ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ - ಗೌತಮ್‌ ಮರಾಠೆ | ನೃತ್ಯ ಪ್ರೀತಿಗೆ ಜೀವನ ಮಾರ್ಗದ ಭಾಷ್ಯ

Last Updated 8 ಏಪ್ರಿಲ್ 2023, 22:00 IST
ಅಕ್ಷರ ಗಾತ್ರ

ಪದವಿ ಶಿಕ್ಷಣ ಮುಗಿಸಿ ಉದ್ಯೋಗ ಗಿಟ್ಟಿಸಿಕೊಂಡು ಲಕ್ಷಗಟ್ಟಲೆ ಸಂಬಳ ಪಡೆಯುತ್ತಿರುವಾಗ ಭರತನಾಟ್ಯದತ್ತ ಆಕರ್ಷಿತರಾದವರು ಗೌತಮ್‌ ಮರಾಠೆ. ನೃತ್ಯವನ್ನು ಕಲಿತದ್ದಷ್ಟೇ ಅಲ್ಲ, ಭರತನಾಟ್ಯ ಅಭ್ಯಾಸಿಗಳಿಗೆ ಬೇಕಾಗುವ ಆಂಗಿಕ ವ್ಯಾಯಾಮದ ಪರಿಕಲ್ಪನೆಯೊಂದನ್ನು ಸಿದ್ಧಪಡಿಸಿ ಈ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗಣ್‌ ಸಂಸ್ಥೆ ಆಯೋಜಿಸಿದ ಆಂಗಿಕ ಕಾರ್ಯಾಗಾರದಲ್ಲಿ ಅವರು ಮಾತಿಗೆ ಸಿಕ್ಕರು.

ಲಕ್ಷಗಟ್ಟಲೆ ರೂಪಾಯಿ ವೇತನ ಪಡೆಯುತ್ತಿದ್ದ ನೀವು ಇದ್ದಕ್ಕಿದ್ದಂತೆ ಭರತನಾಟ್ಯದತ್ತ ಆಕರ್ಷಿತರಾದುದು ಯಾಕೆ?

ಹೀಗೇ ಎಂದು ಕಾರಣ ಕೊಡಲಾರೆ. ಆದರೆ ನೃತ್ಯದ ಬಗ್ಗೆ ಬಹಳ ಒಲವಿದ್ದ ನಾನು ಜಾಝ್‌ ಕಲಿತಿದ್ದೆ. ಭರತನಾಟ್ಯವನ್ನೂ ಕಲಿಯಬೇಕು ಎಂದು ತೀವ್ರವಾಗಿ ಅನಿಸಿದಾಗ ನಾನು ಗುರು ವೈಭವ್‌ ಅರೇಕರ್ ಅವರನ್ನು ಭೇಟಿಯಾಗಿ ನನ್ನಾಸೆಯನ್ನು ಹೇಳಿಕೊಂಡೆ. ನೆನಪಿದೆ ಆದಿನ. ಎಚ್‌.ಆರ್‌. ಮ್ಯಾನೇಜರ್‌ ಆಗಿದ್ದ ನಾನು ಆಫೀಸಿನಿಂದ ನೇರವಾಗಿ ಡಾನ್ಸ್‌ ಕ್ಲಾಸ್‌ಗೆ ಹೋಗಿದ್ದು. ಫಾರ್ಮಲ್ಸ್‌ನಲ್ಲಿಯೇ ಅಂದು ಮೊದಲ ಹೆಜ್ಜೆಗಳನ್ನು ಬಹಳ ಕಷ್ಟಪಟ್ಟು ಹಾಕಿದ್ದೆ. ಅವೆಲ್ಲವೂ ನೆನಪಿದೆ. ಭರತನಾಟ್ಯ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು. ಲಕ್ಷಾಂತರ ರೂಪಾಯಿ ಸಂಬಳ ಬಂದಾಗ ಆಗದೇ ಇದ್ದ ಖುಷಿ ಈ ಭರತನಾಟ್ಯ ಪ್ರಸ್ತುತಿಯಲ್ಲಿ ಸಿಕ್ಕಿತು. ನಾನು ದೈಹಿಕವಾಗಿ, ಭಾವನಾತ್ಮಕವಾಗಿ ಬಹಳಷ್ಟು ವಿಚಾರಗಳನ್ನು ಕಲಿತೆ. ಬದಲಾದೆ. ನೃತ್ಯದ ಸಲುವಾಗಿ ನನ್ನ ಹುಟ್ಟೂರು ಪುಣೆಯಿಂದ ಮುಂಬೈಗೆ ತೆರಳಿ ನೆಲೆನಿಂತೆ.

ಭಾವನಾತ್ಮಕ ಬದಲಾವಣೆ ಅಂದರೆ ಹೇಗೆ ?

ಮನುಷ್ಯ ಶಿಕ್ಷಣ, ಉದ್ಯೋಗ ವೇತನಕ್ಕೆ ಸೀಮಿತವಾಗಿದ್ದರೆ ಅದು ಆಲೋಚನೆಯನ್ನು ಸೀಮಿತಗೊಳಿಸುತ್ತದೆ. ಜೊತೆಗೆ ವಯಸ್ಸಿನ ಹಮ್ಮು ಸೇರಿಕೊಂಡು ಎನಗಿಂತ ಮಿಗಿಲಾರಿಲ್ಲ ಎಂದು ಭಾವಿಸುವಂತೆ ಮಾಡುತ್ತದೇನೋ. ಆದರೆ ಭರತನಾಟ್ಯ ಕಲಿಯುತ್ತ ನಾನು, ಈ ಜಗತ್ತಿನ ಅನಂತತೆ, ನಮ್ಮ ಕಲಾಪರಂಪರೆಯ ವಿಸ್ತಾರವನ್ನು ಗ್ರಹಿಸಿದೆ. ಆಗ ಸಹಜವಾಗಿಯೇ ವಿನಯವಂತಿಕೆಯು ಬರುತ್ತದೆ. ಬದುಕಿನಲ್ಲಿ ಆವರೆಗೆ ಕಾಣದ ಎಷ್ಟೋ ಸುಂದರ ವಿಷಯಗಳು ಕಾಣಿಸಲು ಶುರುವಾದವು. ಇದು ನನ್ನ ಭಾವನಾತ್ಮಕ ಗ್ರಹಿಕೆಯ ಸ್ವರೂಪವನ್ನು ಬದಲಾಯಿಸಿತು.

ಅಷ್ಟು ತಡವಾಗಿ ನೃತ್ಯ ಕಲಿತ ಬಳಿಕ ನೀವು, ದೇಹ ಭಾವವನ್ನು ತಿದ್ದುವ ‘ಆಂಗಿಕ’ ಎಂಬ ವ್ಯಾಯಾಮ ಪರಿಕಲ್ಪನೆಯನ್ನು ರೂಪಿಸಿದಿರಿ. ಅದರ ಬಗ್ಗೆ ಹೇಳಿ?

ಭರತನಾಟ್ಯ ಕಲಿಯುವ ಸಂದರ್ಭದಲ್ಲಿ ನನ್ನೊಳಗೆ ಹುಟ್ಟಿಕೊಂಡ ಯೋಚನೆಯಿದು. ನೃತ್ಯಪಟುವು ತನ್ನ ದೇಹವನ್ನು ಪಾತ್ರೆಯೆಂದು ಭಾವಿಸಿ ಅದರಲ್ಲಿ ಯಾವುದೇ ರಸ, ಭಾವವನ್ನು ಆವಾಹಿಸಿಕೊಂಡು ಪ್ರಸ್ತುತಪಡಿಸಲು ಸಮರ್ಥರಿರಬೇಕು. ಪ್ರತಿಯೊಬ್ಬ ನೃತ್ಯಪಟುವಿಗೂ ‘ನಾಟ್ಯದ ಆಯುಸ್ಸು’ ಎಂಬುದೊಂದು ಇರುತ್ತದೆ. ನಮ್ಮ ಜೀವನವಾಧಿಯಲ್ಲಿ ನಾವು ಎಷ್ಟು ಅವಧಿ ನೃತ್ಯ ಮಾಡುತ್ತೇವೆಯೋ ಆ ಅವಧಿ. ದೇಹವೆಂಬ ಪಾತ್ರೆಯು ಸದೃಢವಾಗಿಯೂ, ಸ್ವೀಕಾರ ಭಾವದಲ್ಲಿಯೂ ಇದ್ದಾಗ ನಾಟ್ಯದಾಯುಸ್ಸು ದೀರ್ಘವಾಗುತ್ತದೆ. ಹಾಗಿದ್ದರೆ ದೇಹವನ್ನು ಸಬಲಗೊಳಿಸಲು ನೃತ್ಯಪಟುವು ಏನೇನು ಮಾಡಬೇಕು ಎಂದು ಯೋಚಿಸಿ, ಆಂಗಿಕ ವ್ಯಾಯಾಮದ ರೂಪುರೇಷೆ ತಯಾರಿಸಿದೆ. ಯೋಗ, ಕಳರಿಪಯಟ್ಟುವಿನ ಅಂಶಗಳು ಇದರಲ್ಲಿವೆ. ನೃತ್ಯಪಟುವು ಪ್ರತಿಯೊಂದು ಅಡವನ್ನು ಪ್ರಸ್ತುತಪಡಿಸಲು ಪೂರಕವಾಗಿ ದೇಹವನ್ನು ದಂಡಿಸಿ ಹೇಗೆ ಸಜ್ಜುಗೊಳಿಸಬೇಕು ಎಂಬುದನ್ನು ಇದು ಹೇಳುತ್ತದೆ. ಗುರು ವೈಭವ್‌ ಅರೇಕರ್‌ ಅವರ ಸಾಂಖ್ಯ ಡಾನ್ಸ್‌ ಕ್ರಿಯೇಶನ್‌, ನನ್ನಮ್ಮ ಮಾಧವಿ ಮರಾಠೆ, ಅಪ್ಪ ರಾಮಚಂದ್ರ ಮರಾಠೆ, ಅಣ್ಣ ಗೌರವ್‌ ನನ್ನ ಈ ಹೊಸ ಪ್ರಯತ್ನವನ್ನು ಬೆಂಬಲಿಸಿದ್ದರಿಂದ ನಾನಿಷ್ಟು ಮುಂದುವರೆದೆ. ಇದು ಭರತನಾಟ್ಯ ಅಭ್ಯಾಸಿಗಳಿಗೆ ಮಾತ್ರ ಮೀಸಲಾಗಿರುವ ವ್ಯಾಯಾಮ ವಿಧಾನ.

ಹೊಸ ನೃತ್ಯಪರಿಕಲ್ಪನೆಗಳನ್ನು ಹೇಗೆ ರೂಪಿಸುತ್ತೀರಿ ?

ಸಾಂಖ್ಯ ನೃತ್ಯ ಸಂಸ್ಥೆಯ ಎಲ್ಲ ಸದಸ್ಯರೂ ಒಟ್ಟಾಗಿ ಹೊಸ ಪರಿಕಲ್ಪನೆಗೆ ಕೆಲಸ ಮಾಡುತ್ತೇವೆ. ಸುಮ್ಮನೇ ಒಂದು ಹಾಡಿಗೆ ವಿವಿಧ ಸ್ಟೆಪ್‌ಗಳನ್ನು ಹಾಕಿದರೆ ಅಲ್ಲಿ ಜೀವಂತಿಕೆ ಇರಲು ಸಾಧ್ಯವಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ತೀವ್ರವಾದ ಅಧ್ಯಯನ ಮುಖ್ಯ. ಅಷ್ಟೇ ಮುಖ್ಯವಾದುದು ಸಾಮಾಜಿಕ ಚಟುವಟಿಕೆಗಳ ಗಮನಿಸುವಿಕೆ. ಗದ್ದೆಯೊಂದರಲ್ಲಿ ಕೃಷಿಕರು ಹೇಗೆ ಕೆಲಸ ಮಾಡುತ್ತಾರೆ, ಮಾವಿನ ತೋಪಿನ ವಾತಾವರಣ ಹೇಗಿರುತ್ತದೆ, ಗ್ರಾಮವೊಂದರ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನು ಗಮನಿಸುವುದಕ್ಕೆ ಬಹಳ ಸಮಯ ಮೀಸಲಿಡುತ್ತೇವೆ. ಇತರ ಕಲಾಪ್ರಕಾರಗಳ ಗಮನಿಸುವಿಕೆ, ಪುರಾಣ ಪಠ್ಯಗಳ ಓದು, ವಿದೇಶೀ ಪೌರಾಣಿಕ ಕಥೆಗಳ ಕಲಿಕೆ, ಅದರೊಂದಿಗೆ ಸಮಕಾಲೀನ ಸಾಹಿತ್ಯ–ಸಾಂಸ್ಕೃತಿಕ ಚಟುವಟಿಕೆಗಳ ಗಮನಿಸುವಿಕೆ– ಇವೆಲ್ಲವೂ ಇದ್ದಾಗ ಮಾತ್ರ ಹೊಸ ಪರಿಕಲ್ಪನೆಯನ್ನು ಸಿದ್ಧಪಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT