ಸಂಗೀತಶಾಸ್ತ್ರವನ್ನು ಕುರಿತ ಪುಸ್ತಕಗಳು ತುಂಬ ಕಡಿಮೆ. ಹೀಗೆಯೇ ಸಂಗೀತದ ಇತಿಹಾಸವನ್ನು ಕುರಿತ ಪುಸ್ತಕಗಳೂ ಕೂಡ. ಇಂಥ ವಿರಳ ಪ್ರಕಾರದ ವಾಙ್ಮಯಕ್ಕೆ ಬೆಳವಾಡಿ ಮಂಜುನಾಥ ಅವರ ಕೃತಿಯೊಂದು ಸೇರಿದೆ; ಅದೇ ‘ವಾಗ್ಗೇಯಕಾರರ ಚರಿತ್ರಕೋಶ.’

ವಾಗ್ಗೇಯಕಾರರೆಂದರೆ ಯಾರು? ‘ಸಾಹಿತ್ಯ ಮತ್ತು ಸಂಗೀತ ಇವೆರಡೂ ಯಾವ ವಿದ್ವಾಂಸನಿಂದ ರಚಿಸಲ್ಪಡುವುದೋ ಅಂಥವನು ವಾಗ್ಗೇಯಕಾರನೆನ್ನಿಸಿಕೊಳ್ಳುತ್ತಾನೆ. ಇಷ್ಟೇ ಅಲ್ಲ, ತಾನು ರಚಿಸಿದ ಸಾಹಿತ್ಯ ಮತ್ತು ಸಂಗೀತವನ್ನು ತಾನೇ ಹಾಡಿ ತೋರಿಸಬಲ್ಲ ಸಾಮರ್ಥ್ಯವಿದ್ದರೆ ಮಾತ್ರ ಅವನು ನಿಜವಾದ ವಾಗ್ಗೇಯಕಾರನಾಗುತ್ತಾನೆ.’ ಈ ಲಕ್ಷಣವನ್ನು ಒಪ್ಪಿಕೊಂಡ ಲೇಖಕರು ಈ ಕೃತಿಯಲ್ಲಿ 101 ವಾಗ್ಗೇಯಕಾರರ ಸಂಕ್ಷಿಪ್ತ ಚರಿತ್ರೆಯನ್ನು ನೀಡಿದ್ದಾರೆ. ಅಣ್ಣಮಾಚಾರ್ಯರಿಂದ ಮೊದಲಾಗಿ ಹೊನ್ನಪ್ಪ ಭಾಗವತರ್ ತನಕ ಅಕಾರಾದಿಯಾಗಿ ವಾಗ್ಗೇಯಕಾರರ ಚರಿತ್ರೆ ನಿರೂಪಣೆಗೊಂಡಿದೆ. ತಾನ್‌ಸೇನ್ ಮತ್ತು ಭಾತ್ಕಂಡೆ ಅವರಿಬ್ಬರನ್ನು ಹೊರತು ಪಡಿಸಿದರೆ ಉಳಿದ ಎಲ್ಲರೂ ದಕ್ಷಿಣ ಭಾರತ, ಎಂದರೆ ಕರ್ನಾಟಕಸಂಗೀತಕ್ಕೆ ಸೇರಿದವರು. ಪ್ರತಿಯೊಬ್ಬರ ಜೀವನವಿವರಗಳು ಮತ್ತು ಅವರು ಸಂಗೀತಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಇಲ್ಲಿ ದಾಖಲಿಸಲಾಗಿದೆ.

ಕೃತಿಗೆ ಮಲ್ಲೇಪುರಂ ಜಿ.ವೆಂಕಟೇಶ ಅವರ ಮುನ್ನುಡಿ ಮತ್ತು ಆರ್. ಕೆ. ಪದ್ಮನಾಭ ಅವರ ಸನ್ನುಡಿ ಸಂದಿದೆ. ಇವಲ್ಲದೆ ‘ವಾಗ್ಗೇಯಕಾರರ ಚರಿತೆ’ ಮತ್ತು ‘ಪರಂಪರೆ ಮತ್ತು ಸಂಗೀತ’ ಎಂಬ ಎರಡು ದೀರ್ಘ ಪ್ರಬಂಧಗಳನ್ನು ಕೃತಿಕಾರರೇ ಬರೆದಿದ್ದಾರೆ.

ಇಂಥದೊಂದು ಕೃತಿಯ ರಚನೆಗೆ ಬೇಕಾದ ಸಿದ್ಧತೆಗಳು ಹಲವು. ಮಾಹಿತಿಯನ್ನು ಸಂಗ್ರಹಿಸುವುದು, ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವುದು, ವಿಶ್ಲೇಷಿಸಿದ ಮಾಹಿತಿಯನ್ನು ಶಾಸ್ತ್ರೀಯವಾಗಿ ಬರವಣಿಗೆಯಲ್ಲಿ ಅಡಕಮಾಡುವುದು – ಇವೆಲ್ಲವೂ ಶ್ರಮವನ್ನು ಬೇಡುವಂಥ ಕಾರ್ಯಗಳೇ ಹೌದು. ಈ ದೃಷ್ಟಿಯಿಂದ ತುಂಬ ಶ್ರಮದಾಯಕ ಕ್ಷೇತ್ರವನ್ನೇ ಆರಿಸಿಕೊಂಡಿರುವ ಈ ಕೃತಿಯ ಲೇಖಕರಾದ ಬೆಳವಾಡಿ ಮಂಜುನಾಥ ಅವರು ಪ್ರಶಂಸಾರ್ಹರು. ಆದರೆ ಇಂಥದೊಂದು ಆಕರಗ್ರಂಥಕ್ಕೆ ಬೇಕಾದ ಶಿಸ್ತು ಕೆಲವು ಕಡೆ ಶಿಥಿಲವಾಗಿದೆ. ಹೀಗಿದ್ದರೂ ಕರ್ನಾಟಕ ಸಂಗೀತ ಪರಂಪರೆಯ ವಿದ್ಯಾರ್ಥಿಗಳಿಗೂ ಸಹೃದಯರಿಗೂ ತತ್‌ಕ್ಷಣಕ್ಕೆ ನೆರವಿಗೆ ಬರುವಂಥ ಕೈಪಿಡಿಯಾಗಿ ‘ವಾಗ್ಗೇಯಕಾರರ ಚರಿತ್ರಕೋಶ’ ಒದಗುತ್ತದೆ.

ವಾಗ್ಗೇಯಕಾರರ ಚರಿತ್ರೆಕೋಶ
ಲೇಖಕರು: ಡಾ.ಬೆಳವಾಡಿ ಮಂಜುನಾಥ
ಪ್ರಕಾಶನ: ಉದ್ಭವ ಪ್ರಕಾಶನ
ದೂರವಾಣಿ: 9449037705
ಪುಟಗಳು: 460
ಬೆಲೆ:₹400

ನಿರಶನ ಮಹಿಳಾ ಕೇಂದ್ರಿತ ಕಥೆಗಳು
ಈ ಸಂಕಲನದಲ್ಲಿ 22 ಕಥೆಗಳಿವೆ. ಲೇಖಕ ತನ್ನ ಸುತ್ತಲಿನ ಪರಿಸರದಲ್ಲಿ ಕಂಡದ್ದನ್ನು, ಅನುಭವಿಸಿದ್ದನ್ನು ಇಲ್ಲಿ ಕಥೆಯಾಗಿಸಿದ್ದಾರೆ. ಇಲ್ಲಿರುವ ಬಹಳಷ್ಟು ಕಥೆಗಳು ಮಹಿಳಾ ಕೇಂದ್ರಿತವಾಗಿವೆ. ಕೆಳ ಮಧ್ಯಮ ಅಥವಾ ತೀರಾ ಕೆಳವರ್ಗದ ಮಹಿಳೆಯರ ತೊಳಲಾಟಗಳು ಅಕ್ಷರರೂಪ ಪಡೆದಿವೆ. ವರದಕ್ಷಿಣೆ, ಜಾತಿ ವ್ಯವಸ್ಥೆ ಹಾಗೂ ಸಮಾಜದಲ್ಲಿ ಇಂದಿಗೂ ಆಚರಣೆಯಲ್ಲಿರುವ ಕೆಲವು ಅಮಾನವೀಯ ಪದ್ಧತಿಗಳನ್ನು ಮೊನಚಿನಿಂದ ಪ್ರಶ್ನಿಸುವ, ಶೋಷಣೆಯ ವಿರುದ್ಧ ಸಾತ್ವಿಕ ಹೋರಾಟವನ್ನು ಧ್ವನಿಸುವಂತಿವೆ ಇಲ್ಲಿನ ಕಥೆಗಳು. ಬಹುತೇಕ ಪುಸ್ತಕಗಳಂತೆ ಈ ಸಂಕಲನದಲ್ಲಿ ಮುನ್ನುಡಿ ಇಲ್ಲ. ಕಥೆಗಾರನ ಮಾತುಗಳೇ ಕಥೆಗಳಿಗೆ ನೇರ ಪ್ರವೇಶಿಕ ನೀಡುತ್ತವೆ. ಪ್ರೀತಿ ಉಳಿಸಿಕೊಳ್ಳಲು ಜಾತಿ ಮೀರಿ ನಿಲ್ಲುವ ‘ಬಂಡಾಯ’, ದುರುಳನಿಂದ ಮಗಳನ್ನು ರಕ್ಷಿಸಿಕೊಳ್ಳಲು ಮಾದಮ್ಮ ಎಂಬ ಕೆಳವರ್ಗದ ಮಹಿಳೆ ನಡೆಸುವ ಹೋರಾಟದ ‘ಒಡಲ ಕುಡಿಗಾಗಿ’ ಹಾಗೂ ‘ಏಕಾಂಗಿ’, ‘ಅರ್ಥವಾಗದವಳು’ ಕಥೆಗಳು ಓದುಗನ ಮನಸಿನಲ್ಲಿ ನಿಲ್ಲುತ್ತವೆ.
ನಿರಶನ
ಲೇಖಕರು: ಹೊರೆಯಾಲ ದೊರೆಸ್ವಾಮಿ
ಪ್ರಕಾಶಕರು: ಸಮಾನತಾ ಪ್ರಕಾಶನ, ಮೈಸೂರು
ದೂರವಾಣಿ:9482808474
ಪುಟ: 180
ಬೆಲೆ:₹ 140

ಚಂದ್ರನ ಮೇಲೆ ಮತ್ತೊಮ್ಮೆ
ಚಂದ್ರನ ಮೇಲೆ ಇದುವರೆಗೆ ನಡೆದ ಗಗನಯಾನಿಗಳ ಬಗ್ಗೆ ಕುತೂಹಲಕರ ಮಾಹಿತಿಗಳನ್ನು ಲೇಖಕರು ಈ ಕೃತಿಯಲ್ಲಿ ಮೊಗೆದು ಕೊಟ್ಟಿದ್ದಾರೆ. ಅಂತರಿಕ್ಷದ ಯುಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಚಂದ್ರಶೋಧದ ಕುರಿತು ಹಲವು ಮಾಹಿತಿಗಳು ಇದರಲ್ಲಿವೆ. ನಾವು ಹಿಂದೆಂದೂ ಕೇಳಿರದಿದ್ದ ಅನೇಕ ಕುತೂಹಲಕರ ಸಂಗತಿಗಳನ್ನು ಈ ಕೃತಿ ಅನಾವರಣಗೊಳಿಸಿದೆ. ಭಾರತವು ಚಂದ್ರಯಾನ 1 ಮತ್ತು ಚಂದ್ರಯಾನ 2ರಲ್ಲಿ ಸಾಧಿಸಿರುವ ಯಶೋಗಾಥೆಯನ್ನು ಲೇಖಕರು ಇದರಲ್ಲಿ ವಿವರಿಸಿದ್ದಾರೆ.

ಕೃತಿಯಲ್ಲಿ ಹನ್ನೊಂದು ಅಧ್ಯಾಯಗಳಿದ್ದು, ಚಂದ್ರ ಗ್ರಹ ಮತ್ತು ಬಾಹ್ಯಾಕಾಶಯಾನದ ಕುರಿತ ಕುತೂಹಲವನ್ನು ಕೌತುಕವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಚಂದ್ರನ ಮೇಲೆ ಕಾಲಿಟ್ಟ ಗಗನಯಾತ್ರಿಗಳು ಮತ್ತು ಚಂದ್ರಯಾನ ಕೈಗೊಂಡ ನೌಕೆಗಳ ಚಿತ್ರಗಳು ಕೃತಿಯ ಒಟ್ಟಂದ ಹೆಚ್ಚಿಸಿವೆ. ಕುವೆಂಪು, ಬೇಂದ್ರೆ, ಜಿಎಸ್‌ಎಸ್, ಸಿದ್ದಯ್ಯ ಪುರಾಣಿಕ, ಪಂಜೆಮಂಗೇಶರಾವ್, ಎಸ್.ವಿ. ಪರಮೇಶ್ವರ ಭಟ್ಟ ಅವರು ಚಂದ್ರನನ್ನು ಕುರಿತು ಬರೆದ ಪ್ರಸಿದ್ಧ ಕವನಗಳೂ ಈ ಕೃತಿಯಲ್ಲಿವೆ. ಬಾಹ್ಯಾಕಾಶ ವಿಜ್ಞಾನದ ಸಂಗತಿಗಳನ್ನು ಓದುವ ಕುತೂಹಲಿಗಳ ಆಸಕ್ತಿಯನ್ನು ಈ ಕೃತಿ ತಣಿಸುತ್ತದೆ.

ಚಂದ್ರನ ಮೇಲೆ ಮತ್ತೊಮ್ಮೆ
ಲೇಖಕರು: ಟಿ.ಆರ್.ಅನಂತರಾಮು
ಪ್ರಕಾಶಕರು: ಸಪ್ನ ಬುಕ್ ಹೌಸ್
ದೂರವಾಣಿ:08040114455
ಪುಟ: 175
ಬೆಲೆ:₹150

ಸ್ವಯಂ ದೀಪಕತೆ
ನವ್ಯ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವರು ಕವಿ ಅಡಿಗರು. ಯುಗ ಪ್ರವರ್ತಕ ಕವಿ ಎನ್ನುವ ಶ್ರೇಯವೂ ಅವರಿಗೆ ಸಲ್ಲುತ್ತದೆ. 68 ಪುಟಗಳ ಈ ಪುಟ್ಟ ಕೃತಿಯಲ್ಲಿ ಲೇಖಕ ಎಸ್. ದಿವಾಕರ್ ಅವರು ಅಡಿಗರ ವ್ಯಕ್ತಿತ್ವ ಮತ್ತು ಕಾವ್ಯಧಾರೆಯನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ಅಡಿಗರ ಕುರಿತು ಬರೆದ ಲೇಖನಗಳ ಗುಚ್ಛವಿದು.

ಆರು ಅಧ್ಯಾಯಗಳಿದ್ದು, ‘ಗೋಪಾಲಕೃಷ್ಣ ಅಡಿಗರು’, ‘ಅನನ್ಯ ಕಾವ್ಯ’, ‘ಭೂಮಿಗೀತ: ಒಂದು ಟಿಪ್ಪಣಿ’, ‘ಕನ್ನಡದಲ್ಲಿ ವಾಲ್ಟ್ ವಿಟ್‌ಮನ್’, ‘ಅಡಿಗರ ಒಂದು ಕವನ ಮತ್ತು ಬೋರ್‍ಹೆಸನ ಒಂದು ಕತೆ’ ವಿದ್ವತ್‌ಪೂರ್ಣವಾಗಿವೆ. ಅಡಿಗರಿಗೆ 1986ರಲ್ಲಿ ಮಧ್ಯಪ್ರದೇಶ ಸರ್ಕಾರ ‘ಕಬೀರ್ ಸಮ್ಮಾನ್’ ಪ್ರಶಸ್ತಿ ನೀಡಿದಾಗ ದೂರದರ್ಶನಕ್ಕಾಗಿ ಲೇಖಕರು ಅಡಿಗರೊಂದಿಗೆ ನಡೆಸಿದ ಅಪರೂಪದ ಮಾತುಕತೆಯೂ ಈ ಕೃತಿಯ ಕೊನೆಯಲ್ಲಿದ್ದು, ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.

ಮಾತುಕತೆ ವೇಳೆ ಲೇಖಕರು ಅಡಿಗರಿಗೆ ಆ ಕಾಲದಲ್ಲಿ ಸೃಷ್ಟಿಯಾಗುತ್ತಿದ್ದ ಕಾವ್ಯದ ಬಗ್ಗೆ ಕೇಳಿದ್ದ ಪ್ರಶ್ನೆಯೊಂದು ಮತ್ತು ಆ ಪ್ರಶ್ನೆಗೆ ಅಡಿಗರು ನೀಡಿರುವ ಉತ್ತರ ಎಲ್ಲ ಕಾಲಕ್ಕೂ, ಅದರಲ್ಲೂ ಇವತ್ತಿನ ಕಾವ್ಯಲೋಕದ ನೈಜಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಜತೆಗೆ ಕಾವ್ಯ ಸೃಷ್ಟಿಯ ಭವಿಷ್ಯದ ದಿನಗಳು ಹೇಗಿರುತ್ತವೆ ಎನ್ನುವ ಮುನ್ನೋಟವು ಅಡಿಗರು ಮೂರೂವರೇ ದಶಕಗಳ ಹಿಂದೆಯೇ ನೀಡಿರುವ ಉತ್ತರದಲ್ಲಿದೆ.

‘ಇವತ್ತಿನ ಕಾವ್ಯದ ಪರಿಸ್ಥಿತಿ ತುಂಬಾ ದುಃಖಕರವಾಗಿರುವುದರಿಂದ ಅದರ ಬಗ್ಗೆ ಹೆಚ್ಚು ಹೇಳದೇ ಇರುವುದೇ ಒಳ್ಳೆಯದೆಂದು ಅನಿಸುತ್ತದೆ. ಏಕೆಂದರೆ ಇಡೀ ದೇಶದಲ್ಲಿ ಕ್ರಿಯೇಟಿವಿ ಯಾಕೋ ಬತ್ತಿಹೋಗುತ್ತಿದೆ. ನಮ್ಮ ಎಷ್ಟೋ ಕವಿಗಳು ಕೂಡ ಜನಪ್ರಿಯತೆಗೆ ಸುಲಭೋಪಾಯಗಳನ್ನು ಹುಡುಕುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬರುವಂತಹ ಸಾಹಿತ್ಯ, ಸಂಗೀತ ಇದಕ್ಕೆ ಹೆಚ್ಚು ಮಹತ್ವ ಸಿಕ್ಕುವ ಹಾಗೆ ಕಾಣುವುದರಿಂದ ನಮ್ಮ ಸಮರ್ಥರಾದ ಕವಿಗಳು ಕೂಡ ಆ ರೀತಿಯಲ್ಲಿಯೇ ರಚನೆ ಮಾಡುವುದಕ್ಕೆ, ಕಿವಿಗೆ ಮುಟ್ಟುವ ಹಾಗೆ ಕಾವ್ಯ ರಚಿಸುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಬಹುಷಃ ಇದು ಕಷ್ಟಪಟ್ಟು ಕೆಲಸ ಮಾಡುವುದರಿಂದ ತಪ್ಪಿಸಿಕೊಳ್ಳುವ ಬುದ್ಧಿ ಎನ್ನಿಸುತ್ತೆ’ ಎನ್ನುವ ಬೇಸರ ಅಡಿಗರ ಮಾತಿನಲ್ಲಿದೆ. ಅವರ ಈ ಮಾತು ಈಗಲೂ ಎಷ್ಟೊಂದು ನಿಜವಲ್ಲವೇ ಎನಿಸದೆ ಇರದು.

ಸ್ವಯಂದೀಪಕತೆ
ಲೇಖಕರು: ಎಸ್.ದಿವಾಕರ್
ಪ್ರಕಾಶಕರು: ಅಭಿನವ
ದೂರವಾಣಿ: 9448804905
ಪುಟಗಳು: 68
ಬೆಲೆ: :₹50

ಮಕ್ಕಳ ಮಾಣಿಕ್ಯ
ಇಲ್ಲಿ ಇರುವ 55 ಕಥೆಗಳು ಮಕ್ಕಳ ಮನಸ್ಸನ್ನು ಗಮನದಲ್ಲಿಟ್ಟುಕೊಂಡೇ ಬರೆದಿರುವ ವಿಶೇಷ ಕಥೆಗಳಂತಿವೆ. ಒಂದಕ್ಕಿಂತ ಒಂದು ವಿಭಿನ್ನವೂ ಆಗಿವೆ.

ಮಕ್ಕಳಿಗೆ ಪ್ರಿಯವಾಗುವ ಕಥೆಗಳಿವು ಎಂದರೆ ಉತ್ಪ್ರೇಕ್ಷೆ ಅನಿಸದು. ಪ್ರೀತಿ, ಅಂತಃಕರಣ, ಮಾನವೀಯ ಸಂದೇಶ ಹಾಗೂ ಜೀವನ ಮೌಲ್ಯವನ್ನು ಪ್ರತಿ ಕಥೆಯು ಧೇನಿಸುತ್ತದೆ. ಯಾವ ಕಥೆಯೂ ಸಂಕೀರ್ಣವಾಗಿಲ್ಲ, ಸರಳ ನಿರೂಪಣೆಯಲ್ಲಿರುವ ಸಣ್ಣ ಕಥೆಗಳು ಸಣ್ಣ ಮಕ್ಕಳು ಸರಾಗವಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವಂತಿವೆ. ಸುತ್ತು ಬಳಸು ಇಲ್ಲದೆ ನೇರವಾಗಿ,ಕುತೂಹಲಕ್ಕೆ ಒಂದಿನಿತು ಕುಂದಾಗದಂತೆ ಜಾಣ್ಮೆಯಿಂದ ಹೆಣೆದಿರುವ ಕಥನಶೈಲಿಯೂ ಇಷ್ಟವಾಗುತ್ತದೆ. ಆದರೆ, ಅಲ್ಲಲ್ಲಿ ಕಾಗುಣಿತ ತಪ್ಪುಗಳು ಉಳಿದುಬಿಟ್ಟಿರುವುದು ಕೃತಿಯ ದೋಷದಂತೆ ಎದ್ದು ಕಾಣುತ್ತದೆ.

ಮಕ್ಕಳ ಮಾಣಿಕ್ಯ
ಲೇಖಕರು: ಸತ್ಯಬೋಧ
ಪ್ರಕಾಶಕರು: ವ್ಯಾಸ ಭಂಡಾರ
ದೂರವಾಣಿ: 9900474053
ಪುಟಗಳು: 144
ಬೆಲೆ: ₹130

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.