ಬೆಂಗಳೂರಿನಲ್ಲಿ ಈಚೆಗೆ 50 ವರ್ಷದ ಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ 7.5 ಕೆ.ಜಿ. ತೂಕದ ನಾರುಗಡ್ಡೆಯನ್ನು (ಫೈಬ್ರಾಯ್ಡ್) ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಯಿತು. ಗರ್ಭಾಶಯದಲ್ಲಿ
ಫೈಬ್ರಾಯ್ಡ್‌ಗಳಿದ್ದರೆ ಆರೋಗ್ಯದ ಮೇಲೆ ಎಂಥ ಪರಿಣಾಮಗಳನ್ನು ಉಂಟು ಮಾಡಬಲ್ಲವು ಎಂಬುದರ ಕುರಿತು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ವಿದ್ಯಾ ಭಟ್ ಮಾಹಿತಿ ನೀಡಿದ್ದಾರೆ
ಫೈಬ್ರಾಯ್ಡ್‌ಗಳು ಎಂದರೇನು? ಏಕೆ ರೂಪುಗೊಳ್ಳುತ್ತವೆ?
ಫೈಬ್ರಾಯ್ಡ್ ಎನ್ನುವುದು ಒಂದು ಗಡ್ಡೆ. ಆದರೆ, ಅದು ಕ್ಯಾನ್ಸರ್ ಗಡ್ಡೆ ಅಲ್ಲ. ಶೇ 50ರಿಂದ 60ರಷ್ಟು ಹೆಣ್ಣುಮಕ್ಕಳ ಗರ್ಭಕೋಶದಲ್ಲಿ ಇದು ಕಂಡುಬರುತ್ತದೆ. ಹೈಪರ್ ಈಸ್ಟ್ರೋಜನಿಕ್ ಸ್ಥಿತಿಯಿಂದ, ಅಂದರೆ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದಾಗ ರೂಪು
ಗೊಳ್ಳುತ್ತದೆ. ಹೆಣ್ಣುಮಕ್ಕಳಲ್ಲಿ ಈ ಗಡ್ಡೆಗಳ ಸಮಸ್ಯೆ ಮೊದಲಿನಿಂದಲೂ ಇದೆ. ಆದರೆ ಈಗೀಗ ಸ್ಕ್ಯಾನಿಂಗ್ ಪರೀಕ್ಷೆಗಳು ಹೆಚ್ಚುತ್ತಿರುವುದರಿಂದ ಫೈಬ್ರಾಯ್ಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ.
ಫೈಬ್ರಾಯ್ಡ್ ಇರುವಿಕೆಯ ಲಕ್ಷಣ ಗೋಚರಿಸದೇ ಇರುವ ಸಾಧ್ಯತೆ ಇದೆಯೇ?
ಫೈಬ್ರಾಯ್ಡ್‌ಗಳಲ್ಲಿ ಶೇ 30ರಷ್ಟು ಯಾವುದೇ ರೀತಿಯ ರೋಗಲಕ್ಷಣಗಳನ್ನೂ ತೋರಿಸುವುದಿಲ್ಲ. ಇವು ತೊಂದರೆ ಕೊಡುವುದಿಲ್ಲ. ಗರ್ಭಕೋಶದ ಒಳಗೆ ಅಥವಾ ಸ್ರಾವ ಆಗುವ ಕಡೆಗಳಲ್ಲಿ ಫೈಬ್ರಾಯ್ಡ್‌ಗಳಿದ್ದರೆ ಬೇಗ ತಿಳಿಯುತ್ತದೆ. ಕೆಲವು ಫೈಬ್ರಾಯ್ಡ್‌ಗಳು ಗರ್ಭಕೋಶದ ಮೇಲೆ ಕುಳಿತಿರುತ್ತವೆ. ಇವು ಇರುವಿಕೆಯ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದರೆ, ಗರ್ಭಚೀಲದ ಮೇಲೆ ಒತ್ತಡ ತರಬಹುದು. ಕೆಲವು ಗರ್ಭಿಣಿಯರಲ್ಲಿಯೂ ಇಂಥ ಫೈಬ್ರಾಯ್ಡ್‌ಗಳು ಕಾಣಿಸಿಕೊಂಡ ಉದಾಹರಣೆಗಳಿವೆ. ಇದರಿಂದ ತಾಯಿಗಾಗಲಿ, ಮಗುವಿಗಾಗಲಿ ಯಾವುದೇ ರೀತಿಯ ತೊಂದರೆಯಾಗದು.
ಫೈಬ್ರಾಯ್ಡ್ ಇರುವಿಕೆಯನ್ನು ಪತ್ತೆ ಹಚ್ಚುವುದು ಹೇಗೆ?
ಸ್ಕ್ಯಾನಿಂಗ್‌ನಿಂದಲೇ ಇವುಗಳ ಇರುವಿಕೆಯನ್ನು ಪತ್ತೆ ಹಚ್ಚಲಾಗುತ್ತದೆ. ಹೊಟ್ಟೆ ದಪ್ಪಗಾಗಿದ್ದರೆ, ಪದೇಪದೇ ಹೊಟ್ಟೆ ನೋವು ಬರುತ್ತಿದ್ದರೆ, ಅತಿಯಾದ ರಕ್ತಸ್ರಾವ ಆದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗರ್ಭಚೀಲದ ಗಾತ್ರ ಸ್ವಲ್ಪ ದೊಡ್ಡದಾಗಿದ್ದರೂ ಫೈಬ್ರಾಯ್ಡ್ ಇರಬಹುದು ಎಂದು ಅಂದಾಜಿಸಬಹುದು. ವೈದ್ಯಕೀಯ ಪರೀಕ್ಷೆಯಿಂದಲೂ ಇದನ್ನು ತಿಳಿಯಬಹುದು.
ಜಾಗ್ರತೆ ವಹಿಸುವುದು ಹೇಗೆ?
ಸಾಮಾನ್ಯವಾಗಿ ಫೈಬ್ರಾಯ್ಡ್‌ಗಳು ಒಂದು ಸಣ್ಣ ಕಾಳಿನಿಂದ ಮೂಸಂಬಿ ಗಾತ್ರದವರೆಗೆ ಬೆಳೆಯಲು ಐದು ವರ್ಷ ತೆಗೆದುಕೊಳ್ಳುತ್ತವೆ. ಕೆಲವು ಫೈಬ್ರಾಯ್ಡ್‌ಗಳು ಮಾತ್ರ ಒಂದು ವರ್ಷದ ಅವಧಿಯಲ್ಲಿಯೇ ಬೇಗ ಬೆಳೆಯುತ್ತವೆ. ಅತಿಯಾದ ಹೊಟ್ಟೆನೋವು, ರಕ್ತಸ್ರಾವ ಆಗುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಉದರದರ್ಶಕದ ಮೂಲಕ ಫೈಬ್ರಾಯ್ಡ್ ಪತ್ತೆಹಚ್ಚಿ ಅದನ್ನು ತೆಗೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.