ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ದೇಶ, ಕಾಲ ದಾಟಿ ಬಂದ ಕಾವ್ಯ

Last Updated 6 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬಿ .ಆರ್.ಲಕ್ಷ್ಮಣರಾವ್ ಅವರ ‘ಮನಸು ಬಾವಲಿಯಂತೆ’ ಸಂಕಲನದಲ್ಲಿ ಹಲವುಕಾಲ,ದೇಶ, ಭಾಷೆಗಳಿಂದ ಆಯ್ಕೆ ಮಾಡಿ ಅನುವಾದಿಸಿರುವ ಐವತ್ತೊಂದು ಕವನಗಳಿವೆ. ಕವಿತೆಗಳ ರೂಪ, ಹಿನ್ನೆಲೆ, ವಸ್ತು, ಭಾಷೆ, ಲಯ, ಶೈಲಿ, ಬೇರೆ ಬೇರೆಯವು. ಬೇರೆ ಬೇರೆ ಮಾರ್ಗಗಳ, ಅಭಿರುಚಿಯ ಓದುಗರಿಗೆ ಮತ್ತು ಕವಿಗಳಿಗೆ ಬೇರೆ ಬೇರೆ ಕವಿಗಳ ಜೈವಿಕ, ಅನುಭಾವಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಮಾನವಿಕ ಹಿನ್ನೆಲೆಯಲ್ಲಿ ಮೂಡಿರುವ ಬದುಕಿನ ಅನುಭವಗಳನ್ನು, ಸಂವೇದನೆಗಳನ್ನು ತಮ್ಮದಾಗಿಸಿಕೊಂಡು ಆ ಮೂಲಕ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಈ ಅನುವಾದಿತ ಕವಿತೆಗಳು ನೆರವಾಗುತ್ತವೆ. ಇವುಗಳಲ್ಲಿ ನಡೆಸಿರುವ ಮಾನವೀಯ ಮೌಲ್ಯಗಳ ಶೋಧನೆಯು ಕಲಾತ್ಮಕವಾಗಿದ್ದು, ಈ ಕವಿತೆಗಳ ಕೇಂದ್ರದಲ್ಲಿರುವ ತಾತ್ವಿಕ ಚಿಂತನೆಗಳು ವಿಶ್ವಾತ್ಮಕವಾಗಿವೆ.

ಬೇರೆ ಬೇರೆ ಮಣ್ಣ ಬದುಕಿನ ಅನುಭವಗಳಿಂದ ಮೂಡಿರುವ ಮೂಲ ಕವಿತೆಗಳ ಲಯ, ಛಂದಸ್ಸು, ಭಾವ, ವೈಚಾರಿಕತೆಯ ಸೊಗಸು ಕೆಡದಂತೆ ಕನ್ನಡದ ಓದುಗನಿಗೆ ಈ ಅನುಭವಗಳು ಪರಕೀಯವಾಗದಂತೆ ಭಾಷಾಂತರಿಸುವುದು ಸುಲಭದ ಸಂಗತಿಯಲ್ಲ. ಏಕೆಂದರೆ ಅನುವಾದ ಎಂಬುವುದು ಬರೀ ಭಾಷಾನುವಾದವಲ್ಲ, ಮೂಲದ ಆಳದಲ್ಲಿರುವ ಸೂಚ್ಯ ಸೂಕ್ಷ್ಮ ಧ್ವನ್ಯಾರ್ಥಗಳನ್ನು ಹಿಡಿದಿಡುವ ಕಲೆಗಾರಿಕೆಯೂ ಹೌದು. ಧ್ವನಿಶಕ್ತಿಯನ್ನೇ ಅವಲಂಬಿಸಿ ಮಾಡುವ ಅನುವಾದ ಕಷ್ಟಕರವೇ. ಉತ್ತಮ ಅನುವಾದವು ಮೂಲಕವಿತೆಯ ಶರೀರವನ್ನು ಮಾತ್ರವಲ್ಲ, ಅದರ ಆತ್ಮವನ್ನು ಅರ್ಥೈಸುವ ಕ್ರಿಯೆಯೂ ಆಗಿರುತ್ತದೆ. ಬಿ.ಆರ್.ಎಲ್. ಅವರ ಕವಿತೆಗಳು ಈ ದೃಷ್ಟಿಯಿಂದ ಮೂಲ ಕವಿತೆಗಳ ಅಂತಃಸತ್ವವನ್ನು ಹೀರಿಕೊಂಡೇ ಕನ್ನಡದ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿವೆ. ಕವಿತೆಗಳ ಆಯ್ಕೆ, ಅನುವಾದ, ಆಕೃತಿ ಹಾಗೂ ಆಶಯದ ದೃಷ್ಟಿಯಿಂದ ಕನ್ನಡದ್ದೇ ಮೂಲ ಅನ್ನಿಸುವಷ್ಟು ಸತ್ವಯುತವಾಗಿವೆ.

ಇಲ್ಲಿನ ಹಲವಾರು ಕವಿತೆಗಳು, ಕವಿ ಹಾಗೂ ಕವಿತೆ, ಕಲಾವಿದ ಹಾಗೂ ಕಲಾಕೃತಿಗಳ ನಡುವಿನ ಅವಿನಾಭಾವ ಸಂಬಂಧಗಳ ಎಳೆಗಳನ್ನು ಬಿಡಿಸಿಡುತ್ತವೆ. ಉದಾಹರಣೆಗೆ ಜಾಯ್ಸ್ ಕಿಲ್ಮರ್‌ನ ಇಂಗ್ಲಿಷ್ ಕವಿತೆಯ ಅನುವಾದ ‘ಮರ’ ಕವಿತೆ. ಇಲ್ಲಿ ತನ್ನ ಕವಿತೆಗೆ ವಸ್ತುವಾಗುವ ಮರದ ಸೃಷ್ಟಿಯ ಹಿಂದಿರುವ ದಿವ್ಯವಾದ ನಿಗೂಢ ರಹಸ್ಯದ ಕುರಿತು ಕವಿಗೆ ಬೆರಗು. ಈ ಮರವು ಕವಿಗೆ ಒಮ್ಮೆ ನೆಲ ತಾಯಿಯ ತುಂಬು ಎದೆಗೆ ಬಾಯಿ ಒತ್ತಿದ ಹಸಿದ ಮಗುವಿನಂತೆ, ಇನ್ನೊಮ್ಮೆ ಹರಡಿದ ಕೇಶರಾಶಿಯಲ್ಲಿ ಹಕ್ಕಿ ಗೂಡುಗಳನ್ನು ಜಡೆಬಿಲ್ಲೆ ಮಾಡಿಕೊಂಡ ಹೆಣ್ಣಂತೆ, ಮತ್ತೊಮ್ಮೆ ಹಸಿರು ಕೈಗಳನ್ನು ನೀಡಿ ಮೊಗವೆತ್ತಿ ದೇವರನ್ನು ಪ್ರಾರ್ಥಿಸುವ ಭಕ್ತನಂತೆ, ಯೋಗಿಯಂತೆ ಕಾಣಿಸುತ್ತ ಬೇರಿಂದ ಆಗಸದ ಕಡೆ ಚಲಿಸುತ್ತದೆ. ಕೊನೆಯಲ್ಲಿ ‘ನನ್ನಂಥ ಕತ್ತೆ ಬೇಕಾದರೂ ಕವಿತೆ ಕಟ್ಟುತ್ತೆ, ಇಂಥ ಮರ ಮಾಡಲು ಆ ದೇವರಿಗಲ್ಲದೆ ಮತ್ತೆ ಯಾರಿಗಾಗುತ್ತೆ?’ ಎನ್ನುವ ಮೂಲಕ ಕವಿತೆ ಕಟ್ಟುವುದಲ್ಲ ಸಹಜ ಹುಟ್ಟು ಎಂಬುದರ ಮೇಲೆ ಬೆಳಕು ಬೀರುತ್ತದೆ.

ವಿಶೇಷವೆಂದರೆ ‘ಕೆಲಸ’ ಎಂಬ ಕವನದಲ್ಲಿ ‘ಕೆಲಸಕ್ಕೆಂದು ಹೊರಟ ವ್ಯಕ್ತಿ ವಸಂತದ ಮರದಂತೆ ಜೀವಂತ’ ಎಂಬ ಉಪಮೆ ಬಳಸುತ್ತಾನೆ ಕವಿ. ಇಲ್ಲಿರುವುದು ಎಲೆಗಳನ್ನು ಹೊರಚಿಮ್ಮುತ್ತ ತನ್ನ ಹಸಿರು ತಾನೇ ಹೊತ್ತ ಮರವು ಬಿಳಿಬಟ್ಟೆ ತೊಟ್ಟು ನೇಯುವ ಕೆಲಸದಲ್ಲೇ ತಲ್ಲೀನನಾಗಿ ಮೈಮರೆತ ನೇಕಾರನ ಪ್ರತಿಮೆ. ಇದು ‘ಮರ’ ಕವನದ್ದೇ ಇನ್ನೊಂದು ರೂಪ ಅನಿಸುತ್ತದೆ. ‘ಋಕ್ಕುಗಳು’ ಎಂಬ ಕವನ ಕಾವ್ಯದ ವಸ್ತುಗಳ ಕುರಿತು ಆಶಯದ ಕುರಿತು, ‘ಚೆಲುವು’ ಕವಿತೆಯು ಕಾವ್ಯದ ಹುಟ್ಟಿಗೆ ಬೇಕಾದ ಸೌಂದರ್ಯ ಆಸ್ವಾದನೆಯ ಕುರಿತು ಮಾತನಾಡುತ್ತವೆ. ‘ಕಾಗದದ ನಕ್ಷತ್ರಗಳು’, ‘ಹುಲ್ಲು’, ‘ಸುಳ್ಳುಗಾರರು’, ‘ಪ್ರತಿಬಿಂಬ’, ‘ಉಗ್ಗು’ ಕವಿತೆಗಳು ಕವಿ ಅಥವಾ ಕಲಾವಿದನ ಸಹಜ ಸೃಜನಶೀಲ ಸೃಷ್ಟಿಕ್ರಿಯೆಯ ವಿವಿಧ ಆಯಾಮಗಳನ್ನು ಅರಿಯಲು, ಬಿ.ಆರ್.ಎಲ್.
ಅವರ ಅನುವಾದದ ಸ್ವರೂಪವನ್ನು. ತಿಳಿಯಲು ಸಹಕಾರಿಯಾಗಿವೆ.

ಬಿ.ಆರ್.ಎಲ್. ಅವರು ನವ್ಯ ಕಾವ್ಯವು ಉತ್ತುಂಗ ಸ್ಥಿತಿಯಲ್ಲಿದ್ದಾಗ ಬರೆಯಲು ಆರಂಭಿಸಿದವರು. ನವ್ಯವನ್ನು ಪ್ರಭಾವಿಸಿದ ಯೇಟ್ಸ್, ಆಡೆನ್ ಮುಂತಾದ ಕವಿಗಳ ಕವಿತೆಗಳನ್ನು ಅನುವಾದಿಸಿದ್ದಾರೆ. ಯೇಟ್ಸ್ ಕವಿಯ ಕವನಗಳನ್ನು ಬಹಳಷ್ಟು ಪ್ರಸಿದ್ಧ ಕವಿಗಳೇ ಅನುವಾದಿಸಿದ್ದಾರೆ. ಬಿ.ಆರ್.ಎಲ್ ಅವರು ಅನುವಾದಿಸಿರುವ ಯೇಟ್ಸ್ ನ ‘The Four Ages of Man’ ಕವಿತೆಯ ಅನುವಾದ ‘ಮನುಷ್ಯನ ನಾಲ್ಕು ವಯೋಮಾನಗಳು’ ಕವಿತೆಯನ್ನು ಮೂಲದ ಪಕ್ಕದಲ್ಲಿಟ್ಟು ನೋಡಿದಾಗ ಅನುವಾದದ ಸೊಗಸು ಗೊತ್ತಾಗುತ್ತದೆ. ಉದಾಹರಣೆಗೆ ಈ ಕವಿತೆಯ ಆರಂಭದ ನಾಲ್ಕು ಸಾಲುಗಳನ್ನು ಗಮನಿಸಿದರೆ;

He with body waged a fight,

But body won; it walks upright,

Then he struggled with the heart,

Innocence and peace depart

ಈ ಮೊದಲ ಎರಡು ದ್ವಿಪದಿಗಳ ಅನುವಾದ ಹೀಗಿದೆ;

ಯುದ್ಧ ಹೂಡಿದ ಅವನು ದೇಹದ ವಿರುದ್ಧ

ದೇಹ ಗೆದ್ದಿತು, ಎದೆ ಸೆಟೆಸಿ ನಡೆಯಿತು.

ಆ ಬಳಿಕ ಹೋರಾಡಿದ ಹೃದಯದ ವಿರುದ್ಧ

ಬಿಟ್ಟು ಹೊರಟವು ಅವನ ಮುಗ್ಧತೆ, ಶಾಂತಿ

ನಾಲ್ಕು ದ್ವಿಪದಿಗಳನ್ನು ಹೊಂದಿರುವ ಈ ಕವಿತೆಯು ದ್ವಿ ಪಾದಗಳ ಮನುಷ್ಯನು ನಾಲ್ಕು ವಯೋಮಾನದಲ್ಲಿ ಕಾಣುವ ಶರೀರ ಹಾಗೂ ಕಾಣದ ಮನಸ್ಸನ್ನು ಹೊತ್ತು ಸಾವಿನ ವಿರುದ್ಧ ನಡೆಸುವ ಜೀವನ ಹೋರಾಟದ ಯಾನ. ಮೂಲ ಕವಿತೆಯ ಲಯ, ಗತಿ, ಶೃತಿ, ಧ್ವನಿ ಕೆಡದಂತೆ ಕವಿತೆಯನ್ನು ಮುಟ್ಟಿಸುವ ಕವಿಯ ಕ್ರಿಯೆ ಇಲ್ಲಿ ನಡೆದಿರುವುದನ್ನು ಗಮನಿಸಬಹುದು.

ಬೇರೆ ಬೇರೆ ಕಾಲಘಟ್ಟದ, ಬೇರೆ ಬೇರೆದೇಶ- ಭಾಷೆಗಳ ಕವಿಗಳಾದ ಜಾಯ್ಸ್ ಕಿಲ್ಮರ್, ಡಿ.ಎಚ್.ಲಾರೆನ್ಸ್, ವಾಸ್ಕೊ ಪೋಪ, ರಾಬರ್ಟ್ ಬರ್ನ್ಸ್, ಬ್ರೆಕ್ಟ್, ಪಿತಿಕಾ ನತೂಲಿ, ಕ್ಲಾರಿಬೆಲ್ ಅಲೆಗ್ರಿಯ, ಜಾನ್ ಡನ್, ಎಮಿಲಿ ಡಿಕನ್ಸನ್ ಮುಂತಾದ ಜಗತ್ಪ್ರಸಿದ್ಧರ ಕವಿತೆಗಳ ಜತೆಗೆ ನಮ್ಮ ಹಲವು ಭಾರತೀಯ ಭಾಷೆಗಳ ಕವಿಗಳ ಕವಿತೆಗಳನ್ನೂ ಅನುವಾದಿಸಿದ್ದಾರೆ. ಪ್ರಕೃತಿ, ಶೋಷಣೆ, ಸಮಾಜವಾದ, ಪ್ರೀತಿ, ವಿರಹ, ನೋವು, ಸಾವು... ಮನುಷ್ಯರನ್ನು ಮಿಡಿಯುವ, ಕಾಡುವ ಸಂಗತಿಗಳನ್ನೇ ವಸ್ತುವಾಗಿರುವ ಕವನಗಳನ್ನು ಅನುವಾದ ಮಾಡುವ ಮೂಲಕ ಅವುಗಳ ವಸ್ತು, ಅನುಭವ, ಅಭಿವ್ಯಕ್ತಿ, ಧೋರಣೆಯು ನಮ್ಮದೇ ಆಗುವಂತೆ ಮಾಡಿದ್ದಾರೆ.

ಮನಸು ಬಾವಲಿಯಂತೆ

(ಅನುವಾದಿತ ಕವಿತೆಗಳು)

ಲೇ: ಬಿ.ಆರ್‌.ಲಕ್ಷ್ಮಣರಾವ್‌

ಪ್ರ: ಧಾತ್ರಿ ಪ್ರಕಾಶನ

ಸಂ: 9900580394

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT