ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ಸಾರ | ವಿದುಷಿ ಪದ್ಮಾಮೂರ್ತಿ -ನಾದಮಯ ಈ ಜೀವನವೆಲ್ಲ...

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರು ಗಾಯಕಿಯಾಗಿರುವ ವಿದುಷಿ ಪದ್ಮಾಮೂರ್ತಿ ಅವರಿಗೆ ಮೈಸೂರು ಆಸ್ಥಾನ ವಿದ್ವಾನ್‌ ಪುರಸ್ಕಾರ ಒಲಿದಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎಂಟು ದಶಕಗಳ ತಮ್ಮ ಸಂಗೀತಯಾನವನ್ನು ಅವರು ಹಂಚಿಕೊಂಡಿದ್ದಾರೆ...

ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರು ರಚಿಸಿದ ‘ಕಮಾಜ್‌‘ ರಾಗದ ‘ಬ್ರೋಚೆವಾರೆವರುರಾ ನಿನ್ನು ವಿನಾ..’ ಸುಪ್ರಸಿದ್ಧ ಕೃತಿಯನ್ನು ಆಸ್ವಾದಿಸದ ಸಂಗೀತ ರಸಿಕರು ಯಾರಿದ್ದಾರೆ ಹೇಳಿ? ಸಂತ ತ್ಯಾಗರಾಜರ ಶಿಷ್ಯಪರಂಪರೆಗೆ ಸೇರಿದ ವಾಸುದೇವಾಚಾರ್ಯರು ಇಂತಹ ಹಲವಾರು ಕೀರ್ತನೆಗಳನ್ನು ರಚಿಸಿದ್ದು, ಎಲ್ಲವೂ ಸಂಗೀತ ಕ್ಷೇತ್ರದಲ್ಲಿ ಅಮೂಲ್ಯ ರತ್ನಗಳೆನಿಸಿವೆ. ಇಂಥ ಮಹಾನ್‌ ವಾಗ್ಗೇಯಕಾರರು ತಾವಾಗಿಯೇ ಬಂದು ‘ನೀನು ನನ್ನ ಶಿಷ್ಯಳಾಗು’ ಎಂದು ಹೇಳಿದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ? ಇಂಥ ಸದವಕಾಶವನ್ನು ತಮ್ಮದಾಗಿಸಿಕೊಂಡವರು ಈ ಬಾರಿಯ ಮೈಸೂರು ದಸರಾದಲ್ಲಿ ‘ರಾಜ್ಯ ಆಸ್ಥಾನ ವಿದ್ವಾನ್‌’ ಪುರಸ್ಕಾರ ಸ್ವೀಕರಿಸಿದ ವಿದುಷಿ ಪದ್ಮಾಮೂರ್ತಿ.

ತಮ್ಮ ಮೂರನೇ ವಯಸ್ಸಿನಲ್ಲೇ ಸಂಗೀತ ಕಲಿಯಲಾರಂಭಿಸಿ ಆರನೇ ವಯಸ್ಸಿಗೇ ವಾಸುದೇವಾಚಾರ್ಯರ ಶಿಷ್ಯೆಯಾದ, ಸದ್ಯ ತೊಂಬತ್ತೊಂದು ವಯಸ್ಸಿನ ಪದ್ಮಾಮೂರ್ತಿ ಅವರ ಸುಮಾರು ಎಂಟು ದಶಕಗಳ ಸಂಗೀತ ಜೀವನಯಾನವೇ ರೋಚಕ. ಸಂಗೀತದ ಬಗೆಗಿನ ಅದ್ಭುತ ಅನುಭವಗಳನ್ನು ಅವರದೇ ಮಾತುಗಳಲ್ಲಿ ಕೇಳೋಣ.

‘ನನಗೀಗ ತೊಂಬತ್ತೊಂದು ವರ್ಷ. ಕೊಂಚವೂ ಧ್ವನಿ ಅಡಗದೆ ಈಗಲೂ ಹಾಡುತ್ತೇನೆ, ಸಂಗೀತ ಕಲಿಸುತ್ತೇನೆ, ಕಛೇರಿ ಕೊಡುತ್ತೇನೆ. ಸಂಗೀತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಈಚೆಗೆ ‘ಆಸ್ಥಾನ ವಿದ್ವಾನ್‌’ ಪುರಸ್ಕಾರ ಸ್ವೀಕರಿಸಿದ್ದು ನನ್ನ ಜೀವನದಲ್ಲಿ ಮರೆಯಲಾಗದ ದಿನ.

ಹುಟ್ಟಿದ್ದು, (1932, ಜುಲೈ 24) ಬೆಳೆದಿದ್ದು, ಓದಿದ್ದು ಎಲ್ಲ ಮೈಸೂರಿನಲ್ಲೇ. ತಂದೆ ಟಿ.ಎಸ್‌. ರಾಜಗೋಪಾಲ ಅಯ್ಯಂಗಾರ್ ಸಂಗೀತಗಾರರೇ. ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಎಂಎಲ್‌ಸಿ ಆಗಿದ್ರು. ನಂತರ ಕಾನೂನು ಕಾಲೇಜಿನ ಪ್ರಿನ್ಸಿಪಾಲ್‌ ಆದ್ರು. ತಾಯಿ ಜಯಲಕ್ಷ್ಮಿ ಕೀರ್ತನೆ ಹಾಡೋರು. ಅಡುಗೆ ಮಾಡುವಾಗಲೂ ಶಾಸ್ತ್ರೀಯ ಸಂಗೀತವನ್ನೇ ಹಾಡ್ತಿದ್ರು. ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ ‘ಎಂದರೊಮಹಾನುಭಾವುಲು’ ಎಂದರೆ ಅವರಿಗೆ ಬಹಳ ಇಷ್ಟ. ದಿನಾ ಇದನ್ನೇ ಹಾಡ್ತಿದ್ರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನನಗೂ ಅದು ಬಾಯಿಪಾಠ ಆಗಿತ್ತು. ‌ಮೈಸೂರಿನಲ್ಲಿ ಅರಮನೆ ವಿದುಷಿ ನಾಗಮ್ಮ ಹಿಂದೂಸ್ತಾನಿ ಸಂಗೀತ ಹಾಡ್ತಿದ್ರು. ಅವರಿಂದ ಹಿಂದೂಸ್ತಾನಿ ಸಂಗೀತವನ್ನೂ ಕಲಿತೆ. ವೀಣೆ ಸುಬ್ಬಣ್ಣನವರ ಶಿಷ್ಯ ವಿದ್ವಾನ್‌ ಕೃಷ್ಣಮೂರ್ತಿ ಅವರ ಬಳಿ ವೀಣೆ ನುಡಿಸಾಣಿಕೆ ಕಲಿತೆ. ಆರನೇ ವಯಸ್ಸಿನಲ್ಲೇ 20 ಕೃತಿಗಳನ್ನು ವೀಣೆಯಲ್ಲಿ ನುಡಿಸುತ್ತಿದ್ದೆ. ಮೈಸೂರು ವಾಸುದೇವಾಚಾರ್ಯದ ಸುಪ್ರಸಿದ್ಧ ಕೃತಿಗಳಾದ ‘ರಾ ರಾ ರಾಜೀವಲೋಚನ’, ‘ಶ್ರೀ ಚಾಮುಂಡೇಶ್ವರಿ ಪಾಲಯಮಾಂ’, ‘ಬ್ರೋಚೆವಾರೆವರುರಾ ನಿನ್ನು ವಿನಾ’ ಸ್ವರಪ್ರಸ್ತಾರ ಸಮೇತ ಹಾಡುತ್ತಿದ್ದೆ.

ನನ್ನ ಸಂಗೀತ ಜೀವನ ಒಂದು ಮಹತ್ವದ ತಿರುವು ಪಡೆದುಕೊಂಡದ್ದು ಇದೇ ಸಂದರ್ಭದಲ್ಲಿ. ಒಮ್ಮೆ ನಾನು ಮೈಸೂರು ವಾಸುದೇವಾಚಾರ್ಯರ ಕೃತಿಯನ್ನು ಮನೆಯೊಳಗೆ ಜೋರಾಗಿ ಹಾಡುತ್ತಿದ್ದೆ. ಅವರು ಮನೆ ಮುಂದೆ ವಾಕಿಂಗ್‌ ಹೋಗ್ತಾ ಇದ್ದಾಗ ನನ್ನ ಕೀರ್ತನೆ ಕೇಳಿ, ಮನೆಯೊಳಗೆ ಬಂದು ತಂದೆಯವರ ಬಳಿ, ‘ಅದು ಯಾರು ನನ್ನ ಕೃತಿಯನ್ನು ಹಾಡ್ತಾ ಇದ್ದಿದ್ದು?’ ಅಂತ ಕೇಳಿದ್ರು. ಆಗ ತಂದೆಯವರು, ಅದು ನನ್ನ ಮಗಳು ಎಂದಾಗ ಅವರು ಬಹಳ ಖುಷಿಪಟ್ಟು, ‘ಇನ್ನು ಮುಂದೆ ನಾನೇ ಇವಳ ಗುರು, ನನ್ನ ಮನೆಗೆ ಬಾ, ಸಂಗೀತ ಹೇಳಿಕೊಡ್ತೇನೆ’ ಅಂದ್ರು. ಇಷ್ಟು ದೊಡ್ಡ ವಿದ್ವಾಂಸರು, ವಾಗ್ಗೇಯಕಾರರು ನನ್ನನ್ನು ಶಿಷ್ಯೆ ಎಂದು ಅವರಾಗಿಯೇ ಸ್ವೀಕರಿಸಿದ್ದು ನನ್ನ ಸೌಭಾಗ್ಯ. ಸರಳೆ, ಜಂಟಿ ಸರಳೆ ಹೇಳಿಕೊಟ್ಟ ಮೇಲೆ ಪುರಂದರದಾಸರ ಪಿಳ್ಳಾರಿ ಗೀತೆ ‘ಲಂಬೋದರ ಲಕುಮಿಕರ’ ಹಾಡಿಸುವಾಗ ಇದಕ್ಕೆ ಅವರದೇ ಸ್ವರ ಹಾಕಿ ಹಾಡಿಸೋರು. ತ್ಯಾಗರಾಜರ ಕೃತಿ, ರಾಗ–ತಾನ–ಪಲ್ಲವಿ ಎಲ್ಲವನ್ನೂ ಹಾಡಿ ತೋರಿಸೋರು. ಈ ದೊಡ್ಡ ವಿಚಾರಗಳೆಲ್ಲ ನನಗೆ ಏನೂ ಅರ್ಥವಾಗದೆ ನಗ್ತಾ ಇದ್ದೆ. ಆಗ ಅವರು ‘ಏ ಪದ್ದಮ್ಮ, ಯಾಕೆ ನಗ್ತಿಯಾ, ಮುಂದೆ ನಿನಗೆ ಇದೆಲ್ಲ ಬೇಕಾಗುತ್ತೆ’ ಅಂತಿದ್ರು.

ಸರಣಿ ಕಛೇರಿಯ ಸಂಭ್ರಮ

ದೇಶದಾದ್ಯಂತ ನೂರಾರು ಕಛೇರಿ ಕೊಟ್ಟಿದ್ದೇನೆ. ಮದ್ರಾಸ್‌, ಅನಂತಪುರ, ಮುಂಬೈ, ದೆಹಲಿ... ಹೀಗೆ ನಿತ್ಯವೂ ಕಛೇರಿಗಳೇ. 1945–46ರಲ್ಲಿ ಮೈಸೂರು ಆಕಾಶವಾಣಿ ಶುರುವಾಯ್ತು. ಮೊದಲ ಬಾರಿಗೆ ಖರಹರಪ್ರಿಯ ರಾಗ, ಕಾಂಬೋಧಿ ರಾಗಗಳನ್ನು ಆಕಾಶವಾಣಿಗೆ ಹಾಡಿದೆ. 1950ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಂಗೀತ ಸಭಾದಲ್ಲಿ ಕಛೇರಿ. ಚೌಡಯ್ಯ ಅವರ ಪಿಟೀಲು, ವೀರಭದ್ರಯ್ಯ ಅವರ ಮೃದಂಗ. ಸಂಗೀತ ರಸಿಕರ ಪ್ರಶಂಸೆಗೆ ಪಾತ್ರವಾಗಿದ್ದೇ ಅಲ್ಲದೆ ‘ಮೈಸೂರಿನ ಎಂ.ಎಸ್‌. ಸುಬ್ಬುಲಕ್ಷ್ಮಿ‘ ಅಂತ ಕರೆಯೋದಕ್ಕೆ ಶುರುಮಾಡಿದ್ರು.

1953ರಲ್ಲಿ ಟಿ.ಎಸ್. ಮೂರ್ತಿ ಅವರೊಂದಿಗೆ ಮದುವೆ ಆಯ್ತು. ಅವರು ಪಿಟೀಲು ವಾದಕರು. ಭಾರತೀಯ ವಾಯುಸೇನೆಯಲ್ಲಿ ಎಂಜಿನಿಯರ್‌ ಆಗಿದ್ರು. ಅವರಿಗೆ ಉತ್ತರ ಭಾರತದ ವಿವಿಧ ಭಾಗಗಳಿಗೆ ವರ್ಗಾವಣೆ ಆಗೋದು. ಎಲ್ಲ ಕಡೆ ಹೋಗಬೇಕಿತ್ತು. ಅಲ್ಲೆಲ್ಲ ಕರ್ನಾಟಕ ಸಂಗೀತ ಇಲ್ಲ. ಹೀಗಾಗಿ ಸುಮಾರು 20 ವರ್ಷ ಸಂಗೀತ ದೂರ ಆಯ್ತು. ತುಂಬ ಬೇಸರ ಆಗೋದು. ಕಾನ್ಪುರಕ್ಕೆ ವರ್ಗ ಆದಾಗ ಅಲ್ಲಿ ಕಾಲೇಜು ಸೇರಿ ಸೈಕಾಲಜಿಯಲ್ಲಿ ಎಂ.ಎ ಮಾಡಿ ಹೈದರಾಬಾದ್‌ನಲ್ಲಿ ಪಿಎಚ್‌.ಡಿಯನ್ನೂ ಮುಗಿಸಿದೆ. 1972ರಲ್ಲಿ ಬೆಂಗಳೂರಿಗೆ ಬಂದೆವು. ಅದಾಗಿ ನಿಮ್ಹಾನ್ಸ್‌ನಲ್ಲಿ ‘ಮನಸ್ಸಿನ ಮೇಲೆ ಸಂಗೀತದಿಂದಾಗುವ ಪ್ರಭಾವ’ ವಿಷಯ ಕುರಿತು ಮಹಾಪ್ರಬಂಧ ಬರೆದೆ. 1973–80ರವರೆಗೆ ಮತ್ತೆ ಕಛೇರಿ ನೀಡಿದೆ.

1994ರಲ್ಲಿ ಇಟಲಿಯಲ್ಲಿ ವಿಶ್ವ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ನೆದರ್ಲೆಂಡ್‌, ಜರ್ಮನಿ, ಅಮೆರಿಕ, ಅಟ್ಲಾಂಟ, ಲಂಡನ್‌, ವೆಸ್ಟ್‌ಇಂಡೀಸ್‌ಗಳಲ್ಲಿ ಕಛೇರಿ ನೀಡಿದ್ದೇನೆ. ಸಂಗೀತದ ಬಗ್ಗೆ 10 ಪುಸ್ತಕ ಬರೆದಿದ್ದೇನೆ. ಹಲವಾರು ಪ್ರಶಸ್ತಿ–ಪುರಸ್ಕಾರಗಳೂ ಬಂದಿವೆ. ಆದರೆ ನಮ್ಮದೇ ಊರಿನಲ್ಲಿ ನಮ್ಮವರ ಕೈಯಲ್ಲಿ ಭೇಷ್‌ ಅನಿಸಿಕೊಂಡಿದ್ದು ಬಹಳ ಸಂತೃಪ್ತಿ ತಂದಿದೆ..’ ಎನ್ನುತ್ತಾ ಈ ವಿದುಷಿ ಮಾತಿಗೆ ಮಂಗಳ ಹಾಡಿದರು.

ಮೊದಲ ಕಛೇರಿ ಪುಳಕ!

ನನ್ನ ಮೊದಲ ಕಛೇರಿ 8ನೇ ವಯಸ್ಸಿಗೆ. ಮೈಸೂರಿನ ಗಾಂಧಿ ಸ್ಕ್ವೇರ್‌ನಲ್ಲಿ ಕೋ–ಆಪರೇಟಿವ್ ಸೊಸೈಟಿಯವರು ನಡೆಸಿದ ಗಣೇಶ ಹಬ್ಬದಲ್ಲಿ ಏರ್ಪಾಡಾಗಿತ್ತು. ಚೆನ್ನಾಗಿ ತಯಾರಿ ನಡೆಸಿ ವೇದಿಕೆ ಏರಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ನನಗೆ ಪಕ್ಕವಾದ್ಯದಲ್ಲಿ ಪಿಟೀಲು ನುಡಿಸಲು ಟಿ. ಚೌಡಯ್ಯನವರು ಮೃದಂಗಕ್ಕೆ ಟಿ.ಎನ್‌. ಪುಟ್ಟಸ್ವಾಮಯ್ಯನವರು. ವೇದಿಕೆ ಮುಂಭಾಗದಲ್ಲಿ ಗುರು ವಾಸುದೇವಾಚಾರ್ಯರು! ನನಗೆ ಬಹಳ ಹೆದರಿಕೆ ಆಯ್ತು ಇವರೆಲ್ಲರನ್ನೂ ನೋಡಿ. ಆಗ ನನ್ನ ಗುರು ‘ಹಾಡು ಮರಿ ಹಾಡು ಹೆದರಿಕೊಳ್ಳಬೇಡ’ ಎಂದರು. ಆಗ ನಾನು ಧೈರ್ಯವಾಗಿ ‘ಸಿಂಹೇಂದ್ರ ಮಧ್ಯಮ’ ರಾಗದ ಕೀರ್ತನೆಯನ್ನು ಆಲಾಪ ನೆರವಲ್ ಸ್ವರಪ್ರಸ್ತಾರ ಸಹಿತ ಹಾಡಿದೆ. ಮತ್ತೆ ಕೆಲವು ಕೃತಿ ದೇವರನಾಮ ಸೇರಿ ಒಂದು ಗಂಟೆ ಕಾಲ ಹಾಡಿದೆ. ಕೇಳುಗರು ತುಂಬ ಖುಷಿಪಟ್ಟರು. ’ಚೈಲ್ಡ್‌ ಪ್ರಾಡಿಜಿ‘ ಅಂತ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅಲ್ಲಿಂದ ಮುಂದೆ ‘ಆರೋಹಣ’ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT