ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಯಿ ಗಂಧರ್ವ!

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕನ್ನಡದ ಬಹುತೇಕ ಗಾಯಕರನ್ನು ಮರಾಠಿಗರಿಗೆ ಪರಿಚಯಿಸಿದ ಕೀರ್ತಿ ಪ್ರಖ್ಯಾತ ಸಾಹಿತಿ ಪು.ಲ.ದೇಶಪಾಂಡೆ ಅವರದು. ಒಂದು ಕಾಲಕ್ಕೆ ಅವರು ಬೆಳಗಾವಿ ಹಾಗೂ ಧಾರವಾಡಗಳಲ್ಲಿ ನೆಲೆಸಿದ್ದರಿಂದಾಗಿ ಇಲ್ಲಿನ ಸಂಗೀತಗಾರರೊಂದಿಗೆ ಆತ್ಮೀಯ ನಂಟು ಹೊಂದಿದ್ದರು. ಹೀಗಾಗಿ ಪಂ.ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಪಂ.ಭೀಮಸೇನ ಜೋಶಿ ಅವರ ಆತ್ಮೀಯ ವಲಯದಲ್ಲಿ ಸೇರಿದ್ದರು. ಮನ್ಸೂರರ ಮೇಲಿನ ಪ್ರೀತಿಯಿಂದ ಧಾರವಾಡವನ್ನು `ಸಂಗೀತದ ಸ್ವರ್ಗ~ ಎಂದು ಕರೆದಿದ್ದಾರೆ. ಮರಾಠಿಯಲ್ಲಿ ಮನ್ಸೂರರ ಕುರಿತು ಹಲವಾರು ಮಹತ್ವದ ಲೇಖನಗಳನ್ನವರು ಬರೆದಿದ್ದಾರೆ. ಧಾರವಾಡಕ್ಕೆ ಬರುವುದೆಂದರೆ ಪುಳಕಿತರಾಗುತ್ತಿದ್ದ, ಪು.ಲ. ತಮಗೆ ಬೇಸರವಾದಾಗಲೆಲ್ಲ ಧಾರವಾಡಕ್ಕೆ ಬಂದು ಮನ್ಸೂರರ ಒಡನಾಟ ಹಾಗೂ ಸಂಗೀತದ ರಸಾಸ್ವಾದ ಮಾಡಿ ಹಿಂದಿರುಗುತ್ತಿದ್ದರು.

ಅಂಥದೇ ಆತ್ಮೀಯತೆ, ನಿಕಟತೆಯನ್ನು ಅವರು ಪಂ.ಭೀಮಸೇನ ಜೋಶಿಯವರೊಂದಿಗೂ ಹೊಂದಿದ್ದರು. ಪಂಡಿತಜಿ ಪುಣೆಯಲ್ಲಿ ನೆಲೆಸಿದ ಮೇಲಂತೂ ಅವರಿಬ್ಬರ ಬಾಂಧವ್ಯ ಇನ್ನೂ ನಿಕಟವಾಯಿತು. ಸ್ವತಃ ಸಂಗೀತಗಾರರಾಗಿದ್ದ ಪು.ಲ.ದೇಶಪಾಂಡೆ ಸಂಗೀತದ ಅಂತರಂಗವನ್ನರಿತು ಬರೆಯಬಲ್ಲ ಕೆಲವೇ ಲೇಖಕರಲ್ಲಿ ಒಬ್ಬರಾಗಿದ್ದರು. ಒಂದು ಸಲ ಅವರು ಚೇಷ್ಟೆಯಿಂದ ಭೀಮಸೇನ ಜೋಶಿಯವರನ್ನು `ಸವಾಯಿ ಗಂಧರ್ವರ ಶಿಷ್ಯ ಹವಾಯಿ ಗಂಧರ್ವ~ ಎಂದು ಕರೆದುಬಿಟ್ಟರು! ಈ ಉದ್ಗಾರವನ್ನು ಸಂಗೀತಲೋಕ ವಿಸ್ಮಯದಿಂದ ಸ್ವಾಗತಿಸಿತು. ಸವಾಯಿಗಂಧರ್ವರಿಗೆ ವಿಮಾನವೇರಲು ಸಾಧ್ಯವಾಗಲಿಲ್ಲ; ಆದರೆ ಅವರ ಶಿಷ್ಯ ವಿಮಾನ (ಹವಾಯಿ) ಸವಾರಿ ಮಾಡಿ ಜಗತ್ತಿನಾದ್ಯಂತ ಕಾರ್ಯಕ್ರಮ ನೀಡಿದ ಎಂಬ ಪ್ರಶಂಸೆಯಿದು.

ಭೀಮಸೇನರು 1970ರ ನಂತರ ವಿಮಾನಯಾನವನ್ನೇ ಹೆಚ್ಚಾಗಿ ಅವಲಂಬಿಸಿದರು. ಎಡೆಬಿಡದ ಕಾರ್ಯಕ್ರಮಗಳಿಗಾಗಿ ಅವರು ವಿಮಾನಯಾನವನ್ನು ಅವಲಂಬಿಸುವ ಅನಿವಾರ್ಯತೆ ಇತ್ತು. ಈ ಅವಧಿಯಲ್ಲವರಿಗೆ ಪೈಲಟ್ ಹಾಗೂ ವೈಮಾನಿಕ ಸಿಬ್ಬಂದಿಯವರೊಂದಿಗೆ ಆತ್ಮೀಯ ನಂಟು ಬೆಳೆಯಿತು. ಭೀಮಸೇನ ಜೋಶಿಯವರ ಅಭಿಮಾನಿಗಳೇನಕರು ಪೈಲಟ್‌ಗಳಾಗಿದ್ದರು. ಅವರೊಂದಿಗೆ ಪಂಡಿತ್‌ಜಿ ಸಲುಗೆಯಿಂದ ಇರುತ್ತಿದ್ದರು.

ಒಮ್ಮೆ, ಕೊಲ್ಕತ್ತೆಯಲ್ಲಿ ಭೀಮಸೇನರ ಕಾರ್ಯಕ್ರಮ ನಿಗದಿಯಾಗಿತ್ತು. ಅವರು ವಿಮಾನದ ಮೂಲಕ ಮುಂಬೈಯಿಂದ ಪ್ರಯಾಣ ಆರಂಭಿಸಿದರು. ಅಂದು ವಿಮಾನ ಹಾರಿಸುತ್ತಿದ್ದ ಪೈಲಟ್ ಪಂಡಿತ್‌ಜಿಯವರ ಆತ್ಮೀಯ ಮಿತ್ರ! `ವಿಮಾನ ಕೆಲವೇ ನಿಮಿಷಗಳಲ್ಲಿ ಕೊಲ್ಕತ್ತೆಯನ್ನು ತಲುಪಲಿದೆ~ ಎನ್ನುವ ಪ್ರಕಟಣೆಯನ್ನು ಕೇಳುತ್ತಿದ್ದಂತೆಯೇ ಭೀಮಸೇನ ಜೋಶಿ ಕಾಕ್‌ಪಿಟ್‌ಗೆ ಧಾವಿಸಿ ಪೈಲಟ್‌ನ ಬೆನ್ನಿಗೊಂದು ಗುದ್ದು ನೀಡಿದರು. ಆಗ ವಿಮಾನ ಕೊಲ್ಕತ್ತೆಯ ವಿಮಾನ ನಿಲ್ದಾಣದಲ್ಲಿ ಇಳಿಯಲಾರಂಭಿಸಿತ್ತು! ಗೆಳೆಯನ ಬೆನ್ನಿಗೆ ಗುದ್ದು ಕೊಟ್ಟವರೇ ತಾರ ಸಪ್ತಕದಿಂದ ಮಂದ್ರ ಸಪ್ತಕದವರೆಗೂ ವಿಸ್ತಾರ ಹೊಂದಿದ ಅವರೋಹಿ ತಾನ್ ಒಂದನ್ನು ಕಂಚಿನ ಕಂಠದಿಂದ ಹೊರಹೊಮ್ಮಿಸಿ, ಗೆಳೆಯನಿಗೆ ಹೇಳಿದರು-
`ನನ್ನ ತಾನ್‌ದೊಂದಿಗೆ ನಿನ್ನ ವಿಮಾನದ ಇಳಿತದ ವೇಗ ಸ್ಪರ್ಧಿಸಬಲ್ಲುದೆ? ಸಾಧ್ಯವಿದ್ದರೆ ಸರಿಗಟ್ಟು ನೋಡೋಣ!~.

ಈ ಅನಿರೀಕ್ಷಿತದಿಂದ ಗೆಳೆಯ ಆಘಾತಕ್ಕೊಳಗಾದರೂ ಏಕಾಗ್ರತೆಯನ್ನು ಕಳೆದುಕೊಳ್ಳಲಿಲ್ಲ. ಕಾಕ್‌ಪಿಟ್‌ನಲ್ಲಿ ಅಳವಡಿಸಲಾಗಿದ್ದ `ಬ್ಲ್ಯಾಕ್ ಬಾಕ್ಸ್~ ಎಲ್ಲವನ್ನೂ ಧ್ವನಿಮುದ್ರಿಸಿಕೊಳ್ಳುತ್ತಲಿದೆ ಎಂಬ ಅರಿವು ಅವನನ್ನು ಆ ಕ್ಷಣಕ್ಕೆ ಕಾಡಿತು. ಅಕಸ್ಮಾತ್ ಅವಘಡವೇನಾದರೂ ಸಂಭವಿಸಿದ್ದರೆ ಎಲ್ಲವೂ ಅದರಲ್ಲಿ ದಾಖಲಾಗುತ್ತಿತ್ತು. ಸುದೈವಕ್ಕೆ ಯಾವ ಅವಘಡವೂ ಸಂಭವಿಸಲಿಲ್ಲ. ವಿಮಾನ ಸುಸೂತ್ರವಾಗಿ ಭೂಸ್ಪರ್ಶ ಮಾಡಿತು. ಪಂಡಿತ್‌ಜಿಯವರ ಅವರೋಹಿ ತಾನ್ ಮಾತ್ರ ಆ ಪೈಲಟ್ ಗೆಳೆಯನನ್ನು ಬಹುದಿನಗಳವರೆಗೆ ಕಾಡುತ್ತಲಿತ್ತು.

ಹವಾಯಿ ಜಹಜ್ (ವಿಮಾನ)ನೊಳಗಡೆ ಗಂಧರ್ವನಂತೆ ಬಾನಂಗಳದಲ್ಲಿ `ತಾನ್~ ಉಲಿದ ಭೀಮಸೇನ ಜೋಶಿ ಈ ಅರ್ಥದಲ್ಲೂ `ಹವಾಯಿ ಗಂಧರ್ವ~ರೇ ನಿಜ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT