ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲ್ವತ್ತರ ಸಂಭ್ರಮದಲ್ಲಿ ನೂಪುರ ನೃತ್ಯ ಶಾಲೆ

Last Updated 18 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಸಂಗೀತ, ಚಿತ್ರಕಲೆಗಳಂತೆಯೇ ನೃತ್ಯದಲ್ಲೂ ಸಹ ‘ಮೈಸೂರು ಶೈಲಿ’ ಶತಮಾನಗಳಿಂದ ಬೆಳಗುತ್ತಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಉಳಿಸಿ ಬೆಳಿಸಿಕೊಂಡು ಹೋಗುತ್ತಿರುವ ಸಂಸ್ಥೆಗಳಲ್ಲಿ ನಗರದ‘ನೂಪುರ’ ಮುಂಚೂಣಿಯಲ್ಲಿದೆ.

ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನೂಪುರ ನೃತ್ಯ ಶಾಲೆಯು ತನ್ನ 40ನೇ ವಾರ್ಷಿಕೋತ್ಸವ ಅಂಗವಾಗಿ5 ದಿನಗಳ ನೃತ್ಯೋತ್ಸವವನ್ನು (ಡಿ. 22, 23, 24 ಹಾಗೂ 29 ಮತ್ತು 30) ನಗರದಲ್ಲಿ ಹಮ್ಮಿಕೊಂಡಿದೆ.

‘ನೂಪುರ’ವನ್ನು1978ರಲ್ಲಿ ಡಾ.ಲಲಿತಾ ಶ್ರೀನಿವಾಸನ್ ಸ್ಥಾಪಿಸಿದರು. ಈ ಸಂಸ್ಥೆಯು ಈವರೆಗೆ ನೂರಾರು ಕಲಾಪ್ರೇಮಿಗಳಿಗೆ ಭರತನಾಟ್ಯ ಕಲಿಸಿದೆ ಹಾಗೂ ಕಲಿಸುತ್ತಿದೆ. ಎಚ್.ಆರ್.ಕೇಶವಮೂರ್ತಿ ಅವರ ಬಳಿ ದಶಕಗಳ ಕಾಲ ನೃತ್ಯ ಕಲಿತವರು ಲಲಿತಾ. ಪದ್ಮಭೂಷಣ ಪ್ರಶಸ್ತಿ ವಿಜೇತೆ ಡಾ.ಕೆ.ವೆಂಕಟಲಕ್ಷಮ್ಮ ಅವರ ಬಳಿ ಮ್ಯೆಸೂರು ಶೈಲಿಯಲ್ಲಿ ವಿಶೇಷ ತರಬೇತಿ ಪಡೆದರು.

‘ಶಾಂತಳಾ ಪ್ರಶಸ್ತಿ’ ವಿಜೇತರೂ ಆದ ಲಲಿತಾ ಶ್ರೀನಿವಾಸನ್ ತನ್ನ ಪಠ್ಯಕ್ರಮದಲ್ಲಿ ಚೂರ್ಣಿಕೆ, ಪದ, ಕಂದ, ಅಷ್ಟಪದಿ, ಶ್ಲೋಕ, ಅಮರು, ಲೀಲಾಶುಕ, ಕ್ಷೇತ್ರಜ್ಞ, ಜಯದೇವ- ಮುಂತಾದ ಪ್ರಮುಖ ಕೃತಿಗಳನ್ನು ಅಳವಡಿಸಿಕೊಂಡಿದ್ದಾರೆ.

‘ನೂಪೂರ’ದ ವಿದ್ಯಾರ್ಥಿನಿಯರು ಮ್ಯೆಸೂರು ಬಾನಿಯ ಸಮರ್ಥ ರಾಯಭಾರಿಗಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಲ್ಲಿ ನೃತ್ಯದ ಜೊತೆಗೆ ಸಂಗೀತ ಕಲಿಕೆಯೂ ವಿದ್ಯಾರ್ಥಿಗಳಿಗೆ ಕಡ್ಡಾಯ. ‘ನೂಪುರ’ವು ಸುಸಜ್ಜಿತ ಪುಸ್ತಕ ಭಂಡಾರ ಹೊಂದಿದೆ. ನಟುವಾಂಗದಲ್ಲೂ ತರಬೇತಿ ಹಾಗೂ ಆಗಾಗ್ಗೆ ನಡೆಸುವ ಕಾರ್ಯಾಗಾರಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಿದೆ.

ನಲ್ವತ್ತು ವರ್ಷಗಳಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೈಸೂರು ಶೈಲಿಯ ಭರತನಾಟ್ಯದಲ್ಲಿ ಶಿಕ್ಷಣ ನೀಡಿ, 42 ರಂಗ ಪ್ರವೇಶಗಳನ್ನು ನಿರ್ವಹಿಸಿದ ಖ್ಯಾತಿ ನೂಪುರಕ್ಕಿದೆ. ‘ನೂಪುರ’ದ ಇನ್ನೊಂದು ಹೆಗ್ಗಳಿಕೆ ಎಂದರೆ ಅದು ನೃತ್ಯ ರೂಪಕ.

ಶ್ರೀಕೃಷ್ಣ ಪಾರಿಜಾತ, ದೇವಕನ್ನಿಕಾ ಆಂಡಾಳ್, ತ್ಯಾಗರಾಜರ ಕೀರ್ತನೆಗಳನ್ನಾಧರಿಸಿದ ‘ಕೌಶಿಕ ಸುಕ್ರುತಂ’ -ನೂಪುರದ ಜನಾನುರಾಗಿ ನೃತ್ಯ ನಾಟಕಗಳಲ್ಲಿ ಕೆಲವು. ಕುವೆಂಪು ವಿರಚಿತ ‘ಚಿತ್ರಾಂಗದ’ವನ್ನು ಅವರ ಸಮ್ಮುಖದಲ್ಲೇ ಅಭಿನಯಿಸುವ ಭಾಗ್ಯವು ಈ ಸಂಸ್ಥೆಗೆ ಲಭಿಸಿತ್ತು. ನೂಪುರದ ವಿದ್ಯಾರ್ಥಿನಿಯರು ಇಂದು ಕೆನಡಾ, ಅರಬ್, ಇಂಗ್ಲೆಂಡ್, ಅಮೆರಿಕದಲ್ಲೂ ಶಾಲೆಗಳನ್ನು ನಡೆಸುತ್ತಾ ಮೈಸೂರು ನೃತ್ಯ ಸೌರಭವನ್ನು ಪಸರಿಸುತ್ತಾ ಇರುವುದು, ಸಂತೋಷದ ವಿಷಯ. ನಲ್ವತ್ತರ ವರ್ಧಂತಿಗೆ ನೂಪುರ ತನ್ನ ಶಿಷ್ಯರುಗಳಿಂದ 5 ದಿನಗಳ ನೃತ್ಯೋತ್ಸವನ್ನು ಏರ್ಪಡಿಸಿರುವುದು ಸಮಯೋಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT