ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿತನವೆಂಬ ಕುಣಿಕೆ

Published 6 ಜನವರಿ 2024, 23:32 IST
Last Updated 6 ಜನವರಿ 2024, 23:32 IST
ಅಕ್ಷರ ಗಾತ್ರ

ಅಮೆರಿಕದ ಕೊಯೊಟೆ ಬುಡಕಟ್ಟು ಜನಾಂಗದವರಲ್ಲಿ ಒಂದು ವಿಶಿಷ್ಟ ಪದ್ಧತಿಯಿದೆ. ತಮ್ಮವರಲ್ಲಿ ಒಬ್ಬರಿಗೆ ಕಾಯಿಲೆಯಾದಾಗ ಎಲ್ಲರೂ ಅವನನ್ನು ಸುತ್ತುವರೆದು ಧನ್ಯವಾದಗಳನ್ನು ಹೇಳುತ್ತಾ ತಮ್ಮ ಬದುಕಿನ ರೀತಿಯನ್ನು ಚರ್ಚೆ ಮಾಡುತ್ತಾರೆ. ಗುಂಪಿನ ಒಬ್ಬನಿಗೆ ಆದ ಕಾಯಿಲೆ ಇಡೀ ಗುಂಪು ಬದುಕುತ್ತಿರುವ ರೀತಿಯಲ್ಲಿಯೇ ಇರುವ ಕೊರತೆಯನ್ನು ಸೂಚಿಸುತ್ತದೆ ಎನ್ನುವುದು ಅವರ ತಿಳಿವಳಿಕೆ. ಮೇಲುನೋಟಕ್ಕೆ ಇದು ಹಾಸ್ಯಾಸ್ಪದ ಎನ್ನಿಸಬಹುದು. ಆದರೆ ವ್ಯಕ್ತಿಯನ್ನು ಮತ್ತು ಅವನ ಮನೋದೈಹಿಕ ಸ್ಥಿತಿಗತಿಗಳನ್ನು ಸುತ್ತಲಿನ ಪರಿಸರದಿಂದ ಬೇರ್ಪಡಿಸಲಾಗುವುದಿಲ್ಲ ಎಂದು 2,600 ವರ್ಷಗಳ ಹಿಂದೆಯೇ ಬುದ್ಧ ಹೇಳಿದ್ದ. ಇದು ಸಂಪೂರ್ಣ ಸತ್ಯ ಎಂದು ಇವತ್ತಿನ ನರವಿಜ್ಞಾನದ ಸಂಶೋಧನೆಗಳೆಲ್ಲಾ ಸಾರಿಸಾರಿ ಹೇಳುತ್ತಿವೆ.

ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪಾಳುಬಿದ್ದ ಮನೆಯೊಂದರಲ್ಲಿ ಐದು ಜನರ ಅಸ್ಥಿಪಂಜರಗಳು ಪತ್ತೆಯಾದ ದುರಂತದ ಘಟನೆಯ ಸಾಮಾಜಿಕ ಆಯಾಮಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಪೊಲೀಸರ ತನಿಖೆ ನಡೆಯುತ್ತಿದ್ದರೂ ಅದು ಕಾನೂನಿನ ಅಗತ್ಯಗಳನ್ನು ಮಾತ್ರ ದೃಷ್ಟಿಕೋನದಲ್ಲಿಟ್ಟುಕೊಂಡಿರುತ್ತದೆ. ಸಾವಿನ ಸಾಮಾಜಿಕ ಆಯಾಮಗಳು ತನಿಖೆಯ ವ್ಯಾಪ್ತಿಗೆ ಬರುವುದಿಲ್ಲ. ಇಡೀ ಕುಟುಂಬ ಸಾಮಾಜಿಕ ಸಂಪರ್ಕ ಕಳೆದುಕೊಂಡಿತ್ತು ಎನ್ನುವುದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ. ಇದಕ್ಕೆ ಕಾರಣಗಳೇನೇ ಇದ್ದರೂ ಹೀಗೆ ಮಾನವ ಸಂಪರ್ಕವನ್ನು ಕಳೆದುಕೊಂಡಾಗ ಆಗುವ ಮನೋದೈಹಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ತಿಳಿದರೆ ಹೊಸ ಸಾಧ್ಯತೆಗಳು ಹೊಳೆದೀತು.

ಸಂದೇಶ, ಸಂವೇದನೆಯ ಸೂಕ್ಷ್ಮ

ಮಾನವ ಮೂಲತಃ ಸಂಘಜೀವಿ. ಇತರ ಮಾನವ ಜೀವಿಗಳ ಒಡನಾಟದಲ್ಲಿ ಮಾತ್ರ ಮಾನವರ ಮಿದುಳು ನರಮಂಡಲಗಳು ಸಮಾಧಾನ ಮತ್ತು ಸುರಕ್ಷಿತ ಭಾವನೆಗಳನ್ನು ಅನುಭವಿಸುತ್ತವೆ ಎಂದು ನರವಿಜ್ಞಾನಿ ಡಾ. ಸ್ಟೀಪನ್‌ ಪೋರ್ಜೆಸ್‌ ತನ್ನ ಪಾಲಿವೇಗಲ್‌ ಸಿದ್ಧಾಂತದಲ್ಲಿ ತೋರಿಸಿದ್ದಾನೆ. ಮಿದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಅದರ ಜೀವಕೋಶಗಳಾದ ನ್ಯೂರಾನ್‌ಗಳ ಸಂಪರ್ಕಜಾಲ ಸೃಷ್ಟಿಯಾಗಬೇಕು. ಜೊತೆಗೆ ಇಂತಹ ಸಂಪರ್ಕಜಾಲದಲ್ಲಿ ಮತ್ತೆ ಮತ್ತೆ ಸಂದೇಶಗಳ ವರ್ಗಾವಣೆಯಾಗಿ ಮಿದುಳಿನ ಕ್ಷಮತೆಯನ್ನು ಹೆಚ್ಚಿಸಬೇಕು. ಸಂವೇದನಾಂಗಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳ ಮೂಲಕ ನಾವು ಗ್ರಹಿಸಿದ ಸಂದೇಶವು ಮಿದುಳಿನ ಸಂಪರ್ಕ ಜಾಲಗಳಲ್ಲಿ ಪ್ರವಹಿಸುತ್ತಿದ್ದಾಗ ಅವು ಸಕ್ರಿಯವಾಗಿರುತ್ತವೆ. ಆದರೆ ಮಾನವ ಸಂಪರ್ಕವನ್ನು ಕಳೆದುಕೊಳ್ಳುವವರ ಸಂವೇದನಾಂಗಗಳಿಗೆ ಹೊರಗಿನಿಂದ ಸೂಚನೆಗಳೇ ಬರುತ್ತಿರುವುದಿಲ್ಲ. ಹಾಗಾಗಿ ನಿಧಾನವಾಗಿ ಮಿದುಳಿನ ಜೀವಕೋಶಗಳು ನಿಷ್ಕ್ರಿಯವಾಗುತ್ತಾ ಹೋದಂತೆ ಸಂಪರ್ಕಜಾಲಗಳು ಕಡಿದುಹೋಗುತ್ತವೆ. ಆಗ ವ್ಯಕ್ತಿ ಖಿನ್ನತೆಯೆಡೆಗೆ ಸರಿಯುತ್ತಾನೆ. ಸೂಕ್ತ ಸಮಯದಲ್ಲಿ ಮನೋವೈದ್ಯರ ಮತ್ತು ಮನೋಚಿಕಿತ್ಸಕರ ಸಹಾಯ ದೊರಕದಿದ್ದರೆ ಇಂತಹವರು ಆತ್ಮಹತ್ಯೆಗೆ ಮೊರೆಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಏಕಾಂಗಿತನ ಇವರನ್ನು ನಿಧಾನವಾಗಿ ಸಾವಿನೆಡೆಗೆ ನೂಕುತ್ತದೆ.

ಚಿತ್ರದುರ್ಗದ ಘಟನೆಯಲ್ಲಿ ಸಮಾಜದ ಪಾತ್ರವೇನು ಎನ್ನುವುದು ಎಲ್ಲರ ಮುಂದಿನ ಪ್ರಶ್ನೆಯಾಗಿರಲು ಸಾಧ್ಯ. ಇದಕ್ಕೆ ಉತ್ತರ ಹುಡುಕಲು ನಾವು ಆಧುನಿಕ ನಾಗರಿಕತೆ ಸಾಗಿಬಂದ ದಾರಿಯತ್ತ ಕಣ್ಣುಹಾಯಿಸಬೇಕು. ಈ ಭೂಮಿಯಲ್ಲಿ ಮಾನವನ ಉಗಮವಾಗಿ ಸುಮಾರು 18 ಲಕ್ಷ ವರ್ಷಗಳಾಗಿರಬಹುದು ಎನ್ನುವುದು ಮಾನವಶಾಸ್ತ್ರಜ್ಞರ ಅಂದಾಜು. ಈ 18 ಲಕ್ಷ ವರ್ಷಗಳಲ್ಲಿ ಕೃಷಿಯನ್ನು ಅನ್ವೇಷಿಸಿ ಮಾನವ ಒಂದು ಸ್ಥಿರ ಬದುಕನ್ನು ಕಂಡಕೊಂಡಿದ್ದು ಸುಮಾರು 12,000 ವರ್ಷಗಳ ಹಿಂದೆ ಮಾತ್ರ. ಅಂದರೆ ಈ ಪಯಣದ ಹೆಚ್ಚಿನ ಭಾಗದಲ್ಲಿ ನಮ್ಮ ಪೂರ್ವಜರು ಕಾಡುಮೇಡುಗಳಲ್ಲಿ ಹೆಚ್ಚೆಂದರೆ 150-200 ಜನರ ಸಣ್ಣಸಣ್ಣ ಗುಂಪುಗಳಲ್ಲಿ ಬದುಕುತ್ತಿದ್ದರು. ಗುಂಪಿನ ಎಲ್ಲಾ ಸದಸ್ಯರಿಗೂ ಪರಸ್ಪರ ಹತ್ತಿರದವರ ಪರಿಚಯ ಇರಲೇಬೇಕಾಗಿತ್ತು. ಹಾಗಿಲ್ಲದಿದ್ದರೆ ಗುಂಪಿನ ಒಗ್ಗಟ್ಟು ಸಾಧ್ಯವಾಗದೆ ಗುಂಪು ನಾಶವಾಗುತ್ತಿತ್ತು. ಅಂದರೆ ಇಡೀ ಗುಂಪು ಸುಮಾರಾಗಿ ಒಂದೇ ಮನೋದೈಹಿಕ ಸ್ಥಿತಿಯಲ್ಲಿ ಇರುತ್ತಿತ್ತು. ಗುಂಪಿನ ಒಬ್ಬ ಸದಸ್ಯನಲ್ಲಿ ಆಗುವ ಏರುಪೇರುಗಳನ್ನು ಸರಿಪಡಿಸಲು ಇಡೀ ಗುಂಪಿನ ಬೆಂಬಲವಿರುತ್ತಿತ್ತು. ಇಂತಹ ವ್ಯವಸ್ಥೆಗೆ ಹೊಂದಿಕೊಂಡು ಬಂದಿರುವ ನಮ್ಮ ಮಿದುಳು ನರಮಂಡಲಗಳು ಕಳೆದ ಕೇವಲ 12,000 ವರ್ಷಗಳಿಂದ ಆದ ಸಾಮಾಜಿಕ ಬದಲಾವಣೆಗೆ ಹೊಂದಿಕೊಂಡಿಲ್ಲ ಏಕೆಂದರೆ ನಮ್ಮ ವಂಶವಾಹಿಗಳಲ್ಲಿ ಸಣ್ಣಪುಟ್ಟ ಬದಲಾವಣೆ ಆಗಲು ಲಕ್ಷಾಂತರ ವರ್ಷಗಳೇ ಬೇಕು.

ವಿಘಟಿತ ಸಾಮಾಜಿಕ ಬದುಕಿನ ವೃದ್ಧಾಶ್ರಮಗಳು

ಕೃಷಿಯಿಂದ ಪ್ರಾರಂಭವಾಗಿ ಕೈಗಾರಿಕೆಗಳಿಗೆ ಹೊರಳಿಕೊಂಡ ಆಧುನಿಕ ನಾಗರಿತೆ, ಇಡೀ ಮಾನವ ಕುಲ ಆಳದಲ್ಲಿ ಒಂದೇ ಎನ್ನುವ ಚಿಂತನೆಯನ್ನು ಮರೆತು ವ್ಯಕ್ತಿ ವಿಶಿಷ್ಟತೆಯನ್ನು ವೈಭವೀಕರಿಸುತ್ತಾ ಬಂದಿತು ಎಂದು ಮನೋವೈದ್ಯ ಸಂಶೋಧಕ ಡಾ. ಬೆಸಲ್‌ ವ್ಯಾಂಡರ್‌ಕಾಕ್‌ ತನ್ನ ಜನಪ್ರಿಯ ಪುಸ್ತಕ ‘ದಿ ಬಾಡಿ ಕೀಪ್ಸ್‌ ದಿ ಸ್ಕೋರ್’ನಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದಾನೆ. ವಿಘಟಿತ ಸಾಮಾಜಿಕ ಬದುಕಿನ ದುಷ್ಪರಿಣಾಮಗಳು ನಮ್ಮ ಸುತ್ತಲೂ ದಿನೇದಿನೇ ಎದ್ದು ಕಾಣಿಸುತ್ತಿವೆ. ಕೂಡುಕುಟುಂಬಗಳು ಒಡೆದುಹೋಗಿವೆ. ಮಕ್ಕಳಿಗೆ ಅಪ್ಪ–ಅಮ್ಮಂದಿರ ಹೊರತಾಗಿ ಇತರರ ಬೆಂಬಲ ಸಿಗುತ್ತಿಲ್ಲ. ಇವತ್ತಿನ ಅಗತ್ಯಗಳನ್ನು ಪೂರೈಸಲು ಪೋಷಕರಿಬ್ಬರೂ ದುಡಿಯುವ ಅನಿವಾರ್ಯದಲ್ಲಿ ಅವರು ದಿನದ ಹೆಚ್ಚಿನ ಸಮಯ ಮನೆಯಿಂದ ಹೊರಗೆ ಕಳೆಯುತ್ತಾರೆ. ಹಳ್ಳಿಗಳು ವಿಘಟನೆಗೊಂಡು ಜನಸಂಖ್ಯೆಯೇ ಇಲ್ಲದ ವೃದ್ಧಾಶ್ರಮಗಳಾಗುತ್ತಿವೆ. ಪಟ್ಟಣಗಳಲ್ಲಿ ಗುಂಪು ಜೀವನದ ಅವಕಾಶಗಳು ಅತಿ ಕಡಿಮೆಯಾಗಿವೆ. ಹೀಗಾಗಿ ಮನುಷ್ಯರ ಒಂಟಿತನ ಹೆಚ್ಚುತ್ತಲೇ ಬರುತ್ತಿದೆ ಎಂದು ಪ್ರಪಂಚದ ಹಲವಾರು ಕಡೆ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದಿದೆ. ಸಾಕಷ್ಟು ಸರ್ಕಾರಗಳು ಇದಕ್ಕೆ ಪರಿಹಾರ ಮಾರ್ಗಗಳನ್ನು ಹುಡುಕಲು ತಜ್ಞರನ್ನು ಆಹ್ವಾನಿಸುತ್ತಿವೆ. ಹೆಚ್ಚುತ್ತಿರುವ ಆತ್ಮಹತ್ಯೆಗಳು, ನಶೆಯ ವಸ್ತುಗಳ ವ್ಯಸನ ಮುಂತಾದವುಗಳಿಗೆ ಪರಿಹಾರಗಳನ್ನು ಹುಡುಕಲು ಬ್ರಿಟನ್‌ ಮತ್ತು ಜಪಾನ್‌ ದೇಶಗಳಲ್ಲಿ ‘ಏಕಾಂಗಿತನದ ಸಚಿವಾಲಯ’ಗಳನ್ನು (Ministry of Loneliness) ಪ್ರಾರಂಭಿಸಿ, ಅದಕ್ಕಾಗಿಯೇ ಒಬ್ಬ ಕೇಂದ್ರ ಸಚಿವರನ್ನು ನೇಮಿಸಲಾಗಿದೆ. ನಮ್ಮ ಸರ್ಕಾರಗಳಿಗೆ ಇತ್ತ ಕಡೆ ಗಮನಹರಿಸುವ ಆಸಕ್ತಿ ಇರುವಂತೆ ಕಾಣಿಸುತ್ತಿಲ್ಲ.

ಮಾನವೀಯ ಸಂಪರ್ಕದ ಸಹಜ ಹಸಿವು ತಣಿಯದಿದ್ದಾಗ ಮೂಡುವ ಏಕಾಂಗಿತನವನ್ನು ತಣಿಸಲು ಸಿಗರೇಟ್‌, ಮದ್ಯ ಮತ್ತಿತರ ನಶೆಯ ವಸ್ತುಗಳ ಸೇವನೆ ಹೆಚ್ಚುತ್ತಿದೆ. ಏಕಾಂಗಿಯಾಗಿದ್ದಾಗ ಹತ್ತಿಕ್ಕಲಾದ ಭಾವನಾತ್ಮಕ ಏರುಪೇರುಗಳು ಹಿಂಸೆಯಾಗಿಯೂ ಹೊರಬರಬಹುದು. ಮನೆ, ಬೀದಿ ಶಾಲಾ–ಕಾಲೇಜುಗಳು ಹೀಗೆ ಎಲ್ಲೆಂದರಲ್ಲಿ ಕಂಡುಬರುತ್ತಿರುವ ಮೊಬೈಲ್‌, ಕಂಪ್ಯೂಟರ್‌, ಸಾಮಾಜಿಕ ಮಾಧ್ಯಮಗಳ ‘ಡಿಜಿಟಲ್‌ ಅಡಿಕ್ಷನ್‌’ ಎಲ್ಲಾ ವಯಸ್ಸಿನವರನ್ನೂ ಆವರಿಸಿಕೊಳ್ಳುತ್ತಿದೆ. ಮಾನವ ಸಂಪರ್ಕದಿಂದ ದೊರಕುವ ಸಂತೋಷ ಸಮಾಧಾನಗಳನ್ನು ಹೀಗೆ ಕೃತಕವಾಗಿ ಪೂರೈಸಿಕೊಳ್ಳುತ್ತಾ ಹೋದಂತೆ ಏಕಾಂಗಿತನ ಇನ್ನೂ ಹೆಚ್ಚಾಗುತ್ತದೆ. ಏಕಾಂಗಿತನ-ನಶೆಯ ವಸ್ತುಗಳು-ಹೆಚ್ಚುವ ಏಕಾಂಗಿತನ, ಇಂತಹ ಒಂದು ವಿಷವರ್ತುಲಕ್ಕೆ ಸಿಲುಕಿದಾಗ ಅಪಾಯಗಳನ್ನು ತಪ್ಪಿಸುವುದು ಅಸಾಧ್ಯ.

ಕೂಡಿ ಬಾಳುವ ದಾರಿಗಳು...

ಕಾಲವನ್ನು ಹಿಂತಿರುಗಿಸಿ ಬುಡಕಟ್ಟು ಜನಾಂಗದವರಂತೆ ಮತ್ತೆ ಬದುಕುವುದಂತೂ ಸಾಧ್ಯವಿಲ್ಲ. ಆದರೆ ಅವರ ಜೀವನಶೈಲಿಯಲ್ಲಿದ್ದ ವಿವೇಕವನ್ನು ಇವತ್ತಿನ ಬದುಕಿಗೆ ಅನ್ವಯಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಜಾತಿ, ಧರ್ಮಗಳನ್ನು ಮನೆಯ ಗೋಡೆಯ ಒಳಗೆ ಸೀಮಿತಗೊಳಿಸಿ ಸಾಮಾಜಿಕ ಒಡನಾಟವನ್ನು ಹೆಚ್ಚಿಸಿಕೊಳ್ಳಬೇಕು. ಒಂದು ಹಳ್ಳಿ, ನಗರದ ಒಂದು ಬಡಾವಣೆ ಅಥವಾ ಬಹುಮಹಡಿ ಕಟ್ಟದ ವಾಸಿಗಳು ಗುಂಪು ಜೀವನದ ಸಾಧ್ಯತೆಗಳನ್ನು ಹುಡುಕಿಕೊಳ್ಳಬೇಕು. ವಾರಕ್ಕೊಮ್ಮೆಯಾದರೂ ಒಂದು ಕಡೆ ಸೇರುವುದು. ಮಕ್ಕಳ ಯೋಗಕ್ಷೇಮಕ್ಕೆ ಒಂದು ಸಾಮಾನ್ಯ ವ್ಯವಸ್ಥೆ ರೂಪಿಸಿಕೊಳ್ಳುವುದು, ಹಬ್ಬಗಳನ್ನು ಒಟ್ಟಾಗಿ ಆಚರಿಸುವುದು-ಹೀಗೆ ಹುಡುಕುತ್ತಾ ಹೋದರೆ ಹಲವಾರು ದಾರಿಗಳು ತೆರೆದುಕೊಳ್ಳುತ್ತವೆ.
ಜನರನ್ನು ಒಡೆದು ಆಳುವುದನ್ನೇ ನೀತಿಯಾಗಿಸಿಕೊಂಡಿರುವ ಆಡಳಿತ ವ್ಯವಸ್ಥೆ ಮತ್ತು ಜನರ ವ್ಯಸನಗಳಿಂದ ಭರಪೂರ ಲಾಭ ಪಡೆಯುತ್ತಿರುವ ಕಾರ್ಪೊರೇಟ್‌ಗಳ ಬಿಗಿಹಿಡಿತದಿಂದ ಹೊರಬಂದು ಯೋಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಸಂಪರ್ಕ ಕಡಿದುಕೊಂಡಿದ್ದ ಕುಟುಂಬ

ಚಿತ್ರದುರ್ಗದಲ್ಲಿ ಅಸ್ಥಿಪಂಜರ ಸ್ವರೂಪದಲ್ಲಿ ಪತ್ತೆಯಾದ ಕುಟುಂಬ (ಒಟ್ಟು ಐದು ಮಂದಿಯ ಅಸ್ಥಿಪಂಜರಗಳು ಪತ್ತೆಯಾದವು) ಹೊರಜಗತ್ತಿನೊಂದಿಗೆ ಪ್ರಜ್ಞಾಪೂರ್ವಕವಾಗಿ ಸಂಪರ್ಕ ಕಡಿದುಕೊಂಡಿತ್ತು. ಸಹೋದರರು, ಸ್ನೇಹಿತರು, ಗ್ರಾಮಸ್ಥರೊಂದಿಗೂ ಕುಟುಂಬದ ಯಾವೊಬ್ಬ ಸದಸ್ಯರೂ ಸಂಬಂಧವನ್ನು ಜೀವಂತವಾಗಿಟ್ಟುಕೊಂಡಿರಲಿಲ್ಲ. ಮನೆಯ ಮುಂಭಾಗದಲ್ಲಿ ಹಾದುಹೋದವರಿಗೆ ತಿರುಗಿ ನೋಡುವ ಕುತೂಹಲ ಕೂಡ ಉಳಿದಿರಲಿಲ್ಲ ಎಂಬ ಸಂಗತಿ ಸೋಜಿಗ ಮೂಡಿಸಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದ ಜಗನ್ನಾಥರೆಡ್ಡಿ 1988ರಲ್ಲಿ ನಿವೃತ್ತರಾಗಿದ್ದರು. ಚಿತ್ರದುರ್ಗದ ಕಾರಾಗೃಹ ರಸ್ತೆಯ ವಿಶಾಲ ಮನೆಯಲ್ಲಿ ಸಂಧ್ಯಾಕಾಲದ ಜೀವನ ಕಳೆಯುತ್ತಿದ್ದರು. ಅನಾರೋಗ್ಯಪೀಡಿತ ಪುತ್ರಿ, ಅಪರಾಧ ಪ್ರಕರಣದಲ್ಲಿ ಸಿಕ್ಕಿಬಿದ್ದ ಪುತ್ರ ಇವುಗಳು ಕುಟುಂಬದ ಸದಸ್ಯರನ್ನು ಮಾನಸಿಕವಾಗಿ ಕುಗ್ಗಿಸಿದ್ದವು. ವಿಳಂಬವಾಗುತ್ತಿದ್ದ ಮಕ್ಕಳ ವಿವಾಹದ ಕೊರಗು ಪೋಷಕರನ್ನು ಬಲವಾಗಿ ಕಾಡಿತ್ತು. ಆರ್ಥಿಕ ವಿಚಾರಗಳಲ್ಲಿ ಉಂಟಾಗಿದ್ದ ಕಹಿ ಅನುಭವಗಳು ಜನರಿಂದ ದೂರ ಉಳಿಯುವಂತೆ ಮಾಡಿದ ಸಾಧ್ಯತೆ ಹೆಚ್ಚಿದೆ ಎನ್ನುವುದು ಸಂಬಂಧಿಕರ ಹೇಳಿಕೆ.

ರಕ್ತ ಸಂಬಂಧಿಕರಿಗೂ ಮನೆಯ ಬಾಗಿಲನ್ನು ತೆರೆಯದಷ್ಟು ಏಕಾಂತವನ್ನು ಕುಟುಂಬ ಅನುಭವಿಸುತ್ತಿತ್ತು. ಮದುವೆ, ಗೃಹ ಪ್ರವೇಶದಂತಹ ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ಸಂಬಂಧಿಕರು ಗೇಟಿನ ಹೊರಗೆ ನಿಂತು ನೀಡುತ್ತಿದ್ದರು. ಈ ಅನುಭವಗಳು ಸಂಬಂಧಿಕರಲ್ಲಿ ಕಹಿ ಭಾವನೆ ಮೂಡಿಸಿದ್ದವು. ಮನೆಯ ಮುಂಭಾಗ, ಆವರಣದಲ್ಲಿ ಬೆಳೆದಿದ್ದ ಕಳೆಗಿಡಗಳನ್ನು ಕೂಡ ಶುಚಿಗೊಳಿಸುತ್ತಿರಲಿಲ್ಲ. ಜಗನ್ನಾಥರೆಡ್ಡಿ ಕುಟುಂಬ ಸಂಪರ್ಕ ಕಳೆದುಕೊಂಡರೂ ಪಾಳು ಮನೆಯ ಬಳಿ ಧಾವಿಸಿ ವಿಚಾರಿಸುವ ಆಸಕ್ತಿ ಸಂಬಂಧಿಕರಲ್ಲಿಯೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT