ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ನಾಡಿನ ‘ಕನ್ನಡ ಕೋಗಿಲೆ’

Last Updated 27 ಸೆಪ್ಟೆಂಬರ್ 2018, 19:43 IST
ಅಕ್ಷರ ಗಾತ್ರ

ಹಾಡು–ಪಾಡೇ ಇವರ ಬದುಕಿಗೆ ಸಾಂತ್ವನ. ಊರಿನ ಪಕ್ಕದಲ್ಲಿಯೇ ಚಿನ್ನದ ಗಣಿ‌. ಈ ಕೃಷ್ಣ ಸುಂದರಿಯ ಗಾನ ಪ್ರತಿಭೆ ಕೂಡ ಚಿನ್ನದಂತೆ ನಾಡಿನಾದ್ಯಂತ ಹೊಳೆಯುತ್ತಿದೆ.

ಹೌದು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡೇನಹಳ್ಳಿಯ ವೈ.ಜಿ. ಉಮಾ ಪ್ರತಿಭೆಯ ಖನಿ. ಸೋಬಾನೆ, ತತ್ವಪದಗಳ ಹಾಡುಗಾರ್ತಿ. ತಾಯಿ ಶಾರದಮ್ಮನ ಮಡಿಲಲ್ಲಿ ಜನಪದ, ಕೈವಾರ ತಾತಯ್ಯ, ಗಟ್ಟಹಳ್ಳಿ ಆಂಜಿನಪ್ಪ ಅವರ ತತ್ವಪದಗಳನ್ನು ಆಲಿಸುತ್ತಾ, ಹಾಡುತ್ತಾ ಬೆಳೆದರು. ಊರಿನ ಭಜನಾ ಮಂಡಳಿಯಲ್ಲಿ ತಾಯಿ ಜತೆಗೂಡಿ ಹಾಡುತ್ತಾ ಅದರ ಲಾಲಿತ್ಯ ಕಲಿತರು.

ಈಗ ಕಲರ್ಸ್‌ ಸೂಪರ್ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಪ್ರಸಾರವಾಗುತ್ತಿರುವ ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋನಲ್ಲಿ ಗಾನ ಮಾಧುರ್ಯದ ಮೂಲಕ ಮನೆಮಾತಾಗಿದ್ದಾರೆ.

ಶೋನ ಆರಂಭದಲ್ಲಿ ಅವರು ಹಾಡಿದ ‘ತಂದನ್ನ ತಾನಾನಿ/ ತಂದಾನಾನಿ ತಾನಾನಾ/ ಕೇಳು... ಕೇಳು ನನ್ನ ತಂಗಿ ಉತ್ತನಹಳ್ಳಿ ಮಾರವ್ವ’ ಜನಪದ ಗೀತೆ ಶೋನಲ್ಲಿ ಅವರು ಉಳಿಯುವಂತೆ ಮಾಡಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜನ‍ಪದ ಗಾಯಕ, ಕಲಾವಿದ ಗುರುರಾಜ ಹೊಸಕೋಟೆ ‘ತಂಗಿ ಉಮಾ ಎಲ್ಲಿದ್ದೀಯವ್ವಾ ಇಲ್ಲೀ ತನಕ‌‌‌...’ ಎಂದು ಅವರ ಪ್ರತಿಭೆಯನ್ನು ಕೊಂಡಾಡಿದರು.

ಶೋನ ತೀರ್ಪುಗಾರರಾದ ಸಾಧುಕೋಕಿಲ, ಅರ್ಚನಾ ಉಡುಪ, ಚಂದನ್‌ ಶೆಟ್ಟಿ ತಲೆದೂಗುವಂತೆ ಅವರ ಕಂಠಸಿರಿ ಮೋಡಿ ಮಾಡಿತು. ಟಿ.ವಿ ಸೆಟ್‌, ಮೊಬೈಲ್‌ ಮೂಲಕ ವೀಕ್ಷಣೆ ಮಾಡುತ್ತಿದ್ದ ಪ್ರೇಕ್ಷಕರಲ್ಲೂ ಗಾನ ತರಂಗದ ಅಲೆಯೆಬ್ಬಿಸಿದರು. ಅವರು ಹಾಡಿದ ಭಕ್ತಿಗೀತೆ ‘ಅಮ್ಮ ಭೈರವಿ/ ಅಮ್ಮ ಶಾಂಭವಿ/ ಓ ಬನಶಂಕರಿ... ಓ ರಾಜೇಶ್ವರಿ’ ಹಾಡಿಗಂತೂ ಪ್ರೇಕ್ಷಕ ವರ್ಗ ಥೇಟ್‌ ದೇವತೆ ಕಂಡಂತೆ ಪುನೀತರಾದರು. ‌

‘ಮಲೆನಾಡ್‌ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು...’ ಹಾಡು ಯುವ ಹೃದಯಗಳಲ್ಲಿ ರಂಗು ತುಂಬಿದರೆ, ‘ರಂಭೆ ಈ ವೈಯಾರದ ರಂಭೆ...’ ಹಾಡಿಗಂತೂ ರಸಿಕ ಮನಗಳು ತಣಿದವು. ಹೀಗೆ ಹುಚ್ಚೆದ್ದು ಕುಣಿಯುವಂತೆ ಮಾಡುವ ಹಾಡಿನ ಗತ್ತಿಗೆ, ಮಾತಿಗೆ, ಮನಸೋತವರೇ ಇಲ್ಲ. ಈಗ ಸ್ಪರ್ಧೆ ಕಠಿಣ ಹಂತ ತಲುಪುತ್ತಿದ್ದು, ಪ್ರತಿಭೆ ಒಂದೇ ನೆಚ್ಚಿಕೊಂಡಿರುವ ಉಮಾ ಅದರಲ್ಲೇ ತಲ್ಲೀನರಾಗಿದ್ದಾರೆ. ‌

ಹಳ್ಳಿಯ ಬಡ ಪ್ರತಿಭೆಯೊಂದು ಮುಖ್ಯವಾಹಿನಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವ ಪರಿಶ್ರಮದ ಹಿಂದೆ ಕಲ್ಲು – ಮುಳ್ಳಿನ ಹಾದಿ ಸವೆದ ಅನುಭವದ ಕಥನ ಇದೆ. ಬೋಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುವ ಸಮಯದಲ್ಲಿ ಅವರ ಹಾಡಿನ ಪ್ರತಿಭೆ ಕಂಡು ಶಿಕ್ಷಕ ನಾಗರಾಜ್‌ ನೀರೆರೆಯುತ್ತಾರೆ. ಕಾಮಸಮುದ್ರದಲ್ಲಿ ಪ್ರೌಢಶಾಲೆ ಕಲಿಯುವಾಗ ‘ಪ್ರತಿಭಾ ಕಾರಂಜಿ’ ಸ್ಪರ್ಧೆ ಮೂಲಕ ತಾಲ್ಲೂಕಿಗೆ, ಜಿಲ್ಲೆಗೆ ಅವರ ಪ್ರತಿಭಾ ಸಾಮರ್ಥ್ಯ ಪರಿಚಯವಾಗುತ್ತದೆ.

ಕೋಲಾರದಲ್ಲಿ ಪಿಯು ಮುಗಿಸಿ, ಡಿ.ಇಡಿಗೆ ಸೇರಿದ ಮೇಲೆ ಅಲ್ಲಿ ಪ್ರತಿಭೆ ಅರಳಲು ವೇದಿಕೆ ಸಿಗುತ್ತದೆ. ಒಮ್ಮೆ ಕಾಲೇಜಿನ ವತಿಯಿಂದ ಶಿವಗಂಗೆ ಬೆಟ್ಟದ ‘ಆದಿಮ’ ಕುಟೀರದಲ್ಲಿ ಕ್ಯಾಂಪ್‌ ನಡೆಯುತ್ತದೆ. ಅಲ್ಲಿ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರ ಪರಿಚಯವಾಗುತ್ತದೆ. ಅಲ್ಲಿಂದ ಅವರ ಬದುಕಿನ ದಿಕ್ಕೇ ಬದಲಾಗುತ್ತದೆ.

ಕೋಟಿಗಾನಹಳ್ಳಿ ರಾಮಯ್ಯ ಅವರ ‘ನಾಯಿ ತಿಪ್ಪ’, ‘ಹಾಲು–ನೀರು’, ‘ಸಣ್ಣಾಸ್ಪತ್ರೆ ಕ್ಯೂನಲ್ಲಿ’, ‘ಜಗದಾಂಬೆ’ ನಾಟಕಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ರಂಗಭೂಮಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಈ ಆಸಕ್ತಿ ಮುಂದೆ ರಂಗಭೂಮಿ ನಟಿಯಾಗಿ ಬೆಳೆಯಲು ಸಹಾಯಕವಾಗುತ್ತದೆ. ಮಾಲೂರಿನಲ್ಲಿ ಪದವಿಗೆ ಸೇರುತ್ತಾರೆ. ಅಲ್ಲಿ ಪ್ರಾಂಶುಪಾಲರಾಗಿದ್ದ ಪ್ರೊಚಂದ್ರಶೇಖರ ನಂಗಲಿ ಅವರು ಸಾಹಿತ್ಯದ ಅಭಿರುಚಿ ತುಂಬಿ ರಂಗಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲಲು ಪ್ರೋತ್ಸಾಹ ನೀಡುತ್ತಾರೆ.

ಮುಂದೆ ಅವರು ಸಾಗರದ ಹೆಗ್ಗೋಡಿನ ‘ನೀನಾಸಂ’ ಸೇರಿದ್ದು ಕೂಡ ರೋಚಕ ಅನುಭವವೇ. ಪದವಿ ಮುಗಿದ ಮೇಲೆ ಹಿತೈಷಿಗಳ ಮಾರ್ಗದರ್ಶನದಲ್ಲಿ ನೀನಾಸಂ ರಂಗ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುತ್ತಾರೆ.

ಅಲ್ಲಿನ ರಂಗಶಿಕ್ಷಣದಿಂದ ಬದುಕಿನಲ್ಲಿ ಪರಿಪಕ್ವತೆ ಸಾಧಿಸುತ್ತಾರೆ. ನೀನಾಸಂ ತಿರುಗಾಟ ನಾಟಕಗಳಲ್ಲಿನ ಅಭಿನಯ ವೃತ್ತಿಪರತೆ ಕಲಿಸುತ್ತದೆ. ಈ ನಡುವೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶ ಹುಡುಕಿ ಬಂದರೂ ರಿಯಾಲಿಟಿ ಶೋ ಕಾರಣದಿಂದ ಕೈ ಬಿಟ್ಟಿದ್ದಾರೆ.

‘ಒಂದೂವರೆ ವರ್ಷ ಮಗು ಇದ್ದಾಗ ಹೆತ್ತ ತಾಯಿ ಕಳೆದುಕೊಂಡೆ. ತನ್ನ ತಾಯಿಯ ಸೋದರಿ ಶಾರದಮ್ಮ‌ ಅವರ ನೆರಳಿನಲ್ಲಿ ಬದುಕು ಕಟ್ಟಿಕೊಂಡ ಅನಾಥ ಮಗು ನಾನು. ಇಂದಿಗೂ ಹರಕು ಮನೆಯಲ್ಲಿಯೇ ಜೀವನ ಸಾಗಿದೆ. ಒಪ್ಪೊತ್ತಿನ ಊಟಕ್ಕೂ ಕೂಲಿ ಕೆಲಸ ಮಾಡಿ ಅವರು, ಕಣ್ಣರೆಪ್ಪೆಯಾಗಿ ಕಾಪಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮನೆ ವಿದ್ಯುತ್ ದೀಪ ಕಂಡಿದೆ. ತಂತ್ರಜ್ಞಾನ ಯುಗದಲ್ಲೂ ಬುಡ್ಡಿದೀಪದ ಬೆಳಕೇ ಬಾಳು ಬೆಳಗಿಸಿತು’ ಎನ್ನುವ ಉಮಾ ಮಾತು ಯುಜನರಿಗೆ ಪ್ರೇರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT