ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಬಹುಶ್ರುತ ವಿದುಷಿಯ ಗಾನ ಯಾನ

Last Updated 20 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಟಿ.ಎಸ್‌. ರಮಾ ಎರಡು ರೀತಿಯಲ್ಲಿ ಖ್ಯಾತಿ ಪಡೆದವರು. ಒಂದು ಉತ್ತಮ ಗಾಯಕಿಯಾಗಿ, ಇನ್ನೊಂದು ಅತ್ಯುತ್ತಮ ಪ್ರಾಧ್ಯಾಪಕಿಯಾಗಿ. ಸಂಗೀತದ ಅಧ್ಯಯನ, ಅಧ್ಯಾಪನ, ಬೋಧನೆ, ಸಂಪನ್ಮೂಲ ವ್ಯಕ್ತಿ... ಹೀಗೆ ಸಂಗೀತದ ಎಲ್ಲ ಆಯಾಮಗಳಲ್ಲಿ ಸಾಕಷ್ಟು ಕೃಷಿ ಮಾಡಿ ಬಹುಶ್ರುತ ವಿದುಷಿ ಎನಿಸಿಕೊಂಡಿದ್ದ ಟಿ.ಎಸ್‌. ರಮಾ ಅವರ ಬದುಕೇ ಒಂದು ರೀತಿಯ ‘ಸಂಗೀತ’ವಾಗಿತ್ತು.

ಮೈಸೂರಿನಲ್ಲಿ ಪಿಟೀಲು ಚೌಡಯ್ಯನವರ ಶಿಷ್ಯರಾಗಿದ್ದ ಪ್ರೊ. ರಾಮರತ್ನಂ ಅವರ ಮನೆಯಲ್ಲಿ ಇದ್ದುಕೊಂಡೇ ಸಂಗೀತ ಅಭ್ಯಾಸ ಮಾಡಿದವರು. ಮುಂದೆ ಖ್ಯಾತ ವಿದ್ವಾಂಸ ಎಲ್‌.ಎಸ್‌. ನಾರಾಯಣಸ್ವಾಮಿ ಭಾಗವತ ಅವರ ಬಳಿಯೂ ಶಿಷ್ಯತ್ವ ಪಡೆದವರು. ಅದಾಗಿ ವಿದ್ವಾನ್‌ ಬಂಗಾರಪೇಟೆ ಕೃಷ್ಣಮೂರ್ತಿ ಅವರ ಬಳಿಯೂ ಸಂಗೀತದ ಹೆಚ್ಚಿನ ಮಾರ್ಗದರ್ಶನ ಪಡೆದವರು.

ಸಂಗೀತವನ್ನು ಅಕಾಡೆಮಿಕ್‌ ಆಗಿ ಅಧ್ಯಯನ ಮಾಡುವ ಸಲುವಾಗಿ ರಮಾ, 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ತರಗತಿ ಸೇರಿದರು. ಮುಂದೆ ಬೆಂಗಳೂರಿನ ಎ.ಪಿ.ಎಸ್‌. ಕಾಲೇಜಿನಲ್ಲಿ ಸಂಗೀತದ ಪ್ರಾಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದವರು. ಅದಾಗಿ ಜೈನ್‌ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ದುಡಿದವರು. ಆಕಾಶವಾಣಿಯ ಟಾಪ್‌ ಗ್ರೇಡ್‌ ಕಲಾವಿದೆಯಾಗಿದ್ದ ಇವರು, ಅನೇಕ ವರ್ಷಗಳಿಂದ ಆಕಾಶವಾಣಿ ದೂರದರ್ಶನಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಮನೆಮಾತೂ ಆಗಿದ್ದರು.

ಸಂಗೀತವೇ ಬದುಕು

ರಮಾ ಅವರ ಬದುಕೇ ಸಂಗೀತವಾಗಿತ್ತು. ಚಿಕ್ಕಂದಿನಿಂದಲೇ ಸಂಗೀತದೊಂದಿಗೇ ಒಡನಾಡಿಕೊಂಡು ಬಂದ ರಮಾ 2020ರ ಫೆಬ್ರುವರಿಯಲ್ಲಿ ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಅದ್ಧೂರಿಯಾಗಿ ನಡೆಸಿದ ಗಾನಕಲಾ ಸಂಗೀತ ಸಮ್ಮೇಳನದಲ್ಲಿ ಹಾಡಿದ್ದರು. ಈ ಹಿಂದೆ ಪರಿಷತ್ತಿನ ವಿದ್ವತ್‌ ಸಭೆಯಲ್ಲಿ ಸಂಗೀತ ಕುರಿತ ಉಪನ್ಯಾಸ ನೀಡಿದ್ದರು. ಸೋದಾಹರಣ ಭಾಷಣ, ಸಂಗೀತ ಪ್ರಾತ್ಯಕ್ಷಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಛೇರಿಗಳನ್ನೂ ನೀಡಿದ್ದರು. ಗಾನಕಲಾಪರಿಷತ್‌ ವತಿಯಿಂದ ‘ಗಾನ ಕಲಾ ಕಸ್ತೂರಿ’ ಎಂಬ ಬಿರುದನ್ನೂ ನೀಡಿ ಗೌರವಿಸಲಾಗಿತ್ತು.

‘ಗಾಯನದಲ್ಲಿ ಸಾತ್ವಿಕತೆ’

‘ರಮಾ ಅವರ ಗಾಯನದಲ್ಲಿ ಬಹಳ ಸಾತ್ವಿಕತೆಯಿತ್ತು. ಭಾವಪೂರ್ಣವಾಗಿ ಹಾಡುತ್ತಿದ್ದರು. ಉತ್ತಮ ಮನೋಧರ್ಮ, ಸಂಗೀತದ ಶಾಸ್ತ್ರ ಹಾಗೂ ಪ್ರಾಯೋಗಿಕ ಎರಡೂ ಭಾಗಗಳಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದರು. ಗಾಯನವನ್ನು ವಿದ್ವತ್ಪೂರ್ಣವಾಗಿ ನಿರೂಪಿಸುತ್ತಿದ್ದರು. ರಾಗ, ಲಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದರಿಂದ ಅವರ ಸಂಗೀತ ಕಛೇರಿ ಸದಾ ಲವಲವಿಕೆಯಿಂದಲೇ ಕೂಡಿರುತ್ತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸಂಗೀತ ವಿದ್ವಾಂಸ ಆರ್‌.ಕೆ. ಪದ್ಮನಾಭ ಅವರು.

‘ನನಗೂ ರಮಾ ಅವರಿಗೂ ಸುಮಾರು 47 ವರ್ಷಗಳಿಂದ ಒಡನಾಟವಿತ್ತು. ಕಳೆದ 15 ದಿನದ ಹಿಂದೆ ಅವರೊಂದಿಗೆ ಒಂದು ಗಂಟೆ ಕಾಲ ಸಂಗೀತದ ಬಗ್ಗೆಯೇ ಚರ್ಚೆ ನಡೆಸಿದ್ದೆ. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ’ ಎಂದೂ ಖೇದ ವ್ಯಕ್ತಪಡಿಸುತ್ತಾರೆ ಪದ್ಮನಾಭ.

ಕರ್ನಾಟಕ ಶಾಸ್ತ್ರೀಯ ಸಂಗೀತದ ಒಬ್ಬ ಅಪರೂಪದ ತಾರೆಯನ್ನು ಇದೀಗ ಕಳೆದುಕೊಂಡಂತಾಗಿದೆ. ಹಲವಾರು ಶಿಷ್ಯಂದಿರನ್ನೂ ತಯಾರು ಮಾಡಿದ್ದ ಅವರು ಹಾಕಿಕೊಟ್ಟ ಸಂಗೀತ ಹೆಜ್ಜೆಯಷ್ಟೇ ಇನ್ನು ಸಂಗೀತರಸಿಕರಿಗೆ ದಾರಿದೀಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT