ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಕ್ಯಾಸಲ್ ಕಾಚ್: ಜಗತ್ತಿನ ಮೊದಲ ಗೋಪುರ

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ವೇಲ್ಸ್‌ನ ಕಾರ್ಡಿಫ್‌ ನಗರದ ಗೋಥಿಕ್ ಶೈಲಿಯ ಕೋಟೆಯೇ ಕ್ಯಾಸಲ್ ಕಾಚ್. ಬಹುತೇಕ ಪ್ರವಾಸಿಗರ ಬಕೆಟ್‌ ಲಿಸ್ಟ್‌ನಲ್ಲಿ ಇರದ ಈ ಸ್ಥಳವನ್ನು ಇತಿಹಾಸದ ಆಸಕ್ತಿಕರ ಕತೆಗಳನ್ನು ಮೆಲುಕು ಹಾಕಲಾದರೂ ನೋಡಬೇಕು.

****

ಹತ್ತನೆಯ ಶತಮಾನದಲ್ಲಿ ಇದನ್ನು ಕಟ್ಟುವಾಗ ನಾರ್ಮನ್ ಬರ್ಗ್‌ಗೆ ಇದೆಲ್ಲ ಮುಂದಿನ ತಲೆಮಾರುಗಳ ಅಪರೂಪದ ಐತಿಹಾಸಿಕ ಪ್ರಸಿದ್ಧವಾದ ಸ್ಥಳವಾದೀತು, ಮುಂದೊಮ್ಮೆ ಇದೇ ಜಗತ್ತಿನ ಅತಿದೊಡ್ಡ ಮನರಂಜನಾ ಕ್ಷೇತ್ರವಾದ ಡಿಸ್ನಿಲ್ಯಾಂಡ್ ಕಟ್ಟೋಣಕ್ಕೆ ಪ್ರೇರಣೆ ಆದೀತು ಎಂದೆಲ್ಲ ಯೋಚನೆ ಇದ್ದಿತ್ತೋ ಇಲ್ಲವೋ, ಆದರೆ ಬುನಾದಿ ಎಬ್ಬಿಸುವಾಗ ಇದರ ಆಯುಸ್ಸು ಶಾಶ್ವತ ಎಂದು ಲೆಕ್ಕ ಜರೂರು ಹಾಕಿರಬೇಕು. ಹಾಗಾಗಿಯೇ ಹನ್ನೆರಡು ಶತಮಾನಗಳ ನೈಸರ್ಗಿಕ ಹೊಡೆತ ಮತ್ತು ಯೋದ್ಧೋತ್ಸಾಹಿಗಳ ಆಕ್ರಮಣದ ನಂತರವೂ ಈ ಕೋಟೆ ಜಗತ್ತಿನ ಆಕರ್ಷಕ ತಾಣಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಅದೇ ಕ್ಯಾಸಲ್ ಕಾಚ್.

ಗ್ರೇಟ್‌ ಬ್ರಿಟನ್ ಸಮೂಹ ರಾಷ್ಟ್ರಗಳ ಪೈಕಿ ಒಂದಾದ ವೇಲ್ಸ್‌ನ ಕಾರ್ಡಿಫ್ ನಗರದ ಉತ್ತರದ ಎತ್ತರದ ಗುಡ್ಡದ ಮೇಲೆ ರಚನೆಯಾದ ಅಗಾಧ ಗೋಥಿಕ್ ಶೈಲಿಯ ಕೋಟೆ ಇವತ್ತು ಲಂಡನ್ ಪ್ರವಾಸಿಗರಿಗೆ ದೊಡ್ಡ ಆಕರ್ಷಣೆ. ಹೆಚ್ಚಾಗಿ ಕಾರ್ಡಿಫ್‌ನ ಗಲ್ಲಿಗಳನ್ನು ಮಾತ್ರ ದರ್ಶಿಸುವ ಜನ ಇದನ್ನೆಲ್ಲ ಆ ಮಟ್ಟಿಗಿನ ಬಕೆಟ್ ಲಿಸ್ಟ್‌ಗೆ ಸೇರಿಸದಿರುವುದು, ಸ್ಥಳೀಯ ಪ್ರವಾಸಿಗರಿಗೆ ಅನುಕೂಲವೂ ಆಗಿದ್ದು ಹೌದು.

ಚಾರಣವೇ ಒಳಿತು

ಇಲ್ಲಿಗೆ ತಲುಪುವ ಮೊದಲು ಇದೊಂದು ಗಮನದಲ್ಲಿರಲಿ, ನೇರ ಹೋಗಿ ಕಾರಿನಲ್ಲಿ ಅದರ ಎದುರಿಗೆ ಇಳಿದು ಒಳಕ್ಕೆ ನುಗ್ಗುವ ಬದಲಿಗೆ, ಮೂರು ಕಿ.ಮೀ. ದೂರದ ‘ಟಾಂಗ್ವಾನ್ ಲೀಸ್’ ಬಸ್‌ಸ್ಟಾಪ್‌ನಿಂದ ನಡೆದು ತಲುಪಿದರೆ ಸಿಕ್ಕುವ ಎತ್ತರದ ಗುಡ್ಡದ ಏರುಮುಖದ ಚಾರಣವೂ ಆಗುತ್ತದೆ. ಜೊತೆಗೆ ನಗರ ಮತ್ತು ಕಾಡಿನ ಆವರಣದ ಮಧ್ಯೆ ಅದ್ಭುತ ದೃಶ್ಯಗಳನ್ನು ನೋಡುತ್ತಾ ಸಾಗಿದರೆ ಸಿಕ್ಕುವ ಅನುಭವ, ಬಾಡಿಗೆ ಕಾರಿನ ಮೂಲಕ ಹೋದಾಗ ದೇವರಾಣೆ ಸಿಕ್ಕುವುದಿಲ್ಲ. ಅದರ ಪ್ರವೇಶ ದ್ವಾರದ ಕೋಟೆಯ ಕಾಡಿನ ಭಾಗದಲ್ಲಿ ಯಾವ ಮರಮಟ್ಟುಗಳನ್ನೂ ಬಿಡದೆ ಕಲಾತ್ಮಕವಾಗಿ ಶೃಂಗರಿಸಲಾಗಿದ್ದು, ಕ್ಯಾಸಲ್‌ಗೆ ಕಾಲಿಡುವ ಮೊದಲೇ ನಿಮ್ಮ ಒಂದು ಗಂಟೆ ಸಮಯವನ್ನು ಇದು ಬೇಡುತ್ತದೆ.

ಅಗಾಧವಾದ ಕಂದಕ ಆಚೆಗೆ ಇರುವ ಕ್ಯಾಸಲ್ ಪ್ರವೇಶಕ್ಕೆ ಮರದ ದಿಮ್ಮಿಗಳ ಯಾಂತ್ರೀಕೃತ ಚಲನೆಯ ಸರಪಳಿ ಬಿಗಿದ ಸೇತುವೆ ರೂಪದ ದ್ವಾರ ಅತಿ ದೊಡ್ಡ ಆಕರ್ಷಣೆ. ಕಲ್ಲಿನ ಮೂರು ಗೋಪುರಗಳ ಶೈಲಿಯ ಕೋಟೆಯನ್ನು ಒಮ್ಮೆ ಪ್ರವೇಶಿಸಿದರೆ ಎಲ್ಲೆಲ್ಲೂ ಸುರುಳಿ ಸುರುಳಿಯಾಗಿ ನಮ್ಮನ್ನು ಒಳಭಾಗ ಎತ್ತರೆತ್ತರಕ್ಕೆ ಕರೆದೊಯ್ಯುತ್ತದೆ.

ಗೋಪುರದ ತುಂಬೆಲ್ಲ ಒಳಭಾಗದ ಸುರುಳಿ ಆಕಾರದ ಮೆಟ್ಟಿಲ ಜೊತೆಗೆ, ಆವರಣದ ಗೋಡೆಗೆ (ಇದರ ದಪ್ಪ ಸುಮಾರು ಮೂರುವರೆ ಅಡಿ ಕಲ್ಲಿನ ಆವಾರ) ಚಿಕ್ಕ ಚಿಕ್ಕ ಕೆಳಮುಖ ಮಾಡಿದ ಕೇವಲ ಎರಡು ಇಂಚಿನ ಕಿಟಕಿಗಳಿಂದ ಸುಂಯ್ಯನೆ ನುಗ್ಗುವ ಗಾಳಿ ಪೂರ್ತಿ ಕೋಟೆಯ ಹವಾನಿಯಂತ್ರಿತ ವ್ಯವಸ್ಥೆ ಎಂದು ಗಮನಿಸಿದ್ದೆ. ಆದರೆ ಅದು ಮೂಲತಃ ಶತ್ರು ದಾಳಿಯ ಸಂದರ್ಭದಲ್ಲಿ ಬಂದೂಕಿನ ಬೈಯೋನೆಟ್ ನುಗ್ಗಿಸುವ ಮತ್ತು ಎದುರಾಳಿಗಳ ಬಂದೂಕಿನ ಬುಲೆಟ್ ಒಳಭಾಗಕ್ಕೆ ಬಾರದಂತೆ ನಿರ್ಮಿಸಲಾದ ತಂತ್ರಗಾರಿಕೆ.

ಇದರಲ್ಲೂ ಎರಡೂ ರೀತಿಯ ವಿನ್ಯಾಸ ಇದ್ದು ಮೂಲತಃ ಸುರಕ್ಷತೆಗೆ ಆದ್ಯತೆ ನೀಡಿದ ಕೊಳವೆ ಆಕಾರದ ರಂಧ್ರಗಳಂತಿವೆ. ಇದರಲ್ಲಿ ದೂರದೂರದವರೆಗಿನ ದೃಶ್ಯಗಳು, ಆಯಕಟ್ಟಿನ ಅಂತರದ ಗುರಿಗಳು ಸ್ಪಷ್ಟವಾಗಿ ಕಾಣುತ್ತವೆ. ಕೆಳಗಿರುವ ರಂಧ್ರಾಕಾರದ ಬಿರುಕಿನಲಿ ಬಂದೂಕು ಹೂಡಿ ಶತ್ರುಗಳನ್ನು ಸುಲಭವಾಗಿ ಅರ್ಧ ಮೈಲಿ ದೂರ ಇರುವಾಗಲೇ ಉಡಾಯಿಸುತ್ತಿದ್ದರಂತೆ. ಆಧುನಿಕ ತಂತ್ರಜ್ಞಾನ ಇಲ್ಲದಿದ್ದರೂ ಕೋಟೆಯ ಹತ್ತಿರ ಶತ್ರುಶೇಷ ಸುಳಿಯದಂತೆ ಮಾಡುತ್ತಿದ್ದ ತಂತ್ರಜ್ಞಾನ ಮೊದಲ ಸಾಲಿನ ತಿರುವುಗಳನ್ನು ಆವರಿಸಿಕೊಂಡಿದೆ. ಎರಡನೆಯ ಮಹಡಿ ಹೆಚ್ಚಾಗಿ ವಾಸಯೋಗ್ಯ, ಮೀಟಿಂಗ್‌ಹಾಲ್ ಸೇರಿದಂತೆ ಇನ್ನಿತರ ದರಬಾರಿಗೆ ಅಗತ್ಯದ ಸವಲತ್ತುಗಳನ್ನು ಪೂರೈಸುತ್ತಿದ್ದ ಭಾಗ. ಅದರ ಸುತ್ತಲೂ ಶತ್ರು ಗಮನದ ಕಿಟಕಿ ಬಿರುಕು ವಿನ್ಯಾಸಗಳಿವೆ. ಅದಕ್ಕೂ ಮೇಲೆ ಎಂದಿನಂತೆ ಬೆಳಕು–ಗಾಳಿಗಾಗಿ ಒಮ್ಮುಖ ದಾರಿಯ ವ್ಯವಸ್ಥೆ ಅದ್ಭುತವಾಗಿದೆ. ಮೂರಡಿ ದಪ್ಪ ಗೋಡೆಗಳಲ್ಲಿರುವ ಸುರುಳಿ ಆಕಾರದ ಕಿಟಕಿಗಳು ಯಾವ ಲೆಕ್ಕದಲ್ಲಿಯೂ ಮನುಷ್ಯ ನುಗ್ಗಲಾಗದ ವ್ಯವಸ್ಥೆ.

ಇತಿಹಾಸದೊಳಗಿನ ಕತೆಗಳು

1081ರಲ್ಲಿ ವೇಲ್ಸ್ ನಾರ್ಮನ್‌ನಿಂದ ನಿರ್ಮಾಣವಾದ ಮೂಲ ಕಟ್ಟಡ ಕ್ಯಾಸಲ್ ಕಾಚ್‌. ಕ್ರಮೇಣ ಯುದ್ಧ ಮತ್ತು ಇತರರ ಆಕ್ರಮಣದಿಂದಾಗಿ ಹಲವು ರೀತಿಯ ಒತ್ತಡಕ್ಕೊಳಗಾಯಿತು. ಮೂಲ ಬಂಧ ಚೆಕ್ಕು ಚೆದುರದೇ ನಿಂತಿದ್ದು, ಈಗಲೂ ಲಭ್ಯ ಇರುವುದು ಮೂಲಕೋಟೆಯೇ. ಈ ಕೋಟೆಯ ಕಾರಣದಿಂದಲೇ ಈಗಲೂ ರೊಮ್ಯಾಂಟಿಕ್ ನಗರ ಕಾರ್ಡಿಫ್ ತನ್ನ ಮೂಲ ಸ್ವರೂಪದೊಂದಿಗೆ ಜೀವ ಹಿಡಿದು ನಿಂತುಕೊಂಡಿದ್ದು, ಅಲ್ಲಲ್ಲಿ ಸಣ್ಣಪುಟ್ಟ ರಿಪೇರಿ ಬಣ್ಣಗಳ ಹೊರತಾಗಿ ಕ್ಯಾಸಲ್ ಕಾಚ್ ಇವತ್ತಿನ ಡಿಸ್ನಿಲ್ಯಾಂಡ್ ಯೋಜನೆಗೆ ಪ್ರೇರಕವಾದ ಸ್ಮಾರಕ ‘ವೇಲ್ಸ್‌ನ ಬೆಂಕಿಯ ಕೋಟೆ’ ಎಂದೇ ಹೆಸರಾಗಿದೆ. ಈ ಕೋಟೆಗಾಗಿ ನಡೆದ ಯುದ್ಧ ಉನ್ಮಾದ ಇತ್ಯಾದಿ ಒಂದೆರಡಲ್ಲ. ಹಾಗಾಗಿ ವರ್ಣರಂಜಿತ ಇತಿಹಾಸದ ಕ್ಯಾಸಲ್ ಕಾಚ್ ತೀರ ರಂಜನೀಯ ವೈಭೋಪೇತ ಬದುಕು ಕಂಡಿದ್ದು ಹದಿನೇಳನೇ ಶತಮಾನದಲ್ಲಿ ಬ್ಯೂಟ್ ರಾಜಮನೆತನಕ್ಕೆ ದಕ್ಕಿದ ನಂತರವೇ.

ನಂತರದಲ್ಲಿ ಸುಮಾರು 1848ರಲ್ಲಿ ಇದು ಮೂರನೇ ಮಾರ್ಕ್‌ನಿಗೆ ಮಾವನಿಂದ ಬಳುವಳಿಯಾಗಿ ದೊರೆತ ಪರಿಣಾಮ ಇದನ್ನು ಪುನರುಜ್ಜೀವನಗೊಳಿಸಲು ಯೋಜಿಸಿದ. ಆದರೆ, 1875ರಲ್ಲಿ ಕಾರ್ಯಾರಂಭವಾದರೂ ಅಂಥಾ ಪ್ರಗತಿ ಕಾಣಲಿಲ್ಲ. ಹತ್ತೊಂಬತ್ತನೆ ಶತಮಾನದ ಆರಂಭದಲ್ಲಿ ಬ್ಯೂಟ್ ಮನೆತನ ಇದನ್ನು ಸಂಪೂರ್ಣ ಅರಮನೆಯಾಗಿ ಪರಿವರ್ತಿಸಿದ್ದರಿಂದ ಆಗಿನ ಲಾರ್ಡ್ ಬ್ಯೂಟ್ ರಾಜ ಪರಿವಾರ ಇಲ್ಲಿ ಉಳಿಯತೊಡಗಿದ್ದ ಇತಿಹಾಸ ಇದಕ್ಕಿದೆ.

ಲೇಡಿ ಬ್ಯೂಟ್ಸ್ ರಾಣಿಯ ಮಲಗುವ ಕೋಣೆ ಮತ್ತದಕ್ಕೆ ಬಳಸಿದ ಡೂಮ್‌ನ ವಿನ್ಯಾಸ, ಸಭಾಂಗಣ ಅಲ್ಲಿನ ಬಂಗಾರ ವರ್ಣದ ಕಂಚಿನ ಅಚ್ಚು ಹಾಕಿದ ಉಬ್ಬು ಚಿತ್ರಗಳು, ಸಂಪೂರ್ಣ ಅರಮನೆಯ ಶೈಲಿಯ ಒಳಾಂಗಣದ ತುಂಬೆಲ್ಲ ಇರುವ ಕಲಾಕೃತಿಗಳು, ದೊಡ್ಡ ಕುಸುರಿಯ ಮೇಜು–ಕುರ್ಚಿಗಳು, ಬೆಂಕಿಗೂಡು, ಸಿಂಹಾಸನಗಳು ಮತ್ತು ಇತರ ಕಲಾಕಾರನ ಗುಣಮಟ್ಟಕ್ಕೆ ದಕ್ಕುವ ಅಪರೂಪದ ಗಾಜಿನ ಗೋಳದ ಲೈಟುಗಳು, ದೀಪ ಉರಿಸಲು ಬಳಸುತ್ತಿದ್ದ ಗಾಜಿನ ಭರಣಿಗಳು ಹೀಗೆ ಪೂರ್ತಿ ಕೋಟೆ ಕಲಾಕಾರನೊಬ್ಬನ ಅರಮನೆಯಂತಿದೆ. ಇದೀಗ ಕೋಟೆಯ ಅರಮನೆ ಎನ್ನುವುದಕ್ಕಿಂತ ಒಂದು ಮ್ಯೂಸಿಯಂ ರೂಪದಲ್ಲಿದೆ ಎಂದರೂ ತಪ್ಪಿಲ್ಲ.

ಫಾರೆಸ್ಟ್ ಸರ್ಕ್ಯೂಲರ್ ವೇ, ಫಾರೆಸ್ಟ್ ಬರ್ಗ್ ಪಾಯಿಂಟ್, ಥ್ರೀ ಬೇರ್ ಕೇವ್ಸ್ ವಾಕ್ ಹೀಗೆ ಸುತ್ತಮುತ್ತಲಲ್ಲಿ ಚಾರಣ ದಾರಿಗಳಿದ್ದು, ಆ ಪೈಕಿ ಕೆಲವೊಂದು ಇಪ್ಪತ್ತು ಮೂವತ್ತು ಕಿ.ಮೀ ದೂರದ ದಾರಿಯನ್ನು ಹೊಂದಿವೆ. ಮುಖ್ಯವಾಗಿ ಬರ್ಗ್ ಪಾಯಿಂಟ್ ಎಂಬ ಸ್ಥಳ ತಲುಪಿದಾಗ ಇದರ ವಿಶಿಷ್ಟವಾದ ಪಕ್ಷಿನೋಟ ನಮಗೆ ಲಭ್ಯವಾಗುತ್ತದೆ. ಆ ಸ್ಥಳದಿಂದಲೇ ಕೊನೆಯ ವಾಸ್ತು ಶಿಲ್ಪಿ ಬರ್ಗ್‌ ಈ ಕೋಟೆಯ ಪರಿವೀಕ್ಷಣೆ ನಡೆಸಿ, ಕ್ಯಾಸಲ್ ಕಾಚ್‌ಗೆ ಅಂತಿಮ ರೂಪ ನೀಡಿದ ಎನ್ನುವ ಕತೆಯೂ ಇದೆ.

ಬಸ್‌ ವ್ಯವಸ್ಥೆ

ಕಾರ್ಡಿಫ್ ರೈಲು ನಿಲ್ದಾಣದಿಂದ ಕೇವಲ ಮುಕ್ಕಾಲು ಗಂಟೆಯಲ್ಲಿ ಸ್ಥಳೀಯ ಬಸ್ ನಂ. 132 ನಿಮ್ಮನ್ನು ಹತ್ತಿರದ ಬಸ್ ನಿಲ್ದಾಣ ‘ಟಾಂಗ್ವಾನ್ ಲೀಸ್’ನಲ್ಲಿ ಇಳಿಸುತ್ತದೆ ಅಥವಾ ಬೂಟ್‌ಸ್ಟ್ರೀಟ್ ನಿಲ್ದಾಣಕ್ಕೆ ಹೋಗುವ ಜಿ1 ಬಸ್ ಕೂಡ ಹತ್ತಿರದ ಮತ್ತೊಂದು ಮಾರ್ಗ. ಅಲ್ಲಿಂದ ಸಣ್ಣ ಏರುಮುಖದ ಚಲನೆಯ ಚಾರಣ ಮಾಡಿದರೆ ಚೆಂದವಾದ ನಿಸರ್ಗ ರಮಣೀಯ ದೃಶ್ಯಗಳು, ನಗರ ಶೈಲಿಯ ಹಳ್ಳಿಯ ಮನೆಗಳ ಶಿಸ್ತುಬದ್ಧ ಪಥ ರಚನೆ ನೋಡುತ್ತಾ ಇಲ್ಲಿಗೆ ತಲುವುದು ಒಳ್ಳೆಯದು.

ಸಾಮಾನ್ಯವಾಗಿ ಕಾರ್ಡಿಫ್ ಗುರಿಮಾಡಿಕೊಳ್ಳುವ ಹೊರ ದೇಶದ ಪ್ರವಾಸಿಗರು ಈ ಕೋಟೆ ತಲುಪುವುದು ಕಡಿಮೆ. ಆದರೆ ವೇಲ್ಸ್ ಮತ್ತು ಲಂಡನ್‌ ನೋಡುವವರು ಕ್ಯಾಸಲ್ ಕಾಚ್ ತಪ್ಪಿಸಿಕೊಳ್ಳಬಾರದು. ಜತೆಗೆ ಇದರ ಸುತ್ತಲಿನ ಕಾಡು ದಾರಿಯ ಚಾರಣದ ಉದ್ದಕ್ಕೂ ಬಿದ್ದ ಮರಮಟ್ಟುಗಳ ಕಲಾಕೃತಿಗಳ ವರ್ಣನೆ ಒಂದು ಹಿಡಿತಕ್ಕೆ ಸಿಕ್ಕುವ ಶೈಲಿ ಮತ್ತು ವಿವರವಲ್ಲ. ಹತ್ತಿಪ್ಪತ್ತು ಕಿ.ಮೀ. ದೂರದವರೆಗೂ ಸೈಕಲ್ ಮತ್ತು ನಾಯಿಗಳ ಜತೆಗೆ ಕಾಲ್ನಡಿಗೆ ಇಲ್ಲಿನ ಜನರ ರಜಾದಿನದ ಮೋಜಿನ ಭಾಗವೂ ಹೌದು, ಆರೋಗ್ಯಕ್ಕೆ ಅನುಕೂಲವೂ ಹೌದಾಗಿದ್ದರಿಂದ ಅಲ್ಲಲ್ಲಿ ಗುಂಪುಗಳು ಸರಭರನೆ ನಡೆಯುತ್ತಾ ಹೋಗುವುದು ನೋಡಲು ನಿಜಕೂ ಚೆಂದ ಚೆಂದ. ಕ್ಯಾಸಲ್ ಕಾಚ್‌ಗೆ ಸ್ಥಳೀಯ ಆಡಳಿತ ವಹಿಸುವ ಮುತುವರ್ಜಿ ನೋಡಿದರೆ ಬರಲಿರುವ ಸಾವಿರ ವರ್ಷವಾದರೂ ಚೆಕ್ಕು ಚೆದುರದೆ ನಿಲ್ಲುವುದರಲ್ಲಿ ಸಂಶಯವಿಲ್ಲ ಎನ್ನಿಸುತ್ತದೆ.

ಚೆಲ್ಲವರಳಿದ ಕಲೆ
ಚೆಲ್ಲವರಳಿದ ಕಲೆ
ಸುರುಳಿ ಸುರುಳಿ... ಕುತೂಹಲದಿ ತೆರಳಿ
ಸುರುಳಿ ಸುರುಳಿ... ಕುತೂಹಲದಿ ತೆರಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT