ಮೊಬೈಲ್ ಫೋನ್ ರಿಂಗಣಿಸಿತು. ಕ್ಯಾಂಟೀನ್ನಲ್ಲಿ ಚಹಾ ಕುಡಿಯುತ್ತ ಕುಳಿತ್ತಿದ್ದ ಬಾಳಗೊಂಡ ಜೇಬಿನಿಂದ ಮೊಬೈಲೆತ್ತಿ ನೋಡಿದ. ತನ್ನೂರು ಕಡೆಯಿಂದ ಆತನ ಅಕ್ಕ ಕವಿತಾಳ ಫೋನಿತ್ತು. ಊರಿಂದ ಕೇವಲ ಕಾಲ್ ಅಷ್ಟೇ ಅಲ್ಲ, ಒಂದು ಮೆಸೆಜ್ ಬಂದರೂ ಸಹ ಅದು ಬಹಳಷ್ಟು ಸಾರೆ ಸುಖ ನೀಡುವ ಸಂದೇಶವಾಗಿರುವುದಿಲ್ಲ. ಇದು ಬಾಳಗೊಂಡನಿಗೆ ಚೆನ್ನಾಗಿ ಖಾತ್ರಿಯಿತ್ತು. ಏನಾದರು ಸಮಸ್ಯೆಗಳೇ ಇರುತ್ತವೆ ಹೊರತು ಸಂತಸ ನೀಡುವ ವಿಚಾರಗಳಿರುವುದಿಲ್ಲ. ಹೀಗಾಗಿ ವಿಷಯ ಏನೆಂದು ತಿಳಿಯಲು ಮೊಬೈಲ್ ಗೆ ಕಿವಿ ಒಡ್ಡಿದ. ಇದುವರೆಗೆ ಎದುರಿಸಿದ ಎಂಥೆಂಥ ಪ್ರಸಂಗಗಳಿಗಿಂತ ಇದು ಬೇರೇನೂ ಆಗಿರಲಿಕ್ಕಿಲ್ಲ ಅಂದುಕೊಂಡ. ರಿಂಗಣಿಸುವ ದನಿ ಅಡಗಿಸಿದ. ಕಾಲ್ ಸ್ವೀಕರಿಸಿದ. ಆಕಡೆಯಿಂದ ಆತನ ಅಕ್ಕ ಕವಿತಾ ಮಾತಾಡಿದಳು,

“ನಿನಗ ಬಂದಾಗ ಬಡಕೊಂಡ ಹೇಳಿನಿ... ನಾಕ ಮಂದೀನ ಕರಕೊಂಡ ಹೊರಗಿಟ್ಟಿದ್ದ ಹಳೇ ಬಾಗಿಲಾ ಮತ್ತ ಮಂಚ ಮನಿ ಒಳಗಿಡು ಅಂತ… ಕಟಗಿದ್ದು ಅವು, ಮಳೀಗಿ ಹಾಳಾಗತೈತಿ ಅಂತನೂ ಅಂದ್ನಿ… ನೀ ಯಾನ ನನ್ನ ಮಾತ ಕಿವಿ ಮ್ಯಾಲ ಹಾಕೊಳ್ಳಲಿಲ್ಲ. ಮನಿಗಿ ಕೀಲಿ ಬ್ಯಾರೆ ಬಿದ್ದೇತಿ... ಈಗ ನೋಡ! ನಿನ್ನ ತಮ್ಮ ಅದನ್ನು ಕಸಾ ಒಯ್ಯಾವರ ಪಂಚಾಯತಿ ಗಾಡ್ಯಾಗ ಹಾಕಿ ಕಳಿಸಿಸ್ಯಾನ... ಇನ್ನ ಯಾನ ಮಾಡತಿ ನೋಡ...” ಅಂತ ಹೇಳಿದಳು. ಮಂಚವನ್ನು ತಾನು ಇಟ್ಟುಕೊಳ್ಳುವ ವಿಚಾರ ಎಲ್ಲರಿಗೂ ತಿಳಿದದ್ದೆ. ಆದರೂ ಅಪ್ಪಾಸಾಬ ಹೀಗೆ ವರ್ತಿಸಿದನಲ್ಲ! ಎಂದು ಬಾಳಗೊಂಡ ಹಳಹಳಿಸಿದ.

“ಅಂವಗ ನನ್ನ ಮತ್ತ ನನ್ನ ಮನಿ ಉಸಾಬರಿಗಿ ಬರಬ್ಯಾಡ ಅಂತ ಹೇಳೇನಿ... ಅದೆಂಗ ಅಂವ ತಗೊಂಡ ಹೋಗ್ ಅಂದ...” ವಿಚಾರಿಸಿದ. ಬಾಳಗೊಂಡ ಅಸಹನೆ ಹೊಂದಿದ್ದ. “ನೀನ ಬಂದ ಕೇಳ...” ಅಂತಂದು ಕಾಲ್ ಕಟ್ ಮಾಡಿದಳು. ಅವಳು ಹೇಳುವುದರಲ್ಲಿಯೂ ಸತ್ಯಾಂಶವಿದೆ. ಇದು ತನ್ನದೇ ತಪ್ಪು. ಊರೊಳಗಿನ ಹೊಲ ಮನೆಯ ಕಡೆಗೆ ತಾನು ಎಂದೂ ಗಮನ ನೀಡುವುದಿಲ್ಲ. ಇದರ ಪಶ್ಚಾತ್ತಾಪ ಆತ ಮಾಡಿಕೊಳ್ಳಬೇಕಿತ್ತು. ಮಾಡಿಕೊಂಡ. ಆತನು ನೌಕರಿ ಮಾಡುವ ಕಾರ್ಯ ಬಾಹುಳ್ಯದ ಒತ್ತಡವೂ ಹಾಗೆಯೆ ಇದೆ. ಏನು ಮಾಡುವುದು? ತನ್ನ ಅಣ್ಣ ತಮ್ಮಂದಿರು ಇಷ್ಟೊಂದು ಅಸಂವೇದನಶೀಲರೂ ಅಂತ ಮನಸ್ಸಿನಲ್ಲಿಯೇ ಅವರನ್ನು ಹಳಿದ. ಅವರಿಗೇನೋ ಈರ್ಷೆಯೋ, ಊರಲ್ಲಿಯ ವಿರೋಧಿಗಳ ಕಲಿಕೆಯ ಮಾತುಗಳ ಫಲವೋ- ಆತನಿಗೆ ಅರ್ಥವಾಗುತ್ತಿಲ್ಲ. ‘ಆ ಮಂಚವನ್ನ ಇಟಕೊಳ್ಳಾಂವ ಅದೀನಿ. ಅದ ನಮ್ಮ ಹೀರ ಹಿರೇರ ಬಳುವಳಿ ಅದʼ ಅಂತ ಹೇಳಿದ್ದರೂ ಅದನ್ನು ಹೀಗೆ ವಿಲೆವಾರಿ ಮಾಡಿದ್ದಾರೆ. ಇದರ ಹಿಂದೆ ಯಾರ ಯಾರ ಕೈವಾಡಗಳಿವೆಯೋ? ಮನುಷ್ಯನ ಅಸೂಕ್ಷ್ಮತೆ ಮತ್ತು ಈರ್ಷೆಯ ಭಾವನೆಗಳಿಗೆ ಔಷಧವಿಲ್ಲ. ಮರುದಿನ ರಜಾ ಹಾಕಿ ಊರಿಗೆ ಹೋಗುವುದೆಂದು ಮತ್ತು ಮಂಚವನ್ನು ಶೋಧಿಸುವುದೆಂದು ನಿಶ್ಚಯಿಸಿದ. ಬಹುತೇಕ ಸಫಾಯಿ ಕಾಮಗಾರರು ಇನ್ನೂ ಅದನ್ನು ಒಯ್ದು ನಾಶ ಮಾಡಿರಲಿಕ್ಕಿಲ್ಲ ಎಂದೂ ಆಶಾಭಾವನೆ ವ್ಯಕ್ತಪಡಿಸಿದ. ಚಹಾದ ದುಡ್ಡು ಕೊಟ್ಟು ಆಫೀಸ್ ಕಡೆಗೆ ದಪ ದಪ ಹೆಜ್ಜೆ ಹಾಕತೊಡಗಿದ.

ಬಸ್ಸು ನಿಧಾನ ಗತಿಯಲ್ಲಿ ಹೊರಟಿತ್ತು. ಆತ ಕಿಟಕಿಗೆ ಆತು ಕುಳಿತ್ತಿದ್ದ. ಆತನಲ್ಲಿ ಕಳಕೊಂಡ ಮಂಚದ್ದೇ ಚಿಂತೆ ಮತ್ತು ಯೋಚನೆಗಳು. ಬಾಗಿಲು ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬಾಗಿಲು ಹೋಗಲಿ. ಮಂಚವನ್ನು ಬಿಟ್ಟು ಕೊಡಲಾರದವನಾಗಿದ್ದ. ಅದನ್ನು ಸಫಾಯಿ ಕಾರ್ಮಿಕರು ಒಯ್ದು ಒಲೆಗೆ ಹಾಕಲು ಒಡೆದು ಸೌದೆ ಮಾಡಿರಬಹುದೆ? ಅಥವಾ ಅವರು ಯಾರಾದರೂ ತಾವು ಮನೆಯಲ್ಲಿ ಬಳಸಲು ತೆಗೆದುಕೊಂಡು ಹೋಗಿರಬಹುದೆ? ಅವರೆಲ್ಲಿ ಹೋಗಿ ಅದನ್ನು ಡಂಪ್ ಮಾಡಿರುತ್ತಾರೋ? ಅಲ್ಲಿಂದ ವಾಪಸ್ಸು ತಂದು ಮನೆಯಲ್ಲಿ ಇಡುವುದು ಎಂತಲೂ ಯೋಚಿಸಿದ. ಆತನಿಗೆ ಮಂಚದ ಸಂಗಡ ಒಂದು ಭಾವನಾತ್ಮಕ ಸಂಬಂಧ ಏರ್ಪಟ್ಟಿತ್ತು. ಮಂಚವು ಬಾಳಗೊಂಡನ ಅಜ್ಜ ದಾದಗೊಂಡನ ಕಾಲದ್ದು. ಆಕಾರದಲ್ಲಿ ದೊಡ್ಡದು. ಯಾವ ಜಾತಿಯ ಮರದ ಕಟ್ಟಿಗೆಯನ್ನು ತೆಗೆದುಕೊಂಡು ಮಂಚ ಮಾಡಿರುವರೋ ಎಂಬುದು ಗೊತ್ತಿಲ್ಲ. ಮುಂಚೆ ಗಟ್ಟಿಮುಟ್ಟು ಆಗಿತ್ತು. ಆದರೆ ಇತ್ತೀಚೆಗೆ ಸಡಿಲುಗೊಂಡಿತ್ತು. ಮುದುಕರ ಹಲ್ಲುಗಳು ಅಲ್ಲಾಡಿದ ಹಾಗೆ ಮಂಚದ ಕಾಲುಗಳು ಲುಚು ಲುಚು ಅನ್ನುತ್ತಿದ್ದವು. ಅದನ್ನು ತಲೆತಲಾಂತರದಿಂದ ಬಳಸಿರುವುದರಿಂದ ನಡು ನಡುವೆ ದುರಸ್ತಿ ಆಗದೇ ಇರುವುದರಿಂದ ಅವು ಸಡಿಲುಗೊಂಡಿದ್ದವು.

ಬಸ್ಸಿನ ಸದ್ದು ಜೋಗುಳ ಹಾಡಿನಂತೆ ಅನ್ನಿಸಿ ಬಾಳಗೊಂಡನಿಗೆ ಜೊಂಪು ಹತ್ತಿತು. ನಿದ್ದೆಯಲ್ಲಿ ಮಂಚದ್ದೇ ಚಿಂತೆ ಕಾಡಿ ಕಾಡಿ ಕನಸೊಂದು ಬಿತ್ತು. ಕಸ ತುಂಬಿಕೊಂಡು ಹೋಗುವ ವಾಹನದಲ್ಲಿ ಮಂಚವನ್ನು ಒಯ್ದ ಸಫಾಯಿ ಕಾರ್ಮಿಕರು ಅದನ್ನು ಒಂದು ಬಯಲಿನಲ್ಲಿ ಇಳಿಸಿದರು. ಕೆಲವರು ಹರಿತ ಗರಗಸ, ಕೊಡಲಿ- ಇಂಥ ಶಸ್ತ್ರಗಳನ್ನು ತೆಗೆದುಕೊಂಡು ಈ ಮೊದಲೇ ಆಗಮಿಸಿದ್ದರು. ಹಾಗೆ ಬಂದವರು ಒಮ್ಮೆಲೆ ಮಂಚ ಮತ್ತು ಅದರ ಕಾಲುಗಳನ್ನು ಕೊಚ್ಚಿ ಕೊಚ್ಚಿ ತುಂಡು ಮಾಡಲು, ಒಡೆಯಲು ತೊಡಗಿದರು. ಮಂಚ ಮತ್ತು ಅದರ ಕಾಲುಗಳು ಬಾಳಗೊಂಡನ ಕೈ ಕಾಲು ಹಿಡಿದುಕೊಂಡವು. ಗಳಗಳನೇ ಕಣ್ಣೀರು ಹಾಕಿದವು. ರೋದಿಸುತ್ತ ಬೇಡಿಕೊಳ್ಳತೊಡಗಿದವು. ʼಅಣ್ಣಾರೀ ನಿಮ್ಮ ಹೀರ ಹರ್ಯಾರಿಗಿ ನಾವು ಸುಖ ಪಡೆಯಲು ನೆರವು ಆಗೇವಿ… ಆವರ ಭಾರ ಹೊತ್ತೀವಿ… ಅವರ ಸುಖದ ನಿದ್ದಿಗಳಿಗಿ ತುಟಿ ಪಿಟಕ್ಕನ್ನದೇ ಮೌನ ಆಗೇವಿ… ಅವರ ಮಕ್ಕಳ ಹೇಲುಚ್ಚೆಗಳನ್ನು ಮೈಮ್ಯಾಲಿ ಸುರುವಿಕೊಂಡೇವಿ... ನಿಮ್ಮನ್ನು ಸಹ ಸುಖದಿಂದ ನೋಡಿಕೊಂಡೀವಿ... ನಿಮ್ಮ ತಾಯಿಯವರಿಗೆ ಸುಖದ ನಿದ್ದೆ ಬರೊ ಹಂಗ ಮಾಡಿದೀವಿ… ಅವರು ಅಂತಿಮ ಉಸಿರು ಚೆಲ್ಲುವ ತನಕ ತಾಳ್ಮೆಯಿಂದ ಅವರನ್ನು ಜೋಪಾನ ಮಾಡೇವಿ... ನಮ್ಮನ್ನ ಹಿಂಗ ಕಡೆದು ಒಡೆದು ಚೆಲ್ಲವರನ್ನು ದಯವಿಟ್ಟು ತಡೀರಿ… ನಿಮ್ಮ ಕೈ ಕಾಲಿಗಿ ಬೀಳತೇವಿ…ʼ ಅಂತ ಮಂಚ ಮತ್ತು ಕಾಲುಗಳು ಬಾಳಗೊಂಡನ ಕಾಲು ಹಿಡಿದು ದಯನೀಯವಾಗಿ ಬೇಡಿಕೊಂಡವು. ಆ ಕ್ಷಣದ ಕನಸಿನ ತೀವ್ರ ಪರಿಣಾಮ. ಗಾಬರಿಯಾಗಿ ಜೋಂಪಿನಿಂದ ಬಾಳಗೊಂಡ ಎಕದಂ ಎಚ್ಚರಗೊಂಡ. ಭಯಾನಕ ಕನಸು. ಅದು ವಾಸ್ತವ ಅನ್ನಿಸುವಷ್ಟು ಭಯಾನಕವಾಗಿತ್ತು. ಹಾಗೆ ಆಗದಿರಲೆಂದು ದೈವಕ್ಕೆ ಪ್ರಾರ್ಥಿಸಿದ.

ಮಂಚದ ಬಡಗಿತನದ ಕುಸುರಿ ಕಲೆ ವಿಭಿನ್ನವಾಗಿತ್ತು. ಮಂಚದ ನಾಲ್ಕೂ ಕಾಲುಗಳು ಐಹೊಳೆ, ಪಟ್ಟದಕಲ್ಲಿನ ದೇಗುಲದ ಕಂಬದ ಶಿಲ್ಪಕಲೆಯನ್ನು ಜ್ಞಾಪಿಸುವಂತಿದ್ದವು. ಆ ಉಬ್ಬು ತಗ್ಗುಗಳ ಸೂಕ್ಷ್ಮ ಕುಶಲ ಕಲೆ ಅಪ್ಯಾಯಮಾನ. ಮಂಚದ ಅಂಚಿನ ನಾಲ್ಕು ಕಡೆಗೆ ವಿನ್ಯಾಸದ ಪಟ್ಟಿಯಿತ್ತು. ನಾಲ್ಕು ತುದಿಗಳಿಗೆ ಹಿತ್ತಾಳೆಯ ಬಲಿಷ್ಟ ಬಳೆಗಳಿದ್ದವು. ಅವು ಮಂಚವನ್ನು ತೂಗಲೂ ಉಪಯೋಗಿಸುವುದರ ಸಂಕೇತವಾಗಿದ್ದವು. ಆ ಮಂಚದ ಮೇಲೆ ಮನೆತನದ ಹಿರಿಯ ಜೋಡಿಗಳ ದಾಂಪತ್ಯಗಳು ಸಂಸಾರ ಹೂಡಿವೆ. ಅದರ ಮೇಲೆ ಅದೆಷ್ಟು ಬಾಣಂತಿತನಗಳು ನಡೆದಿವೆ. ಅದೆಷ್ಟು ಹೆಸರುಗಳನ್ನಿಟ್ಟು ಗುಗ್ಗರಿ ತಿಂದಿದ್ದಾರೆ. ಬಾಳಗೊಂಡನ ಅಜ್ಜ ದಾದಗೊಂಡನ ಸಂಸಾರ. ಅವನ ತಮ್ಮ ಸತ್ಯಗೊಂಡನದ್ದು. ಅವರ ನಂತರ ತನ್ನ ತಂದೆ ಶಿವಗೊಂಡ ಮತ್ತು ಚಿಕ್ಕಪ್ಪ ದಾಮು ಅವರದ್ದು. ಹೊಲದಲ್ಲಿಯ ಮನೆಯಲ್ಲಿ ವಾಸವಿದ್ದ ದಾಮು ಅವರ ಕುಟುಂಬ ಪ್ಲೇಗ್ನಲ್ಲಿ ನಿರ್ನಾಮವಾಯಿತು. ಆಸ್ತಿ ಎಲ್ಲ ಶಿವಗೊಂಡನದ್ದಾಯಿತು. ಮೂರು ಊರಿನ ಉತ್ಪನ್ನ. ವತನದಾರರೆಂಬ ಊರವರು ಉಬ್ಬಿಸುವ ನುಡಿ. ಇರಲಿ. ದೈವೆಚ್ಛೆ ಎದುರು ಯಾರದ್ದು ಏನು ನಡೆಯುತ್ತದೆ. ಶಿವಗೊಂಡನ ಮಕ್ಕಳು ಇದೇ ಮಂಚದ ಮೇಲೆ ಆಟವಾಡಿ, ಮಲಗಿ, ಅತ್ತು, ನಕ್ಕು, ಉಂಡುಟ್ಟು, ಹೇಲುಚ್ಚೆ ಮಾಡಿ ಬೆಳೆದವರು. ಹೀಗೆಲ್ಲ ಆ ನಿರ್ಜೀವ ವಸ್ತುವಿನ ಸಂಗಡ ಒಂದು ಆತ್ಮಿಕ ಭಾವ ಸಂಬಂಧ ಬೆಳೆದಿದೆ ಎಂಬುದರ ಪ್ರಜ್ಞೆ ಇವರಿಗೆ ಇರಬೇಡವೇ? ಮಂಚದ ಕುರಿತು ಒಂದು ಸೂಕ್ಷ್ಮ ಜೀವಾಳಿಕೆ ಸಂಬಂಧ ಇರುವುದು ಬೇಡವೇ? ಹೀಗೆಲ್ಲ ತಲೆಯೊಳಗೆ ತಲೆಬುಡವಿಲ್ಲದ ವಿಚಾರಗಳು ಹರಿದಾಡುತ್ತಿದ್ದವು. ಬಸ್ಸು ದುಡು ದುಡು ಹೊರಟಿತ್ತು. ಅದರ ಸಂಗಡ ಬಾಳಗೊಂಡನ ಮಂಚದ ಯೋಚನೆಗಳು ಸಾಗಿದ್ದವು.

ಬಾಳಗೊಂಡ ಚಿಕ್ಕಂದಿನಲ್ಲಿ ಗುಂಡ ಗುಂಡಗಿದ್ದ. ಕಾಲಲ್ಲಿಯ ಬೆಳ್ಳಿ ಕಡಗಗಳು ಕುಡು ಕುಡು ಸದ್ದು ಮಾಡುತ್ತಿದ್ದವು. ಕೈಯಲ್ಲೂ ಬೆಳ್ಳಿ ಕಡಗಗಳು. ಆತನ ಅಮ್ಮ ಪಾರ್ವತಿ ಪೇಶ್ವಾಯಿ ಶೈಲಿಯಲ್ಲಿ ಕಚ್ಚೆ ಸೀರೆ ಉಟ್ಟುಕೊಂಡು ಕಂಬಕ್ಕೆ ಹಗ್ಗ ಹಾಕಿ, ದೊಡ್ಡ ಪಾತ್ರೆಯಲ್ಲಿ ಕಡೆಗೋಲಿನಿಂದ ಮೊಸರು ಕಡೆಯುತ್ತಿದ್ದರೆ; ಮಜ್ಜಿಗೆ ಬೆಣ್ಣೆ ಬಾಯಿ ಮುಸುರೆ ಮಾಡಿಕೊಳ್ಳಲು ಬಾಳಗೊಂಡ ಆತುರನಾಗಿರುತ್ತಿದ್ದ. ಕಡ ಕಡ ಕಾಲು ಕಡಗುಗಳ ಸದ್ದು ಮಾಡುತ್ತ ಲುಡು ಲುಡು ಓಡಿ ಹೋಗುತ್ತಿದ್ದ. ತಾಜಾ ಉಂಡೆ ಮಾಡಿ ಕೊಟ್ಟ ಬೆಣ್ಣೆ ತಿನ್ನುತ್ತಿದ್ದ. ಒಮ್ಮೊಮ್ಮೆ ಜಾಸ್ತಿ ತುಂಟಾಟ ಮಾಡಿ ಪಾರ್ವತಿಯ ಕೆಲಸಕ್ಕೆ ತೊಂದರೆ ಕೊಡುತ್ತಿದ್ದರೆ “ಮಂಚದ ಕಾಲಿಗಿ ಕಟ್ಟಿ ಬಿಡತೀನಿ ನೋಡ...” ಅಂತ ಹುಸಿ ಬೆದರಿಕೆ ಹಾಕುತ್ತಿದ್ದಳು.

ಕಂಡಕ್ಟರ್, “ಬೆಡಗಿನಹಳ್ಳಿ ನೋಡ್ರಿ... ಯಾರಾದ್ರ ಇದ್ದರ ಇಳಿರಿ...” ಅಂದಾಗ ಬಾಳಗೊಂಡ ವಾಸ್ತವಕ್ಕೆ ಬಂದ. ತನ್ನ ಪುಟ್ಟ ಬ್ಯಾಗ್ನೊಂದಿಗೆ ಇಳಿದ. ಬಸ್ ನಿಲ್ದಾಣಂದರೇನೆ ಊರು ಜನರ ಬಾಯಿಯೊಳಗಿನ ಅಗಸಿ. ಈ ಅಗಸಿಯಿಂದಲೇ ಊರಿನ ದಶ ದಿಕ್ಕುಗಳಿಗೆ ಪ್ರವೇಶ. ಊರು ಕಾಲದ ತೆಕ್ಕೆಯೊಳಗೆ ಸಿಕ್ಕು ಬದಲಾಗಿತ್ತು. ಹೊಸ ತಲೆಮಾರಿನ ಮರಿ ಪುಢಾರಿಗಳು ಹುಟ್ಟಿಕೊಂಡಿದ್ದರು ಎನ್ನಲು ಸಾಕ್ಷಿಯೆಂಬಂತೆ ಅವರ ಮಾರಿ ಮಕ ಹೊಂದಿದ ದೊಡ್ಡ ಫ್ಲೆಕ್ಸ್ಗಳು ಅಗಸಿಯ ಬೇರೆ ಬೇರೆ ದಿಕ್ಕುಗಳಿಗೆ ಠಳಾಯಿಸಿದ್ದವು. ಹೊಳೆಸಾಲ ಜಮೀನು ಮತ್ತು ದೊಡ್ಡ ನದಿ ತಟದಾಚೆಗೂ ನೀರು ಹರಿದು ಹೋಗುತ್ತಿರುವುದರಿಂದ ಸಾಕಷ್ಟು ಭೌತಿಕ ಪ್ರಗತಿಯಾಗಿದೆಯೆ ಹೊರತು ಬೌದ್ಧಿಕವಾಗಿ ಆಗಿಲ್ಲ ಅನ್ನಿಸಿತು. ಧರ್ಮಾಂಧತೆ, ಮೌಢ್ಯ ತಾಂಡವ ಆಡುತ್ತಿದೆ. ಹೊಸ ಅಂಗಡಿ ಮುಗ್ಗಟ್ಟುಗಳು, ಆಸ್ಪತ್ರೆಗಳು ತಲೆಯೆತ್ತಿವೆ. ಯಾವ ಊರು ಶಹರುಗಳಲ್ಲಿ ಆಸ್ಪತ್ರೆಗಳು ಹೆಚ್ಚುತ್ತವೆಯೋ ಅಲ್ಲಿಯ ಜನರು ಆರೋಗ್ಯವಾಗಿಲ್ಲ ಎಂದೇ ಅರ್ಥ! ಹಾಗಂತ ಆಸ್ಪತ್ರೆ ವಿರೋಧವೆಂತಲೂ ಅಲ್ಲ. ಮುವತ್ತು ಸಾವಿರ ಆಚೀಚೆ ಜನಸಂಖ್ಯೆ ಇರುವ ಈ ಊರಲ್ಲಿ ನಾಲ್ಕು ಹೈಟೆಕ್ ಆಸ್ಪತ್ರೆಗಳು! ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನವು ವೈನ್ ಶಾಪ್ಗಳು, ಬಾರ್ ಅಂಡ್ ರೆಸ್ಟಾರೆಂಟ್ಗಳು. ಏನನ್ನು ಹೇಳುತ್ತವೆ? ಊರಿನ ಕಲ್ಲು ಮಣ್ಣಿನ ರಸ್ತೆಗಳ ಓಣಿಗಳು ಸಿಮೆಂಟ್ ರಸ್ತೆಗಳಾಗಿ ಮಾರ್ಪಟ್ಟಿವೆ. ಒಳ್ಳೆಯದು. ರಾಜಕಾರಣಿಗಳ ಬ್ಲಾಕ್ಮನಿ ರಕ್ಷಿಸಿ ಇಡಲು ಅನುಕೂಲವಾಗುವಂತೆ ಆಯಾ ಜಾತಿ, ಕೋಮಿನವರ ಕೋ ಆಪ್ರೇಟಿವ್ ಸೊಸೈಟಿಗಳು ತಲೆಯೆತ್ತಿವೆ. ಜನರು ಇದನ್ನೆಲ್ಲ ಪ್ರಗತಿಯ ಸಂಕೇತವೆಂದು ಆ ಯಾದಿಯಲ್ಲಿ ಕಣ್ತುಂಬಿಕೊಂಡಿದ್ದಾರೆ. ಆದರೆ ಜನರ ಬುದ್ಧಿಮತ್ತೆಯದ್ದೇನು? ಮೂಲಭೂತವಾದ ಮತ್ತು ದೌರ್ಜನ್ಯಗಳು ಹೆಚ್ಚಿವೆ. ಬಹು ಮಾಧ್ಯಮಗಳಲ್ಲಿ ಹರಿದಾಡುವ ಬಾತಮಿಗಳಿವು. ಹೀಗೆ ಮೆಲುಕುಗಳು ಬಾಳಗೊಂಡನ ರಸ್ತೆಯ ಸಮಯವನ್ನು ಕಳೆಯಲು ನೆರವಾದವು.

ಅಕ್ಕ ಕವಿತಾಳ ಮನೆಗೆ ಆಗಮಿಸಿದ.

“ಕೈ ಕಾಲ ಮ್ಯಾಲ ನೀರ ಹನಿಸಿಕೋ...” ಅಂತಂದು ಟವೆಲ್ ನೀಡಿದಳು. “ಚಾ ಮಾಡಲೇನು? ಯಾನ ಉಂಡ ಬಿಡತಿ!” ಕೇಳಿ ಅಡುಗೆ ಮನೆ ಕಡೆಗೆ ನಡೆದಳು.
“ಭರ್ರನೆ ಚಾ ಮಾಡು... ಗುಟುಕರಿಸಿ ಪೈಲೇ ಆ ಮಂಚದು ಯಾನಾತು ನೋಡಿ ಬರತೀನಿ...” ಅಂದ. ಕೊಂಚ ತಡೆದು “ಮಾಮಾ ಎಲ್ಲಿ ಹೋಗ್ಯಾನ?” ಅಂತ ಕೇಳಿದ. ಕವಿತಾ ಚಹಾಕ್ಕೆ ಎಸರಿಟ್ಟಳು. ಒಗ್ಗರಣೆ ಹಚ್ಚಿದ ಚುರಮುರಿಯ ಭಡಂಗ, ಜೊತೆಗೆ ಉಳ್ಳಾಗಡ್ಡಿ ಹೆಚ್ಚಿ ತಿನ್ನಲು ಆತನ ಮುಂದಿಟ್ಟಳು.

“ಅವರು ಕಬ್ಬಿನ ಬಿಲ್ದು ಯಾನೋ ದಗದು ಐತಿ ಅಂತ ಈಚಲಕರಂಜಿಗಿ ಹೋಗ್ಯಾರ…”

“ನಿನ್ನ ಗಂಡ ಬಂದಾಗ ಮನ್ಯಾಗ ಇರೋದಿಲ್ಲ ನೋಡ... ಒಟ್ಟ ಎಲ್ಲೋ ಹೋಗಿರತಾನ... ಕಾಲೊಳಗ ಭಿಂಗರಿ ಐತಿ ಕಾಣತದ...” ಅಂತಂದು ನಕ್ಕ.

“ಅವರು ರಿಟೈರ್ ಆದ ಮ್ಯಾಲಿಂದ ಒಂದ ಕಡಿ ಎಲ್ಲಿ ಕುಂದರತಾರು? ಯಾನೋ ಸಾಮಾಜಿಕ, ರಾಜಕಾರಣ ಮಂದಿ ಸಂಗಾಟ ತಿರಗ್ಯಾಡತಿರತಾರ...” ಚಹಾ ಸೋಸಿ ಕೊಟ್ಟಳು.

ʼಚಹಾದ ಜೋಡಿ ಚೂಡಾದಂಗʼ ಎಂಬ ನುಡಿಗಟ್ಟಿನಂತೆ ಚಹಾ ಮತ್ತು ಚುರಮುರಿ ಚೂಡಾ ಎಂಬೋ ಭಡಂಗ ಸವಿಯುತ್ತ ಅದರ ಸಂಗಡ ಚಾ ಕುಡಿಯುತ್ತ, ಆ ಆಸ್ವಾದವನ್ನು ಅನುಭವಿಸುತ್ತ, ಆಕೆಗೆ,

“ಈ ಮಂಚದ ಉಸಾಬರಿಗಿ ಹೋಗಾಕ ಆ ಅಪ್ಪಾಸಾಬಗ ಯಾನ ಕಾರಣ ಇತ್ತು? ನಾ ಹೇಳೇನಿ, ಅವ್ವ ತೀರಿಕೊಂಡಾಗ ತಾಕೀತ ಮಾಡೇನಿ... ಆದರೂ ಅವುಗಳನ್ನ ಕಸಾ ತಗೊಂಡ ಹೋಗೋರಿಗಿ ಕೊಟ್ಟ ಬಿಟ್ಟ… ಅವನ ಸಂಗಾಟ ಬರೇ ಝಡತಿ ಕೋಡೋದ ಆಗೇತಿ... ಮನ್ಯಾಗಿದ್ದರ ಹೋಗಿ ಝಾಡಿಸಿ ಕೇಳೇ ಬಿಡತೇನಿ…” ಬಾಳಗೊಂಡ ಕೊಂಚ ಧುಸುಮುಸುಗುಡುತ್ತ ಅಂದ.

“ಹೋಗಿ ಹೋಗಿ ಅವನ ಬಾಯಿಗಿ ಎಲ್ಲಿ ಹತ್ತತಿ? ಬಾಯಿಗಿ ಬಂದಂಗ ಮಾತಾಡತಾನ... ಸಣ್ಣಾವರು ದೊಡ್ಡವರು ನೋಡಾಂಗಿಲ್ಲ… ಹರಕ ಬಾಯಿ... ಜಗಳಕ್ಕ ಮೂಲ ಆಕ್ಕೇತಿ... ಇಲ್ಲಿ ಇವರು ಸಫಾಯಿ ಕಾಮಗಾರರ ನಂಬರ್ ಕೊಟ್ಟಾರ... ಫೋನ್ ಹಚ್ಚಿ ನೋಡು...” ಅಂದಳು. ಅವಳು ಹೇಳುವುದರಲ್ಲಿ ಸತ್ಯಾಂಶವಿತ್ತು. ಬಾಳಗೊಂಡನ ಬೆನ್ನಿಗೆ ಹುಟ್ಟಿದ ಅಪ್ಪಾಸಾಬ ಈಗೀಗ ಹೀಗೆ ಬದಲಾಗಿದ್ದಾನೆ. ತುಂಬಾ ಒರಟಾಗಿದ್ದಾನೆ. ಎಂದು ನಂಬುವುದೇ ಕಷ್ಟ. ಆತ ಮೊದಲು ಹೀಗಿರಲಿಲ್ಲ. ಅಪ್ಪಾಸಾಬನಿಗೆ ಬಾಳಗೊಂಡ ತನ್ನ ಅಣ್ಣನೆಂಬುದರ ಬಗ್ಗೆ ಮಮತೆಯಿತ್ತು. ತಮ್ಮ ಮನೆತನದಲ್ಲಿ ಯಾರದ್ದೇ ವಶೀಲಿಯಿಲ್ಲದೆ ಸರಕಾರಿ ನೌಕರಿ ಹಿಡಿದವನೆಂಬ ಆಭಿಮಾನವಿತ್ತು. ಆದರೆ ಕೆಲವು ದಾಯಾದಿಗಳು, ದುರುಳರು ಅವರ ಮನೆತನದ ಬೆಳವಣಿಗೆಯನ್ನು ಸಹಿಸಲಾಗದವರು ಆತನ ಕಿವಿ ಊದಿದರು. ಮೊದಲೇ ಹಿತ್ತಾಳೆ ಕಿವಿ ಉಳ್ಳವ. ಆತನ ತಿಳುವಳಿಕೆ ಅಲ್ಪ ಮತಿಯದ್ದು. ಎದುರಿನವರು ಹಿತಶತ್ರುಗಳು. ಮನಸ್ಸು ಕೆಡಿಸುತ್ತಿರುವರೆಂಬ ಪರಿಜ್ಞಾನವಿಲ್ಲ. ಆ ವಿಚಾರ ಅಪ್ಪಾಸಾಬನಿಗೆ ಅರಿವಿಗೆ ಬಾರದ್ದು. ರಾಜಕೀಯದಲ್ಲಿ ಹೆಸರು ಮಾಡಿದ; ಮುಖ್ಯತಃ ಗುಂಡಾಗಿರಿಯೆ ತನ್ನ ಉಪವೃತ್ತಿಯನ್ನಾಗಿಸಿದ; ಹೀಗೆ ತನ್ನ ಬದುಕಿನ ದಾರಿಯನ್ನು ಸುಗಮ ಮಾಡಿಕೊಂಡ ದಾಗೋಜಿಯ ಬಲಗೈ ಬಂಟನಾಗಿದ್ದ. ದಾಗೋಜಿಯ ಕೃಪೆ ನಿಮ್ಮ ಮೇಲಿದೆ ಅಥವಾ ಅವರ ಸಂಗಡ ಆಪ್ತ ಸಂಬಂಧ ಹೊಂದುವುದು ಎಂಬುದೇ ಸುತ್ತಲಿನ ಪರಿಸರದಲ್ಲಿ ಅದೊಂದು ವಿಸ್ಮಯ! ಅದು ಹೆಮ್ಮೆಯ, ಸಂಭ್ರಮದ, ಪ್ರತಿಷ್ಠೆಯ ಸಂಗತಿಯಾಗಿತ್ತು. ಇವೆಲ್ಲದರ ಮಧ್ಯೆ ಆರ್ಥಿಕ ಹೊಣೆಗಾರಿಕೆಯಿಂದ ಮುಖ ತಿರುವುದಕ್ಕೆ ಅವ್ವನ ವೃದ್ಧಾಪ್ಯದ ರೋಗ ರುಜಿನಗಳು ಕಾರಣವಾದವು. ಆಸ್ಪತ್ರೆಗಳ ಎಡತಾಕುವಿಕೆ ಶುರುವು ಆಗುತ್ತಿದ್ದಂತೆ ಎಲ್ಲವು ತಿರುವು ಮುರುವು ಆದವು. ದೊಡ್ಡವನನ್ನು ಸೇರಿದಂತೆ. ದೊಡ್ಡವ ಅಂದರೆ ಬಾಳಗೊಂಡನ ಅಣ್ಣ. ಅವನೂ ಹಾಗೆಯೆ. ಮುಟ್ಟಿದರೆ ಮುನಿ. ವೈದ್ಯಕೀಯ ವೆಚ್ಚವು ಆರಂಭಗೊಂಡಂತೆ ಜಾಣತನದಿಂದ ಎಲ್ಲರು ದೂರವಾದರು. ʼಅಂವಗ್ಯಾನ ತಗೋ, ದೊಡ್ಡ ಪಗಾರ ಐತಿ... ಮತ್ತ ಟೇಬಲ್ ಕೆಳಗಿಂದಲೂ ಬರತೈತಿ…ʼ ಅಂತಂದು ಕಳಚಿಕೊಂಡರು. ಅಪ್ಪಾಸಾಬ ಖರ್ಚು ವೆಚ್ಚಗಳ ಹೊಣೆಯಿಂದ ತಪ್ಪಿಸಿಕೊಳ್ಳಲು ನಾಟಕವಾಡಲು ತೊಡಗಿದ. ಕಳೆದ ವರ್ಷ ಅಮ್ಮನ ಸಾವಿನ ಬಳಿಕ ಅವನು ಬಾಳಗೊಂಡನಿಂದ ದೂರವಾಗಿ ಸಂಪರ್ಕವನ್ನೂ ತ್ಯಜಿಸಿದ.

ಬಾಳಗೊಂಡ ಆ ಸಫಾಯಿ ಕಾಮಗಾರನ ಫೋನ್ ನಂಬರ್ಗೆ ಕಾಲ್ ಮಾಡಿದ. ಸ್ವಿಚ್ ಆಫ್ ಬರತೊಡಗಿತ್ತು. ಕ್ಷಣ ಹೊತ್ತು ಯೋಚಿಸಿದ. ಆತನ ಕಾಲೇಜು ಮಿತ್ರ ಗೋಪಾಲನಿಗೆ ಕಾಲ್ ಮಾಡಿದ,

“ಎಲ್ಲಿದ್ದಿಯೋ?” ಅಂದ.

“ನೀ ಯಾವಾಗ ಬಂದಿ?”

“ಅದನ್ನೆಲ್ಲ ಆಮ್ಯಾಲ ಹೇಳುತೀನಿ, ನೀ ಎಲ್ಲಿದಿ ಪೈಲೆ ಹೇಳು... ಅಲ್ಲಿಗೇನೆ ಬರತೀನಿ...” ಅಂದ.

ಗೋಪಾಲ-
“ಶುಗರ್ ಫ್ಯಾಕ್ಟರಿ ಹತ್ತಿರ ಇದೇನಿ ಬಾ...” ಅಂತ ಹೇಳಿದ.

“ಇರು ಅಲ್ಲಿಗೇನೆ ಬಂದ್ನಿ...” ಅಂದ ಬಾಳಗೊಂಡ ಕವಿತಾಳ ಗಂಡನ ಮೋಟರ್ ಬೈಕ್ ತಗೊಂಡು ಗೋಪಾಲ ಇರುವಲ್ಲಿಗೆ ಹೊರಟ. ಸ್ವಲ್ಪ ಸಮಯದಲ್ಲಿಯೆ ಫ್ಯಾಕ್ಟರಿ ತಲುಪಿದ. ಇರುವ ವಿಷಯ ತಿಳಿಸಿದ. ಗೋಪಾಲನಿಗೆ ಎಲ್ಲವು ಅರ್ಥವಾಯಿತು. ಆತ ಬಾಳಗೊಂಡನ ಭಾವನೆಗಳನ್ನು ಆಳವಾಗಿ ಬಲ್ಲವ. ಅದಕ್ಕೆ ಗೋಪಾಲ-
“ಅವರು ಕಸವನ್ನು ಈಚಲಕರಂಜಿ ರಸ್ತೆದಾಗಿರೋ ಹಾಳು ಬಾವಿಯೊಳಗ ಒಯ್ದ ಚೆಲ್ಲುತಾರ… ನಾವ ಅಲ್ಲಿಗೆ ಹೋಗಿ ಪೈಲೆ ನೋಡೋಣು... ಅಲ್ಲಿಲ್ಲ ಅಂದರ, ಆಮ್ಯಾಲ ಸಫಾಯಿ ಕಾಮಗಾರ ಗಣಪ್ಯಾ ಅದಾನಲ್ಲ… ಅಂವ ನನಗ ಗುರುತ ಅದಾನ... ಅವನ ಕಡೇ ಹೋಗೋಣ…” ಅಂತ ಹೇಳಿದ.

“ನೀ ಅಂವಗ ಫೋನ್ ಮಾಡಿಲ್ಲ ಹೌಂದಲ್ಲ?” ಎಂದು ಗೋಪಾಲ ಆತ ಗಣಪ್ಯಾನಿಗೆ ಫೋನ್ ಮಾಡಿರಲಿಕ್ಕಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಕೇಳಿದ.

“ಅದು ಅಂವದ ಅಲ್ಲೇಳು” ಅಂದ.

“ಹಂಗಾರ ನಡೀ” ಆತ ಮೋಟರ್ ಬೈಕ್ ಒದ್ದ. ಗೋಪಾಲನನ್ನು ಕೂರಿಸಿಕೊಂಡ. ಇಬ್ಬರೂ ಹೊರಟರು. ದಾರಿಯಲ್ಲಿ ಸಾಗುವಾಗ ಬಾಳಗೊಂಡ ಮಂಚ ಸುರಕ್ಷಿತವಾಗಿರಲಪ್ಪೋ ದೇವರೇ! ಅಂತ ದೇವರಲ್ಲಿ ಹರಕೆ ಹೊತ್ತ. ಅವ್ವ ತೀರಿ ಹೋಗುವ ಮುನ್ನ ಹತ್ತು ವರ್ಷಗಳಷ್ಟು ಸುದೀರ್ಘ ಅವಧಿಯನ್ನು ಅದರ ಮೇಲೆ ಕಳೆದಿದ್ದಾಳೆ. ಅವ್ವನ ಸ್ಮೃತಿಯಾಗಿಯಾದರೂ ಅದು ಉಳಿಯಲಿ ಎಂಬುದು ಬಾಳಗೊಂಡನ ಅದಮ್ಯ ಇಚ್ಛೆಯಾಗಿತ್ತು. ಆದ್ದರಿಂದ ಅದರ ಸಲುವಾಗಿ ಆತ ಚಡಪಡಿಸುತ್ತಿದ್ದ. ಹಾಳುಭಾವಿ ಬಂತು. ಆತನ ಎದೆ ಬಡಿತ ಅಧಿಕವಾಯಿತು. ದುರ್ವಾಸನೆ ಬರುತ್ತಿತ್ತು. ಮೇಲಿನಿಂದಲೇ ನೋಟ ಬೀರಿದರು. ಸೂಕ್ಷ್ಮ ಕಣ್ಣೋಟದಿಂದ ಎಲ್ಲ ಕಡೆ ಹುಡುಕಿದರು. ಮಂಚ ಎಲ್ಲೂ ಕಾಣಲಿಲ್ಲ. ಅದೇನು ಚಿಕ್ಕದ್ದೇ? ಆಟಿಕೆ ಸಾಮಾನೆ? ಅಲ್ಲಿ ಕೇವಲ ವಿವಿಧ ಬಗೆಯ ಕೊಳೆ ಮತ್ತು ಕಸಗಳ ರಾಶಿಯಿತ್ತು. ಮನುಷ್ಯನ ಬದುಕು ಅದೆಷ್ಟು ಕೊಳಕು ಎಂದರಿಯಲು ಇಲ್ಲಿಯ ಕೊಳೆಯ ತರಾವರಿ ಮಾದರಿಗಳೇ ಸಾಕ್ಷಿ! ಎಲ್ಲೂ ಮಂಚದ ಕುರುಹುಗಳು ಮಾತ್ರ ಗೋಚರವಾಗಲಿಲ್ಲ. ಬಾಳಗೊಂಡ ತೀವ್ರ ನಿರಾಶೆಗೊಂಡ.

ಗೋಪಾಲ “ಗಣಪ್ಯಾನ ಕಡೆ ಹೋಗೋಣ ನಡಿ… ಅವನ ಹಂತ್ಯಾಕ ಹೋದರ, ಯಾನಾರ ಸುಳುವು ಸಿಗಬೋದು...” ಅಂದ.

“ಹಂಗ ಆಗಲೆಪ್ಪ… ನಿನ್ನ ಬಾಯೊಳಗ ತುಪ್ಪ ಸಕ್ರಿ ಬೀಳಲಿ…” ಆತ ತನಗೆ ತಾನು ಸಮಾಧಾನ ಮಾಡಿಕೊಂಡ. ಇಬ್ಬರೂ ಮಾದರ ಓಣಿಯತ್ತ ಗಾಡಿ ಓಡಿಸಿದರು. ಇದು ಕೊನೆಯ ಶೋಧ. ಏನಾಗುತ್ತದೆಯೋ ಯಾರಿಗೆ ಗೊತ್ತು! ಕೇವಲ ಹದಿನೈದು ನಿಮಿಷಗಳಲ್ಲಿ ಮಾದರ ಓಣಿ ತಲುಪಿದರು. ಹೋದಾಗ ಗಣಪ್ಯಾ ಹಗ್ಗ ಹೊಸೆಯುತ್ತ ಕುಳಿತ್ತಿದ್ದ. ಗಣಪ್ಯಾನಿಗೆ ಇವರ ಆಗಮನ ಆಕಸ್ಮಿಕವಾಗಿತ್ತು.

“ಯಾನ್ಯಾನ ಗೋಪಾಲಣ್ಣ… ಇತ್ತ ಕಡೀ ಸವಾರಿ!” ಗಣಪ್ಯಾ ಅಂದ.

“ಇವರದು ಗುರುತ ಹತ್ತಿತ್ಯಾನ? ಕೆಳಗಿನಮನಿ ಬಾಳಗೊಂಡ… ಬೆಳಗಾವ್ಯಾಗ ಸಾಹೇಬರ ಅದಾರು...” ಗೋಪಾಲ ಪರಿಚಯಿಸಿದ.

ಎದೆಗೆ ಕೈ ಹಚ್ಚಿ ಗಣಪ್ಯಾ “ನಮಸ್ಕಾರರಿ ಸಾಹೇಬರ” ಅಂದ.

ಮರಳಿ ಬಾಳಗೊಂಡ “ನಮಸ್ಕಾರ” ಹೇಳಿದ.

ಗಣಪ್ಯಾ ಗೋಪಾಲನಿಗೆ-
“ಹ ಹ… ಗುರುತ ಹತ್ತದ್ಯಾನ ಬಂತುರಿ… ಮಾನಮಿ ಹಬ್ಬಕ ಬಂದಿರತಾರಲ್ಲ… ಆಗ ನೋಡಿರತೇನಲ್ಲ! ಹೆಚ್ಚಿಗಿ ಮಾತಾಡಿಲ್ಲ ಅಷ್ಟ!” ಅಂದ. ಮತ್ತು ಹಗ್ಗದ ತಿಡೆ ಬಿಚ್ಚುತ್ತ-
“ಯಾನ ದಗದ ತೆಗೆದಿದೀರಿ?” ವಿಚಾರಿಸಿದ.

ನೇರ ವಿಷಯಕ್ಕೆ ಬಂದ ಗೋಪಾಲ-
“ಕೆಲ ದಿನಗಳ ಹಿಂದ ಇವರ ಮನಿ ಮುಂದಿನದ್ದು ಮಂಚ ಮತ್ತ ಬಾಗಿಲಾ ನಿಮ್ಮ ಕಸದ ಗಾಡ್ಯಾಗ ಒಯ್ದೇರಿ ಅಂತ… ಇವರ ತಮ್ಮ ಅಪ್ಪಾಸಾಬ ಒಯ್ಯಲಿಕ್ಕ ಹೇಳಿದ್ನಂತ... ಅದಕ್ಕ ಅಲ್ಲಿ ಆ ಹಾಳಭಾವ್ಯಾಗನೂ ನೋಡಿ ಬಂದ್ವಿ... ಎಲ್ಲೂ ಅಲ್ಲಿ ಕಾಣಲಿಲ್ಲ... ನಿನಗ ಕೇಳಿದರ ಹಕೀಕತ್ತ ಗೊತ್ತಾಗತೈತಿ ಅಂತ ಇಲ್ಲಿಗಿ ಬಂದ್ವಿ...” ಅಂತಂದ. ಮತ್ತು ಆಸೆಗಣ್ಣಿಂದ ಇಬ್ಬರೂ ಅವನುತ್ತರಕ್ಕೆ ಹಾತೊರೆದು ಕಾಯುತೊಡಗಿದರು. ಅವನು ಸ್ವಲ್ಪ ಹೊತ್ತು ಮೌನವಾಗಿದ್ದ. ಮತ್ತು ಅಂದ,-

“ಅಯ್ಯ... ಮೊನ್ನೆನ ಬರಬಾದ್ಯಾನರಿ ಸಾಹೇಬರ… ನಿನ್ನಿಗಿ ಇಂದಕ ಯಾಡ್ಡ ದಿವಸ ಆತ ನೋಡರಿ… ಅದು ಮಂಚ ಹಂಗ ಗಟ್ಟೇನ ಇತ್ತು... ನಡುವ ಅಲ್ಲಲ್ಲಿ ಫಳಿಗೋಳು ಚೂರು ನಾಶ ಆಗಿದ್ದವು… ಅದರ ಸುತ್ತಲಿರುವ ಚೌಕ ಪಟ್ಟಿ ಮಾತ್ರ ಜಬರದಸ್ತ ಆಗಿತ್ತು... ಕಾಲುಗೋಳು ಛಲೊನ ಇದ್ದವು... ಲುಚು ಲುಚು ಅಲ್ಲಾಡತ್ತಿದ್ದವು… ಅಷ್ಟ… ಅರ್ಧ ಹಾಳ ಆಗೇತಿ… ಅವ್ನ ಅಷ್ಟ ಇಟಗೊಂಡ ಯಾನ ಮಾಡೋದಂತ ಓಣ್ಯಾಗಿನ ಮಂದಿಗಗೆಲ್ಲಾ ಮುರಿದು ಹಂಚಿ ಬಿಟ್ನಿ… ಫಳಿಗೋಳು ಮತ್ತ ಅವ್ನೆಲ್ಲ ಒಡೆದ ಉರುವಲು ಮಾಡಿದ್ವಿ ಸಾಹೇಬರ…” ಅಂತ ಬೇಸರ, ವಿಷಾದ ಭಾವದಿಂದ ಅರುಹಿದ.

ಬಾಳಗೊಂಡನ ಕಾಲು ಕೆಳಗಿನ ಭೂಮಿ ಕುಸಿದಂಗಾಯಿತು. ಆತ ಗೋಪಾಲನ ಮುಖ ಮತ್ತು ಗೋಪಾಲ ಆತನ ಮುಖ; ಪರಸ್ಪರ ನೋಡಿಕೊಂಡರು. ಬಹಳ ಆಸೆ ಇಟ್ಟುಕೊಂಡಿದ್ದ. ಬಾಳಗೊಂಡನಿಗೆ ತೀವ್ರ ನಿರಾಶೆಯಾಗಿತ್ತು. ಮಂಚ ಮತ್ತು ಅದರ ಕಾಲುಗಳನ್ನು ಉಳಿಸಿಕೊಳ್ಳುವುದರಲ್ಲಿ ಆತ ಸೋತಿದ್ದ. ಕೆಲವೇ ವರ್ಷಗಳ ಹಿಂದೆ ಅವ್ವನನ್ನೇ ಉಳಿಸಿಕೊಳ್ಳಲಾಗಿಲ್ಲ. ಇನ್ನು ಮಂಚ ಮತ್ತು ಅದರ ಕಾಲುಗಳು ಯಾವ ಲೆಕ್ಕ. ಅಷ್ಟೆ. ತನಗೆ ತಾನು ಸಾಂತ್ವನ ಹೇಳಿಕೊಂಡ. ಆಸ್ಪತ್ರೆಯಲ್ಲಿ ಮನುಷ್ಯ ಪ್ರಯತ್ನವೆಲ್ಲ ಕೈಮೀರಿರಲಿಲ್ಲವೆ? ಇಲ್ಲೂ ಅಷ್ಟೇ. ಆತನು ನಡೆಸಿದ ಪ್ರಯತ್ನಗಳು ವಿಫಲಗೊಂಡವು.

ಅವ್ವನ ಸುಡುತ್ತಿದ್ದ ಚಿತೆಯ ಚಿತ್ರ ಒಮ್ಮೆ ಕಣ್ಮುಂದೆ ಸುಳಿಯಿತು. ಸುತ್ತಲೂ ಒಡ್ಡಿದ ಕಟ್ಟಿಗೆಗಳು. ಅವ್ವನ ಮಾಂಸ ಮಜ್ಜೆಯನ್ನು ಬೆಂಕಿಯ ಕೆನ್ನಾಲಿಗೆಗಳು ಪುರು ಪುರು ಸುಡುತ್ತಿದ್ದವು. ದೇಹವು ಬೆಂಕಿಯಲ್ಲಿ ಚಟ ಚಟ ಶಬ್ದ ಮಾಡುತ್ತ ಸುಟ್ಟು ಕರಗುತ್ತಿತ್ತು. ಅಲ್ಲಿ ಅದರ ಸುತ್ತಲು ಮಂಚ ಮತ್ತು ಅದರ ಕಾಲುಗಳೂ ಸಹ ಸುಡುತ್ತಿದ್ದವು. ಬಾಳಗೊಂಡನ ಕಣ್ಣಾಲಿಗಳು ತುಂಬಿದವು. ಕಣ್ಣಿನ ನೋಟ ಮಂಜು ಮಂಜಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.