ಬೆಳಗಿನ ಜಾವ, ಬೇಸಿಗೆಯ ದಿನಗಳು. ಹಳ್ಳಿಯೆಲ್ಲಾ ಆಗತಾನೆ ಏಳುತ್ತಿತ್ತು. ಕೋಳಿಗಳ ಕೂಗಿಗಿಂತ, ಬೇವಿನ ಮರದಲ್ಲಿನ ಕಾಗೆಗಳ ಕೂಗೇ ಊರೆಲ್ಲಾ ತುಂಬಿಹೋಗಿತ್ತು. ಇದು ಎಂದಿನಂತೆ ಇದ್ದರೂ, ನಾಗಮ್ಮನಿಗೆ ಏನೋ ಸರಿಯಿಲ್ಲ ಎನಿಸಿತು. ಹೊಲದ ಕಡೆ ಹೊರಟಿದ್ದ ಪ್ರಸಾದನನ್ನು ಕಂಡು

"ಅಪ್ಪಿ ಇಲ್ನೋಡು " ನಾಗಮ್ಮನ ಮಾತಿನಲ್ಲಿ ದುಗುಡವಿತ್ತು. ಸ್ವಲ್ಪ ನೋವಿತ್ತು, ಏನೋ ಕಳೆದುಹೋದ ಭಾವವಿತ್ತು. ಎಲ್ಲವೂ ಮಿಳಿತಗೊಂಡ ದನಿಗೆ ಸ್ವಲ್ಪ ಮರುಗಿದರೂ ಪ್ರಸಾದ ಅಷ್ಟೇನೂ ಉತ್ಸುಕತೆ ತೋರಿಸದೆ, ಉದಾಸೀನದಿಂದ "ಏನು ದೊಡಮ್ಮ" ಎಂದ. ಅವನಿಗೆ ಗೊತ್ತಿತ್ತು ನಾಗಮ್ಮನ ಭಾವುಕತೆ.

"ಅಲ್ಲಿ ನೋಡು" ಎಂದು ಮನೆಯ ಮುಂದೆ ಉದ್ದಕ್ಕೆ ನಿಂತಿದ್ದ ಬೇವಿನಮರ ತೋರಿಸಿದಳು. ಬೆಳಿಗ್ಗೆ ಹೊಲಕ್ಕೆ ಹೊರಟಿದ್ದ ಪ್ರಸಾದ ಎಲ್ಲಿ ಸಮಯ ವ್ಯರ್ಥವಾಗಿ ಅಪ್ಪನಿಂದ ಬಯ್ಯಿಸಿಕೊಳಬೇಕೋ ಎಂದುಕೊಂಡು, "ಎಲ್ಲಿ" ಅಂದ.

"ಅಲ್ಲಿ ನೋಡು ನೆನ್ನೆತಾನೆ ಇದ್ದ ಕಾಗೆಗಳಲ್ಲಿ ಎರಡು ಕಮ್ಮಿಯಾಗಿವೆ"

ಪ್ರಸಾದ ಬೇಸರ, ಕುಹುಕದಿಂದ ನಾಗಮ್ಮನನ್ನು ನೋಡುತ್ತಾ, "ಹೇ ನಿಂಗೆ ಬೇರೆ ಕೆಲಸ ಇಲ್ಲ, ನಾನು ಅರ್ಜೆಂಟ್ ಅಂತ ಹೊಲಕ್ಕೆ ಹೊರಟಿದ್ರೆ" ಎಂದು ಹೇಳಿ ಹೊರಟವ, ಸ್ವಲ್ಪ ತಡೆದು "ಅದು ನಿಂಗೆ ಹೆಂಗೆ ಗೊತ್ತಾಯಿತು" ಎಂದ.

"ಅಷ್ಟೂ ಗೊತ್ತಾಗಲ್ವಾ, ಅವು ಕಾಕಾ ಎಂದು ಕೂಗಿದರೇನೇ ಗೊತ್ತಾಗುತ್ತೆ ಎಷ್ಟು ಕಾಗೆ ಇವೆ ಅಂತ, ನೆನ್ನೆ ಜಾಸ್ತಿ ಕಾಗೆ ಕೂಗಿತಿದ್ವು, ಈಗ ಎರಡು ಕಮ್ಮಿ ಆಗಿವೆ"

"ನಿಂಗೆ ಕೆಲಸ ಇಲ್ಲಾ ಅಂದರೆ ನನಗೂ ಇಲ್ವಾ ಹೋಗಮ್ಮೋ" ಎಂದು ಪ್ರಸಾದ ಅಲ್ಲಿಂದ ಕಾಲ್ಕಿತ್ತ, ಹೋಗುತ್ತಾ "ನಿನ್ನ ಮಗ ಅಮೇರಿಕಾದಲ್ಲಿ ಇದ್ದಾನಲ್ವಾ, ಹೋಗಿ ನಿನ್ನ ಹುಚ್ಚಿಗೆ ಏನಾದರೂ ಔಷದಿ ತಗ" ಎಂದು ಉಚಿತ ಸಲಹೆ ಕೊಟ್ಟ

" ಏ ಮೂದೇವಿ, ನನಗೇನೂ ಹುಚ್ಚು ಅಂದ್ಕೊಂಡ್ಯಾ" ಎಂದು ಹೋಗುತಿದ್ದ ಪ್ರಸಾದನ ಕಡೆ ಕೈಯಲ್ಲಿದ್ದ ಕೋಲು ಬೀಸಿದಳು. ಪ್ರಸಾದ ಅದರಿಂದ ತಪ್ಪಿಸಿಕೊಂಡು ನಗುತ್ತಾ ಓಡಿ ಹೋದ.

ನಾಗಮ್ಮ "ಏನಾದವು ಎರಡು ಕಾಗೆಗಳು, ನೆನ್ನೆ ಗೂಡು ಬಿಟ್ಟಮೇಲೆ ವಾಪಸ್ ಬಂದಿಲ್ವಾ, ಯಾರಾದರೂ ಬೇಟೆ ಅಡಿ ಕೊಂದರ, ಏನಾದರೂ ತೊಂದರೆ ಆಗಿ ಸಾಯೋ ಪರಿಸ್ಥಿತಿ ಬಂತಾ" ಎಂದು ಚಿಂತಿತಳಾದಳು. "ಪಾಪ ಅವುಗಳಿಗೆ ಮರಿ ಇದ್ವೋ ಏನೋ, ಈಗ ಅವುಗಳ ಪರಿಸ್ಥಿತಿ ಏನು, ರೆಕ್ಕೆ ಬಂದಿದ್ದರೆ ಸರಿ, ಇಲ್ಲಾ ಅಂದ್ರೆ , ರೆಕ್ಕೆ ಬಂದಿದ್ದರೆ ಏನು ತೊಂದರೆ ಇಲ್ಲ. ನನ್ನ ಮಗ ರೆಕ್ಕೆ ಬಂದಮೇಲೆ ಪುರ್ರನೆ ಹಾರಿ ಹೋಗಲಿಲ್ವಾ,ದಿನಾ ಫೋನ್ ಮಾಡ್ತಾನೆ, ಒಂಟಿ ಹೆಂಗಸು ಇದಾಳೋ ಇಲ್ಲ ಪರಮಾತ್ಮನ ಪಾದ ಸೇರಿಕೊಂಡಳೋ ಅಂತ" ಎಂದು ಕೊಂಡಳು.

ಎಂದಿನಂತೆ ಫೋನ್ ಹೊಡೆದುಕೊಂಡಿತು. ಫೋನ್ ಬಂತು ಮಗನಿಗೆ ನೂರು ವರ್ಷ ಆಯಸ್ಸು ಎಂದುಕೊಂಡು, ಮೊಬೈಲ್ ಎತ್ತಿಕೊಂಡಳು. ಇಡೀ ಊರಿಗೆ ಕೇಳಿಸುವಂತೆ ಹಲೋ ಎಂದಳು, ಆಕಡೆ ಮಗ ರಮೇಶ ಮಾತನಾಡುವ ಮೊದಲೇ " ಎರಡು ಕಾಗೆ ಕಳೆದುಹೋಗಿವೆ" ಎಂದಳು. ರಮೇಶ "ಹೌದಾ ಅಮ್ಮ, ಎಲ್ಲೋ ಹೋಗಿರ್ತವೆ ಬರ್ತಾವೆ ಬಿಡು" ಎಂದ.

ಅಮ್ಮ,ಮಗ ಬೆಳಿಗ್ಗೆ ಏಳುತ್ತಿದ್ದುದ್ದೇ ಕಾಗೆಗಳ ಕಾಕಾ ಶಬ್ದದಿಂದ. ಅಷ್ಟೂ ಕಾಗೆಗಳು ಬೇವಿನ ಮರವ ಸುತ್ತುತ್ತಾ, ಆ ಕೊಂಬೆ ಈ ಕೊಂಬೆ ಎಂದು ಹಾರುತ್ತಾ ಒಂದಾಗಿ ಶಬ್ದ ಮಾಡುತ್ತಿದ್ದವು. ಅವುಗಳ ದನಿ ಕೋಗಿಲೆಯಷ್ಟೇ ಮಧುರವಾಗಿ ಅಮ್ಮ, ಮಗನಿಗೆ ಕೇಳಿಸುತ್ತಿತ್ತು. ಎಷ್ಟೋ ಸಲ ಅವರಿಗೆ ಕಾಗೆಗಳೇ ಸ್ನೇಹಿತರಾಗಿ ಕಾಣಿಸುತಿದ್ದವು. ಅಮ್ಮ ರಾತ್ರಿ ಉಳಿದಿದ್ದ ಅನ್ನ ತಂದು ಒಂದು ಬಂಡೆಯಮೇಲೆ ಸುರಿದು ಕಾಕಾ ಎನ್ನುತಿದ್ದಳು, ಅಷ್ಟೂ ಕಾಗೆಗಳು ಓಡಿ ಬಂದು ಮುತ್ತುಕೊಳ್ಳುತ್ತಿದ್ದವು. ಅವುಗಳು ಕಾಕಾ ಎಂದು ತನ್ನ ಬಳಗವನ್ನು ಕರೆದು ತಿನ್ನುವುದನ್ನು ಅಮ್ಮ ಮಗ ನೋಡುತ್ತಾ ಕುಳಿತಿರುತ್ತಿದ್ದರು.

ಕೆಲವು ಸಲ ಕಾಗೆಗಳು ಅನ್ನವನ್ನು ತಿನ್ನುತ್ತಾ, ಕೆಲವು ಸಲ ತಿನ್ನುವುದನ್ನು ನಿಲ್ಲಿಸಿ ನಾಗಮ್ಮನ ಮುಖ ನೋಡುತ್ತಾ ಕುಳಿತಿರುತ್ತಿದ್ದವು. ಅವು ನಾಗಮ್ಮನನ್ನು ಗುರುತಿಸತೊಡಗಿದ್ದವು. ಎಷ್ಟೋ ಸಲ ನಾಗಮ್ಮ ಎಲ್ಲಾದರೂ ಹೊರಟರೆ ಅವಳನ್ನು ಹಿಂಬಾಲಿಸುತ್ತಿದ್ದವು. ಇದನ್ನು ಗಮನಿಸಿದ ಹಳ್ಳಿಜನ ನಾಗಮ್ಮನನ್ನು ಕಾಗೆ ನಾಗಮ್ಮ ಎಂದು ಕರೆಯತೊಡಗಿದರು.

ರಮೇಶನ ಅಪ್ಪ ತೀರಿಕೊಂಡಮೇಲೆ ಇನ್ನೂ ಯೌವನ ಸೂಸುತಿದ್ದ ನಾಗಮ್ಮನ ಮೇಲೆ ಅನೇಕ ಊರ ಪುರುಷ ಕಣ್ಣಗಳು ಬಿದ್ದಿದ್ದು, ಕೆಲ ಸಲ ಅವಳು ಹೋದಕಡೆ ಹಿಂಬಾಲಿಸಿದ್ದೂ ಉಂಟು. ಆದರೂ ನಾಗಮ್ಮ ತಾನುಂಟು ಹಾಗು ತನ್ನ ಹೊಲದ ಕೆಲಸ, ಮಗ ರಮೇಶನುಂಟು ಎಂದು ಎಡೆಬಿಡದೆ ದುಡಿದಿದ್ದೂ ಉಂಟು. ಆದರೆ ಒಂದು ಸಲ ಇಬ್ಬರು ಕಿಡಗೇಡಿಗಳು ನಾಗಮ್ಮ ರಮೇಶ ಶಾಲೆಗೆ ಕಳುಹಿಸಿ ಹೊಲದ ಕಡೆ ಹೊರಟಾಗ ಹಿಂಬಾಲಿಸಿ, ಊರಾಚೆ ದಟ್ಟ ಮರಗಳಿರುವ ಕಡೆ, ಅವಳ ಕೈ ಹಿಡಿದು ಎಳೆಯುವ ಪ್ರಯತ್ನದಲ್ಲಿರುವಾಗ ಎಲ್ಲಿದ್ದವೋ ಏನೋ ಆರು ಕಾಗೆಗಳು ಒಮ್ಮೆಲೇ ಕಿಡಗೇಡಿಗಳ ಮೇಲೆ ಎರಗಿ ಕೊಕ್ಕಿನಿಂದ ಕುಕ್ಕಿ, ಕಾಲಿನಿಂದ ಪರಚಿ ಅವರನ್ನು ಅಲ್ಲಿಂದ ಓಡಿಸಿದ್ದವು. ನಾಗಮ್ಮನಿಗೆ ಅವುಗಳ ಮೇಲೆ ಮಮತೆ ಉಕ್ಕಿ ಅವುಗಳನ್ನೇ ನೋಡುತ್ತಾ ಕುಳಿತಿದ್ದಳು.

ರಮೇಶ ದೊಡ್ಡವನಾಗಿ ಓದಿಕೊಂಡ ಮೇಲೆ, ಕಾಗೆಗಳು ತಮಗೆ ಊಟ ಕೊಟ್ಟವರನ್ನು ಗುರಿಸುತ್ತವೆ ಎಂದೂ, ಕೆಲವು ಸಲ ತಮಗೆ ಸಿಕ್ಕ ವಸ್ತುಗಳನ್ನು ಕಾಣಿಕೆಯಾಗಿ ತರುವುದೂ ನಡೆಯುತ್ತದೆ ಎಂದು ಹೇಳುತ್ತಿದ್ದ. ನಾಗಮ್ಮನಿಗೆ ಅದು ನಿಜವೆಂದು ತಿಳಿದಿತ್ತು. ಆದರೆ ಮಗ ಹೇಳಿದ ಒಂದು ಮಾತು ಅವಳಿಗೆ ಹಿಡಿಸಲಿಲ್ಲ.

"ಕಾಗೆಗಳು ಆಹಾರ ಕಂಡಾಗ ಕಾಕಾ ಎಂದು ತನ್ನ ಬಳಗವನ್ನು ಕರೆಯುವುದಲ್ಲ,ಅವುಗಳನ್ನು ದೂರ ಕಳುಹಿಸಲು ಹಾಗೆ ಕೂಗುತ್ತವೆ" ಎಂದಿದ್ದ

ನಾಗಮ್ಮ "ಮಗು ಅದು ನಿಜವಲ್ಲ, ಕಾಗೆಗಳಿಗೆ ತಮ್ಮವರು ಆಹಾರಕ್ಕೆ ಅರಸುವುದು ತಿಳಿದಿರುತ್ತದೆ, ಅದಕ್ಕೆ ಅವು ಆಹಾರ ಕಂಡಾಗ ತನ್ನ ಬಳಗವನ್ನು ಕರೆಯುತ್ತವೆ. ನೋಡು ಒಂದು ವೇಳೆ ಅದು ನಿಜವೇ ಅಲ್ಲದಿದ್ದರೂ ನಿಜವೆಂದು ತಿಳಿದು ಮಕ್ಕಳಿಗೆ ಅದರ ಬಗ್ಗೆ ತಿಳಿಸುವುದು ಒಳಿತು, ಮಕ್ಕಳಿಗೆ ಪರರಿಗೆ ಸಹಾಯ ಮಾಡಬೇಕು ಎನ್ನವುದ ತಿಳಿಸುವುದಕ್ಕೆ ಒಂದು ಒಳ್ಳೆಯ ಉದಾಹರಣೆ ಆಗುತ್ತದೆ, ಮಾನವತೆಯೇ ನಶಿಸುತ್ತಿರುವ ಈ ಕಾಲದಲ್ಲಿ ಅಷ್ಟಾದರೂ ಒಳ್ಳೆಯದಾಗುತ್ತದೆ' ಎಂದಿದ್ದಳು.

ರಮೇಶ ಚನ್ನಾಗಿ ಓದಿ, ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿ, ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕೆಲವ ವರುಷಗಳಾದಮೇಲೆ ಅದೇ ಕಂಪನಿ ರಮೇಶನನ್ನು ಅಮೇರಿಕೆಗೆ ಕಳುಹಿಸಿತ್ತು. ಹೊರಡುವ ಮುಂಚೆ ತುಂಬಾ ಸಂತೋಷದಿಂದಿದ್ದ ರಮೇಶನಿಗೆ ನಾಗಮ್ಮ,

" ಮಗು ನೀನು ಸಿನೆಮಾದಲ್ಲಿ ನೋಡಿ, ಪುಸ್ತಕಗಳಲ್ಲಿ ಓದಿ ಅಮೇರಿಕೆಗೆ ಹೋಗುವ ಖುಷಿಯಲ್ಲಿ ಇರುವೆ, ಆದರೆ ಕೆಲ ವರುಷಗಳಾದ ಮೇಲೆ ಆ ಊರಿನಲಿ ನಿನಗೆ ಪರಕೀಯತೆ ಕಾಡುತ್ತದೆ, ಅಲ್ಲಿನ ಜನರ, ಸರಕಾರದ ಮರ್ಜಿಗೆ ಸಿಕ್ಕಿ ಬದುಕಬೇಕಾಗುತ್ತದೆ, ಬರು ಬರುತ್ತಾ ಇಲ್ಲಿ ಬಂದು ಸಿಕ್ಕಿಹಾಕಿಕೊಂಡೆ ಎನಿಸುತ್ತದೆ, ಅಲ್ಲಿ ಇರದೆ ಇಲ್ಲಿಗೆ ಹಿಂತುರಿಗೆ ಬರಲಾಗದೆ ಚಡಪಡಿಸುವ ಹಂತ ತಲುಪಬೇಕಾಗುತ್ತದೆ, ನಾನೇನೂ ನಿನ್ನಷ್ಟು ಓದಿಲ್ಲ ಆದರೆ ಹುಟ್ಟಿದ ಮನೆಯಿಂದ, ನಿಮ್ಮ ಅಪ್ಪನ ಮನೆಗೆ ಬಂದ ಅನುಭವ ನನಗಿದೆ"

" ಹಾಗೇನೂ ಇಲ್ಲಮ್ಮ, ಅಲ್ಲಿಗೆ ಹೋದರೆ ಒಳ್ಳೆಯ ಹಣ ಸಿಗುತ್ತದೆ, ಇಲ್ಲಿ ಒಂದು ಮನೆ ಕಟ್ಟಿಸಬಹದು, ನೀನು ಹೊಲದಲ್ಲಿ ದುಡಿಯುವುದು ತಪ್ಪುತ್ತದೆ, ಹೊಲದಲ್ಲಿ ಒಂದು ಬೋರ್ ವೆಲ್ ಕೊರೆಸಿ ನೀರನ್ನು ಬೇರೆಯ ಹೊಲಗಳಿಗೆ ಹರಿಸಿ ಹಣ ಮಾಡಬಹದು"

ನಾಗಮ್ಮ ನಗುತ್ತಾ" ನಾನು ಈ ಮನೆಯಲ್ಲಿ ಸಂತೋಷವಾಗಿದ್ದೇನೆ, ಇನ್ನು ಹೊಲದಲ್ಲಿ ದುಡಿಯುವುದು ಹಣಕ್ಕಾಗಿ ಅಲ್ಲ, ಸಂತೋಷಕ್ಕಾಗಿ, ಹಣ ನನಗೆ ಎಂದೂ ಸಂತೋಷ ಕೊಟ್ಟಿದ್ದೂ ಇಲ್ಲ, ನೀನು ಹೋಗಿ ಬಾ, ನಿನ್ನ ಖುಷಿಯೇ ನನ್ನ ಖುಷಿ" ಎಂದು ಮಗನನ್ನು ಹರಿಸಿ ಕಳುಹಿಸಿದ್ದಳು.

ಅಮೆರಿಕೆಗೆ ಹೋದ ರಮೇಶ್, ಎರಡು-ಮೂರು ವರುಷಗಳಾದ ಮೇಲೆ ಅಮ್ಮನನ್ನು ಅಮೆರಿಕೆಗೆ ಕರೆದುಕೊಂಡು ಹೋಗಲು ಒತ್ತಾಯಿಸಿದ್ದ.

" ಅದೊಂದು ಸಾಧ್ಯವಾಗದು, ನಾನು ಇಲ್ಲದೆ ಈ ಕಾಗೆಗಳಿಗೆ ಅನ್ನ ಹಾಕುವವರು ಯಾರು, ಅದಲ್ಲದೆ ನಾವು ಒಬ್ಬರನೊಬ್ಬರು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೇವೆ, ಅವುಗಳ ಕೂಗಿಲ್ಲದೆ ನನಗೆ ಬೆಳಕಾಗದು, ನಾನಿಲ್ಲದೇ ಅವುಗಳಿಗೆ ನೆಮ್ಮದಿ ಇಲ್ಲ" ಎಂದಿದ್ದಳು.

ಎರಡು ಕಾಗೆಗಳ ಕೂಗು ಕೇಳದಾಗಾದ ನಾಗಮ್ಮನಿಗೆ ಚಿಂತೆ ಹೆಚ್ಚಾಯಿತು. ಎಷ್ಟೋ ಸಲ ಗಾಳಿಗೆ ಗೂಡು ಬಿದ್ದು ಚಿಕ್ಕ ಚಿಕ್ಕ ಮರಿಗಳು ಕೆಳಕ್ಕೆ ಬಿದ್ದಾಗ, ನಾಗಮ್ಮ ಅವುಗಳ ತಾಯಿ ಬಂದು ಎತ್ತಿಕೊಂಡು ಹೋಗುವರೆಗೂ, ಮರಿಗಳನ್ನು ಕಾಯುತ್ತಿದ್ದಳು. ಗಾಳಿ ಕಮ್ಮಿ ಆಗಲೆಂದು ದೇವರನ್ನು ಬೇಡಿಕೊಳ್ಳುತ್ತಿದ್ದಳು.

ಮನೆಯ ಮುಂದೆ ಚಿಕ್ಕ ಕಟ್ಟೆ, ಕಟ್ಟೆಯ ನಡುವೆ ಎತ್ತರದ ಬೇವಿನ ಮರ, ಕಟ್ಟೆಯಲ್ಲಿ ನಾಗರಕಲ್ಲುಗಳು , ಬೇವಿನ ಮರದ ಕಾಂಡಕ್ಕೆ ಹರಿಶಿನ ಮೆತ್ತಿದ ದಾರ, ಊರಿನ ಹೆಂಗಸರು ನಾಗರ ಪಂಚಮಿಯ ದಿನ ಬೇವಿನ ಮರದ ಕಾಂಡಕ್ಕೆ ದಾರ ಸುತ್ತಿ, ನಾಗರ ಕಲ್ಲಿಗೆ ಹರಿಶಿನ, ಕುಂಕುಮ ಹಚ್ಚಿ, ಹೂವೆರೆದು, ಹಾಲನ್ನು ಕಲ್ಲಿನಮೇಲೆ ಸುರಿದು, ಊದುಬತ್ತಿಯಿಂದ ಪೂಜೆ ಮಾಡುತ್ತಿದ್ದರು.

ಬೇವಿನ ಮರ ಕಟ್ಟೆಯ ಮೇಲೆ ಕುಳಿತವರಿಗೆ ಬಿಸಲಿನಿಂದ ರಕ್ಷಿಸುವ ನೆರಳು. ಊರಿನ ಜನ ಕಟ್ಟೆಯ ಸುತ್ತಲೂ ದನ ಕರುಗಳನ್ನು ಕಟ್ಟಿ ಹಾಕಿರುತ್ತಿದ್ದರು. ಕಟ್ಟೆಯ ಹತ್ತಿರದಲ್ಲೇ ಊರಿನ ಆಂಜನೇಯ ಸ್ವಾಮಿಯ ಗುಡಿ, ಗುಡಿಯ ಪಕ್ಕದಲ್ಲೇ, ಸ್ವಲ್ಪ ಹಿಂದೆ ಒಂದು ಬಾವಿ.ಭಾವಿಯ ನೀರೇ ಊರಿಗೆ ಆಧಾರ.

ರಮೇಶ ಅಮೇರಿಕ ಪ್ರಯಾಣ ಬೆಳೆಸುವ ಮೊದಲು, ನಾಗಮ್ಮ ಆಂಜನೇಯನಿಗೆ ಎಲೆ ಪೂಜೆ ಮಾಡಿಸಿ, ಊರಿನ ಜನಕ್ಕೆ ಊಟ ಹಾಕಿಸಿದ್ದಳು. ಊರಿನ ಜನ ನಾಗಮ್ಮನ ಅದೃಷ್ಟ ಖುಲಾಯಿಸಿತು ಎಂದುಕೊಡರು. ಆಗದ ಕೆಲವರು ಇನ್ನು ನಾಗಮ್ಮನನ್ನು ಹಿಡಿಯಲು ಆಗುವುದಿಲ್ಲ ಎಂದುಕೊಂಡರು.

ನಾಗಮ್ಮನಿಗೆ ಮಗ ತನ್ನಿಂದ ದೂರ ಹೋಗುತ್ತಿದ್ದಾನಲ್ಲಾ ಎನ್ನುವುದೇ ದುಃಖದ ಸಂಗತಿ. ಗಂಡ ತೀರಿಕೊಂಡಮೇಲೆ ಅವಳಿಗೆ ಮಗನೇ ಪ್ರಪಂಚ, ಮಗ ಬೆಂಗಳೂರಿಗೆ ಕಾಲೇಜಿಗೆ ಹೋದಾಗಲೂ ನೋವುಂಡಿದ್ದಳು, ಮಗನಿಗೆ ವಾರಕ್ಕೆ ಒಂದು ಸಲ ಊರಿಗೆ ಬರಲೇ ಬೇಕೆಂದು ತಾಕೀತು ಮಾಡಿದ್ದಳು. ಅಮ್ಮ ಹಾಕಿದ ಗೆರೆ ದಾಟದ ಮಗ ರಮೇಶ, ಅಮೆರಿಕಾಗೆ ಹೋಗುವ ಮೊದಲು ಎಲ್ಲ ಹಬ್ಬಗಳಿಗೆ, ವಾರಾಂತ್ಯಕ್ಕೆ ಊರಿಗೆ ಬರುತ್ತಿದ್ದ. ಅಮ್ಮನನ್ನು ಬಿಟ್ಟು ಅಮೇರಿಕ ಹೋಗಲು ಅವನಿಗೆ ನೋವಾದರೂ, ಸ್ವಲ್ಪ ಹಣ ಮಾಡ್ಕೊಂಡು ಬಂದು ಅಮ್ಮನನ್ನು ಚನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಅವನ ಉದ್ದೇಶ. ನಾಗಮ್ಮ ನೋವಿದ್ದರೂ ಮಗನ ಬಯಕೆಗೆ ಇಲ್ಲ ಅನ್ನಲಾಗದೆ, ಮಗನನ್ನು ತಬ್ಬಿ, ಆಶೀರ್ವಾದಿಸಿ ಅಮೆರಿಕಾಗೆ ಕಳುಹಿಸಿದ್ದಳು.

ಮಗ ಹೊರದೇಶಕ್ಕೆ ಹೋದಮೇಲೆ, ನಾಗಮ್ಮನಿಗೆ ಎದ್ದ ತಕ್ಷಣ ಕಾಗೆ ದರ್ಶನ, ಅವುಗಳಿಗೆ ಅನ್ನ ಹಾಕಿ, ಅವುಗಳ ಜೊತೆ ಮಾತನಾಡುತ್ತಿದ್ದಳು.

" ಎಲ್ಲೆಲ್ಲಿ ಹೋಗಿದ್ರಿ ನೆನ್ನೆ, ಇವತ್ತು ಎಲ್ಲಿ ಹೋಗುತ್ತೀರಾ, ಅಪ್ಪನ ಊರಲ್ಲಿ ಮಳೆ ಬಂದಿತ್ತಾ, ಅಪ್ಪ ಇಲ್ಲ ಅಮ್ಮ ಇಲ್ಲ ಇನ್ನೂ ಊರಿನ ಮಮತೆ ಹೋಗಿಲ್ಲ, ಮೊನ್ನೆ ದೊಡಪ್ಪ ತೀರಿಕೊಂಡರಂತೆ, ನೀವು ಯಾರು ಅವರ ತಿಥಿ ಊಟ ತಿನ್ನೋಕೆ ಹೋಗಿಲ್ವಂತೆ, ನಾನು ಹೋಗೋಕೆ ಆಗಲಿಲ್ಲ, ದೊಡಪ್ಪ ತುಂಬಾ ಒಳ್ಳೆಯವರು, ನೀವ್ಯಾಕೆ ಹೋಗಲಿಲ್ಲವೋ ತೀಳೀಲಿಲ್ಲ, ನಮಗೆ ಗೊತ್ತಿಲ್ದೇ ಇರೋದು ನಿಮಗೆ ಗೊತ್ತಿರುತ್ತೆ, ಅದಕ್ಕೆ ನಿಮ್ಮನ್ನು ಬುದ್ದಿವಂತರು ಅನ್ನೋದು, ಶನಿಮಾತ್ಮನ ವಾಹನ ಬೇರೆ, ಶನಿ ಎಂದರೆ ಜನಕ್ಕೆ ಹೆದುರಿಕೆ, ಅದಕ್ಕೆ ಆ ಶನಿಗೂ ಕಪ್ಪು ಬಣ್ಣ ಬಳಿದು, ಕಪ್ಪಗಿರುವ ನಿಮ್ಮನ್ನೇ ವಾಹನ ಮಾಡವ್ರೆ, ಕೋಗಿಲೆನೂ ಕಪ್ಪೇ , ಆದರೆ ಅದಕ್ಕೆ ಒಳ್ಳೆಯ ಕಂಠ ಇರೋದರಿಂದ ಅದು ಉತ್ತಮ ಅಂತ ಮಾಡಿಬಿಟವ್ರೆ, ಏನೋ ನನಗಂತೋ ನೀವು ಕೂಗೋದೇ ಇಷ್ಟ ಆಗುತ್ತೆ, ನಿಮ್ಮ ದನಿ ಕೇಳದ್ರೆನೇ ಬೆಳಿಗ್ಗೆ ಎದ್ದಂಗಾಗೋದು, ಮೊನ್ನೆ ಹೊಸ ಮರಿ ಮೊಟ್ಟೆ ಒಡೆದು ಬಂತಂತೆ, ಹುಷಾರು ಕಾಗೆ ತಿನ್ನೋ ಜನಾನೂ ಇದಾರೆ, ಮನುಷ್ಯನ ಹೊಟ್ಟೆಗೆ ಎಲ್ಲಾ ಬೇಕು, ಏನು ಮಾಡೋದು" ಎಂದು ಆಕಾಶಕ್ಕೆ ತಲೆ ಎತ್ತಿ ನೋಡಿ "ಎಲ್ಲಾ ಬಂದಿದಿರಾ, ಅನ್ನ ಬೇಕಿದ್ರೆ ಇನ್ನೂ ತರ್ತೀನಿ".

ಕಾಗೆಗಳಿಗೆ ಎಷ್ಟು ಅರ್ಥವಾಗುತ್ತಿತ್ತೋ ಇಲ್ಲವೋ, ಅವು ಮಾತ್ರ ನಾಗಮ್ಮನ ಹತ್ತಿರವೇ ಕುಳಿತು ಕಾವ್ ಕಾವ್ ಎಂದು ಅನ್ನ ಮುಕ್ಕುತ್ತಿದ್ದವು.

ಇದೆ ಹೊತ್ತಲ್ಲಿ ರಾಜ್ಯದ ಚುನಾವಣೆ ಸಮಯ ಹತ್ತಿರ ಬಂತು. ಕ್ಷೇತ್ರದ ಶಾಸಕ ವೀರಣ್ಣ, ಕ್ಷೇತ್ರದ ಸುತ್ತು ಹಾಕಲು ಹೊರಟವರು ನಾಗಮ್ಮನ ಊರಿಗೆ ಬಂದರು. ಊರಜನ ಎಲ್ಲಾ ನೀವು ನಮ್ಮೋರಿಗೆ ಏನೂ ಮಾಡಿಲ್ಲ, ನಿಮಗೆ ಹೇಗೆ ಓಟು ಹಾಕೋದು ಎಂದು ತಕರಾರು ತೆಗೆದರು. ಶಾಸಕರು "ಸರಿಯಪ್ಪ ನೀವೆಲ್ಲಾ ಕುಳಿತು ಊರಿಗೆ ಏನು ಬೇಕು ಎಂದು ತೀರ್ಮಾನ ಮಾಡಿ, ನಮ್ಮದೇ ಸರ್ಕಾರ ಇದೆ, ಏನು ಬೇಕೋ ಮಾಡಿಕೊಡ್ತೇನೆ" ಅಂದರು.

ಎರಡು ಮೂರು ದಿನ ಸಮಾಲೋಚನೆ ಮಾಡಿದ ಮೇಲೆ ,ಒಂದು ತೀರ್ಮಾನಕ್ಕೆ ಬಂದ ಊರ ಮುಖಂಡರು ಶಾಸಕರನ್ನು ನೋಡಲು ಹೊರಟರು.

ಆಫೀಸಿಗೆ ಬಂದು ಕುಳಿತುಕೊಳ್ಳುತ್ತ " ಏನಪ್ಪಾ ಏನು ತೀರ್ಮಾನಕ್ಕೆ ಬಂದಿರಿ"

ಊರಿನ ಮುಖಂಡ ಗೋವಿಂದಪ್ಪ "ಶಾಸಕರೇ, ನಮ್ಮ ಆಂಜನೇಯ ಸ್ವಾಮಿ ಗುಡಿ ಎಲ್ಲಾಕಡೆ ಪ್ರಸಿದ್ದಿ, ದೇವರಿಗೆ ಎಲೆ ಪೂಜೆ ಮಾಡಿಸಿದರೆ ಅಂದುಕೊಂಡಿದ್ದೆಲ್ಲಾ ಆಗುತ್ತೆ, ಅದಕ್ಕೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ, ಆದರೆ ಅವರು ಬಂದಾಗ ರಾತ್ರಿ ಉಳುಕೊಳ್ಳೋಕೆ ಜಾಗ ಇಲ್ಲ, ನೀವೊಂದು ಸಮುದಾಯ ಭವನ ಕಟ್ಟಿಸಿದರೆ ಅನುಕೂಲ ಆಗುತ್ತೆ" ಅಂದರು.

ಶಾಸಕರು "ಹೂ" ಎಂದು ನಿಟ್ಟಿಸಿರು ಬಿಟ್ಟು, ತಲೆಯೆತ್ತಿ "ಸ್ವಲ್ಪ ದುಡ್ಡು ಜಾಸ್ತಿ ಬೇಕಾಗುತ್ತೆ, ಪರವಾಗಿಲ್ಲ ಮಾಡಿಸೋಣ, ಆದರೆ ಅದಕ್ಕೆ ಸರಿಯಾದ ಜಾಗ ಹುಡುಕಿದೀರಾ"?

" ಜಾಗ ನಿರ್ಧಾರ ಆಗಿದೆ" ಎಂದ ರಾಮಪ್ಪನನ್ನು ಗೋವಿಂದಪ್ಪ ಸ್ವಲ್ಪ ಕೋಪದಿಂದ ನೋಡಿದರು, ಏಕೆಂದರೆ ಶಾಸಕರ ಮುಂದೆ ಬೇರೆ ಯಾರೂ ಮಾತಾಡಬೇಡಿ, ಶಾಸಕರನ್ನು ನಾನೇ ಒಪ್ಪಿಸುತ್ತೇನೆ ಎಂದು ಗೋವಿಂದಪ್ಪ ಎಲ್ಲರಿಗೂ ತಾಕೀತು ಮಾಡಿದ್ದರು.

ಮತ್ತೆ ಶಾಸಕರ ಕಡೆ ತಿರುಗಿ " ಜಾಗ ನಿರ್ಧಾರ ಆಗಿದೆ, ದೇವಸ್ಥಾನದ ಪಕ್ಕ ಒಂದು ಹಳೇ ನಾಗರ ಕಟ್ಟೆ ಇದೆ, ಅಲ್ಲಿನ ಬೇವಿನ ಮರಾನೂ ಹಳೇದು, ಜೋರಾಗಿ ಗಾಳಿ ಬಂದರೆ ಮನೆ, ಮಕ್ಕಳ ಮೇಲೆ ಬೀಳಬೋದು, ಅದಕ್ಕೆ ಅದನ್ನು ಕಡಿದು, ನಾಗರ ಕಲ್ಲನ್ನು ಸ್ಕೂಲ್ ಹತ್ತಿರ ಇರೋ ಕಟ್ಟೆಗೆ ಸಾಗಿಸಿ, ಕಟ್ಟೆ ಒಡೆದು, ಅಲ್ಲೇ ಸಮುದಾಯ ಭವನ ಕಟ್ಟಿಸಿ ಬಿಡೋಣ ಅಂತ"

ಶಾಸಕರು "ಸರಿ ಹಾಗಾದ್ರೆ, ಮರ ಕಡೆದು, ಕಟ್ಟೆ ತೆಗೆಯೋ ಕೆಲಸ ನಿಮ್ಮದು, ಭವನ ಕಟ್ಟಿಸೋ ಜವಾಬ್ದಾರಿ ನನ್ನದು, ನೀವು ಬೇಗ ಜಾಗ ರೆಡಿ ಮಾಡಿದ್ರೆ, ನಾನು ಅನುದಾನಕ್ಕೆ ಮುಖ್ಯಮಂತ್ರಿಗಳ ಹತ್ತಿರ ಕೇಳ್ತೇನೆ, ನೀವು ಎಷ್ಟು ಬೇಗ ಜಾಗ ರೆಡಿ ಮಾಡಿದ್ರೆ ಅಷ್ಟು ಬೇಗ ಕೆಲಸ ಆಗುತ್ತೆ, ಎಲೆಕ್ಷನ್ ಬೇರೆ ಹತ್ತಿರ ಬರ್ತಾಯಿದೆ, ಆಮೇಲೆ ನಾನು ಬ್ಯುಸಿ ಆಗ್ಬಿಡ್ತೇನೆ, ಜನಕ್ಕೆ ಹೇಳೋದು ಮಾತ್ರ ಮರೀಬೇಡಿ ಓಟು ನಮ್ಮ ಪಕ್ಷಕ್ಕೆ ಹಾಕಬೇಕೂ ಅಂತ"

"ಅದರ ಬಗ್ಗೆ ನಿಮಗೆ ಚಿಂತೆ ಬೇಡ, ಊರಿನವರೆಲ್ಲಾ ನಿಮಗೆ ಓಟು ಹಾಕ್ತಾರೆ"

ಊರಿಗೆ ಬಂದ ಮುಖಂಡರು ವಿಜಯೋತ್ಸವದಿಂದ ಊರಜನರ ಸೇರಿಸಿ, ಸಮುದಾಯಭವನದ ಬಗ್ಗೆ ಹೆಮ್ಮೆಯಿಂದ ಹೇಳಿ, ಜನರ ನಡುವೆ ತಮ್ಮ ಗೌರವ ಹೆಚ್ಚಿಸಿಕೊಂಡರು.

ವಿಷಯ ತಿಳಿದ ನಾಗಮ್ಮನ ಮುಖ ಕಂದಿ ಹೋಯಿತು. ಬೇವಿನ ಮರ ಕಡಿಯೋ ಸುದ್ದಿ, ಮರಕ್ಕಿಂತ ಮರದಲ್ಲಿರುವ ಕಾಗೆಗಳ ಬಗ್ಗೆ ಹೆಚ್ಚು ನೋವಾಯಿತು. ಮರ ಕಡಿದ್ರೆ ಕಾಗೆಗಳು ಎಲ್ಲಿಹೋಗಬೇಕು, ಮರಿ ಮೊಟ್ಟೆ ಇದ್ದರೆ ಹೇಗೆ, ಯಾಕೋ ಇದು ಸರಿಯಿಲ್ಲ ಎನಿಸಿ ಆ ರಾತ್ರಿ ಗೋವಿಂದಪ್ಪನ ಮನೆಗೆ ಹೋದಳು.

"ಅಲ್ಲಪ್ಪಾ ಆ ಮರ ನೂರಾರು ವರುಷಗಳಿಂದ ಇದೆ, ಒಂದು ಕೊಂಬೆ ಬಿದ್ದಿಲ್ಲಾ, ಅದು ಊರಿಗೆ ಒಂದು ಭೂಷಣ, ಅದನ್ನು ಕಡಿಯೋ ಬದಲು ನಿಮ್ಮ ಭವನಾನ ಬೇರೆ ಕಡೆ ಕಟ್ಟಿಸೋಬೋದಲ್ಲ" ಎಂದಳು

ಗೋವಿಂದಪ್ಪ "ಊರಿನ ಮುಖಂಡರ ತೀರ್ಮಾನ ನಾಗಮ್ಮ, ನನಗೆ ಗೊತ್ತು ನಿನಗೆ ಕಾಗೆಗಳ ಜೊತೆ ಇರುವ ಬಾಂದ್ಯವ್ಯ, ನೀನು ಅನ್ನ ಹಾಕ್ತಾ ಇದ್ರೆ ಅವು ಎಲ್ಲಿದ್ದರೂ ಬರತಾವೆ, ಚಿಂತ್ಯಾಕೆ ಮಾಡಿತಿ, ನೀನೇನು ಇಲ್ಲೇ ಇರೋದಿಲ್ವಾ, ಅವು ಪ್ರಕೃತಿ ನಾಗಮ್ಮ ಅವುಗಳಿಗೆ ಗೊತ್ತು ಹೇಗೆ ಬದಕಬೇಕು ಅಂತ, ಭವನ ಗುಡಿ ಪಕ್ಕ ಕಟ್ಟಿದ್ದ್ರೇನೇ ಅನುಕೂಲ, ರಾತ್ರಿಹೊತ್ತು ಜನ ಇರಬೇಕಾಗುತ್ತಲ್ವಾ," ಎಂದು ಅದೂ ಇದೂ ಹೇಳಿ ಸಾಗ ಹಾಕಿದ. ಭವನದ ಹಣದಲ್ಲಿ ನಿಮಗೆ ಸ್ವಲ್ಪ ಕಮಿಷನ್ ಸಿಗುತ್ತೆ ಎಂದು ಶಾಸಕರು ಊರಿನ ಬೇರೆ ಜನರನ್ನು ಹೊರಗಡೆ ಕಳುಹಿಸಿ ಗೋವಿಂದಪ್ಪನ ಹತ್ತಿರ ಪಿಸು ಮಾತಿನಲ್ಲಿ ಹೇಳಿದ್ರು.

ಮರುದಿನ ಕಾಗೆಗಳಿಗೆ ಅನ್ನ ಹಾಕುತ್ತ " ತಗಲಿ, ನಿಮ್ಮ ನನ್ನ ಋಣ ತೀರಿತೂ ಅನ್ಸುತ್ತೆ, ಕ್ರಮೇಣ ನೀವು ಇಲ್ಲಿ ಬರೋದು ಕಡಿಮೆ ಮಾಡಬೇಕು" ಎಂದು ಕಣ್ಣೀರಾದಳು. ತಲೆ ಎತ್ತಿ ಬೇವಿನ ಮರದ ಕಡೆ ನೋಡಿದಳು, ಯಾವ ನನಪ್ಪ ಬೆಳ್ಸಿದ್ನೋ ಏನೋ, ಸ್ವರ್ಗದಲ್ಲಿ ನಿನ್ನ ಹೊಟ್ಟೆ ತಣ್ಣಿಗಿರಲಿ, ಈ ಜನರ ಮನಸು ಬದ್ಲಾಗಲಿ' ಎಂದುಕೊಂಡಳು.

ಕಾಗೆಗಳು ತಮ್ಮ ಪಾಡಿಗೆ ತಾವು ಅಣ್ಣ ಮುಕ್ಕುತ್ತಿದ್ದವು.

ನಾಗಮ್ಮ ರಮೇಶನಿಗೆ ವಿಷಯ ತಿಳಿಸಿ ಮತ್ತೆ ಕಣ್ಣೀರಾದಳು. " ಬಿಡಮ್ಮ ನೀನೇನೋ ಮಾಡೋಕಾಗುತ್ತೆ, ಸವಾಸಾನೇ ಬೇಡ ಇಲ್ಲಿಗೆ ಬಂದುಬಿಡು" ಎಂದು ಸಮಾಧಾನ ಮಾಡಿದ. ನಾಗಾಮ್ಮ ಸುಮ್ಮನೆ ಫೋನ್ ಇಟ್ಟಳು.

ಊರ ಜನ ಎಲ್ಲ ಸೇರಿ ಉತ್ಸಾಹದಿಂದ ನಾಗರ ಕಲ್ಲುಗಳನ್ನು ಬೇರೆ ಕಟ್ಟೆಗೆ ರವಾನಿಸಿದರು. ಕಟ್ಟೆಯ ಸುತ್ತಲಿನ ಬಂಡೆಗಳನ್ನು ತೆಗೆದು ಒಂದು ಕಡೆ ರಾಶಿ ಹಾಕಿದರು. ಮಣ್ಣನ್ನು ಅಗೆದು ಸಾಗಿಸಿದರು. ಕಟ್ಟುವುದಕ್ಕಿಂತ ಒಡೆಯುವುದೇ ಸುಲಭ, ಜನಕ್ಕೆ ಅದೇ ಖುಷಿಯ ಸಂಗತಿ. ಬೇಗ ಆಗುವ ಕೆಲಸ.

ಈ ಮದ್ಯೆ ಗೋವಿಂದಪ್ಪ ಶಾಸಕರನ್ನು ಕಾಣಲು ಹೋಗಿ ವಿಷಯ ತಿಳಿಸಿದರು " ಗುಡ್, ಮುಖ್ಯ ಮಂತ್ರಿಗಳ ಹತ್ತಿರ ಮಾತನಾಡಿದ್ದೇನೆ, ವಾರದೊಳಗೆ ಹಣ ಬಿಡುಗಡೆ ಆಗುತ್ತೆ" ಎಂದರು.

ವಾರ, ತಿಂಗಳಾಗಿ ಚುನಾವಣೆಯ ದಿನ ಹತ್ತಿರ ಬಂತು. ಶಾಸಕರು ಊರಿಗೆ ಮತ ಕೇಳಲು ಬಂದರು. ಊರಿನ ಜನ "ಸಮುದಾಯ ಭವನ ಸಮುದಾಯ ಭವನ" ಎಂದು ಕೂಗುತ್ತಿದ್ದರು. "ನೋಡಿ ಇನ್ನೂ ಮರ ಅಲ್ಲೇ ಇದೆ, ನಾನು ಎಲ್ಲ ತೆಗೆದಮೇಲೆ ಹೇಳಿ ಹಣ ಬಿಡುಗಡೆ ಮಾಡ್ಸತೇನೆ ಅಂತ ಹೇಳಿದ್ದೆ, ಮೊದಲು ಆ ಕೆಲಸ ಮಾಡಿ ನನಗೆ ತಿಳಿಸಿ" ಎಂದು ಪಕ್ಕದ ಊರಿಗೆ ಹೊರಟರು. ಹೋಗುವ ಮೊದಲು ಗೋವಿಂದಪ್ಪನನ್ನು ಪಕ್ಕಕ್ಕೆ ಕರೆದು " ಓಟು ಬೇರೆ ಕಡೆ ಹೋಗದಂಗೆ ನೋಡಕೋಬೇಕು, ಮತ್ತೆ ನಮ್ಮ ಸರ್ಕಾರನೇ ಬರೋದು ಅಂತ ಸರ್ವೇ ಹೇಳ್ತಾ ಇದೆ, ನಿಮ್ಮನ್ನು ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಮಾಡಬೇಕು ಅಂದುಕೊಂಡಿದ್ದೇನೆ, ಸಲ್ಪ ನೋಡಿಕೊಳ್ಳಿ' ಎಂದರು.

ಮರುದಿನ ಜನರನ್ನು ಸೇರಿಸಿ, ಮರದ ಕೊಂಬೆಗಳನ್ನೆಲ್ಲಾ ಕಡಿಸಿ, ಬೇರಿನ ಸುತ್ತ ಅಗೆದು ಬೇರನ್ನು ಎತ್ತಿದರು. ವರುಷಗಳಿಂದ ಬೀಗುತ್ತಿದ್ದ ಮರ ಒಂದು ದಿನದಲ್ಲಿ ಮಾಯವಾಯಿತು. ಇದ್ದಕಿದ್ದ ಹಾಗೆಯೇ ಊರಿನ ಜನಕ್ಕೂ ಬೇಸರವಾಗತೊಡಗಿತು. ಏನನ್ನೋ ಕಳೆದುಕೊಂಡ ಹಾಗಾಯಿತು. ನಾಗಮ್ಮ ಮೌನವಾಗಿ ಎಲ್ಲ ನೋಡುತ್ತಿದ್ದಳು. ಕೊಂಬೆ ಕತ್ತರಿಸ ತೊಡಗಿದಮೇಲೆ, ಕಾಗೆಗಳಲೆಲ್ಲವೂ ಕಾವ್ ಕಾವ್ ಎಂದು ಹಾರಿ ಹೊರಟವು. ನಾಗಮ್ಮನಿಗೆ ಅವುಗಳ ಕೂಗು ಅಳು ಎಂಬಂತೆ ಕೇಳಿಸಿತು. ಕೆಲವು ಕಾಗೆಗಳು ಎಲ್ಲಿ ಹೋಗಬೇಕೋ ತಿಳಿಯದೆ ಅಲ್ಲೇ ಸುತ್ತುತ್ತಾ ಮನೆಗಳ ಮೇಲೆ ಕುಳಿತು ಕಾವ್ ಕಾವ್ ಎನ್ನತೊಡಗಿದವು. ಕೆಲವು ಕಾಗೆಗಳು ನಾಗಮ್ಮನ ಮನೆಯ ಹತ್ತಿರ ಬಂದು ಕುಳಿತು ಮೌನವಾಗಿ ಕುಳಿತಿದ್ದ ನಾಗಮ್ಮನ ಮುಖ ನೋಡುತ್ತಾ ಕಾವ್ ಕಾವ್ ಎನ್ನುತ್ತಿದ್ದವು, ಅವು ನಾಗಮ್ಮನ ಸಹಾಯ ಬೇಡುತ್ತಿರುವಂತೆ ಕಂಡಿತು. ಕೊನೆಗೂ ಅಸಹಾಯಕತೆಯಿಂದ ಎಲ್ಲ ಕಾಗೆಗಳೂ ಹಾರಿ ಕಣ್ಮರೆಯಾದವು.

ಮರುದಿನ ನಾಗಮ್ಮ ಮನೆಯಿಂದ ಹೊರಗಡೆ ಬರಲಿಲ್ಲ, ಮೂರುದಿನ ಆದಮೇಲೆ ಜನ ಬಾಗಿಲು ಹೊಡೆದರು.

ಶಾಸಕರು ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಸೋತುಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.