ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಹ ಲೋಂಗ್ ಬೇ: ನಡುಗಡ್ಡೆಗಳ ರತ್ನಗರ್ಭ

Published 10 ಜೂನ್ 2023, 19:55 IST
Last Updated 10 ಜೂನ್ 2023, 19:55 IST
ಅಕ್ಷರ ಗಾತ್ರ

‘ಕಾಂಗ್: ದ ಸ್ಕಲ್ ಐಲ್ಯಾಂಡ್’ 2017 ರಲ್ಲಿ ಬಿಡುಗಡೆಯಾದ ಪ್ರಸಿದ್ಧ ಹಾಲಿವುಡ್ ಚಲನಚಿತ್ರ. ಇದರಲ್ಲಿ ತೋರಿಸಿರುವ ಸ್ಕಲ್ ಐಲ್ಯಾಂಡ್ ಎಂಬ ಸುಂದರ ಭೂಪ್ರದೇಶವು ವೀಕ್ಷಕರನ್ನು ಕನಸಿನ ಲೋಕಕ್ಕೆ ಕರೆದೊಯ್ದಿತ್ತು. ಇದನ್ನು ಚಿತ್ರೀಕರಿಸಿದ್ದು ವಿಯೆಟ್ನಾಂ ದೇಶದ ಹ ಲೋಂಗ್ ಬೇಯಲ್ಲಿ. ಈ ಚಲನಚಿತ್ರ
ಹ ಲೋಂಗ್ ಬೇ ಪ್ರವಾಸೋದ್ಯಮದ ವಹಿವಾಟನ್ನು ದುಪ್ಪಟ್ಟುಗೊಳಿಸಿಬಿಟ್ಟಿತು.

ಹನಾಯ್‌ನಿಂದ 180 ಕಿ.ಮೀ. ದೂರದಲ್ಲಿದೆ ವಿಶ್ವ ನೈಸರ್ಗಿಕ ಪಾರಂಪರಿಕ ತಾಣ ಹ ಲೋಂಗ್ ಬೇ. ಇದು ಹ ಲೋಂಗ್ ನಗರದ ಅಂಚಿಗಿದೆ. ಸಮುದ್ರದ ಒಳಚಾಚಿರುವ ಪ್ರದೇಶವಾದ ಇಲ್ಲಿ ಅಲೆಗಳ ಉಬ್ಬರವಾಗಲೀ ಅಬ್ಬರವಾಗಲೀ ಇಲ್ಲ. ಸುಮಾರು 1,550 ಚ.ಕಿ.ಮೀ. ವಿಸ್ತಾರದ ಹ ಲೋಂಗ್ ಬೇ, ಸುಮಾರು ಎರಡು ಸಾವಿರ ನಡುಗಡ್ಡೆಗಳು ಮತ್ತು ದ್ವೀಪಗಳನ್ನೊಳಗೊಂಡಿದೆ. ಇದರಲ್ಲಿನ 334 ಚ.ಕಿ.ಮೀ. ವ್ಯಾಪ್ತಿಯ ಮುಖ್ಯ ಪ್ರದೇಶದಲ್ಲಿ 773 ನಡುಗಡ್ಡೆಗಳಿವೆ. ಕೆಲವು ಚಿಕ್ಕದಾಗಿದ್ದರೆ, ಇನ್ನು ಕೆಲವು ತೀರಾ ದೊಡ್ಡದಾಗಿವೆ. ಇವೆಲ್ಲಾ ಸುಣ್ಣದ ಕಲ್ಲಿನ ಅಂಶವುಳ್ಳ ವಿವಿಧ ಆಕಾರದ ಶಿಲಾ ಗುಡ್ಡಗಳಾಗಿದ್ದು, ಸುಮಾರು ಇಪ್ಪತ್ತು ಮಿಲಿಯನ್ ವರ್ಷಗಳ ಅವಧಿಯಲ್ಲಿ ರೂಪುಗೊಂಡ ರಚನೆಗಳು. ಹ ಲೋಂಗ್ ಬೇ ತೀರ 120 ಕಿ.ಮೀ. ಉದ್ದವಿದ್ದು, ನಡುಗಡ್ಡೆಗಳು 50 ರಿಂದ 100 ಮೀಟರ್ ಎತ್ತರ ಇವೆ. ಈ ನಡುಗಡ್ಡೆಗಳು 43,400 ಹೆಕ್ಟೇರ್ ಪ್ರದೇಶದಲ್ಲಿ ಹರಡಿವೆ. ಸಮುದ್ರದ ಏರಿಳಿತ, ಹಲವಾರು ನೈಸರ್ಗಿಕ ಬದಲಾವಣೆಗಳು, ಅಲೆಗಳ ಹೊಡೆತದಿಂದಾಗಿ ಈ ಬೆಟ್ಟಗಳು ಹಲವು ರೀತಿಯ ಆಕಾರ ಪಡೆದಿವೆ. ‘ಗಲ್ಫ್ ಆಫ್ ಟೊಂಕಿನ್’ ಎಂದು ಕರೆಯುವ ಸಾಗರದ ಈ ಪ್ರದೇಶದ ಉತ್ತರಕ್ಕೆ ಹೊಂದಿಕೊಂಡು ಚೀನಾದ ಭೂಪ್ರದೇಶವಿದೆ.

