ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಇದೊಂದು ಮೂರು ತಲೆಮಾರುಗಳ ಸಂಕ್ಷಿಪ್ತ ಕಥನ. ಕಾವ್ಯಗಳಲ್ಲಿ ಕಾಣುವ ಜೀವಪ್ರವಾಹ ಸಂಕ್ಷಿಪ್ತ ಎಳೆಗಳು ಈ ಹೊತ್ತಗೆಯಲ್ಲಿ ಚಿತ್ರಿತವಾಗಿರುವುದು ವಿಶೇಷ. ಪುಸ್ತಕದ ಆರಂಭದಲ್ಲಿ ಕಾಣಿಸಿಕೊಳ್ಳುವ ಸಂವೇದನಾತ್ಮಕ ಭಾವನೆ ಸೂಚಿಸುವ ಪಾತ್ರ ಲೇಖಕರ ಹೆತ್ತಮ್ಮನೂ ಆಗಿರುವ ಕೊಟ್ಯಾಡಿಯ ಕುಞ್ಞಮ್ಮ ಅವರದು. ಈಕೆ ಹೊಟ್ಟೆಪಾಡಿಗಾಗಿ ಕೊಡಗಿನ ತೋಟವೊಂದರಲ್ಲಿ ಕೂಲಿ ಮಾಡುತ್ತಾ, ಶೋಷಣೆಗೆ ಒಳಗಾಗಿರುವ ತಿಯಾ ಜಾತಿಗೆ ಸೇರಿದ ಹೆಣ್ಣುಮಗಳು. ಕುಞ್ಞಮ್ಮ ಕೆಲಸದಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತೆ. ಹೀಗಾಗಿಯೇ ಈಕೆ ತೋಟದ ವ್ಯವಸ್ಥಾಪಕ ಕೃಷ್ಣನ್‌ ನಾಯರ್‌ ಅವರ ಮನಗೆಲ್ಲುವುದಷ್ಟೇ ಅಲ್ಲದೆ ಅವರನ್ನೇ ಮದುವೆಯೂ ಆಗುತ್ತಾಳೆ.

ಕೂಲಿ ಮಾಡುತ್ತಿದ್ದ ಕುಞ್ಞಮ್ಮ ಮುಂದೆ ಕೇರಳದ ಪಾಲ್ಘಾಟಿನಲ್ಲಿನ ಶ್ರೀಮಂತರ ಮನೆಗೆ ಸೇರುವುದು ಆಕೆಯ ಜೀವನದಲ್ಲಿ ಆದ ಮಹತ್ವದ ತಿರುವು. ಬಳಿಕ ಇಬ್ಬರು ಮಕ್ಕಳ ತಾಯಿಯಾಗುತ್ತಾಳೆ. ದುರದೃಷ್ಟವಶಾತ್‌ ಗಂಡನಿಗೆ ಯಾವುದೋ ಕಾಯಿಲೆ ಬಂದು ಮೃತಪಡುತ್ತಾನೆ. ಗಂಡ ತೀರಿಹೋದ ಬಳಿಕ ಮನೆಯಲ್ಲಿ ಕುಞ್ಞಮ್ಮನ ಬಗ್ಗೆ ಅಸಮಾಧಾನ ಭುಗಿಲೇಳುತ್ತದೆ. ಜೊತೆಗೆ ಇಬ್ಬರು ಮಕ್ಕಳ ಸಹಿತ ಈಕೆಯನ್ನು ಕೊಂದುಹಾಕುವ ಸಂಚೂ ನಡೆಯುತ್ತದೆ. ಈ ವಿದ್ಯಮಾನವನ್ನು ಗಮನಿಸಿದ ಈಕೆಯ ಗಂಡನ ಗೆಳೆಯ ದಾಮೋದರ ಮೆನನ್‌ ಈ ಸಂಚಿನಿಂದ ಪಾರುಮಾಡುವ ಘಟನೆಯೂ ನಡೆಯುತ್ತದೆ. ಇದರಿಂದ ವಿಪರೀತ ಮನನೊಂದ ಕುಞ್ಞಮ್ಮ ಮನೆಯನ್ನು ಬಿಟ್ಟು ತಾನು ಹಿಂದೆ ಕೆಲಸ ಮಾಡುತ್ತಿದ್ದ ತೋಟದ ಮನೆಗೆ ಪುನಃ ಕೂಲಿಯಾಳಾಗಿ ಸೇರಿಕೊಳ್ಳುವ ಪ್ರಸಂಗವೂ ನಡೆಯುತ್ತದೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಕುಞ್ಞಮ್ಮ ನೆರವಿಗೆ ಬರುವುದು ಜೇವಿಯರ್‌ ಮತ್ತು ಪಡಿವೇಲು ಅವರ ಕುಟುಂಬ. ತೋಟದಲ್ಲಿ ಕಷ್ಟಪಟ್ಟು ದುಡಿಮೆ ಸಾಗಿಸುತ್ತಿದ್ದಾಗ ಕುಞ್ಞಮ್ಮನ ಬದುಕಿನಲ್ಲಿ ಮತ್ತೊಂದು ಆಘಾತ ಸಂಭವಿಸುತ್ತದೆ. ಅದುವೇ ಈಕೆಯ ಮಗುವಿನ ಸಾವು. ಈ ನೋವಿನ ಮಧ್ಯೆಯೂ ಕುಞ್ಞಮ್ಮನ ಬದುಕು ಮತ್ತೊಂದು ತಿರುವು ಪಡೆದುಕೊಳ್ಳುವುದು ರಾಘವ ಎಂಬ ವ್ಯಕ್ತಿಯ ಪ್ರವೇಶ, ಈಕೆ ಮತ್ತೆ ಗರ್ಭಿಣಿಯಾಗಿ ಹುಟ್ಟಿದ ಮಗುವೇ ಈ ಪುಸ್ತಕದ ಕರ್ತೃ ಜಯಕುಮಾರ್‌! ವಿಪರ್ಯಾಸ ಎಂದರೆ ಈ ಮಗು ಹುಟ್ಟಿದಾಗ ರಾಘವ ತಾಯಿ–ಮಗುವನ್ನು ಬಿಟ್ಟು ಪರಾರಿಯಾಗಿರುವುದು. ಈ ಸನ್ನಿವೇಶ ಹೊತ್ತಗೆಯನ್ನು ರೋಚಕವಾಗಿಸುತ್ತದೆ.

ಇನ್ನೊಂದು ವಿಶೇಷ ಎಂದರೆ ಮನೆಯಲ್ಲಿ ಕುಮಾರ್‌ ಎಂದು ಕರೆಸಿಕೊಳ್ಳುತ್ತಿದ್ದ ಬಾಲಕ ಶಾಲೆ ಸೇರಿದ ಬಳಿಕ ಆರ್‌. ಜಯಕುಮಾರ್‌ ಆದ. ಈ ‘ಆರ್‌’ ಎಂಬ ಇನಿಶಿಯಲ್‌ ರಾಘವ ಎಂಬ ಹೆಸರನ್ನು ಸೂಚಿಸುತ್ತದೆ ಎಂಬುದು ಗಮನಾರ್ಹ.

ಪುಸ್ತಕದ ಮುಂದಿನ ಪ್ರಮುಖ ಪಾತ್ರ ಜಯಕುಮಾರ್ ಅವರ ಅಣ್ಣ ಪಿ.ಕೆ. ಚಂದ್ರಶೇಖರ್‌ ಅವರದು. ಮೂರನೇ ಪಾತ್ರ ಆರ್‌. ಜಯಕುಮಾರ್‌ ಅವರದೇ. ಬದುಕಿನ ಹಲವು ಕವಲುಗಳನ್ನು, ಏಳುಬೀಳುಗಳನ್ನು, ರೋಚಕ ತಿರುವುಗಳನ್ನು ಪಡೆಯುವ ಈ ಪುಸ್ತಕವನ್ನು ಕಾದಂಬರಿ ಎನ್ನಬಹುದೇ‌? ಅನುಭವ ಕಥನ ಎನ್ನಬಹುದೇ ಎಂಬುದನ್ನು ಓದುಗರೇ ನಿರ್ಧರಿಸಬೇಕು. ಆದರೆ ಒಂದೇ ಉಸಿರಿಗೆ ಓದಿ ಮುಗಿಸುವಂಥ ಆಕರ್ಷಣೆಯನ್ನು ಹೊತ್ತಗೆ ಪಡೆದುಕೊಂಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಕಾಡು ಹಾದಿಯ ಬೆಳಕಿನ ಜಾಡು

ಲೇ: ಆರ್‌. ಜಯಕುಮಾರ್

ಪ್ರಕಾಶನ: ಪ್ರಜಾ ಪುಸ್ತಕ

ಸಂ: 9632836949

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT