತರ 2014ರಲ್ಲಿ ಕೊನೆಗೂ ಅವರಿಗೆ ಮೊದಲ ಯಶ ಲಭಿಸಿತು. ಮುಟ್ಟಿನ ಅವಧಿಯಲ್ಲಿ ಮಹಿಳೆಯರನ್ನು ಹೊರಗಿಡುವ ಸಂಪ್ರದಾಯಕ್ಕೆ ಕೊನೆ ಹಾಡಲು  ಚಿತ್ತಯ್ಯನಹಟ್ಟಿ ಗ್ರಾಮವು ನಿರ್ಧರಿಸಿತು. ಆದರೆ ಈಗಲೂ ಕೆಲವು ಮನೆಗಳಲ್ಲಿ ಸಾಂಕೇತಿಕವಾಗಿ ಈ ಪದ್ಧತಿ ಆಚರಣೆಯಲ್ಲಿದೆ. ಮುಟ್ಟಾದ ಮಹಿಳೆಯರು ಮನೆಯ ವರಾಂಡದಲ್ಲಿ ಇರುತ್ತಾರೆ.

ಈ ಯಶಸ್ಸಿನಿಂದ ಪ್ರೇರಿತರಾದ ಪ್ರೇಮಾ ಅವರು ಇತರ ಹಟ್ಟಿಗಳಲ್ಲೂ ಇಂಥದ್ದೇ ಬದಲಾವಣೆ ತರಲು ಯತ್ನಿಸಿದರು. 2014ರಲ್ಲಿ ರಾಜ್ಯ ಸರ್ಕಾರವು ಈ ವಿಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರೇಮಾ ಅವರನ್ನು ಆಹ್ವಾನಿಸಿತು. ಇದರಿಂದಾಗಿ ಅವರು ತಂಡದೊಂದಿಗೆ ಪ್ರತಿ ಕಾಡುಗೊಲ್ಲ ಗ್ರಾಮಕ್ಕೆ ಭೇಟಿ ನೀಡಿದರು.

ತುಮಕೂರು ಜಿಲ್ಲೆಯ ರಾಮಪ್ಪನಹಟ್ಟಿ ನಿವಾಸಿಗಳು ಪ್ರೇಮಾ ಅವರ ಕಾಯಕವನ್ನು ಕಣ್ಣಾರೆ ಕಂಡಿದ್ದಾರೆ. ಇಲ್ಲಿನ ನಿವಾಸಿ ರಾಜಮ್ಮ ತಮಗಾದ ಅನುಭವವನ್ನು ಹೀಗೆ ಹೇಳುತ್ತಾರೆ, ‘ವಿದ್ಯಾರ್ಥಿನಿ ಮತ್ತು ಬಾಣಂತಿ ಜೊತೆಗೆ ನಾನೂ ‘ವನವಾಸ’ದಲ್ಲಿದ್ದೆ. ಜೋರಾಗಿ ಮಳೆ ಸುರಿಯುತ್ತಿತ್ತು. ನಮ್ಮನ್ನು ಒಳಗೆ ಬಿಟ್ಟುಕೊಳ್ಳುವಂತೆ ಹಿರಿಯರನ್ನು ಕೇಳಿಕೊಂಡೆವು. ಆದರೆ ಅವರು ನಮ್ಮ ಕೂಗನ್ನು ಕೇಳಿಸಿಕೊಳ್ಳಲೇ ಇಲ್ಲ. ‘ಹೋರಾಟಗಾರ್ತಿ’ಯಾಗಲು ಪ್ರಯತ್ನಿಸಿದ್ದಕ್ಕಾಗಿ ಕುಟುಂಬಸ್ಥರು ನನಗೆ ಛೀಮಾರಿ ಹಾಕಿದರು. ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಪ್ರೇಮಾ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಮಧ್ಯಪ್ರವೇಶಿಸಿದರು. ಗ್ರಾಮದ ಪೂಜಾರಿ ಮತ್ತು ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಹಳೆಯ ಪದ್ಧತಿಗೆ ಮರಳುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಜ್ಞೆ ಮಾಡಿದರು.

ಆದರೆ ಹೋರಾಟ ಇಲ್ಲಿಗೆ ಮುಗಿದಿಲ್ಲ. ಮಹಿಳೆಯರು ಮುಟ್ಟು ಮತ್ತು ಪ್ರಸವಾನಂತರದ ಅವಧಿಯಲ್ಲಿ ಮನೆಯಲ್ಲಿಯೇ ಇರಲು ಆರಂಭಿಸಿದ ಬಳಿಕ ಸಮುದಾಯಕ್ಕೆ ಕೆಡುಕು ಉಂಟಾಗಿದೆ ಎಂದು ಚಿತ್ತಯ್ಯನಹಟ್ಟಿಯ ಕೆಲ ಪುರುಷರು ಭಾವಿಸಿದ್ದಾರೆ. ‘ಹಳೆ ಪದ್ಧತಿಯನ್ನು ಮರು ಜಾರಿಗೆ ತರಲು ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ 45 ವರ್ಷದ ಕರಿಯಪ್ಪ. 

ಆದರೆ ಅದೇ ಗ್ರಾಮದ 17 ವರ್ಷದ ಜ್ಯೋತಿ ಅನಿಷ್ಟ ಆಚರಣೆಗೆ ಪೂರ್ಣವಿರಾಮ ಹಾಕುವ ನಿರ್ಧಾರಕ್ಕೆ ಬದ್ಧಳಾಗಿದ್ದಾಳೆ. ‘ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರು ಭಾಗವಹಿಸಬೇಕು. ನಾನು ಸಹ ಪ್ರೇಮಾ ಅಕ್ಕನೊಂದಿಗೆ ಕೆಲಸ ಮಾಡುತ್ತೇನೆ.  ಅವರ ಹಾದಿಯಲ್ಲೇ ಮುನ್ನಡೆಯುತ್ತೇನೆ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ’ ಎನ್ನುತ್ತಾಳೆ ಆಕೆ.

ಯುವಪೀಳಿಗೆಯ ಇಂಥ ಮನವರಿಕೆಯು ವೈಯಕ್ತಿಕ ಮತ್ತು ಸಮುದಾಯ ಮಟ್ಟದಲ್ಲಿ ಸವಾಲುಗಳು ಎದುರಾದಾಗಲೂ ಪ್ರೇಮಾ ಅವರಿಗೆ ಹೊಸಶಕ್ತಿ ಮತ್ತು ಪ್ರೇರಣೆ ನೀಡುತ್ತಿದೆ.

ಪ್ರೇಮಾ
ಪ್ರೇಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT