ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ–2021: ಕಾಲಚಕ್ರದಲ್ಲಿ ವಿನೋದ, ವಿಸ್ಮಯ, ವಿಷಾದದ ಚಿತ್ರಗಳ ಸಾಲು

Last Updated 31 ಡಿಸೆಂಬರ್ 2021, 4:14 IST
ಅಕ್ಷರ ಗಾತ್ರ

ಕಾಲಚಕ್ರ ಮತ್ತೊಂದು ಸುತ್ತು ತಿರುಗಿದೆ. 2021ಕ್ಕೆ ನಿಟ್ಟುಸಿರಿನ ವಿದಾಯವನ್ನೂ 2022ಕ್ಕೆ ನಿರೀಕ್ಷೆಯ ಸ್ವಾಗತವನ್ನೂ ಕೋರುವ ಸಮಯ ಬಂದಿದೆ. ಅದಕ್ಕೂ ಮೊದಲಿನ ಹಿನ್ನೋಟದಲ್ಲಿ... ನಾವು ವಿದಾಯ ಹೇಳಿ ಮುಂದೆ ಸಾಗಿದ ಹಿಂದಿನ ವರ್ಷಗಳಂತೆ 2021ರಲ್ಲಿ ಕೂಡ ವಿನೋದ, ವಿಸ್ಮಯ, ವಿಷಾದ, ವಿವೇಕದ ಹಲವು ಚಿತ್ರಗಳಿವೆ. ಆದರೆ, ಒಂದು ವಿಷಾದವೆಂದರೆ, ಹಿನ್ನೋಟದ ತಕ್ಕಡಿಯಲ್ಲಿ ವಿನೋದ ವಿಸ್ಮಯಗಳಿಗಿಂತ ವಿಷಾದದ ತೂಕವೇ ಜಾಸ್ತಿ ಇದೆ...

***

2021 ಕಾಲಿಡುವ ಮುನ್ನವೇ ಅಂದರೆ, 2020ರ ನವೆಂಬರ್‌ 27ರಂದು ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸಿದ್ದ ರೈತರು ಹೊಸ ವರ್ಷ ಕಾಲಿಡುವ ಹೊತ್ತಿಗೆ ದೆಹಲಿಯ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಡೇರೆಗಳನ್ನು ಹಾಕಿ ಬೀಡು ಬಿಟ್ಟಿದ್ದರು. ರೈತರೊಂದಿಗೆ ಸಮಾಲೋಚನೆ ನಡೆಸದೆಯೇ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಕೃಷಿ ಕ್ಷೇತ್ರ ಸುಧಾರಣೆಯ ಉದ್ದೇಶದ ಮೂರು ಕಾಯ್ದೆಗಳನ್ನು ರದ್ದುಪಡಿಸಲು ರೈತರು ಪಟ್ಟು ಹಿಡಿದಿದ್ದರು. ಹೊಸ ವರ್ಷ ಇನ್ನೇನು ಕಣ್ಣು ಬಿಟ್ಟಿತು ಎಂಬಷ್ಟರಲ್ಲಿ, ಜನವರಿ 4ರಂದು ರೈತರು ಮತ್ತು ಕೇಂದ್ರದ ನಡುವೆ ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಸರ್ಕಾರದ ಠೇಂಕಾರ ಹಾಗೆಯೇ ಮುಂದುವರಿದಿತ್ತು.

ರಾಜಧಾನಿಗೆ ಪ್ರವೇಶ ನಿರಾಕರಿಸಿ ರೈತರನ್ನು ಗಡಿಗಳಲ್ಲಿಯೇ ಉಳಿಯುವಂತೆಸರ್ಕಾರವು ಮಾಡಿತ್ತು. ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್‌ ಜನವರಿ 12ರಂದು ತಡೆ ಕೊಟ್ಟರೂ ಅನ್ನದಾತ ಪ್ರತಿಭಟನೆ ಕೈಬಿಡದೇ ಇರಲು ನಿರ್ಧರಿಸಿದ್ದ. ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರ್‍ಯಾಲಿ ನಡೆಸಲು ಬಯಸಿದ್ದ ರೈತರಿಗೆ ಪೊಲೀಸರು ನಿಗದಿತ ಮಾರ್ಗಗಳನ್ನು ಕೊಟ್ಟಿದ್ದರು. ಆದರೆ, ಜಾಥಾದಲ್ಲಿದ್ದ ಕೆಲವರು ಮಾರ್ಗ ತಪ್ಪಿಸಿ, ಕೆಂಪು ಕೋಟೆಗೆ ನುಗ್ಗಿ ದಾಂದಲೆ ಆಯಿತು. ಪ್ರತಿಭಟನೆಯೆಂದರೆ ಹೀಗಿರಬೇಕು ಎಂಬ ರೀತಿಯಲ್ಲಿ ನಡೆಯುತ್ತಿದ್ದ ಚಳವಳಿಗೆ ಇದೊಂದು ಕರಿಚುಕ್ಕೆ. ನುಗ್ಗಿದವರು ರೈತರೇ ಅಥವಾ ಹೊರಗಿನ ಕಿಡಿಗೇಡಿಗಳೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಆದರೆ, ಅಂದು ಕೆಂಪು ಕೋಟೆಯ ಮೇಲೆ ಏರಿ, ಧಾರ್ಮಿಕ ಧ್ವಜವನ್ನು ಅಲ್ಲಿ ಹಾರಿಸಿದ್ದು, ವಾಹನಗಳಿಗೆ ಬೆಂಕಿ ಕೊಟ್ಟಿದ್ದು ಮುಂತಾದ್ದರಿಂದಾಗಿ ರೈತರ ಮೇಲೆ ದೇಶದೆಲ್ಲೆಡೆ ಇದ್ದ ಅನುಕಂಪಕ್ಕೆ ಕುಂದು ಬಂದಿದ್ದಂತೂ ಹೌದು. ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ದಿಕ್ಕೆಟ್ಟು ನಿಂತ ಕ್ಷಣ ಅದು. ಇನ್ನೇನು ಊರುಗಳಿಗೆ ಹೊರಡಬೇಕು ಎಂಬ ಭಾವ ಅವರ ಮನಸ್ಸುಗಳಲ್ಲಿ ಮಿಂಚಿ ಮರೆಯಾಗುತ್ತಿತ್ತು.

ಗಾಜಿಪುರ ಗಡಿಯಲ್ಲಿ ಕೇಂದ್ರ ಸರ್ಕಾರ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿತ್ತು. ರೈತರನ್ನು ಬಲವಂತವಾಗಿಯೇ ಅಲ್ಲಿಂದ ಎಬ್ಬಿಸಲು ಸರ್ಕಾರ ಸಜ್ಜಾಗಿದೆ ಎಂಬ ವದಂತಿಗಳಿದ್ದವು. ಪ್ರತಿಭಟನೆ ಮುಂದುವರಿಸಲು ನೆರವಾಗಿ ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರು ಕಣ್ಣೀರಿಟ್ಟು ಕೈಮುಗಿದು ಮಾಡಿದ ಮನವಿಯ ವಿಡಿಯೊ ಜನವರಿ 28ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದುವರೆಗೆ, ಪಂಜಾಬ್‌ ಮತ್ತು ಹರಿಯಾಣದ ರೈತರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಟಿಕಾಯತ್‌ ವಿಡಿಯೊ ಬಳಿಕ, ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ಸಾಗರದೋಪಾದಿಯಲ್ಲಿ ಪ್ರತಿಭಟನೆಗೆ ಬಂದು ಸೇರಿಕೊಂಡರು. ರೈತರ ಪ್ರತಿಭಟನೆಯು ಇನ್ನೂ ಹೆಚ್ಚು ಬಲ ತುಂಬಿಕೊಂಡಿತು. ದಿನದಿಂದ ದಿನಕ್ಕೆ ಶಕ್ತಿ ವೃದ್ಧಿಸುತ್ತಲೇ ಹೋದ ಪ್ರತಿಭಟನೆಯು ಬಲಶಾಲಿ ಕೇಂದ್ರ ಸರ್ಕಾರವನ್ನು ಮಂಡಿಯೂರಿಸಿದ ವಿಸ್ಮಯಕ್ಕೆ ಸಾಕ್ಷಿಯಾಯಿತು. ವರ್ಷ ಕೊನೆಯಾಗುವ ಹೊತ್ತಿಗೆ ಕೇಂದ್ರವು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಿತು.

ಈ ನಡುವಲ್ಲಿ ಮನ ಕಲಕುವ ಹಲವು ವಿದ್ಯಮಾನಗಳು ನಡೆದವು. ಆಡಳಿತ ಪಕ್ಷವು ರೈತರನ್ನು ಶತ್ರುಗಳಂತೆ ಕಂಡಿತು. ಪ್ರತಿಭಟನೆ ನಡೆಸುತ್ತಿದ್ದವರು ಖಲಿಸ್ತಾನಿಗಳು, ಉಗ್ರರು, ಪುಂಡರು ಎಂದೆಲ್ಲ ಆಡಳಿತ ಪಕ್ಷದ ಮುಖಂಡರು ಅಂದರು. ಅವರ ಮೇಲೆ ಹಲವು ಹತ್ತು ಪ್ರಕರಣಗಳನ್ನು ದಾಖಲಿಸಿ, ಹಣಿಯುವ ಯತ್ನ ನಡೆಯಿತು. ಟೂಲ್‌ಕಿಟ್‌ ಪ್ರಕರಣದಲ್ಲಿ ಬೆಂಗಳೂರಿನ ಯುವತಿ ದಿಶಾ ರವಿ ಅವರನ್ನು ಅತ್ಯಾತುರದಲ್ಲಿ ಬಂಧಿಸಿದ ಪ್ರಸಂಗವೂ ನಡೆಯಿತು. ಒಂದು ವರ್ಷ ನಡೆದ ಪ್ರತಿಭಟನೆಯಲ್ಲಿ ಸತ್ತವರು 750ಕ್ಕೂ ಹೆಚ್ಚು ರೈತರು ಎಂಬುದು ಪ್ರತಿಭಟನೆಯ ಕಣ್ಣೀರಿನ ಕತೆ. ಅಕ್ಟೋಬರ್‌ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ನಾಲ್ವರ ಹತ್ಯೆ ಮಾಡಿದ್ದು ಅಧಿಕಾರದ ಅಹಂಕಾರದ ಕತೆ. ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಈ ಪ್ರಕರಣದ ಪ್ರಮುಖ ಆರೋಪಿ. ರೈತರನ್ನು ಸರ್ಕಾರ ನಡೆಸಿಕೊಂಡ ಬಗೆಯನ್ನು ಸುಪ್ರೀಂ ಕೋರ್ಟ್‌ ಉದ್ದಕ್ಕೂ ತರಾಟೆಗೆ ತೆಗೆದುಕೊಂಡಿತ್ತು ಎಂಬುದು ಸಮಾಧಾನಕರ ಅಂಶ.

ಇಡೀ ವರ್ಷವನ್ನು ನೋವಿನಲ್ಲಿ ಅದ್ದಿ ಇರಿಸಿದ್ದು ಕೊರೊನಾ ಎಂಬ ವೈರಾಣು. 2020ರಲ್ಲಿಯೇ ದೇಶವನ್ನು‍ ಕೊರೊನಾ ಹೈರಾಣಾಗಿಸಿತ್ತು. 2021ರ ಮೊದಲ ದಿನ ದೇಶದಲ್ಲಿ ಸುಮಾರು 19 ಸಾವಿರ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದವು. ಹಿಂದಿನ ವರ್ಷ ಲಕ್ಷದ ಸಮೀಪ ತಲುಪಿದ್ದ ಪ್ರಕರಣಗಳ ಸಂಖ್ಯೆ ಇಳಿಕೆಯ ಹಾದಿಯಲ್ಲಿತ್ತು. ಫೆಬ್ರುವರಿ 9ರಂದು ಸುಮಾರು 9 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದವು. ಪ್ರಕರಣಗಳ ಸಂಖ್ಯೆಯು ಇಳಿಕೆಯ ಹಾದಿಗೆ ಹೊರಳಿ‌, ಜನರಲ್ಲಿಅಲ್ಪ ನೆಮ್ಮದಿ ಮೂಡಿಸಿದ್ದು ಹೌದು. ಆದರೆ ಅದು ಅಲ್ಪ ಕಾಲದ್ದಷ್ಟೇ ಆಗಿತ್ತು. ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಂಡು ಮೈಮರೆತ ಜನರು, ಜಾತ್ರೆ, ಮದುವೆಯಲ್ಲಿ ಅಂತರ ಮರೆತು ಸಂಭ್ರಮಪಟ್ಟರು. ರಾಜಕೀಯ ಪಕ್ಷಗಳು ದೊಡ್ಡ ದೊಡ್ಡ ಸಮಾವೇಶಗಳನ್ನು ನಡೆಸಿ ಮತ ಯಾಚನೆ ನಡೆಸಿದವು. ಮಾಸ್ಕ್‌, ಸ್ಯಾನಿಟೈಸರ್‌, ಅಂತರ ಕಾಯ್ದುಕೊಳ್ಳುವ ಶಿಸ್ತು ಮರೆಯಲು ಕಾಲವಾಗಿಲ್ಲ ಎಂಬುದು ಜನರಿಗೆ ನೆನಪಾಗಲೇ ಇಲ್ಲ. ನೆನಪಿಸಬೇಕಾದ ರಾಜಕೀಯ ನಾಯಕರೇ ಜನರನ್ನು ಗುಂಪುಗೂಡಿಸಿ ರ್‍ಯಾಲಿಗಳನ್ನು ನಡೆಸಿದರು. ಮನೆಯೊಳಗೇ ಇದ್ದ ಮಾರಿ ಬೃಹದಾಕಾರ ಬೆಳೆಯಿತು. ಅಲ್ಲೆಲ್ಲೋ ಕೋವಿಡ್‌ ಅಂತೆ ಅನ್ನೋದು ಹೋಗಿ, ಅಲ್ಲಿ, ಇಲ್ಲಿ, ಪಕ್ಕದ ಮನೆಯಲ್ಲಿ, ನಮ್ಮದೇ ಮನೆಯಲ್ಲಿ ಸಾವಿನ ರುದ್ರ ನರ್ತನ ನಡೆಯಿತು.

ಕೋವಿಡ್‌ ತಡೆಯುವುದಕ್ಕಾಗಿ, ಬ್ರಿಟನ್‌ನ ಆಸ್ಟ್ರಾ ಜೆನೆಕಾ–ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೊಟೆಕ್‌ ದೇಶೀಯವಾಗಿ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್‌ನ ಬಳಕೆಗೆ ಭಾರತವು ಜನವರಿಯಲ್ಲಿಯೇ ಒಪ್ಪಿಗೆ ಕೊಟ್ಟಿತ್ತು. ಜನವರಿ 16ರಂದೇ ಲಸಿಕೆ ಅಭಿಯಾನಕ್ಕೆ ಚಾಲನೆಯನ್ನೂ ಕೊಡಲಾಗಿತ್ತು. ಆದರೆ, 130 ಕೋಟಿಗೂ ಹೆಚ್ಚು ಜನರಿರುವ ದೇಶದಲ್ಲಿ ತಯಾರಾಗುತ್ತಿದ್ದ ಲಸಿಕೆ ಸಂಖ್ಯೆಯು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯ ಮಟ್ಟದಲ್ಲಿಯೂ ಇರಲಿಲ್ಲ. ಜತೆಗೆ, ಲಸಿಕೆಯ ಬಗ್ಗೆ ಹತ್ತಾರು ರೀತಿಯ ಅಪನಂಬಿಕೆ, ಅಂಜಿಕೆಗಳು ಹರಡಿದ್ದವು. ಮೇ 8ರಂದು ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ಮೀರಿತ್ತು. ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇರಲಿಲ್ಲ, ಔಷಧ ಸಿಗುತ್ತಿರಲಿಲ್ಲ. ತಮ್ಮವರಿಗಾಗಿ ಜನರು ಆಮ್ಲಜನಕ ಸಿಲಿಂಡರ್‌ ಹಿಂದೆ ಓಡಾಡಿದ ಪರಿ ಮಾತ್ರ ಕಠಿಣ ಹೃದಯಿಗಳನ್ನೂ ಕಣ್ಣೀರಾಗಿಸಿತ್ತು. ಉತ್ತರ ಪ್ರದೇಶದಲ್ಲಿ ಗಂಗೆಯಲ್ಲಿ ತೇಲಿ ಬಂದ ಅರೆಬೆಂದ ಹೆಣಗಳು ಬೇರೆಯದೇ ಕತೆ ಹೇಳಿದರೆ, ಆಡಳಿತಾರೂಢರು ಕೋವಿಡ್‌ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟರು. ಅದೊಂದು ಹಂತ ಮುಗಿಯಿತೇನೂ ಎಂಬಷ್ಟರಲ್ಲಿ ವರ್ಷದ ಕೊನೆಯ ಹೊತ್ತಿಗೆ ಕೊಲೆಗಡುಕ ವೈರಾಣು ಓಮೈಕ್ರಾನ್‌ ಎಂಬ ಮತ್ತೊಂದು ರೂಪ ತಾಳಿ ಬೆದರಿಸಲು ಸಜ್ಜಾಗಿ ನಿಂತಿದೆ. ಈಗ, ಶೇ 40ಕ್ಕೂ ಹೆಚ್ಚು ಜನರಿಗೆ ಲಸಿಕೆಯ ಎರಡೂ ಡೋಸ್‌, ಶೇ 60ಕ್ಕೂ ಹೆಚ್ಚು ಜನರಿಗೆ ಲಸಿಕೆಯ ಒಂದು ಡೋಸ್‌ ನೀಡಲಾಗಿದೆ. ಹೊಸ ವರ್ಷದಲ್ಲಿ, ಕೋವಿಡ್‌ನಿಂದ ತಪ್ಪಿಸಿಕೊಳ್ಳಲು ಸಾಗಬೇಕಿರುವ ಹಾದಿ ಬಹಳ ದೂರವಿದೆ.

2021ರಲ್ಲಿ ಕೇರಳ, ತಮಿಳುನಾಡು, ‍ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಗಳು ಬೇರೆಯದ್ದೇ ಕತೆ ಹೇಳಿದ್ದವು. ಪಶ್ಚಿಮ ಬಂಗಾಳದಲ್ಲಿ ಬಾವುಟ ಹಾರಿಸಬೇಕು ಎಂಬ ಬಿಜೆಪಿಯ ಹಂಬಲವು ಆ ರಾಜ್ಯವನ್ನು ಯುದ್ಧಭೂಮಿಯನ್ನಾಗಿಸಿತು. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬೀದಿ ಕಾಳಗ ನಿತ್ಯದ ದಿನಚರಿಯಾಗಿತ್ತು. ಟಿಎಂಸಿ ಮಹತ್ವದ ಮುಖಂಡರಲ್ಲಿ ಹಲವರನ್ನು ಸಾಮ–ದಾನ–ಭೇದ–ದಂಡದ ಮಂತ್ರ ಬಳಸಿ ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು ಎಂಬುದು ಗಂಭೀರ ಆರೋಪ. ಅಂತಹುದೇ ಕಾರ್ಯತಂತ್ರವನ್ನು ಪುದುಚೇರಿಯಲ್ಲಿಯೂ ಅನುಸರಿಸಲಾಗಿತ್ತು. ಮೆಟ್ರೊ ತಂತ್ರಜ್ಞ ಶ್ರೀಧರನ್‌ ಸೇರಿದಂತೆ ಹಲವರನ್ನು ಕೇರಳದಲ್ಲಿ ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು. ಧಾರ್ಮಿಕ ಭಾವನೆ ಕೆರಳಿಸುವ ಕೆಲಸ ಎಲ್ಲ ರಾಜ್ಯಗಳಲ್ಲಿಯೂ ಎಗ್ಗಿಲ್ಲದ ನಡೆದಿತ್ತು. ಫಲಿತಾಂಶವು ಭಿನ್ನ ಕತೆಯನ್ನು ಹೇಳಿತು. ಪಶ್ಚಿಮ ಬಂಗಾಳದಲ್ಲಿ ಗೆದ್ದೇ ಬಿಟ್ಟೆವು ಎಂದು ಬೀಗುತ್ತಿದ್ದ ಬಿಜೆಪಿಗೆ 75 ಕ್ಷೇತ್ರಗಳು ದಕ್ಕಿದವು. ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ಹೊಮ್ಮಿತು. ಇದು ಕಡಿಮೆ ಸಾಧನೆ ಏನಲ್ಲ, ಆದರೆ, ಬಿಜೆಪಿಯ ಹೂಡಿಕೆಗೆ ಇದು ಅಲ್ಪ ಪ್ರತಿಫಲ ಎನ್ನದೆ ವಿಧಿಯಿಲ್ಲ. ಅಸ್ಸಾಂ ಅನ್ನು ಬಿಜೆಪಿ ಉಳಿಸಿಕೊಂಡಿತು. ತಮಿಳುನಾಡಿನ ಜನರು ನಿರೀಕ್ಷೆಯಂತೆ ಡಿಎಂಕೆಯನ್ನು ಅಧಿಕಾರಕ್ಕೆ ತಂದರು. ಕೇರಳದ ಜನರು ಅನಿರೀಕ್ಷಿತ ಫಲಿತಾಂಶ ಕೊಟ್ಟರು. ಕೋವಿಡ್‌, ಪ್ರವಾಹ ನಿರ್ವಹಣೆಯಲ್ಲಿ ತೋರಿದ್ದ ದಕ್ಷತೆ, ಸರ್ಕಾರಕ್ಕೆ ಇದ್ದ ಜನಪರ ಕಾಳಜಿಗೆ ಮನ್ನಣೆ ಕೊಟ್ಟರು. ಪರ್ಯಾಯ ಆಡಳಿತದ ರೂಢಿ ತಪ್ಪಿಸಿ, ಆಡಳಿತದಲ್ಲಿದ್ದ ಸಿಪಿಎಂಗೆ ಹಿಂದೆಂದಿಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕೊಟ್ಟರು. ಬಿಜೆಪಿಗೆ ಇದ್ದ ಒಂದು ಕ್ಷೇತ್ರವನ್ನೂ ಕಿತ್ತುಕೊಂಡರು.

ಕೋವಿಡ್‌ ಮತ್ತು ಅದನ್ನು ತಡೆಯುವುದಕ್ಕೆ ಹೇರಲಾದ ಲಾಕ್‌ಡೌನ್‌ ಕೋಟ್ಯಂತರ ಜನರ ಜೀವನೋಪಾಯಕ್ಕೆ ಕುತ್ತು ತಂದಿತು. ಹಲವರ ಉದ್ಯೋಗ ಹೋಯಿತು, ಇನ್ನುಳಿದವರ ಸಂಬಳಕ್ಕೆ ಕತ್ತರಿ ಬಿತ್ತು.

ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಘಟಕಗಳಲ್ಲಿ ಎಷ್ಟು ಮುಚ್ಚಿ ಹೋದವು ಎಂಬುದರ ಲೆಕ್ಕವೇ ಸಿಗದು ಅನ್ನುವ ಪರಿಸ್ಥಿತಿ ಇದೆ. ಹೋಟೆಲ್‌, ಟ್ರಾವೆಲ್ಸ್‌, ಪ್ರವಾಸೋದ್ಯಮದಿಂದ ತೊಡಗಿ ಹೆಚ್ಚಿನ ಉದ್ಯಮಗಳು ಹೊಡೆತ ತಿಂದವು. ಬಟ್ಟೆ, ಚಪ್ಪಲಿ ಅಥವಾ ಅಂತಹ ಇನ್ನೇನೋ ವಸ್ತುವನ್ನು ಯಾವಾಗ ಖರೀದಿಸಿದ್ದು ಎಂಬುದನ್ನು ನೀವು ನೆನಪಿಸಿಕೊಳ್ಳಿ, ಸುತ್ತಮುತ್ತಲಿನವರನ್ನೂ ಕೇಳಿ. ಅದಕ್ಕೆ ಸಿಕ್ಕ ಉತ್ತರದಲ್ಲಿ ಆರ್ಥಿಕತೆಗೆ ಎಷ್ಟು ದೊಡ್ಡ ಏಟು ಬಿದ್ದಿದೆ ಎಂಬುದು ತಿಳಿಯುತ್ತದೆ.

ವರ್ಷಾರಂಭದಿಂದ ಕೊನೆಯ ವರೆಗೂ ಬೆಲೆ ಏರಿಕೆಯ ಬಗ್ಗೆ ಗೊಣಗದೇ ಇರುವವರ ಸಂಖ್ಯೆ ಬೆರಳೆಣಿಕೆಯಷ್ಟೇ ಇರಬಹುದೇನೋ. ಮನೆ ಬಳಕೆಯ ವಸ್ತುಗಳೇ ಇರಲಿ, ನಿರ್ಮಾಣ ಕಾಮಗಾರಿಗೆ ಬಳಸುವ ಸಿಮೆಂಟ್‌, ಉಕ್ಕುವಿನಂತಹ ವಸ್ತುಗಳೇ ಇರಲಿ ಎಲ್ಲದರ ಬೆಲೆಯೂ ಗಗನದಲ್ಲಿಯೇ ಸ್ಥಾಯಿಯಾಗಿ ಇಡೀ ವರ್ಷ ನಿಂತಿತ್ತು. ಖಾದ್ಯ ತೈಲದ ದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 60ರಷ್ಟು ಏರಿದೆ ಎಂಬುದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವೇ ನೀಡಿದ ಮಾಹಿತಿ. ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ಇಲ್ಲದ ಸಮಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ನಿರಂತರವಾಗಿ ಏರುತ್ತಲೇ ಇದ್ದದ್ದು ಜನರನ್ನು ಹೊರತುಪಡಿಸಿ ಬೇರೆ ಎಲ್ಲದರ ಬೆಲೆ ಯಾರ ಕೈಗೂ ಎಟುಕದಂತೆ ಮಾಡಿತು. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಕ್ರಮವಾಗಿ ₹5 ಮತ್ತು ₹10ರಷ್ಟು ನವೆಂಬರ್‌ ಆರಂಭದಲ್ಲಿ ಇಳಿಸಿತು. ಕೇಂದ್ರದ ಸಲಹೆಯಂತೆ ಕೆಲವು ರಾಜ್ಯಗಳೂ ತೈಲದ ಮೇಲಿನ ವ್ಯಾಟ್‌ ಇಳಿಸಿದವು. ಆದರೆ, ಇದು ದೊಡ್ಡ ನಿರಾಳವನ್ನೇನೂ ತರಲಿಲ್ಲ. ಪೆಟ್ರೋಲ್‌ ದರ ಈಗಲೂ ₹100ರ ಆಚೆಯೇ ಇದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮ್ಮ ಪ್ರಜಾಪ್ರಭುತ್ವದ ಮಹತ್ವದ ಘಟ್ಟ. ಆಗಸ್ಟ್‌ 15ರಂದು ಅಮೃತ ಮಹೋತ್ಸವ ಸಂಭ್ರಮಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದರು. ಆದರೆ, ಭಾರತವು ಪೂರ್ಣ ಮುಕ್ತ ದೇಶವಲ್ಲ, ‘ಭಾಗಶಃ ಮುಕ್ತ’ ಎಂದು ಫ್ರೀಡಂ ಇನ್‌ ದ ವರ್ಲ್ಡ್‌ ಸಮೀಕ್ಷೆಯು ಹೇಳಿದೆ. ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 179 ದೇಶಗಳಲ್ಲಿ ಭಾರತದ್ದು 142ನೇ ಸ್ಥಾನ. ಮಾಧ್ಯಮ ಮೇಲಿನ ಹಿಡಿತವನ್ನುನರೇಂದ್ರ ಮೋದಿ ಅವರು ಇನ್ನಷ್ಟು ಬಿಗಿಗೊಳಿಸಿದ್ದಾರೆ ಎಂದು ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ವರದಿಯಲ್ಲಿ ಹೇಳಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಇದು ಅತಿ ಕಹಿ ಸಂಗತಿಯೇ ಹೌದು.

ವರ್ಷ ಕೊನೆಯಾಗುವ ಹೊತ್ತಿಗೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್‌ ಪತನಗೊಂಡ ದುರಂತದ ಸುದ್ದಿ ಬಂತು. ಭಾರತದ ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರ ಪತ್ನಿ ಸೇರಿ 14 ಮಂದಿ ಅವಘಡದಲ್ಲಿ ಬೆಂದು ಹೋದದ್ದು ಸ್ಮೃತಿ ಪಟಲದಿಂದ ಬೇಗನೆ ಮರೆಯಾಗದು.

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಉತ್ತರ ಪ್ರದೇಶವೇ ಎಲ್ಲರ ಗಮನ ಕೇಂದ್ರ. ಪ್ರಧಾನಿ ನರೇಂದ್ರ ಮೋದಿ ಅವರುನವೆಂಬರ್‌–ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿಯೇ ಹೆಚ್ಚು ಇದ್ದರು. ಕಾಶಿ ವಿಶ್ವನಾಥ ಧಾಮದ ಉದ್ಘಾಟನೆ ಕಾರ್ಯಕ್ರಮವು ಸೌಂದರ್ಯ ಸ್ಪರ್ಧೆಯ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಹೆದ್ದಾರಿ, ವಿಮಾನ ನಿಲ್ದಾಣ, ಮಹಿಳಾ ಗುಂಪುಗಳಿಗೆ ಹಣ ವಿತರಣೆ ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ, ಚಾಲನೆ ಹೀಗೆ ಕಾರ್ಯಕ್ರಮ ಯಾವುದೇ ಇರಲಿ. ಸರ್ಕಾರಿ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳನ್ನು ಜರೆಯಲು, ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೋರಲು ಪ್ರಧಾನಿ ಯಾವ ಹಿಂದೇಟೂ ತೋರಲಿಲ್ಲ. ಬಿಜೆಪಿ ಮಾತ್ರವಲ್ಲ ಯಾವ ಪಕ್ಷವೂ ಮುತ್ಸದ್ದಿತನ ತೋರಲಿಲ್ಲ ಎಂಬುದು ಬೇಸರದ ಸಂಗತಿ. ಧಾರ್ಮಿಕ, ಜಾತಿ ನೆಲೆಯಲ್ಲಿ ಧ್ರುವೀಕರಣ ನಿರ್ಲಜ್ಜನವಾಗಿ ನಡೆಯಿತು. ಮುಂದಿನ ವರ್ಷ ಇದು ಇನ್ನಷ್ಟು ಅತಿರೇಕಕ್ಕೆ ಹೋಗಲಿದೆ ಎಂಬ ವಿಷಾದದೊಂದಿಗೆ ಈ ವರ್ಷವನ್ನು ಮುಗಿಸಬೇಕಿದೆ. ಮತದಾರ ಎಲ್ಲರಿಗಿಂತಲೂ ವಿವೇಕಿ ಎಂಬುದು ಹೊಸ ವರ್ಷಕ್ಕೆ ಸಮಾಧಾನ ತರಬಹುದಾದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT