ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಣಯವನರಿಯದ ಲೋಕ ದುಗುಡಗೊಂಡ ಪರಿ...

Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಜಯದೇವ ಅವರು ಸ್ಥಾಪಿಸಿದ ಅನಾಥ ಮಕ್ಕಳ ಮತ್ತು ಗ್ರಾಮೀಣ ಹಿನ್ನೆಲೆಯ ಶಾಲಾ ವಿದ್ಯಾರ್ಥಿಗಳ ದೀನಬಂಧು ಸಂಸ್ಥೆಯಲ್ಲಿ ಮಕ್ಕಳೊಂದಿಗೆ ಒಡನಾಡುವಲ್ಲಿ, ‘ನನಗಾದ ಅನುಭವಗಳನ್ನು ಈ ನಾವೇಕೆ ಹೀಗೆ ಪುಸ್ತಕದಲ್ಲಿನ ವಸ್ತುವಾಗಿ ಬಳಸಿಕೊಂಡಿದ್ದೇನೆ’ ಎಂದಿರುತ್ತಾರೆ. ಆದರೆ ಪುಸ್ತಕದ ಪುಟ ತಿರುವುತ್ತಾ ಹೋದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಜಗತ್ತಿನ ಅನುಭಾವಿಗಳ ಚಿಂತನಾ ಕ್ರಮಸಹಿತ ಜನ ಬದುಕಿನ ಕ್ರಮ ಯಾಕೆ ಹೀಗೆ, ಇದು ಪೂರ್ವ ನಿರ್ಧಾರಿತವೇ, ನಾವೇ ಒಗ್ಗಿಸಿಕೊಳ್ಳಬಹುದಾದುದೇ, ಹಾಗೆ ದಾರಿಯನ್ನು ಕಂಡುಕೊಳ್ಳುವುದಾದರೆ ಅದು ಯಾವುದು ಹೀಗೆಲ್ಲ ಚರ್ಚೆ ಸಾಗುವಲ್ಲಿ, ‘ಹೌದು ನಾವೇಕೆ ಹೀಗೆ’ ಎಂಬ ಪ್ರಶ್ನೆ ತೀವ್ರವಾಗಿಯೇ ಎದುರುಗೊಳ್ಳುವಂತಾಗುತ್ತದೆ. ಪುಸ್ತಕದ ವಿವರಗಳು ದೇಹದ ಅಗ್ರಭಾಗವೆನಿಸುವ ಮೆದುಳಿನ ರಚನೆಯಿಂದ ಆರಂಭವಾಗಿ ಅಲ್ಲಿಂದಲೇ ತೊಡಗುವ ಆಲೋಚನೆಗಳತ್ತ ಹರಿಯುತ್ತ, ಮನುಷ್ಯನ ಸರಳ ಬದುಕಿಗೆ ಸಂತೋಷಕ್ಕೆ ಹಲವು ದಾರಿಗಳಿದ್ದರೂ ಆಯ್ಕೆ ಮಾಡಿಕೊಳ್ಳುವ ಗತಿ ಮಾತ್ರ ಯಾಕೆ ಕಠಿಣವಾದುದು ಎಂಬ ಗಹನ ವಿಚಾರದೊಡನೆ ಸಾಗುತ್ತದೆ. ಇಲ್ಲಿ ಮಂಡಿತವಾಗಿರುವ ಬಹುಪಾಲು ವಿಷಯವೆಲ್ಲ ಮನೋವಿಜ್ಞಾನ ಸಂಗತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡಿರುವುದನ್ನು ಗಮನಿಸಬೇಕು.

ಮೇಲೆ ಕಾಣಿಸಿದ ವಿಷಯಕ್ಕೆ ಪೂರಕವಾಗಿ ಮನೋವಿಜ್ಞಾನ ವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರು, ‘ಮನಸ್ಸು ಅದ್ಭುತ ವಿಸ್ಮಯ ಸರಿ. ಆದರೆ ಕ್ಷಣ ಚಿತ್ತವೇಕೆ ಕ್ಷಣ ಪಿತ್ತವೇಕೆ, ಒಮ್ಮೆ ದೇವರಂತೆಯೂ ಮತ್ತು ದೆವ್ವದಂತೆಯೂ, ಸತ್ಯ ಹೇಳುವ ಬಯಕೆಯಿದ್ದರೂ ಮನವು ಸುಳ್ಳನ್ನೇ ಯಾಕೆ ಬಿತ್ತರಿಸಲು ಇಷ್ಟಪಡುತ್ತದೆ, ಒಮ್ಮೆ ಪ್ರಾಣ ಕೊಡುವ ಪ್ರಿಯತಮ ಆ ಮುಂದೆ ಅವಳ ಪ್ರಾಣ ತೆಗೆಯುವುದೇಕೆ, ಮನುಷ್ಯ ನಿಜವಾಗಿಯೂ ಆನೆ ಹುಲಿಯನ್ನು ಎದುರಿಸುವ ಪರಾಕ್ರಮವನ್ನು ಹೊಂದಿರುವನೇ’ ಎಂದಿರುತ್ತಾರೆ. ಇವೆಲ್ಲವೂ ಹುಲುಮಾನವನಿಗೆ ಬಿಡಿಸಲಾಗದ ಪ್ರಶ್ನೆಗಳಾಗಿದ್ದರೆ, ಅನುಭಾವಿಗಳು ಇದಕ್ಕೆ ಶತಮಾನ ಕಾಲ ಪರಿಹಾರ ಹುಡುಕುವ ಪ್ರಯತ್ನ ಮಾಡಿಕೊಂಡೇ ಬಂದಿರುತ್ತಾರೆ. ಜಯದೇವ ಅವರು ಕೃತಿಯ ಉದ್ದಕ್ಕೂ ಬೇರೆ ಬೇರೆ ಶೀರ್ಷಿಕೆಯಡಿ ಇದನ್ನೇ ಮನನೀಯ ಕ್ರಮದಲ್ಲಿ ಚರ್ಚಿಸಿರುತ್ತಾರೆ.

ಮನುಷ್ಯನೇ ಅರಿತು, ಅರಿಯದೆ ಮಾಡಿಕೊಂಡ ಅವಘಡಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು? ಇದಕ್ಕೆ ಇನ್ನಿತರ ಜೀವರಾಶಿ ಅಥವಾ ಪ್ರಕೃತಿಯೇನೂ ಕಾರಣವಲ್ಲ ಎಂದುಕೊಳ್ಳುವಲ್ಲಿ ಅಲ್ಲಮ, ‘ನಿರ್ಣಯವನರಿಯದ ಮನವೇ ದುಗುಡವನಾಹಾರಗೊಂಡೆಯಲ್ಲ, ಮಾಯಾಸೂತ್ರವಿದೇನೋ, ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ...’ ಎಂಬಂತೆ ಸಾಧ್ಯವೇ ಆಗದ ನಿರ್ಧಾರ, ಕಣ್ಣಿದ್ದು ಕತ್ತಲಿನ ದಟ್ಟ ಅನುಭವ ಇದು ಯಾವ ದೈವದ ಪೂಜೆಯಿಂದ ಬಗೆಹರಿಯುವಂಥದ್ದು. ಉಳ್ಳವರು ನಿರ್ಮಿಸಿದ ದೇವಾಲಯದ ದೈವಗಳಿಂದ ಇದರ ಪರಿಹಾರವಿದೆಯೇ? ಬುದ್ಧನ ಪ್ರಕೃತಿ ತತ್ವದ ಶಾಂತಿ ಮತ್ತು ಸಮಾಧಾನ ಅಶೋಕನ ಅಂತರಂಗ ತಟ್ಟಿದಂತೆ ತದನಂತರದ ಶತಮಾನಗಳ ಜನಸಮೂಹದ ಮನವನ್ನು ಮುಟ್ಟಿತೆ? ಉತ್ತರ ಕಷ್ಟ. ಜಯದೇವ ಅವರು, ‘‘ಆಗುವುದೇ ಮುಖ್ಯ ಅರಿವು, ಈ ಭೌತ ಪ್ರಪಂಚದ ‘ಆಗ’ದ ಮನಸ್ಸುಗಳಲ್ಲಿ ಹರಿಯುವ ತೀವ್ರಭಾವದ ಕೆಂಪು ಕೆಸರಿನ ಪ್ರವಾಹದ ಮೂಲ ಯಾವುದು’’ ಎನ್ನುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಲೇಖಕರು ಮನಃಪರಿವರ್ತನೆಯ ಪರಿಕರವಾಗಿ ಕನ್ನಡದ ಮಧ್ಯಕಾಲೀನ ವಚನಕಾರರನ್ನು ಪ್ರಸ್ತಾಪಿಸುತ್ತಾರೆ. ರಾಜ್ಯವನ್ನು, ರಾಜನನ್ನು, ಅರಮನೆಯ ಪರಿಸರವನ್ನು ತಿರಸ್ಕರಿಸಿದ ಅಕ್ಕನನ್ನು ಉದಾಹರಣೆಗೆ ತೆಗೆದುಕೊಳ್ಳುತ್ತಾರೆ. ಹೆಣ್ಣು, ಗಂಡಿನ ನಡುವಣ ಭೇದವನ್ನು ಅಳಿಸುವ ನಿಟ್ಟಿನಲ್ಲಿ ಅದೇ ಪುರುಷರ ನಡುವೆ ದೀರ್ಘ ಪ್ರಯಾಣ ಕೈಗೊಂಡವಳು ಅಕ್ಕ. ಆಕೆಯ ಹುಟ್ಟು, ಬೆಳವಣಿಗೆ, ಪಡೆದ ಅರಿವು ಇದರೊಂದಿಗೆ ಊರು ಕೇರಿಗಳ ನೂರು ಅನುಭವಗಳ ಪ್ರಯಾಣ ಇವು ನಮಗೆ ಅರಿತು ಅರಿಯದ ಒಗಟಾಗಿ ನಿಗೂಢವೆನಿಸಿದೆ. ಶರಣರು, ಸಂತರುಗಳು, ಶ್ರೀಮಂತರು ನೀಡುವ ಭೀಕ್ಷೆ ತಮ್ಮ ಕರದ ಕಪ್ಪರಕ್ಕೆ ಒದಗಬಹುದು ಎಂದರೆ ಅಕ್ಕ ಅದೇ ಭಿಕ್ಷೆ ನೆಲಕ್ಕೆ ಬಿದ್ದು ಕುನ್ನಿ ಎತ್ತಿಕೊಂಡು ಹೋಗಲಿ ಎಂದಿದ್ದಾಳೆ. ಯಾವ ಜೀವನ ಕ್ರಮ ನಮ್ಮನ್ನು ತೀರ ಸಾಮಾನ್ಯರನ್ನಾಗಿಸಿ ಅದನ್ನೇ ಅಂತಃಶಕ್ತಿಯಾಗಿ ಪರಿವರ್ತಿಸುತ್ತದೋ ಅದೇ ನಿಜವಾದ ಅಧ್ಯಾತ್ಮ. ಆ ಕ್ರಮದಲ್ಲೇ ವಚನಗಳ ರೂಪ ಅಡಗಿದೆ. ಹಸಿವಿನ ಭಿಕ್ಷೆ, ಹಾಳು ದೇಗುಲದ ನಿದ್ದೆ, ತೃಷೆಗೆ ಒದಗುವ ಕೆರೆ ಹಳ್ಳದ ನೀರು ಎಂಬ ಸಾಮಾನ್ಯ ಸಂಗತಿಗಳ ಕೊನೆಯ ವಾಕ್ಯದಲ್ಲೇ ತಾನು ಚನ್ನಮಲ್ಲಿಕಾರ್ಜುನನ ಅಂತರಂಗದವಳು ಎಂದುಬಿಡುತ್ತಾಳೆ ಅಕ್ಕ. ಈ ಹೊತ್ತು ಅತಿಯಾದ ಆಧುನಿಕೀಕರಣದ ನಡುವೆ ಅಧ್ಯಾತ್ಮವು ತನ್ನಿಂದ ತಾನೇ ಶ್ರೀಮಂತಸ್ವರೂಪವನ್ನು ಪಡೆದಿದೆ.

ಮಕ್ಕಳಿಗೆ ಏನೂ ಗೊತ್ತಾಗುವುದಿಲ್ಲ ಅನ್ನುವುದಾದರೆ ಹಿರಿತನದ ಬೆಳವಣಿಗೆಯವರೆಗೆ ಬಂದದ್ದೇನು? ತಂದೆ–ತಾಯಿಗಳ ಪಾಲನೆಯೇ ಅದರೊಂದಿಗೆ ಮಕ್ಕಳ ಸುತ್ತಿನ ಪರಿಸರದ ಭಾವಪ್ರಪಂಚವೇ ಮುಂದೆ ಚಿಗುರೊಡೆಯುತ್ತದೆ ಎಂಬುದರ ನೆಲೆಯಲ್ಲಿಯೇ ಹಿರಿಯರ ಮನಃಸ್ಥಿತಿಯನ್ನೂ ಲೇಖಕರು ವಿವೇಚಿಸುತ್ತಾರೆ. ಇಚ್ಛಾಶಕ್ತಿಯ ವಿಷಯದಲ್ಲಿ ಮನುಷ್ಯ ಅಸಹಾಯಕನಾಗಿ ವಿಕೃತಿಯನ್ನೇ ಇಷ್ಟಪಡುವವನಾಗುತ್ತಾನೆ ಎಂಬ ಶೋಫೆನ್ ಹಾವರನ ಮಾತನ್ನು ಐನ್‌ಸ್ಟೀನ್ ಪುನರುಚ್ಚರಿಸುತ್ತಿದ್ದರಂತೆ! ಇದರಿಂದ ತಾನೇ ಸೃಷ್ಟಿಸಿಕೊಂಡ ವಿಕೃತಿಗೆ ತಾನೇ ಅಡಿಯಾಳಾಗದಂತೆ ಮನುಷ್ಯನನ್ನು, ಮನುಷ್ಯನ ಯಜಮಾನನ್ನಾಗಿ ಮಾಡಬೇಕಾಗಿರುವುದೇ ಯಾವೊತ್ತಿನ ದೊಡ್ಡ ಸವಾಲು! ಇದಕ್ಕೆ ಪೂರ್ವಜನ್ಮದ ಪಾಪ ಪುಣ್ಯಗಳಿಂದ ಹಿಡಿದು ಜನ್ಮವೆತ್ತಿದ ನಂತರವೂ ಕಾಡುತ್ತಲೇ ಬಂದಿರುವ ಮೂಢನಂಬಿಕೆಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕಾಗಿರುವುದೇ ನಮ್ಮ ಎದುರಿನ ಕಷ್ಟವಾಗಿದೆ. ಇದು ಬಿಟ್ಟೂ ಬಿಡದೆ ಕಾಡುವ ಮಾಯೆ! ವಿಶ್ವಗುರು ವ್ಯಾಸ ಮಹರ್ಷಿಯ ಮಹಾಭಾರತ ಕಥನದ ಕೊನೆಯ ಶ್ಲೋಕ ತತ್ವ ಕೂಡ ಇದೇ. ಧರ್ಮ, ಅರ್ಥ, ಕಾಮ ಸರಿಯಾಗಿ ಉಪಭೋಗವಾಗದಿದ್ದರೆ ಭೂತ, ಪ್ರೇತಗಳ ಕುರುಕ್ಷೇತ್ರ ಎದ್ದು ನಿಲ್ಲುತ್ತದೆ. ಇದೇ ವೇಳೆ ಉಲ್ಲೇಖಿಸಬಹುದಾದ ಮಾತೆಂದರೆ, ಇತರರು ಏಳಿಗೆಯಾಗದ ಹಾಗೆ ಮೊದಲು ಕೇಡು ಬಗೆದುಬಿಟ್ಟರೆ ನಾವು ಕ್ಷೇಮವಾಗಿರಬಹುದು ಎಂದು ತಿಳಿದ ಅಮೆರಿಕದ ಅಧ್ಯಕ್ಷರೊಬ್ಬರು ಜನರ ಸುರಕ್ಷತೆಗಾಗಿ ವಿಷ ಅನಿಲವನ್ನು ತಯಾರಿಸಿ ದಾಸ್ತಾನಿಡುವುದು ಅನಿವಾರ್ಯ ಎಂದರಂತೆ.

ಜಗತ್ತಿನ ಅನುಭಾವಿಗಳು, ತತ್ವವೇತ್ತರು, ಧರ್ಮ ಸಂಸ್ಥಾಪಕರು ಪ್ರತಿಪಾದಿಸಿದ್ದಕ್ಕೆಲ್ಲಾ ಯಾಕೆ ಮಿತಿಗಳು ಹುಟ್ಟಿಕೊಂಡಿತೆಂದರೆ ತದನಂತರ ಬಂದ ಅವರ ಅನುಯಾಯಿಗಳೇ ಅದಕ್ಕೆ ಕಾರಣ. ಅಗತ್ಯಕ್ಕೆ ತಕ್ಕಂತೆ ತೋರುಂಬ ಲಾಭಕ್ಕೆ ಧರ್ಮ ಸಂಗತಿಗಳನ್ನು ಬಳಸಿಕೊಂಡದ್ದೇ ಹೆಚ್ಚು. ಇಂಥದ್ದನ್ನೆಲ್ಲ ಜಯದೇವ ಅವರು ಒಂದೆಡೆ ತರುತ್ತ, ಚರ್ಚಿಸುತ್ತ ಜೀವನ ಎನ್ನುವುದು ಅಪೂರ್ವ ನಿಧಿ. ಅದು ಸಂತೋಷಕ್ಕಾಗಿ ಇದೆಯೇ ಹೊರತು ಸದಾ ಕಾಲವೂ ಯಾವುದನ್ನೋ ಯಾರನ್ನೋ ಹತ್ತಿಕ್ಕಲು ಅಲ್ಲ. ಅಹಂಕಾರದ ಮೂಲವೆಂದರೆ ಒಂದರ ವಿರುದ್ಧ ಮತ್ತೊಂದು ಎಂಬಂತಾಗಿ ಜೀವ ಬೇರೆ, ಹಳ್ಳಿ ಬೇರೆ, ದೇಶದ ಭಾಗ ಬೇರೆ, ದೇಶ ದೇಶ ಬೇರೆ ಅಂದರೆ ಅದು ಒಂದು ಇನ್ನೊಂದನ್ನು ಹಣಿಯುವ ಕುತಂತ್ರ ಸೂತ್ರವೇ ಆಗುತ್ತದೆ ಎನ್ನುವ ಲೇಖಕರ ಮಾತು ಚರಿತ್ರೆಯ ವಿಧ್ವಂಸಕತೆ ಮತ್ತು ಯುದ್ಧ ಸಂಕಷ್ಟಗಳಿಗೆ ಅನ್ವಯವಾಗುತ್ತದೆ. ಆಧುನಿಕತೆ, ಹಲವು ಬಗೆಯ ಶಿಕ್ಷಣ, ಯಂತ್ರವಿಜ್ಞಾನ ಎಂದುಕೊಳ್ಳುವ ಈ ಹೊತ್ತಿನಲ್ಲಿಯೂ ಮನುಷ್ಯ ಸಮೂಹಕ್ಕೆ ಹೇಳದೆ ಒದಗಿಬರುವ ಅಪಾಯಗಳು ಎದುರಾಗುತ್ತಿವೆ. ಜಯದೇವ ಅವರ ಲೋಕಾನುಭವ, ಅನುಭಾವಿಗಳ ಮತ್ತು ಮಕ್ಕಳ ಹಿನ್ನೆಲೆಯ ಈ ವಿದ್ವತ್‌ಕೃತಿಯನ್ನು ಕುರಿತು ಮತ್ತೊಬ್ಬ ಮನೋವಿಜ್ಞಾನ ವಿಷಯ ತಜ್ಞ ಪ್ರಾಧ್ಯಾಪಕ ಡಾ.ಎಂ.ಎಸ್. ತಿಮ್ಮಪ್ಪ ಅವರು, ‘ಉತ್ತಮ ಉನ್ನತ ಬದುಕಿಗೆ ಹಂಬಲಿಸುವವರು ಮತ್ತು ಭಾವದೊಳಗಿನ ಬಂಧನಗಳ ಬಿಡುಗಡೆಯ ದೃಷ್ಟಿಯಿಂದ ಇದು ಓದಲೇಬೇಕಾದ ಕೃತಿ’ ಎಂದಿದ್ದಾರೆ.

ನಾವೇಕೆ ಹೀಗೆ ?

ಲೇಖಕರು: ಜಿ.ಎಸ್. ಜಯದೇವ

ಪ್ರಕಾಶಕರು: ಪರಸ್ಪರ ಪ್ರಕಾಶನ ಬೆಂಗಳೂರು

ಮೊಬೈಲ್ ಸಂಖ್ಯೆ: 8884151513

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT