ಮಕ್ಕಳಿರಲವ್ವ ಮನೆ ತುಂಬ–ಈ ಮಾತು ತುಂಬಾ ಸವಕಲಾಯಿತು. ಆರತಿಗೊಂದು, ಕೀರುತಿಗೊಂದು ಎನ್ನುವ ಘೋಷಣೆ ಗೋಡೆ ಮೇಲೆ ದಪ್ಪ ಅಕ್ಷರದಲ್ಲಿ ಮೂಡಿ ಮಾಸಿಹೋಯಿತು. ಒಂದು ಸಾಕು, ಎರಡು ಬೇಡ ಎನ್ನುವುದು ಈಗಿನ ಮಾತು. ಆದರೆ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಹವ್ಯಕ ಸಮಾಜದ ಸ್ವಾಮೀಜಿಗಳು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಎರಡು ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತೆ ಕರೆ ನೀಡಿದ್ದಾರೆ. ಒಟ್ಟು ಫಲವತ್ತತೆ ದರ (ಟಿಎಫ್ಆರ್) 2.1 ಕ್ಕಿಂತ ಕಡಿಮೆ ಇರಬಾರದು. ಇದಕ್ಕಿಂತ ಕಡಿಮೆಯಾದರೆ ಯಾವುದೇ ಬಿಕ್ಕಟ್ಟು ಇಲ್ಲದಿದ್ದರೂ ಆ ಸಮಾಜ ನಾಶವಾಗುತ್ತದೆ. ಕುಟುಂಬ ಸುಭದ್ರವಾಗಿದ್ದರೆ, ಸಮಾಜವೂ ಗಟ್ಟಿಯಾಗಿರುತ್ತದೆ ಎನ್ನುವುದು ಅವರ ಪ್ರತಿಪಾದನೆ. ಆದರೆ, ಈ ಕುರಿತು ಮಹಿಳೆಯರು, ವಿಷಯ ತಜ್ಞರು ಹೇಳಿರುವ ಅಭಿಪ್ರಾಯಗಳನ್ನು ರಶ್ಮಿ ಎಸ್ ಕ್ರೋಡೀಕರಿಸಿದ್ದಾರೆ.

ಕಾಲಕ್ರಮೇಣ ಈ ಕರೆ ಮರೆತು ಹೋಗಬಹುದು

ಹೆಚ್ಚು ಮಕ್ಕಳನ್ನು ಹೆರಬೇಕು ಎನ್ನುವ ಸ್ವಾಮೀಜಿಗಳ ದೂರದೃಷ್ಟಿಯನ್ನು ಶ್ಲಾಘಿಸುತ್ತೇನೆ. ಹೆಚ್ಚುವರಿ ಅಥವಾ ಖರ್ಚಿಗೆ ಹೊರೆಯೆನಿಸಿದರೆ ಮಕ್ಕಳನ್ನು ಮಠಕ್ಕೆ ಒಪ್ಪಿಸಿ ಎನ್ನುವ ಅವರ ಕಾಳಜಿಯನ್ನೂ ಪ್ರಶಂಸಿಸುತ್ತೇನೆ. ಆದರೆ ಇವೆಲ್ಲ ವಾಸ್ತವದಲ್ಲಿ ಸಾಧ್ಯವೇ? ಪ್ರಾಯೋಗಿಕವಾಗಿ ಇವನ್ನು ಅನುಷ್ಠಾನಕ್ಕೆ ತರುವುದು ಕಷ್ಟವಾಗಬಹುದು. ಬಹುತೇಕ ಹೆತ್ತವರು ತಮ್ಮ ಮಕ್ಕಳನ್ನು ತಮ್ಮೊಂದಿಗೇ ಇರಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ಸ್ವಾಮೀಜಿಗಳು ಈಗ ಶಿಕ್ಷಣದ ಖರ್ಚು ವೆಚ್ಚಕ್ಕೆ ಸಹಾಯ ನೀಡುವುದಾಗಿ, ಮಠಕ್ಕೆ ಒಪ್ಪಿಸಬೇಕಾಗಿ ಕರೆ ನೀಡಿರುವುದನ್ನು ನಮ್ಮ ಸಮುದಾಯ ಕಾಲಕ್ರಮೇಣ ಮರೆತುಹೋಗಬಹುದು.

ಇದರ ಬದಲು ಪರ್ಯಾಯವಾಗಿ ನಮ್ಮ ಸಮುದಾಯದಲ್ಲಿ ವಿವಾಹಿತರ ಸಂಖ್ಯೆ ಹೆಚ್ಚುವಂತೆ ಮಾಡಬೇಕಿದೆ. ಉತ್ತರ ಭಾರತ ಅಥವಾ ದೇಶದ ಇತರ ಭಾಗಗಳಿಂದ ವಧುಗಳನ್ನು ತಂದು ಮದುವೆ ಮಾಡಿಸಬೇಕು. ದಂಪತಿಯೂ ಎರಡು ಮಕ್ಕಳನ್ನು ಹೆತ್ತಾಗ, ಮೂರನೆಯ ಮಗು ಮಾಡಿಕೊಳ್ಳದೆಯೂ ಸಮತೋಲನ ಸಾಧಿಸಿದಂತಾಗುತ್ತದೆ.

-ಮೇಘಾ ಅರುಣ್, ಕಾರ್ಪೊರೇಟ್ ಉದ್ಯೋಗಿ

ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಹೆಚ್ಚು ಮಕ್ಕಳನ್ನು ಹಡೆಯಬೇಕೆಂಬ ಒತ್ತಡವು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸತತ ಗರ್ಭಧಾರಣೆ ದೇಹದ ಮೇಲೆ ಒತ್ತಡ ಹೇರುತ್ತದೆ. ರಕ್ತಹೀನತೆ (ಅನಿಮಿಯಾ), ನಿರ್ಜಲೀಕರಣ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ಒತ್ತಡವನ್ನೂ ಹೆಚ್ಚಿಸುತ್ತದೆ. ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಈ ಕಾಲದಲ್ಲಿ ಮಕ್ಕಳನ್ನು ಬೆಳೆಸುವುದು ಪಾಲಕರಿಗೆ ಹೆಚ್ಚು ಒತ್ತಡದ ಕೆಲಸವಾಗಿದೆ. ವೃತ್ತಿಜೀವನದ ಒತ್ತಡದ ಜೊತೆಗೆ, ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚುತ್ತಿದೆ. ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಬಳಕೆ ಮುಂತಾದ ಮಕ್ಕಳ ಆನ್ಲೈನ್ ಚಟುವಟಿಕೆಗಳನ್ನು ನಿಯಂತ್ರಿಸುವುದು ಸೃಷ್ಟಿಯಾಗಿರುವ ಹೊಸ ಒತ್ತಡ. ಆರ್ಥಿಕ ಸವಾಲುಗಳು, ಕುಟುಂಬದ ಸಮತೋಲನ ಮತ್ತು ವೈಯಕ್ತಿಕ ಸಮಯದ ಕೊರತೆ ಪಾಲಕರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಾಲಕರಿಗೆ ಸಹಾಯಕಾರಿ ಸಂಪನ್ಮೂಲಗಳು, ಸಮುದಾಯದ ಬೆಂಬಲ ಮತ್ತು ಸ್ವಲ್ಪ ಮಟ್ಟಿಗೆ ವೈಯಕ್ತಿಕ ಸಮಯ ಅತ್ಯಗತ್ಯವಾಗಿದೆ. ಪಾಲಕತ್ವದ ಒತ್ತಡವನ್ನು ಕಡಿಮೆ ಮಾಡಲು, ಸಮತೋಲನದ ಜೀವನಶೈಲಿ, ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಮತ್ತು ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ.

-ಡಾ.ಅಲೋಕ ಕುಲಕರ್ಣಿ, ಹಿರಿಯ ಮನೋರೋಗ ತಜ್ಞ, ಮಾನಸ ಮನೋವೈದ್ಯಕೀಯ ಸಂಸ್ಥೆ, ಹುಬ್ಬಳ್ಳಿ.

ಎಷ್ಟು ಮಕ್ಕಳು ಅಂತ ಯೋಜಿಸಿಲ್ಲ

ಸದ್ಯಕ್ಕೆ ಒಂದು ಮಗು ಅಂತ ಅಂದುಕೊಂಡಿದ್ದೇವೆ. ಆಮೇಲೆ ಯೋಚನೆ ಮಾಡಬೇಕು.

ಎಲ್ಲ ಮಠಗಳ ಮತ್ತು ನಾಯಕರಿಂದ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೀತಾ ಇದೆ. ಅವರ ಭಾವನೆಯನ್ನ ಗೌರವಿಸುತ್ತೇನೆ. ಆದರೆ ಸಮಾಜ ಬೆಳೆಯುವುದು ಸುಸಂಸ್ಕೃತ ಮಕ್ಕಳಿಂದ. ಮಕ್ಕಳಿಗೆ ಒಳ್ಳೆ ಸಂಸ್ಕಾರ ಮತ್ತು ವಿದ್ಯೆ ಕೊಡುವುದು ಅವಶ್ಯಕ. ಮೊದಲಿನಿಂದಲೂ ನಮ್ಮ ಪರಂಪರೆ, ಸಂಸ್ಕೃತಿಯ ಪರಿಚಯ ಮತ್ತು ಅದರ ಆಚರಣೆ, ಮುಂದಿನ ಪೀಳಿಗೆಗೆ ಕೊಂಡೊಯ್ಯುವಿಕೆ ಇದನ್ನು ಮಕ್ಕಳಲ್ಲಿ ಬಿತ್ತುವುದು ಉತ್ತಮ.

ಈಗಿನ ಕಾಲಘಟ್ಟದಲ್ಲಿ ಯೋಚನೆ ಮಾಡಿ ಮಕ್ಕಳ ಸಂಖ್ಯೆಯನ್ನ ನಿರ್ಧರಿಸುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಸಮಾಜ ಬೆಳೆಯಲು ಮಕ್ಕಳ ಸಂಖ್ಯೆ ಎಷ್ಟು ಮಹತ್ವವೋ ಅದಕ್ಕೂ ಹೆಚ್ಚಿನ ಮಹತ್ವವನ್ನು ಸಮಾಜದ ಮಕ್ಕಳಲ್ಲಿ ವಿದ್ಯೆ ಮತ್ತು ಸಂಸ್ಕಾರ ರೂಪಿಸಲು ಕೊಡಬೇಕು. ಆಗ ತಾನಾಗಿಯೇ ಒಂದು ಸಮಾಜ ಒಳ್ಳೆಯ ರೀತಿಯಲ್ಲಿ ಬೆಳೆಯಬಹುದು. ಅದಕ್ಕೆ ಮುಂದಿನ ಪೀಳಿಗೆಯ ಸಂಖ್ಯೆಯಷ್ಟೇ ಮಹತ್ವ ಅವರ ಬೆಳವಣಿಗೆ ಮತ್ತು ವಿದ್ಯೆಗೆ ಕೊಡಬೇಕು.

-ಸ್ನೇಹಾ, ಬೆಂಗಳೂರು

ಫಲವಂತಿಕೆಯ ದರ ಆತಂಕ ಬೇಡ

ಫಲವಂತಿಕೆಯು ಕಡಿಮೆ ಆಗುತ್ತಿದೆ. ಹೆಚ್ಚುತ್ತಿರುವ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಡಿ) ಸಂತಾನೋತ್ಪತ್ತಿ ವಯಸ್ಸಿನಲ್ಲಿ ಹತ್ತರಲ್ಲಿ ನಾಲ್ಕು ಮಹಿಳೆಯರನ್ನು ಬಾಧಿಸುತ್ತಿದೆ. ಅಂಡೊತ್ಪತ್ತಿಯಾಗದೇ ಬಂಜೆತನ ಉಂಟಾಗಲು ಈ ಪಿ.ಸಿ.ಒ.ಎಸ್.ಅತಿಮುಖ್ಯ ಕಾರಣ. ತಪ್ಪಾದ ಜೀವನಶೈಲಿಯಿಂದ ಪುರುಷರಲ್ಲಿಯೂ ಉದರದ ಬೊಜ್ಜು ಹೆಚ್ಚುತ್ತಿದ್ದು ಅವರಲ್ಲೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಪುರುಷ ಬಂಜೆತನವೂ ಹೆಚ್ಚುತ್ತಿದೆ.

ಫಲವಂತಿಕೆಯ ದರ ಕಡಿಮೆ ಎಂದು ಆತಂಕಪಡಬೇಕಾಗಿಲ್ಲ. ಫಲವಂತಿಕೆಯ ದರ ಎಂದರೆ ಋತುಮತಿಯಾದ ನಂತರ ಋತುಬಂಧದವರೆಗೂ ಮಕ್ಕಳನ್ನು ಹೆರುವ ಅಥವಾ ಸಂತಾನೋತ್ಪತ್ತಿಯ ಸಾಮರ್ಥ್ಯದ ಸರಾಸರಿ ದರ ಆಗಿರುತ್ತದೆ. ಈಗ ಕುಸಿತ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಅದಕ್ಕೆ ಮೂಲ ಕಾರಣ, ಮಹಿಳೆಯರ ಮದುವೆಯ ವಯಸ್ಸು ತಡವಾಗುತ್ತಿರುವುದು, ಸಂತಾನ ನಿಯಂತ್ರಣ ಚಿಕಿತ್ಸೆಯ ಕುರಿತು ಹೆಚ್ಚು ಜಾಗೃತಿ ಮೂಡಿರುವುದು, ಸಂತಾನ ಶಕ್ತಿ ಹರಣ ಚಿಕಿತ್ಸೆಯತ್ತ ಹೆಚ್ಚು ಜನ ಹೆಣ್ಣುಮಕ್ಕಳು ಒಲವು ತೋರುತ್ತಿರುವುದು. ಶಿಶುಮರಣ ದರ ಕಡಿಮೆಯಾಗಿರುವುದರಿಂದಲೂ ಹೆಣ್ಣುಮಕ್ಕಳು ಕಡಿಮೆ ಮಕ್ಕಳನ್ನು ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಸುಧಾರಿತ ಆರೋಗ್ಯ ಚಿಕಿತ್ಸೆಗಳು ದೊರೆಯುತ್ತಿರುವುದರಿಂದ ಕಡಿಮೆ ಮಕ್ಕಳನ್ನು ಹೆರುತ್ತಿದ್ದಾರೆ. ಈ ಕಾರಣದಿಂದ ಫಲವಂತಿಕೆಯ ದರದಲ್ಲಿ ಕುಸಿತ ಕಂಡು ಬಂದಿದೆ.

ಫಲವಂತಿಕೆ ಮಹಿಳೆಯರಲ್ಲಿ ಹೆಚ್ಚಿರುವುದು ಸರಾಸರಿ 22 ರಿಂದ 29 ವಯಸ್ಸಿನ ಒಳಗೆ. ಹೀಗಾಗಿ ಈ ಅವಧಿಯಲ್ಲಿ ಮದುವೆಯಾಗುವುದು ಒಳ್ಳೆಯದು. ಅಂಡಾಶಯದ ಮೀಸಲು ಸಾಮರ್ಥ್ಯ ಹೆಚ್ಚಿದ್ದು ಅಂಡೋತ್ಪತ್ತಿ ಸರಿಯಾಗಿ ಆಗುತ್ತದೆ. ಗರ್ಭಧಾರಣೆಯೂ ಸಲೀಸು, ಸಹಜ ಹೆರಿಗೆಯ ಸಂಭವವೂ ಹೆಚ್ಚು.

ಆಧುನಿಕ ಜೀವನಶೈಲಿಯ ಮಹಿಳೆಯರಲ್ಲಿ ಗರ್ಭಧಾರಣೆಯ ಸಂಖ್ಯೆ ಹೆಚ್ಚಿದ ಹಾಗೇ ಮಹಿಳೆಯರ ತೂಕ ಮಗುವಿನ ತೂಕ ಹೆಚ್ಚುವ ಸಂಭವವಿದೆ. ಗರ್ಭಧಾರಣೆಯಲ್ಲಿ ಮಹಿಳೆಗೆ ಮಧುಮೇಹ ಬರುವ ಸಂಭವವೂ ಹೆಚ್ಚು. ಭಾರತದಲ್ಲಿ ಅರ್ಧದಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ.

ಎರಡು ಹೆರಿಗೆಯ ನಡುವೆ ಕನಿಷ್ಠ ಎರಡು ಮೂರು ವರ್ಷ ಅಂತರವಿಲ್ಲದಿದ್ದಾಗ ಮಕ್ಕಳ ಲಾಲನೆ ಪಾಲನೆಯೂ ಕಷ್ಟಕರ. ಹೆಚ್ಚು ಮಕ್ಕಳನ್ನು ಪಡೆಯುವ ಹಂಬಲವಿರುವ ಮಹಿಳೆಯರ ಆರೋಗ್ಯ ಗರ್ಭಧಾರಣೆಗೂ ಮೊದಲೇ ಹದವಾಗಿರಬೇಕು. ರಕ್ತಹೀನತೆ ಅಪೌಷ್ಟಿಕತೆ ಇರದ ಹಾಗೇ ಕಾಳಜಿ ವಹಿಸಬೇಕು.

-ಡಾ.ವೀಣಾ ಭಟ್, ಪ್ರಸೂತಿ ತಜ್ಞೆ

ಸತ್ ಸಂತಾನ ಸೃಷ್ಟಿಯಾಗಲಿ

ಇತ್ತೀಚೆಗೆ ಭಾರತೀಯರಲ್ಲಿ ಇರಬೇಕಾದ ಋಷಿನೋಟ ಮರೆಯಾಗುತ್ತಿದೆ. ಸ್ಥೂಲದೃಷ್ಟಿಗೆ ಮಾತ್ರ ಸೀಮಿತವಲ್ಲದೇ ಇನ್ನೂ ಆಳವಾದ ಆಧ್ಯಾತ್ಮಿಕ ಸೂಕ್ಷ್ಮದೃಷ್ಟಿಯೇ ಭಾರತೀಯತೆ. ಸಮಾಜದಲ್ಲಿ ವಿರಳವಾಗುತ್ತಿರುವ ಸಂತತಿಯ ಕಾರಣವಾಗಿ ಪ್ರಾದೇಶಿಕತೆ ನಶಿಸಿ ಹೋಗುತ್ತಿದೆ. ದೇಶಾಚಾರ, ಸಂಪ್ರದಾಯ, ಪರಂಪರೆ ಎಲ್ಲವು ಮುಂದುವರೆಸಿಕೊಂಡು ಹೊಗುವವರಿಲ್ಲದ ಕಾರಣ ಕಾಣೆಯಾಗುತ್ತಿದೆ. ಬಹುಸಂಸ್ಕೃತಿಯೇ ಪ್ರಧಾನವಾದ ದೇಶದಲ್ಲಿ ಬಹುತ್ವ ನಾಶವಾಗಿ ಏಕತ್ವಕ್ಕೂ ಮಾರಕವಾದ ಕಾಲ ಸನ್ನಿಹಿತವಾಗುತ್ತಿದೆ. ಈ ಕಾಲಘಟ್ಟದಲ್ಲಿ ಒಂದು ಉತ್ತಮವಾದ, ಉತ್ಕೃಷ್ಟವಾದ ಚಿಂತನೆಯನ್ನು, ಆಚಾರ ವಿಚಾರಗಳನ್ನು, ಸಂಸ್ಕಾರಗಳನ್ನು ಹೊಂದಿದ ಸಮಾಜ ಎಂದು ಹೆಸರಾದ ಹವ್ಯಕ ಸಮಾಜದ ಗುರುಗಳಿಬ್ಬರು ಹೆಚ್ಚು ಹೆಚ್ಚು ಸತ್ ಸಂತಾನಗಳನ್ನು ಪಡೆಯಿರಿ, ಸಕಾಲದಲ್ಲಿ ವಿವಾಹವಾದಲ್ಲಿ ಅದು ಸಾಧ್ಯ. ನಿಮಗೆ ಲೌಕಿಕವಾಗಿ, ಆರ್ಥಿಕವಾಗಿ ಕಷ್ಟವಾದಲ್ಲಿ ಮಠಗಳು ನಿಮ್ಮೊಂದಿಗಿವೆ ಎಂಬ ಕರೆ ಕೊಟ್ಟಿರುವುದು ಮೇಲೆ ಹೇಳಿದ ಎಲ್ಲ ವಿಷಯಗಳ ಹಿನ್ನೆಲೆಯಿಂದ ಕೂಡಿದ್ದಾಗಿದೆ.

ಆಳವಾದ ಅಧ್ಯಯನ, ಋಷಿನೋಟ, ವಿಶಿಷ್ಟವಾದ ಜ್ಞಾನ, ಧರ್ಮಚಿಂತನೆ, ದೇಶದ ಹಿತ ಹಾಗೂ ಸ್ವಸ್ಥ ಸಮಾಜದ ಪರಿಕಲ್ಪನೆಯಿಂದ ಆಡಿದ ನುಡಿ ಇದಾಗಿದೆ. ಒಳ್ಳೆಯ ಸಂತಾನ ಸಮಾಜ ಹಾಗೂ ರಾಷ್ಟ್ರಕ್ಕೆ ಆಸ್ತಿಯಾಗುವುದು ಎಂಬುವುದು ಅವರ ಚಿಂತನೆ. ಸ್ವಸ್ಥ ಕುಟುಂಬ ವ್ಯವಸ್ಥೆಯಿಂದ ಸ್ವಸ್ಥ ಸಮಾಜ ನಿರ್ಮಾಣ. ಸ್ವಸ್ಥ ಸಮಾಜ ನಿರ್ಮಾಣದಿಂದ ಉತ್ತಮ ರಾಷ್ಟ್ರ ಸಾಧ್ಯ.

-ಚಂಪಕಾ ಭಟ್, ಶಿಕ್ಷಕಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಗೋಕರ್ಣ

ನಮಗಾಗಿ ಅಲ್ಲ, ನಮ್ಮಿಂದ ಮಕ್ಕಳು

ನಮ್ಮ ಮಕ್ಕಳು ಕೇವಲ ನಮ್ಮಿಂದ ಹುಟ್ಟುತ್ತವೆ. ಅವನ್ನು ಮಠ ಮಾನ್ಯಗಳಿಗೆ ಬಿಟ್ಟುಕೊಡಲು ಸಾಧ್ಯವೇ? ಮಕ್ಕಳ ಮೋಹವೇ ಬಲು ದೊಡ್ಡದು ಎಂದು ಕೇಳಿರುತ್ತೇವೆ. ನಮ್ಮ ಕೆರಿಯರ್ ಮತ್ತು ಆರೋಗ್ಯವನ್ನು ಪಣಕ್ಕಿಟ್ಟು ಮಕ್ಕಳನ್ನು ಹೆತ್ತು ಕೊಡುವಷ್ಟು ಧಾರಾಳಿಯಂತೂ ನಾನಲ್ಲ. ನನ್ನ ಬದುಕಿಗೆ ಆರೋಗ್ಯವಂತ ಮಗುವಿನ ಅಗತ್ಯ ಇರುವಂತೆಯೇ ಪ್ರತಿ ಮಗುವಿಗೂ ಆರೋಗ್ಯವಂತ ಅಮ್ಮನಿರಬೇಕಿರುವುದೂ ಅಷ್ಟೇ ಮುಖ್ಯ. ಕುಟುಂಬ ಮುಂದುವರಿಯಲೆಂದು ಮಗು ಮಾಡಿಕೊಳ್ಳುತ್ತೇವೆ. ಅದು ಹೆಣ್ಣಾಗಿರಲಿ, ಗಂಡಾಗಿರಲಿ. ನಮ್ಮ ಕರುಳಿನ ಕುಡಿ. ನಮಗಾಗಿಯೇ ಇರುತ್ತದೆ. ಒಂದು ಅಥವಾ ಎರಡು ಮಗು ಮಾಡಿಕೊಂಡರೂ ಎರಡನೆಯ ಮಗುವಿನ ಲಾಲನೆ ಪಾಲನೆಗೆ ನಾವು ಸದೃಢರಾಗಿದ್ದರೆ ಮಾತ್ರ ಆ ನಿರ್ಧಾರ ಕೈಗೊಳ್ಳುತ್ತೇವೆ. ಮೊದಲನೆಯ ಪ್ರಯತ್ನದಲ್ಲಿಯೇ ಅವಳಿಗಳಾದರೆ, ತ್ರಿವಳಿಗಳಾದರೂ ಅವರನ್ನು ಬೆಳೆಸುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಮಗು ಹೆರುವ ತೀರ್ಮಾನ ಯಾವತ್ತಿದ್ದರೂ ಹೆಣ್ಣುಮಕ್ಕಳದ್ದೇ ಆಗಿರಬೇಕು.

-ಸೌಮ್ಯ ರಾಜಗುರು, ಬೆಂಗಳೂರು

ಜೀವನ ಗುಣಮಟ್ಟದಲ್ಲಿ ಕುಸಿತ

ಹೆಚ್ಚು ಮಕ್ಕಳಿದ್ದರೆ ಕುಟುಂಬದ ಆರ್ಥಿಕ ವ್ಯವಸ್ಥೆಗೆ ಅನುಕೂಲಕರ ಎಂಬುದು ಹಳೆಯ ನಂಬಿಕೆ. ಬದಲಾದ ಕಾಲಮಾನದಲ್ಲಿ ಮಕ್ಕಳ ಶಿಕ್ಷಣ, ಪೋಷಣೆಯ ವೆಚ್ಚ ಹೆಚ್ಚಾಗಿದೆ. ಹೆಚ್ಚು ಮಕ್ಕಳಿದ್ದರೆ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ, ಜೀವನ ನೀಡಲಾಗದು. ಮಕ್ಕಳಿಗೆ ಆರ್ಥಿಕ ಸಬಲೀಕರಣವೂ ಕಷ್ಟವಾಗುತ್ತದೆ. ಕುಟುಂಬದ ಜೀವನ ಗುಣಮಟ್ಟದಲ್ಲಿ ಕುಸಿತ ಕಂಡು ಬರುತ್ತದೆ.

ಮಹಿಳೆಯರೂ ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ ಆಗುತ್ತದೆ. ಅವರ ದೈಹಿಕ ಆರೋಗ್ಯ ಮತ್ತು ಪ್ರಸವಕಾಲೀನ ರಜೆಗಳು ಉದ್ಯೋಗಸ್ಥ ಮಹಿಳೆ ಉದ್ಯೋಗದಲ್ಲಿ ಮುಂದುವರಿಯದಂತೆ ತಡೆ ಹಾಕಬಹುದು. ಕುಟುಂಬದ ಆರ್ಥಿಕ ಸ್ಥಿತಿ, ಮಹಿಳಾ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವೂ ನೇಪಥ್ಯಕ್ಕೆ ಸರಿದಂತಾಗುವುದು. ನಮ್ಮ ದೇಶದ ಈಗಿನ ಸಂಪನ್ಮೂಲ ಕೊರತೆಯನ್ನು ಗಮನಿಸಿದರೆ ಹೆಚ್ಚು ಮಕ್ಕಳಾದಷ್ಟೂ, ಜನಸಂಖ್ಯೆ ಹೆಚ್ಚಿದಷ್ಟೂ ಉತ್ತಮ ಸೌಲಭ್ಯಗಳನ್ನು ನೀಡುವುದು ಅಸಾಧ್ಯ. ಆರೋಗ್ಯ, ಶಿಕ್ಷಣ ನೀಡುವುದು ಕಷ್ಟವಾಗುತ್ತದೆ. ದೇಶದಲ್ಲಿ ಬಡತನ ಹೆಚ್ಚುತ್ತದೆ. ಮಿತವಾದ ಕುಟುಂಬವು ಉತ್ತಮ ಗುಣಮಟ್ಟದ ಜೀವನಕ್ಕೆ ಮತ್ತು ದೇಶದ ಪ್ರಗತಿಗೆ ಯಾವತ್ತಿದ್ದರೂ ಅನುಕೂಲಕರ.

ಭಾರತದಲ್ಲಿ ಶೇ 70ರಷ್ಟು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಈಗಾಗಲೇ ಭೂ ಹಿಡುವಳಿ ಪ್ರದೇಶ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಮಕ್ಕಳನ್ನು ಹೆರುವುದರಿಂದ ಜನಸಂಖ್ಯಾ ಸ್ಫೋಟವಾಗುತ್ತದೆ. ಕೌಟುಂಬಿಕ ವೆಚ್ಚ ಹೆಚ್ಚುತ್ತದೆ. ತಲಾ ಆದಾಯ ಕಡಿಮೆ ಆಗುತ್ತದೆ. ಬಡತನ ಹೆಚ್ಚುತ್ತದೆ.

-ಬಸವರಾಜ ನಾಗೂರ, ಅರ್ಥಶಾಸ್ತ್ರಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.