ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ಸಮಸ್ಯಾತ್ಮಕ ವಾಸ್ತವದ ‘ಕಾಲ ಕಥನ’

ಫಾಲೋ ಮಾಡಿ
Comments

ಬಸವರಾಜ ಡೋಣೂರ ಅವರ ಕಾದಂಬರಿ ‘ಉರಿವ ಕೆಂಡದ ಮೇಲೆ’ ನಮ್ಮ ಗಮನ ಸೆಳೆಯುವುದು ಅದೊಂದು ಕಾಲದರ್ಪಣ ಎನ್ನುವ ಕಾರಣಕ್ಕಾಗಿ. ಸಕಾರಣವಾಗಿ ‘ಕ್ಯಾಂಪಸ್ ಕಾದಂಬರಿ’ ಎನ್ನುವ ಘೋಷವಾಕ್ಯದೊಂದಿಗೆ ಪ್ರಕಟವಾಗಿರುವ ಈ ಕೃತಿ ಕ್ಯಾಂಪಸ್ ಅನ್ನು ಕೇಂದ್ರವಾಗಿಟ್ಟುಕೊಂಡಿದೆ. ಆದರೆ ಕ್ಯಾಂಪಸ್‌ನ ಒಳಗಿಗೂ ಹೊರಗಿಗೂ ಇರುವ ಬಿಟ್ಟೂ ಬಿಡದ ಸಂಬಂಧವನ್ನು ಆವರಣವಾಗಿ ಹೊಂದಿರುವ ಕಾರಣಕ್ಕಾಗಿ ಇದು ತನ್ನ ಕಾಲವನ್ನು, ಪರಿಸರವನ್ನು, ಅದರ ನಿರ್ದೇಶಕ ತತ್ವಗಳನ್ನು ವಸ್ತುನಿಷ್ಠವಾಗಿ ನಿರೂಪಿಸುವ ಆಶಯವನ್ನೂ ಹೊಂದಿದಂತೆ ಕಾಣುತ್ತದೆ.

ಎಲ್ಲ ಕ್ಷೇತ್ರಗಳೂ ಭ್ರಷ್ಟವಾಗಿವೆ ನಿಜ. ಆದರೆ ಪ್ರತೀ ಕ್ಷೇತ್ರದ ರಾಜಕೀಯಕ್ಕೂ ಅದರದ್ದೇ ಆದ ಕಾರ್ಯಮಾದರಿಗಳು ಇರುತ್ತವೆ ಎನ್ನುವುದನ್ನು ‘ಉರಿವ ಕೆಂಡದ ಮೇಲೆ’ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಈ ಕಾದಂಬರಿಯು ಒಂದು ಕ್ಷೇತ್ರದ ಸಂಕೀರ್ಣ ಸ್ವರೂಪವನ್ನು ಚಿತ್ರಿಸುತ್ತಲೇ ಇತರ ಕ್ಷೇತ್ರಗಳನ್ನೂ ಧ್ವನಿಸಲು ಶಕ್ತವಾಗಿದೆ ಎನ್ನುವುದು ಇದರ ಹೆಚ್ಚುಗಾರಿಕೆ. ಆದ್ದರಿಂದಲೇ ಇದನ್ನು ‘ಕಾಲ ಕಥನ’ ಎಂದು ಕರೆಯಬಹುದು.

ಒಟ್ಟೂ ಸಮುದಾಯದ ಆಲೋಚನಾಕ್ರಮ, ಧೋರಣೆಗಳು ನಮ್ಮ ಕಾಲದ ಚಲನೆಗಳನ್ನು ರೂಪಿಸುತ್ತಿವೆ ಎನ್ನುವ ಸಾಧಾರಣೀಕೃತ ಸತ್ಯಕ್ಕೆ ಓದುಗರು ಒಳಗಾಗುವಂತೆ ಮಾಡುವಲ್ಲಿ ಕಾದಂಬರಿ ಯಶಸ್ವಿಯಾಗುತ್ತದೆ. ಭಿನ್ನ ಮತ್ತು ಏಕಗಳ ಪರಸ್ಪರ ವಿರುದ್ಧಾತ್ಮಕ ನೆಲೆಗಳನ್ನು ನಿಭಾಯಿಸುವ ಮಹತ್ವಾಕಾಂಕ್ಷೆ ಡೋಣೂರರ ಕೃತಿಗಿದೆ. ಕಾದಂಬರಿಗೆ ಬೇಕಾದ ವಸ್ತುವಿಸ್ತಾರ ಪರಿಪ್ರೇಕ್ಷ್ಯವನ್ನು ಇದು ಕಟ್ಟಿಕೊಂಡಿದೆ. ಆದರೆ, ಕೃತಿಯ ಪ್ರಧಾನ ಪಾತ್ರವು ಇಡೀ ವ್ಯವಸ್ಥೆಯ ಸಕ್ರಿಯ ಸದಸ್ಯನೂ ಆಗಿರುವುದರಿಂದ ಈ ಕಾದಂಬರಿಗೆ ವಿಲಕ್ಷಣವಾದ ಸ್ವರೂಪವೊಂದು ದಕ್ಕಿದೆ. ಶೈಕ್ಷಣಿಕ ಕ್ಷೇತ್ರದ ಭ್ರಷ್ಟ ರಾಜಕೀಯವನ್ನು ಎದುರಾಗುತ್ತಾ ಅದನ್ನು ತನ್ನ ನೈತಿಕ ಬಲದಿಂದ ಗೆಲ್ಲಲು ನಿದ್ದೆ–ಎಚ್ಚರಗಳಲ್ಲಿ ಪ್ರಯತ್ನಿಸಹೊರಡುವ ನಾಯಕ ಪ್ರಕಾಶ ಮತ್ತು ಆತನಿಗೆದುರಾದ ವಿಶ್ವವಿದ್ಯಾಲಯದ ವ್ಯವಸ್ಥೆ, ಇವು ಕೆಲವೊಮ್ಮೆ ಗೋಚರ ಎದುರಾಳಿಗಳ ಯುದ್ಧದಲ್ಲಿ ತೊಡಗಿಕೊಂಡರೆ ಮತ್ತೆ ಕೆಲವೊಮ್ಮೆ ಅಗೋಚರ ಯುದ್ಧದಲ್ಲಿ ತೊಡಗಿ, ಕಕ್ಕಾಬಿಕ್ಕಿಯಾಗುತ್ತವೆ. ಸರಳ, ನೇರ, ಏಕಪಕ್ಷೀಯ ನಿರೂಪಣೆಯಾಗಬಾರದು ಎನ್ನುವ ಎಚ್ಚರವನ್ನು ಕಾದಂಬರಿಕಾರರು ಪ್ರಜ್ಞಾಪೂರ್ವಕವಾಗಿಯೇ ಉದ್ದಕ್ಕೂ ಉಳಿಸಿಕೊಂಡಿದ್ದಾರೆ.

ಕಾದಂಬರಿಯನ್ನು ಧರ್ಮಯುದ್ಧದ ಧರ್ತಿಯಲ್ಲಿ ನಿರೂಪಿಸುವ ಹಂಬಲವೂ ಕಾದಂಬರಿಕಾರರಿಗಿದೆ. ಆದರೆ, ಅವರೊಳಗಿನ ಸಾಹಿತ್ಯದ ಸೂಕ್ಷ್ಮ ಸಂವೇದನೆಯ ವಿದ್ಯಾರ್ಥಿಯು ಈ ಭಿತ್ತಿಯ ನಿಜ–ಸುಳ್ಳುಗಳನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗುವುದರಿಂದ ಗೋಳಿನ, ಧರ್ಮಾಧರ್ಮಗಳ ವ್ಯಾಖ್ಯಾನಗಳ ಸರಳೀಕರಣದ ಅಪಾಯದಿಂದ ಇದು ತಪ್ಪಿಸಿಕೊಂಡಿದೆ. ಕಾದಂಬರಿಯ ಯಶಸ್ಸಿನ ಕೇಂದ್ರವೇ ಇಲ್ಲಿದೆ. ನಾಯಕ ಪ್ರಕಾಶ ವಿಶ್ವವಿದ್ಯಾಲಯವೊಂದಕ್ಕೆ ನಿಯೋಜನೆಯ ಮೇಲೆ ಹೋಗುವುದು ಮಹತ್ವಾಕಾಂಕ್ಷೆಯಿಂದಲೇ. ವೃತ್ತಿ ಬದುಕಿನಲ್ಲಿ, ಅಧ್ಯಾಪನ ಮತ್ತು ಬರವಣಿಗೆ ಈ ಎರಡಕ್ಕೂ ಸಿಗಬಹುದಾದ ಜಿಗಿತವನ್ನು ಉದ್ದೇಶಿಸಿಯೇ ಆತ ಹೊರಡುವುದು. ಅದಕ್ಕೆ ತಕ್ಕ ತಯಾರಿ, ಪ್ರತಿಭೆ ಆತನಲ್ಲಿತ್ತು ಎನ್ನುವುದು ಇದಕ್ಕೆ ಒಂದು ಸಮರ್ಥನೆ. ಆದರೆ ಈ ಎಲ್ಲವೂ ನಗಣ್ಯವೆನಿಸುವಂತೆ ಕಾದಂಬರಿಯ ಘಟನೆಗಳು ಈತನ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತವೆ.

ಕಾದಂಬರಿಯ ಆರಂಭದಿಂದಲೇ ರೂಪಕದ ಸೃಷ್ಟಿಯ ಪ್ರಯತ್ನವಿದೆ. ಹೆಣ್ಣೊಬ್ಬಳು ಬದುಕನ್ನು ಅಲ್ಲಾಡಿಸಿಬಿಡಬಹುದಾದ ಕನಸಿನ ರೂಪಕ ಅದು. ವಿದ್ಯಾರ್ಥಿ ಹೇಳುವ ಜ್ಯೋತಿಷವು ಇದಕ್ಕೆ ಒಂದು ದುರ್ಬಲ ಪ್ರತಿಪಾದನೆಯಂತೆ ಕಾಣಿಸುತ್ತದೆ. ಹೆಣ್ಣೋ ಗಂಡೋ ಎನುವುದು ವ್ಯವಸ್ಥೆಯಲ್ಲಿ ಮುಖ್ಯವಲ್ಲವೇ ಅಲ್ಲ, ಅಧಿಕಾರವೆನ್ನುವುದು ಹುಲಿಸವಾರಿಯಂತೆ. ಅದನ್ನು ಚಾಲ್ತಿಯಲ್ಲಿಡುವುದೆಂದರೆ, ಶಕ್ಯವಿರುವ ಎಲ್ಲ ದಾರಿಗಳನ್ನೂ ಬಳಸುವುದನ್ನು ಹೆಚ್ಚುಕಡಿಮೆ ನಿರ್ವಿವಾದ ಎನ್ನುವಂತೆ ಒಪ್ಪಲಾಗಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಅದರ ಬಗ್ಗೆ ಗೊಣಗಾಟವೂ ಒಂದು ವಿಧ್ಯುಕ್ತ ಆಚರಣೆಯಂತೆ ಪಾಲಿಸಲ್ಪಡುತ್ತದೆ. ಕಾದಂಬರಿಯ ಸ್ವಾರಸ್ಯಕರವಾದ ಆಯಾಮ ಆರಂಭವಾಗುವುದೇ ಇಲ್ಲಿ. ಹೊಸದಾಗಿ ಬಂದಿರುವ ಕುಲಪತಿಗಳ ಜೊತೆ ಪ್ರಕಾಶನ ಸಂಘರ್ಷ ಮೂಲತಃ ಆರಂಭವಾಗುವುದು ಅಹಂನ ಕಾರಣಕ್ಕಾಗಿಯೋ ತಾತ್ವಿಕ ಅಥವಾ ನೈತಿಕ ಕಾರಣಕ್ಕಾಗಿಯೋ ಎನ್ನುವ ಪ್ರಶ್ನೆಯನ್ನು ಸಂಘರ್ಷ ಶುರು ಆದಮೇಲೆ ಒಮ್ಮೆ ಪ್ರಕಾಶ ತನಗೆ ತಾನೇ ಹಾಕಿಕೊಳ್ಳುತ್ತಾನೆ. ಇದನ್ನು ನೂರಕ್ಕೆ ನೂರು ನೈತಿಕ ಹೋರಾಟ ಎಂದು ಕರೆಯಲು ಸಾಧ್ಯವೇ ಎನ್ನುವ ಪ್ರಾಂಜಲವಾದ ಪ್ರಶ್ನೆ ಸ್ವತಃ ನಾಯಕನನ್ನು ಗಲಿಬಿಲಿಗೊಳಿಸುತ್ತದೆ.

ಆರಂಭದ ಈ ಎಚ್ಚರ ಕಾದಂಬರಿಯ ಕೊನೆಯವರೆಗೂ ಉಳಿಯುವುದು ಒಂದು ಅಂಶವಾದರೆ, ಮುಂದುವರಿಯುತ್ತಾ ಹೋದಂತೆ ಪ್ರಕಾಶನೂ ಗೆಲ್ಲಲು ಕುಲಪತಿ ತುಳಿದ ದಾರಿಯನ್ನೇ, ಅವೇ ಅಸ್ತ್ರಗಳನ್ನೇ ಬಳಸುತ್ತಾ ಹೋಗುತ್ತಾನೆ. ಸತ್ಯ ತನ್ನದು ಎನ್ನುವ ನಂಬಿಕೆ ಇದ್ದಾಗಲೂ ಅದನ್ನು ಸಾಬೀತುಪಡಿಸಲು ತಾನೂ ಅವೇ ಭ್ರಷ್ಟ ರಾಜಕೀಯ ಅಸ್ತ್ರಗಳನ್ನು ಬಳಸಲೇಬೇಕಾದ ಅನಿವಾರ್ಯತೆ ಇದೆ ಎಂದು ಸಮಾಧಾನಪಟ್ಟುಕೊಳ್ಳುತ್ತಾ ಹೋದರೂ ಅವನ ಅಂತರಂಗದಲ್ಲಿ ಇದೊಂದು ಪ್ರಶ್ನೆ ಉಳಿದೇ ಉಳಿಯುತ್ತದೆ. ಪ್ರಕಾಶನ ಬುದ್ಧಿಭಾವಗಳು ಇದನ್ನು ಒಪ್ಪಿದಾಗಲೂ ಅವನ ಸಾಕ್ಷಿಪ್ರಜ್ಞೆ ಇದನ್ನು ಆಗಾಗ ಅವನ ಎದುರಿಗೆ ತಂದು ನಿಲ್ಲಿಸುವ ಮೂಲಕ ಸಂದರ್ಭಕ್ಕೂ ಮನುಷ್ಯ ಸ್ವಭಾವಕ್ಕೂ ಇರುವ ಆದಿಮ ಸಂಬಂಧವನ್ನು ಹೊಳೆಯಿಸುತ್ತಾ ಹೋಗುತ್ತದೆ.

ಕಾದಂಬರಿಯ ಕೊನೆಯಲ್ಲಿ ವಿಚಾರಣೆಗಾಗಿ ಹಾಜರಾಗುವ ಅಡ್ಡಾದಿಡ್ಡಿ ಬೆಳೆದ ದೇಹದ, ಬಳಲಿ ಬೆಂಡಾದ ಮಹಿಳೆಯನ್ನು ನೋಡಿ, ಯಾಕಾಗಿ ತನ್ನ ಈ ಹೋರಾಟ ಎಂದು ಉತ್ತರವಿಲ್ಲದ ತಾತ್ವಿಕ ಪ್ರಶ್ನೆಯಲ್ಲಿ, ಕಾರಣವಿಲ್ಲದ ಪಾಪಪ್ರಜ್ಞೆಯಲ್ಲಿ ಪ್ರಕಾಶ ಮುಳುಗಿಹೋಗುವುದು ಕಾದಂಬರಿಯನ್ನು ಇನ್ನೊಂದು ಮಜಲಿಗೆ ಒಯ್ಯುತ್ತದೆ.

ಈ ಕಾದಂಬರಿ ಮುಖ್ಯವಾಗುವುದು ಉದ್ದಕ್ಕೂ ಉಳಿಸಿಕೊಂಡಿರುವ ಸಂಯಮ, ತಾದಾತ್ಮ್ಯ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಒಳಶೋಧಗಳ ಆಯಾಮಗಳ ಕಾರಣಕ್ಕಾಗಿ. ವ್ಯಕ್ತಿಗತ ನಿರೂಪಣೆಯನ್ನು ಸಮಷ್ಟಿ ನೆಲೆಯ ಸಾಮಾನ್ಯೀಕರಣ ಮಾಡುವುದರಲ್ಲಿ ಪಡೆದ ಯಶಸ್ಸಿನಲ್ಲಿ. ಸಾಮಾನ್ಯವಾಗಿ ಈ ಬಗೆಯ ನಿರೂಪಣೆಗಳು ಆರೋಪಪಟ್ಟಿ ಕಟ್ಟುವುದರಲ್ಲಿ ಮುಕ್ತಾಯವಾಗುತ್ತವೆ. ಆದರೆ ಡೋಣೂರರ ಕಾದಂಬರಿ ‘ನನ್ನದು ನನ್ನದು ಮಾತ್ರವಲ್ಲ’ ಎನ್ನುವ ವಿಸ್ತಾರದಲ್ಲಿ ಮೈತಳೆದಿದೆ. ಇನ್ನೂ ಒಂದು ಅಂಶವೆಂದರೆ, ಕ್ರಿಟಿಕಲ್ ಇನ್‌ಸೈಡರ್‌ನ ಪಾತ್ರವನ್ನು ವ್ಯಷ್ಟಿ ಮತ್ತು ಸಮಷ್ಟಿ ನೆಲೆಯಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನೂ ಅದಿಲ್ಲದಿದ್ದರೆ ಎದುರಾಗುವ ದುರಂತಗಳ ಸರಮಾಲೆಯನ್ನೂ ಕಾದಂಬರಿ ಸೂಚಿಸುತ್ತದೆ. ಮೇಲೆ ಹೇಳಿದ ಎರಡು ಅಂಶಗಳಲ್ಲದೆ, ಎಲ್ಲ ಕಾಲಕ್ಕೂ ಒಂದಿಲ್ಲೊಂದು ಬಗೆಯ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ಮಾನವಾವಸ್ಥೆಯನ್ನೂ ಇದು ಬೆರಳು ಮಾಡಿ ತೋರಿಸುತ್ತದೆ. ಸಾಂದರ್ಭಿಕ, ಸಮಕಾಲೀನ ಎನ್ನುತ್ತಿರುವಾಗಲೇ ಅದನ್ನು ಮೀರುವ ಈ ಕಾದಂಬರಿಯು ಇತ್ತೀಚಿನ ಮಹತ್ವದ ನಿರೂಪಣೆಗಳಲ್ಲಿ ಒಂದಾಗುವುದು ಈ ಕಾರಣಕ್ಕಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT