ಒಬ್ಬೊಬ್ಬರ ಪಯಣ ಮುಗಿದಂತೆ ಅಗಲಬೇಕು. ನನ್ನೊಡನೆ ಪ್ರಯಾಣದಲ್ಲಿದ್ದ ಗಂಡ, ಅತ್ತೆ– ಮಾವ, ಅಕ್ಕ, ಅಜ್ಜಿ, ಅಜ್ಜ ಎಷ್ಟೊಂದು ಜನ ಪಯಣ ಮುಗಿಸಿದ್ದಾರೆ. ನಾನಿನ್ನೂ ಪಯಣದಲ್ಲಿದ್ದೇನೆ. ಮುಗಿದಾಗ ಸೀಟಿ ಊದಿ ಬಿಡುತ್ತಾನೆ ನಿರ್ವಾಹಕ.

ನಡೆಯಲಾರದ ದೂರಕ್ಕೆ ಏರಿದ್ದು ಸಂಚಾರಿ ಭಾವದ ಸ್ಥಾಯಿ ಬಸ್ಸು. ಹತ್ತಿ ಇಳಿದು, ಇಳಿದು ಹತ್ತಿ ಅರ್ಧ ಶತಕವನ್ನೇ ಬಾರಿಸಿದೆ. ಗೊತ್ತಿಲ್ಲ ಶತಕ ಬಾರಿಸುವುದಿದೆಯೋ ಏನೋ. ಉತ್ತರ ಮೇಲಿನ ಚಾಲಕನಲ್ಲಿದೆ.

ಒಮ್ಮೊಮ್ಮೆ ಬಸ್ಸು ಹಿಡಿಯಲಾರದೇ ತಪ್ಪಿಸಿಕೊಂಡಿದ್ದರೂ ಒಡನಾಟ ತಪ್ಪಿಲ್ಲ. ಸುಟ್ಟುಸುಟ್ಟು ಕುದಿ ಹಿಡಿದ ಸಾರು ಕುದ್ದಷ್ಟು ಮತ್ತಿಷ್ಟು ರುಚಿ ಹೆಚ್ಚಾಗಿ ನಾಲಿಗೆಗೆ ಒಪ್ಪುವಂತೆ, ಹೊಗೆ ಕಾರೀ ಕಾರೀ ಕಡು ಬೇಸಿಗೆಯಲ್ಲಂತೂ ಕುದಿಸಿ ಕುದಿಸಿ ನೀರಿಳಿಸಿಯೇ ಕೆಳಗಿಳಿಸಿದೆ.. ಓಡುವ ಬಸ್ಸು ಮುಂದೆ ಮುಂದೆ ಸಾಗಿ ಹಿಂದೆ ಹಿಂದೆ ನನ್ನ ಓಡಿಸಿ ಹೈರಾಣು ಮಾಡಿದೆ. ಎದುರಿಸಿ ಬಿಟ್ಟಿದ್ದನ್ನು ಬಾಗಿ ತನ್ನೊಳಗೆ ಕಂಡ ಕನ್ನಡಿಯೊಳಗೂ ಪ್ರತಿಬಿಂಬಿಸಿದೆ. ಬಾ ಎಂದು ಬಾಗಿಲು ತೆರೆದು ಕೂಡಿಸಿಕೊಂಡ ಬಸ್ಸು ಸ್ನೇಹ ಚಿರಂತನ. ಅಪ್ಪನ ಬಿಟ್ಟರೆ, ತಾಳಿಕಟ್ಟುವ ಮುನ್ನ ತೂಕ ಪರೀಕ್ಷೆ ಮಾಡಲು ಗಂಡ ಧಾರೆಯಲ್ಲಿ ಎತ್ತಿಕೊಂಡದ್ದು. ಅದು ಬಿಟ್ಟರೆ ತಪ್ಪದೇ ಹೊತ್ತುಕೊಂಡು ತಿರುಗಿದ್ದು ಈ ಬಸ್ಸು .

ಕಣ್ಣು ಹೊಡೆವ ಕಳ್ಳಬೆಕ್ಕಿನಂತಹ ಪಡ್ಡೆ ಹುಡುಗರು, ಮುಂಗುರುಳು ತೀಡಿ ಕಣ್ಣಸನ್ನೆ ಕಾಡಿಗೆಯಲೇ ಹುಡುಗರ ಎದೆಯಲ್ಲಿ ಚಿತ್ರವಿಳಿಸುವ ಹೊಸ ಕಾಲೇಜು ಹುಡುಗಿಯರು. ಬಸ್ಸು ಸಿಕ್ಕ ಖುಷಿಯಲ್ಲಿ ಕಾಲು ಕೈ, ಮೈ, ಭುಜ ಒಂದನ್ನೂ ಲೆಕ್ಕಿಸದೇ ಕಚಪಚ ತುಳಿಯುತ್ತ ಮುಂದೆ ಸಾಗುವ ಮಧ್ಯವಯಸ್ಕರು. ‘ತಲ್ಲಣಿಸದಿರು ಕಂಡ್ಯ ತಾಳು ಸೀಟು ಬಂದೆ’ ಎಂದು ಹಿಡಿದ ಸೀಟಿಗೆ ಹೋಗಿ ತಲುಪುವುದರೊಳಗೆ ಗೋವಿಂದ. ಇಳಿಯುವ ಜಾಗ ಬಂದೇ ಬಿಟ್ಟಿರುತ್ತೆ. ‘ಬಂದೇ ಪಿಶಾಚಿ ಎಂದರೆ ಹೋದೆ ಗವಾಕ್ಷಿಲಿ’ ಅಂತ ಬಂದ ದಾರಿಗೆ ಸುಂಕವಿಲ್ಲದಂತೆ ಇಳಿದು ಹೋಗುವ ಬಸ್ಸಿನಲ್ಲಿ ಓಡಾಡುವ ಸಾಲಿ ಕಲಿಸೋ ನಮ್ಮಂತ ಅಕ್ಕೋರ ಗೋಳು. ಎಲ್ಲಿಗೆ ನಿನ್ನ ಬಸ್ಸು ಸ್ಟಾಪೋ, ಅಲ್ಲಿಂದ ಒಂದು ಮೊಳನೂ ಮುಂದಕ್ಕೆ ಇಳಿಸದೇ ನಿಂತು ಬಿಡುವ ಬಸ್ಸು. ಭಾವನೆಗಳಿಗೆ ಮೀರಿ ಮನಸಿನ ಮೂಲೆಯಲ್ಲಿ ಹಿಂದಿನ ಸೀಟು ಲಗ್ಗೆ ಹಾಕಿದೆ. ಕಾಣದಂತೆ ಕೂತು ನಿದ್ದೆ ಹೊಡೆದು ಎದ್ದು ಹೋಗುವ ಹಿಂದಿನ ಬೆಂಚಿನ ಹುಡುಗರಂತೆ ಕಚಗುಳಿ ಕೊಡುತ್ತದೆ. ಸ್ವರ್ಗ ಬೇಕೆಂದರೆ ಒಮ್ಮೆ ಉದ್ದನೆಯ ಸೀಟಿನಲ್ಲಿ ಹಿಂದೆ ಪವಡಿಸಬೇಕು.

ನಮ್ಮೂರಿಗೆ ನಿತ್ಯವೂ ಬೆಳಗಿನ ಜಾವಕ್ಕೆ ಬಿಡುವ ಬಸ್ಸು . ಹುಡುಕಿದರೂ ನರಪಿಳ್ಳೆ ಗಂಡು ಸಂತಾನವಿಲ್ಲದ ಹೆಣಗರುಳಿಂದು. ಹೊನ್ನಗುಂದ ಸಂತಿಯಲ್ಲಿ ಸಂಸಾರಕ್ಕೆ ಕಾಯಿಪಲ್ಲೇ ಮಾರೋ ಹೆಣ್‌ಮಕ್ಕಳನ್ನು ಪ್ರತಿ ಸ್ಟಾಪ್‌ಗೆ ನಿಂತು ನಿಂತು ಸೀಟಿ ಊದಿ ಊದಿ ಹತ್ತಿಸಿಕೊಂಡು ಬರುತ್ತೆ. ಸೀಟಿ ಹೊಡೆದರೆ ಏರತೀವಿ ಅಂತ ಯಾರಾದರೂ ಸೀಟಿ ಹೊಡೆದರೆ, ‘ಕುಂಡಿ ಕಡಿತೈತಿ ಭಾಡ್ಯಾ ಹಳೇ ಭಾಡ್ಯಾ’ ಅಂತ ಅನಸಿಕೊಂಡು ಮುಚಕೊಂಡು ಕೂಡಬೇಕು ಸೀಟಿ ಹೊಡಿಯಾಕ ಲೈಸನ್ಸ್ ಇಲ್ಲದವರು.

ಚಿಲ್ಲರೆ ಇದ್ದವರೆಲ್ಲ ಚಿಲ್ಲರೆಯವರು. ಚಿಲ್ಲರೆ ನಡೆಯುತ್ತೆ ಬಸ್ಸಲ್ಲಿ. ಮೊನ್ನೆ ಚಿಲ್ಲರೆ ಹೊಂದಿಸಿಕೊಟ್ಟ ಕಂಡಕ್ಟರ್ ‘ನೋಡ್ರಿ ಇವರಿಂದ ನಾಲ್ಕು ರೂಪಾಯಿ ಇಸಿದುಕೊಳ್ಳಿರಿ. ಒಂದು ರೂಪಾಯಿ ಅವರಿಗೆ ಕೊಡ್ರಿ. ನಿಮ್ಮ ಮೂರು ರೂಪಾಯಿ ಚುಕ್ತಾ ಆಯಿತು. ರೈಟ್ ರೈಟ್’ ಎಂದವ ಪರಾರಿ. ರೂಪಾಯಿ ಬೆನ್ನಿಗೆ ನಕ್ಷತ್ರಿಕನಂತೆ ‘ಅಕ್ಕೋರ ಕೊಡ್ರಿ ಕೊಡ್ರಿ..’ ಅಂತ ದುಂಬಾಲು ಬಿದ್ದ. ಮಂದಿ ಕಣ್ಣು ಚಿಲ್ಲರೆಗೆ ನಿಂತವಳ ಮೇಲೆ. ಚಿಲ್ಲರೆ ಸಹವಾಸಕ್ಕಂಜಿ ಒಂದು ರೂಪಾಯಿಗೆ ನಾಲ್ಕು ರೂಪಾಯಿ ಕೊಟ್ಟೆ. ಇದೆಲ್ಲ ದಿನದ ಲೆಕ್ಕಕ್ಕಿಟ್ಟಿಲ್ಲ. ಕಳೆದುಕೊಳ್ಳೋದನ್ನು ಲೆಕ್ಕಾ ಹಾಕಬಾರದು ಅನ್ನೋ ಹಿರಿಯರ ಪಾಠ ಇಲ್ಲಿ ವರ್ಕಔಟ್.

ಬಸ್ಸಿನಲ್ಲಿ ಓದತಾನೇ ಏರಿ ಇಳಿತಿದ್ದೆ. ಡಿವಿಜಿ, ಕಣವಿ, ಬೇಂದ್ರೆ, ಕುವೆಂಪು, ಪಂಪ, ಕಾವ್ಯಾನಂದ, ಶಿವರುದ್ರಪ್ಪ ... ಹೀಗೆ.

ಮಂಕುತಿಮ್ಮನ ಸಾಲುಗಳವು..

ಇರುವ ಭಾಗ್ಯವ ನೆನೆದು
ಬಾರೆನೆಂಬುದನು ಬಿಡು
ಹರುಷಕ್ಕಿದೆ ದಾರಿ

ಆದರೆ ಇದು

ಬ್ರೇಕ್ ಹಾಕೋದರಲ್ಲಿ
ಭಾಗ್ಯ ನೆನೆ
ಬಾರೆ
ಹರುಷಕ್ಕಿದೆ ದಾರಿ

ಎಂದಾಗಿತ್ತು.

ಓದಿ ಹೌದೆನಬೇಕೋ ಹೌಹಾರಿ ಕೆಳಗಿಳಿಬೇಕೋ ತಿಳಿಯದೇ ಅಹಲ್ಯೆಯಾದವಳನ್ನು ಕಾಣದ ಕೈ ಮುಂದೆ ದಬ್ಬಿತು. ಅಕ್ಷರ ಮಾಯಾ ಮಾಡಿದ ಮೋಡಿಕಾರರಿಗೆ ಪರವಶಳಾಗಿ ನನ್ ಸ್ಟಾಪ್ ಮರೆತು ಇನ್ನಾರದೋ ಸ್ಟಾಪ್‌ಗೆ ಇಳಿದೆ. ದಾರಿಗೆ ಸುಂಕವಿಲ್ಲದೆ ಕಾಲೆಳೆದುಕೊಂಡು ಮನೆ ತಲುಪಿದ್ದು ಏರಿದ ಬಸ್ಸು ಬಾಯಿ ಮುಚ್ಚಿಕೊಂಡು ಕೆತ್ತಿಸಿಕೊಂಡಿದ್ದರಿಂದಲೇ.

ನೌಕರಿಗೆ ಬಸ್ಸಿನಲ್ಲಿ ಅಪ್ ಅಂಡ್ ಡೌನ್ ಹುರುಪು. ಜೊತೆಗೆ ಹೊಸ ಸೀರಿ ಕಂಡು ಮಾಡೋರ ತಾರೀಫು. ತಾಸಿನ ದಾರಿಯೋ, ಹದಿನೈದೇ ನಿಮಿಷದ ಹಾದಿನೋ.. ಹದಿನೈದು ಗುಣದವರು. ಪಕ್ಕದಲ್ಲಿ ಕುಂತು ಇಳಿದವರು, ಅಡ್ರೆಸ್ ಕೇಳಿ ವಿಳಾಸ ಕೊಟ್ಟು ಕರೆದವರು, ಬಾರದ ವಾಂತಿಗೆ ಕಿಟಕಿ ಸೀಟಿಗೆ ಲಗ್ಗೆ ಹಾಕಿದವರು, ತಂಗಿ ಅತ್ತ್ ಸರಿ ಎಂದು ನನ್ನ ಭುಜ ತಮ್ಮನೆ ಪುಗಸೊಟ್ಟಿ ತಲೆದಿಂಬ ಮಾಡಿ ನಿದ್ದಿ ಹೊಡೆದವರು, ಜರಾ ಎತ್ತಿಕೋರಿ ಎಂದು ಚಡ್ಡಿ ಹಾಕದ ಮಗುನ್ನ ತೊಡೆ ಮೇಲೆ ನಾನೇ ಹಡೆದೆನೇನೋ ಅನ್ನುವಂಗ ಕುಕ್ಕರಿಸಿ ಅದರ ಹೇಲು ಉಚ್ಚಿ ಸೆರಗಿಗೆ ಕಟ್ಟಿದವರು. ನಿತಂಬ ಭುಜಕ್ಕಚ್ಚಿದವರನ್ನ ‘ಸೀದಾ ನಿಂತಕೋರಿ’ ಎಂದದ್ದ ತಪ್ಪಾಗಿ, ನಿಂತ ಕಷ್ಟ ಕುಂತದ್ದಕ್ಕೇನು ಗೊತ್ತು! ಎಂದು ಗುದಮರಗಿ ಆಡಿ ಕೈಕಾಲು ಆಡಿಸಿದಂಗ ಕೂಡಿಸಿದವರು, ಕಂಡಕ್ಟರ್ ಕಣ್ಣ ತಪ್ಪಿಸಿ ಬೀಡಿ ದಮ್ಮು ಎಳೆಯೋರು, ಗುಟಕಾ ಹಾಕ್ಕೊಂಡು ಮೈಮೇಲೆ ಬಿದ್ದು ಕಿಟಕಿಗೆ ಉಗಿಲಿಕ್ಕೆ ಹೋಗಿ ಎಂಜಲು ಪ್ರೋಕ್ಷಣೆ ಮಾಡಿದವರು. ಆರನೆಯತ್ತೇ ಮಕ್ಕಳನ್ನು ಆರು ವರ್ಷ ಆಗಿಲ್ಲ ಎಂದು ಅರ್ಧ ಟಿಕೇಟು ತೆಗಿಸದೇ ಬಸ್ಸಿಗೆ ಟೋಪಿ ಹಾಕೋರು ಎಲ್ಲಾ. ಕೆಲವರು ಈಗಲೂ ಫೋನಾಯಿಸಿ ‘ನಾನೇರೀ ನಿಮ್ಮ ಬಸ್‌ಮೇಟ್’ ಎಂದಾಗ ಕ್ಲಾಸ್‌ಮೇಟ್, ರೂಮ್‌ಮೇಟ್, ಫ್ಯಾಮಿಲಿಮೇಟ್ ಜೊತೆ ಬಸ್‌ಮೇಟ್‌ಗೂ ಹತ್ತಿರವಾದೆ.

ಈಗ ಯಾರ ಉಸಾಬರೀನೆ ಬೇಡಾ ಅಂತ ಮೊಬೈಲ್‌ನಲ್ಲಿ ಮುಖ ಇಟಕೊಂಡ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಮುಖ ಕಾಣದಂಗ ಕುಂತವರೇ! ಕಣ್ಣ ಮುಚ್ಚಿ ಧ್ಯಾನಕ್ಕಿಳಿದವರಂಗ ಇಯರ್ ವಾಯರ್ ಕಿವಿಗಿ ಇಟ್ಟು ಹಾಡು ಕೇಳೋದೋ, ಹಾಡೋರಿಗೆ ಮರಳಾಗೋದೋ? ಒಬ್ಬರಾ ಇಬ್ಬರಾ ಸಾವಿರದ ಮಂದಿ ಭೇಟಿಯಾಗಿದ್ದರೂ ಒಬ್ಬರೂ ಮೂಸಿನೋಡಲ್ಲ.

ಅಂದು ಡ್ಯೂಟಿ ಮೇಲೆ ಧಾರವಾಡದಿಂದ ಬರೋದು ತಡವಾಗತಿತ್ತು. ಆ ಕೊರೆವ ಚಳಿಯಲ್ಲಿ 80 ವರ್ಷದ ಮಾವ ಬಸ್ಸಿನ ಹಾದಿ ಕಾಯತಾ ಶಥಪಥ ಲೆಕ್ಕಹಾಕತಿದ್ದರು. ಬಸ್ಸು ಇಳಿದವಳ ಮುಂದೆ ನಿಂತ ಮಾಮಾರ ಮುಖ ನೋಡಿದ ತಕ್ಷಣ ಬಳಲಿಕೆ ಸರ‍್ರಂತ ಇಳಿದಿದ್ದು ನೆನಪು ಮಾತ್ರ. ಈಗ ಪ್ರತಿ ಬಾರಿ ಬಸ್ಸಿಳಿದು ಒಂಟಿಯಾಗಿ ಹೋಗುವಾಗ ಕತ್ತಲಲ್ಲಿ ಕರಗಿ ಹೋಗಿರುವ ಬಸ್ಸಿನ ಜೊತೆ ಮಾವನೂ ಕಾಣುವುದಿಲ್ಲ.

ಸಹ ಪ್ರಯಾಣಿಕಳವಳು. ಬಸ್ಸು ಅಲುಗಾಡಿಸುವಂತೆ ಅವಳನ್ನು ಅಲುಗಾಡಿಸಿದೆ. ಮಾತು ತೂಕದ್ದು, ಇದ್ದೊಬ್ಬ ಮಗನ ವಿದ್ಯಾಭ್ಯಾಸಕ್ಕಾಗಿ ಬಸ್ಸು ಹತ್ತಿ ಪಟ್ಟಣಕ್ಕೆ ಬಂದರು. ರೆಕ್ಕೆಬಲಿತ ಮಗ ಇಲ್ಲೆಲ್ಲೂ ನೆರಳೇ ಇಲ್ಲವೆಂಬಂತೆ ಅಮೆರಿಕದಲ್ಲಿ ಗೂಡು ಕಟ್ಟಿಕೊಂಡ. ವರ್ಷಗಳುರುಳಿದರೂ ತಾಯಿ– ತಂದೆ ನೆನಪಾಗಲಿಲ್ಲ. ಒಂದಿನ ಗಂಡ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ. ‘ನಮ್ಮಿಬ್ಬರಲ್ಲಿ ನಾನೇ ಮೊದಲು ಹೋದರೆ ಯಾವುದಾದರೂ ವೃದ್ಧಾಶ್ರಮ ಸೇರು’ ಎಂದ. ‘ಸುಮ್ಮನಿರಿ ಮುತ್ತೈದೆಯಾಗಿ ಸಾಯಿತೀನಿ’ ಎನ್ನುತ್ತಲೇ ವಾಕಿಂಗ್ ಮುಗಿಸಿ ಬಂದಳು. ಬರುವುದರೊಳಗೆ ಈತ ತನ್ನ ಯಾತ್ರೆ ಮುಗಿಸಿದ್ದ. ಜೋಡಿ ಪಯಣ. ತಾನೊಬ್ಬನೇ ಇಳಿದ. ಒಂಟಿಯಾದವಳು ವೃದ್ಧಾಶ್ರಮಕ್ಕೆ ಹೊರಟಿದ್ದಳು. ಅವಳ ಕಥೆಗೆ ಕಣ್ಣೀರಾದೆ. ಅಡ್ರೆಸ್ ಕೇಳೋ ಮೊದಲೇ ಇಳಿದಳು. ಈಗಲೂ ಸಿಕ್ಕ ಸಿಕ್ಕ ಬಸ್ಸಿನಲ್ಲಿ ಸಿಕ್ಕಾಳೇನೋ ಎಂದು ಹುಡುಕುವೆ. ವೃದ್ಧಾಶ್ರಮಕ್ಕೆ ಹೋದಾಗಲೂ ಅವಳ ಕಾಣದ ಮುಖಕ್ಕಾಗಿ ಹಂಬಲಿಸಿ ಕಣ್ಣು ಹಾಕಿ ಮಣ್ಣು ಮಸಿ ಬೈಸಿಕೊಂಡಿದ್ದೇನೆ. ‘ಯಾರಿಗೆ ಯಾರಿಲ್ಲ ನೀರ ಮೇಲಿನ ಗುಳ್ಳೆ ನಿಜವಲ್ಲ’ ಎಂಬ ದಾಸರ ಪಾಠ ಕಲಿತಿದ್ದು ಇದೇ ಬಸ್ಸಲ್ಲಿ.

ಗಂಡ ಬೆಂಗಳೂರಿಗೆ ಕರಕೊಂಡು ಹೋದಾಗ ಕಂಗಾಲಾಗಿ ನಿಂತಿದ್ದೆ, ಮೆಜೆಸ್ಟಿಕ್‌ನಲ್ಲಿ ಕಟ್ಟಿರುವೆಯಂತೆ ಸಕ್ಕರೆಯಿಲ್ಲದೆ ಅಕ್ಕಪಕ್ಕ ಸಾಲಲ್ಲಿ ನಿಂತ ಅಕ್ಕರೆ ಬಸ್ಸುಗಳನ್ನು ನೋಡಿ. ಬಸ್ಸಿನಾಗ ಅಡ್ಡ ಬಿದ್ದು, ಉದ್ದ ಬಿದ್ದು, ಕೆಳಗೆ ಬಿದ್ದು ಎದ್ದು ಪ್ರಯಾಣ ಮಾಡಬಹುದೆಂದು ತಿಳಿದದ್ದು ಬೆಂಗಳೂರಿಗೆ ಸ್ಲೀಪರ್ ಕೋಚ್ ಹತ್ತಿದಾಗಲೇ. ಎರಡು ಅಂತಸ್ತಿನ ಬಸ್ಸು ಮುಂಬೈಯಲ್ಲಿ ಹತ್ತಿ ಹೋದವಳಿಗೆ ಕೆಳಗೆ ಇಳಿಯಾಕ ಬಾರದೇ ಇಳಿವ ಸ್ಟೇಶನ್ನು ಸಿಗದೇ ಕೊನೆಗೆ ಪೊಲೀಸ್ ಸ್ಟೇಶನ್‌ನಿಂದ ಕೆಇಎಂ ಆಸ್ಪತ್ರೆ ಸೇರಿದ್ದು ಅಪಘಾತದಿಂದಲ್ಲ, ಭಾಷೆ ಬರದ್ದರಿಂದ.

ಡ್ರೈವರ್‌ಗೆ ಒಮ್ಮೆ ‘ಚಕ್ಕಡಿ ಹೊಡದಂಗ ಹೊಡಿತೀರಿ’ ಎಂದೆ. ಬಸ್ಸಿಂದ ಇಳಿದ. ‘ದೊಡ್ಡ ಮಾತಾಡೋದು ಕುಂತು ಓಡಿಸಿದಂಗಲ್ಲ’ ಎಂದು ಚಾಲೆಂಚ್‌ನಲ್ಲಿ ತಂಬಗಿ ತೊಗೊಂಡು ಥೇಟರ್ ಹಿಂದೆ ಹೋದ. ಬಸ್ಸಿನ ಮಂದಿ ರಮಿಸಿ ಸೀಟಿಗೆ ಕೂಡಿಸಿ ಓಡಿಸಾಕ ಹಚ್ಚಿದ್ದು ಬಸ್ಸಿಗೆ ಚಕ್ಕಡಿ ಹೋಲಿಕೆ ಪ್ರತಿಫಲ.

ಕೆಲವೊಮ್ಮೆ ಬಸ್ಸಿಗೆ ಶಪಿಸಿದ್ದೇನೆ. ಲಿಂಗದಕ್ಕನ್ನ ಬಸ್ಸು ನೀರಿಗೆ ಕೆಡವಿ ನಮ್ಮನ್ನೆಲ್ಲ ನೀರು ಮಾಡೇದ. ಪ್ರವಾಸಕ್ಕೋದ ಮಕ್ಕಳನ್ನು ಕ್ವಾರಿಗೆ ಕೆಡವಿ ಕೈಕಾಲು ಮುರಿದೈತಿ. ತನ್ನ ದಾರಿಗುಂಟ ಹೊಂಟ ಸಣ್ಣ ಮಕ್ಕಳ ಮೇಲೆ ಗಾಲಿ ಹಾಯಿಸಿ ಗಾಯ ಮಾಡೇದ. ಮದುವಿ ಮನಿಗೆ ಹೊಂಟ ಡಾಕ್ಟರ್ ಗೆಳತಿ ಸಂಸಾರನ್ನೇ ಮಸಣಕ್ಕೆ ಕಳಿಸೈತಿ. ಮೆಚ್ಚಿನ ವಿದ್ಯಾರ್ಥಿ ‘ಡ್ರೈವರ್ ಆದೆ’ ಅಂತ ಪೇಡೆ ಕೊಟ್ಟು ತಿಂಗಳದೊಳಗೇ ಮುಂಬೈ ಘಾಟ್‌ನಲ್ಲಿ ಉರುಳಿಸಿ ಕರುಳು ಹಿಂಡಿದೆ. ತಾರವಕ್ಕನ ಮಗಳಿಗೆ ಬಸ್ಸಿನಾಗ ಭೇಟಿ ಆದವನ ಹುಚ್ಚು. ಆತ ಮಾತ್ರ ಆಕೆಯನ್ನ ನಡು ಸ್ಟೇಶನ್‌ಗೇ ಇಳಿಸಿದ್ದ. ಬಸ್ಸಿಗೆ ಬರತಾನ ಅಂತ ಬಂದ ಬಂದ ಬಸ್ಸು ಹತ್ತಿಳಿದಳು. ಕೊನೆಗೆ ಕೂಸಿನ ಜೊತೆ ಬಸ್ಸಿನ ಬಾಯಿಗೆ ನುಚ್ಚಾದವಳ ನೆನಪು ಪ್ರತಿ ಸಾರೆ ಕಳ್ಳಿಸಾಲಲ್ಲಿ ಬಸ್ಸು ಹೊರಳುವಾಗ ದೆವ್ವದಂಗ ಕಾಡುತ್ತದೆ. ಬಸ್ಸು ಎಂಬುದು ಬರೀ ಯಂತ್ರವಾಹನವಲ್ಲ. ಅದು ಭಾವ ಜೋಗುಳದಲ್ಲಿ ಶಿಶುವಂತಿದೆ. ಒಮ್ಮೆ ನಗು ಮತ್ತೊಮ್ಮೆ ಅಳು.

ನಡೆಯಲಾರದ ದೂರಕೆ ಬಸ್ಸು ಹಿಡಿಯಬೇಕು. ಏರಿದ ಬಸ್ಸಲಿ ಬೆರೆತು ಪಯಣ ಮುಗಿಸಬೇಕು. ಒಬ್ಬೊಬ್ಬರ ಪಯಣ ಮುಗಿದಂತೆ ಅಗಲಬೇಕು. ‘ಇಳೀರಿ.. ಎಷ್ಟು ತಡ ಮಾಡತೀರಿ? ಹತ್ತುವಾಗಿನ ಹುರುಪು ಇಳಿಯುವಾಗ ಇರಂಗಿಲ್ಲ?’ ಅಂದದ್ದು ಮನಸ್ಸಿಗೆ ಘಾಸಿ ಮಾಡುತ್ತದೆ. ನನ್ನೊಡನೆ ಪ್ರಯಾಣದಲ್ಲಿದ್ದ ಗಂಡ, ಅತ್ತೆ– ಮಾವ, ಅಕ್ಕ, ಅಜ್ಜಿ, ಅಜ್ಜ ಎಷ್ಟೊಂದು ಜನ ಪಯಣ ಮುಗಿಸಿದ್ದಾರೆ. ನಾನಿನ್ನೂ ಪಯಣದಲ್ಲಿದ್ದೇನೆ. ಮುಗಿದಾಗ ಸೀಟಿ ಊದಿ ಬಿಡುತ್ತಾನೆ ನಿರ್ವಾಹಕ. ಟಿಕೆಟ್ ಜೊತೆ ಕೈಯಲಿ ಮಂಕುತಿಮ್ಮ ಕಗ್ಗ.. ಪುಟ ತಿರುಗಿಸಿದ್ದಷ್ಟೇ. ಸವೆದ ದಾರಿ ಅರಿವಿಗಿಲ್ಲ.. ನಮ್ಮೂರು ಬಂದಾಗ ಕೊನೆ ಪುಟ.. ಬದುಕು ಜಟಕಾ ಬಂಡಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.