ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ಆಂಗ್ಲರ ನಡುಗಿಸಿದ ರಂಗ ಸಾಧಕ ಹುಲಿಮನೆ ಸೀತಾರಾಮ ಶಾಸ್ತ್ರಿ

Published 6 ಜುಲೈ 2024, 20:35 IST
Last Updated 6 ಜುಲೈ 2024, 20:35 IST
ಅಕ್ಷರ ಗಾತ್ರ

ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಯಶೋಗಾಥೆಗೆ ಮೂಲಶಕ್ತಿಯಾಗಿ ಪ್ರೇರಣೆ ನೀಡಿದ್ದು ಛಲ ಒಂದೇ ಎನ್ನುವುದನ್ನು ಈ ಆತ್ಮಕಥನ ನಿರೂಪಿಸುತ್ತದೆ. ಇದು 1975ರಲ್ಲಿ ‘ಸುಧಾ’ ಪತ್ರಿಕೆಯಲ್ಲಿ ಧಾರಾವಾಹಿಯ ರೂಪದಲ್ಲಿ 18 ವಾರ ಪ್ರಕಟವಾಗಿದೆ. ಆತ್ಮಕಥೆ ಆಗಿದ್ದರೂ ವೈಯಕ್ತಿಕ ವಿವರಕ್ಕಿಂತ ರಂಗ ಚರಿತ್ರೆಯನ್ನೇ ಹೇಳುತ್ತದೆ. ಬಾಲ್ಯದಲ್ಲಿ ಹೆಗಡೆ ಆಗಿದ್ದ ಸೀತಾರಾಮ ಅವರು ಶಾಸ್ತ್ರಿ ಆಗಿ ಬದಲಾದ ಸನ್ನಿವೇಶಗಳು ರೋಚಕ ಅನ್ನಿಸಿದರೂ ಅವರು ಎದುರಿಸಿದ ಅಗ್ನಿಪರೀಕ್ಷೆಯನ್ನೂ ಇಲ್ಲಿ ಕಾಣಬಹುದು. ಸೀತಾರಾಮ ಅವರ ರಂಗ ಪ್ರೇಮದ ಬೀಜ ಎಮ್ಮೆ ಮೇಯಿಸುವ ಗುಡ್ಡದಲ್ಲಿ ಮೊಳಕೆಯೊಡೆದಿದ್ದು ಸೋಜಿಗ. ಶಾಸ್ತ್ರಿ ಪ್ರಾಥಮಿಕ ಶಾಲೆಗೆ ಓದನ್ನು ನಿಲ್ಲಿಸಿ ಎಮ್ಮೆ ಮೇಯಿಸಲು ಆರಂಭಿಸುತ್ತಾರೆ. ಅವರಿಗಿದ್ದ ನಟನೆಯ ಹುಚ್ಚು ಬೀಡಿಯ ಚಟ ಮನೆಯನ್ನು ಬಿಡಿಸುತ್ತದೆ. ಅದು ಅವರ ಬದುಕಿನ ಮತ್ತೊಂದು ಮಗ್ಗಲಿಗೆ ಹೊರಳಿಸುತ್ತದೆ. ಸಂಸ್ಕೃತ ಪಂಡಿತ, ಭಾಷಾಂತರಕಾರ, ನಾಟಕಕಾರ, ರಂಗ ಸಂಘಟಕರಾಗಿ ಪ್ರಸಿದ್ಧಿಗೆ ಬರುತ್ತಾರೆ.

ಅವರೇ ಸ್ಥಾಪಿಸಿದ ‘ಜಯಕರ್ನಾಟಕ ನಾಟ್ಯ ಸಂಘ’ ವೃತ್ತಿ ರಂಗಭೂಮಿಯ ನೋವು ನಲಿವಿನ ಕೈಗನ್ನಡಿಯಾದರೆ, ಅವರ ರಚನೆಯ ‘ಟಿಪ್ಪು ಸುಲ್ತಾನ್‌’ ನಾಟಕ ಬ್ರಿಟಿಷ್‌ ಆಡಳಿತವನ್ನೂ ನಡುಗಿಸಿತ್ತು.

ಕೃತಿ ಎರಡು ಭಾಗವನ್ನು ಒಳಗೊಂಡಿದೆ. ಮೊದಲ ಭಾಗ ‘ಸುಧಾ’ದಲ್ಲಿ ಪ್ರಕಟಿತ 18 ಅಧ್ಯಾಯಗಳನ್ನು ಒಳಗೊಂಡಿದೆ. ಇದನ್ನು ಜೆ.ಹೆಚ್‌. ಭಟ್‌ ನಿರೂಪಣೆ ಮಾಡಿದ್ದಾರೆ. ಶಾಸ್ತ್ರಿಯವರ ಬಾಲ್ಯದಿಂದ ಇಳಿಸಂಜೆಯ ಬದುಕಿನ ಮೆಲುಕನ್ನು ಬಿಡಿ ಬಿಡಿಯಾಗಿ ಕಟ್ಟಿದ್ದಾರೆ. ಬಿಡಿ ಬಿಡಿಯಾಗಿ ಓದಿದರೂ ಮೂಲಕ್ಕೆ ಮುಕ್ಕಾಗದಂತೆ ತನ್ನ ಆಂತರ್ಯದ ಬಣ್ಣದ ಗುರುತನ್ನು ಪ್ರತಿ ಅಧ್ಯಾಯ ಅನುಸಂಧಾನ ಮಾಡುತ್ತದೆ.

ಎರಡನೇ ಭಾಗ ರಂಗ ದಿಗ್ಗಜ ಸೀತಾರಾಮ ಶಾಸ್ತ್ರಿ ಅವರನ್ನು ಎ.ಎನ್‌. ಕೃಷ್ಣರಾವ್‌ ಆಕಾಶವಾಣಿಗೆ ಮಾಡಿದ ಸಂದರ್ಶನ, ಸೀತಾರಾಮ ಶಾಸ್ತ್ರಿ ಅವರ ಜನ್ಮ ಶತಮಾನೋತ್ಸದ ಉದ್ಘಾಟನೆಯಲ್ಲಿ ನಟ ಏಣಗಿ ಬಾಳಪ್ಪ ಅವರು ಮಾಡಿದ ಭಾಷಣ. ‘ಹುಲಿಮನೆ: ಪ್ರತಿಭೆ–ಪ್ರಚೋದನೆ’ ಗಿರೀಶ ಕಾರ್ನಾಡ ಅವರ ಲೇಖನ, ‘ನನ್ನ ಕಕ್ಕ: ಮರೆಯಲಾಗದ ನೆನಪು’ ಶ್ರೀಧರ ಹೆಗಡೆ, ಹುಲಿಮನೆ ಮತ್ತು ‘ಕಕ್ಕ– ನಾನು ಕಂಡಂತೆ’ ಜಯರಾಮ ಹೆಗಡೆ ಅವರ ಲೇಖನ‌ಗಳನ್ನು ಒಳಗೊಂಡಿದೆ.

ಹುಲಿಮನೆ ಸೀತಾರಾಮ ಶಾಸ್ತ್ರಿ– ರಂಗಕಥನ (ಆತ್ಮಕಥನ) ನಿರೂಪಣೆ: ಜಿ.ಹೆಚ್. ಭಟ್‌ ಪ್ರಕಾಶನ: ಕರ್ನಾಟಕ ಸಾಹಿತ್ಯ ಪರಿಷತ್‌, ಬೆಂಗಳೂರು ಪುಟ: 176 ಬೆಲೆ: 200 ಫೊನ್‌: 9448119060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT