ನನಗೆ ರಾಜ್ಯಸಭಾ ಸದಸ್ಯೆಯ ಪಟ್ಟ ಬರಬಹುದೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ನಾನು ಹೇಳಿ ಕೇಳಿ ಕಲಾವಿದೆ. ನನಗೆ ಗೊತ್ತಿದ್ದುದನ್ನು ಜನರಿಗೆ ದಾಟಿಸೋಳು. ನನ್ನ ನಾಟಕ, ನನ್ನ ಜನಪದ, ನನ್ನ ತಂಡ ಮತ್ತು ನನ್ನ ಹುಡುಕಾಟಗಳು – ಇಷ್ಟರಲ್ಲೇ ಸಂತೃಪ್ತ ಜೀವನ ನಡೆಸಿದವಳು.

ಬಹುಶಃ ಜನವರಿ 2010 ಇರಬೇಕು. ರಂಗಗೀತೆಗಳ ಸೀಡಿ ‘ತಾಯಿ’ಗಾಗಿ ತಯಾರಿ ನಡೆಸಿದ್ದೆವು. ಅದರ ರೆಕಾರ್ಡಿಂಗ್ ಮುಗಿಸಿಕೊಂಡು ನಾನು, ನನ್ನ ತಂಗಿ ಪಪ್ಪಿ, ರುದ್ರ, ಆನಂದ್ ಸಂಜೆಯ ಹೊತ್ತಿಗೆ ವಾಪಾಸು ಹೊರಟಿದ್ದೆವು. ಆನಂದ್ ಡ್ರೈವ್ ಮಾಡುತ್ತಾ ಇದ್ದರು. ಗಂಟಲು ಒಣಗಿ ಬಿಟ್ಟಿತ್ತು. ಮುಂದೆಲ್ಲೋ ಕಬ್ಬಿನ ಹಾಲು ಸಿಗುತ್ತದೆ, ಕುಡಿಯೋಣವೆಂದು ಪ್ಲಾನ್ ಮಾಡಿದ್ದೆವು.

ನನ್ನ ಮೊಬೈಲ್ ರಿಂಗಾಯಿತು. ನೋಡಿದರೆ ಡೆಲ್ಲಿ ನಂಬರು. ಹಾಡಿ ಸುಸ್ತಾಗಿಬಿಟ್ಟಿತ್ತು. ಪಪ್ಪಿ ಕೈಗೆ ಕೊಟ್ಟೆ. ಅವಳು ರಿಸೀವ್ ಮಾಡಿ ಮಾತನಾಡಿದಳು.
‘ನಮಸ್ಕಾರ ಇದು ಜಯಶ್ರೀ ಅವರ ನಂಬರಾ?’

‘ಹೌದು ಸರ್’.

‘ನಾನು ಆಸ್ಕರ್ ಫರ್ನಾಂಡಿಸ್ ಮಾತಾಡ್ತಿರೋದು. ಜಯಶ್ರೀ ಅವರ ಹತ್ತಿರ ಮಾತನಾಡಬಹುದಾ?’
‘ಖಂಡಿತಾ ಸರ್. ಒಂದು ನಿಮಿಷ, ಕೊಟ್ಟೆ’.

‘ಅಕ್ಕಾ, ಆಸ್ಕರ್ ಫರ್ನಾಂಡಿಸ್ ಅವರು ಮಾತನಾಡುತ್ತಿದ್ದಾರೆ. ನಿನ್ನ ಹತ್ತಿರ ಮಾತನಾಡಬೇಕಂತೆ’.

ನಿಜ ಹೇಳಬೇಕೆಂದರೆ ನನಗೆ ಎಷ್ಟು ಸುಸ್ತಾಗಿತ್ತೆಂದರೆ ಆಸ್ಕರ್ ಅವರನ್ನ ನೆನಪಿಸಿಕೊಂಡರೆ ಜ್ಞಾಪಕಕ್ಕೆ ಬರಲಿಲ್ಲ. ಕೆಲವೊಮ್ಮೆ ಹೀಗೇ ಆಗುತ್ತದೆ. ನನಗೆ ಒಂದು ಕ್ಷಣ ಹೆದರಿಕೆ ಆಯಿತು. ಅಪ್ಪಿತಪ್ಪಿ ನನಗೆ ಫೋನ್ ಮಾಡಿಬಿಟ್ಟರಾ ಹೇಗೆ?

‘ಏನು ಅವರು?’
‘ಅವರು ಸೋನಿಯಾ ಗಾಂಧಿಯವರಿಗೆ ಬಹಳ ಹತ್ತಿರದವರು ಕಣಮ್ಮಾ. ಮೊದಲು ಮಾತನಾಡು’ ಅಂದರು.
ಫೋನ್ ತೆಗೆದುಕೊಂಡು ‘ನಮಸ್ಕಾರ ಸಾರ್. ನಾನು ಜಯಶ್ರೀ. ಹೇಳಿ ಸರ್’ ಎಂದೆ.

‘ಒಂದು ಐದು ನಿಮಿಷ ಮಾತನಾಡಬಹುದಾಮ್ಮಾ?’ ಎಂದು ಬಹಳ ಸಾವಧಾನವಾಗಿ ಕೇಳಿದರು ಅವರು. ‘ಮಾತಾಡಿ ಸರ್’ ಎಂದು ಆನಂದ್‌ಗೆ ಕಾರು ನಿಲ್ಲಿಸಲು ಸನ್ನೆ ಮಾಡಿದೆ. ಚಲಿಸುವ ಗಾಡಿಯಲ್ಲಿ ಮಾತನಾಡುವಾಗ ನೆಟ್‌ವರ್ಕ್ ಕಡಿದು ಹೋಗಬಾರದು ಅಂತ.

ಆ ಕಡೆಯಿಂದ ಆಸ್ಕರ್ ಅವರು ‘ಇದು ಸ್ವಲ್ಪ ಕಾನ್ಫಿಡೆನ್ಷಿಯಲ್ ಮ್ಯಾಟರು. ನಿಮ್ಮ ಜೊತೆ ಇನ್ಯಾರಿದ್ದಾರೆ? ನಿಮಗೆ ಮಾತನಾಡಲಿಕ್ಕೆ ಅನುಕೂಲವಿದೆಯಾ? ಈಗ ಎಲ್ಲಿದ್ದೀರಿ?’ ಎಂದು ಕೇಳಿದರು. ಮಾತನಾಡುವ ಶಿಷ್ಟಾಚಾರ ನನಗಾದರೂ ಹೇಗೆ ತಿಳಿಯಬೇಕು? ‘ಸಾರ್, ನಾವು ರೆಕಾರ್ಡಿಂಗ್ ಮುಗಿಸಿಕೊಂಡು ಮನೆಗೆ ಹೊರಟಿದ್ದೇವೆ. ಹಾಗೇ ದಾರಿಯಲ್ಲಿ ಕಬ್ಬಿನ ಹಾಲು ಕುಡಿಯೋಣ ಅಂತ ಹೊರಟಿದ್ದೇವೆ. ನನ್ನ ಜೊತೆ ನನ್ನ ತಂಗಿ ಪದ್ಮಶ್ರೀ, ಮಗಳು ರುದ್ರಾಣಿ, ನನ್ನ ಗಂಡ ಆನಂದ್ ಇದ್ದಾರೆ ಸರ್’ ಅಂದೆ.
ಅವರಿಗೇನನ್ನಿಸಿತೋ ‘ಸರಿ. ಇದು ಸ್ವಲ್ಪ ಕಾನ್ಫಿಡೆನ್ಷಿಯಲ್ ಮ್ಯಾಟರು. ಮಾತನಾಡಲಾ?’ ಎಂದರು.

ಎರಡೆರಡು ಸಾರಿ ಕಾನ್ಫಿಡೆನ್ಷಿಯಲ್ ಅಂತ ಹೇಳಿದರಲ್ಲಾ ಅಂತ ನಾನು ‘ಸರಿ ಸರ್, ಮಾತನಾಡಿ. ನಾನು ಕಾರಿನಿಂದ ಹೊರಕ್ಕೆ ಇಳಿಯುತ್ತಿದ್ದೇನೆ. ಹೇಳಿ ಸರ್’ ಎಂದೆ.
‘ಈಗ ನಿಮ್ಮನ್ನ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಬೇಕೂಂತಿದ್ದಾರೆ. ಒಂದು ಪಕ್ಷ ಹಾಗೆ ಮಾಡಿದ್ರೆ ನಿಮಗೆ ಒಪ್ಪಿಗೇನಾ?’ ಎಂದು ಕೇಳಿದರು.

ನನ್ನ ಮೊದಲ ಪ್ರತಿಕ್ರಿಯೆ ಹೀಗಿತ್ತು. ‘ಸರ್, ನಾನು ಕಲಾವಿದೆ. ರಾಜಕೀಯದೋಳಲ್ಲ. ಅಲ್ಲದೆ ನನಗೆ ರಾಜಕೀಯಕ್ಕೆ ಬರಲು ಇಷ್ಟ ಇಲ್ಲ ಸರ್. ನನಗೆ ರಾಜಕೀಯ ಗೊತ್ತೇ ಇಲ್ಲ’ ಎಂದೆ.

‘ಇಲ್ಲಮ್ಮ, ಇದರಲ್ಲಿ ರಾಜಕೀಯ ಏನೂ ಇಲ್ಲ. ನೀವು ಮಾಡಿರುವ ರಂಗಭೂಮಿಯ ಸೇವೆಯನ್ನು ಪರಿಗಣಿಸಿ ನಿಮಗೆ ಕೊಡಲಾಗುತ್ತಿರುವ ಗೌರವ ಸ್ಥಾನ ಆಷ್ಟೆ. ಅದಕ್ಕೆ ಮೊದಲು ನಿಮ್ಮ ಒಪ್ಪಿಗೆ ಕೇಳಬೇಕು. ಅದಕ್ಕಾಗಿ ಫೋನ್ ಮಾಡಿದೆ’ ಎಂದರು.

ನಾನು ತಕ್ಷಣಕ್ಕೆ ಒಪ್ಪಿಗೆ ಕೊಡುವುದಾಗಲೀ ಇಲ್ಲವೆನ್ನುವುದಕ್ಕಾಗಲೀ ಆಗಲೇ ಇಲ್ಲ. ನಾನು ಮೌನವಾಗಿದ್ದುದನ್ನು ಗ್ರಹಿಸಿ ಅವರೇ ಹೇಳಿದರು. ‘ಸರಿ. ನಾನು ಮತ್ತೆ ಸ್ವಲ್ಪ ಸಮಯ ಬಿಟ್ಟು ಫೋನ್ ಮಾಡ್ತೇನೆ. ನಿಮ್ಮ ಲ್ಯಾಂಡ್‌ಲೈನ್ ಇದ್ದರೆ ಆ ನಂಬರ್ ಕೊಡಿ, ಅಲ್ಲಿಗೇ ಮಾಡುತ್ತೇನೆ’ ಎಂದರು.

ನಾನು ಕಾರಿನಲ್ಲಿ ಹೋಗಿ ಕೂತೆ. ಸ್ವಲ್ಪ ಹೊತ್ತು ತಲೆ ಕೆಲಸ ಮಾಡಲೇ ಇಲ್ಲ. ಎಲ್ಲಿಯ ಸ್ಕೂಲು ಕಾಣದ ಜಯಶ್ರೀ, ಎಲ್ಲಿಯ ಗೌರವ ಡಾಕ್ಟರೇಟು? ಎಲ್ಲಿಯ ರಾಜ್ಯಸಭೆ ಸದಸ್ಯತ್ವ?

ಎಲ್ಲರೂ ಕಬ್ಬಿನ ಹಾಲು ಕುಡಿದೆವು. ನಂತರ ಎಲ್ಲರೊಂದಿಗೆ ಈ ವಿಷಯ ಪ್ರಸ್ತಾಪ ಮಾಡಿದೆ. ಹಾಗೇ ನನ್ನ ಅಭಿಪ್ರಾಯವನ್ನೂ ಹೇಳಿದೆ. ‘ನನಗೆ ರಾಜ್ಯಸಭೆಯ ಸದಸ್ಯತ್ವ ರಂಗಭೂಮಿಯೊಂದಿಗಿನ ನನ್ನ ನಂಟಿಗೆ ತೊಂದರೆಯಾಗುತ್ತದೆ ಎನ್ನಿಸುತ್ತೆ. ಅಲ್ಲದೆ ಹೊಸ ಜಗತ್ತು, ಹೊಸ ಜವಾಬ್ದಾರಿ. ಇಲ್ಲಿಯವರೆಗೂ ಯಾವ ಕಪ್ಪು ಚುಕ್ಕೆಯಿಲ್ಲದೆ ಬದುಕಿದವಳು ನಾನು. ಈಗ ನನಗೆ ಸಾರ್ವಜನಿಕ ಜೀವನ ಬೇಕಾ?’

ಅದಕ್ಕೆ ಆನಂದು–ಪಪ್ಪಿ ಇಬ್ಬರೂ ಒಕ್ಕೊರಲಲ್ಲಿ ಹೇಳಿದರು. ‘ನೋಡಮ್ಮಾ, ನಿನ್ನ ರಂಗಭೂಮಿಯ ಸೇವೆಯನ್ನು ಪರಿಗಣಿಸಿಯೇ ಈ ಜವಾಬ್ದಾರಿ ಕೊಡ್ತಾ ಇದೀವಿ ಅಂದರಲ್ಲ? ಇನ್ಯಾಕೆ ಯೋಚಿಸುತ್ತೀ? ನೀನು ರಂಗಭೂಮಿ ಬಿಟ್ಟು ರಾಜಕೀಯಕ್ಕೆ ಬಾ ಅಂತಲ್ಲ ಅವರು ಹೇಳುತ್ತಿರುವುದು’ ಎಂದರು.

ಸರಿ ನೋಡೋಣ. ಹೋದರಾಯಿತು. ಅಕಸ್ಮಾತ್ ಇಷ್ಟವಾಗದಿದ್ದರೆ ಅಥವಾ ನನ್ನ ನಿರೀಕ್ಷೆ ಮೀರಿ ಕಷ್ಟವಾದರೆ ಬಿಟ್ಟು ಬರುವ ಸ್ವಾತಂತ್ರ್ಯ ನನ್ನೊಳಗಿನ ಕಲಾವಿದೆಗೆ ಯಾವತ್ತೂ ಇದೆ ಎಂದು ನಿರ್ಧರಿಸಿದೆ.

ಮನೆಗೆ ಹೋದೆವು. ಅರ್ಧ ಗಂಟೆ ಆಯಿತು. ಒಂದು ಗಂಟೆ ಕಳೆಯಿತು. ಫೋನ್ ಬರಲಿಲ್ಲ. ನನಗೆ ಕೆಲಸವಿಲ್ಲದಿದ್ದರೆ ಒಂಬತ್ತು ಗಂಟೆಗೆ ಮಲಗುವ ಕೋಣೆಗೆ ಹೋಗಿಬಿಡುತ್ತೇನೆ. ಸ್ವಲ್ಪ ಹೊತ್ತು ಕೂತೇ ಇದ್ದೆ. ಇನ್ನೇನು ಹನ್ನೊಂದು ಗಂಟೆ ಹೊಡೆಯಬೇಕು, ಆಗ ಫೋನ್ ರಿಂಗಾಯಿತು. ಆನಂದ್ ಟೀವಿ ನೋಡುತ್ತಾ ಕೂತಿದ್ದವರು ‘ಜಯಾ, ಈ ಫೋನ್ ಗ್ಯಾರಂಟಿ ನಿನಗೇ. ಬಾ, ನೀನೇ ತಗೋ’ ಅಂದರು.

ನಾನು ಹಲೋ ಅಂದೆ. ಅತ್ತಲಿಂದ ಆಸ್ಕರ್ ಅವರು ‘ನಮಸ್ಕಾರ, ನಾನು ಆಸ್ಕರ್ ಮಾತಾಡ್ತಿರೋದು. ನಿಮ್ಮ ತೀರ್ಮಾನ ಕೇಳಕ್ಕೆ ಫೋನ್ ಮಾಡಿದೆ. ಏನಂತ ನಿರ್ಧರಿಸಿದಿರಿ?’ ಎಂದರು

‘ಆಗಲಿ ಸರ್. ನನಗೆ ಒಪ್ಪಿಗೆ ಇದೆ’ ಎಂದೆ.
‘ಥ್ಯಾಂಕ್ಸ್ ಮಾ. ಆದರೆ ಮೇಡಂ ಮಾತಾಡೋವರೆಗೆ ಯಾರ ಹತ್ತಿರವೂ ಹೇಳಬೇಡಿ’ ಎಂದರು.

ಮಾರನೇ ದಿನ ನಮ್ಮ ರೆಕಾರ್ಡಿಂಗಿನ ಮುಂದುವರೆದ ಭಾಗ ನಡೆದಿತ್ತು. ಒಂಬತ್ತೂವರೆಗೆ ಸ್ಟುಡಿಯೋ ತಲುಪಿ ಕೆಲಸದಲ್ಲಿ ಮಗ್ನರಾದೆವು. ಸುಮಾರು 11.30ಕ್ಕೆ ಫೋನು ಒಂದೇ ಸಮ ರಿಂಗ್ ಆಗುತ್ತಿತ್ತು ಅಂತ ಆನಂದ್ ರೆಕಾರ್ಡಿಂಗ್ ರೂಮಿನಿಂದ ಹೊರಗೆ ಬಂದು ‘ಜಯಾ, ಈ ಫೋನ್ ತಗೋ’ ಅಂತ ನನ್ನ ಕರೆದರು. ನನಗೋ ತಲೆ ಎಲ್ಲಾ ರೆಕಾರ್ಡಿಂಗಿನಲ್ಲೇ ಇತ್ತು.

‘ಇದೊಂದು ಹಾಡು ರೆಕಾರ್ಡ್ ಮಾಡಿಬಿಡಬಹುದಿತ್ತು. ಆಮೇಲೆ ಮಾತಾಡ್ತಿದ್ದೆ’.

“ಆಗಲ್ಲ ಜಯಾ. ಡೆಲ್ಲಿ ನಂಬರು” ಅಂದಾಗಲೇ ನನಗೆ ಓಹೋ! ಆಸ್ಕರ್ ಅವರು ಫೋನ್ ಮಾಡಿರಬೇಕು ಅಂತ ಜ್ಞಾನೋದಯವಾಗಿದ್ದು.

‘ಜಯಶ್ರೀಯವರೇ ಮೇಡಂ ಮಾತಾಡ್ತಾರೆ. ಅವರು ಮಾತಾಡೋವರೆಗೂ ಯಾರ ಹತ್ತಿರವೂ ವಿಷಯ ಮಾತನಾಡುವುದು ಬೇಡ’ ಎಂದು ಮತ್ತೆ ಹೇಳಿದರು.
‘ಸರ್ ಮೇಡಂ ಅಂದ್ರೆ...’ ಖಾತರಿಪಡಿಸಿಕೊಳ್ಳಲು ಕೇಳಿದೆ.

‘ಮೇಡಂ ಸೋನಿಯಾ ಗಾಂಧಿಯವರು’.

ಒಮ್ಮೆ ಮನಸ್ಸಿನಲ್ಲಿ ‘ಶಿವಾ!’ ಎಂದುಕೊಂಡೆ. ಅವರು ಎಷ್ಟು ಹೊತ್ತಿಗೆ ಫೋನ್ ಮಾಡುತ್ತಾರೆ ಎನ್ನುವ ಮಾಹಿತಿ ಹೇಳಲಿಲ್ಲ. ನಾನು ಮತ್ತೆ ಸ್ಟುಡಿಯೋ ಒಳಗೆ ಬಂದೆ. ಮತ್ತೆ ಆಸ್ಕರ್ ಅವರದ್ದೇ ಫೋನು. ಒಳಗೆ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಹಾಗಾಗಿ ಕಾಲ್ ರಿಸೀವ್ ಮಾಡಲು ಮತ್ತೆ ಹೊರಗೆ ಓಡಿದೆ.

‘ಮೇಡಮ್ ಫೋನ್ ಮಾಡ್ತಾರೆ. ಕಾಲ್ ರಿಸೀವ್ ಮಾಡಿ’ ಎಂದರು.
‘ಸರಿ ಸರ್’ ಎಂದು ನಿಂತಲ್ಲೇ ನಿಂತಿದ್ದೆ.
ಡೆಲ್ಲಿ ನಂಬರಿನಿಂದ ಮತ್ತೆ ಫೋನ್ ಬಂತು. ಗಾಬರಿಯಿಂದಲೇ ಎತ್ತಿ ‘ಹಲೋ’ ಎಂದೆ.
‘Good Morning! This is Sonia here’ ಎಂದರು.

‘ನಮಸ್ಕಾರ್ ಮೇಡಂ’.
‘Namaskaar. I believe Mr Oscar Fernandes has explained everything to you’.
‘Yes madam’.
‘Do you accept it?’.
‘Yes madam. I agree and accept.
‘Good luck and namaskaar!’ ಎಂದು ಫೋನ್ ಇಟ್ಟೇಬಿಟ್ಟರು.

ನನ್ನ ಕಿವಿಗಳ ಮೇಲೆ ನನಗೆ ನಂಬಿಕೆ ಬರಲೇ ಇಲ್ಲ. ಕೈಕಾಲು ನಡುಕ ಬಂದವು. ಅದೇನು ಗಾಬರಿಯಾ, ಸಂತೋಷವಾ, ಹೆದರಿಕೆಯಾ – ಏನೂ ಸ್ಪಷ್ಟವಾಗಲಿಲ್ಲ. ಮತ್ತೆ ಆಸ್ಕರ್ ಅವರೇ ಫೋನ್ ಮಾಡಿದರು.

‘ಮೇಡಮ್ ಮಾತನಾಡಿದರಲ್ಲ? ನೀವಾಗೇ ಯಾರಲ್ಲೂ ಹೇಳಬೇಡಿ. ಯಾರಾದರೂ ಸುದ್ದಿ ನಿಜವಾ ಎಂದು ಕೇಳಿದರೆ ಮಾತ್ರ ಹೂಂ ಎನ್ನಿ’ ಎಂದು ಫೋನ್ ಇಟ್ಟರು. ಮತ್ತೆ ಒಂದು ನಿಮಿಷಕ್ಕೆ ಇನ್ನೊಂದು ಫೋನ್. ‘Is this the personal number of B Jayashree?’ ‘Yes it is’

ಆ ಕರೆ ವಿಜಿಲೆನ್ಸ್ ಅವರದ್ದಾಗಿತ್ತು. ನನ್ನ ನಂಬರ್ ರಿಜಿಸ್ಟರ್ ಕೂಡ ಆಗಿಹೋಯಿತು. ಅಂದರೆ, ಯಾವುದೇ ಕಾರಣಕ್ಕೂ ನಾನು ಎಲ್ಲೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಸುದ್ದಿ ಜನಗಳ, ಮಾಧ್ಯಮದ ಕಿವಿ ಮುಟ್ಟಲು ಸಾಕಷ್ಟು ಸಮಯ ಹಿಡಿಯಿತು.

ನಾನು ಏವಿ ಲೂಥ್ರಾ ಅವರ ‘ಲಕಿ’ ಸಿನಿಮಾದ ಶೂಟಿಂಗ್‌ಗೆ ಸೌತ್ ಆಫ್ರಿಕಾಗೆ ಮಾರನೇ ದಿನ ಹೊರಡಬೇಕು, ಆ ದಿನ ಸಂಜೆ ಅಂದರೆ ಏಪ್ರಿಲ್ 19ಕ್ಕೆ ಸುದ್ದಿ ಎಲ್ಲ ಕಡೆ ಹಬ್ಬಿತು. ನಾವು ಪ್ಯಾಕಿಂಗ್ ಮಾಡಿಕೊಳ್ಳುವುದಕ್ಕೂ ಪುರುಸೊತ್ತಿಲ್ಲದಂತೆ ಫೋನ್ ಮೇಲೆ ಫೋನ್ ಬರಲು ಪ್ರಾರಂಭವಾಯಿತು.

‘ಅರೆ! ಬಿ ಜಯಶ್ರೀ ರಾಜ್ಯಸಭಾ ಸದಸ್ಯೆ ಆಗಿ ಆಯ್ಕೆ ಆಗಿದ್ದಾರಂತೆ. ಟೀವಿಯಲ್ಲಿ ಬರ್ತಿದೆ’ ಅಂತ ಆನಂದ್‌ಗೆ ಯಾರೋ ಫೋನ್ ಮಾಡಿ ಹೇಳಿದರು. ಆನಂದ್ ತಕ್ಷಣ ‘ರುದ್ರಾ, ಟೀವಿ ಹಾಕು. ಅಮ್ಮ ಎಮ್.ಪಿ ಅಂತ ಟೀವೀಲಿ ಬರ್ತಿದೆಯಂತೆ’ ಎಂದರು.

ಅವರು ಹೇಳಿದ್ದಷ್ಟೆ. ಇನ್ನು ಉಸಿರಾಡಲೂ ಪುರುಸೊತ್ತಿಲ್ಲದಂತೆ ಫೋನ್ ಕಾಲ್ ಬರಲು ಪ್ರಾರಂಭವಾದವು. ಒಂದು ಕಡೆ ಪಪ್ಪಿ, ಇನ್ನೊಂದು ಕಡೆ ರುದ್ರ, ಆನಂದ್ ಇನ್ನೊಂದು ಫೋನಿನಲ್ಲಿ, ನನ್ನ ಫೋನಿನ ಅವಿರತ ರಿಂಗಣ – ಹೀಗೆ ಸಾಕು ಸಾಕಾಗಿ ಹೋಯಿತು. ಎಲ್ಲರೂ ಪ್ರೀತಿಪೂರ್ವಕ, ಅಭಿಮಾನಪೂರ್ವಕ ಮಾತನಾಡುವವರೇ.

ಸ್ವಲ್ಪ ಹೊತ್ತಿನಲ್ಲೇ ಮೀಡಿಯಾದವರ ಆಗಮನವೂ ಆಯಿತು. ಆ ದಿನ ಬೆಳಿಗ್ಗೆ ಶುರುವಾದ ಇಂಟರ್ವ್ಯೂಗಳು ರಾತ್ರಿ ಹನ್ನೊಂದು ಗಂಟೆಯವರೆಗೂ ನಡೆದವು. ನಾಳಿನ ಶೂಟಿಂಗಿಗೆ ಪ್ಯಾಕ್ ಮಾಡಿಕೊಳ್ಳಲಿಕ್ಕೂ ಪುರುಸೊತ್ತಿಲ್ಲ. ತಡರಾತ್ರಿ 12 ಗಂಟೆಗೆ ಪ್ಯಾಕ್ ಮಾಡಿಕೊಂಡು ಬೆಳಿಗ್ಗೆ ೪ಕ್ಕೆ ಏರ್ ಪೋರ್ಟಿಗೆ ನಾನು, ಆನಂದ್ ಹೊರಟೆವು.

ಬೆಳಗಾದ ಸ್ವಲ್ಪ ಹೊತ್ತಿಗೇ ಯಥಾಪ್ರಕಾರ ಫೋನ್ ಕಾಲ್‌ಗಳು ಶುರುವಾದವು. ನಾನು ಸೆಕ್ಯುರಿಟಿ ಚೆಕ್‌ಗೆ ಹೋಗುವ ತನಕವೂ ಮೇಲಿಂದ ಮೇಲೆ ಕರೆಗಳು. ಕಡೆಗೆ ‘ನಾನು ಸೆಕ್ಯೂರಿಟಿ ಚೆಕ್‌ಗೆ ಒಳಗೆ ಹೋಗುತ್ತಿದ್ದೇನೆ, ಅಲ್ಲಿ ಫೋನ್ ಎತ್ತುವ ಹಾಗಿಲ್ಲ’ ಎಂದು ಹೇಳಿ ಫೋನ್ ಇಟ್ಟೆ.

ಈ ಗೌರವದ ಸ್ಥಾನ ಸಿಕ್ಕಿದ್ದನ್ನು ನೋಡಲು ಅಮ್ಮ ಇರಬೇಕಿತ್ತು ಅಂತ ನನ್ನ ಕರುಳು ಹಂಬಲಿಸುತ್ತಿತ್ತು. ನನ್ನ ಜೊತೆ ಪಪ್ಪಿ ಇದ್ದಳು. ಅವಳನ್ನೊಮ್ಮೆ ಗಟ್ಟಿಯಾಗಿ ತಬ್ಬಿಕೊಂಡೆ. ಇಬ್ಬರ ಕಣ್ಣಲ್ಲೂ ನೀರು.
(ಮುಂದುವರೆಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.