ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮರಾಠ ಸಂಸ್ಕೃತಿಯ ಸಂಕ್ಷಿಪ್ತ ನೋಟ

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ದ್ರಾವಿಡ ಸಂಸ್ಕೃತಿಯನ್ನು ಪ್ರತಿನಿಧಿಸುವ ಕರ್ನಾಟಕ ಹಾಗೂ ಆರ್ಯ ಸಂಸ್ಕೃತಿ ಪ್ರತಿನಿಧಿಸುವ ಮಹಾರಾಷ್ಟ್ರದ ಜನರು ರಾಜಕೀಯವಾಗಿ ಹಲವು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದರು. ಹೀಗಾಗಿ ಎರಡೂ ಪ್ರಾಂತ್ಯಗಳಲ್ಲಿ ಜನರು ತಮ್ಮ ಸ್ಥಳ ಬದಲಿಸಿ ನೆಲೆಸಿದರು. ಅವರಲ್ಲಿ ಮರಾಠ ಜನಾಂಗದವರು ಕರ್ನಾಟಕದಲ್ಲಿ ನೆಲೆಸಿದ್ದರೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ ಎಂಬ ಅಂಶವನ್ನು ‘ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ’ ಕೃತಿಯಲ್ಲಿ ದಾಖಲಿಸಲಾಗಿದೆ.

ಮರಾಠ ಜನಾಂಗದ ಇತಿಹಾಸದಿಂದ ಆರಂಭವಾಗುವ ಈ ಕೃತಿಯು ಮರಾಠರ ಆಳ್ವಿಕೆ, ಕರ್ನಾಟಕದಲ್ಲಿ ಶಿವಾಜಿಯ ಮನೆತನ, ಬೆಂಗಳೂರು ಹಾಗೂ ಕರ್ನಾಟಕದ ಇತರ ನಗರ ಹಾಗೂ ಪ್ರದೇಶಗಳೊಂದಿಗೆ ಅವರಿಗಿದ್ದ ಸಂಬಂಧಗಳ ಕುರಿತು ಕೃತಿಯಲ್ಲಿ ಹೇಳಲಾಗಿದೆ. ಶಿವಾಜಿಯ ಪೂರ್ವಿಕರ ಇತಿಹಾಸದೊಂದಿಗೆ ಛತ್ರಪತಿ ಶಿವಾಜಿಯ ಆಳ್ವಿಕೆ, ಛತ್ರಪತಿ ಶಿವಾಜಿ ಮಹಾರಾಜರ ಮದುವೆ ಬೆಂಗಳೂರಿನಲ್ಲಿ ನಡೆದ ಮಾಹಿತಿ, ಮರಾಠ ಸಾಮ್ರಾಜ್ಯವು ಬೆಂಗಳೂರಿನಲ್ಲಿ ಕಟ್ಟಿಸಿರುವ ದೇಗುಲಗಳು, ಕನ್ನಡ ಮತ್ತು ಮರಾಠರ ಸಾಮಾಜಿಕ ಸಾಮರಸ್ಯ, ಕನ್ನಡ–ಮರಾಠಿ ಭಾಷಾಬಾಂಧ ವ್ಯವನ್ನೂ ಕೃತಿಯಲ್ಲಿ ವಿವರಿಸಲಾಗಿದೆ.

ಮರಾಠಿ ಮೋಡಿ ಲಿಪಿ, ಕನ್ನಡ–ಮರಾಠ ಸಾಹಿತ್ಯ ಪರಂಪರೆಯ ಮಾಹಿತಿಯನ್ನೂ ಈ ಕೃತಿ ಒಳಗೊಂಡಿದೆ. ಕರ್ನಾಟಕದಲ್ಲಿರುವ ಶಿವಾಜಿಯ ಕೋಟೆಗಳು, ನಾಣ್ಯಗಳು, ಬೆಂಗಳೂರಿನಲ್ಲಿ ಮರಾಠ ಸರದಾರರ ರಾಜ್ಯಭಾರ, ಕರಾವಳಿ ಒಳಗೊಂಡಂತೆ ಕರ್ನಾಟಕದಲ್ಲಿ ಮರಾಠ ಸಂಸ್ಥಾನಗಳ ಮಾಹಿತಿ, ರಾಜರ್ಷಿ ಶಹು ಛತ್ರಪತಿ ಅವರ ಮಾಹಿತಿಯನ್ನೂ ಈ ಕೃತಿ ಒಳಗೊಂಡಿದೆ.

ಮರಾಠರು ಅಥವಾ ಆರೇರ ಎಂದೇ ಕರ್ನಾಟಕದಲ್ಲಿ ಕರೆಯಲಾಗುವ ಮರಾಠ ಸಮಾಜದ ಕೆಲ ಶಾಸನಗಳ ಸಚಿತ್ರ ವರದಿ ಇದರಲ್ಲಿದೆ. ಸಂಡೂರಿನ ರಾಜವಂಶಸ್ಥ ಎಂ.ವೈ.ಘೋರ್ಪಡೆ ಅವರಿಂದ ಹಿಡಿದು, ರಾಜಕಾರಣಿಗಳಾದ ಸಂತೋಷ್ ಲಾಡ್, ಅನಿಲ್ ಲಾಡ್, ಶ್ರೀನಿವಾಸ ಮಾನೆ, ಪಿಜಿಆರ್ ಸಿಂಧ್ಯಾ, ಚಲನಚಿತ್ರ ರಂಗದ ರಜನಿಕಾಂತ್, ಗೀತಪ್ರಿಯ ಭಾರತಿ ವಿಷ್ಣುವರ್ಧನ್, ಓಂ ಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್ ಅವರಂಥ ಕಲಾವಿದರು, ಕಲಾವಿದರು, ಸಾಧಕರ ಪರಿಚಯ ಈ ಕೃತಿಯಲ್ಲಿ ದಾಖಲಾಗಿದೆ.

ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ

ಪ್ರಧಾನ ಸಂಪಾದಕ: ಪ್ರಕಾಶ್ ಆರ್. ಪಾಗೋಜಿ

ಸಂ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಪ್ರ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ

ಪುಟ: 250 ಬೆಲೆ: ₹500 ಸಂ: 88675 37799

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT