ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧ್ಯಾ ಹೊನಗುಂಟಿಕರ್ ಬರೆದ ಕಥೆ: ಹೆಸರು ಕಳೆದುಕೊಂಡ ಊರು

Last Updated 28 ಜನವರಿ 2023, 19:31 IST
ಅಕ್ಷರ ಗಾತ್ರ

ಅದೊಂದು ಊರು.ಊರು ಅಂದಮ್ಯಾಲೆ ಅಲ್ಲಿಗೆ ಹೋಗಲು ದಾರಿ ಇರಲೇಬೇಕಲ್ಲ. ದಾರಿಯೇನೋ ಇತ್ತು. ಇದ್ದರೂ ಅದು ಆ ಊರಿಗೆ ಸರಕಾರದಿಂದ ನಿರ್ಮಾಣಗೊಂಡ ರಸ್ತೆ ಅಂತ ಇರಲಿಲ್ಲ. ‘ಇದೇನೋ ಹೊಸ ವಿಷಯವೇ? ನಮ್ಮ ದೇಶದಲ್ಲಿ ಯಾವ ಊರಿಗೆ ರಸ್ತೆ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯ’ ಅಂತ ನೀವು ಹೇಳಬಹುದು. ನೀವನ್ನೋದು ಅಗದಿ ಖರೆ.. ಆದ್ರೆ ರಸ್ತೆನೇ ಇರದ ಆ ಊರಿಗೆ ಬರುವ ಹೋಗುವ ಜನರೇನೂ ಕಡಿಮೆ ಇರಲಿಲ್ಲ ಬಿಡ್ರಿ. ಜನರು ತುಳಿದದ್ದೇ ದಾರಿಯಾಗಿತ್ತು. ಆನಿ ನಡದದ್ದೆ ಹಾದಿ ಅಂದಂಗೆ, ಆ ಊರಿನ ಮಂದಿಯ ಬದುಕೂ ಯಾವ ನಿಯಮಕ್ಕೂ ಬದ್ಧವಾಗಿರಲಿಲ್ಲ. ಹಾಗಂತ ಆ ಊರೇನು ಬಹಳ ದೊಡ್ಡದು ಅಂತ ತಿಳಿಬ್ಯಾಡ್ರಿ. ಒಂದು ತಾಲ್ಲೂಕಿನ ಇತ್ತ ಹಳ್ಳಿನೂ ಅಲ್ಲ ಪಟ್ಟಣವೂ ಅಲ್ಲ ಅನ್ನುವಂತಾ ಊರದು. ನೀವೆಣಿಸಿದಂಗ ನಾನೇನು ಆ ಊರಿನ ಮಹತ್ವದ ಬಗ್ಗೆ ಖಂಡಿತ ಹೇಳುತ್ತಿಲ್ಲ. ಮತ್ತೇನು ಹೇಳ್ತೀರಿ ?ಅದಕ್ಕೆ ಸುತ್ತು ಬಳಕೆ ಯಾಕ ಅಂತೀರೇನೂ? ಸರಿ ಹಂಗಾದ್ರ ಹೇಳುವ ಕಥೆಯನ್ನು ನೇರವಾಗಿ ಹೇಳ್ಬಿಡ್ತಿನಿ .

ಅದೊಂದು ಊರು. ಊರಿನ ರಸ್ತೆ ಸುದ್ದಿ ಬ್ಯಾಡ ಅಂದ್ರಲ್ಲಾ. ರಸ್ತೆ ಯಾಕ, ಬೇರೆ ಯಾವ ಸುದ್ದಿಯನ್ನೂ ಬ್ಯಾಡ ಬಿಡ್ರಿ. ಬರೀ ಊರದು. ಅಲ್ಲಿ ಒಬ್ಬ ಮುತ್ಯಾ. ಆತನೇ ಊರಿಗೆ ಹಿರಿಯ. ಬಹುಶಃ ಅವನು ಯಾವಾಗ ಪ್ರಾಯದವನಾಗಿದ್ದನೊ ಗೊತ್ತಿಲ್ಲ. ಆದರ ಈ ಊರು ನೋಡಿದಾಗಿಂದ ಆತ ಅಜ್ಜನೇ ಆಗಿದ್ದ. ಹಂಗಾಗಿ ಊರ ಮಂದೆಲ್ಲ ಮುತ್ಯಾ ಮುತ್ಯಾ ಅಂತ ಕರಿತಿದ್ರು. ಆತನ ಹೆಸರು ಏನು ಅಂತ ಇವತ್ತಿಗೂ ಯಾರಿಗೂ ಗೊತ್ತಿಲ್ಲ. ಆದರ ಆತನಲ್ಲಿ ಅದೆಷ್ಟು ಹೆಸರುಗಳು ಇದ್ದವು ಅನ್ನೋದು ಮುಂದೆ ನಿಮಗೆ ಗೊತ್ತಾಗ್ತದ. ಆತ ವಾಸ ಮಾಡುತಿದ್ದ ಮನೆ ಗುಡಿಸಿಲಿನಂತೆ ಅಲ್ಲದಿದ್ರೂ ಹೊಂದಿಕೊಳ್ಳಲೇಬೇಕಾದಷ್ಟು ಬಹಳಷ್ಟು ಅನನುಕೂಲಗಳಂತೂ ಇದ್ದವು. ಆ ಸಣ್ಣ ಮನೆಯೊಳಗೇ ಹತ್ತಾರುಮಂದಿ, ಮಕ್ಕಳು ಅಲ್ಲದೆ ದನ, ಕರು, ನಾಯಿ, ಬೆಕ್ಕು ಅವುಗಳ ಮರಿಗಳು,ಗೋಡೆಮ್ಯಾಲ ಹಲ್ಲಿ ,ನೊಣಗಳು ಸೊಳ್ಳೆ, ಜಿರಳೆ, ಇರುವೆಗಳು ಇವೆಲ್ಲವೂ ಆ ಮನೆಯ ಮಂದಿಯ ಜೊತೆಗೆ ಸಹಜೀವಿಗಳಾಗಿದ್ದವು. ಮನೆ ಅಂದಮ್ಯಾಲೆ ಇವೂ ಇರಲೇಬೇಕಲ್ಲ. ಅದರ ಜೊತೆಗೆ ಕೆಲಸ, ಜಗಳ, ಕೂಗಾಟ, ಬೈಗುಳ, ಪ್ರೀತಿ, ಕಾಮ, ಪ್ರೇಮ, ಚಾಡಿ ಚುಗಲಿ, ಬೆದರಿಕೆ ಎಲ್ಲವೂ ಸಾಕಷ್ಟು ಇತ್ತು. ಹಾಗಾಗಿಯೆ ಅದು ಒಂದು ಮನೆ ಅನಿಸಿತ್ತು. ವ್ಯವಹಾರವೆಲ್ಲಾ ಹಿರಿಯ ಮಗ ಬಸ್ರಾಜ ನೋಡಿಕೊಳ್ಳುತ್ತಿದ್ದ. ಅಜ್ಜ ಯಾವುದರಲ್ಲೂ ತಲೆಹಾಕದೆ ಮನೆಯ ಹೊರಜಗಲಿಯಲ್ಲಿ ಕೊಂಚೂರಿನ ಕಂಬಳಿ ಹಾಸಿಕೊಂಡು ಗೋಡೆಗೆ ಬೆನ್ನು ಆನಿಸಿ ಕೂಡುತ್ತಿದ್ದ. ಕೂತಷ್ಟೂ ಹೊತ್ತು ಕಣ್ಣು ಮುಚ್ಚಿಯೇ ಇರುತ್ತಿದ್ದ ಮುತ್ಯಾ ಆಗಾಗ ಒಂದು ಕ್ಷಣಕಾಲ ಮಾತ್ರ ಕಣ್ಣು ತೆರೆಯುತ್ತಿದ್ದ. ಯಾವಾಗಲೂ ಅದೇನನ್ನೋ ಧ್ಯಾನಿಸುತ್ತಿದ್ದ ಅನಸ್ತಿತ್ತು. ಒಳಗಿನಿಂದ ಹುಣಸಿ ಬೀಜಕ್ಕೊ, ಕಡ್ಡಿಪೊಟ್ಟಣಕ್ಕೊ, ಅಜ್ಜನ ನಾಶಿ ಡಬ್ಬಿಗೊ ಮೊಮ್ಮಕ್ಕಳಿಬ್ಬರು ಜಗಳ ಆಡ್ತಾ ಕಚ್ಚಾಡುತ್ತಾ ಬಂದಾಗ ಆ ಧ್ಯಾನಕ್ಕೆ ಅಡಚಣೆ ಆಗುತಿತ್ತು ಅಜ್ಜನಿಗೆ.
‘ಸೂರ್ಯ, ಚಂದ್ರ ಗದ್ಲ ಮಾಡಬ್ಯಾಡ್ರೋ ಭೂಮಿ ಹೆಂಗ ತಡದೀತು? ಹೋಗ್ರಿ ಅಚಗಡಿ’ ಎಂದು ಗದರಿದಾಗ
‘ಮುತ್ಯಾ ನಮ್ಮ ಹೆಸ್ರು ರವಿಕಾಂತ ಶಶಿಕಾಂತ ಅಂತ ಅದ. ನೀ ಯಾವಾಗ್ಲೂ ಹಿಂಗೇ ಹೆಸರು ಬದಲಾಯಿಸಿ ಕರಿತೀದಿ ನಮ್ಮನ್ನು’
ಅಂತ ಅಜ್ಜನನ್ನು ತಿದ್ದಿದಾಗ ಅಜ್ಜ ಕಿಲಕಿಲಾಂತ ನಕ್ಕ. ಮಕ್ಕಳು ಕಚ್ಚಾಡುವುದನ್ನು ಮುಂದುವರಿಸಿದ್ದವು.
‘ಹೆಸರನ್ಯಾಗ ಏನೈತಿ? ಅರ್ಥದಾಗ ಮಹತ್ವ ಐತಿ. ಸೂರ್ಯ ಚಂದ್ರ ಅಂದ್ರನೂ ಒಂದೆ. ರವಿ ಶಶಿ ಅಂದ್ರೂನು ಒಂದೇ. ಸೂರ್ಯನಂಗ ಬೆಳಗಿರಿ, ಚಂದ್ರನಂಗ ತಂಪು ನೀಡ್ರಿ ಮಕ್ಕಳಾ. ನಾನು ತಪ್ಪು ಮಾತಾಡಂಗಿಲ್ಲ.ನೀವೇ ತಿಳಕೋರಿ. ನಾ ಎಷ್ಟಂತ ಬಿಡಿಸಿ ಬಿಡಿಸಿ ಹೇಳಲಿ?’ ಎಂದು ಅಜ್ಜ ಮನಸ್ಸಿನಾಗೆ ಅಂದುಕೊಂಡು ಮುಗುಳುನಕ್ಕ.
‘ಅಪ್ಪಾ.. ಯಾಕ ನೀನೆ ನಗಲಕತ್ತಿದಲ್ಲ. ಏನರ ಖುಷಿ ಸುದ್ದಿ ಏನು?’ ಹಿರಿಮಗ ಫುಲ್ ಶರ್ಟಿನ ತೋಳು ಮಡಚುತ್ತಾ ಕೇಳಿದಾಗ ಉತ್ತರ ಕೊಡಲಿಲ್ಲ. ಮಗ ಬಸವರಾಜ ಅದಕ್ಕ ಒತ್ತಾಯಿಸದೆ
‘ಅಪ್ಪಾ ಎತ್ತುಗಳನ್ನು ಖರೀದಿ ಮಾಡಾಕ ಕಲಬುರಗಿಗೆ ಹೊಂಟೇನಿ. ಹಂಗೇ ಶರಣನ ದರ್ಶನ ಮಾಡ್ಕೆಂಡು ಬರ್ತೀನಿ. ಅಂದಂಗ ಎತ್ತುಗಳಿಗೆ ಏನಂತ ಹೆಸರಿಡಬೇಕು?ಸ್ವಲುಪ ನೋಡಿ ಹೇಳತೇನು’ ಎಂದು ಅಜ್ಜನಿಗೆ ಕೇಳಿದ.
ಅಜ್ಜ ಕಣ್ಣುಮುಚ್ಚಿಯೇ ಕುಳಿತಿದ್ದ. ಏನೂ ಹೇಳಲಿಲ್ಲ. ಮಗ ಇನ್ನೊಮ್ಮೆ ‘ಏ.. ಅಪ್ಪ ಎತ್ತಿಗಳಿಗೆ ಏನಂತ ಹೆಸರಿಡೋಣು?’ ಸ್ವಲ್ಪ ಜೋರಾಗಿ ಕೂಗಿ ಕರೆದ. ‘ಸ್ವಲ್ಪ ನಿಂದ್ರು’ ಅನ್ನುವಂಗ ಕೈಮಾಡಿ ಮುತ್ಯಾ ಕಣ್ಣುಮುಚ್ಚಿ ಕುಳಿತಿದ್ದ. ಮಗನ ಸಹನೆ ಮೀರಿತ್ತು. ಒಮ್ಮಿಂದೊಮ್ಮೆ ‘ಬೆಳೆಸಿ ಅಂತ ಹೆಸರಿಡು’ ಅಂದ. ಮಗನಿಗೆ ಆಶ್ಚರ್ಯ.
‘ಇದೇನು ಹೆಸ್ರು. ಶಂಕರ, ಚಂದ್ರಾಮ, ಸಿದ್ರಾಮ, ಶಿವು ಅಂತ ಹೇಳೋದು ಬಿಟ್ಟು ಅಪ್ಪ ಹಿಂಗ್ಯಾಕ್ ಹೇಳಿದ?’ ಅಂತ ಅಂದುಕೊಳ್ಳುತ್ತ ಹೊರಟನೆ ಹೊರತು ಸೂಕ್ತತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಹೋದ .ಆತ ಹೋದ ಸಪ್ಪಳ ಗೊತ್ತಾಗಿ ಅಜ್ಜ ಕಣ್ಣು ತೆರೆದು ಹೋದ ಹಾದಿಗೆ ‘ಇಲ್ಲ’ ಅನ್ನುವಂಗೆ ಕೈ ಅಲ್ಲಾಡಿಸಿದ.
ಅಜ್ಜ ಸ್ವಗತದಲ್ಲಿ ‘ಹುಚ್ಚುಗೊಟ್ಟಿ, ಎತ್ತಂತ ಎತ್ತು. ಅದ್ಯಾವ ಎತ್ತುಗಳು ಅವು?ಎಳಿಗರುಗಳು ಅವ ಅಲ್ಲಿ. ತಟಕರೆ ಮೈಯ್ಯಾಗ ಸಗತಿ ಜಮಾಸಿಲ್ಲ. ಅಂದಮ್ಯಾಗ ಅವು ಎತ್ತುಗಳು ಹೆಂಗಾಗ್ತವ? ಎಳಿಯ ‘ಬೆಳಸಿ’ ಅನಲಾರದೆ ‘ಸೀತನಿ’ ಅಂತಾರೇನೋ... ಎತ್ತು ಖರೀದಿ ಮಾಡ್ತಾನಂತ... ಎತ್ತು...’ಎಂದು ಕಿಲ ಕಿಲನೆ ನಕ್ಕು ಸುಮ್ಮಾದ.
ಕಲಬುರಗಿಯಿಂದ ಕೊನೆಯ ಬಸ್ಸಿಗೆ ಬಂದ ಬಸ್ರಾಜನ ಮುಖ ಸಣ್ಣದಾಗಿತ್ತು. ಖಾಲಿ ಕೈಯಿಂದ ಬಂದ ಗಂಡನ್ನ ನೋಡಿದ ಶಶಿಕಲಾ, ‘ಯಾಕ ವ್ಯಾಪಾರ ಕುದುರಲಿಲ್ಲೇನು?ಎತ್ತುಗಳು ಭಾಳ ತುಟ್ಟಿ ಅದಾವೇನು’ ಅಂತ ಕೇಳಿದಾಗ ಆತ ಯಾವ ಉತ್ತರ ಹೇಳದೆ ಪಡಸಾಲೆಯ ದೀಪದ ಕಂಬಕ್ಕೆ ಆತು ಕುಂತ. ಶಶಿಕಲಾ ಮತ್ತೆ ಮತ್ತೆ ಗಂಡನ್ನ ಮಾತಾಡಿಸಿದರೂ ಆತ ಸುಮ್ನ ಇದ್ದ. ಅಲ್ಲೇ ಜಗುಲಿಯ ಕಾಲು ಮುದುರಿ ಮಲಗಿದ್ದ ಅಜ್ಜ ‘ಅವನ್ನೇನು ಕೇಳ್ತಿ ? ರೊಕ್ಕದ ಪ್ರಶ್ನೆಯೇ ಇರಲಿಲ್ಲ. ಅಲ್ಲಿದ್ದವು ಸಣ್ಣ ಕರಗೋಳು. ಎತ್ತಾಗಲಿಕ್ಕೆ ಇನ್ನೂ ಎರಡು ವರ್ಷ ಬೇಕು ತಂಗಿ’ ಅಂದ. ಬಸವರಾಜಗ ಅಪ್ಪನ ಮಾತಿಂದ ಅಚ್ಚರಿಯಾಗಿ
‘ಈಟು ನಿಕ್ಕಿ ಗೊತ್ತಿದ್ದರ ನಂಗ ಮೊದಲ ಹೇಳ್ಬೆಕಿಲ್ಲ? ನಾಯಾಕ ಗಾಡಿ ಖರ್ಚಾ ಮಾಡಿಕೊಂಡು ಹೋಗತಿದ್ದೆ’ ಎಂದ.
ಅಜ್ಜ ಮಾತಾಡದೆ ನಕ್ಕು ‘ಮಾರಾಯಾ.. ಶರಣಬಸಪ್ಪನ ದರ್ಶನ ಆಗ್ಲಿ ಅಂತ ಸುಮ್ನಿದ್ದೆ’ ಎಂದು ಮನಸ್ಸಿನೊಳಗ ಅಂದುಕೊಂಡು ಮುಸುಕು ಎಳೆದು ಮಲಗಿಬಿಟ್ಟ.

****
ಊಟಕ್ಕೆ ಕರೆಯಲು ಬಂದ ಸೊಸಿಗೆ ‘ಬದನಿಕಾಯಿ ಪಲ್ಲೆ ಹೌದಿಲ್ಲೊ. ಕುತ್ತ ಮಾಡಿದಲ್ಲವ್ವಾ..ನಡಿ ಬರ್ತೀನಿ’ ಎಂದು ಕೈ ಚಾಚಿದ ನನ್ನನ್ನು ಎಬ್ಬಿಸು ಅನ್ನುವಂತೆ. ಬದನೆಕಾಯಿ ಪಲ್ಯದಿಂದ ಏನು ಕುತ್ತದ ಮಾಮಾ ಎಂದಾಗ ಏನೂ ಹೇಳದೆ ಕಿಲ ಕಿಲ ಅಂತ ನಕ್ಕು ಬಿಟ್ಟ.

ಹೌದು ಈ ಅಜ್ಜ ಊರಿನ ವಿಶೇಷತೆಯೇ ಆಗಿದ್ದ. ಅವನಿಗೂ ಹೆಸರುಗಳಿಗೂ ಅದೇನೋ ಸಂಬಂಧ. ಅವನ ಬಾಯಿಗೆ ಬಂದ ಹೆಸರಿಗೆ ಒಂದು ನಮೂನೆ ಶಕ್ತಿ ಇರ್ತದೆ ಅಂತ ಆ ಊರ ಜನರ ಅಂಬೋಣ. ಹಿಂಗಾಗಿ ಆತ ಹೆಸರಿನ ಮುತ್ಯಾ ಅನ್ನಿಸಿಕೊಂಡಿದ್ದ. ಅವನು ಹೇಳಿದ ಹೆಸರು ಇಟ್ರೆ ಯಶಸ್ಸು ಗ್ಯಾರಂಟಿ ಅಂತ ಆಲ್ಲಿ ಮಂದಿಯ ನಂಬಿಕೆ. ಜನರೆಲ್ಲಾ ತಮಗೆ ಮಕ್ಕಳಾದ್ರೆ ಈ ಮುತ್ಯಾನ ಬಳಿ ಬಂದು ಹೆಸರು ತಗೊಂಡು ಹೋಗುತ್ತಿದ್ರು. ಯಾವುದೇ ದುಕಾನು, ಆಫೀಸು, ದವಾಖಾನಿ, ಎತ್ತು, ಕತ್ತಿ ಏನೆಲ್ಲದಕ್ಕೂ ಮುತ್ಯಾನಿಂದ ಹೆಸರು ಇಟ್ಟುಕೊಂಡು ಬರಬೇಕು. ಇದು ಎಷ್ಟು ಪ್ರಸಿದ್ಧಿಯಾಗಿತ್ತು ಅಂದ್ರೆ ಪಕ್ಕದೂರಿನವರು ಹೆಸರು ತೊಗೊಳದ್ದಕ್ಕೆ ಬರಲು ಶುರುಮಾಡಿದ್ರು.

ಯಾರೋ ಹೊಸ ಕಾರು ಖರೀದಿ ಮಾಡಿ ‘ಅಜ್ಜಾರೆ ನಮ್ಮ ಕಾರಿಗೆ ಒಂದು ಹೆಸರು ಕೊಡ್ರಿ’ ಅಂತ ಬರೋರು. ಮೊನ್ನೆಮೊನ್ನೆ ಶಿವಶರಣಪ್ಪ ಒಂದು ಲಾರಿ ಖರೀದಿಸಿದಾಗ ‘ಮುತ್ಯಾ ನನ್ನ ಲಾರಿಗೆ ಆಶೀರ್ವಾದ ಮಾಡಿ ಒಂದು ಹೆಸರು ಕೊಡಪ್ಪ’ ಅಂದು ನೂರಾಒಂದು ರೂಪಾಯಿ ದಕ್ಷಿಣೆ ಕೊಡಲು ಬಂದ. ಮುತ್ಯಾ ಸಿಡಾರನೆ ಸಿಡುಕಿ ‘ಹೋಗ್ಗೋ ನಿನ ..ಽಽ ನನ್ನ ಹತ್ರ ಹೆಸರು ಖರೀದಿ ಮಾಡ್ತಿಯೇನು? ಕೊಡಂಗಿಲ್ಲ ನಡಿ.. ಮೊದಲ ಹೊರಗ ನಡಿ..’ ಅಂತ ಜಬರಿಸಿದ್ದ. ಮುತ್ಯಾನ ಸಿಟ್ಟಿಗೆ ಪರೇಶಾನ್ ಆಗಿ ಶಿವಶರಣಪ್ಪ ‘ಎಪ್ಪಾ ತಪ್ಪಾತು ಹೊಟ್ಟ್ಯಾಗ ಹಾಕೋ. ಲಾರಿ ಮ್ಯಾಲಾ ನನ್ನ ಹೊಟ್ಟೆಪಾಡು ನಡೀಬೇಕು. ಆಶೀರ್ವಾದ ಮಾಡು’ ಅಂತ ಪರಿಪರಿಯಿಂದ ಕೇಳಿಕೊಂಡಮ್ಯಾಲೆ ಮುತ್ಯಾನ ಸಿಟ್ಟು ಕರಗಿತ್ತು. ‘ಜಯಲಕ್ಷ್ಮಿ ಪಬ್ಲಿಕ್ ಕ್ಯಾರಿಯರ್ಸ್’ ಅಂತ ಹೆಸರಿಟ್ಟುಕೊಂಡ ಆ ಲಾರಿ ಈಗ ಊರು ತುಂಬಾ ಓಡಾಡುತ್ತಿದೆ.

ಡಿಲಕ್ಸ್ ಅಟೋ ಖರೀದಿ ಮಾಡಿದ ಮಲ್ಲೇಶಿ ‘ಮುತ್ಯಾ ನನ್ನ ಆಟೋಕ್ಕ ಒಂದುಬೆಸ್ಟ್ ಹೆಸರು ಕೊಡು. ಊರ ತುಂಬ ಮಿಂಚಬೇಕ ನೋಡು ನೀ ಕೊಟ್ಟ ಹೆಸರು’ ಅಂದಾಗ ಅಜ್ಜ ‘ನಾ ನಿನ್ನ ಬಿಡಲಾರೆ’ ಅಂತ ಹೇಳಿದ. ಮಲ್ಲೇಶಿಗೆ ತಾನು ಕಲಬುರ್ಗಿಯ ತ್ರಿವೇಣಿ ಟಾಕಿಜಿನಲ್ಲಿ ನೋಡಿಬಂದ ನಾ ನಿನ್ನ ಬಿಡಲಾರೆ ಸಿನೆಮಾದಲ್ಲಿ ದೆವ್ವ ಬಡಿದ ಅನಂತನಾಗ್ ನ ಭಯಾನಕ ಮುಖ ನೆನಪಾಗಿ ಬೆಚ್ಚಿದ. ಅಂಜುತ್ತಲೆ ‘ಯಾವುದರ ದೇವರ ಹೆಸರೂ...’ ಅಂತ ಸಣ್ಣದನಿಯಲ್ಲಿ ಕೇಳಿದ. ಮುತ್ಯಾ ‘ಮಲ್ಯಾ ಅದೂ ನಿನ್ನ ಬಿಡಂಗಿಲ್ಲಲೇ. ಅಂದಮ್ಯಾಲ ಅದೇ ನಿನ್ನ ದೇವ್ರು’ ಅಂತ ಸಿಡುಕಿ ಕಳಿಸಿದ್ದ. ಹೀಗೆ ಮುತ್ಯಾನ ನಾಲಿಗಿ ಒಳಗ ಒಡದ ಹೆಸರು ಮುತ್ತಾಗತಿತ್ತು. ಸುತ್ತ ಹಳ್ಳಿಗೆಲ್ಲ ‘ಹೆಸರಿನ ಮುತ್ಯಾ’ ಎಂದೇ ಪ್ರಸಿದ್ದಿಯಾಗಿದ್ದ. ಇದಲ್ಲದೆ ಇತ್ತೀಚೆಗೆ ಅಂದರೆ ಸುಮಾರು ಇಪ್ಪತ್ತು ವರ್ಷಗಳಿಂದ ಈ ಊರಿನ ಹಳೆಯ ಹೆಸರು ಸುತ್ತಲೂರಿನವರಿಗೆ ಮರೆತುಹೋಗಿದ್ದು ಹೆಸರಿನೂರು ಎಂದೇ ಕರೆಸಿಕೊಳ್ಳತೊಡಗಿತ್ತು. ಈಗೀಗಂತೂ ಹೆಸರೂರಿನಲ್ಲಿಯ ‘ಹೆಸರು ಮುತ್ಯಾನ’ ಜರೂರತ್ತು ಎಲ್ಲರಿಗೂ ಭಾಳ ಅನ್ನಿಸತೊಡಗಿತ್ತು. ಗುರುಸಣಗಿಯ ಶರ್ಮುದ್ದೀನ ಹೊಸ ಹಿಟ್ಟಿನ ಗಿರಣಿ ಹಾಕಿದ. ಅದಕ್ಕೇನೂ ಬೋರ್ಡ್ ಬೇಕಿರಲಿಲ್ಲ. ಆದ್ರೂ ಶರ್ಮುದ್ದೀನ ಅದು ಯಶಸ್ವಿಯಾಗಲಿ ಅಂತ ಮುತ್ಯಾನ ಬಳಿಬಂದು ‘ಮುತ್ಯಾ, ನಂದು ಗಿರಣಿಗಿ ಒಂದು ಅಚ್ಚಾ ನಾಮ್ ದೇದೋ. ನಂದೂಕಿ ನಸೀಬ್ ಖುಲಾಯಿಸಬೇಕು. ಅಂಥಾದ್ದು ಹೆಸ್ರು ಕೊಡ್ರಿ ಮುತ್ಯಾ’ ಎಂದ.

ಮುತ್ಯಾ ಹಣಿಮ್ಯಾಲ ತನ್ನ ಬೆರಳಿನಿಂದ ಬರೆದುಕೊಳ್ಳುತ್ತಾ ಯೋಚಿಸುತ್ತಿದ್ದ. ಹತ್ತು ಇಪ್ಪತ್ತು ನಿಮಿಷಗಳು ಕಳೆದವು.ಶಾಬುದ್ದೀನಗೆ ಹೆಸರು ಸಿಗಲಿಲ್ಲ. ಜೊತೆಗಿದ್ದ ಗೆಳೆಯ ಇರ್ಪಣ್ಣ ‘ಯಾಕೋ ಮುತ್ಯಾಗ ಮನಸ್ಸಿಲ್ಲ. ಇನ್ನೊಂದಿನ ಬರೋಣ ನಡಿ’ ಎಂದ. ಆದ್ರೆ ಶರ್ಮುದ್ದೀನಗೆ ಬರಿಗೈಲಿ ಹೋಗಲು ಮನಸ್ಸಿರಲಿಲ್ಲ. ಹಾಗಾಗಿ ‘ಮುತ್ಯಾ ಜರಾನೆ ಮನಸ್ಸು ಮಾಡ್ರಿ. ನಾಳೆ ಛಲೋ ದಿವಸ. ನಾಳೆನೇ ಚಾಲೂ ಮಾಡತೀನಿ. ನಿಮ್ಮ ಆಶೀರ್ವಾದ ಬೇಕು’ ಅಂದು ಸ್ವಲ್ಪ ಗೋಗರೆದು ಒತ್ತಾಯಿಸಿದ.

‘ಹಂಗಂದ್ರ ನಾ ಹೇಳಿದ್ದು ಹೆಸ್ರು ಇಡತ್ತೀದೇನು?"’ ಶರ್ಮುದ್ದೀನಗೆ ಮುತ್ಯಾನ ಪ್ರಶ್ನೆ ಆಶಾದಾಯಕವಾಗಿತ್ತು. ಅದೇ ಹುರುಪಿನಿಂದ
‘ ಹಾಂ.ಹೂನ್ರಿ ಮುತ್ಯಾ. ನಿಮ್ಮದು ಕಿ ಥೂಕ್.. ನಂದು ಪ್ರಸಾದ.’ ಎಂದಬಿಟ್ಟ.

‘ಅಂಥವು ದೊಡ್ಡ ಮಾತೆಲ್ಲ ಬ್ಯಾಡಾ. ಕೃತ್ಯದಾಗಿರಲಿ’ ಅಂತ ಕಿವಿ ಹಿಂಡಿ ‘ಅನ್ನಪೂರ್ಣ’ ಅಂತ ಕರೀ ಹೋಗು ಎಂದ ಮುತ್ಯಾ.
‘ಅನ್ನಪೂರ್ಣಾ ಅರ್ರೆ ಬಾಪ್ರೆ’ ಅಂತ ತಲೆ ತುರಿಸುವ ಶರ್ಮುದ್ದೀನಗ ‘ನಾ ಒಡದು ಹೇಳಿದ ಹೆಸರಿಗಿ ಅನುಮಾನ ಮಾಡ್ತಿ ಅಂತ ಗೊತ್ತಿತ್ತು. ಅದಕ ನಾ ಹೇಳಿರಲಿಲ್ಲ. ಹೆಸರಿನಾಗ ಏನದೋ. ಭಾವ ಹುಡುಕು.. ಭಾವ’ ಎಂದು ನನ್ನ ಪಾಲಿನ ಕೆಲಸ ಮುಗಿಯಿತು ಅನ್ನುವಂಗ ಪಟ್ಟನೆ ಹಾಸಿಗೆಗೆ ಉರುಳಿದ. ಒಂದೆರಡು ನಿಮಿಷಕ್ಕೆ ಸಣ್ಣ ಗೊರಕೆಯಲ್ಲಿದ್ದ. ಮುತ್ಯಾಗ ಉರ್ದು ಹೆಸರು ಅಂತ ಮೊದಲೇ ಹೇಳಬೇಕಿತ್ತು ಅಂತ ಚಡಪಡಿಸಿದ ಶರ್ಮುದ್ದೀನ. ಕೇಳಿದಮೇಲೆ ಬದಲಾಯಿಸುವಂತಿಲ್ಲ ಅಥವಾ ಬಿಡುವಂತೆಯೂ ಇಲ್ಲ. ಗೊಂದಲದಲ್ಲಿ ಇದ್ದವನಿಗೆ ಮಲಗಿದ ಅಜ್ಜ ಮತ್ತೆ ಮಾತನಾಡಲಿಕ್ಕಿಲ್ಲ ಎಂದು ‘ಇರ್ಪಣ್ಣ ಹೆಂಗ ಮಾಡೋದು? ಅನ್ನಪೂರ್ಣ ಅಂತನ ಹೆಸರು ಇಡುತ್ತೀನಿ ಖರೆ. ನಮ್ಮ ಜಾತಿ ಜನ ಸುಮ್ಕಿರ ಬೇಕಲ್ಲ’ ಅಂದ. ಗೊರಕೆ ಹೊಡೆಯುತ್ತಿದ್ದ ಅಜ್ಜ ‘ಏ.. ಶರ್ಮುದ್ದೀನ, ನಿಮ್ಮವ್ವ ನಿನ್ನ ಹೊಟ್ಟಿ ತುಂಬುಸ್ತಾಳೊ ಇಲ್ಲೊ. ಆಕಿ ಹೆಸರಿಡೋ ಮಂಗ್ಯಾ .ಎಲ್ಲಾ ಬಾಳೆಹಣ್ಣಿನಂಗ ಸುಲುದು ಬಾಯಾಗ ಇಡಬೇಕೇನು?’ ಎಂದು ಸಿಡುಕಿ ಹೇಳಿದ. ಶರ್ಮುದ್ದೀನಗೆ ಎದಿಯಾಗಿನ ದಿಗಿಲು ಕರಗಿ ಹೂವಿನ ಮುಗುಳು ಅರಳಿದಂತಾಗಿತ್ತು.

‘ಆಯ್ತು ಮುತ್ಯಾ ಆಯ್ತು’ ಅಂತ ನಮಸ್ಕರಿಸಲು ಹೊದ್ದಿದ್ದ ಕೌದಿಯೊಳಗ ಕಾಲುಗಳನ್ನು ಹುಡುಕುತ್ತಿದ್ದ. ಅದು ತಿಳಿದು ಅಜ್ಜಯ್ಯ ಅದೇ ಪಾದದಿಂದ ಆತನ ಕೈಯನ್ನು ದೂಡಿ, ‘ಸಾಕು ತೆಗಿ ನಿನ್ನ ನಮಸ್ಕಾರ. ಹೆಸರಿನ ಗಿಡಕ್ಕೆ ಜೋತು ಬೀಳುತ್ತಾವ ಬುದ್ಧಿಗೇಡಿಗಳು. ಬೇವಿನ ಗಿಡಕ್ಕೆ ಜೋತು ಬೀಳರೋ.. ಹೆಸರಿನ ಗಿಡ ಭಾರ ತಾಳಂಗಿಲ್ಲ. ಬೇವಿನಗಿಡದಾಗ ಭಾವ ಸಿಗುತ್ತದೆ. ಭಾವದಾಗ ತಂಪು ತುಂಬಿರುತ್ತದೆ. ಅದುಬಿಟ್ಟು ಹೆಸರಿನ ಗಿಡಕ್ಕ ಗಂಟಬಿದ್ರ ಹೆಸರುಕಾಯಿ ಕಿಸಗೊಂಡು ಕೂಡ್ತದ’ ಅಂತ ಏನೇನೋ ಗೊಣಗುತ್ತಿದ್ದ.

ಶರ್ಮುದ್ದೀನ ಅಜ್ಜಯ್ಯ ಕಾಲಲ್ಲಿ ಒದ್ರೂ ಪ್ರಸಾದಂಗ ಅಂತ ತಿಳಿದು ಎದೆಗೊತ್ತಿಕೊಂಡ. ಮರುದಿನ ‘ಫಾತೀಮಾ ಹಿಟ್ಟಿನ ಗಿರಣಿ’ಯ ‘ಭರ್ರೋ’ ಎನ್ನುವ ಸದ್ದು ಓಣಿಯೊಳಗ ಬಹಳ ತಾಕತ್ತಿನಿಂದ ಅವಾಜ್ ಮಾಡತೊಡಗಿತು. ಊರು ಹಿಂಗೆ ಕುಂಟುಗೋತ ಬದುಕು ನಡೆಸುತ್ತಿತ್ತು. ಯಾವುದೋ ವ್ಯವಸ್ಥಿತ ಅಂತ ಇರಲಿಲ್ಲ. ಮಕ್ಕಳ ಸಾಲಿ ಖಾಲಿ ಬಿದ್ದಿತ್ತು. ಸಾಲಿ ಕಂಪೌಂಡಿನೊಳಗ ಹಂದಿಗಳ ಆವಾಸ ಸ್ಥಾನವಾಗಿ ತಮ್ಮ ಮಕ್ಕಳು ಮರಿಗಳೊಂದಿಗೆ ವಾಸಮಾಡುತ್ತಾ ಗೊಜ್ಜು ರಾಡಿಯೊಳಗೆ ಮಲಗಿರುತ್ತಿದ್ದವು. ಅಮ್ಮ ಹಂದಿ ಅಂಗಾತ ಮಲಗಿದ್ದು ಅದಕ್ಕಿರುವ ಆರೆಂಟು ಮೊಲೆ ತೊಟ್ಟಿಗೆ ಹತ್ತಾರು ಮರಿಗಳು ನಾ ಮುಂದು ತಾ ಮುಂದು ಅಂತ ಮುಗಿಬಿದ್ದು ಚೀಪುತ್ತಿದ್ದುವು. ಆಗಾಗ ಟ್ರಾಯ್... ಡ್ರಾಯಿಂಕ್... ಅಂತ ಗುರ್ಕಿ ಹಾಕುತ್ತಾ ತಾಯ್ತನದ ಸುಖ ಅನುಭವಿಸುತ್ತ ಮಲಗಿರುತ್ತಿದ್ದವು ಅಮ್ಮ ಹಂದಿಗಳು.

ಅಲ್ಲಲ್ಲಿ ಇದ್ದ ಸರ್ಕಾರದ ಬೋರ್‌ವೆಲ್‌ಗಳಲ್ಲಿ ನೀರಿಲ್ಲದಿದ್ದರೂ ಕೊಚ್ಚೆ ಮಾತ್ರ ಇತ್ತು. ‘ಅದ್ಹೆಂಗ?’ ಅಂತ ನೀವು ಪ್ರಶ್ನೆ ಕೇಳ್ತೀರಿ ಅನ್ನೋದು ನನಗೆ ಗೊತ್ತು. ಆದರೆ ಊರಿನ ಚರಂಡಿಗಳು ತುಂಬಿ ತುಂಬಿ ಹರಿಯುತ್ತಾ ಬಂದು ಎಲ್ಲಾದರೂ ಸೇರಬೇಕಲ್ಲ.ನೀರಿನ ಮುಖ್ಯ ಲಕ್ಷಣಗಳಲ್ಲಿ ಒಂದಾದ, ನಾವು ನೀವೆಲ್ಲ ಪ್ರಾರ್ಥಮಿಕ ಶಾಲೆಯಲ್ಲಿ ಓದಿದಂತೆ ‘ನೀರು ಮೇಲಿನಿಂದ ಕೆಳಕ್ಕೆ ಹರಿಯುತ್ತದೆ, ನೀರಿಗೆ ವಾಸನೆ, ಬಣ್ಣ ಇರುವುದಿಲ್ಲ’ ಎಂದು ಉರುಹೊಡೆದದ್ದು ನೆನಪಿಸಿಕೊಳ್ಳಿ, ಹಾಗೆಯೇ ಈ ಊರ ಚರಂಡಿ ನೀರು ತಗ್ಗುಪ್ರದೇಶವಾದ ಬೋರ್ ವೆಲ್ ಸುತ್ತಲೂ ತುಂಬಿಕೊಳ್ಳುತಿತ್ತು. ಆದರೆ ಇನ್ನೊಂದು ಲಕ್ಷಣವಾದ ವಾಸನೆ, ಬಣ್ಣ ಅದನ್ನು ಮಾತ್ರ ಮರೆತಿರುತ್ತದೆ.

ನೆಗಡಿಯಾದವರಿಗೂ ಅಷ್ಟೇ ಯಾಕೆ ಕೊರೋನಾ ಆದವರಿಗೂ ನಾಸಿಕದ ಹೊರಳೆಗಳು ಮುಚ್ಚಿಕೊಂಡಿದ್ದರೂ ಮಹಾದ್ವಾರವನ್ನು ನೂಕಿ ಪ್ರವೇಶಿಸುವ ಅನೆಯಂತೆ ಅಲ್ಲಿಯ ಕೊಚ್ಚೆಯ ವಾಸನೆ ಮೂಗಿನೊಳಗೆ ವೈಭವದಿಂದ ಪ್ರವೇಶಿಸುತಿತ್ತು.
ಇನ್ನೂ ಬಣ್ಣವೋ.. ಹೋಳಿ ಹುಣ್ಣಿಮೆಯ ಸಕಲ ರಂಗುಗಳು ಇಲ್ಲಿ ಸಮ್ಮೇಳನಕ್ಕೆಂದು ಬಂದಿರುತ್ತವೆ. ಹೇಗಂತೀರಾ? ದರ್ಜಿ ಅಮಿನಾಬಿಯ ಗಂಡು ಪಾಪುನ್ನ ಆಕೆಯ ನಾದುನಿ ಜುಬೇದಾಳ ಹೆಣ್ಣು ಪಾಪುವಿನ ಜೊತೆ ಒಂದೆ ಹಾಸಿಗೆಯಲ್ಲಿ ಮಲಗಿಸಿದ್ದಕ್ಕೆ ಅಮಿನಾಬಿಯ ಪಾಪುಗೆ ಕಿಸಿರು ಆಗಿದ್ದು ಆ ಪೋರನ ಹಸಿರು ಬಣ್ಣದ ಒಡಕು ಒಡಕಾದ ಇಸ್ಸಿ ತುಂಬಿಕೊಂಡ ಕ್ರೈಮ್ ಪೇಪರ್ ತುಕಡಿ ಅಲ್ಲಿ ಬಿದ್ದು ಕಂಗೊಳಿಸುತಿತ್ತು.ಐದಾರು ವರುಷ ಹಾಸಿಗೆಗೆ ಅಂಟಿಕೊಂಡಿದ್ದ ಹನುಮಜ್ಜ ಮಾಡಿಕೊಂಡ ಹಳದಿ ಬಣ್ಣದ ವಾಂತಿ ಕ್ಯಾರಿಬ್ಯಾಗಿನಲ್ಲಿಂದ ಹೊರಬರುವ ಪ್ರಯತ್ನದಲ್ಲಿತ್ತು. ಗಿಡ್ಡನ ಸಾಬವ್ವನ ಮಗಳು ಮೈನೆರೆದಾಗಿನ ಕೆಂಪು ಹೀರಿದ ಚಿಂದಿ ಬಟ್ಟೆ ಬಣ್ಣ ಕಳೆದುಕೊಂಡ ದುಃಖದಲ್ಲಿತ್ತು. ಹೀಗೆ ಒಂದೇ.. ಎರಡೇ..? ಇವನ್ನು ನೋಡಿ "ಬಣ್ಣಾ ಬಣ್ಣಾ... ಹಲವಾರು ಬಣ್ಣಾ" ಅಂತ ಬಂಧನ ಸಿನಿಮಾದ ವಿಷ್ಣು ಸಾರು ಹಾಡಿದ್ರೆ ಸಿನಿಮಾ ಇನ್ನೂ ಹಿಟ್ ಆಗುತ್ತಿತ್ತೇನೊ.

ಅಯ್ಯೋ ಊರಿನ ಕತೆ ಬ್ಯಾಡಾ ಅಂದುಕೊಂಡ್ರೂ ಮತ್ತೆ ಅದು ಕತೆ ಮಧ್ಯ ಬಂದೇ ಬಿಡ್ತಲ್ಲ.ಏನು ಮಾಡೋದು ಕತೆ ಮುಂದುವರೆಯಲು ಊರಕತೆ ಹೇಳಲೇಬೇಕಾಯ್ತು.

ಹೀಗೆ ಇಂತಹ ಕೊಚ್ಚೆಯಲ್ಲಿ ಅರಳಿದ ಈ ಊರಿಗೆ ಮುಕ್ತಿ ದೊರಕಿಸುವ ಬಹುದೊಡ್ಡ ಆಶಯದಿಂದ ನಮ್ಮ ರಾಜಕೀಯ ನವನಾಯಕನೊಬ್ಬ ಹೊರಬಂದ. ಅವನಿಗೆ ತಾನು ಉದ್ಧಾರವಾಗಲು ಒಂದಷ್ಟು ಕಾರಣಗಳು ಬೇಕಿತ್ತು. ಆಗ ಈ ಊರ ಶಾಲೆಯ ಕಾಂಪೌಂಡಿನ ಘನ ಆವರಣ, ಬೋರವೆಲ್ಲಿನ ಕೊಚ್ಚೆಯ ಭಂಡಾರ, ಮಳೆಗಾಲದಲ್ಲಿ ಗುಪ್ತಗಾಮಿನಿಯಂತೆ ಹರಿಯುವ ಒಡೆದುಹೋದ ಚರಂಡಿ ಆ ನಾಯಕನ ಪಾಲಿಗೆ ಬಹುದೊಡ್ಡ ಆಶಾದೀಪವಾಗಿ ಗೋಚರಿಸಿದವು. ತಕ್ಷಣವೇ ಆತ ಒಂದು ಸಮಾಜ ಸೇವಾ ಸಂಘ ಕಟ್ಟಿದ. ಅಲ್ಲಲ್ಲಿ ಕಾರ್ಯಕ್ರಮ ಮಾಡಿ ಮೇಜು ಕುಟ್ಟಿ ಭಾಷಣ ಮಾಡಿದ. ಪೇಪರ್‌ನಲ್ಲಿ ಮೇಲಿಂದ ಮೇಲೆ ಫೋಟೋ ಮಿಂಚತೊಡಗಿದವು. ಊರ ಸುತ್ತ ಮುತ್ತಲೂ ಇರುವ ಮಠಗಳಿಗೆ ಭೇಟಿ ಕೊಟ್ಟ. ಸ್ವಾಮಿಗಳ ಪಾದಗಳಿಗೆ ಹಣೆ ಹಣೆ ಮುಟ್ಟಿಸಿ ಬಂದ. ಒಂದಿಷ್ಟು ಹಣ ಚೆಲ್ಲಿ ಅವರಿಗೆ ತಿನಿಸಿ ಉಣಿಸಿ ಕುಡಿಸಿ ಹಿಂಬಾಲಕರ ದಂಡು ದೊಡ್ಡದಾಗಿಸಿಕೊಂಡ. ಊರಲ್ಲಿ ಆತ ನಡೆಯತೊಡಗಿದರೆ ಅಶೋಕ ಚಕ್ರವರ್ತಿಯು ಪ್ರಜೆಗಳ ಯೋಗಕ್ಷೇಮ ಕೇಳುತ್ತ ಹೊರಟಂತೆ ಭಾಸವಾಗುತ್ತಿತ್ತು. ಎಲ್ಲರಿಗೂ ನಮಸ್ಕಾರ ಹೇಳುವಂತೆ ಕೈ ಜೋಡಿಸಿಯೇ ಇದ್ದ. ರಾತ್ರಿ ನಿದ್ದೆಯಲ್ಲೂ ಹಾಗೇ ಮಲಗಿದ್ದು ಕಂಡು ಆತನ ಧರ್ಮಪತ್ನಿ ‘ನನಗ್ಯಾಕ ನಮಸ್ಕಾರ ಮಾಡ್ತೀರ್ರೀ.. ಮಾಡೋದು ಮಾಡಿದ್ರ ಸಾಕಾಗ್ಯದ’ ಎಂದು ಜೋಡಿಸಿದ್ದ ಎರಡೂ ಕೈ ಬಿಡಿಸಿ ತನ್ನ ಪಕ್ಕಕ್ಕೆ ಎಳೆದು ಸೇರಿಸಿಕೊಂಡದ್ದು ಇದೆ. ಇಷ್ಟೆಲ್ಲ ಪ್ರಯತ್ನದೊಳಗೆ ಒಬ್ಬ ಹಿತಚಿಂತಕ ನರಸೋಬಾ ನಮ್ಮ ನಾಯಕನಿಗೆ ಈ ಹೆಸರಿನ ಮುತ್ಯಾನ ಸುದ್ದಿ ಹೇಳಿದ.

ನವನಾಯಕ ಹಲವಾರು ವರುಷ ಊರುಬಿಟ್ಟು ಬೇವೂರಿಗೆ ಓದಲು ಹೋಗಿದ್ದ. ಅಲ್ಲಿ ಎಣಿಸಲಾರದಷ್ಟು ಸಲ ಡುಬಕಿ ಹೊಡೆದು ಕೊನೆಗೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅಂತ ಊರು ಉದ್ಧಾರಕ್ಕೆ ನಿಂತುಕೊಂಡಿದ್ದ. ಹಾಗಾಗಿ ಹೆಸರಿನ ಮುತ್ಯಾನ ಬಗ್ಗೆ ಅಷ್ಟೇನು ಗೊತ್ತಿರಲಿಲ್ಲ. ‘ಅಣ್ಣಾ ನಿನ್ನ ಸಮಾಜ ಸೇವಾ ಸಂಘ ಆ ಮುತ್ಯಾನ ಬಲ್ಲೇಕ ಹೋಗಿ ಒಂದು ಚಂದನ ಹೆಸರು ಇಸುಕೊಂಡು ಬಂದ್ರೆ ಏನ್ ಕೇಳ್ತಿ.. ನಿನಗ ಮೀರಿಸೋರು ಊರಾಗ ಇಲ್ಲದಂಗ ಆಗ್ತದ’ ಅಂತ ಹೇಳಿದ. ಇನ್ಯಾಕೆ ತಡ ಅಂತ ನವ ನಾಯಕನ ಪಾದಗಳು ಹೆಸರು ಮುತ್ಯಾನ ಕಡೆ ಸವಾರಿ ನಡದೇ ಬಿಟ್ಟವು. ಒಮ್ಮಿಂದೊಮ್ಮೆ ‘ಧುತ್’ ಅಂತ ಹತ್ತಾರು ಮಂದಿ ಬಂದದ್ದು ನೋಡಿ ಬಸವರಾಜಗೆ ದಿಗಿಲಾತು. ನವ ನಾಯಕರು ಇದ್ದದ್ದು ನೋಡಿ ಇನ್ನೂ ದಿಗಿಲು ದೀಂಕಿಟ ಧೀಂಕಿಟ ಅಂತ ಕುಣಿತು. ಆದ್ರೆ ಅಲ್ಲಿದ್ದ ಗೆಳೆಯ ನರಸೋಬನ ನೋಡಿ ಉಸಿರು ವಾಪಸ್ಸು ಬಂದು ‘ಬರ್ರಿ ಕುಂದರ್ರಿ’ ಎಂದು ಪುಟ್ಟ ಪೋರ ರವಿಗೆ ಚರಗಿಯೊಳಗ ಕುಡಿಯಲು ನೀರು ತರಲು ಹೇಳಿದ. ಒಳಗೊಳಗೆ ಇವರೆಲ್ಲಾ ಯಾಕೆ ಬಂದರು ಅಂಬುವ ಯೋಚನೆ ತಲೀಗೆ ಡ್ರಿಲ್ಲಿಂಗ್ ಮಾಡುತಿತ್ತು. ಇವನ ಅಳುಕು ಅರ್ಥ ಆದವರಂತೆ ನರಸೋಬಾ, ‘ಬಸ್ರಾಜಪ್ಪ ನಮ್ಮ ಅಣ್ಣಾರು ಮುತ್ಯಾನ ಬಳಿಗೆ ಬಂದಾರ. ಅವರ ಸಂಘಕ್ಕ ಹೆಸರು ಬೇಕಾಗ್ಯದ. ಗಾಂಧೀಜಿಯವರ ಪಕ್ಕಾ ಫಾಲೊವರ್ ಹರ. ಗಾಂಧಿಜಿಯವರ ಹೆಜ್ಜಿ ಮ್ಯಾಗೆ ಹೆಜ್ಜೆ ಇಟ್ಟು ನಡಿಯಾಕತ್ತಾರ. ಸಂಘದಿಂದ ದೊಡ್ಡ ದೊಡ್ಡ ಕೆಲಸ ಮಾಡೋದು ನಿಂಗಂತೂ ಗೊತ್ತೇ ಅದ.ಈ ಸಲ ಮುನ್ಸಿಪಾಲ್ಟಿ ಅಧ್ಯಕ್ಷರ ಜಾಗಕ್ಕ ನಿಂದರಬೇಕಂತಾರ. ಅದಕ್ಕ ಮುತ್ಯಾನ ಸಾಥ್ ಬೇಕು. ನೀನು ಸ್ವಲುಪ ಒಳಕ್ಕೋಗಿ ಮಾತಾಡು. ಆಮ್ಯಾಲ ಅಣ್ಣಾ ಬಂದು ಮಾತಾಡತ್ತಾರ’ ಎಂದ .

ಯಾಕಂದ್ರೆ ಮುತ್ಯಾನ ಸಿಡುಕು ಸ್ವಭಾವ ನರಸೋಬಗೆ ಮೊದಲೇ ಗೊತ್ತಿತ್ತು. ಬರೋಬ್ಬರಿ ಇದ್ರೆ ಮಾತ್ರ ಹೆಸರು ಕೊಡ್ತಾನ, ಇಲ್ಲಕ್ರ ಬೈದು ಕಳಿಸ್ತಾನ ಅಂತ ಮೊದಲೇ ಮುಂಜಾಗ್ರತೆ ವಹಿಸಿದ್ದ. ಅಣ್ಣನನ್ನೇನೋ ಹುರುಪಿಂದ ಕರೆದುಕೊಂಡು ಬಂದಿದ್ದ. ಆದರೆ ಇಲ್ಲಿ ಬಂದ ಮೇಲೆ ಆ ಹುರುಪು ಅಲುಗಾಡತೊಡಗಿತು. ಬಸ್ರಾಜ ಒಳಗ ಹೋಗಿ ಅಪ್ಪನ್ನ ‘ಅಪ್ಪಾ ನಾಗರಾಜಣ್ಣ ಬಂದಾರ. ನಿನ್ನ ಭೆಟ್ಟಿ ಆಗತಾರಂತ’ ಕಿವಿ ಕೇಳಿಸದಕ್ಕ ಕೂಗಿ ಹೇಳಿದ .ಹಾಗಾಗಿ ಹೊರಗ ಕುಂತು ಜನ್ರಿಗೆಲ್ಲ ಕೇಳಿಸ್ತು. ಮುತ್ಯಾ ಏನಂತಾನೋ ಅಂತ ಎಲ್ಲರೂ ಕಿವಿಗಳನ್ನ ಮೊರದಗಲ ಮಾಡಿದಾಗ ಅವರ ಬಾಯಿಗಳು ಅನಾಮತ್ತಾಗಿ ತೆರದವು. ‘ಯಾವ ನಾಗರಾಜಾ.. ಇಲ್ಯಾಕ ಬಂದಾನ ಹುತ್ತನಾಗ ಕುಂದ್ರಂತ ಹೇಳು.ಇಲ್ಲಿ ಹೆಡೆ ಬಿಚ್ಚಿದ್ರ ನಡಿಯಂಗಿಲ್ಲ’ ಅಂತ ಸಿಡುಕಿದಾಗ ಹೊರಗೆ ಅದನ್ನು ಕೇಳಿಸಿಕೊಂಡ ನಾಗರಾಜ ನರಸೋಬನ ಕಡೆ ನೋಡಿ ಕಣ್ಣು ಕಿಸಿದ. ನರಸೋಬಾ ‘ಸ್ವಲ್ಪ ತಡಿ’ ಅನ್ನುವಂಗ ಕೈಮಾಡಿ ಕಣ್ಣು ಮಿಟುಕಿಸಿ ತಾನೇ ಎದ್ದು ಒಳಗೆ ಹೋದ. ಮುತ್ಯಾ ಮಲಗಿದ್ದ. ತಲೆಯ ರುಮಾಲು ಪಕ್ಕದಲ್ಲಿತ್ತು.

‘ಮುತ್ಯಾ.. ಮುತ್ಯಾ ನಾ ನರಸೋಬಾ ಇದ್ದೀನಿ’.
‘ಇದ್ರ... ನಾನೇನು ಮಾಡ್ಲಿ? ನಿಮಗ ಕೆಲಸಿಲ್ಲ ಭೊಗಸಿಲ್ಲ. ನಡೀರಿ.. ನಂಗ ಪುರುಸೊತ್ತಿಲ್ಲ’ ಎಂದು ಮಗ್ಗಲು ಬದಲಿಸಿ ಮಲಗಿದ.
ನಾಗರಾಜ ಚಡಪಡಿಸಿದ. ಜೊತೆಗಿದ್ದವರಿಗೆ ಅಣ್ಣಾ ನರಸೋಬನ ಮಾತು ಕೇಳಿ ಇಲ್ಲಿಗೆ ಬರಬಾರದಿತ್ತು ಅನಿಸಿತು. ಒಬ್ಬ ಅನುಭವಸ್ಥ ಗೆಳೆಯ ಇಲ್ಲಿಗೆ ಬಂದು ನಮ್ಮ ಆತ್ಮವಿಶ್ವಾಸ ಕಮಜೋರ್ ಆಯ್ತು ಅಂತ ಮಿಡುಕಿದ. ನರಸೋಬ ಸಾವಕಾಶಾಗಿ ಮುತ್ಯಾನ ಕಾಲು ನೇವರಿಸುತ್ತ ಪಾದಗಳನ್ನು ಒತ್ತಿ ಹಿಡಿದ.

‘ಮುತ್ಯಾ ನನ್ನ ಮಾರಿ ನೋಡು. ನಾ ಅಣ್ಣಾಗ ಕರಕೊಂಡು ಬಂದೀನಿ. ನೀ ಏನು ಬೇಕಾದ್ದು ಬೈಯಪ್ಪಾ. ಆದ್ರ ನಿನ್ನ ಆಶೀರ್ವಾದ ತೊಗೊಂಡು ಹೋಗಬೇಕಂತ ಠರಾವು ಮಾಡೀನಿ. ಸಿಟ್ಟಾಗಬ್ಯಾಡ. ನೀ ಮನಸ್ಸು ಮಾಡಿದ್ತ ಬೇವು ಮಾವು ಆಗ್ತದ. ಮಣ್ಣು ಹೊನ್ನಾಗ್ತದ. ನಾಗರಾಜಣ್ಣ ಊರು ಉದ್ಧಾರ ಮಾಡಬೇಕಂತಾನ. ಇಲ್ಲಿ ಛೊಲೊ ಸಾಲಿ, ದವಾಖಾನಿ, ನೀರಿನ ಟಾಂಕಿ ಕಟ್ಟಸಬೇಕಂತಾನ. ಈ ಊರಿನ ಅವ್ಯವಸ್ಥೆ ಕಿತ್ತು ಹಾಕಿ ಈ ದೇಶದಾಗೇ ಈ ಊರಿನ ಹೆಸರು ನಿಂದ್ರಸಬೇಕಂತಾನ. ಆದ್ರ ಇದಕ್ಕೆಲ್ಲ ನಿನ್ನ ಆಶೀರ್ವಾದ ಬೇಕು. ಅಣ್ಣನ ಸಂಘಕ್ಕ ಒಂದು ಹೆಸರು ಕೊಡು ಮುತ್ಯಾ’ ಎಂದು ಗೋಗರೆದ.

‘ಏನು ಸಾಡೆಸಾಥಿ ಹತ್ತಿದಂಗ ಅಂಟಿಕೊಂಡಿದಲ್ಲೋ ನಂಗ! ಅಂವ ಊರಿಗಿ ಬೆನ್ನಬಿದ್ದ ಸಾಡೆಸಾಥಿ ಓಡಸಲಿ, ಊರವರಿಗೆ ಸಾತ್ ಜನ್ಮದ ಸಾಥಿ ಆಗಲಿ. ಸಾಡೇಸಾಥಿಯಲ್ಲ ಸಾಥಿ.. ಸಾಥಿ ಆಗಲೀ. ತಿಳಿತಿಲ್ಲೋ’ ನರಸೋಬಾ ಕುಳಿತಲ್ಲೇ ಕುಪ್ಪಳಿಸಿದ. ಹೊರಬಂದು ನಾಗರಾಜನನ್ನು ಒಳ ಕರೆದ.
‘ಅಣ್ಣಾ ಬಾ. ಮುತ್ಯಾ ಆಶೀರ್ವಾದ ಕೊಟ್ಟ. ನೀ ಗೆದ್ದಿ. ನಿನು ಮುಂದ ಬೆಂಗ್ಳೂರಲ್ಲ... ದಿಲ್ಲಿ ದಿಲ್ಲಿಯೊಳಗ ಕೂತು ಮೆರಿತೀದಿ’.ಅಂತ ಆವೇಶ ಬಂದು ಮಾತಾಡತೊಡಗಿದ ನರಸ್ಯಾ.

‘ಅಂವಾ ಮೆರಿಬಾರದು. ಊರ ಹೆಸರು ಮೆರಿಬೇಕ. ಇಲ್ಲಂದ್ರ ಸಾಥಿ ಹೋಗಿ ಸತ್ಯಾ ನಾಶ್ ಆಗ್ತದ ನೋಡು’ ಅಂದ .
ನಾಗರಾಜ ಈಗ ಧೈರ್ಯದಿಂದ ಮಾತಾಡಿದ ‘ಮುತ್ಯಾ ನರಸೋಬಾ ಖುಷಿಲಿಂದ ಬಡಬಡಸ್ತಾನ. ಆದರೆ ನಾನು ನಿನ್ನ ಮಾತು ಮೀರಲ್ಲ. ಊರಿಗಿ ಸಾಥಿಯಾಗಿರತೀನಿ. ಜನರ ಜತೆಗಿರತೀನಿ’ ಅಂತ ಕಾಲು ಮುಟ್ಟಿ ನಮಸ್ಕರಿಸಿದ.
ಮುಂದೆ ಸಾತಿ ಸಂಸ್ಥೆ ಹಾತಿ ಬೆಳದಂಗ ಬೆಳೆಯಿತು. ಅದೊಂದು ಬಲಿಷ್ಠ ಪಕ್ಷ ಆಯ್ತು. ನಾಡಿನ ಉದ್ದಗಲಕ್ಕೂ ಹರಡಿಕೊಂಡಿತ್ತು.ನಾಗರಾಜನಿಗೆ ಊರಿನ ನಂಟು ಅಷ್ಟಕಷ್ಟೇ ಅಯಿತು. ಇಲ್ಲಿ ಶಾಲೆಯ ಆವರಣದ ಹಂದಿಗಳೂ ಹಾಥಿಯಷ್ಟು ಬೆಳೆದಿದ್ದವು, ಸಂಖ್ಯೆಯೊಳಗೂ ಹೆಚ್ಚಾಗಿದ್ದವು. ಒಣಗಿದ ಬೋರ್‌ವೆಲ್‌ಗಳ ಸುತ್ತಲೂ ಕೊಚ್ಚೆಯ ಪರಿಧಿಯೂ ವಿಶಾಲಗೊಂಡಿತ್ತು. ವಾಯುವಿಹಾರಕ್ಕೆ ಹಂದಿಗಳು ಆಗಾಗ ಇಲ್ಲಿ ಬಂದು ಪಾರ್ಕಿನಲ್ಲಿ ವಿಹರಿಸಿ ಉರುಳಾಡಿದಂತೆ ಉರುಳಾಡಿ ಸ್ವರ್ಗ ಸುಖ ಅನುಭವಿಸುತ್ತಿದ್ದವು. ಊರ ಮಕ್ಕಳು ಪಾಳುಗುಡಿ ಕಟ್ಟಡದಲ್ಲಿ ಬೀಡಿ, ಸಿಗರೇಟಿನ ಅಲೆಗಳಲ್ಲಿ ಮುಳುಗಿರುತ್ತಿದ್ದರು. ಕೆಲಸವಿಲ್ಲದ ನರಸೋಬಾ ಮತ್ತು ಸಂಗಡಿಗರು ನವನಾಯಕನ ಬರುವಿಕೆಗೆ ಕಾದು ಕಾದು ಕೊನೆಗೊಮ್ಮೆ ಪಟ್ಟಿ ಹಾಕಿ ಹಣ ಜಮಾಯಿಸಿ ಬೆಂಗಳೂರಿನಲ್ಲಿ ವಿಧಾನಸೌಧದ ಎದುರು ನಾಗರಾಜಣ್ಣನಿಗೆ ಭೇಟಿಯಾಗಲು ಕಾದರು. ಅಲ್ಲಿದ್ದವರಿಗೆಲ್ಲಾ ವಿಚಾರಿಸಿದಾಗ ಯಾವೂರಿಂದ ಬಂದೀರಿ ಅಂತ ಕೇಳಿದಾಗ ಹೆಸರೂರು ಎಂದು ತಮ್ಮೂರ ಉದ್ಧಾರಕ್ಕೆ, ಊರಿಗೆ ಹೆಸರು ಬೇಕು ಎಂದು ಬಂದಿದ್ದೇವೆ ಎಂದರು. 'ಹೆಸರೂರಿಗೆ ಏನು ಹೆಸರು ಕೊಡೋದು?' ಅಂತ ನಕ್ಕು ಮುಂದೆ ಹೋದ್ರು ಜನ. ನರಸೋಬಾ ಹೆಸರು ಮುತ್ಯಾನ ನೆನಪಿಸಿಕೊಂಡ. ‘ಸಾಥ್ ಕೊಡದಿದ್ರ ಸತ್ಯಾನಾಶ್ ಆಗ್ತಾನ’ ಅಂತ ಕಿವಿಯೊಳಗ ಹೇಳಿದಾಂಗಾತು. ಹೌದು .. ಕೆಲವೇ ತಿಂಗಳ ಹಿಂದೆ ಬದನೆಕಾಯಿ ಪಲ್ಯಾದೊಳಗಿನ ಮುಳ್ಳು ಮುತ್ಯಾನ ಗಂಟಲಿಗೆ ಸಿಕ್ಕು ಒಳಗೆ ಹೋಗದೆ ಹೊರಬರಲಾರದೆ ಒದ್ದಾಡಿ ಇಹಲೋಕ ತ್ಯಜಿಸಿದ್ದ. ಅದಕ್ಕೆ ಬದನೆಕಾಯಿಯನ್ನು ಯಾವಾಗಲೂ ಕುತ್ತು ತರುತ್ತದೆ ಅಂತ ಕುತ್ತಿನ ಪಲ್ಯ ಅಂತಲೇ ಕರೆಯುತ್ತಿದ್ದ ಅಂತ ಸೊಸಿ ಶಶಿಕಲಾ ಹೇಳಿದ್ದು ನೆನಪಾಗಿ ನರಸೋಬನ ಕಣ್ಣಲ್ಲಿ ನೀರು ತುಂಬಿಕೊಂಡು ಮಂಜು ಗಣ್ಣಿನಿಂದ ವಿಧಾನಸೌಧವನ್ನು ದಿಟ್ಟಿಸಿದ. ಅದು ಒಂದು ದೊಡ್ಡ ಹುತ್ತವಾಗಿ ಕಾಣಿಸಿತ್ತು. ಅಲ್ಲಲ್ಲಿ ಕಾಣುವ ಕಂಬಿಗಳ ಮಧ್ಯೆ ಅನೇಕ ಹಾವುಗಳು ಪೂತ್ಕರಿಸುವಂತೆ ಕಾಣುತ್ತಿದ್ದವು. ನಾಗರಾಜ ವಿಧಾನಸೌಧದ ಶಿಖರಕ್ಕೆ ಅಂಟಿಕೊಂಡಿದ್ದ. ಮುಖದಿಂದ ಸೀಳು ನಾಲಿಗೆ ಹೊರಚಾಚಿದ್ದ. ಅದೆಲ್ಲಿಂದಲೋ ಮುಂಗುಸಿಯೊಂದು ಸರಸರನೆ ಬಂದು ನಾಗರಾಜನ ಕಾಲನ್ನು ಬಾಯಿಯಲ್ಲಿ ಹಿಡಿದು ರಪ್ಪನೆ ನೆಲಕ್ಕೆ ಬಡಿಯಿತು. ಶಿಖರದಿಂದ ನಾಗರಾಜಣ್ಣ ಒಮ್ಮೆಲೇ ಕೆಳಗೆ ಬಿದ್ದ. ಮುಂಗುಸಿಯ ಮುಖದಲ್ಲಿ ಮುತ್ಯಾ ಕಾಣಿಸಿ ಕಿಲಕಿಲಾಂತ ನಕ್ಕುಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT