ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ರೈತನಿಗೆ ಸಿರಿಸಂಗಾತದ ಅಭಿನಂದನೆ

Published 3 ಮಾರ್ಚ್ 2024, 0:48 IST
Last Updated 3 ಮಾರ್ಚ್ 2024, 0:48 IST
ಅಕ್ಷರ ಗಾತ್ರ

ಡಾ. ಜಿ.ಎನ್‌.ಎಸ್‌. ರೆಡ್ಡಿ ಭಾರತೀಯ ಆಗ್ರೊ ಇಂಡಸ್ಟ್ರೀಸ್‌ ಫೌಂಡೇಷನ್‌ (ಬೈಫ್‌)ನ ಕರ್ನಾಟಕ–ಆಂಧ್ರಪ್ರದೇಶ ಕೇಂದ್ರದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸುವ ಅಭಿನಂದನಾ ಗ್ರಂಥ ‘ಸಾವಯವ ಸಂಗಾತ’. ಈ ಕೃತಿ ಅಭಿನಂದನಾ ಗ್ರಂಥ ಸ್ವರೂಪಕ್ಕೆ ಮತ್ತೊಂದು ಮಾದರಿ ಎನ್ನುವ ರೂಪದಲ್ಲಿ ವಿನ್ಯಾಸ ಮಾಡಿದ್ದಾರೆ. ಪಶುವಿಜ್ಞಾನದಲ್ಲಿ ಪದವೀಧರರಾದ ರೆಡ್ಡಿಯವರು ತಮ್ಮ ಸೇವಾ ಅವಧಿಯಲ್ಲಿ ಪರಿಸರ, ಬೇಸಾಯ, ಪಶುಪಾಲನೆ, ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಅದರ ಬಿಕ್ಕಟ್ಟುಗಳ ಕುರಿತು ಅಧ್ಯಯನವನ್ನು ಮಾಡಿದ್ದಾರೆ. ಅವರ ಅಧ್ಯಯನ ಸೇವೆಯನ್ನು ಸ್ಮರಿಸುವ ಜತೆಗೆ ರೈತರ ಪಾಲಿಗೆ ಕೈಪಿಡಿಯಂತೆ ಈ ಕೃತಿ ಕಾಣಿಸುತ್ತದೆ. 

ಕೃತಿಯನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ರೆಡ್ಡಿ ಅವರ ಒಡನಾಡಿಗಳು 18 ಲೇಖನಗಳನ್ನು ಬರೆದಿದ್ದಾರೆ. ಅವು ರೆಡ್ಡಿ ಅವರ ಓದು ಬರಹದ ಜೊತೆ ಉದ್ಯೋಗ ಜೀವನದಲ್ಲಿ ಮಾಡಿದ ಅವಿರತ ಶ್ರಮವನ್ನು ಸ್ಮರಿಸುತ್ತವೆ. ಬೈಫ್‌ ಸಂಸ್ಥೆಯ ಅಭಿವೃದ್ಧಿ, ಅಕ್ಷಯ ಕಾಯಕಲ್ಪ, ಕೃಷಿ ಹಾಗೂ ದೇಸಿ ಬೀಜಗಳ ಸಂರಕ್ಷಣೆಗೆ ಸಂಬಂಧಿಸಿದ ವಿಷಯದಲ್ಲಿ ರೆಡ್ಡಿಯವರ ಪಾತ್ರವನ್ನು ಸ್ಮರಿಸುವ ಬರಹಗಳಿವೆ. ಸಮುದಾಯ ರೇಡಿಯೊ ಬಗ್ಗೆ ಅವರಿಗಿದ್ದ ಕನಸು ನನಸಾದ ಬಗ್ಗೆಯೂ ದೀರ್ಘ ಲೇಖನ ಇದೆ.

ರೆಡ್ಡಿ ತಮ್ಮ ಸಂಪಾದಕತ್ವದಲ್ಲಿ ‘ಸಿರಿ ಸಮೃದ್ಧಿ’ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಾರೆ. ಕೃಷಿ ತಜ್ಞರು, ಅನುಭವಿ ಮತ್ತು ಯಶಸ್ವಿ ರೈತರ ವಿಚಾರಗಳನ್ನು ಅವರು ಆ ಪತ್ರಿಕೆಯ ಮೂಲಕ ರೈತರಿಗೆ ತಲುಪಿಸುತ್ತಿದ್ದರು. ಅದರಲ್ಲಿ ಪ್ರಕಟವಾಗಿದ್ದ ಪ್ರಾತಿನಿಧಿಕ ಹತ್ತು ಲೇಖನಗಳನ್ನು ಆಯ್ಕೆ ಮಾಡಿಕೊಂಡು ಈ ಗ್ರಂಥದ ಎರಡನೇ ಭಾಗದಲ್ಲಿ ಪ್ರಕಟಿಸಿದ್ದಾರೆ. 

ಮೂರನೇ ಭಾಗದಲ್ಲಿ ‘ಪ್ರಜಾವಾಣಿ’ ಕನ್ನಡಿ ಅಂಕಣದಲ್ಲಿ ಪ್ರಕಟಿತ ನಟರಾಜ್‌ ಹುಳಿಯಾರ್‌ ಅವರ ‘ರೈತ ಚಳವಳಿಗೆ ಹೊಸ ಜೀವ’ ಲೇಖನವೂ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಪ್ರಕಟಗೊಂಡಿರುವ ಎಚ್.ಎಸ್‌. ಸುರೇಶ್‌, ವಿ. ಚಂದ್ರಶೇಖರ ನಂಗಲಿ, ಎಸ್‌.ಜಿ. ಸಿದ್ಧರಾಮಯ್ಯ, ಕೃಷ್ಣಮೂರ್ತಿ ಬಿಳಿಗೆರೆ, ಜಿ. ಕೃಷ್ಣಪ್ರಸಾದ್‌, ನಾಗೇಶ ಹೆಗಡೆ, ಜಿ.ಎಸ್‌. ಜಯದೇವ, ರಹಮತ್‌ ತರೀಕೆರೆ, ಬರಗೂರು ರಾಮಚಂದ್ರಪ್ಪ ಅವರ ಲೇಖನಗಳೂ ಸೇರಿದಂತೆ 36 ಲೇಖನಗಳನ್ನು ಸಂಪಾದಿಸಿ ಪ್ರಕಟಮಾಡಿದ್ದಾರೆ. 

ಸಾವಯವ ಸಂಗಾತ‌

ಸಂ: ಡಾ. ಸಿದ್ಧಗಂಗಯ್ಯ ಹೊಲತಾಳು

ಪ್ರ: ಅಕ್ಷಯಕಲ್ಪ ಆರ್ಗ್ಯಾನಿಕ್‌ ತಿಪಟೂರು

ಸಂ:9535388122

ಪುಟಗಳು: 560

ಬೆಲೆ: 500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT