ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಟಿ. ಪೋತೆ ಅವರ ಕಥೆ 'ಹುಕುಂ ಪತ್ರ'

Published 17 ಆಗಸ್ಟ್ 2024, 23:34 IST
Last Updated 17 ಆಗಸ್ಟ್ 2024, 23:34 IST
ಅಕ್ಷರ ಗಾತ್ರ

ಸೂರ್ಯ ತಾಯಿ ಹೊಟ್ಟಿ ಸೇರಲು ಹವಣಿಸುತ್ತಿದ್ದ. ಕಾರು ದುರ್ಗದ ಕೋಟೆ ದಾಟಿ ಕಲ್ಯಾಣದ ನಾಡಿಗೆ ಮುಖ ಮಾಡಿ ತನ್ನ ನೆರಳು ಹಿಂದೆ ಹಾಕುತ್ತಾ ಮುಂದೆ ಸಾಗಿತ್ತು. ಮನೆ ಸೇರಬೇಕಾದರೆ ರಾತ್ರಿ ಹನ್ನೆರಡು ದಾಟುತ್ತದೆ ಎಂದು ಗೆಳೆಯರು ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದರು. ಮುಗಿಯಬೇಕಾದ ಸಮಯಕ್ಕೆ ಕಾರ್ಯಕ್ರಮ ಮುಗಿಯದೆ ತಡವಾಗಿದ್ದರಿಂದ ಎಲ್ಲವೂ ಅಸ್ತವ್ಯಸ್ತವಾಗಿ ಸ್ನೇಹಿತರು ಲಂಚ್ ಬೇರೆ ಮಾಡಿರಲಿಲ್ಲ, ಉಣಿಸದೆ ತಿನಿಸದೆ ಹಾಗೆ ಕರೆದುಕೊಂಡು ಹೋದರೆ ಹೇಗೆ? ಎಂದು ಯೋಚಿಸಿದ ಪ್ರೊಫೆಸರ್ ‘ಚಾಪಿರೆಡ್ಡಿ ಹೋಟೆಲ್ ಮುಂದೆ ಕಾರು ನಿಲ್ಸಪಾ’ ಎಂದು ಏಕಾಏಕಿ ಹೇಳುತ್ತಿದ್ದಂತೆ ಚಾಲಕ ಕಾರು ಯುಟರ್ನ್ ಮಾಡಿ ನಿಲ್ಲಿಸಿದ. ಬೀಳ್ಕೊಡಲು ಬಂದಿದ್ದ ಗೆಳೆಯರು ಮನೆಗೆ ಹೋಗದೆ ಕಾರ್ಯಕ್ರಮದ ಬಗ್ಗೆ ಮಾತಾಡುತ್ತ ಹೋಟೆಲಿನಲ್ಲಿ ಕೂತಿದ್ದರು. ಕಾರಿಂದ ಇಳಿಯುತ್ತಿದ್ದ ಪ್ರೊಫೆಸರ್ ಮತ್ತವರ ಗೆಳೆಯರನ್ನು ನೋಡಿದ ತಕ್ಷಣ ಎಲ್ಲರು ಬಂದು ನಮಸ್ಕರಿಸಿ ಗೌರವ ತೋರಿದರು.
“ನೀವಿನ್ನೂ ಮನೆಗೆ ಹೋಗಿಲ್ಲೇನು” ಪ್ರೊಫೆಸರ್ ಕೇಳಿದರು.
“ಇಲ್ಲ ಸರ್” ಎಂದು ಎಲ್ಲರೂ ತಲೆ ಅಲ್ಲಾಡಿಸಿದರು.
“ರಸ್ತೆಯಲ್ಲಿ ಎಲ್ಲೂ ಹೋಟೆಲ್ ಇಲ್ಲ. ಎಲ್ಲರನ್ನು ಉಪವಾಸ ಕರೆದುಕೊಂಡು ಹೋಗುವುದು ಹೇಗೆ? ಇಲ್ಲೇ ಏನಾದರೂ ತಿಂದು ಹೋಗೋಣ ಎಂದು ಮರಳಿ ಬಂದೆವು” ಎನ್ನುತ್ತಿದಂತೆ,
“ಹೌದಾ ಸರ್, ನಮಗೂ ಅದೇ ಯೋಚನೆ ಆಗಿತ್ತು; ಏನೂ ತಿನ್ನದೆ ಹೊರಟರಲ್ಲ ಎಂದು ನಾವೆಲ್ಲ ಮಾತಾಡಿಕೊಂಡಿದ್ದೆವು! ತಾವು ಮರಳಿ ಬಂದದ್ದು ಒಳ್ಳೆಯದಾಯಿತು ಬನ್ನಿ” ಎಂದು ಮಾತಾಡಿಕೊಳ್ಳುತ್ತ ಎಲ್ಲರೂ ಒಂದೇ ಟೇಬಲ್ಗೆ ಹೊಂದಿಕೊಂಡು ಕುಳಿತರು.

ವೇಟರ್ ಬಂದು “ಸರ್” ಎಂದು ಎದುರು ನಿಂತ. ಪ್ರೊಫೆಸರ್ನ್‌ ನೋಡುತ್ತಿದ್ದಂತೆ “ಯಾವಾಗ ಬಂದ್ರಿ ಸಾರ್, ನೀವು ಕೊಟ್ಟ ಪುಸ್ತಕ ಓದಿದೆ, ಅದೇ ಬಾಬಾಸಾಹೇಬರೆಡೆಗೆ... ತುಂಬಾ ಚೆನ್ನಾಗಿ ಬರಿದಿದ್ದೀರಿ” ಎಂದು ಕೈ ಕುಲಕಿದ.

“ರೆಡ್ಡಿ ನಮಗೆ ತಡವಾಗುತ್ತದೆ, ಕಲಬುರಗಿಗೆ ಹೋಗಬೇಕು, ಏನಿದೆ ಅದನ್ನು ಕೊಡಿ”
“ಆಯ್ತು” ಎಂದು ಒಳಹೋಗಿ ಎಲ್ಲರಿಷ್ಟದ ತಿಂಡಿ ತಂದು ಟೇಬಲ್ ಮೇಲೆ ಇಟ್ಟ. ಎಲ್ಲರೂ ತಟ್ಟೆಗೆ ಬಡಿಸಿಕೊಳ್ಳುತ್ತ ತುಂಬಾ ಚೆನ್ನಾಗಿದೆ, ರುಚಿಕಟ್ಟಾಗಿದೆ” ಎಂದು ಅಡುಗೆ ಬಗ್ಗೆ ಪ್ರಶಂಸೆ ಮಾಡಿದರು.
“ಸರ್, ಕಾಲೇಜಿನ ಇತಿಹಾಸದಲ್ಲಿ ಜಗಳ ಇರದ ಗ್ಯಾದರಿಂಗ್ ಇದSS ಮೊದಲು. ಏನು ಮೋಡಿ ಮಾಡಿದ್ರಿ ತಾವು ತಮ್ಮ ಮಾತುಗಳಲ್ಲಿ ಜೀವ ಇತ್ತು, ಜೀವನಾನೂ ಇತ್ತು, ಒಬ್ಬ ವಿದ್ಯಾರ್ಥಿಯೂ ಮಿಸಕಾಡಲಿಲ್ಲ” ಎಂದು ಯಶೋಧರ ಹೇಳುತ್ತಿದ್ದಂತೆ,
“ಹೌದಾ!” ಎಂದು ಪ್ರೊಫೆಸರ್ ಗಂಭೀರ ಚಿತ್ತರಾದರು.
“ಇದು ಈ ದಶಕದ ಇತಿಹಾಸ. ಅಷ್ಟೇ ವಿಶೇಷ! ತುಂಬಾ ಕಂಟ್ರೋಲ್ ಮಾಡಿದ್ರಿ ಸಾರ್. ನಿಮ್ಮನ್ನ ಕರದೀವಿ; ಎಲ್ಲಿ ನಿಮಗೆ ಕಹಿ ಅನುಭವ ಆದೀತು ಎಂಬ ಆತಂಕ ಇದ್ದೆ ಇತ್ತು. ಹೋದ ವಾರದಲ್ಲೆ ವಿಜ್ಞಾನ ಕಾಲೇಜಿನಲ್ಲಿ ನಡೆದ ಗ್ಯಾದರಿಂಗನಲ್ಲಿ ಗದ್ದಲಾಗಿದೆ ಸರ್. ನೀವು ಹಾಕಿದ ಪೀಠಿಕೆ, ನಿಮ್ಮ ಬದುಕು; ನಿಮ್ಮ ಮಾತಿನಲ್ಲಿರುವ ಮೋಡಿ ನಮ್ಮೆಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿತು” ಎಂದು ಮಂಜುನಾಥ ಹೇಳಿ ಅಭಿಮಾನ ಪಟ್ಟುಕೊಂಡ.
“ಮಂಜುನಾಥ ಹೇಳಿದ್ದು ನಿಜವಾಗಲು ಸತ್ಯ ಸಾರ್, ನಮ್ಮ ಕೊಲೀಗ್, ‘ಇಂಥ ಸ್ಪೀಚ್ ನಮ್ಮ ವಿದ್ಯಾರ್ಥಿಗಳಿಗೆ ಬೇಕಾಗಿತ್ತು’ ಎಂದು ಹೇಳಿದ್ರು. ಖುಷಿಯಾಗಿ ಅವರೇ ಎದ್ದು ನಿಂತು ಚಪ್ಪಾಳೆ ಕೂಡ ತಟ್ಟಿದ್ರು” ಎನ್ನುತ್ತ ಎಲ್ಲರೂ ತಿಂಡಿ ಮುಗಿಸಿ ಪ್ರೊಫೆಸರ್ ಭಾಷಣದ ಪರಿಯನ್ನು ಮೆಚ್ಚಿ ಅವರ ಗೆಳೆಯರೆಲ್ಲರನ್ನು ಮತ್ತದೇ ಪ್ರೀತಿ ಗೌರವಗಳಿಂದ ಬೀಳ್ಕೊಟ್ಟರು.

ಕಾರು ಯಥಾ ಪ್ರಕಾರ ಕಲ್ಯಾಣದ ನಾಡಿನತ್ತ ಮುಖಮಾಡಿ ಧಾವಿಸಹತ್ತಿತ್ತು. ಒನಕೆ ಓಬವ್ವನ ಸಾಹಸ ನೆನೆಯುವಂತೆ ಮಾಡಿದ್ದು ಕಹಳೆಗಳ ಸದ್ದು, ಕಹಳೆಗಳನ್ನು ಊದಿ ಸ್ವಾಗತಿಸಿದಾಗ ಓಬವ್ವನ ಧೀರ ವ್ಯಕ್ತಿತ್ವದ ಚಿತ್ರಣ ಪ್ರೊಫೆಸರ್ ಕಣ್ಣೆದುರು ಹಾಜರಾಗಿ ಹೋಯಿತು. ಎಂಥ ಸಾಹಸದ ಹೆಣ್ಣುಮಗಳು. ಅದೇ ಹೊತ್ತಿಗೆ ಸಾಲುಮರದ ತಿಮ್ಮಕ್ಕನ ನೆನಪೂ ಪ್ರೊಫೆಸರ್ ಮನದಲ್ಲಿ ಸುಳಿದು “ತಿಮ್ಮಕ್ಕನಿಗೆ ಸರಕಾರಿ ಗೌರವಗಳೆಲ್ಲವೂ ಸಿಕ್ಕಿವೆ ಸಾರ್” ಎಂದು ಹಿಂದೆ ಕೂತವರು ಮಾತಾಡಿದ್ದು ನೆನೆದು ವೃಕ್ಷಮಾತೆ ತಿಮ್ಮಕ್ಕನ ಸಾಧನೆಗೆ ಸಂದ ಗೌರವ ಚಿಕ್ಕದೆನಿಸಿತು.

“ತಮ್ಮ ಮಾತುಗಳಲ್ಲಿ ಮದಕರಿ ನಾಯಕರ ಹೆಸರು ಹೇಳಬೇಕಿತ್ತು, ಹೇಳಿದ್ದರೆ ಇದಕ್ಕೂ ಹೆಚ್ಚು ಚಪ್ಪಾಳೆಗಳು ಬರ‍್ತಿದ್ದು” ಎಂದು ವೇದಿಕೆಯಲ್ಲಿ ಕೂತಿದ್ದ ಯಜಮಾನರೊಬ್ಬರು ಹೇಳಿದ್ದು ಸ್ಮೃತಿಪಟಲದಲ್ಲಿ ಓಡಾಡಿತು. ಅದೆಲ್ಲವನ್ನು ಮೆಲುಕು ಹಾಕುತ್ತ, ಪ್ರೊಫೆಸರ್ ಸುಮ್ಮನಿರುವುದು ಕಂಡು “ಯಾಕೆ ಮೌನ ಸರ್” ಎಂದು ಚೆನ್ನ ಮಾತಾಡಿಸಿದ.
“ಏನಿಲ್ಲ ಚೆನ್ನ ಇಂದಿನ ನನ್ನ ಮಾತುಗಳು ಆರ್ಡ್‌ರ್ಲಿ ಇರಲಿಲ್ಲ”
“ನೋಡಿ ಪ್ರೊಫೆಸರ್ ನೀವು ಮಾತಾಡಿದ್ದು ತುಂಬ ಚೆನ್ನಾಗಿಯೇ ಇತ್ತು, ಅದು ಹೆಂಗಿತ್ತು ಅಂದ್ರೆ ಕಳ್ಳು-ಕಾಳಜಿ ಅಂತಾರಲ್ಲ ಹಂಗೆ! ನಿಮ್ಮ ಇಂದಿನ ಮಾತುಗಳಿಂದ ಅವರಲ್ಲಿ ಅರಿವು ಮೂಡುವದಂತೂ ನಿಜ. ಇಂದು ದುರ್ಗಕ್ಕೆ ನಾವು ಬಂದಿದ್ದಕ್ಕೂ ಸಾರ್ಥಕವಾಯಿತು. ಅದಕ್ಯಾಕಿಷ್ಟು ಬೇಸರ” ಎಂದು ಚೆನ್ನ ಕೈ ಕುಲುಕಿ ಹುರಿದುಂಬಿಸಿದ.
“ಬೇಸರ ಅದೊಂದಕ್ಕೆ ಅಲ್ಲ!” ಎಂದು ಸುಮ್ಮನಾದರು.
“ಹಾಗಿದ್ದರೆ ಇನ್ನೇನು?” ಎಂದು ಚೆನ್ನ ಕೇಳಿದ.
“ನನ್ನ ಭಾಷಣ ಮುಗಿದ ಮೇಲೆ ಶಾಸಕರು ಮಾತಾಡ್ತಿದ್ದರು. ಆಗ ಅಧ್ಯಾಪಕರೊಬ್ಬರು ಬಂದು ‘ಸಾರ್ ತುಂಬ ಒಳ್ಳೆಯ ಉದಾಹರಣೆ ಕೊಟ್ಟು ಮಾತಾಡಿದ್ದಿರಿ. ಇಂಥ ಮಾತುಗಳು ನಮ್ಮ ಹುಡುಗರಿಗೆ ಬೇಕಾಗಿತ್ತು. ನಿಮ್ಮ ಮಾತುಗಳಿಂದ ಸಂತುಷ್ಠನಾಗಿದ್ದೇನೆ. ಆದರೆ, ಈಗ ನನ್ನದೊಂದು ಅನುಭವ ನಿಮಗೆ ಹೇಳಬೇಕು” ಎಂದು ಹತ್ತಿರ ಬಂದು ಕಿವಿಯಲ್ಲಿ ಪಿಸುಗುಟ್ಟಿದ. ಅಂತಹ ಗದ್ದಲದಲ್ಲಿ ಇದೇನು? ಆದರೂ ಅವರ ಆಸೆಗೆ ನೀರೆರೆಚಬಾರದು, ನಿರಾಸೆಗೊಳಿಸಬಾರದು “ಆಗಲಿ ಹೇಳಿ” ಎಂದು ಸಮ್ಮತಿಸಿದೆ.

‘ಸುಮಾರು ಎರಡು ದಶಕಗಳ ಹಿಂದಿನ ಮಾತು, ನಮ್ಮ ಅಗ್ರಹಾರದಲ್ಲಿ ದೈವದ ಆರಾಧನೆ ನಿಮಿತ್ತ ಅನ್ನಸಂತರ್ಪಣೆ ಇಟ್ಟುಕೊಂಡ್ಡಿದ್ದೆವು. ಆ ಅನ್ನಸಂತರ್ಪಣೆ-ಆರಾಧನೆಗೆ ನೇತೃತ್ವ ನನ್ನದSS ಇತ್ತು. ಒಂದಷ್ಟು ಜನ ಉಂಡು ಎದ್ದು ಹೋಗಿದ್ದರು. ವಿಪ್ರಸಂಘದ ಸದಸ್ಯರು ಉಂಡೆಲೆಗಳನ್ನು ಕಂಪೌಂಡ್ ಹೊರಗೆ ದಾಟಿಸುತ್ತಿದ್ದರು. ಎಲೆಗಳು ಹೊರ ಬಿದ್ದಾಗೊಮ್ಮೆ ಮಕ್ಕಳ ಕಿರಚಾಟ, ಗದ್ದಲ ಕೇಳಿಸುತ್ತಿತ್ತು.

ಯಾರಿರಬಹುದೆಂದು ಹೋಗಿ ನೋಡಿದ್ರೆ ಬಡಮಕ್ಕಳು ಬಾಳೆಲೆ ನೆಕ್ಕುತಿದ್ದರು. ಅದಕ್ಕೂ ನಾ ಮುಂದು ತಾ ಮುಂದು ಎಂದು ಬಡದಾಡಿ ಅನ್ನದ ಅಗಳು ಹೆಕ್ಕಿ ತಿನ್ನುತ್ತಿದ್ದರು. ನೋಡಿದ ನನ್ನ ಕಳ್ಳು ಚರ‍್ರೆಂದಿತು. ನನ್ನ ಹೆಜ್ಜೆ ತಪ್ಪಿತು; ಇದೆಂಥ ದಾರುಣ ಸ್ಥಿತಿ ಎಂದು ಮನ ಮರುಗಿತು. ಸ್ವಾತಂತ್ರ್ಯ ಬಂದೂ ಈ ಪರಿಸ್ಥಿತಿ ಛೇ! ಎಂದು ಅನ್ನದ ಅಗತ್ಯ ನಮಗಿಂತಲೂ ಇವರಿಗಿದೆ ಎಂದು ಯೋಚಿಸುತ್ತ ಅಡುಗೆ ಮನೆಗೆ ಬಂದೆ. ಅನ್ನ ತುಂಬಿದ ಪಾತ್ರೆ ಕಂಡಿತು, ಹಿಂದೂ ಮುಂದು ನೋಡದೆ ಆ ಪಾತ್ರೆಯನ್ನು ಎತ್ತಿಕೊಂಡು ಹೊರಟೆ. ಅಲ್ಲಿದ್ದವರು ಎಲ್ಲಿಗೆ ಎಂದು ಕೇಳಿದರೂ ಹೇಳಲಿಲ್ಲ. ಹೋದವನೆ ಪತ್ರೋಳಿ ನೆಕ್ಕುವ ಮಕ್ಕಳಿಗೆ ಕರೆದು ಬೇರೆಡೆ ಊಟ ಬಡಿಸಿದೆ. ಮಕ್ಕಳು ಉಣ್ಣುವುದನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಅದ್ಯಾವ ಮಾಯದಿಂದ ಕರ್ಮಠನೊಬ್ಬ ನೋಡಿ “ಇದು ಮಹಾಪರಾಧ, ಮೈಲಿಗೆ ಆಯಿತು” ಎಂದು ಚೀರಾಡಿದ, ಯಗರಾಡಿದ. ನನ್ನನ್ನು ಬಿಟ್ಟು ಕರ್ಮಠರೆಲ್ಲರೂ ಹೊಟ್ಟೆ ತುಂಬ ತಿಂದು ತೇಗಿದ ಮೇಲೆ ವಿಪ್ರರ ಸಭೆ ಕರೆದರು. ‘ಏನ್ರಿ ಇವ್ನು, ನಮ್ಮವನಾಗಿ ದರಿದ್ರ, ಶೂದ್ರ ಮುಂಡೆವು; ಭಿಕ್ಷುಕರಿಗೆ ಊಟ ಬಡಿಸಿ ಅಪಚಾರ ಮಾಡಿದ್ದಾನೆ’ ಎಂದು ಗದರಿದರು, ಸಿಡಿಮಿಡಿಗೊಂಡರು. ಅಷ್ಟಕ್ಕೆ ಸುಮ್ಮನಿದ್ದರೆ ನನಗೇನು ಬೇಸರಾಗುತ್ತಿರಲಿಲ್ಲ. ‘ಹಿಂದು-ಮುಂದು ನೋಡ್ದೆ ನಮ್ಮ ಕುಟುಂಬವನ್ನು ಸಮಾಜದಿಂದ ಹೊರಗಿಟ್ಟರು, ಯಾವತ್ತು ಕುಟುಂಬವನ್ನು ಹೊರಗೆ ಹಾಕಿದರು ಅಂದಿನಿಂದ ನಾನು ಜನಿವಾರ ಧರಿಸಿಲ್ಲ!’ ಎಂದು ಹೇಳುತ್ತಿದ್ದಂತೆ ಅವನ ಕಣ್ಣಾಲಿ ತೇವಗೊಂಡಿದ್ದು ಕಂಡಿತು.

“ಇರಲಿ ನಿಮ್ಮಂತಹವರು ಸಮಾಜಕ್ಕೆ ಬೇಕು ಹೆದರಬೇಡಿ, ಧೈರ್ಯಗೆಡಬೇಡಿ ನಿಮ್ಮೊಂದಿಗೆ ನಾವಿಲ್ಲವೆ? ಅಣ್ಣ ಬಸವಣ್ಣ, ಕಾಕಾ ಕಾರ್ಖಾನೀಸ, ಕುದ್ಮಲ್ ರಂಗರಾಯರು ಮಾಡಿದ ಸಾಧನೆ ಗೊತ್ತಲ್ಲ” ಎಂದು ಹೇಳಿ ಅವನ ಭುಜ ಹಿಡಿದು ಅಭಿನಂದಿಸಿದೆ. ಆಗ ಅವನ ಮುಖದಲ್ಲಿ ನಗು ಚಿಮ್ಮಿತು” ಎಂದು ಪ್ರೊಫೆಸರ್ ಮಾತು ಮುಗಿದಿರಲಿಲ್ಲ,
“ಏನ್ ಸರ್ ಈ ಜನರಿಗೆ ಬುದ್ಧಿ ಯಾವಾಗ ಬರ‍್ತದ. ಮನುಷ್ಯರಾಗುವುದು ಯಾವಾಗ? ಅವ್ರ ಸಮುದಾಯದ ವ್ಯಕ್ತಿಗೆ ಹೀಗ ಮಾಡುವ ಜನ ಇನ್ನು ನಮ್ಮ ಜನರ ಪರಿಸ್ಥಿತಿ ದೂರ ಉಳಿತು. ಅನ್ಯಧರ್ಮದವರಂದ್ರ ಇನ್ನೂ ಉರದ ಬೀಳ್ತಾರ! ಅಲ್ಲಾರಿ “ರಾಮ-ರಹೀಮ” ಒಂದೆ ಎಂದು ಹೇಳಿದವರ ಇಲ್ಲೇ ಬದುಕ್ಯಾರ, ದೇವನೊಬ್ಬ ನಾಮ ಹಲವು ಅಂತಾರಲ್ಲ! ಇವರಿಗೆ ಯಾವಾಗ ಬುದ್ಧಿರ‍್ತದ್ರಿ, ಬರಂಗಿಲ್ಲ, ಬರಂಗಿಲ್ಲ! ಸೌಹಾರ್ದತೆಯ ಮಾತಂತೂ ದೂರ ಉಳಿತು” ಎಂದು ಎಲ್ಲರೂ ತಳಮಳಿಸಿದರು.

“ಸಾರ್, ತಾವು ತಮ್ಮ ಭಾಷಣದಲ್ಲಿ ಹೇಳಿದ್ರೆಲ್ಲ. ಈ ಸಾರ್ ಸಹಿತ ಸೌಹಾರ್ದತೆಗೆ ಹೆಸರಾದವರು ನಾವು, ಮನುಷ್ಯ ಜಾತಿ ಒಂದ ಅಂದ್ರೆಲ್ಲ! ಅದೆಲ್ಲೈತಿ ಸಾಹೇಬರ?” ಎಂದು ಡ್ರೈವರ್ ನಡುವೆ ಬಾಯಿ ಹಾಕಿ ಕೇಳಿದ.
“ಶಿಸುನಾಳ ಶರೀಫ ಹ್ಯಾಂಗ ಬದುಕಿದ್ರು, ಚೆನ್ನೂರ ಜಲಾಲ್‌ಸಾಬ್‌ರಂಥವರು, ಕಬೀರ ಅಂಥವರು ಆಗಿ ಹೋಗ್ಯಾರ ನಿನಗ ಗೊತ್ತಿಲ್ಲೇನು?” ಎಂದು ಫ್ರೊಫೆಸರ್ ಹೇಳಿ, “ಏ ತಮ್ಮ ಸೌಹಾರ್ದತೆ ಇದೆಲ್ಲ ನಿನಗ್ಯಾಂಗ ಗೊತ್ತು?”
“ಸಾರ್, ಚೆನ್ನೂರ ಜಲಾಲ್‌ಸಾಬ್‌ನ ಊರು ನನ್ನೂರು ಒಂದ” ಎಂದು ಹೇಳಿ ಅಭಿಮಾನ ಪಟ್ಟುಕೊಂಡ.
“ಹಂಗಂದ್ರ ನೀ ಏನ ಹೇಳಬೇಕಂದೀಪಾ! ನಿನಗೇನ ಗೊತ್ತದ”
“ಅಲ್ಲ ಸಾರ್, ಅವರು ಎಲ್ಲಾರ ಸಲುವಾಗಿ ದುಡದಾರಿಲ್ರಿ” ಎಂದು ಡ್ರೈವರ್ ಹೊಳ್ಳಿ ನೋಡಿದ.
“ಹೌದು” ಎಂದು ಪ್ರೊಫೆಸರ್ ಉತ್ತರಿಸಿದ್ರು.
“ಚೆನ್ನೂರ ಜಲಾಲ್‌ಸಾಬ್ ಆ ಕಾಲದಲ್ಲಿ ಮುಸ್ಲಿಮನಾಗಿ ಬಸವಣ್ಣನ ಪುರಾಣ ಹೇಳತ್ತಿದ್ದ. ಸಾವಿರಾರು ಜನ ಪುರಾಣ ಕೇಳಾಕ ಬರ‍್ತಿದ್ರು” ಎಂದು ಹೇಳಿ “ಬಿಡಿ ಸಾರ್ ತಾವು ದೊಡ್ಡವರು, ನಾನು ನಿಮಗೆ ಹೇಳಬೇಕಾ? ಏನೋ ಅಂತಾರಲ್ಲ ಸೂಜಿ ಮಾರವರ ಓಣಿಗಿ ಡಬ್ಬಣಾ ಮಾರವರು ಬಂದಾಂಗ ಆಗ್ತದ” ಎಂದು ಮುಂದನೋಡಿ ಕಾರ್ ನಡಸ್ತಾ ಹಾರ್ನ್‌ ಮಾಡಿದ.
“ಏನಪಾ ಇವ್ನು ಏನ ಹೇಳೂದು ಹೇಳಿದ, ಈಗಂದ್ರ ಹೇಳವಲ್ಲ, ಏ ತಮಾ ಅಲ್ಲಿ ಮುಂದ ಕಾರು ನಿಲ್ಸು ಚಹಾ ಕುಡ್ಯಾನು ಆಗ ನಿಮ್ಮೂರ ಕತಿ ಹೇಳು, ಎಲ್ಲರೂ ಕೇಳತೀವಿ, ಹ್ಯಾಂಗೂ ತಡಾ ಆಗ್ತದ ಆಗಲಿ, ತಡವಾಗಿ ಮನಿಸೇರತೀವಿ. ಇರ‍್ಲಿ ಕಾರು ಹೋಟೆಲ್ ಮುಂದ ತರಬು” ಎಂದು ಉಳಿದವರು ದನಿಗೂಡಿಸಿದರು.
“ಜಲಾಲ್‌ಸಾಬ್ ಸಂತ ಅಟ್ಟ ಅಲ್ರಿ ದಿಟ್ಟ, ಗಟ್ಟಿ ಅನುಭವಿ ದೈವೀ ಪುರುಷ ಅಂತಿದ್ರು. ಬುದ್ಧನ ಕುರುಹಗಳಿರುವ ಸನ್ನತಿ ಪ್ರದೇಶದ ಪರಿಸರದಲ್ಲಿ ಜೀವನ ಕಟ್ಟಿಕೊಂಡಿದ್ದ. ಹುಟ್ಟಿದ್ದು ಸಗರನಾಡು; ಬಸವಣ್ಣನ ಬದುಕು ಅರದ ಕುಡದಿದ್ದಂತ ನಮ್ಮ ಹರ‍್ಯಾರು ಈಗಲೂ ಹೇಳ್ತಾರ. ಅವನ್ಹಂಗ ಪುರಾಣ ಹೇಳವ್ರು ಸುತ್ತೂರಾಗ ಯಾರು ಇರಲಿಲ್ಲಂತ ನೋಡ್ರಿ. ಅಂಥ ಮನುಷ್ಯನಿಗೂ ತ್ರಾಸ ಬಂತ ಸಾಹೇಬರ” ಎಂದು ಡ್ರೈವರ್‌ ಹಳಹಳಸಿದ.
“ಏನ ಅಂಥದು ತ್ರಾಸು ಬಂತು”
“ಶ್ರಾವಣ ತಿಂಗಳದಲ್ಲಿ ಪುರಾಣ ಹೇಳತ್ತಿದ್ದ; ಕೇಳಾಕ ಎಲ್ಲ ಜಾತಿ-ಮತದವರು ಬರ‍್ತಿದ್ರು. ಒಂದ ದಿವಸ ಜಲಾಲ್‌ಸಾಬ್ ಭೂಮಿ ಮ್ಯಾಲ ಬದುಕುವ ನಾವೆಲ್ಲರೂ ಬಂಧುಗಳ, ನಾವ್ಯಾರು ಬ್ಯಾರೆ ಬ್ಯಾರೆ ಅಲ್ಲ, ಇಲ್ಲಿ ಮೇಲು-ಕೀಳು ಉಚ್ಚ-ನಿಚ್ಚ ಇಲ್ಲ; ಒಳ್ಳೆಯದು ಕೆಟ್ಟದ್ದು ಎರಡSS ಅದಾವು, ಅಯ್ಯಾ ಎಂದರೆ ಸ್ವರ್ಗ, ಎಲವೋ ಅಂದ್ರೆ ನರಕ ಎನ್ನುತ್ತಿದ್ದಂತೆ, ಬಂದವರಲ್ಲೊಬ್ಬ ‘ಸಾಬ್ ನನ್ನದೊಂದು ತಕರಾರೈತಿ’ ಎಂದು ಎದ್ದು ನಿಂತ. ‘ಏನ್ ತಕರಾರ ಹೇಳು, ಇಲ್ಲಿ ಬರೀ ಪುರಾಣ ಕೇಳಿ ಹಂಗ ಹೋಗಾಂಗಿಲ್ಲ, ವಚನಗಳ ಮರ್ಮ ತಿಳಿಬೇಕು; ಹೇಳ ಹೇಳು’ ಎಂದು ಜಲಾಲ್‌ಸಾಬ್ ಕೇಳಿದ. ‘ನನ್ನ ತಕರಾರು ಏನದ ಅಂದ್ರ ಎಲ್ಲಾರು ನಮ್ಮವರ, ಯಾರು ಬ್ಯಾರ ಬ್ಯಾರೆ ಅಲ್ಲ ಅಂತೀರೆಲ್ಲ!’ ‘ಏ ತಮಾ ನಾನಂದಿಲ್ಲ, ಅಣ್ಣ ಬಸವಣ್ಣ ಹೇಳ್ಯಾನ, ಅದನ್ನ ಹೇಳಾಕ್ಹತ್ತಿನಿ! ಅನೇಕ ಮಹಾಪುರುಷ ಇದನ್ನೇ ಹೇಳ್ಯಾರ’ ಎಂದು ಜಲಾಲ್‌ಸಾಬ್ ಮರು ನುಡಿದರು. “ಅದೇ ಸಾಬರ, ಈ ಕಾಲದಲ್ಲಿ ಅದು ಸಾಧ್ಯಾನಾ!” ಎಂದು ಕೇಳಿದೆ.

‘ಯಾಕ ಸಾಧ್ಯವಿಲ್ಲ, ನೋಡಪಾ ನಿನಗೂ ಎರಡ ಕೈ ಅದಾವ, ನನಗೂ ಎರಡ ಕೈ ಅದಾವ, ಕಾಲು, ಕಣ್ಣು ಎರಡೆರಡು ಇಲ್ಲೇನು? ತಲಿ ಒಂದ ಐತಿ ಮೂಗೂ ಒಂದ ಐತಿ ಅದ್ಯಾಂಗ ಬ್ಯಾರೆ ಆಗ್ತೀವಿ! ಗಾಳಿ, ಬಿಸಿಲು ನೀರು ಒಂದೇ ಬಳಸ್ತಿವಲ್ಲ!’ ಎಂದರು ಜಲಾಲ್‌ಸಾಬ್. ನೂರಾರು ವರ್ಷಗಳಿಂದ ನಡಕೊಂಡ ಬಂದ ಜಾತಿ ಪದ್ಧತಿ, ಅಸ್ಪೃಶ್ಯತೆ ಇವೆಲ್ಲ ಒಮ್ಮಕ ಹ್ಯಾಂಗ ಹೋಗ್ತಾದ್ರಿ ಅಂಥಾ ಶರಣ ಬಸವಣ್ಣನ ಸೋತ ಹೋಗ್ಯಾನ ನಾವು ಯಾವ ಲೆಕ್ಕ ಸಾಬರ’ ಎಂದು ಸಭಿಕ ಪ್ರಶ್ನಿಸಿ ನಿರಾಸೆ ತೋರಿಸಿದ.

‘ಏ ತಮ್ಮ ಅಣ್ಣ ಬಸವಣ್ಣ ಸೋತಿಲ್ಲಪಾ! ಗೆದ್ದಾನ, ಕೇರಿಯವರ ನೆರಳ ಬಿದ್ರ ದೂರ ಸರೀತಿದ್ರು. ಅಂಥಾ ಕಾಲದಾಗ ಕೇರಿಗಿ ಹೋದ; ಜಾತಿ-ಮತ ನೋಡ್ದ ಎಲ್ಲರನ್ನು ಬಿಗಿದಪ್ಪಿಕೊಂಡು ಅಂಥವರ ಹಿತಾ ಕಾಪಾಡಲಿಕ್ಕ ಮುಂದದಾಗ, ಮಂಚಣ್ಣನಂಥವರು ಜೀವಾ ತೇಗಿದ್ರಪ್ಪಾ’ ಎನ್ನುತ್ತಿದ್ದಂತೆ ಹೊತ್ತಾಗಿದ್ರಿಂದ ಪುರಾಣ ನಾಳಿಗೆ ಹೋಳೂನು ಎಂದು ಜಲಾಲ್‌ಸಾಬ್ ಎದ್ದು ಮನೆಗೆ ಬಂದ್ರಂತ. ಜಲಾಲ್‌ಸಾಬ್ ಹೆಸರು ಸುತ್ತೂರಲ್ಲಿ ಹೆಚ್ಚ ಬೆಳಕಿಗಿ ಬಂದಿತು. ಪ್ರಸಿದ್ಧಾಗಿ ಬರ‍್ತಿದ್ದಂಗ ಮಸೀದಿ ಮಂದಿಗೆ ಬಿರಿ ಬಿತ್ತು, ‘ಏ ತಮ್ಮಾ ಹೋಗು ಜಲಾಲ್‌ಸಾಬ್‌ಗ ಬರಾಕ ಹೇಳು, ಹಿಂಗSS ಬಿಟ್ರ ಅಂವಾ ಭಾಳ ಮುಂದ ಹೋಗ್ತಾನ, ಹೋಗ ಲಗೂನ ಅವ್ನ ಕರಕೊಂಡು ಬಾ!’ ಎಂದು ಹೇಳಿದರು. ಮಸೀದಿ ಸೇವಕ ಬಂದು ‘ಸಮಾಜದ ಮುಖಂಡರು ಕರದಾರ ಬರಬೇಕಂತ’ ಎಂದು ಹೇಳಿದ. ಸಮಾಜದವ್ರು ಯಾಕ ಕರದ್ರಪ್ಪಾ! ಎಂದು ಚಿಂತಿ ಮಾಡುತ್ತ ಅವಸರ ಬೌಸರ ಮಾಡಿ ಮಸೀದಿಗೆ ಬಂದು ಸೇರಿದ. ‘ಕೂಡಪಾ ಜಲಾಲ್ ಏನೇನ ಕಥಿನಿಂದು ಜಮಾತದವನಾಗಿ ನಮ್ಮ ಕೆಲಸಾ ಮಾಡಾದು ಬಿಟ್ಟು ಅದೇನದು ಪುರಾಣ ಹೇಳಾಕ್ಹತ್ತಿದಿ, ನಿನ್ನ ಜ್ವಾಳ ಮಂದಿಗಿಕೊಟ್ಟು ಮಂದಿಜ್ವಾಳಾ ನೀ ಹಾಡ್ಯಾಡಿ ಬೀಸಾಕ್ಹತ್ತಿದೆಲ’” ಎಂದು ಕೇಳಿದರು.

‘ನೋಡ್ರಿ ಧರ್ಮ ಬೇರೆ ಬೇರೆ ಆದ್ರೂ ಅವು ಮನುಷ್ಯನ ಕುರಿತ ಮಾತಾಡ್ತಾವ. ಸುಮ್ಮಸುಮ್ಮಕ ಅವ್ರು ಬೇರೆ, ನಾವು ಬೇರೆ ಎಂದು ಮಾಡಕೊಂಡಿವಿ’ ಎಂದು ಜಲಾಲ್ ಹೇಳಿದ. ‘ಏ ನಿನಗ ನಾವು ಹೇಳೂದು ತಿಳ್ಯಾಂಗಿಲ್ಲೇನು ಪುರಾಣ ಹೇಳೂದು ಬಿಡಬೇಕು, ಬಿಡಲಿಲ್ಲಂದ್ರ ಸಮಾಜದ ಹೊರಗ ಇರಬೇಕಾಗ್ತದ; ಇಲ್ಲಂದ್ರ ಅರಸನಿಂದ ಹುಕುಂಪತ್ರ ತಂದು ಪುರಾಣ ಹೇಳು ಅಲ್ಲಿತನಕ ಹೇಳಬ್ಯಾಡ’ ಎಂದು ಕಟ್ಟಪ್ಪಣೆ ಹಾಕಿದರು. ಭಾಳ ಯೋಚಿಸುವುದರಾಗ ಏನೂ ಲಾಭ ಇಲ್ಲ ಅಂದವನ ಜಲಾಲ್‌ಸಾಬ್, ‘ಆಗಲ್ರಿ ಹುಕುಂಪತ್ರ ತಂದ ಮ್ಯಾಲ ಪುರಾಣ ಹೇಳ್ತಿನಿ’ ಎಂದು ವಾದಿಸಿದ. ‘ಏ ಹುಚ್ಚ, ಹಳೆ ಹುಚ್ಚದಿ ನೀನು, ಹೋಗರೆ ಹೋಗು ಒದ್ದು ಒಳಗ ಹಾಕ್ತಾರ’ ಎಂದು ಹೆದರಿಸಿದರು. ಆಗಲಿ ತಗೊಳ್ರಿ ಏನ ಆಗ್ತ ಆಗಲಿ ಎಂದು ಅಲ್ಲಿಂದ ಎದ್ದು ಬಂದು ಊರ ಶರಣಪ್ಪಗೌಡ್ರನ್ನು ಕಂಡ್ರ ವಾಡೇದ ಹ್ಯಾಂಗರ‍್ತದ ಎಂದು ಜಲಾಲ್‌ಸಾಬ್ ಗೌಡ್ರ ಕಡೆಗೆ ಮುಖಾ ಮಾಡಿದ. ಅಷ್ಟೂತ್ತಿಗಾಗಲೇ ಮಸೀದ್ಯಾಗ ಏನೇನ ನಡದಿತ್ತು ಅದೆಲ್ಲವನ್ನು ತಳವಾರ ಕಲ್ಲ ಶರಣಗೌಡಗ ಮುಟ್ಟಿಸಿ ಪಿನ್ನ ಮಾಡಿದ್ದ. ‘ಅದೇ ಗೌಡ್ರ ಪುರಾಣ ಹೇಳೂದು ಬ್ಯಾಡಂತಾರ ಹುಕುಂಪತ್ರ ತಂದು ಹೇಳು ಅಲ್ಲಿಕ್ಹತ್ಯಾರ!’ ಎಂದು ನಿವೇದಿಸಿದ.

‘ನೋಡಪಾ ಜಲಾಲ್‌ಸಾಬ್ ಅವರು ಹೇಳೂದು ಸರಿ ಐತಿ, ನಿನಗ್ಯಾಕ ಬೇಕು ಬೇರೆ ಧರ್ಮದವರ ಉಸಾಬರಿ.’ ‘ನೀವೂ ಹಿಂಗಂದ್ರ ಹ್ಯಾಂಗರಿ’ ಎಂದು ಜಲಾಲಸಾಬ್ ಹಳಹಳಿಸಿದ. ಏನ ಮಾಡೋದು ಎಂದು ಯೋಚಿಸಿ ಅರಸನ ಒಪ್ಪಿಗೆ ತರಲಾಕ ಹೋಗಬೇಕು. ಅದೊಂದೆ ಕೊನೆಯ ದಾರಿ ಎಂದು ಹೊರಟುನಿಂತ. ಕಾಲ್ನಡಿಗೆಯಿಂದ ಹೋಗಬೇಕು, ನಿರ್ವಾಯಿಲ್ಲ ಎಂದು ನಡೀತಾ ಹೊಂಟ. ವಾರಗಟ್ಲೆ ನಡೆದ, ನೀರಡಿಸಿ ರಸ್ತೆಯ ಪಕ್ಕದಲ್ಲಿದ್ದ ಗುಡಿಸಲು, ಮನೆಗಳಿಗೆ ಹೋಗಿ ಏನಾದ್ರು ಇದ್ರ ಕೊಡ್ರಿ ಎಂದು ಕೇಳುತ್ತಿದ್ದ. ಕೊಟ್ಟಿದ್ದು ಸೇವಿಸಿ ಮುಂದೆ ಸಾಗುತ್ತಿದ್ದ. ಇನ್ನೇನು ಊರು ತಲುಪಬೇಕು, ಹಸಿದು-ನೀರಡಿಸಿ ನಿತ್ರಾಣಗೊಂಡಿದ್ದ. ಕಣ್ಣಿಗೆ ಕಂಡ ಗುಡಿಸಲೆದುರಿಗೆ ಹೋಗಿ ‘ತಾಯಿ ನೀರ ಕೊಡವ್ವ’ ಎಂದು ಕೇಳಿದ. ಹೊರ ಬಂದ ಹೆಣ್ಣುಮಗಳು ನೀರು ಕೊಟ್ಟಿದ್ದಲ್ಲದೆ, ಬರ‍್ರಿ ಊಟದ ವ್ಯಾಳೆ ಆಗೇತಿ ಎಂದು ಕರದು ಊಟ ಕೊಟ್ಟು ಉಪಚರಿಸಿದಳು. ‘ತಾವು ಸಂತರಗ ಕಾಣ್ತೀರಿ ನನ್ನ ಮಗಳು ಮದುವಿ ವಯಾಕ ಬಂದಾಳ ಮಾತಬಿಟ್ಟ ಮಾತಾಡಕ್ಹತ್ಯಾಳ, ಅವಳಿಗೆ ಮದುವಿ ಮಾಡಬೇಕು. ಜಲಾಲ್‌ಸಾಬರ ಕಡಿಗಿ ಹೋಗಬೇಕು, ಏನ ಮಾಡ್ತಿರಿ ಧಾವತಿ ಬಿಟ್ಟು ಹೋಗಾಕ ಆಗಿಲ್ಲಪ್ಪ! ನಿಮಗ ಅವರೇನರ ಗೊತ್ತಾರೇನ್ರಿ’ ಎಂದಳು. ‘ತಾಯಿ, ಜಾತಿ-ಮತ ಕೇಳ್ದ ನೀರಕೊಟ್ಟು, ಅನ್ನ ಹಾಕಿದಿ, ನಾ ಹ್ಯಾಂಗ ಸುಳ್ಳ ಹೇಳ್ಲಿ ತಾಯಿ, ನಾನ ಆ ಜಲಾಲ್‌ಸಾಬ್. ಅರಸರನ್ನು ಕಾಣಬೇಕೆಂದು ಹೊಂಟೀನಿ’ ಎನ್ನುತ್ತಿದ್ದಂತೆ ಯಜಮಾನ್ತಿ ಹಣಿಹಚ್ಚಿ ನಮಸ್ಕಾರ ಮಾಡಿದಳು. ‘ಕರಿವಾ ನಿನ್ನಮಗಳು ಎಲ್ಲಿ ಅದಾಳ’ ಎನ್ನುತ್ತಿದ್ದಂತೆ ದೌಡಕ ಎದ್ದು ಹೋಗಿ ಮಗಳನ್ನು ಕರೆ ತಂದು ಎದುರು ನಿಲ್ಲಿಸಿದಳು. ನೋಡಿದ ಜಲಾಲಸಾಬ್ ಮಗುವಿನ ಮುಖದ ಮ್ಯಾಲ ಕೈಯಾಡಿಸಿ ‘ಅವಳ ಎಲ್ಲ ಬಾಧೆಗಳನ್ನು ನಾನ ತಗೊಂಡ ಹೋಗ್ತಿನಿ’ ಎಂದು ಹೇಳಿ ‘ಕುಡ್ಯಾಕ ನೀರ ಕೊಡವಾ ತಾಯಿ’ ಎಂದು ಮತ್ತೊಮ್ಮೆ ಕೇಳಿದ. ಒಡತಿ ನೀರು ತರಲು ಸಜ್ಜಾಗುತ್ತಿದ್ದಂತೆ, ‘ಏ ತಾಯಿ ನೀ ತರಬ್ಯಾಡ ನಿನ್ನ ಮಗಳು ತರ‍್ಲಿ’ ಎಂದು ಹೇಳಿದ. ‘ನೀನ ಹೋಗವಾ’ ಎಂದು ಒಡತಿ ಮಗಳಿಗೆ ಹೇಳಿದಳು. ಮಗಳು ಹೋಗಿ ನೀರು ತಂದಳು. ‘ನೋಡು ನಿನ್ನ ಮಗಳ ಎಲ್ಲ ಪೀಡೆಗಳು ತೊಲಗಿದಾವು. ಈಗ ಅವಳ ಮದುವಿ ಮಾಡು, ಅವಳ ಮದುವಿಗಿ ನಾನು ಬರ‍್ತಿನಿ’ ಎಂದು ಹೇಳಿ ಹಾದಿ ತುಳಿದ.

ಕೊನೆಗೊಂದು ದಿನ ರಾಜನ ದರಬಾರು ಎದುರಿಗೆ ಹೋಗಿ, ‘ನಾನು ರಾಜರನ್ನು ಕಾಣಬೇಕು’ ಎಂದು ಕೇಳಿಕೊಂಡ. ಸೇವಕರು ಬಿಡದಾದರು, ಜಲಾಲ್‌ಸಾಬ್ ಪರಿಪರಿಯಾಗಿ ಕೇಳಿಕೊಂಡು ದೂರದಿಂದ ಬಂದಿದ್ದೇನೆ ಎಂದು ಹೇಳಿ ಒತ್ತಡ ಹಾಕಲು ಹರಸಹಾಸ ಪಟ್ಟಿದ್ದರಿಂದ್ರ, ಭಾಳ ಕೇಳಾಕ್ಹತ್ಯಾನ; ಸಂತ ಬ್ಯಾರೆ ಅದಾನ ಎಂದು ಒಳಗ ಬಿಟ್ರು. ರಾಜನ ಎದುರಿಗೆ ಹೋಗಿ ನಮಸ್ಕರಿಸಿ, ‘ನಾ! ಪುರಾಣ ಹೇಳುವ ಮನುಷ್ಯ, ಮಾನವರಲ್ಲಿ ಯಾವ ಭೇದಭಾವ ಇಲ್ಲ ಎಂದು ತಿಳಿದಿದ್ದು, ಅಣ್ಣ ಬಸವಣ್ಣ ಸಾರಿದ್ದು ಹೇಳ್ತಿನಿ; ಈಗ ಊರಾಗ ಎರಡೂ ಸಮಾಜದವರು ಹುಕುಂಪತ್ರ ತಂದು ಧರ್ಮದ ಪುರಾಣ ಹೇಳು ಅಂದಾರ. ಅದಕ್ಕ ನನಗ ಹುಕುಂಪತ್ರ ಕೊಡ್ರಿ ಅರಸರ’ ಎಂದು ಕೇಳಿದ. ‘ನೋಡಪಾ ನೀನು ಮುಸ್ಲಿಮ, ನಿನ್ನ ಧರ್ಮ ಬೇರೆ, ಅವರ ಧರ್ಮ ಬೇರೆ ನೀನ್ಯಾಕ ಪುರಾಣ ಹೇಳ್ತಿ’ ಎಂದು ಅರಸ ಕೇಳಿದ. ನಾವೆಲ್ಲ ಒಂದೇ ನೆಲದಲ್ಲಿದ್ದಿವಿ, ಒಂದೇ ಗಾಳಿ; ಒಂದೇ ಬೆಳಕು ಸೇವಿಸ್ತಿವಿ, ಎಲ್ಲ ಧರ್ಮಗಳು ಮಾನವರೆಲ್ಲ ಒಂದೇ ಎಂದು ಹೇಳ್ತಾವ, ಈ ಭಿನ್ನ ಭಾವ ನಮ್ಮ ನಡುವ ಯಾಕ ಬೇಕು? ಅನ್ನುತ್ತ ಅರಸನೊಂದಿಗೆ ವಾದಿಸಿದ. ಸಿಟ್ಟಿಗೆದ್ದ ಅರಸ ‘ಏ ಯಾರಿದ್ದೀರಲ್ಲಿ ಇವನಿಗೆ ಒಳಾಗ ಹಾಕರಿ’ ಎಂದು ಆದೇಶಿಸಿದ. ಏನೂ ತಪ್ಪ ಮಾಡದ ಜಲಾಲ್‌ಸಾಬ್ ಜೈಲುವಾಸ ಮಾಡಬೇಕಾಯಿತು. ತಿಂಗಳುಗಳೇ ಕಳೆದವು. ಇತ್ತ ರಾಜನಿಗೆ ಭಯಂಕರವಾದ ಚರ್ಮರೋಗ ಹತ್ತಿತ್ತು. ಆಸ್ಥಾನದ ಎಲ್ಲ ವೈದ್ಯರು ಔಷಧಿ ನೀಡಿದರು. ಏನ ಮಾಡಿದರೂ ರೋಗ ಗುಣವಾಗಲಿಲ್ಲ. ಅರಸರಿಗೆ ರೋಗ ಹತ್ತಿ ಎಷ್ಟು ದಿನಗಳಾದ್ರೂ ಕಡಿಮೆ ಆಗೊಲ್ದು ಎಂದು ಯೋಚಿಸಿದ ಹಿರಿಯ ಸೇವಕ ಅರಸರನ್ನು ಭೇಟಿ ಮಾಡಿ ‘ಹುಜೂರ್, ನಿಮ್ಮ ಕೂಡ ವಾದಾ ಮಾಡಿದ್ನಲ್ಲ ಜಲಾಲ್‌ಸಾಬ್, ಅವನು ದೇಶಿ ವೈದ್ಯ, ತಾವು ಒಪ್ಪಿದರೆ ಅವನನ್ನು ಕರದು ಕೇಳಬಹುದಲ್ಲ’ ಎಂದು ಸಲಹೆ ನೀಡಿದ. ‘ಎಂಥಿಂಥವರು ಬಂದು ಹೋಗ್ಯಾರ ಏನೂ ಆಗಿಲ್ಲ, ಇವನಿಂದೇನಾಗ್ತದ! ಆಯಿತು ನೀ ಹೇಳ್ತಿಯಂದ್ರ ಕೇಳಬೇಕು, ಬಂಧಿಖಾನೆಯಿಂದ ಕರಕೊಂಡು ಬರ‍್ರಿ’ ಎಂದು ರಾಜಾಜ್ಞೆ ಮಾಡಿದರು.

‘ಜಲಾಲ್‌ಸಾಬ್ ನಿನಗ ರಾಜರು ಕರಿತಿದ್ದಾರ’ ಎಂದು ಸೇವಕರು ಹೇಳಿದರು. ‘ಏನಂತರಿ, ಯಾಕಂತ’ ಎಂದು ಗಾಬರಿಗೊಂಡು ಬಂದು ನಮಸ್ಕರಿಸಿ ಅರಸರೆದುರಿಗೆ ನಿಂತ. ‘ಏನಪಾ ಜಲಾಲ್ ನೀನು ದೇಶಿ ಔಷಧಿ ಕೊಡತಿಯಂತಲ್ಲ, ನೋಡು ನನ್ನ ಕೈಗಿ ಏನಾಗಿದೆ ಎಂದು ರಾಜ ತನ್ನ ಕೈ ಮುಂದು ಮಾಡಿದ.’ ನೋಡಿದ ಜಲಾಲ್‌ಸಾಬ್ ‘ಅರಸರೆ ಇದರ ಔಷದ ನನಗ ಗೊತ್ತು, ಇದು ನಾ ಗುಣಾ ಮಾಡ್ತಿನಿ, ಆದ್ರ...’ ಎಂದು ಸುಮ್ಮನಾದ. ‘ಆದ್ರ ಅಂದ್ರೇನು? ಹೇಳು’ ಎಂದು ಅರಸ ಗದರಿದ. ‘ಏನಿಲ್ಲ ಅರಸರೆ ನನಗೆ ಪುರಾಣ ಹೇಳಲು ಹುಕುಂಪತ್ರ ಕುಡತೀನಂದ್ರ ಈ ರೋಗ ಗುಣ ಮಾಡ್ತಿನಿ’ ಎಂದು ಅರಸನ ಮುಖ ನೋಡಿದ.
‘ಆಯಿತಪಾ! ನಿನ್ನಂಗ ಆಗಲಿ, ನಿನ್ನ ಔಷಧ ಹುಸಿ ಹೋಗಬಾರ‍್ದು, ಹುಸಿ ಹೋದ್ರ ನಿನ್ನ ಪರಿಸ್ಥಿತಿ ಏನಾಗ್ತದ ಗೊತ್ತದಲ್ಲ!’ ಎಂದು ದರ್ಪಿನಿಂದ ಹೇಳಿದರು. ಜಲಾಲ್‌ಸಾಬನ ಮುಖದಲ್ಲಿ ಸ್ವಲ್ಪವು ಕೂಡ ಆತಂಕ, ಅಧೀರತನ ಕಾಣಲಿಲ್ಲ. ಆತ್ಮವಿಶ್ವಾಸದಿಂದ ಹುಗುಟ್ಟಿ ‘ಗಿಡಮೂಲಿಕೆಗಳನ್ನು ಹುಡುಕಿ ತರಬೇಕು, ಜೈಲಿನಿಂದ ನನಗೆ ಹೊರಗ ಬಿಡಬೇಕು’ ಎಂದು ಕೇಳಿಕೊಂಡ. ‘ಅದೂ ಆಗಲಿ’ ಎಂದ ಅರಸ ‘ಯಾರಲ್ಲಿ’ ಎನ್ನುತ್ತಿದ್ದಂತೆ ಹಿರಿಯ ಸೇವಕ ‘ಹುಜೂರ’ ಎಂದು ಬಂದು ಹಾಜರಾಗಿ ನಮಸ್ಕರಿಸಿದ ‘ಜಲಾಲ್ ಎಲ್ಲಿ ಹೋಗ್ತಾನ, ಏನ್ ತರತಾನ ತರಲಿ, ಅವನ ಜೊತೆಗಿರು, ಅವನಿಗೆ ಯಾರೂ ಅಡೆತಡೆ ಮಾಡಬಾರದು’ ಎಂದು ಅರಸರು ಆಜ್ಞೆ ಮಾಡಿದರು.

ಗಂಟೆರಡು ಗಂಟೆ ಕಳೆದಿರಲಿಲ್ಲ ಜಲಾಲ್ ಗಿಡಮೂಲಿಕೆಗಳಿಂದ ಔಷಧಿ ಸಿದ್ಧಪಡಿಸಿ ತಂದು ಅರಸನ ಕೈಗೆ ಹಚ್ಚಿದ. ‘ನೋಡಿ ಅರಸರೆ ಇನ್ನೆರಡು ದಿನಗಳಲ್ಲಿ ಹುಣ್ಣಿನಲ್ಲಿರುವ ಹುಳಗಳು ಸಾಯುತ್ತಿದ್ದಂತೆ ನಿಧಾನಕ್ಕೆ ಆರಾಮ ಆಗ್ತದ ಏನೂ ಚಿಂತಿ ಮಾಡಬ್ಯಾಡ್ರಿ’ ಎಂದು ಹೇಳಿ ಅರಸರಿಗೆ ವಂದಿಸಿ ಮತ್ತೆ ಜೈಲುವಾಸದಲ್ಲಿ ಉಳಿದ. ಒಂದು ದಿನ ಕಳೆದು ಎರಡು ದಿನ ಕಳೆಯುತ್ತಿದ್ದಂತೆ ರೋಗ ಮಾಯವಾಗುವ ಲಕ್ಷಣ ಕಂಡು ಬಂದುದು ತಿಳಿದ ಅರಸ ಉಲ್ಲಾಸಿತನಾದ. ಸೇವಕನನ್ನು ಕರೆದು ‘ಏ ನೀನು ಹೇಳಿದ್ದು ಸರಿಯಾಗಿದೆ, ಜಲಾಲ್‌ನಿಂದ ನನಗಂಟಿದ ರೋಗ ಕಡಿಮೆಯಾಗುತ್ತಿದೆ. ಜಲಾಲ್‌ನನ್ನು ಬಿಟ್ಟು ಬಿಡು’ ಎನ್ನುತ್ತಿದ್ದಂತೆ; ‘ಅರಸರೆ ಪೂರ್ಣ ಗುಣವಾಗಲಿ ತಡಿಯಿರಿ ಒಮ್ಮಿಗೆ ನಿರ್ಧಾರಕ್ಕೆ ಬರುವುದು ನನಗೇಕೊ ಸರಿ...’ ಎಂದು ಹೇಳಿದ. ‘ನೀನು ಹೇಳುವುದು ಸರಿ ಇದೆ, ಎಷ್ಟೊ ಜನ ಬಂದು ಔಷಧಿಕೊಟ್ಟು ದುಡ್ಡು ಏನೇನೊ ತೆಗೆದುಕೊಂಡು ಹೋದರು; ಏನೂ ಆಗಲಿಲ್ಲ. ಇರಲಿ ನಿನ್ನ ಸಲಹೆ ನನ್ನನ್ನು ಖುಷಿಗೊಳಿಸಿದೆ, ತಗೊ ಈ ಕೈ ಉಂಗುರ’ ಎಂದು ಅರಸ ಸೇವಕನನ್ನು ಸಂತೃಪ್ತಿ ಪಡಿಸಿದ. ಸೇವಕ ನಮ್ರತೆಯಿಂದ ವಂದಿಸಿ ನಿರ್ಗಮಿಸಿದ. ದಿನಗಳು ಉರುಳಿದವು.

ಜಲಾಲ್‌ಸಾಬ್ ಸೇವಕನನ್ನು ಕರೆದು ‘ನಾನು ಅರಸರನ್ನು ನೋಡಬೇಕು, ದೇಶಿ ಔಷಧಿ ಹಚ್ಚಿ ಏಳು ದಿನಗಳಾದವು ರೋಗ ಗುಣವಾಗಿರುತ್ತದೆ, ನಾನು ಅರಸರನ್ನು ಕಾಣಬೇಕು’ ಎಂದು ಕೇಳಿಕೊಂಡ. ‘ಅದ್ಹೇಗೆ ನೀನು ಹೇಳ್ತಿಯಾ!’ ‘ನನಗೆ ನನ್ನ ಔಷಧಿಯ ಮೇಲೆ ನಂಬಿಕೆ ಇದೆ ಎಂದು ವಿಶ್ವಾಸದಿಂದ ಹೇಳಿದ. ತಡಿಪಾ! ನಿನಗೆ ಹಾಗೆ ಬಿಡಲಿಕ್ಕಾಗದು ಅರಸರನ್ನು ಕೇಳಬೇಕು, ತಡಿ ತಡಿ ಅನ್ನುತ್ತ’ ಸೇವಕ ವಾದ ಮಾಡುತ್ತಿದ್ದ. ಅಷ್ಟರಲ್ಲಿ ಅರಸರು ಹಿರಿಯ ಸೇವಕನನ್ನು ಕರೆದಿದ್ದಾರೆ ಎಂಬ ಸುದ್ಧಿ ಬಂದಿತು. ಸೇವಕ ಗಡಬಡಿಸಿ ಅರಸರತ್ತ ಧಾವಿಸಿದ. ‘ನೋಡಪಾ, ಜಲಾಲ್ ಏನೊ ಕೇಳಿದ್ನಲ್ಲ’ ಎಂದು ಅರಸ ಕೇಳಿದ. ‘ಅದೇ ಸಾಹೇಬ್ ಹುಕುಂಪತ್ರ’ ಎಂದು ಉತ್ತರಿಸಿದ.

‘ಅದನ್ನು ಈಗಿಂದೀಗ ಸಿದ್ಧಗೊಳಿಸು’ ಎಂದು ಹೇಳಿದರು. ಸೇವಕ ‘ಅರಸರೆ ಸ್ವಲ್ಪ ಗಂಭೀರ ವಿಷಯ ಮುಸ್ಲಿಮ ವ್ಯಕ್ತಿ ಬೇರೊಂದು ಧರ್ಮದ ಪುರಾಣ ಹೇಳುವುದು?’ ಎಂದು ಗೊಣಗಿದ. ‘ಇದು ರಾಜಾಜ್ಞೆ’ ಎನ್ನುತ್ತಿದ್ದಂತೆ ಸುಮ್ಮನಾಗಿ ನಿರ್ಗಮಿಸಿದ ಸೇವಕ ‘ಹುಕುಂಪತ್ರ’ ಸಿದ್ಧಪಡಿಸಿ ಜಲಾಲ್‌ಸಾಬ್‌ನನ್ನು ಅರಸರೆದುರಿಗೆ ಹಾಜರು ಪಡಿಸಿದ. ‘ನೋಡು ಜಲಾಲ್ ನಿನ್ನ ಔಷಧಿಯಿಂದ ನನಗಂಟಿದ ಚರ್ಮರೋಗ ಗುಣವಾಗಿದೆ. ಅದಕ್ಕೆ ಪ್ರತಿಯಾಗಿ ನೀನು ಕೇಳಿದ ಹುಕುಂಪತ್ರ ಸಿದ್ಧವಾಗಿದೆ. ಪುರಾಣ ಹೇಳಲು ನಿನಗೊಂದು ಕುರ್ಚಿ ಸಹಿತ ಹುಕಂಪತ್ರ ಕೊಡುತ್ತಿದ್ದೇನೆ; ಇದನ್ನು ತೆಗೆದುಕೊಂಡು ನಿನ್ನ ಮನಸ್ಸಿಚ್ಚೆಯಂತೆ ಕುರ್ಚಿಯ ಮೇಲೆ ಕುಂತು ಪುರಾಣ ಹೇಳು. ಆದ್ರೆ ಸಮಾಜದಲ್ಲಿ ಸೌಹಾರ್ದತೆ ಉಳಿಸಿ-ಬೆಳೆಸು’ ಎಂದು ಕಟ್ಟಪ್ಪಣೆ ಮಾಡಿದರು.

ಅರಸರ ಮಾತನ್ನು ತಲೆಬಾಗಿ ಒಪ್ಪಿದ ಜಲಾಲ್‌ಸಾಬ್ ರಾಜಮರ್ಯಾದೆಯೊಂದಿಗೆ ಊರು ಸೇರುತ್ತಿದ್ದಂತೆ ಜನರು ಬೆಚ್ಚಿಬೆರಗಾದರು. ನಡೆದ ವೃತ್ತಾಂತ ಹೇಳಿದಾಗ ವಿರೋಧಿಸಿದವರೂ ಸುಮ್ಮನಾದರು. ಜಲಾಲ್‌ಸಾಬ್ ಹುಕುಂಪತ್ರ ತೋರಿಸಿದ, ಅದನ್ನು ಕಂಡ ಎಲ್ಲರೂ ‘ಜಲಾಲ್‌ಸಾಬ್ ನಾವು ನಿಮ್ಮನ್ನು ಅರ್ಥ ಮಾಡಿಕೊಳ್ಳಲಿಲ್ಲ; ನೀವು ಬೋಧಿಸುತ್ತಿದ್ದ ಮನುಷ್ಯ ಧರ್ಮದ ವಿಚಾರಗಳಿಗೆ ನಮ್ಮ ನಮ್ಮ ಗ್ರಹಿಕೆಗಳನ್ನು ಮೆತ್ತಿ ನಿಜ ಧರ್ಮದ ವಿಚಾರಗಳಿಗೆ ಭಂಗ ತಂದಿದ್ದೆವು. ನಮ್ಮಿಂದ ತಪ್ಪಾಯಿತು, ನೀವಿನ್ನು ಯಾವುದೇ ಆತಂಕವಿಲ್ಲದೆ ಪುರಾಣ ಹೇಳಬಹುದು’ ಎಂದರು.

‘ಹಾಗಿದ್ದರೆ ಅಲ್ಲಿ ದೂರದಲ್ಲಿ ಕೂತು ಪುರಾಣ ಕೇಳುವ ಕೇರಿಯ ಬಂಧುಗಳನ್ನು ಮುಂದು ಕರೆದು ಕೂಡಿಸಿದರೆ ನಿಮ್ಮದೇನು ಅಭ್ಯಂತರವಿಲ್ಲವಲ್ಲ’ ಎಂದು ಜಲಾಲ್‌ಸಾಬ್ ಪಾಟೀಲ, ಪಟೇಲ್-ಪಟವಾರಿಗಳ ಮುಖ ನೋಡಿದ. ‘ಅರ‍್ಯಾರೂ ಬೇರೆ ಅಲ್ಲ ಎಮ್ಮವರು ಬೆಸಗೊಂಡಡೆ ಶುಭ ಲಗ್ನವೆನ್ನಿರಯ್ಯ ಎಂದು ಅಣ್ಣ ಹೇಳಿದ್ದಾನೆಂದು ತಾವ ಅದನ್ನ ಹೇಳಿದಿರಿ, ಹಾಗೆ ಆಗಲಿ’ ಎಂದು ಸಮ್ಮತಿಸಿದರು. ಜಲಾಲ್‌ಸಾಬ್ ಕಳಬೇಡ ಕೊಲಬೇಡ... ಎನ್ನುವ ವಚನದೊಂದಿಗೆ ಪುರಾಣ ಹೇಳಲು ಅಣಿಯಾಗುತ್ತಿದ್ದಂತೆ ನೆರೆದ ಎಲ್ಲರೂ ಶಾಂತ ಚಿತ್ತರಾದರು ಎಂದು ಡ್ರೈವರ್‌, ಇದು ಜಲಾಲ್‌ಸಾಬರ ವೃತ್ತಾಂತ” ಎಂದು ಮಾತು ಮುಗಿಸಿದ.

“ಅಲ್ಲಪಾ ನೀನ ಸೌಹಾರ್ದತೆ ಎಲ್ಲಿದೆ ಎಂದು ಕೇಳಿದವ, ಅದು ಜೀವಂತ ಐತಿ ಅನ್ನೂದ ಹೇಳಿದೆಲ್ಲ” ಎಂದು ಪ್ರೊಫೆಸರ್‌ ಡ್ರೈವರ್‌ಗೆ ಭೇಸ್ ಒಳ್ಳೆಯ ವಿಷಯ ತಿಳಿಸಿದಿ.
“ನಡೀರಿ ಸರ್, ಕತ್ತಲಾಗ್ತಾ ಬಂತು” ಎಂದು ಗೆಳೆಯರು ಹೇಳಿದರು.
“ನಡೀಪಾ ಎಲ್ಲೂ ನಿಲ್ಲಿಸಬೇಡ” ಎನ್ನುತ್ತ ಕಾರು ಹತ್ತಿದರು.
ಡ್ರೈವರ್‌ ಸರ್ವಿಸ್ ರಸ್ತೆಯಿಂದ ಮುಖ್ಯರಸ್ತೆಗೆ ಕಾರು ರಭಸದಿಂದ ಹತ್ತಿಸಿದ.
ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬ ಗಾದೆಯಂತೆ, ಚೆನ್ನೂರ ಜಲಾಲ್‌ಸಾಬ್‌ನ ಕುರಿತು ಮಾತಾಡುವ ಮಾತುಗಳು ನಿಂತರೂ ಫ್ರೊಫೆಸರ್ ಮನಸ್ಸಲ್ಲಿ ಸಾಹೌರ್ದತೆಯ ತಾಕಲಾಟ ನಡದೇ ಇತ್ತು... ಬ್ರಾಹ್ಮಣ್ಯ, ಜಾತಿ ಹೆಸರಲ್ಲಿ ನಡಿಯುತ್ತಿದ್ದ ಮಡಿವಂತಿಕೆಗಳು ಕಾಡುತ್ತಲೇ ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT