ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾ ದಿವಾಕರ ಅವರ ಕವನ: ಹನಿಗೊಂದು ಬೊಗಸೆಗಾಗಿ

Published 30 ಜೂನ್ 2024, 0:26 IST
Last Updated 30 ಜೂನ್ 2024, 0:26 IST
ಅಕ್ಷರ ಗಾತ್ರ

ನನ್ನ ಕಂಬನಿಗೊಂದು
ಬೊಗಸೆ ಬೇಕಿದೆ
ನೆಲೆಗಾಣದ ನೋವುಗಳು
ಬಿತ್ತರಿಸುವ ಹನಿಗಳನು
ನೆಲಗಾಣದ ಹಾಗೆ ಕಾಪಿಡಲು
ಒಂದು ಬೊಗಸೆ ಬೇಕಿದೆ ;

ಅಮ್ಮನ ಸೆರಗಂಚಿನ ನೆನಪು
ಹನಿಹನಿಯೂ ಧ್ವನಿಸುತ್ತದೆ
ಅದೆಷ್ಟು ಕಸುವಿತ್ತು
ಆ ತುಣುಕು ಬಟ್ಟೆಯಲಿ
ಮೂಗು ಸೀಟಿದ ಕಲೆಯೊಡನೆ
ಕಣ್ಣ ಹನಿ ಬೆರೆವಾಗ
ನೇವರಿಸುವ ಕೈಗಳೇ ಜೀವಸಾಕ್ಷಾತ್ಕಾರ ;

ನೆನಪುಗಳಿಂದೊಸರುವ
ಒಂದೆರಡು ಹನಿ
ಯಾರಿಗಾಗಿ ಎಂದರೆ
ಹೇಳಲೇನುಂಟು
ಏತಕ್ಕಾಗಿ ಎಂಬ ಪ್ರಶ್ನೆಗೆ
ಉತ್ತರವಾದರೂ ಎಲ್ಲುಂಟು ?

ಅಮ್ಮ ನೆನಪಾಗುತ್ತಾಳೆ
ತೊರೆದವರು ಕಾಡಿದಾಗೆಲ್ಲಾ,,,,
ಅವಳ ಬೊಗಸೆಯಲೂ ಒಂದು
ಹೃದಯವಡಗಿತ್ತು
ಸೆರಗಿನೊಡನೆ ಸಂವಾದಿಸುವ
ಅವಳ ಒಡಲಾಳದ ಮಾತು
ಕಣ್ಣಂಚಿನ ಹನಿಹನಿಯಲೂ
ಉಸಿರಾಡುತಿತ್ತು !

ಇಂದು ಅವಳಿರಬೇಕಿತ್ತು
ಅಣ್ಣನಿಗೆ ಮಿಡಿದ ಒಂದೆರಡು ಹನಿಗೆ
ಅವಳು ಮಡಿಲಾಗಬಹುದಿತ್ತು ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT