ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ಗಣೇಶ್‌–ಕುಮರೇಶ್ ಸಂದರ್ಶನ: ಸಂಗೀತದಿಂದ ಸಮನ್ವಯತೆ ಸಾಧಿಸಬಹುದು

Published : 1 ಫೆಬ್ರುವರಿ 2026, 1:43 IST
Last Updated : 1 ಫೆಬ್ರುವರಿ 2026, 1:43 IST
ಫಾಲೋ ಮಾಡಿ
Comments
ಐದೂವರೆ ದಶಕಗಳಿಗಿಂತಲೂ ಹೆಚ್ಚು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಖ್ಯಾತ ಪಿಟೀಲು ವಿದ್ವಾಂಸರಾದ ಗಣೇಶ್–ಕುಮರೇಶ್ ಅವರಿಗೆ ಬೆಂಗಳೂರಿನ ಭಾರತೀಯ ಸಾಮಗಾನ ಸಭಾ ನೀಡುವ 2026ರ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ ಒಲಿದಿದೆ. ಫೆಬ್ರುವರಿ 7ರಂದು ಶನಿವಾರ ಸಂಜೆ ಐದು ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ವಾಂಸರು ತಮ್ಮ ಸಂಗೀತ ಪರಂಪರೆ, ಪಯಣದ ಬಗ್ಗೆ ಭಾನುವಾರದ ಪುರವಣಿಯೊಂದಿಗೆ ಮಾತನಾಡಿದ್ದಾರೆ.
ಪ್ರ

ವಯೊಲಿನ್ ನುಡಿಸಾಣಿಕೆ ಮೂಲಕ ಜಗತ್ತಿನಾದ್ಯಂತ ನಾದಾನುಸಂಧಾನ ನಡೆಸಿದ್ದೀರಿ. ನಿಮ್ಮ ನುಡಿಸಾಣಿಕೆ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂದು ಹೇಳುತ್ತಲೇ ಬಂದಿದ್ದೀರಿ. ಅದು ಹೇಗೆ?

ನಾವಿಬ್ಬರು ಚಿಕ್ಕ ಮಕ್ಕಳಿದ್ದಾಗಿನಿಂದಲೂ ಯುಗಳ ಕಛೇರಿ ನಡೆಸುತ್ತಾ ಬಂದಿದ್ದೇವೆ. ಸಂಗೀತ ಎಂಬುದು ಅನಂತ. ನಮಗೆ ಯಾವಾಗಲೂ ಸವಾಲುಗಳನ್ನು ಎದುರಿಸುವ ಆಸೆ. ದಿನಾ ಬೆಳಗಿನ ಜಾವ ಎದ್ದು ಅಭ್ಯಾಸ ಮಾಡ್ತೀವಿ. ವಾದಿ–ಸಂವಾದಿ, ಒಂದೇ ರಾಗವನ್ನು ಬೇರೆ ಬೇರೆ ರೀತಿಯಲ್ಲಿ ಪ್ರಸ್ತುತಪಡಿಸುವುದು, ಸ್ವರ ಪ್ರಸ್ತಾರವನ್ನು ಹೇಗೆ ವಿಭಿನ್ನವಾಗಿ ಅಭಿವ್ಯಕ್ತಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ. ಸಂಗೀತ ಮತ್ತು ಸತ್ಯ ಒಂದೇ. ಸತ್ಯ ಎಂದರೆ ದೈವಿಕ. ಹಾಗೆಯೇ ಸಂಗೀತವೂ. ಸಂಗೀತ ಎಂಬುದು ವಿಜ್ಞಾನ. ಈ ವೈಜ್ಞಾನಿಕತೆ ಸಂಗೀತದಲ್ಲಿರುವ ರಾಗ ಮತ್ತು ತಾಳಗಳ ತಳಹದಿಯ ಮೇಲೆಯೇ ನಿಂತಿವೆ. ನಾವಿಬ್ಬರೂ ಇದೇ ತತ್ವದ ಮೂಲಕ ಸಂಗೀತ ಕಛೇರಿಗಳನ್ನು ನಡೆಸುತ್ತಾ ಬಂದಿದ್ದೇವೆ.

ಪ್ರ

ಜುಗಲಬಂದಿ ಕಛೇರಿ ಮೂಡಿಸುವ ಅನುಬಂಧ ವಿಶಿಷ್ಟ ಬಗೆಯದು. ನಿಮ್ಮಿಬ್ಬರ ಯುಗಳ ವಾದನ ಕಛೇರಿ ಕೇಳುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವುದು ಸ್ವಾರಸ್ಯಕರ. ಇದರ ಗುಟ್ಟೇನು?

ನಾವಿಬ್ಬರೂ ಸಂಗೀತದಲ್ಲೇ ಬದುಕು ರೂಪಿಸಿಕೊಂಡಿದ್ದೇವೆ. ಈ ತಂತಿವಾದ್ಯ ಸೃಷ್ಟಿಸುವುದು ಬರೀ ನಾದವಲ್ಲ, ಅದೊಂದು ಸಂವೇದನೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ, ಹಂಸಧ್ವನಿ, ಶಂಕರಾಭರಣ, ಕೀರವಾಣಿ, ಕಲ್ಯಾಣಿ, ನಾಟಕುರಂಜಿ, ಭೈರವಿ, ಚಾರುಕೇಶಿ, ಸಾವೇರಿ, ಹಂಸಾನಂದಿ... ಹೀಗೆ ಯಾವುದೇ ರಾಗಗಳಿರಲಿ, ಅವು ಕೇಳುಗರಲ್ಲಿ ಸಂಚಲನ ಮೂಡಿಸಬೇಕು. ಕೇಳಿದರೆ ಮತ್ತಷ್ಟು ಕೇಳಬೇಕು ಎನಿಸಬೇಕು. ಇಲ್ಲಿ ಬಂಧ–ಅನುಬಂಧ ಎರಡೂ ಭಾವನೆಗಳು ಹೊರಹೊಮ್ಮುತ್ತವೆ.

ಯುಗಳ ಕಛೇರಿಯಲ್ಲಿ ನಾವು ಸಂಗೀತ ಸಂಭಾಷಣೆ ನಡೆಸುತ್ತೇವೆ. ಇದೊಂದು ಅಧ್ಯಯನ, ನಮ್ಮಲ್ಲಿರುವ ಕಲೆಯನ್ನು ಮತ್ತೊಬ್ಬರೊಂದಿಗೆ ಕನೆಕ್ಟ್ ಮಾಡುವುದು ಬಹಳ ಮುಖ್ಯ. ಹಿಂದೂಸ್ತಾನಿ ಸಂಗೀತದೊಂದಿಗೆ ಸಹ ನಾವು ಬಾಂಧವ್ಯ ಬೆಸೆದಿದ್ದೇವೆ, ಕರ್ನಾಟಕ–ಹಿಂದೂಸ್ತಾನಿ ಎರಡೂ ಶೈಲಿಗಳಲ್ಲಿರುವ ಸಮಾನ ರಾಗಗಳನ್ನೇ ನುಡಿಸುತ್ತೇವೆ. ಕರ್ನಾಟಕ ಸಂಗೀತದ ಶಂಕರಾಭರಣ ರಾಗ ಹಿಂದೂಸ್ತಾನಿಯಲ್ಲಿ ಬಿಲಾವಲ್, ಇದೇ ರೀತಿ ಮೋಹನ ಕಲ್ಯಾಣಿ–ಶುದ್ಧ ಕಲ್ಯಾಣ್, ಹಿಂದೋಳ– ಮಾಲ್‌ಕೌಂಸ್, ಧರ್ಮಾವತಿ– ಮಧುವಂತಿ, ಅಭೇರಿ–ಭೀಮಪಲಾಸಿ... ಹೀಗೆ ಫ್ಲೇವರ್‌ ಬೇರೆ, ಸಂಗೀತ ಒಂದೇ, ಇದರ ಸೌಂದರ್ಯ ಒಂದೇ. ಹೀಗಾಗಿ ಜುಗಲ್‌ಬಂದಿ ಕಛೇರಿಗಳು ಕೇಳುಗರನ್ನು ಬಹುಬೇಗ ತಟ್ಟುತ್ತದೆ, ಹೃದಯ ಮುಟ್ಟುತ್ತದೆ.

ಪ್ರ

ನಿಮ್ಮ ನುಡಿಸಾಣಿಕೆಯಲ್ಲಿ ಪ್ರಕೃತಿಯ ನಾದ ವಿಶಿಷ್ಟವಾಗಿ ಅನುರಣನಗೊಳ್ಳುತ್ತದೆ. ಪ್ರಾಣಿ–ಪಕ್ಷಿಗಳ ದನಿ ತಂತಿಗಳಲ್ಲಿ ಮಾರ್ದನಿಸುತ್ತವೆ. ಈ ಮಾಂತ್ರಿಕತೆ ಸೃಷ್ಟಿಯಾಗುವುದು ಹೇಗೆ?

ವಯೊಲಿನ್‌ ನುಡಿಸಾಣಿಕೆ ಇತರ ಕಲಾವಿದರಿಗಿಂತ ವಿಭಿನ್ನವಾಗಿರಬೇಕು ಎಂಬುದು ನಮ್ಮ ಅಭಿಲಾಷೆ. ಇದು ನಮ್ಮ ‘ಐಡೆಂಟಿಟಿ’ಯೂ ಹೌದು. ಹೀಗಾಗಿ ರಾಗಗಳಲ್ಲಿ ಅನುರಾಗ ಮೂಡುವಂತೆ ನುಡಿಸುತ್ತೇವೆ. ನಾಟ ರಾಗದಲ್ಲಿ ಸಿಂಹ ಗರ್ಜನೆ ಮಾಡುತ್ತೇವೆ. ಅಮೃತವರ್ಷಿಣಿ ಎಂಬ ಮಳೆ ರಾಗದಲ್ಲಿ ನವಿಲು ತನ್ನ ಸುಂದರವಾದ ರೆಕ್ಕೆ ಬಿಚ್ಚಿ ನರ್ತಿಸುವ ನಿನಾದ ತರುತ್ತೇವೆ, ‘ವರ್ಣಂ’ ಅನ್ನು ತಂತಿಯಲ್ಲಿ ಮೀಟಿ ಕೋಳಿಯ ಕೊ ಕೊ ಕ್ಕೋ ದನಿ ಇಂಪಾಗಿ ಮೊಳಗಿಸುತ್ತೇವೆ, ಈ ನಾದದಲ್ಲಿ ರಾಗ, ತಾಳ, ಭಾವ, ಲಯ ಲಹರಿ, ಸುಮಧುರ ಝೇಂಕಾರ, ಓಂಕಾರದ ಮಾಂತ್ರಿಕತೆ ಸೃಷ್ಟಿಯಾಗುವುದನ್ನು ಕೇಳುಗರು ಮನದುಂಬಿ ಇಷ್ಟಪಡುತ್ತಾರೆ ಎಂಬುದೇ ನಮ್ಮಲ್ಲಿ ಸಾರ್ಥಕ್ಯದ ಭಾವನೆ ಮೂಡಿಸುತ್ತದೆ. ಅಲ್ಲದೆ ವಯೊಲಿನ್‌ನಲ್ಲಿ ‘ರಾಗ ಪ್ರವಾಹಂ’ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಪರಿಚಯಿಸಿದ್ದೇವೆ. ಇದೂ ಕೂಡ ಜನಮೆಚ್ಚುಗೆ ಗಳಿಸಿದೆ.

ಪ್ರ

ಮಕ್ಕಳಿಗಾಗಿಯೇ ನೀವು ನುಡಿಸಿದ ‘ಚಾಕೊಲೇಟ್‌ ಮೆಲೊಡೀಸ್’, ‘ವೈಬ್ರಂಟ್‌ ನಾದಂ’ ಯುಟ್ಯೂಬ್‌ ಸೀರೀಸ್‌ ಬಹಳ ಖ್ಯಾತಿ ಗಳಿಸಿದೆ. ಇಟಲಿ ಮೂಲದ ಈ ತಂತಿವಾದ್ಯದಲ್ಲಿ ನೀವಿಬ್ಬರು ಸಮನ್ವಯತೆ ಸಾಧಿಸುವುದು ಹೇಗೆ?

ಸಂಗೀತದ ಮೂಲಕ ಸಮನ್ವಯತೆ ಸಾಧಿಸಬಹುದು. ರಾಗವನ್ನು ಪ್ರಸ್ತುತಪಡಿಸುತ್ತಾ, ಸೌಹಾರ್ದ ಹಾಗೂ ಸಮರಸವನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರತೀ ಕಛೇರಿಯಲ್ಲೂ ಹೊಸತನ್ನು ನೀಡಲು ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತೇವೆ. ಪರಂಪರೆಯ ಸಂಗೀತವಾದರೂ ಇಂದಿನ ಕೇಳುಗರು ಬಯಸುವುದು ಹೊಸ ಬಗೆಯ ನಾದವನ್ನು. ಇದಕ್ಕಾಗಿ ಮಕ್ಕಳಿಗಾಗಿಯೇ ‘ಚಾಕೊಲೇಟ್‌ ಮೆಲೊಡೀಸ್‌’ ಸೀರೀಸ್‌ ತಂದಿದ್ದೇವೆ. ಇದರಲ್ಲಿ ಹೊಸ ಭಾವ ಮತ್ತು ಸಂಚಲನ ಮೂಡುವಂತೆ ಮಾಡಿದ್ದೇವೆ. ಈ ಪ್ರಯೋಗ ಜಗತ್ತಿನಾದ್ಯಂತ ಹಲವಾರು ಮಕ್ಕಳಿಗೆ ಇಷ್ಟವಾಗಿದೆ. ನಮ್ಮಲ್ಲಿ ಕಲಿಯಲು ಬರುವ ಮಕ್ಕಳೂ ಇದೇ ರೀತಿಯ ಸಂಗೀತ ಕಲಿಸುವಂತೆ ಬೇಡಿಕೆ ಸಲ್ಲಿಸುವುದು ನಮಗೆ ಸಮಾಧಾನದ ವಿಚಾರ.

ಪ್ರ

ನಾದಾಭಿವ್ಯಕ್ತಿಯನ್ನು ಬಿಂಬಿಸಲು ವಯೊಲಿನ್ ಅತ್ಯುತ್ತಮ ವಾದ್ಯ ಎನಿಸಿಕೊಂಡಿದೆ. ನಿಮ್ಮ ಅನಿಸಿಕೆ ಏನು?

ಖಂಡಿತ, ಮನೋಧರ್ಮ ಸಂಗೀತದ ಅಭಿವ್ಯಕ್ತಿಗೆ ವಯೊಲಿನ್‌ನಷ್ಟು ಸುಂದರ, ಸುಮಧುರ, ಅತ್ಯುತ್ತಮ ವಾದ್ಯ ಬೇರೊಂದಿಲ್ಲ ಎನ್ನಬಹುದು. ಒಬ್ಬ ಕಲಾವಿದನ ಮನೋಧರ್ಮ ಇನ್ನೊಬ್ಬನದಕ್ಕಿಂತ ಭಿನ್ನ. ಉದಾಹರಣೆಗೆ ಕಲ್ಯಾಣಿ ರಾಗವನ್ನೇ ತೆಗೆದುಕೊಂಡರೆ ರಾಗ ಒಂದೇ ಆದರೂ ನಮ್ಮ ನುಡಿಸಾಣಿಕೆ ಭಿನ್ನ. ದಿಗ್ಗಜರಾದ ಲಾಲ್‌ಗುಡಿಯಾಗಲಿ, ಎಂ.ಎಸ್. ಗೋಪಾಲಕೃಷ್ಣನ್, ಟಿ.ಎನ್. ಕೃಷ್ಣನ್... ಹೀಗೆ ಯಾರೇ ಆಗಲಿ ನುಡಿಸಾಣಿಕೆ ಮಾತ್ರ ಭಿನ್ನ. ಒಬ್ಬೊಬ್ಬರದ್ದು ಒಂದೊಂದು ತರದ ಮನೋಧರ್ಮ. ಆದರೆ ಉದ್ದೇಶ ಎಲ್ಲರದ್ದೂ ಒಂದೇ. ರಾಗ, ಕಲ್ಪನಾಸ್ವರದಲ್ಲಿ ನಮ್ಮ ಸಾಮರ್ಥ್ಯ, ಕೈಚಳಕ ಅನಾವರಣವಾಗುತ್ತದೆ.

ಪ್ರ

ಈ ತಲೆಮಾರಿನ ಮಕ್ಕಳು ಪಿಟೀಲು ವಾದನ ಕಷ್ಟ ಎಂಬ ಕಾರಣಕ್ಕೆ ಈ ವಾದ್ಯ ಕಲಿಯಲು ಹಿಂಜರಿಯುತ್ತಿದ್ದಾರೆ ಎಂಬುವುದಕ್ಕೆ ಯುವ ಪಿಟೀಲು ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿರುವುದೇ ಸಾಕ್ಷಿಯಲ್ಲವೇ?

ವಯೊಲಿನ್ ಅನ್ನು ಯಾವ ವಯಸ್ಸಿನವರು ಬೇಕಾದರೂ ಕಲಿಯಬಹುದು. ಆದರೆ ಪಿಟೀಲು ನುಡಿಸುವುದು ಕಷ್ಟ ಎಂಬ ಮನೋಭಾವನೆ ಹೊಸ ತಲೆಮಾರಿನವರಲ್ಲಿದೆ. ಈಗ ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಮಕ್ಕಳಿಗೆ ಬೇಗನೆ ಅರ್ಥ ಆಗುತ್ತದೆ. ಆನ್‌ಲೈನ್‌ನಲ್ಲಿಯೂ ಪಿಟೀಲು ಕಲಿಸುತ್ತಿದ್ದೇವೆ. ತಂತಿ ಮೀಟುವ ವಿಧಾನ, ಗಮಕ ತರುವುದು, ಫಿಂಗರಿಂಗ್‌ ಟೆಕ್ನಿಕ್‌ ಎಲ್ಲವನ್ನೂ ಶಿಷ್ಯಂದಿರು ಬಹಳ ಚೆನ್ನಾಗಿ ಕಲಿತಿದ್ದಾರೆ. ವಿಡಿಯೊ ಮಾಡಿ ಕಳಿಸಿದ ಕೆಲವೇ ಗಂಟೆಗಳಲ್ಲಿ ಹಾಗೆಯೇ ಆ ರಾಗವನ್ನು ಪ್ರಸ್ತುತಪಡಿಸುವ ಪರಿ ನಮಗೇ ಅಚ್ಚರಿ ತರುತ್ತದೆ. ನಮ್ಮ ಬಳಿ ಅನೇಕ ಶಿಷ್ಯಂದಿರು ಕಲಿಯುತ್ತಿದ್ದು, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾದ ತಲುಪಲು ಸಾಧ್ಯವಾಗುತ್ತಿರುವುದು ತಂತ್ರಜ್ಞಾನದ ಕೊಡುಗೆಯೇ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT