ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರದ ಅರಮನೆಯಲ್ಲಿ...

Last Updated 25 ಮಾರ್ಚ್ 2019, 19:30 IST
ಅಕ್ಷರ ಗಾತ್ರ

1857ರ ಸ್ವಾತಂತ್ರ್ಯ ಸಂಗ್ರಾಮ. ಅದರಲ್ಲಿ ಥಟ್ಟನೇ ನೆನಪಾಗುವ ಹೆಸರು ಯೋಧ ಮಂಗಲ್ ಪಾಂಡೆ. ಉತ್ತರ ಭಾರತದಲ್ಲಿ ಈ ಸಂಗ್ರಾಮ ತಾರಕಕ್ಕೇರಿತು. ಆದರೆ, ಸೂಕ್ಷ್ಮವಾಗಿ ಇತಿಹಾಸ ಕೆದಕಿದಾಗ ಅಂತಹದ್ದೇ ಸಂಗ್ರಾಮದ ಪ್ರಯತ್ನ ಅದೇ ಕಾಲಘಟ್ಟದಲ್ಲಿ (1858) ನಮ್ಮ ನಾಡಿನ ಸುರಪುರ ಸಂಸ್ಥಾನದ ನೇತೃತ್ವದಲ್ಲಿ ನಡೆದಿತ್ತು.

ಆಗ, ಕೊಲ್ಲಾಪುರ, ಸೊಲ್ಲಾಪುರ, ಸಿಂದಗಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ಸಂಸ್ಥಾನಗಳ ರಾಜರು, ಸೇನಾನಿಗಳು ಸುರಪುರದ ಸಂಸ್ಥಾನದವರು ಜೊತೆಗೂಡಿ ಮಹಾಸಂಗ್ರಾಮಕ್ಕೆ ನಾಂದಿ ಹಾಡಿದ್ದರೆ, ಬ್ರಿಟಿಷರನ್ನು ಇಲ್ಲಿಂದ ಓಡಿಸಲು ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ. ಹಾಗಾಗಿದ್ದರೆ, ಸ್ವಾತಂತ್ರ್ಯ ಚಳವಳಿಯ ಹಾದಿಯಲ್ಲಿ ಸುರಪುರ ಸಂಸ್ಥಾನದ ಪಾತ್ರ ಇನ್ನಷ್ಟು ಮಹತ್ವದಿಂದ ಕೂಡಿರುತಿತ್ತು.

ಹೌದು! ಯಾದಗಿರಿ ಜಿಲ್ಲೆಯ ಸುರಪುರ ಸಂಸ್ಥಾನ ಸ್ವಾತಂತ್ರ್ಯ ಚಳವಳಿಯಲ್ಲಿ ಅಂಥ ಮಹತ್ವದ ಪಾತ್ರ ವಹಿಸಿದೆ. ಈಗಲೂ ಸುರಪುರಕ್ಕೆ ಭೇಟಿ ನೀಡಿದರೆ ಸ್ವಾತಂತ್ರ್ಯ ಹೋರಾಟ-ಸಾಹಸದ ಅನೇಕ ಕುರುಹುಗಳು ಅಲ್ಲಲ್ಲಿ ಕಾಣುತ್ತವೆ. ಹಲವು ಐತಿಹಾಸಿಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿರುವ ನಾಯಕ ಸಂಸ್ಥಾನದ ಹಳೆಯ ದರ್ಬಾರ್‌ (ಅರಮನೆ), ಹೊಸ ಅರಮನೆ, ಆಗಿನ ಶಸ್ತ್ರಾಸ್ತ್ರಗಳಿವೆ. ಅಂದು ಸಂಸ್ಥಾನದವರು ಬಳಸಿರುವ ವಸ್ತುಗಳು ಆ ಕಾಲದ ಒಂದೊಂದು ಕಥೆಯನ್ನು ಸಾರುತ್ತವೆ.

ಹೈದರಾಬಾದ್-ಕರ್ನಾಟಕ ಪ್ರದೇಶದ ವಲಯ ಕೇಂದ್ರ ಕಲಬುರ್ಗಿಯಿಂದ 109 ಕಿ.ಮೀ. ದೂರದ ಸುರಪುರ ಅಲ್ಲಿನ ರಾಜ ಪರಂಪರೆ, ಜನರ ಸಾಹಸ, ಬೆಟ್ಟಗುಡ್ಡಗಳು ಕಥೆ ಎಲ್ಲವೂ ಹೊಸ ವಿಷಯಗಳನ್ನು ತೆರೆದಿಡುತ್ತವೆ.

ಔರಂಗಜೇಬನನ್ನು ಮಣಿಸಿದವರು
ಈ ನಾಯಕ ಸಂಸ್ಥಾನದ ಅರಸರ ವೀರಗಾಥೆ ಒಂದೆರಡಲ್ಲ. ಎಲ್ಲಾ ಸಂಸ್ಥಾನಗಳನ್ನು ವಶಪಡಿಸಿಕೊಂಡು ಇಡೀ ಭಾರತದ ಸಾಮ್ರಾಟನಾಗುವ ಕನಸು ಹೊತ್ತು ಬಂದ ದೊರೆ ಔರಂಗಜೇಬ್‌ನನ್ನೇ ಈ ಸಂಸ್ಥಾನದ ಅರಸರು 1705ರಲ್ಲಿ ಮಣಿಸಿದರು. ಶತ್ರು ಪಾಳಯದಲ್ಲಿ ಸಿಕ್ಕಿ ಬೀಳಬಾರದು ಮತ್ತು ಬಾಜಿಯೂ ಗೆಲ್ಲಬೇಕೆಂದು ಮೊಂಡುಗೈ ರಾಜಾ ವೆಂಕಟಪ್ಪ ನಾಯಕ (1747-1752) ತನ್ನ ಕೈಯನ್ನೇ ಕತ್ತರಿಸಿಕೊಂಡರು. ನಂತರ ಕೃತಕ ಕಬ್ಬಿಣದ ಕೈ ಅಳವಡಿಸಿಕೊಂಡು ಆಳ್ವಿಕೆ ನಡೆಸಿದರು. ಸಂಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ಬರುವ ಸುಳಿವು ಸಿಕ್ಕಾಗ ರಾಣಿ ಈಶ್ವರಮ್ಮ(1813–1853) 8 ವರ್ಷದ ತನ್ನ ಪುತ್ರ ನಾಲ್ವಡಿ ವೆಂಕಟಪ್ಪ ನಾಯಕನನ್ನು ಪಟ್ಟಕ್ಕೇರಿಸಿ ಆಳ್ವಿಕೆ ನಡೆಸಿದರು.

1656 ರಿಂದ 1858ರವರಗಿನ ಅವಧಿಯು ಸುರಪುರ ನಾಯಕ ಸಂಸ್ಥಾನದವರ ಪಾಲಿಗೆ ಸುವರ್ಣ ಕಾಲಘಟ್ಟ. ಆ ಕಾಲವನ್ನು ಈಗಲೂ ಇಲ್ಲಿನ ಜನರು ಅಭಿಮಾನದಿಂದ ನೆನಪಿಸಿಕೊಳ್ಳುತ್ತಾರೆ. ಬದುಕನ್ನು ಕಟ್ಟಿಕೊಳ್ಳಲು ಭೂಮಿ ಸೇರಿದಂತೆ ಸಂಪತ್ತನ್ನು ದಾನವಾಗಿ ನೀಡಿದ್ದನ್ನು ಜನರು ಸ್ಮರಿಸುತ್ತಾರೆ. ಸಂಸ್ಥಾನದ ಆಳ್ವಿಕೆಗೆ ಅರಮನೆ ಹಾಗೂ ಅದರ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟು, ಶಾಲೆ ಮತ್ತು ಕಟ್ಟಡಗಳೇ ಅದಕ್ಕೆ ಸಾಕ್ಷಿ.

ಸ್ಮಾರಕವಾಗುವತ್ತ ಅರಮನೆ...
ಸುರಪುರ ನಾಯಕ ಸಂಸ್ಥಾನದ ಹೊಸ ಅರಮನೆಯು ಸುಮಾರು 200 ವರ್ಷಗಳಷ್ಟು ಹಳೆಯದು. ರಾಣಿ ಈಶ್ವರಮ್ಮ ಮತ್ತು ಅವರ ಪುತ್ರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿ (ಸಂಸ್ಥಾನದ ಆಡಳಿತಾಧಿಕಾರಿ) ಫಿಲಿಪ್ ಮೆಡೋಸ್ ಟೇಲರ್ ಈ ಸುಂದರ ಅರಮನೆ ಕಟ್ಟಿಸಿದರು.

ಮೂರು ಅಂತಸ್ತಿನ ಈ ಅರಮನೆಯಲ್ಲಿ ವಿನ್ಯಾಸಕ್ಕೆ ಅನುಸಾರ ವಿಶಾಲ ಕೋಣೆಗಳನ್ನು ನಿರ್ಮಿಸಲಾಗಿದೆ. ಅರಸರ ಆರಾಧ್ಯದೈವ ವೆಂಕಟೇಶ್ವರ ದೇವರ ದರ್ಶನ ಅರಮನೆಯಿಂದಲೇ ಲಭ್ಯವಾಗುವಂತೆ ಮಾಡಲಾಗಿದೆ. ಅರಮನೆಯಲ್ಲಿ ಇದ್ದುಕೊಂಡೇ ಕಿಂಡಿ ಮುಖಾಂತರ ದೇವರ ದರ್ಶನ ಮಾಡಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಮಹಿಳೆಯರಿಗೆ ಘೋಷಾ ಪದ್ಧತಿ ಇರುವ ಕಾರಣದಿಂದಲೂ ಈ ಕ್ರಮ ಕೈಗೊಳ್ಳಲಾಗಿದೆಯಂತೆ.

ನಾಲ್ವಡಿ ವೆಂಕಟಪ್ಪನಾಯಕರ ವ್ಯಕ್ತಿತ್ವದ ಜತೆಗೆ ಸ್ವಾತಂತ್ರ್ಯ ಚಳವಳಿಯ ರೂಪುರೇಷೆ ಸಿದ್ಧಗೊಂಡಿದ್ದೇ ಈ ಅರಮನೆಯಲ್ಲಿ. ಕೆಲ ವರ್ಷಗಳ ಹಿಂದೆ ಸಂಸ್ಥಾನದ ಮೇಲಿನ ಅಭಿಮಾನದಿಂದ ತಾತಾ ರಾಜಾ ವೆಂಕಟಪ್ಪ ನಾಯಕ ಮತ್ತು ಅವರ ಪುತ್ರ ರಾಜಾ ಕೃಷ್ಣಪ್ಪ ನಾಯಕ ಅವರು ಪಾಳು ಬಿದ್ದ ಅರಮನೆಯನ್ನು ಪುನಃ ನವೀಕರಿಸಿದರು. ಸುಮಾರು ₹ 40 ಲಕ್ಷದವರೆಗೆ ಖರ್ಚು ಮಾಡಿ, ಅರಮನೆ ಸುಂದರಗೊಳಿಸಿದರು.

‘ನಾವು ಯಾರೂ ಈ ಅರಮನೆಯಲ್ಲಿ ವಾಸಿಸುವುದಿಲ್ಲ. ಆದರೆ, ಈ ಅರಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಸ್ಮಾರಕವಾಗಿಸುವ ಉದ್ದೇಶವಿದೆ. ಸುರಪುರ ನಾಯಕ ಸಂಸ್ಥಾನದ ಸಾಹಸಗಾಥೆ ಜನರಿಗೆ ತಿಳಿಪಡಿಸುವ ಇರಾದೆಯೂ ಇದೆ’ ಎಂದು ರಾಜಾ ಕೃಷ್ಣಪ್ಪ ನಾಯಕ ಹೇಳುತ್ತಾರೆ.

‘ಸಂಸ್ಥಾನದ ಹಳೆಯ ದರ್ಬಾರ್‌ನಲ್ಲಿ ಶಾಲೆ ನಡೆಸಲಾಗುತ್ತಿದೆ. ಶಾಲೆಯನ್ನು ತೆರವುಗೊಳಿಸಿ ದರ್ಬಾರನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ವಸ್ತು ಸಂಗ್ರಹಾಲಯ ನಿರ್ಮಿಸುವ ಗುರಿಯಿದೆ. ಸಂಸ್ಥಾನದ ಇತಿಹಾಸಗಾಥೆಯ ಮಾಹಿತಿ ಜನರಿಗೆ ಒದಗಿಸುವ ಉದ್ದೇಶವಿದೆ’ ಎಂದು ಇತಿಹಾಸ ಸಂಶೋಧಕರಾದ ಭಾಸ್ಕರರಾವ್ ಮುಡಬೂಳ ಹೇಳುತ್ತಾರೆ.

ತಿರುಪತಿಯೊಂದಿಗೆ ನಂಟು...
ಸುರಪುರ ನಾಯಕ ಸಂಸ್ಥಾನಕ್ಕೂ ಮತ್ತು ತಿರುಮಲ ತಿರುಪತಿ ದೇವರಿಗೂ ಗಾಢ ನಂಟಿದೆ. ‘ಸುರಪುರದ ಅರಸರು ತಿರುಪತಿ ದರ್ಶನಕ್ಕಾಗಿ ಬರುವುದು ಬೇಡ’ ಎಂದು ಅರಸರಿಗೆ ಕನಸಿನಲ್ಲಿ ವೆಂಕಟೇಶ್ವರ ಆದೇಶಿಸಿದ ಎಂಬ ಪ್ರತೀತಿ ಇದೆ. ಈ ಕಾರಣಕ್ಕೆ ರಾಜಾ ಪೀತಾಂಬರ ಬಹಿರಿ ಪಿಡ್ಡನಾಯಕ (1687-1727) ಸುರಪುರದಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಿಸಿದರು. ತಿರುಪತಿಯಲ್ಲಿ ಬ್ರಹ್ಮೋತ್ಸವ ನಡೆಯುವ ವೇಳೆ ಮತ್ತು ರಥ ಎಳೆಯುವಾಗ ಸುರಪುರಂ ಎಂದು ಕೂಗುವ ಸಂಪ್ರದಾಯವಿದೆ. ಆರತಿ ತಟ್ಟೆಯನ್ನು ತೆಗೆದುಕೊಂಡು ರಥವನ್ನೇರಿ ಮಂಗಳಾರತಿ ಮಾಡಿದ ನಂತರವಷ್ಟೇ ವೆಂಕಟೇಶ್ವರನ ರಥ ಎಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT