ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸಂಸ್ಕೃತಿಯ ತೊಟ್ಟಿಲಲ್ಲಿ ತೂಗುತ್ತಾ...

Last Updated 24 ಜುಲೈ 2021, 19:30 IST
ಅಕ್ಷರ ಗಾತ್ರ

ನದಿಗಳನ್ನು ಸಂಸ್ಕೃತಿಯ ತೊಟ್ಟಿಲುಗಳು ಎಂದೇ ಗುರ್ತಿಸಲಾಗುತ್ತದೆ. ಮಾನವನ ಬದುಕಿನ ಮೇಲೆ ಅವುಗಳು ಬೀರುವ ಪ್ರಭಾವ ಅಗಾಧವಾದುದು. ದಂಡೆಯ ಮೇಲಿನ ಊರುಗಳಂತೂ ತಮ್ಮ ಬಹುತೇಕ ಅಗತ್ಯವನ್ನು ಪೂರೈಸಿಕೊಳ್ಳುವುದು ನದಿಗಳಿಂದಲೇ. ಆದ್ದರಿಂದಲೇ ಈ ಜಲಮೂಲಗಳನ್ನು ಜೀವನದಿ ಎಂದು ಕರೆಯುವುದು. ಕರ್ನಾಟಕ ಮತ್ತು ತಮಿಳುನಾಡಿನ ನೆಲದಲ್ಲಿ ಹರಿಯುವ ಕಾವೇರಿ ಅಂತಹ ಜೀವನದಿಗಳಲ್ಲೊಂದು. ಕಾವೇರಿ ನದಿಯು ಬೆಳೆಸಿ, ಪೋಷಿಸಿದ ಸಂಸ್ಕೃತಿಯನ್ನು ಅರಿಯುವ ಹಂಬಲದಿಂದ ಪತ್ರಕರ್ತ ಒ.ಕೆ. ಜೋಣಿಯವರು ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್‌ವರೆಗೆ ಯಾತ್ರೆ ನಡೆಸಿ ದಾಖಲಿಸಿದ ಅನುಭವಗಳ ಕಥನವೇ ‘ಕಾವೇರಿ ತೀರದ ಪಯಣ’.

ಹಾಗೆಯೇ ನದಿಯು ಸಮುದ್ರ ಸೇರಿದ ಬಿಂದುವಿನಿಂದ ಘಟ್ಟದಲ್ಲಿರುವ ಉಗಮದ ಕೇಂದ್ರದವರೆಗೆ ನಡೆಸಿದ ‘ಯು’ ಟರ್ನ್‌ ಯಾನದ ಅನುಭವಗಳು ಸಹ ಇಲ್ಲಿವೆ. ನದಿ ತೀರದ ಪರಿಧಿಯನ್ನು ಹೀಗೆ ಒಂದು ಸುತ್ತು ಹಾಕಿ ಕಂಡದ್ದನ್ನೆಲ್ಲ ‘ಕಾಣಿಸುವ’ ಪ್ರಯತ್ನ ಅಪರೂಪದ್ದು.

ಜೋಣಿಯವರು ನಡೆಸುವ ಕಾವೇರಿ ಸಂಸ್ಕೃತಿಯ ತಲಸ್ಪರ್ಶಿ ಹುಡುಕಾಟ ಸೋಜಿಗವನ್ನು ಉಂಟು ಮಾಡುತ್ತದೆ. ಅವರು ಆಳಕ್ಕೆ ಇಳಿಯುತ್ತಾ, ಇಳಿಯುತ್ತಾ ಪೌರಾಣಿಕ ಪ್ರಸಂಗಗಳು, ಐತಿಹ್ಯಗಳು, ಸ್ಥಳ ಪುರಾಣಗಳನ್ನೂ ಜಾಲಾಡುತ್ತಾರೆ. ಚಾರಿತ್ರಿಕ ದಾಖಲೆಗಳಿಗೂ ಕೈಹಾಕುತ್ತಾರೆ. ದಂಡೆಯಲ್ಲಿ ತಾವು ಓಡಾಡಿ ಕಂಡ ಸದ್ಯದ ಸ್ಥಿತಿಯನ್ನೂ ವಸ್ತುನಿಷ್ಠವಾಗಿ ದಾಖಲಿಸುತ್ತಾರೆ. ಹೀಗಾಗಿ ನದಿಯ ಪ್ರವಾಹದಂತೆಯೇ ಇಲ್ಲಿ ಲೆಕ್ಕವಿಲ್ಲದಷ್ಟು ಮಾಹಿತಿಗಳು ಇಡುಕಿರಿದು ಹರಿಯುತ್ತವೆ.

ಹಾಗೆ ನೋಡಿದರೆ, ‘ನದಿಯೊಂದರ ಉಗಮ ಸ್ಥಾನದಿಂದ’ ಎನ್ನುವ ಮೊದಲ ಅಧ್ಯಾಯವೇ ಕುತೂಹಲಕಾರಿಯಾಗಿದೆ. ತಲಕಾವೇರಿಯ ನೀರಿನ ಹೊಂಡವನ್ನೇ ಎಲ್ಲರೂ ಕಾವೇರಿಯ ಉಗಮಸ್ಥಾನ ಎಂದು ನಂಬುತ್ತಾರೆ. ಆದರೆ, ಲೇಖಕರಿಗೆ ಸಿಗುವ ಸ್ವಾಮಿ ಆನಂದತೀರ್ಥರು ಉಗಮಸ್ಥಾನ ತೋರಿಸಲು ಅವರನ್ನು ತೀರ್ಥೋದ್ಭವ ಕ್ಷೇತ್ರದ ಬದಲು ಅದೇ ಬ್ರಹ್ಮಗಿರಿ ಬೆಟ್ಟದ ಬೇರೊಂದು ಸ್ಥಳಕ್ಕೆ ಕರೆದೊಯ್ಯುತ್ತಾರೆ!

ಕೊಡಗು, ಮೈಸೂರು, ಶ್ರೀರಂಗಪಟ್ಟಣ... ಹೀಗೆ ಕಾವೇರಿ ತೀರದ ಹಲವು ರಾಜಮನೆತನಗಳ ಕಥೆಗಳು ಈ ಕೃತಿಯಲ್ಲಿ ಮೆರವಣಿಗೆ ಹೊರಡುತ್ತವೆ. ಬೆಳ್ಳೂರಿನ ಕೊಕ್ಕರೆಗಳು ಗರಿಬಿಚ್ಚಿ ಹಾರುತ್ತವೆ. ಆಂಡಾಳ್‌, ತ್ಯಾಗರಾಜರಾದಿಯಾಗಿ ಹಲವು ದಿಗ್ಗಜರ ಸಂಗೀತದ ನಿನಾದ ಸಹ ಕೇಳಿಸುತ್ತದೆ. ‘ಕಾವೇರಿ ನಮ್ಮದು’ ಎಂದು ಜಗಳ ಕಾಯುವ ಎರಡೂ ರಾಜ್ಯಗಳ ಜನರ ಕಿವಿಯಲ್ಲಿ ಈ ಕೃತಿ, ‘ಕಾವೇರಿ ನಿಮ್ಮಿಬ್ಬರದು, ಮಲಿನ ಮಾಡದೆ ರಕ್ಷಿಸಿಕೊಳ್ಳಿ’ ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ. ಎರಡೂ ಸಂಸ್ಕೃತಿಗಳ ಸಂಗಮವೂ ಇಲ್ಲಿ ಆಗಿದೆ. ಮೊದಲೇ ವಿವರಿಸಿದಂತೆ ಇಲ್ಲಿ ಇಡುಕಿರಿದ ಮಾಹಿತಿಗಳ ಮಹಾಪೂರದ ಜತೆ ಓದುಗನೂ ಓಡಬೇಕು. ಬೊಗಸೆ ನೀರು ಬೇಕಾದವರಿಗೂ ಬಿಂದಿಗೆಯಿಂದಲೇ ಹನಿಸಿದಂತೆ, ಕೃತಿಯಲ್ಲಿ ವಿವರಗಳು ಕಿಕ್ಕಿರಿದಿವೆ. ಮಲಯಾಳಂನ ಈ ಹೊತ್ತಿಗೆಯನ್ನು ಮೂಲ ಕನ್ನಡದ್ದೇ ಎನಿಸುವಂತೆ ಪತ್ರಕರ್ತ ವಿಕ್ರಂ ಕಾಂತಿಕೆರೆ ಅನುವಾದಿಸಿದ್ದಾರೆ.

ಕೃತಿ: ಕಾವೇರಿ ತೀರದ ಪಯಣ

ಲೇ: ಒ.ಕೆ.ಜೋಣಿ

ಕನ್ನಡಕ್ಕೆ: ವಿಕ್ರಂ ಕಾಂತಿಕೆರೆ

ಪ್ರ: ನವಕರ್ನಾಟಕ

ಸಂ: 080 22161900

ಪುಟಗಳು: 240

ಬೆಲೆ: 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT