ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಣ: ಮಾಡಬೇಡಿ ಪ್ರಕೃತಿ ಹೈರಾಣ

Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಅದು ರಾಜ್ಯದ ಅತಿ ಎತ್ತರದ ಎರಡನೇ ತುದಿ. ಆ ತುದಿಯಲ್ಲಿ ನಿಂತಾಗ ನಾಲ್ಕೂ ದಿಕ್ಕಿನಿಂದ  ಬೀಸುವ ಗಾಳಿ ಪರಸ್ಪರ ಡಿಕ್ಕಿ ಹೊಡೆದು, ಗಿರಗಿರನೆ ತಿರುಗುತ್ತವೆ. ಅಂತಹ ತುದಿಯಲ್ಲೊಂದು ಕಲ್ಲುಗುಡಿ, ಕಲ್ಲುಗುಡಿಯೆಂದರೆ ಅಕ್ಷರಃ ಕಾಡುಗಲ್ಲುಗಳನ್ನು ಜೋಡಿಸಿ ನಿರ್ಮಿಸಿದ ಕಲ್ಲುಗುಡಿ. ಆ ತುದಿಯಲ್ಲಿ ಒಂದೆರಡು ಇಂಚಿನಷ್ಟು ಅಗಲದ ಒರತೆಯಾಗಿ ಒಸರುವ ನೀರು ಮೂರೂ ದಿಕ್ಕಿಗೆ ಇಳಿಯುತ್ತದೆ. ಒಂದು ಉತ್ತರಕ್ಕೆ, ಮತ್ತೊಂದು ದಕ್ಷಿಣಕ್ಕೆ, ಇನ್ನೊಂದು ಪಶ್ಚಿಮಕ್ಕೆ. ಅವು ಮುಂದೆ ಬೇರೆ ಬೇರೆ ಹೊಳೆಗಳನ್ನು ಸೇರುತ್ತವೆ. ಅಂಥದ್ದೊಂದು ಒರತೆಯಲ್ಲಿ ಬಟ್ಟೆ ಒದ್ದೆ ಮಾಡಿ ಆ ಬಟ್ಟೆಯನ್ನು ಬಾಟಲಿಗಳಿಗೆ ಹಿಂಡಿಕೊಂಡು
ನೀರು ಸಂಗ್ರಹಿಸಬೇಕು.ಆ ಒರತೆಯ ಮೂರು ಕವಲುಗಳಲ್ಲಿ ಒಂದು ಮುಂದೆ ಕುಮಾರಧಾರಾ ಸೇರುತ್ತದೆ. ಅಂತಹ ಹೆಸರಿಲ್ಲದ ಒರತೆಯ ಉಗಮ ಸ್ಥಾನದಲ್ಲಿ ನಾವಿದ್ದೆವು! ಹೌದು, ಅದು ಪುಷ್ಪಗಿರಿ. ಪುಷ್ಪಗಿರಿ ಏಕ ಪರ್ವತವಲ್ಲ, ಹಲವು ಪರ್ವತಗಳ ಸಾಲು. ಪುಷ್ಪಗಿರಿ, ಅದಕ್ಕಿಂತ ಕೆಲವೇ ಮೀಟರ್‌ ಎತ್ತರ ಕಡಿಮೆ ಇರುವ ಕುಮಾರ ಪರ್ವತ, ಅದಕ್ಕಿಂತಲೂ ತುಸು ಕಡಿಮೆ ಎತ್ತರದ ಶೇಷಗಿರಿ–ಈ ಮೂರೂ ಪರ್ವತಗಳ ತುದಿಗಳನ್ನು ಮುಟ್ಟಲು ಅತ್ತಿತ್ತ ನೂರು ಮೀಟರ್‌ ಹೆಜ್ಜೆ ಹಾಕಿದರಾಯಿತು.

ಪುಷ್ಪಗಿರಿ, ಕುಮಾರ ಪರ್ವತ ಚಾರಣವನ್ನು ಬಹುತೇಕ ಮಂದಿ ಕುಕ್ಕೆ ಸುಬ್ರಹ್ಮಣ್ಯ ಕಡೆಯಿಂದ ಆರಂಭಿಸುತ್ತಾರೆ. ಇದು ಚಾರಣದ ಸುಲಭದ ಹಾದಿ. ಕುಕ್ಕೆಗೆ ಬಂದಿಳಿದು, ಕೊಂಚ ದೂರ ಹೆಜ್ಜೆ ಹಾಕಿದರೆ ಚಾರಣದ ಜಾಡು ಸಿಗುತ್ತದೆ. 11 ಕಿ.ಮೀ.ನಷ್ಟಿರುವ ಈ ಜಾಡು ಹಂತ-ಹಂತವಾಗಿ ಮೇಲೇರುತ್ತಾ ಹೋಗುತ್ತದೆ. ಹೀಗಾಗಿ ಆಯಾಸ ಎನಿಸುವುದಿಲ್ಲ. ಇದರ ಹೊರತಾಗಿ ಪುಷ್ಪಗಿರಿ ತುದಿ ಮುಟ್ಟಲು  ಸೋಮವಾರಪೇಟೆ ಕಡೆಯಿಂದಲೂ ಹೋಗಬಹುದು. ಕುಮಾರಳ್ಳಿ ತಲುಪಿ ಅಲ್ಲಿಂದ ಫಾರೆಸ್ಟ್‌ ಕ್ಯಾಂಪ್‌ಗೆ ಐದಾರು ಕಿ.ಮೀ. ನಡೆದು ನಂತರ ಚಾರಣ ಆರಂಭಿಸಬೇಕು. ಅಲ್ಲಿಂದ ಕುಮಾರ ಪರ್ವತದ ತುದಿ ತಲುಪಲು ಇರುವ ಅಂತರ ಏಳು ಕಿ.ಮೀ ಮಾತ್ರ. ಆದರೆ ಈ ಹಾದಿಯಲ್ಲಿ ಪ್ರತಿ ಹೆಜ್ಜೆಯನ್ನೂ ಮೆಟ್ಟಿಲು ಹತ್ತಿದಂತೆ ಒಂದಡಿ ಮೇಲಕ್ಕೇ ಇಡಬೇಕು. ಅತ್ಯಂತ ಕಡಿದಾದ ಈ ಹಾದಿಯು, ಕರ್ನಾಟಕದ ಅತ್ಯಂತ ಕಠಿಣ ಚಾರಣಗಳಲ್ಲಿ ಒಂದು.

ಎರಡು ಕಡೆ ಹೊಳೆ ದಾಟಬೇಕು, ಹಲವೆಡೆ 35 ಡಿಗ್ರಿಗಿಂತಲೂ ಕಡಿದಾಗಿರುವ ಮತ್ತು ನೂರಾರು ಮೀಟರ್‌ವರೆಗೆ ಚಾಚಿರುವ ಬಂಡೆಗಳನ್ನು ಹಾದುಹೋಗಬೇಕು. ಕೆಲವೆಡೆಯಂತೂ ಕೇವಲ ಒಂದಡಿ ಅಗಲದ ಹಾದಿಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಡಬೇಕು. ಎಡಕ್ಕೆ ಕಡಿದಾದ ಬಂಡೆ, ಬಲಕ್ಕೆ ಆಳವಾದ ಕಮರಿ. ತುದಿ ಹತ್ತಿರವಾದಂತೆ ಬೃಹತ್‌ ಬಂಡೆಯನ್ನು ದಾಟಬೇಕು. ಬಂಡೆಯ ಮುಕ್ಕಾಲುಪಾಲು ನೀರು ಜಿನುಗುತ್ತಿರುತ್ತದೆ. ಉಳಿದ ನಾಲ್ಕೈದು ಅಡಿ ಅಗಲದ ಹಾದಿಯಲ್ಲಿ ಮೇಲೆ ಏರಬೇಕು. 

ಚಾರಣದ ಅತ್ಯಂತ ಕ್ಲಿಷ್ಟವಾದ ಹಂತವಿದು. ಅದನ್ನು ದಾಟಿದರೆ, ಗಿಡಗಂಟೆಗಳ ಸುರಂಗ ಎದುರಾಗುತ್ತದೆ. ತಲೆಬಗ್ಗಿಸಿಕೊಂಡೇ ಅದನ್ನು ಕ್ರಮಿಸಿದರೆ ಕುಮಾರ ಪರ್ವತದ ತುದಿಯಲ್ಲಿ ಇರುತ್ತೇವೆ. ಪಕ್ಕಕ್ಕೆ ಪುಷ್ಪಗಿರಿ ಸವಾಲೆಸೆದು ಕರೆಯುತ್ತದೆ. ಅದರಾಚೆಗೆ ಶೇಷಗಿರಿ. ಅಂತಹ ಕಠಿಣ ಹಾದಿಯನ್ನು ಹಾದು ಕುಮಾರ ಪರ್ವತ ತಲುಪಿದ್ದೆವು. ಆನಂತರ ಪುಷ್ಪಗಿರಿಯನ್ನು ಮುಟ್ಟಿದಾಗ, ಅಲ್ಲಿಯವರೆಗೆ ತಲುಪಲು ಆಗಿದ್ದ ಆಯಾಸವೆಲ್ಲವೂ ಗಾಳಿಯಲ್ಲಿ ಚದುರಿಹೋಗುತ್ತದೆ. ಅದೊಂದು ಸಂಭ್ರಮ, ಏನನ್ನೋ ಗೆದ್ದ ಹೆಮ್ಮೆ.

ಈ ಚಾರಣವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಚಾರಣಕ್ಕೊಂದು ಶಿಸ್ತಿರಬೇಕು. ಕುಮಾರ ಪರ್ವತ ಚಾರಣಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ನಿರ್ಬಂಧ ಹೇರಿದೆ. ಸಾವಿರಾರು ಮಂದಿ ಚಾರಣಕ್ಕೆಂದು ಅಲ್ಲಿ ಕಿಕ್ಕಿರಿದು ತುಂಬಿದ್ದೇ ಅದಕ್ಕೆ ಕಾರಣ. ಪರಿಣಾಮವಾಗಿ ರಾಜ್ಯದ ನೆಚ್ಚಿನ ಚಾರಣದ ಸ್ಥಳಗಳಲ್ಲಿ, ಅರಣ್ಯ ಇಲಾಖೆಯು ಚಾರಣಕ್ಕೆ ನಿರ್ಬಂಧ ಹೇರಿತು. ಆನ್‌ಲೈನ್‌ ಬುಕ್ಕಿಂಗ್‌ಗೆ ಅವಕಾಶವಿರುವ ಚಾರಣಪಥಗಳಲ್ಲಿ ಮಾತ್ರ ಚಾರಣಕ್ಕೆ ಅನುಮತಿ ನೀಡುತ್ತಿದೆ. ಬೇರೆಡೆ ಸದ್ಯದ ಮಟ್ಟಿಗೆ ಚಾರಣಕ್ಕೆ ನಿಷೇಧವಿದೆ. ಇದನ್ನು ಚಾರಣಿಗರು ಕಟುವಾಗಿ ಟೀಕಿಸುತ್ತಿದ್ದಾರೆ. ಆದರೆ ಸರ್ಕಾರದ ಇಂತಹ ನಿರ್ಬಂಧಕ್ಕೆ ಕಾರಣರಾದವರು ಯಾರು? ಜವಾಬ್ದಾರಿ ಮರೆತ ಚಾರಣಿಗರು ಅಲ್ಲವೇ?

ಐದಾರು ವರ್ಷಗಳಲ್ಲಿ ಚಾರಣದ ಸ್ವರೂಪವೇ ಬದಲಾಗಿ ಹೋಗಿದೆ. ಹಿಂದೆ ಚಾರಣ ಎಂದರೆ ಪ್ರತಿ ಹೆಜ್ಜೆಯಲ್ಲೂ ಹೊಸತರ ಕಲಿಕೆಗೆ ಅವಕಾಶವಿದೆ ಎಂದು ಭಾವಿಸಲಾಗುತ್ತಿತ್ತು. ಅಲ್ಲಿನ ಗಿಡಗಂಟಿಗಳು, ಹುಲ್ಲು–ಪೊದೆಗಳು, ಪ್ರಾಣಿ–ಪಕ್ಷಿಗಳನ್ನು ನೋಡುತ್ತಾ ಅವುಗಳ ಇರುವಿಕೆಯನ್ನು ಆಸ್ವಾದಿಸುತ್ತಾ ಗಮ್ಯವನ್ನು ತಲುಪಲಾಗುತ್ತಿತ್ತು. ಅದು ಗಿರಿ–ಪರ್ವತದ ತುದಿ ಇರಬಹುದು, ನದಿ–ತೊರೆಗಳು, ಆಳ ಕಣಿವೆ ಇರಬಹುದು. ಎಲ್ಲವೂ ಅವರ್ಣನೀಯ ಅನುಭವ.

ಕೋವಿಡ್ ಸಂದರ್ಭದಲ್ಲಿ ರೀಲ್ಸ್‌, ವ್ಲಾಗಿಂಗ್‌ನ ಭರಾಟೆ ಜೋರಾಯಿತು. ಚಾರಣಕ್ಕೂ ಅವು ಕಾಲಿಟ್ಟವು. ಚಾರಣದ ವಿಡಿಯೊ ಮಾಡುವುದು, ರೀಲ್ಸ್‌ ಮಾಡುವುದು, ಸೆಲ್ಫಿ ತೆಗೆಯುವುದು... ಚಾರಣ ಎಂದರೆ ಬರೀ ಇದೇ ಎಂಬಂತಾಯಿತು. ಅಂದಚಂದದ ಆ ಫೋಟೊಗಳನ್ನು ನೋಡಿ, ಎಲ್ಲರೂ ಅದೇ ಜಾಗಕ್ಕೆ ಹೋಗುವುದು ಮತ್ತು ಅಂಥದ್ದೇ ಫೋಟೊ ತೆಗೆಯುವುದನ್ನು ಮಾಡಿದರು. ಅಂತಹ ಚಾರಣಗಳನ್ನು ಆಯೋಜಿಸುವ ಹೊಸ ತಂಡಗಳೇ ಹುಟ್ಟಿಕೊಂಡವು. ಅದರ ಪರಿಣಾಮವಾಗಿಯೇ ಚಾರಣಕ್ಕೆ ಜನ ಮುಗಿಬೀಳುವುದು ಶುರುವಾಯಿತು. ಕುಮಾರ ಪರ್ವತದಲ್ಲಿ ಆಗಿದ್ದೂ ಇದೇ. ಎಲ್ಲಾ ಪ್ರವಾಸಿ
ಸ್ಥಳಗಳಿಗೆ ಭೇಟಿ ನೀಡುವಂತೆ ವಾರಾಂತ್ಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಕುಮಾರ ಪರ್ವತಕ್ಕೆ ಬರತೊಡಗಿದರು. ಅವಘಡಗಳು ಸಂಭವಿಸಿದವು. ಮೊದಲಿಗೆ ಮಳೆಗಾಲದಲ್ಲಿ ನಿರ್ಬಂಧ ಹೇರಲಾಯಿತು, ನಂತರ ಬೇಸಿಗೆಯಲ್ಲಿ, ಈಗ ಚಳಿಗಾಲದಲ್ಲೂ.

ಸಾವಿರಾರು ಮಂದಿ ಒಮ್ಮೆಗೇ ಕಾಡಿಗೆ ನುಗ್ಗಿದರೆ ಏನಾಗುತ್ತದೆ ಎನ್ನುವುದಕ್ಕೊಂದು ನಿದರ್ಶನ ಇಲ್ಲಿದೆ: ಬೆಂಗಳೂರು ಹೊರವಲಯದ ನಿಜಗಲ್ಲು ಕೋಟೆಯಲ್ಲಿ ಗೆಳೆಯರೊಬ್ಬರು ‘ಪರಿಸರ ಚಾರಣ’ ಆಯೋಜಿಸಿದ್ದರು. ಅದರಲ್ಲಿ 85 ಮಂದಿ ಇದ್ದರು. ಬೆಟ್ಟದ ಬುಡದಲ್ಲಿ ಮುತ್ತುಗದ ಬಯಲು. ಮುತ್ತುಗದ ಮರಗಳು ಕೆಂಪನ್ನೇ ಮುಕ್ಕಳಿಸುವಂತೆ ಹೂ ಕಟ್ಟಿ ನಿಂತಿದ್ದವು. ಆ ಬಯಲಿನಲ್ಲೇ ಊಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಅಡುಗೆಯೇನೋ ತಯಾರಾಗಿತ್ತು. ಆದರೆ  ಆಯೋಜಕರು ಊಟಕ್ಕೆ ಎಲೆ ತರುವುದನ್ನು ಮರೆತಿದ್ದರು. ‘ಮುತ್ತುಗದ ಎಲೆಯನ್ನೇ ಕಟ್ಟಿಕೊಂಡು ಊಟ ಮಾಡೋ. ಏನೂ ಇಲ್ಲದಿದ್ದಾಗ ಪರಿಸರದಲ್ಲಿ ಇರುವುದನ್ನೇ ಬಳಸಿಕೊಳ್ಳಬೇಕು. ಇದೂ ಸಹ ಪರಿಸರ ಚಾರಣ’ ಎಂದು ಸಮರ್ಥಿಸಿಕೊಂಡರು. ಮರುಕ್ಷಣವೇ ಎಲ್ಲರೂ ಮುತ್ತುಗದ ಎಲೆಗಳಿಗೆ ಕೈ ಹಾಕಿದರು. ಕೆಲವೇ ನಿಮಿಷಗಳಲ್ಲಿ ಆ ಮರಗಳು ಗರಿಕಿತ್ತ ನವಿಲಿನಂತಾಗಿದ್ದವು.

‘ಹಣ ಮಾಡುವ ಉದ್ದೇಶದಿಂದಲೇ ಚಾರಣ ಆಯೋಜಿಸುವವರ ಸಂಖ್ಯೆ ಹೆಚ್ಚಾಗಿದೆ. ಹೋದಲ್ಲೆಲ್ಲಾ ಕ್ಯಾಂಪ್‌ಫೈರ್ ಮಾಡವುದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಕಾಡಿನಲ್ಲಿ ಅರಚಾಡುತ್ತಾ ಗದ್ದಲ ಎಬ್ಬಿಸುವುದು, ಕಾಡುಪ್ರಾಣಿಗಳ ಹಿಂದೆ ಓಡುವುದು ಸಾಮಾನ್ಯವಾಗಿದೆ. ಇಂತಹ ಚಟುವಟಿಕೆಗಳನ್ನು ಬಿಗಿ ಮಾಡಿದರೆ, ಚಾರಣಕ್ಕೆ ಬರುವುದೇ ಇಲ್ಲ ಎಂಬಂತಾಗಿದೆ’ ಎನ್ನುತ್ತಾರೆ ವೃತ್ತಿಪರ ಚಾರಣಿಗರಾದ ಬೆಂಗಳೂರಿನ ನಿತ್ಯಾನಂದ ಮತ್ತು ಸುನಿಲ್‌ ರಾಮಕೃಷ್ಣ.

‘ಪರಿಸರ ಅಧ್ಯಯನವೇ ಚಾರಣದ ಮೂಲಮಂತ್ರ. ಇಲ್ಲದಿದ್ದಲ್ಲಿ ಅದನ್ನೂ ಒಂದು ಟೂರ್ ಎಂದು ಕರೆಯಬಹುದಿತ್ತಲ್ಲವೇ. ಈಗಂತೂ ಚಾರಣ ಎಂಬುದು ಟೂರ್ ಎಂಬಂತೆಯೇ ಆಗಿಹೋಗಿದೆ.  ಒಂದಷ್ಟು ಕಿ.ಮೀ. ನಡೆದು, ಫೋಟೊ ತೆಗೆದು ಬಂದು ಬಿಡಬೇಕು. ಅರಣ್ಯ ಪ್ರದೇಶದಲ್ಲಿ ಚಾರಣ ಆಯೋಜಿಸಿದಾಗ, ಮೊಬೈಲ್‌ ಬಳಸಬಾರದು ಎಂಬ ನಿರ್ಬಂಧ ಹೇರುತ್ತಿದ್ದೆವು. ಈಗ ಮೊಬೈಲ್‌ ಬಳಸಬೇಡಿ ಎಂದರೆ ಚಾರಣಕ್ಕೆ ಬರುವುದೇ ಇಲ್ಲ’ ಎನ್ನುತ್ತಾರೆ ವೃತ್ತಿಪರ ಚಾರಣಿಗ ಹರಿಪ್ರಸಾದ್‌.

ರಾಜ್ಯದ ಅತ್ಯಂತ ಎತ್ತರದ ಸ್ಥಳ ಮುಳ್ಳಯ್ಯನಗಿರಿ. ಮುಳ್ಳಯ್ಯನಗಿರಿಯ ತುತ್ತತುದಿಗಿಂತ ಕೆಲವೇ ಮೀಟರ್‌ ಕೆಳಗಿನವರೆಗೂ ವಾಹನಗಳು ಹೋಗುತ್ತವೆ. ಅಲ್ಲಿಯವರೆಗೂ ವಾಹನದಲ್ಲೇ ಹೋಗಿ, 10–15 ನಿಮಿಷ ಮೆಟ್ಟಿಲತ್ತಿ ಇಳಿದು ಬಂದರೆ ಚಾರಣ ಮುಗಿದುಹೋಯಿತು. ಆದರೆ, ಮುಳ್ಳಯ್ಯನಗಿರಿಯ ತಪ್ಪಲಿನಿಂದಲೇ ಚಾರಣ ಆರಂಭಿಸುವ ಪರಿಪಾಟ ಹಿಂದೊಮ್ಮೆ ಇತ್ತು. ಬೆಳಿಗ್ಗೆಯೇ ಚಾರಣ ಆರಂಭಿಸಿದರೆ ಬಿಸಿಲು ಇಳಿಯುವ ಹೊತ್ತಿಗೆ ತುದಿ ಮುಟ್ಟಬಹುದಿತ್ತು. ಮಠದಲ್ಲಿ ಅನುಮತಿ ಪಡೆದು, ಉಳಿದುಕೊಂಡು ಬೆಳಿಗ್ಗೆ ಮತ್ತೆ ಗಿರಿಯನ್ನು ಇಳಿಯಬೇಕಿತ್ತು. ಅಂತಹದ್ದೊಂದು ಚಾರಣ ಇತ್ತು ಎಂದು ಹೇಳಿದರೆ ಈಗಿನ ಬಹುತೇಕ ಚಾರಣಿಗರು ನಂಬಲಾರರು. ರಾಜ್ಯದ ಅತ್ಯಂತ ಕಠಿಣ ಚಾರಣಗಳಲ್ಲಿ ಅದೂ ಒಂದು. ಕೊಡಚಾದ್ರಿಯದ್ದೂ ಇದೇ ಕತೆ. ಎಲ್ಲರೂ ಕೊಲ್ಲೂರು ಕಡೆಯಿಂದ ಜೀ‍ಪನ್ನು ಏರಿ ಕೊಡಚಾದ್ರಿಯ ತುದಿ ತಲುಪುತ್ತಾರೆ. ಜೀಪಿನಲ್ಲೇ ಪರ್ವತವನ್ನು ಇಳಿದುಬಿಡುತ್ತಾರೆ. ಆದರೆ ಕೊಲ್ಲೂರಿನಿಂದ ಎದುರು ದಿಕ್ಕಿನಲ್ಲಿ ಪರ್ವತದ ತಪ್ಪಲಿನಿಂದಲೇ ಚಾರಣ ಆರಂಭಿಸುವ ಹಾದಿಯೊಂದಿತ್ತು. ಹಲವು ಎಸ್ಟೇಟ್‌, ಅರಣ್ಯ ಪ್ರದೇಶವನ್ನು ಹಾದುಹೋಗುವ ಆ ಹಾದಿಯಲ್ಲಿ ಏಳೆಂಟು ಕಡೆ ಹೊಳೆಯನ್ನೂ ದಾಟಬೇಕಿತ್ತು. ಸೊಬಗಿನ ಚಾರಣದ ಆ ಹಾದಿಯೂ ಈಗಿನ ಚಾರಣಿಗರ ಪಟ್ಟಿಯಲ್ಲಿ ಇಲ್ಲ. ಇಂತಹ ಚಾರಣಗಳು ಇಲ್ಲದ, ತ್ವರಿತವಾಗಿ ಮುಗಿದುಬಿಡುವ ಚಾರಣವನ್ನು ಅನುಭವಿ ಚಾರಣಿಗರು ‘ಫಾಸ್ಟ್‌ಫುಡ್‌ ಚಾರಣ’ ಎಂದಿದ್ದಾರೆ.

ಜನಪ್ರಿಯ ಚಾರಣ ಸ್ಥಳಗಳಿಗೆ ಸಿದ್ಧತೆ ಇಲ್ಲದೆ ಹೀಗೆ ಹೋಗಿ, ಹಾಗೆ ಬಂದುಬಿಡಬೇಕು ಎಂಬ ಮನಸ್ಥಿತಿಯೇ ಕುಮಾರ ಪರ್ವತದಲ್ಲಿ ಜನಜಂಗುಳಿ ಉಂಟಾಗಲು ಕಾರಣ. ಅರಣ್ಯ ಇಲಾಖೆ ಹೇರಿರುವ ನಿರ್ಬಂಧವು ಜನಜಂಗುಳಿಯನ್ನೇನೋ ತಡೆಯುತ್ತದೆ. ಆದರೆ ಈಗಿನ ಚಾರಣದ ಸ್ವರೂಪದಿಂದ ಪರಿಸರಕ್ಕೆ ಆಗುವ ಧಕ್ಕೆಯನ್ನು ತಡೆಯಲೂ ಕ್ರಮ ತೆಗೆದು ಕೊಳ್ಳಬೇಕಿದೆ. 

ಪರಿಸರ ತನ್ನ ಒಡಲೊಳಗೆ ಅಪರೂಪದ ಜೀವವೈವಿಧ್ಯವನ್ನು ಇಟ್ಟುಕೊಂಡು ಉಸಿರಾಡುತ್ತಿದೆ. ಇದಕ್ಕೆ ಹಾನಿ ಮಾಡುವುದು ನಮಗೇ ನಾವು ಮಾಡಿಕೊಂಡ ಹಾನಿಗೆ ಸಮ. ಪರಿಸರವನ್ನು ಗೌರವಿಸುವುದು ನಾಗರಿಕ ನಡೆ ಅಲ್ಲವೇ?

ಚಾರಣಕ್ಕೆ ಇರಲಿ ನಿಯಮ

ಪರಿಸರ ಸ್ನೇಹಿ ಚಾರಣಕ್ಕೆ ನೀತಿಯೊಂದರ ಅವಶ್ಯಕತೆ ಇದೆ. ಚಾರಣ ಕೈಗೊಳ್ಳುವವರು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳಬೇಕು. ಚಾರಣ ಆಯೋಜಿಸುವವರಿಗೆ ಇದರ ಹೊಣೆಗಾರಿಕೆಯನ್ನು ಹೊರಿಸಬೇಕು. ಅರಣ್ಯ ಇಲಾಖೆ ಸಿಬ್ಬಂದಿ
ಅದರ ಮೇಲ್ವಿಚಾರಣೆ ನಡೆಸಬೇಕು. ಇವೆಲ್ಲವನ್ನೂ ಒಳಗೊಂಡ ನೀತಿಯನ್ನು ರೂಪಿಸುವ ಕೆಲಸ ಅರಣ್ಯ ಇಲಾಖೆ ಮಾಡಿದರೆ, ಪರಿಸರಕ್ಕೆ ಧಕ್ಕೆಯಾಗದಂತೆ ಅದನ್ನು ಆಸ್ವಾದಿಸುವುದು ಹೇಗೆ ಎಂಬುದನ್ನು ಅನುಭವಿ ಚಾರಣಿಗರು ತಮ್ಮ ನಂತರದ ತಲೆಮಾರಿಗೆ ಹೇಳಿಕೊಡಬೇಕು.

ಚಾರಣಕ್ಕೆ ಇರಲಿ ನಿಯಮ ಪರಿಸರ ಸ್ನೇಹಿ ಚಾರಣಕ್ಕೆ ನೀತಿಯೊಂದರ ಅವಶ್ಯಕತೆ ಇದೆ. ಚಾರಣ ಕೈಗೊಳ್ಳುವವರು ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳಬೇಕು. ಚಾರಣ ಆಯೋಜಿಸುವವರಿಗೆ ಇದರ ಹೊಣೆಗಾರಿಕೆಯನ್ನು ಹೊರಿಸಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಅದರ ಮೇಲ್ವಿಚಾರಣೆ ನಡೆಸಬೇಕು. ಇವೆಲ್ಲವನ್ನೂ ಒಳಗೊಂಡ ನೀತಿಯನ್ನು ರೂಪಿಸುವ ಕೆಲಸ ಅರಣ್ಯ ಇಲಾಖೆ ಮಾಡಿದರೆ ಪರಿಸರಕ್ಕೆ ಧಕ್ಕೆಯಾಗದಂತೆ ಅದನ್ನು ಆಸ್ವಾದಿಸುವುದು ಹೇಗೆ ಎಂಬುದನ್ನು ಅನುಭವಿ ಚಾರಣಿಗರು ತಮ್ಮ ನಂತರದ ತಲೆಮಾರಿಗೆ ಹೇಳಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT