ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಲ್ಗುಣ ಗೌಡ, ಅಚವೆ ಅವರ ಕವಿತೆ 'ಹಿತ್ತಿಲು'

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಹಿತ್ತಿಲೆಂದರೆ ಅಕ್ಕ ನೆಟ್ಟ
ಬಸಲೆ ಚಪ್ಪರ ಮಿಂದ ನೀರು
ಸೋಸಿದ ಚಾ ಸೊಪ್ಪು
ಅಕ್ಕಿ ತೊಳೆದ ನೀರು
ಅನ್ನ ಬಾಗುವ ಕೊಯ್ಟು
ನಡು ಮಧ್ಯಾಹ್ನ ಹಾಕುವ ಗಂಜಿಗಾಗಿ ಕಾಯುವ ನಾಯಿ

ಸದಾ ಎಳ್ಳಿದಂತೆ ಕಾಣುವ ಅಬ್ಬಲಿ
ಮಾವಿನ ಮರ ತಬ್ಬಿದ ಮಲ್ಲಿಗೆ
ಬೊಟ್ಟಿ ಗೊಂಡೆ ಹೂಗಳು ಅವಳ ಹಿತ್ತಿಲ ಭಾಗವೇ

ಗೆಂಡೆ ತುಂಡು ತುಂಡು ಮಾಡಿ ನೆಟ್ಟ
ಕೆಸಿನ ಓಳಿ ಮಳೆಗಾಲದಲ್ಲಿ ಹುರೇಸುವುದೇ
ನನ್ನ ಕೆಲಸ
ಸೌತೆ ಮೊಗೆ ಓಳಿಗಳೂ ದೀಪಾವಳಿ
ನಿರೀಕ್ಷೆಯಲ್ಲಿರುತ್ತವೆ
ಪುಟಪುಟಿಯಾಗಿ ಕಂಡ ಪೆಂಡೆ
ಒಣಗುತ್ತಿರುತ್ತದೆ ಗಿಡದ ಮೇಲೆ
ಅದರೆಲ್ಲ ಸತ್ವ ಹೀರಿ ಮತ್ತೆ ಜೀವ ಪಡೆಯಲು

ಈ ಹಿತ್ತಿಲಿಗೆ ಅಪ್ಪ ಬರುವುದೇ ಕಡಿಮೆ
ತಾಯಿಯಿಲ್ಲದ ನನ್ನ ಹೊಟ್ಟೆಯ ಮಗುವಿನಂತೆ ಕಾದ ಅಪ್ಪ
ಅವಳ ಸೆರಗಿಗೆ ನನ್ನನ್ನು ಕಟ್ಟಿಬಿಟ್ಟ

ಇಲ್ಲೂ ಒಂದು ಸಣ್ಣ ಅಂಗಳ
ಮೆರಿಯುವ ಒನಕೆಯ ಒಳ್ಳು
ಗೋಲಾಕಾರದಲ್ಲಿ ಹರಗಿದ ಮುರಗಲ ಓಡು
ವಾಟೆ ಹುಳಿ ಜುಮ್ಮನ ಕರೆ ಎಲ್ಲ ಬರುವ
ಮಳೆಗಾಲದ ಖರ್ಚನ್ನು ತೋರಿಸುತ್ತಿವೆ

ಶೆಟ್ಲಿ ಕಲ್ಗ ಚಿಪ್ಪಿಕಲ್ಲಿನ ಮಾಯ್ಸ
ಒಣಗಿಸಿ ಕೊಟ್ಗಿ ಕಟ್ಟಿಡುವ ಅಕ್ಕನಿಗೆ
ಸಂಜೆಯಾದರೆ ಅದೇ ಕೆಲಸ

ಒಮ್ಮೊಮ್ಮೆ ಹಳ್ಳದ ಕಡೆಗೆ ಸುಬದ್ರಿ ಬಂದರೆ
ಮೇಲಿನ ಮನೆಯ ಸುಬ್ಬಿ ಬಂದರೆ
ಹಳ್ಳಕ್ಕೆ ಬಟ್ಲು ಹಾಕಿ ಮೀನು ಹಿಡಿಯುವ
ಸುದ್ದಿಯದೇ ಮಾತು


ಮತ್ತು
ಚನಗಾರದಲ್ಲಿ ನಾಟಕ ಕಡ
ತಾಲೀಮು ಮಾಡ್ತೀವ್ರ ಕಡ ಅನ್ನುತ್ತ
ತಿಂಗಳ ಮೊದಲೇ ಸಂಭ್ರಮ

ಇದೇ ಚಿಟ್ಟಿಯ ಮೇಲೆ ಹೂವಿನ ಜಡೆ ಕಟ್ಟುವ
ಹಲಸು ಕೆಮುಂಡೆ ಇಸಾಡು ಹಣ್ಣುಗಳ
ಕೊಯ್ದು ಹಂಚುವ
ಹೊಸ್ತಿನ ಉಪಾರ ತಿನ್ನುವ
ಬೆಳದಿಂಗಳಲ್ಲಿ ಪಳ್ದಿ ಬಡಿಸಿ ಉಂಬುವ
ಕತೆಗಳಿಗೇನು ಕಡಿಮೆಯಿಲ್ಲ

ಅಣ್ಣನ ಮದುವೆಯ ಸಕಲ ಸಂಗತಿಗಳೂ
ನಿಕ್ಕಿ ಮಾಡಿದ್ದು
ಉಂಡ ಮೇಲೊಂದು ಗಳಿಗೆ ಮಲಗಿ
ಆರಲು ಮೂರು ಗೆಂಟಿನ ಕಣೆ
ಬೆಳ್ಳು ಚಂದಿರನ ನೋಡುವುದು
ಓಡುವ ನಕ್ಷತ್ರಗಳನ್ನು ಕಾಣಿಸುವುದು ಇದೇ ಜಾಗದಲ್ಲಿ

ಹಿತ್ತಿಲೆಂದರೆ ಅಕ್ಕನಿಗೆ
ಅವಳ ದೈನಿಕದ ಆಗು ಹೋಗುಗಳ
ನೈಜ ಕೌಟುಂಬಿಕತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT