ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳವಿಯಲ್ಲೊಂದು ಅರಣ್ಯ ಉಳಿವಿನ ಕಥನ

ಸಂದೀಪ ಯು.ಎಲ್
Published 28 ಏಪ್ರಿಲ್ 2024, 0:28 IST
Last Updated 28 ಏಪ್ರಿಲ್ 2024, 0:28 IST
ಅಕ್ಷರ ಗಾತ್ರ

ಶ್ರೀಧರ ಸೀತಾರಾಮ ಹೆಗಡೆ ಕೊಳಗಿ– ಇದು ಸಾಗರ, ಸೊರಬ ತಾಲ್ಲೂಕಿನ ಪರಿಸರ ಪ್ರೇಮಿಗಳಿಗೆ, ನಾಟಿ ವೈದ್ಯರಿಗೆ ಚಿರಪರಿಚಿತ ಹೆಸರು. ಕುಟುಂಬ ನಿರ್ವಹಣೆಗಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಹುಟ್ಟೂರು ಸಿದ್ದಾಪುರದಿಂದ ಸೊರಬ ತಾಲ್ಲೂಕಿನ ಉಳವಿಯ ಕೊಪ್ಪಲು ಗ್ರಾಮಕ್ಕೆ ಬಂದರು. ಅಲ್ಲಿ ಮನೆ ಸಮೀಪದಲ್ಲಿ ಖಾಲಿ ಜಾಗದಲ್ಲಿ ಮುನ್ನೂರಕ್ಕೂ ಹೆಚ್ಚಿನ ಔಷಧೀಯ, ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಕಾಡುಜಾತಿಯ ಗಿಡಗಳನ್ನು ಮತ್ತು ಜೀವವೈವಿಧ್ಯತೆಯ ರಕ್ಷಣೆಗಾಗಿ ಕಾಡುಜಾತಿಯ ಹಣ್ಣಿನಗಿಡಗಳನ್ನು ನೆಟ್ಟು, ಪೋಷಿಸಿಕೊಂಡು ಬರುತ್ತಿದ್ದಾರೆ.

ಯಾರು ಏನೇ ಹೇಳಿದರೂ ಮಲೆನಾಡಿನ ಮಡಿಲಿನಲ್ಲಿ ಬೋರ್‌ವೆಲ್ ತೆಗೆಸದೇ, ಕೂಲಿಕಾರ್ಮಿಕರ ಸಹಾಯದಿಂದ ಮನೆಬಳಿಯಿರುವ ಬಾವಿಯಿಂದ ನೀರನ್ನು ಹೊತ್ತುಕೊಂಡು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೂ ಸಾಗಿ ನೀರುಣಿಸಿ ಗಿಡಗಳನ್ನು ಪೋಷಿಸುತ್ತಿದ್ದಾರೆ. ಹೆಚ್ಚಿನ ಗಿಡಗಳ ಬುಡದಲ್ಲಿ 20 ಲೀಟರ್ ನೀರಿನ ಕ್ಯಾನ್‌ಗಳನ್ನು ಇರಿಸಿ ಅದರ ಬುಡದಲ್ಲಿ ಸಣ್ಣದಾಗಿ ರಂಧ್ರವನ್ನು ಮಾಡಿ, ಹನಿ ನೀರಾವರಿ ಪದ್ಧತಿ ಅಭಿವೃದ್ಧಿಪಡಿಸಿದ್ದಾರೆ. ‘ಕಾಂತಾರಯಜ್ಞ’ ಹೆಸರಿನ ಸಂಘಟನೆಯನ್ನ ಮಾಡಿಕೊಂಡು ಪರಿಸರ ಸಂರಕ್ಷಣೆ ಹಾಗೂ ಜೀವವೈವಿಧ್ಯತೆಯ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಕಾಡಿನಹಣ್ಣುಗಳು

ಮನೆ ಬಳಿಯ ಸೊಪ್ಪಿನ ಬೆಟ್ಟವನ್ನೇ ವನವಾಗಿಸಿ ಹಣ್ಣು ಸಂಪಿಗೆ, ಊಡಲ, ಹಾಲೆ, ಹಲಗೆ, ಗುಡ್ಡೆಗೇರು, ಅಂಕೋಲೆ, ಹಣಗೇರಿ, ಪರಿಗೆ, ಮುಳ್ಳಣ್ಣು, ನುರುಕಲು, ಮುರುಗಲು, ತುಮ್ರಿ, ಚಳ್ಳೆ, ನೇರಳೆ, ಗೊಣ್ಣೆಹಣ್ಣು, ಹೆಬ್ಬಲಸು, ಏಕನಾಯಕ, ಬರ್ಕಬಾಳೆ, ಅತ್ತಿ, ದೊಡ್ಡ ಏಕನಾಯಕ, ಕೌಳಿ– ಹೀಗೆ ಸುಮಾರು 20ಕ್ಕೂ ಹೆಚ್ಚಿನ ಅಪರೂಪದ ಕಾಡುಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೇ, ‘ನವಗ್ರಹವನ’ವನ್ನೂ ನಿರ್ಮಿಸಿದ್ದಾರೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳ ಅಸ್ತಿತ್ವಕ್ಕೂ ಸಹಕಾರಿಯಾಗುವ ಗಿಡಗಳನ್ನು ಬೆಳೆಸಿರುವುದು ವಿಶೇಷ. ತಾವು ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಜಾಗದಲ್ಲಿ ಹಾಗೂ ಸುತ್ತಲೂ ಮಳೆಯ ನೀರು ಬಿದ್ದು ಹರಿದುಹೋಗಿ ವ್ಯರ್ಥವಾಗದಂತೆ ಬಾಕ್ಸ್ ಮಾದರಿಯಲ್ಲಿ ನೀರು ಇಂಗಲು ಅವಕಾಶವನ್ನು ಕಲ್ಪಿಸಿ, ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಅಲ್ಲಲ್ಲಿ ಚಿಕ್ಕ ಚಿಕ್ಕ ಕಾಲುವೆಗಳನ್ನು ನಿರ್ಮಿಸಿ, ಮಳೆಯ ನೀರು ಇಂಗುವಂತೆ ಮಾಡಿದ್ದಾರೆ. 

ತಾವು ನೆಟ್ಟಿರುವ ಗಿಡಗಳಿಗೆ ಹಾಗೂ ನೈಸರ್ಗಿಕವಾದ ಗಿಡ, ಮರಗಳಿಗೆ ಬೇಸಿಗೆಯಲ್ಲಿ ಬೆಂಕಿ ತಗುಲದಂತೆ ಅವುಗಳ ಸುತ್ತಲೂ ಎರಡು ಅಡಿ ಅಗಲದಷ್ಟು ಜಾಗದಲ್ಲಿನ ದರಕುಗಳನ್ನು ಮತ್ತು ಹುಲ್ಲುಗಳನ್ನು ಆಗಾಗ ಚೊಕ್ಕಮಾಡುತ್ತಾ, ವೃಕ್ಷರಾಶಿಯನ್ನು ಮಕ್ಕಳಂತೆ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ತಾವು ಬೆಳೆಸುತ್ತಿರುವ ಯಾವುದೇ ಮರ, ಗಿಡ, ಬಳ್ಳಿಗಳ ಉತ್ಪನ್ನಗಳನ್ನು ಅವಶ್ಯಕತೆ ಇರುವವರಿಗೆ ಉಚಿತವಾಗಿಯೇ ಕೊಡುತ್ತಾರೆ. ಸುಮಾರು 30-40 ವರ್ಷಗಳ ಹಿಂದಿನಿಂದಲೇ ಸುತ್ತಲಿನ ಆಯುರ್ವೇದ ವೈದ್ಯರು ಔಷಧಿಗಳನ್ನು ತಯಾರಿಸಲು ಇವರ ಬಳಿ ಬಂದು, ಮರಗಳಲ್ಲಿ ಬಿಡುತ್ತಿದ್ದ ನೆಲ್ಲಿಕಾಯಿ-ತಾರೀಕಾರಿ-ಅಣಲೇಕಾಯಿ ಮುಂತಾದವುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂದಿಗೂ ಹೆಗಡೆಯವರು ತಾವು ಬೆಳೆಯುತ್ತಿರುವ ಉಪಯುಕ್ತ ಉತ್ಪನ್ನಗಳನ್ನು ಉಚಿತವಾಗಿಯೇ ನೀಡುತ್ತಾರೆ.

ಇಲ್ಲಿಗೆ ಬಂದ ಅತಿಥಿಗಳಿಗೆಲ್ಲರಿಗೂ ಒಂದೊಂದು ಗಿಡವನ್ನು ನೀಡುವ ಸಂಪ್ರದಾಯವನ್ನು ಇವರು ರೂಢಿಸಿಕೊಂಡು ಬಂದಿದ್ದಾರೆ. ಪ್ರತಿವರ್ಷವೂ ಆಸಕ್ತರನ್ನು ಗುರುತಿಸಿ ಬೇರೆ ಬೇರೆ ಜಾತಿಯ ಕನಿಷ್ಠ 101 ಗಿಡಗಳನ್ನು ಉಚಿತವಾಗಿ ನೀಡಿ, ಅರಣ್ಯ ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. 

ತಮ್ಮ ತೋಟದಲ್ಲಿ ಬೆಳೆಯುವ ಬಾಳೆಹಣ್ಣಿನ ಗೊನೆಗಳನ್ನು ಮಾರಾಟ ಮಾಡದೇ ಹೆಚ್ಚಾದ ಗೊನೆಗಳನ್ನು ಸೊಪ್ಪಿನಬೆಟ್ಟದಲ್ಲಿ, ವನದಲ್ಲಿ ಬರುವ ಪಕ್ಷಿಗಳಿಗೆ ಆಹಾರವಾಗಲೆಂದು ತಂದು ತೂಗುಹಾಕುತ್ತಾರೆ. ಅಲ್ಲದೇ, ಬೇಸಿಗೆಯ ಅವಧಿಯಲ್ಲಿ ಪ್ರಾಣಿಪಕ್ಷಿಗಳ ಬಾಯಾರಿಕೆ ತಣಿಸಲು ಅಲ್ಲಲ್ಲಿ ಸಣ್ಣ ಸಣ್ಣ ರಿಂಗ್‌ಗಳನ್ನಿಟ್ಟು, ಅದರಲ್ಲಿ ನೀರಿನ ವ್ಯವಸ್ಥೆ ಮಾಡಿರುತ್ತಾರೆ. 

ವನದಲ್ಲೊಂದು ದಿನ

ಮತ್ತಿ, ಹೊನ್ನೆ, ಹುಣಾಲು, ಕೌಲು, ಚಳ್ಳೆ, ಬಿಲ್ಕಂಬಿ, ಅಣಲೆ, ನೆಲ್ಲಿ, ತಾರಿ, ರಂಜಲು, ಗುಡ್ಡೆಗೇರು, ಮಸೆ, ಕಕ್ಕೆ, ಮುರುಗಲು, ನಿಶನೆ, ಬಸವನಪಾದ, ಹಿಪ್ಪೆ, ಅಂಡಿ, ಮದ್ದಾಲೆ, ಕಾರೆ, ಕಡಗಲು, ಅಕ್ಯಕ್ರ್ಲು, ಜುಮ್ಮಿನಮರ, ಕೊಡಸ, ಮರಗೌರಿ, ನೇರಳೆ, ಕಣಗಲು, ಕಾಮತ್ತಿ, ಹೊಂಗೆ, ಕರಿಬಸುರಿ, ತುಮ್ರಿ, ನುರುಕಲು, ವಾಟೆ ಇತ್ಯಾದಿ ನೈಸರ್ಗಿಕವಾಗಿ ಹುಟ್ಟಿಬೆಳೆದ ಮರಗಳನ್ನು ಸಂರಕ್ಷಿಸುತ್ತಿರುವುದಲ್ಲದೇ, ಕಾಡು ಜಾತಿಯ ಗಿಡಗಳ ಗುರುತಿಸುವಿಕೆ, ಉಪಯೋಗ ಇತ್ಯಾದಿ ವಿಷಯಗಳನ್ನು ಇಂದಿನ ವಿದ್ಯಾರ್ಥಿಗಳಿಗೆ, ಯುವಜನತೆಗೆ ತಿಳಿಸಿಕೊಡಲಾಗುತ್ತಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉಪನ್ಯಾಸ ನೀಡುವ ಬದಲು, ತಮ್ಮ ಮನೆಯ ಹಿಂದಿರುವ ವನಕ್ಕೆ ಕರೆದುಕೊಂಡುಹೋಗಿ, ‘ವನದಲ್ಲೊಂದು ದಿನ’ ಎನ್ನುವ ಹೆಸರಿನಡಿ ಕಾರ್ಯಕ್ರಮಗಳನ್ನು ಆಯೋಜಿಸಿ ವೃಕ್ಷರಾಶಿಯ ಪರಿಚಯ ಮಾಡಿಕೊಡುತ್ತಿದ್ದಾರೆ ಹೆಗಡೆಯವರು.

ಕ್ಯೂಆರ್‌ ಕೋಡ್‌ ವ್ಯವಸ್ಥೆಗೆ ಪ್ರಯತ್ನ

ಶ್ರೀಧರ ಸೀತಾರಾಮ ಹೆಗಡೆ ಅವರಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿದೆ. ಸುಮಾರು 35-40 ವರ್ಷಗಳಿಂದ ಮಂಗಳ, ಅಡಿಕೆ ಪತ್ರಿಕೆ, ಸ್ಪೈಸ್ ಇಂಡಿಯಾ, ಸುಜಾತ ಮುಂತಾದ ಪರಿಸರ, ಕೃಷಿ ಸಂಬಂಧಿ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಅವುಗಳಲ್ಲಿ ಪ್ರಕಟಿತ ಔಷಧದ ಗಿಡಗಳನ್ನು ಮತ್ತು ತೀರಾ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಗಿಡಗಳನ್ನು ಸಂಗ್ರಹಿಸಿ ತಮ್ಮ ವನದಲ್ಲಿ ಬೆಳೆಸುವ ಯತ್ನ ಮಾಡುತ್ತಿದ್ದಾರೆ. ತಾವು ಬೆಳೆದ ಔಷಧೀಯ ಗಿಡ ಹಾಗೂ ಕಾಡುಜಾತಿಯ ಗಿಡಮರ ಬಳ್ಳಿಗಳ ಮೇಲ್ನೋಟದ ಪರಿಚಯಕ್ಕಾಗಿ ಪ್ರತಿಯೊಂದು ಗಿಡಮರಗಳಿಗೂ ನಾಮಫಲಕವನ್ನು ಅಳವಡಿಸಿದ್ದಾರೆ.

ಇವತ್ತಿನ ತಂತ್ರಜ್ಞಾನಕ್ಕೆ ಅಪ್‌ಡೇಟ್‌ ಆಗಿರುವ ಹೆಗಡೆಯವರು ಪ್ರತಿಯೊಂದು ಗಿಡ–ಮರಗಳ ಸಂಪೂರ್ಣ ಮಾಹಿತಿಯನ್ನು ಯುವಜನತೆಗೆ ನೀಡಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಮರದ ಬಳಿಯಿರುವ ಕೋಡ್‌ ಸ್ಕ್ಯಾನ್‌ ಮಾಡಿದರೆ ಮರದ ಕುರಿತಾದ ಸಂಪೂರ್ಣ ಮಾಹಿತಿ, ಉಪಯೋಗಗಳು ತೆರೆದುಕೊಳ್ಳುವಂತಹ ವ್ಯವಸ್ಥೆ ಅಳವಡಿಕೆಗಾಗಿ ಶ್ರಮಿಸುತ್ತಿದ್ದಾರೆ. 

ಅರಣ್ಯ 
ಅರಣ್ಯ 
ಅರಣ್ಯ 
ಅರಣ್ಯ 
ಮಾನವನ ದುರಾಸೆಯು ಅವನ ಅಸ್ತಿತ್ವಕ್ಕಷ್ಟೇ ತೊಂದರೆ ಉಂಟು ಮಾಡುತ್ತಿಲ್ಲ ಬದಲಾಗಿ ಸಮಸ್ತ ಜೀವರಾಶಿಗಳ ಅಸ್ತಿತ್ವಕ್ಕೇ ಅಪಾಯವನ್ನು ತಂದೊಡ್ಡಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸ ಬೇಕು ಅಪರೂಪದ ಗಿಡ-ಮರಗಳನ್ನು ಬೆಳೆಸಬೇಕು. ಪರಿಸರವಿದ್ದರೆ ನಾವು
 ಶ್ರೀಧರ ಸೀತಾರಾಮ ಹೆಗಡೆ ಕೊಳಗಿ

ಕ್ಯೂಆರ್‌ ಕೋಡ್‌ ಶ್ರೀಧರ ಸೀತಾರಾಮ ಹೆಗಡೆ ಅವರಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿದೆ.  ಸುಮಾರು 35-40 ವರ್ಷಗಳಿಂದ ಮಂಗಳ ಅಡಿಕೆ ಪತ್ರಿಕೆ ಸ್ಪೈಸ್ ಇಂಡಿಯಾ ಸುಜಾತ ಮುಂತಾದ ಪರಿಸರ ಕೃಷಿ ಸಂಬಂಧಿ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಅವುಗಳಲ್ಲಿ ಪ್ರಕಟಿತ ಔಷಧದ ಗಿಡಗಳನ್ನು ಮತ್ತು ತೀರಾ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಗಿಡಗಳನ್ನು ಸಂಗ್ರಹಿಸಿ ತಮ್ಮ ವನದಲ್ಲಿ ಬೆಳೆಸುವ ಯತ್ನ ಮಾಡುತ್ತಿದ್ದಾರೆ. ತಾವು ಬೆಳೆದ ಔಷಧೀಯ ಗಿಡ ಹಾಗೂ ಕಾಡುಜಾತಿಯ ಗಿಡಮರ ಬಳ್ಳಿಗಳ ಮೇಲ್ನೋಟದ ಪರಿಚಯಕ್ಕಾಗಿ ಪ್ರತಿಯೊಂದು ಗಿಡಮರಗಳಿಗೂ ನಾಮಫಲಕವನ್ನು ಅಳವಡಿಸಿದ್ದಾರೆ. ಇವತ್ತಿನ ತಂತ್ರಜ್ಞಾನಕ್ಕೆ ಅಪ್‌ಡೇಟ್‌ ಆಗಿರುವ ಹೆಗಡೆಯವರು ಪ್ರತಿಯೊಂದು ಗಿಡ–ಮರಗಳ ಸಂಪೂರ್ಣ ಮಾಹಿತಿಯನ್ನು ಯುವಜನತೆಗೆ ನೀಡಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಮರದ ಬಳಿಯಿರುವ ಕೋಡ್‌ ಸ್ಕ್ಯಾನ್‌ ಮಾಡಿದರೆ ಮರದ ಕುರಿತಾದ ಸಂಪೂರ್ಣ ಮಾಹಿತಿ ಉಪಯೋಗಗಳು ತೆರೆದುಕೊಳ್ಳುವಂತಹ ವ್ಯವಸ್ಥೆ ಅಳವಡಿಕೆಗಾಗಿ ಶ್ರಮಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT