ನಿತ್ಯಹರಿದ್ವರ್ಣ ಕಾಡಿನಲ್ಲಿ ಕಾಳಿಂಗಸರ್ಪವೊಂದಕ್ಕೆ ಇರಬಹುದಾದ ಆವಾಸಸ್ಥಾನವನ್ನು ಒಂದು ಟೊಳ್ಳಾದ ಮರದ ದಿಮ್ಮಿಯೊಳಗೆ ಕೃತಕವಾಗಿ ರೂಪಿಸಲಾಗಿತ್ತು. ಅಲ್ಲಿ ‘ಅರಗ್ರಾನ್’ ಎನ್ನುವ ಸುಮಾರು 14 ವರ್ಷದ ಕಾಳಿಂಗಸರ್ಪವೊಂದು ಮಲಗಿ ವಿಶ್ರಾಂತಿ ಪಡೆಯುತ್ತಿತ್ತು. ಸುಮಾರು 14 ಅಡಿಗಳಿಗಿಂತ ಉದ್ದವಿರುವ ಈ ಸರ್ಪವನ್ನು ನಾಲ್ಕು ವರ್ಷಗಳ ಹಿಂದೆ ಆಗುಂಬೆ ತಪ್ಪಲಿನಿಂದ ರಕ್ಷಿಸಿ, ತರಲಾಯಿತು. ಅದರ ವಿಷವನ್ನು ಸಂಶೋಧನೆಗಾಗಿ ಹೊರತೆಗೆಯಲಾಗುತ್ತದೆ.

ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಎಂಬ ಕುಖ್ಯಾತಿಗೆ ಒಳಗಾಗಿದ್ದರೂ ಕಾಳಿಂಗಸರ್ಪಗಳು ಕಚ್ಚುವುದು ಅಪರೂಪ. ಆದರೆ, ಸೂಕ್ತ ತರಬೇತಿ ಪಡೆಯದೇ ಇಂಥ ಸರ್ಪಗಳನ್ನು ರಕ್ಷಿಸಲು ಪ್ರಯತ್ನಿಸಿದಾಗ ಅಥವಾ ವಿನಾಕಾರಣ ಅವುಗಳಿಗೆ ತೊಂದರೆ ಕೊಟ್ಟಾಗ ಸರ್ಪಗಳು ರೊಚ್ಚಿಗೇಳುವುದು ಸಹಜ. ಇಂತಹ ಸಂದರ್ಭಗಳಿಗಾಗಿ ಸಂಶೋಧಕರು ವಿಷ ನಿರೋಧಕ ಔಷಧಿಯನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗುತ್ತದೆ.

‘ಅರಗ್ರಾನ್’ ಇದ್ದದ್ದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ರತ್ನಪುರಿಯಲ್ಲಿರುವ ಲಿಯಾನ ಟ್ರಸ್ಟ್ ನಡೆಸುತ್ತಿರುವ ‘ಹಾವುಗಳ ಸಂರಕ್ಷಣಾ ಕೇಂದ್ರ’ದಲ್ಲಿ. ಇದರ ಜತೆಗೆ ರಸೆಲ್ ವೈಪರ್, ಕಾಮನ್ ಕ್ರೈಟ್ಸ್, ಸಾ–ಸ್ಕೇಲ್ಡ್ ವೈಪರ್ ಹಾಗೂ ನಾಗರಹಾವುಗಳಿವೆ. ಈ ನಾಲ್ಕು ಪ್ರಭೇದದ ಹಾವುಗಳು ತಮ್ಮ ಕಡಿತದಿಂದಾಗಿ ಕುಖ್ಯಾತಿ ಪಡೆದಿದ್ದು, ಕರ್ನಾಟಕ ಹಾಗೂ ಭಾರತದಾದ್ಯಂತ ಪ್ರತಿ ವರ್ಷ ಸಾವಿರಾರು ಜನ ಇವುಗಳ ಕಡಿತದಿಂದ ಸಾಯುತ್ತಾರೆ.

ಪ್ರತಿ ವಿಷಕಾರಿ ಹಾವಿನ ವಿಷವು ವಿಭಿನ್ನ ಸಂಯೋಜನೆಯನ್ನು ಹೊಂದಿರುತ್ತದೆ. ಅಷ್ಟೆ ಅಲ್ಲದೇ ಅವುಗಳು ಮನುಷ್ಯನ ದೇಹದ ವಿವಿಧ ಭಾಗಗಳ ಮೇಲೆ ವಿಭಿನ್ನ ಪರಿಣಾಮವನ್ನು ಬೀರುತ್ತವೆ. ನಾಗರಹಾವಿನ ವಿಷವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದರೆ ವೈಪರ್ನ ವಿಷವು ಹೆಮೊಟಾಕ್ಸಿಕ್ ಆಗಿದ್ದು, ರಕ್ತದ ಮೇಲೆ ದಾಳಿ ಮಾಡುತ್ತದೆ. ಇದರ ಜತೆಗೆ ಒಂದೇ ಪ್ರಭೇದದ ಹಾವಿನ ವಿಷದ ಸಂಯೋಜನೆಯು ಪ್ರದೇಶಗಳಿಂದ ಪ್ರದೇಶಕ್ಕೆ ಬದಲಾಗುತ್ತದೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ.

ಸದ್ಯಕ್ಕೆ ಭಾರತದಾದ್ಯಂತ ವೈದ್ಯಕೀಯ ಆರೈಕೆ ಘಟಕಗಳು ಹಾವಿನಿಂದ ಕಚ್ಚಿಸಿಕೊಂಡವರಿಗೆ ಒಂದೇ ಸ್ಥಳದಿಂದ ಸಂಗ್ರಹಗೊಂಡ ವಿಷದಿಂದ ತಯಾರಾದ ವಿಷ ನಿರೋಧಕ ನೀಡುವ ಮೂಲಕ (ಆ್ಯಂಟಿ ವೆನಮ್) ಚಿಕಿತ್ಸೆ ನೀಡುತ್ತಿವೆ. ಇಂಥ ಸಂದರ್ಭದಲ್ಲಿ ಹೆಚ್ಚಿನವರು ಚೇತರಿಸಿಕೊಂಡರೂ, ಅನೇಕರು ವಿಷಕ್ಕೆ ಬಲಿಯಾಗುತ್ತಾರೆ ಅಥವಾ ಶಾಶ್ವತವಾಗಿ ಅಂಗವಿಕಲರಾಗುತ್ತಾರೆ.

ಆದರೆ, ರತ್ನಪುರಿಯ ಲಿಯಾನ ಟ್ರಸ್ಟ್ ನಡೆಸುತ್ತಿರುವ ‘ಹಾವು ಸಂರಕ್ಷಣಾ ಕೇಂದ್ರ’ವು ವಿಭಿನ್ನ ರೀತಿಯಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದು, ವಿಷ ನಿರೋಧಕ ಔಷಧ ಕಾರ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಅಲ್ಲದೇ ಪರಿಣಾಮಕಾರಿ ಔಷಧವನ್ನು ತಯಾರಿಸುವಲ್ಲಿ ಹಲವು ಬಗೆಯ ಸಂಶೋಧನಾ ಕಾರ್ಯಗಳನ್ನು ನಡೆಸುತ್ತಿದೆ. ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಬಳಸುವ ಪ್ರತಿವಿಷವನ್ನು ಹಾವಿನ ವಿಷದಿಂದಲೇ ತಯಾರಿಸಲಾಗುತ್ತದೆ.

ರಕ್ಷಣೆ ಮತ್ತು ಅಧ್ಯಯನ

ಸರ್ಪಗಳ ಸ್ವಭಾವ, ವರ್ತನೆ ಸೇರಿದಂತೆ ಅವುಗಳ ಬಗ್ಗೆ ನಮಗೆ ತಿಳಿದಿರುವುದು ಅತ್ಯಲ್ಪ. ಹಾವು
ಕಡಿತ ಪ್ರಕರಣಗಳನ್ನು ಕಡಿಮೆ ಮಾಡಲು ಮೊದಲಿಗೆ ಹಾವಿನ ಸ್ವಭಾವವನ್ನು ವೈಜ್ಞಾನಿಕವಾಗಿ ಅರಿಯುವುದು ಮುಖ್ಯ. ಹಾವಿನ ಕಡಿತದಿಂದ ಜೀವಗಳನ್ನು ಉಳಿಸಬೇಕಾದರೆ ವಿಷ ನಿರೋಧಕ ಔಷಧನ್ನು ಉತ್ಪಾದಿಸಬೇಕಾದರೆ ಹಾವಿನ ವಿಷದ ಬಗ್ಗೆ ಸಮಗ್ರ ಸಂಶೋಧನೆ ನಡೆಯಬೇಕು ಎನ್ನುತ್ತಾರೆ ಲಿಯಾನ ಟ್ರಸ್ಟ್ನ ಸಹ ಸಂಸ್ಥಾಪಕ ಗೆರಾಡ್ ಮಾರ್ಟಿನ್.

ಹಾವಿನ ಬಗ್ಗೆ ಸುಮಾರು 30 ವರ್ಷ ಅಧ್ಯಯನ ಮಾಡಿರುವ ಅವರು, ಹಾವುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದರ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ. ಸದ್ಯಕ್ಕೆ ಈ ಸಂರಕ್ಷಣಾ ಕೇಂದ್ರದಲ್ಲಿ 350 ಹಾವುಗಳನ್ನು ಇರಿಸಲು ಅನುಮತಿ ನೀಡಲಾಗಿದೆ. ಹಲವು ರೀತಿಯಲ್ಲಿ ರಕ್ಷಿಸಲಾದ ಹಾವುಗಳಿಗೆ ಆಶ್ರಯ ನೀಡಲಾಗಿದೆ. ವಿಷಕಾರಿ ಹಾವಿನ ನಾಲ್ಕು ಪ್ರಭೇದಗಳ ಜತೆಗೆ, ಆಯಾ ಪ್ರದೇಶ ಹಾಗೂ ನಿರ್ದಿಷ್ಟ ವಿಷವನ್ನು ಉತ್ಪಾದಿಸುವ ಈ ಮೇಲೆ ತಿಳಿಸಿದ ಹಾವುಗಳ ಜೊತೆಗೆ ಮಲಬಾರ್ ಪಿಟ್ ವೈಪರ್ಗಳು, ಹಂಪ್ ನೋಸ್ಡ್ ಪಿಟ್ ವೈಪರ್ಗಳ ವಿಷವನ್ನು ಸಂಗ್ರಹಿಸಲು ಟ್ರಸ್ಟ್ಗೆ ಅನುಮತಿ ನೀಡಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಿಷ ಅಧ್ಯಯನ ಪ್ರಯೋಗಾಲಯದ ಸಹಯೋಗದೊಂದಿಗೆ ಟ್ರಸ್ಟ್ ಪ್ರತಿ ವಿಷಕಾರಿ ಹಾವಿನಲ್ಲಿರುವ ವಿಷದ ಮಾದರಿ ಹಾಗೂ ವಂಶವಾಹಿಗಳ ಬಗ್ಗೆ ಅಧ್ಯಯನ ನಡೆಸುತ್ತದೆ. ಈ ಹಾವುಗಳ ಸಂರಕ್ಷಣಾ ಕೇಂದ್ರದಲ್ಲಿ ಸಂಗ್ರಹಗೊಳ್ಳುವ ವಿಷವನ್ನು ಇತರೆ ಸಂಶೋಧನೆಗೆ ಕರ್ನಾಟಕ ಅರಣ್ಯ ಇಲಾಖೆ ಅನುಮೋದಿಸಿದ ಸಂಸ್ಥೆಗಳಿಗೆ ಮಾತ್ರ ಉಚಿತವಾಗಿ ನೀಡಲಾಗುತ್ತದೆ.

ಕಾಡಿನಿಂದ ವಿಷಕಾರಿ ಹಾವುಗಳನ್ನು ಸೆರೆಹಿಡಿದು, ಅದರ ವಿಷವನ್ನು ಹೊರತೆಗೆಯುವಲ್ಲಿ ಸ್ಥಳೀಯರು ಹಾಗೂ ಬುಡಕಟ್ಟು ಸಮುದಾಯಗಳನ್ನು ಬಳಸಿಕೊಳ್ಳುವ ವಿಧಾನವನ್ನು ಸಾಮಾನ್ಯವಾಗಿ ನೋಡಬಹುದು. ಆದರೆ, ರತ್ನಪುರಿಯಲ್ಲಿರುವ ಹಾವುಗಳ ಸಂರಕ್ಷಣಾ ಕೇಂದ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಹಾವುಗಳನ್ನು ಸೆರೆಹಿಡಿದು, ಅವುಗಳಿಂದ ಮಾತ್ರ ವಿಷವನ್ನು ತಜ್ಞರು ಸಂಗ್ರಹಿಸುತ್ತಾರೆ. ಮುಂದೆ ಈ ಕೇಂದ್ರದಲ್ಲಿ ಜನಿಸುವ ಹಾವುಗಳಿಂದಲೂ ವಿಷ ಸಂಗ್ರಹಿಸಲಾಗುತ್ತದೆ.

ಈ ಸಂರಕ್ಷಣಾ ಕೇಂದ್ರದಲ್ಲಿ ಪ್ರತಿ ಹಾವಿಗೂ ಪ್ರತ್ಯೇಕ ಆವಾಸಸ್ಥಾನವನ್ನು ರೂಪಿಸಲಾಗಿದೆ. ಪ್ರತಿ ಹಾವು ಆರೋಗ್ಯದಿಂದ ಇರಲು ನಿರ್ದಿಷ್ಟ ಸಮಯಕ್ಕೆ ಇಲಿಗಳು, ಮೊಲಗಳು, ಹುಳ, ಹುಪ್ಪಟೆಗಳನ್ನು ಆಹಾರವಾಗಿ ಒದಗಿಸಲಾಗುತ್ತದೆ.

ಸಂರಕ್ಷಣಾ ಕೇಂದ್ರದ ಮೇಲ್ವಿಚಾರಕ ಲಿಸಾ ಗೊನ್ಸಾಲ್ವೆಸ್ , ಸಂರಕ್ಷಿಸಲಾದ ಪ್ರತಿ ಹಾವಿನ ವಿವರವನ್ನು ದಾಖಲಿಸುವ ಅಪ್ಲಿಕೇಷನ್ವೊಂದನ್ನು ಅಭಿವೃದ್ಧಿಪಡಿಲಾಗಿದೆ. ಇದರಲ್ಲಿ ಹಾವಿಗೆ ಕೊನೆಯದಾಗಿ ಆಹಾರ ನೀಡಿದ ಸಮಯ, ವಿಷ ಸಂಗ್ರಹಿಸಿದ ಸಮಯ, ಕೊನೆಯದಾಗಿ ಅದರ ಚರ್ಮ ಉದುರಿದ್ದು, ಸಂತಾನೋತ್ಪತ್ತಿ ಯಾವಾಗ ನಡೆಯಿತು? ಅದರ ಸಂಗಾತಿ ಯಾರು? ಹೀಗೆ ಪ್ರತಿ ವಿವರವನ್ನು ಒಳಗೊಂಡ ಮಾಹಿತಿಯನ್ನು ಈ ಅಪ್ಲಿಕೇಷನ್ನಲ್ಲಿ ದಾಖಲಿಸಲಾಗಿದೆ ಎಂದು ಹೇಳಿಕೊಂಡರು.

ಈ ಸಂರಕ್ಷಣಾ ಕೇಂದ್ರದಲ್ಲಿರುವ ತಂಡವು ಮಾಡುತ್ತಿರುವ ಬಹುಮುಖ್ಯ ಕೆಲಸವೆಂದರೆ, ಹಾವುಗಳ ಸ್ವಭಾವ ಹಾಗೂ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು. ಹಾವುಗಳು ಏಕೆ ಕಚ್ಚುತ್ತವೆ ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆ. ಅದರಲ್ಲಿಯೂ ರಸೆಲ್ ವೈಪರ್ನ ಸ್ವಭಾವ ಏಕೆ ಹಾಗಿದೆ? ಟೆಲಿಮೆಟ್ರಿಕ್ ಅಧ್ಯಯನ ಆಧಾರದ ಮೇಲೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ ಎನ್ನುತ್ತಾರೆ ಮಾರ್ಟಿನ್.

ಸಂಶೋಧನೆಯ ದಿಕ್ಕು ವೇಗ ಪಡೆದುಕೊಳ್ಳುತ್ತಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಹಲವು ಪ್ರಶ್ನೆಗಳಿಗೆ ನಿಖರವಾದ ಉತ್ತರ ದಕ್ಕಲಿದೆ. ಗದ್ದೆ ಹಾಗೂ ತೋಟಗಳಲ್ಲಿ ಹಾವುಗಳ ಕಡಿತದಿಂದ ರೈತರು ಸಾವನ್ನಪ್ಪುತ್ತಿದ್ದಾರೆ ಎಂಬುದು ಗಮನಾರ್ಹ ಅಂಶ. ಗಮ್ಬೂಟ್ಗಳನ್ನು ಧರಿಸುವುದರಿಂದ ಹಾವು ಕಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಯೋಗ ನಡೆಯಬೇಕಿದೆ. ಜತೆಗೆ ಸೊಳ್ಳೆ ಪರದೆಗಳ ಬಳಕೆಯು ಕ್ರೈಟ್ ಕಡಿತದಿಂದ ಪಾರಾಗಲು ಇರುವ ಮಾರ್ಗವೇ? ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಹಲವು ಅಂಶಗಳು ಹಾವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ನೆರವಾಗುವುದೇ? ಹಾವುಗಳ ವರ್ತನೆಯನ್ನು ಸರಿಯಾಗಿ ಅರಿತರೆ, ಅದರ ಕಡಿತದಿಂದ ಪಾರಾಗುವುದು ಸುಲಭವೇ? ಹೀಗೆ ಹಲವು ಪ್ರಶ್ನೆಗಳನ್ನು ಇಟ್ಟುಕೊಂಡು ಪ್ರಯೋಗಗಳು ನಡೆಯುತ್ತಲೇ ಇವೆ.

ಮುಂದಿನ ದಿನಗಳಲ್ಲಿ ಸಂಶ್ಲೇಷಿತ ಮಾದರಿಯಲ್ಲಿ ವಿಷ ನಿರೋಧಕ ಔಷಧಗಳು ಲಭ್ಯವಾಗುವ ನಿರೀಕ್ಷೆ ಇದೆ. ಆಗ ಈ ಔಷಧಗಳನ್ನು ಪ್ರಯೋಗಿಸಲು ಕುದುರೆ ಹಾಗೂ ಹಾವುಗಳನ್ನು ಅವಲಂಬಿಸಬೇಕಾಗಿಲ್ಲ. ಸದ್ಯಕ್ಕೆ ಈ ಸಂರಕ್ಷಣಾ ಕೇಂದ್ರವು ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಹಾವುಗಳ ಬಗ್ಗೆ ಅರಿವು ಮೂಡಿಸಲು ‘ಜಾಗೃತಿ ಕೇಂದ್ರ’ ವನ್ನು ನಿರ್ಮಿಸುವ ಇರಾದೆ ಇರುವ ಬಗ್ಗೆ ಹೇಳಿಕೊಂಡರು.

(ಅನುವಾದ: ರೂಪಾ ಕೆ.ಎಂ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.