ಭೂ ವೈವಿಧ್ಯ, ಜೀವ ವೈವಿಧ್ಯದ ದೃಷ್ಟಿಯಿಂದ ಹ ಲೋಂಗ್ ಬೇ ಮಹತ್ವದ ಪ್ರದೇಶವೆಂದು ಹೆಸರಾಗಿದೆ. ವಿರಳವಾದ ಮತ್ತು ಅಪರೂಪದ ಅನೇಕ ಜೀವಿಗಳು ಮತ್ತು ಸಸ್ಯಪ್ರಭೇದಕ್ಕೆ ನೆಲೆಯಾಗಿದೆ. ಹ ಲೋಂಗ್ ಬೇ ನಡುಗಡ್ಡೆಗಳು ತಮ್ಮ ದೇಶವನ್ನು ವೈರಿಗಳಿಂದ ರಕ್ಷಿಸಲೆಂದು ದೇವರು ಕಳಿಸಿಕೊಟ್ಟ ಡ್ರ್ಯಾಗನ್ ಮತ್ತು ಆಕೆಯ ಮಕ್ಕಳೆನ್ನುವುದು ವಿಯೆಟ್ನಾಂ ಜನರ ನಂಬಿಕೆ. 12-13 ನೇ ಶತಮಾನದಲ್ಲಿ ಚೀನಾ ಮತ್ತು ಮಂಗೋಲಿಯ ಪಡೆಗಳು ವಿಯೆಟ್ನಾಂ ಮೇಲೆ ದಾಳಿ ಮಾಡಿದಾಗ ಈ ನಡುಗಡ್ಡೆಗಳ ಮಧ್ಯೆ ಅಡೆತಡೆಗಳನ್ನು ನಿರ್ಮಿಸಿ ಹಿಮ್ಮೆಟ್ಟಿಸಿದ್ದರಂತೆ. ಅಮೆರಿಕದೊಂದಿಗೆ ನಡೆದ ಯುದ್ಧದಲ್ಲೂ ಅಮೆರಿಕದ ನೌಕಾಪಡೆ ಈ ಪ್ರದೇಶದಲ್ಲಿ ನೀರುಬಾಂಬು, ನೆಲಬಾಂಬುಗಳನ್ನು ಹುದುಗಿಸಿಟ್ಟು ಸಾಕಷ್ಟು ಜೀವ ಹಾನಿ ಮಾಡಿತ್ತು.

ಬಹುತೇಕ ನಡುಗಡ್ಡೆಗಳು ಹಸಿರಿನಿಂದ ಕಂಗೊಳಿಸಿದರೆ, ಇನ್ನು ಕೆಲವು ಒಳಗಡೆ ಟೊಳ್ಳಾಗಿದ್ದು, ಗುಹಾಲಯದಂತಿವೆ. ಒಂದೆರಡು ದೊಡ್ಡ ನಡುಗಡ್ಡೆಗಳಲ್ಲಿ ಜನವಸತಿ ಕೂಡ ಇದೆ. ಪ್ರವಾಸಿಗರಿಗೂ ಅಲ್ಲಿ ಸೌಲಭ್ಯವಿದೆ. ಮೀನುಗಾರರು ಕೆಲವೆಡೆ ಇದ್ದರೆ, ಉಳಿದಂತೆ ಅವರು ತೇಲುವ ಬೃಹತ್ ನಾವೆಗಳಲ್ಲಿ ವಸತಿಯನ್ನು ರೂಪಿಸಿಕೊಂಡಿರುವರು. ಕೆಲವು ನಡುಗಡ್ಡೆಗಳಲ್ಲಿ ಸಿಹಿ ನೀರಿನ ಸಣ್ಣ ಕೆರೆಗಳೂ ಇವೆ. ನಡುಗಡ್ಡೆಗಳೊಳಗಿನ ಗುಹೆಗಳು ಹನ್ನೊಂದು ಸಾವಿರ ವರ್ಷಗಳಿಂದ ಏಳು ಲಕ್ಷ ಕಾಲಾವಧಿಯಲ್ಲಿ ರಚನೆಯಾಗಿವೆ. ಬೆಟ್ಟಗಳ ಕಲ್ಲುಗಳ ಬಿರುಕುಗಳಲ್ಲಿ ಸಮುದ್ರದ ನೀರು ಸೇರಿ, ನಿಧಾನವಾಗಿ ಆ ಸುಣ್ಣದ ಕಲ್ಲುಗಳು ಸವಕಳಿಯಾದಂತೆ ವಿವಿಧ ಆಕಾರದಲ್ಲಿ ಗುಹೆ ಸಂರಚನೆಗೊಂಡಿವೆ. ನೋಡಲು ಚಿತ್ರ ವಿಚಿತ್ರ ಆಕೃತಿಗಳಂತೆ ಕಾಣುವ ಈ ನಡುಗಡ್ಡೆಗಳಿಗೆ ಅವುಗಳ ಆಕಾರಕ್ಕೆ ತಕ್ಕಂತೆ ಕೋಳಿ, ಕೋತಿ, ಕಪ್ಪೆ, ಆನೆ, ಆಮೆ ಮುಂತಾದ ಪ್ರಾಣಿಗಳ ಹೆಸರುಗಳನ್ನು ಇಡಲಾಗಿದೆ. ಹಲವಕ್ಕೆ ಸ್ಥಳೀಯ ಭಾಷೆಯ ಹೆಸರುಗಳನ್ನೂ ಇಡಲಾಗಿದೆ.

ಪ್ರವಾಸಿಗರು ದೋಣಿಯಲ್ಲಿ ಕುಳಿತು ಹ ಲೋಂಗ್ ಬೇ ಅನ್ನು ಸ್ಥಳೀಯ ಖಾದ್ಯವನ್ನು ಮೆಲ್ಲುತ್ತಾ ನೋಡಲು ವ್ಯವಸ್ಥೆ ಮಾಡಿರುವರು. ಇದಕ್ಕಾಗಿ ನೂರಾರು ದೋಣಿಗಳು ಇಲ್ಲಿವೆ. ಸುಸಜ್ಜಿತ ವಸತಿ ವ್ಯವಸ್ಥೆಯಿರುವ ದೊಡ್ಡ ದೊಡ್ಡ ಕ್ರೂಸ್‌ಗಳು ಇವೆ. ಹಸಿರು ಬಣ್ಣದ ನೀರಿನಲ್ಲಿ ತೇಲುತ್ತಾ ನಿಂತಂತೆ ಭಾಸವಾಗುವ ನಡುಗಡ್ಡೆಗಳನ್ನು ದೋಣಿಯಲ್ಲಿ ಕುಳಿತು ನೋಡುವುದೇ ಸೋಜಿಗ. ದೂರದಿಂದ ಚಿಕ್ಕದಾಗಿ ಕಂಡು ಬರುವ ನಡುಗಡ್ಡೆಗಳು ಹತ್ತಿರ ಹೋದಾಗ ಅದರ ಬೃಹತ್ ಆಕೃತಿ, ಚೆಲುವು, ಹಸಿರು ಪರಿಸರ ದಿಗ್ಭ್ರಮೆಗೊಳಿಸುತ್ತವೆ. ಅವುಗಳ ರಚನಾ ವೈವಿಧ್ಯ, ನೈಸರ್ಗಿಕ ಚಿತ್ತಾರಗಳು ಬೆರಗನ್ನುಂಟು ಮಾಡುತ್ತವೆ.

ದಾವ್ ಗೋ ಗುಹೆ

ಹ ಲೋಂಗ್ ಬೇ ನಡುಗಡ್ಡೆಗಳಲ್ಲಿಯೇ ಪ್ರಸಿದ್ಧ ಗುಹೆ ಹೊಂದಿರುವ ನಡುಗಡ್ಡೆಯಿದು. ದೋಣಿಯಿಂದಿಳಿದು, ಸೇತುವೆ ದಾಟಿ ಈ ನಡುಗಡ್ಡೆಯಲ್ಲಿ ಹಲವಾರು ಮೆಟ್ಟಿಲುಗಳನ್ನು ಏರಿದಾಗ ಗುಹೆಯ ಪ್ರವೇಶದ್ವಾರ ಸಿಗುತ್ತದೆ. ಬೆಟ್ಟದ ಒಡಲೊಳಗೆ ವಿಚಿತ್ರವಾದ ಲೋಕವನ್ನು ನಾವು ಕಾಣುತ್ತೇವೆ. ಒಟ್ಟು 5,000 ಚ.ಮೀ. ವಿಸ್ತೀರ್ಣ ಮತ್ತು 209 ಮೀ. ಉದ್ದದ ಈ ಗುಹೆಯನ್ನು ದೀಪಗಳಿಂದ ಬೆಳಗಿದ್ದು, ಪೇಂಟಿಂಗ್ ರೀತಿ ಕಂಡುಬರುತ್ತದೆ. ನಮ್ಮ ಊಹೆಯನ್ನೂ ವಿಸ್ತರಿಸುವಂತೆ ನಾನಾ ಆಕಾರಗಳು ರೂಪುಗೊಂಡಿದ್ದು ಕಲ್ಪನೆಯನ್ನು ಒರೆಗೆ ಹಚ್ಚುತ್ತವೆ. ಗುಹೆಯ ಒಳಗೆ ಓಡಾಡಲು ಸೂಕ್ತ ಬೆಳಕು, ಮೆಟ್ಟಿಲುಗಳು ಮತ್ತು ಹಾದಿಯನ್ನು ನಿರ್ಮಿಸಲಾಗಿದೆ. ಶತ ಶತಮಾನಗಳ ಕಾಲಾವಧಿಯಲ್ಲಿ ನಿಸರ್ಗ ಅತ್ಯಂತ ಸಾವಧಾನದಿಂದ ಕುಸುರಿ ಕೆಲಸ ನಡೆಸಿ ಈ ಸೊಬಗನ್ನು ಸೃಷ್ಟಿಸಿದೆ. ಗುಹೆಯ ಒಂದು ಬದಿಯಿಂದ ಪ್ರವೇಶಿಸುವ ನಾವು ಗುಹಾಲೋಕದಲ್ಲಿ ಸುತ್ತಾಡಿ ಮತ್ತೊಂದು ಬದಿಯಿಂದ ಹೊರಬರುತ್ತೇವೆ. ಬೆಟ್ಟವಿಳಿದು ಬಂದಾಗ ಸ್ಮರಣಿಕೆಗಳ ಅಂಗಡಿಗಳಲ್ಲಿ ಹ ಲೋಂಗ್ ಬೇ ನೆನಪಿಗಾಗಿ ಹಲವು ವಸ್ತುಗಳನ್ನು ಕೊಳ್ಳಬಹುದು. ದಡದಲ್ಲಿ ನಿಂತಿದ್ದ ಹಡಗನ್ನೇರಿದೊಡನೆ ನಡುಗಡ್ಡೆಗಳ ಮಾಯಾ ಲೋಕ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.

ಹ ಲೋಂಗ್ ಬೇ ನಲ್ಲಿ ಅಪರೂಪದ ಸಸ್ಯ, ಜೀವ ಪ್ರಭೇದಗಳನ್ನು ಗುರುತಿಸಲಾಗಿದೆ. 435 ವಿಧದ ಸಸ್ಯಗಳು, 22 ಸಮುದ್ರ ಪ್ರಾಣಿಗಳು, 315 ಬಗೆಯ ಮೀನುಗಳು, 76 ರೀತಿಯ ಪಕ್ಷಿಗಳು, 545 ವಿಧದ ಸರೀಸೃಪಗಳಿಲ್ಲಿವೆ.

ಮುತ್ತುಗಳ ತಯಾರಿಕೆ
ಹ ಲೋಂಗ್ ಬೇ ವಿಶೇಷವೆಂದರೆ ಇಲ್ಲಿ ಮುತ್ತನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತಾರೆ. ಹ ಲೋಂಗ್ ಬೇ ನೋಡಿಕೊಂಡು ವಾಪಸಾಗುವ ಪ್ರವಾಸಿಗರನ್ನು ತಪ್ಪದೇ ಮುತ್ತಿನ ಮಳಿಗೆಗಳಿಗೆ ಕರೆದೊಯ್ಯುತ್ತಾರೆ. ಅಲ್ಲಿ ಮುತ್ತುಗಳ ತಯಾರಿಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ, ಪ್ರದರ್ಶಿಸಿರುವ ಮುತ್ತುಗಳನ್ನು ಕೊಳ್ಳಲು ಪ್ರೇರೇಪಿಸುತ್ತಾರೆ. ಪ್ರವಾಸಿಗರಿಂದ ಮತ್ತು ಮುತ್ತಿನ ವ್ಯಾಪಾರದಿಂದ ಹ ಲೋಂಗ್ ನಗರ ವಾಣಿಜ್ಯ ಕೇಂದ್ರವಾಗಿದೆ.     ನೈಸರ್ಗಿಕವಾಗಿ ಸಿಗುವ ಮುತ್ತು ಅಪರೂಪವಾಗಿ ತಯಾರಾಗುವುದರಿಂದ ಅದಕ್ಕೆ ಬೆಲೆ ಹೆಚ್ಚು. ಕೃತಕವಾಗಿ ತಯಾರಾಗುವ ಮುತ್ತು ಸೃಷ್ಟಿಯ ಸಹಜ ಕ್ರಿಯೆಯಿಂದಲೇ ತಯಾರಾಗುತ್ತದಾದರೂ, ಇದರಲ್ಲಿ ಮಾನವನ ಕೈಚಳಕವಿದೆ. ಹ ಲೋಂಗ್ ಬೇ ಯ ನಡುಗಡ್ಡೆಗಳಲ್ಲಿ ದೋಣಿಗಳ ಓಡಾಟ ಇರದಿರುವೆಡೆ ಮತ್ತು ನೀರು ಶಾಂತವಾಗಿರುವ ಕಡೆ ಈ ರೀತಿಯ ಕೃತಕ ಮುತ್ತು ತಯಾರಿಕೆ ನಡೆಯುತ್ತದೆ. ಎರಡು ಮೂರು ವಿಧದ ದ್ವಿಕವಾಟಗಳುಳ್ಳ ಮೃದ್ವಂಗಿಗಳನ್ನು ಬಳಸಿ ಮುತ್ತು ತಯಾರಿಸುವರು. ಈ ಮೃದ್ವಂಗಿಗಳ ಶರೀರದಲ್ಲಿ ಅವುಗಳದೇ ಕವಾಟವನ್ನು ಹುಡಿ ಮಾಡಿ ತಯಾರಿಸಲಾದ ಕವಚದೊಂದಿಗೆ ಬೇರೆ ಜಲಚರದ ಟಿಶ್ಯೂ ಸೇರಿಸುತ್ತಾರೆ. ಈ ಬಾಹ್ಯ ವಸ್ತುವಿನ ಕಿರಿಕಿರಿಯಿಂದ ರಕ್ಷಿಸಿಕೊಳ್ಳಲು ಮೃದ್ವಂಗಿ ತನ್ನದೇ ಆದ ರಕ್ಷಾ ಕವಚ ಸೃಷ್ಟಿಸುತ್ತದೆ. ಇದು ಕ್ಯಾಲ್ಸಿಯಂ ಕಾರ್ಬೊನೇಟ್ ಅಂಶಗಳನ್ನೊಳಗೊಂಡು ಶೇಖರಣೆಯಾದಂತೆ ಕೆಲ ವರ್ಷಗಳ ನಂತರ ಮುತ್ತು ರೂಪುಗೊಳ್ಳುತ್ತದೆ. ಅದರಲ್ಲೂ ಶೇ 30-40 ಮಾತ್ರ ಫಲಿತಾಂಶ ಸಿಗುವುದು. ಮುತ್ತಿನ ಗುಣಮಟ್ಟ ಪರೀಕ್ಷೆಯ ವಿಧಾನ ಕೂಡ ಸಂಕೀರ್ಣವಾದದ್ದು.  ಅಲ್ಲಿನ ಬೃಹದಾಕಾರದ ಮುತ್ತಿನ ಪ್ರದರ್ಶನ ಮತ್ತು ಮಾರಾಟದ ಮಳಿಗೆಯಲ್ಲಿ ಮುತ್ತಿನ ಹಾರ ಧರಿಸಿರುವ ಡಯಾನಾ, ಮಾರ್ಗರೆಟ್ ಥ್ಯಾಚರ್, ಏಂಜಲೀನಾ ಜೋಲಿ ಮುಂತಾದ ವಿಶ್ವ ಪ್ರಸಿದ್ಧ ಮಹಿಳೆಯರ ಚಿತ್ರಗಳಿವೆ. ಅತ್ಯಂತ ಸುಂದರವಾಗಿ ಮುತ್ತುಗಳನ್ನು ಪ್ರದರ್ಶಿಸಿರುವ ಈ ಮಳಿಗೆಯಲ್ಲಿ ಮುತ್ತುಗಳನ್ನು ಕೊಳ್ಳದೇ ಬರುವ ಮಹಿಳೆಯರು ವಿರಳ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT