ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಜಗದೀಶ್ ಅವರ ಕಥೆ: ‘ಲಘುತಮ ಸಾಮಾನ್ಯ ಅಪ–ವರ್ತನ’

Last Updated 18 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನನಗೆ ಈಗಲೂ ಅವಳ ಮುಖ ಕಣ್ಣ ಮುಂದೆ ಬರುತ್ತದೆ. ಅವಳು ಅಂದಿಗೇ ಮುಪ್ಪಾನು ಮುದುಕಿ ಎನಿಸಿಕೊಂಡವಳು. ಆದರೆ ಈಗ ಅವಳ ವಯಸ್ಸನ್ನು ಅಂದಾಜಿಸುವಾಗ ನಗು ಬರುತ್ತದೆ ನನಗೆ. ಪಾಪ ಆಗ ಅವಳಿಗೆ ಹೆಚ್ಚೆಂದರೆ ನಲವತ್ತರ ಆಸುಪಾಸು ಇದ್ದೀತು. ಹನ್ನೆರಡರ ವಯಸ್ಸಿಗೆ ಮದುವೆಯಾಗಿ ಇಪ್ಪತ್ತೈದರ ಹೊತ್ತಿಗೆಲ್ಲ ನಾಲ್ಕು ಮಕ್ಕಳ ತಾಯಿಯಾಗಿ, ವಿಧವೆಯೂ ಆಗಿದ್ದ ಅವಳು ಅಕಾಲ ವೃದ್ಧಾಪ್ಯವನ್ನ ಹೆಗಲ ಮೇಲೆ ಏರಿಸಿಕೊಂಡದ್ದಿರಬೇಕು. ಬೋಳು ಹಣೆ, ಕೋಲು ಮುಖ, ಸದಾ ನೆತ್ತಿಯ ಮೇಲಿಂದ ಇಳಿಬಿದ್ದಿರುತ್ತಿದ್ದ ಸೆರಗು, ಅಲಂಕಾರವೆಂದರೆ ಏನು ಎಂದೇ ತಿಳಿಯದ ವೇಷಭೂಷಣ... ಅವಳ ನೈಜ ವಯಸ್ಸಿಗೆ ಮತ್ತಷ್ಟು ವಯಸ್ಸನ್ನು ಕೂಡಿಸಿಕೊಟ್ಟಿತ್ತು. ಆದರೆ ಕೂಸೊಂದನ್ನು ಸಲೀಸಾಗಿ ಭೂಮಿಗೆ ತರುವ ಸೂಲಗಿತ್ತಿ ಕೆಲಸವನ್ನು ಅವಳ ಅದು ಎಲ್ಲಿ ಯಾವಾಗ ಕಲಿತಳೋ ಗೊತ್ತಿಲ್ಲ. ಅವಳ ನಲವತ್ತು ನಲವತ್ತೈದರ ಆಸುಪಾಸಿಗೆಲ್ಲ, ನೂರಾರು ಮಕ್ಕಳ ಹೆರಿಗೆ ಮಾಡಿಸಿ ಸುತ್ತೂರಿಗೆಲ್ಲ ಹೆಸರಾಗಿದ್ದಳು. ಒಂದಾನೊಂದು ಎನ್ನಬಹುದಾದ ಆ ಕಾಲದಲ್ಲಿ, ಹಳ್ಳಿಗಳಲ್ಲಿ ಇಂದಿನಷ್ಟು ಸೌಕರ್ಯವಿರುತ್ತಿರಲಿಲ್ಲ. ಪಕ್ಕದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಲಿಕ್ಕೂ ಚಕ್ಕಡಿ ಗಾಡಿ ಕಟ್ಟಬೇಕು. ಹೊತ್ತಲ್ಲದ ಹೊತ್ತಿನಲ್ಲಿ ದಿನ ತುಂಬಿದ ಬಸುರಿ ಬಾಣಂತಿಯರನ್ನ ಚಕ್ಕಡಿ ಗಾಡಿಯ ಮೇಲೆ ಕರೆದುಕೊಂಡು ಹೋಗುವುದೂ ಕಷ್ಟವೇ. ಯಾವುದಾದರೂ ಗುಣಿ ತಗ್ಗಿಗೆ ಚಕ್ರ ಇಳಿದು ಅದರ ಧಡಕಿಗೆ ಪ್ರಸವವೇ ಆಗಿಬಿಟ್ಟರೆ ಎನ್ನುವ ಭಯ. ಅಂತಹ ಸಂದಿಗ್ಧ ಸಂದರ್ಭಕ್ಕೆ ಆಪತ್ಕಾಲದ ಬಂಧುವಿನಂತೆ ನೆರವಾಗಿ ನಿಲ್ಲುತ್ತಿದ್ದವಳೇ ಇವಳು...

ನನ್ನ ಬಾಲ್ಯದ ಒಂದು ದಿನ ಇವಳು ಬೆಳ್ಳಂ ಬೆಳಗ್ಗೆ ಮನೆಗೆ ಓಡೋಡಿ ಬಂದಿದ್ದಳು. ಇವಳ ಹೆಜ್ಜೆ ಸಪ್ಪಳಕ್ಕೆ ನಾನು ನಿದ್ದೆಯಿಂದ ಎಚ್ಚೆತ್ತಿದ್ದೆ. ಕಣ್ಣುಜ್ಜಿಕೊಳ್ಳುತ್ತಾ ಏನಾಗುತ್ತಿದೆ ಎಂದು ಗಮನಿಸುವ ಹೊತ್ತಿಗೆ ಇವಳು ಲಗುಬಗೆಯಿಂದ, ‘ಏ ಗಂಗವ್ವ ಅದ್ಯಾಕವ ಅಷ್ಟು ಸಂಕ್ಟ ಪಡ್ತಿ... ಜೋರಾಗಿ ಒಂದ್ಸಾರಿ ಕೂಸಿನ್ನ ದಬ್ಬಬಾರ್ದಾ... ಜೋರಾಗಿ ತಿಣಕವ್ವಾ...’ ಅಂತ ಸಮಾಧಾನದ ಮಾತಾಡ್ತಾ ಇದ್ದದ್ದು ಕೇಳಿ ನನ್ನ ನಿದ್ದೆ ಹಾರಿಹೋಗಿತ್ತು. ಇಳಿ ಬಿಟ್ಟಿದ್ದ ತೆರೆ ಸರಿಸಿ, ಕಳ್ಳಬೆಕ್ಕಿನ ಹಾಗೆ ನೋಡಿದವಳಿಗೆ ಕಂಡಿದ್ದು ಭಯಂಕರ ದೃಷ್ಯ. ನಾನು ನಡುಗಿ ಹೋಗಿದ್ದೆ. ನನ್ನನ್ನು ಕಂಡವಳೇ ‘ಏ ಓಗ್ತಿಯಿಲ್ಲೇ ಹೊರಕ್ಕೆ... ಅದ್ಯಾವಳವಳು...’ ಎಂದು ಅವಳು ಗದರಿದ ಕೂಡಲೇ, ನಾನು ಹೊರಗೋಡಿದ್ದೆ. ಪಕ್ಕದ ಗುಡಿಯಲ್ಲಿ ಕಂಗಾಲಾಗಿ ಕೂತಿದ್ದ ನನ್ನನ್ನು ಮೀನಾಕ್ಷಕ್ಕ ಬಂದು ಮಾತಾಡಿಸಿದ್ದಳು. ನನ್ನ ಭಯ ಗಾಬರಿಯನ್ನೆಲ್ಲ ಅವಳಲ್ಲಿ ಒಮ್ಮೆಲೆ ಹೇಳಿಕೊಳ್ಳುವ ತವಕದಲ್ಲಿದ್ದ ನನಗೆ ಅವಳು ಹೇಳಿದ್ದು ಕೇಳಿ ಅಳುವೇ ಬಂದಿತ್ತು. ‘ನಿಮ್ಮ ಮನೆಗೆ ಹೊಸ ಪಾಪು ಬರ್ತಿದೆ ಕಣೇ, ಇನ್ಮೇಲೆ ಎಲ್ಲರು ಆ ಪಾಪೂನೇ ಪ್ರೀತಿಸ್ತಾರೆ, ನಿನ್ನನ್ನು ಯಾರೂ ಮೂಸಿ ನೋಡಲ್ಲ ಗೊತ್ತಾ...’ ಎಂದು ಮೂತಿ ಚೂಪು ಮಾಡಿ ಹೇಳಿದ್ದಳು. ಅದನ್ನೇ ನಂಬಿದ ನಾನು ಏನೊಂದೂ ತೋಚದೆ ಗುಡಿಯ ಹಿಂದೆ ಹೋಗಿ ಕೂತಿದ್ದೆ. ಒಬ್ಬಳೇ ಕೂತು ಅತ್ತೂ ಅತ್ತೂ ಕಣ್ಣು ಊದಿಸಿಕೊಂಡಿದ್ದೆ. ಹೊತ್ತು ಕಳೆದದ್ದು ತಿಳಿಯಲಿಲ್ಲ. ಬಹಳ ಹೊತ್ತಾದ ಮೇಲೆ ಮನೆಗೆ ಮರಳಿದ್ದೆ. ಬಂದಾಗ ನೋಡಿದರೆ ಮನೆಯ ಚಿತ್ರಣವೇ ಬದಲಾಗಿತ್ತು. ಬಾಗಿಲಲ್ಲೆ ಅವಳು ಎಲೆ ಅಡಿಕೆ ಮುದುರಿ ಸಣ್ಣ ಚಿಟಿಕೆಯಷ್ಟು ಸುಣ್ಣ ಹಚ್ಚಿಕೊಂಡು ಎಡ ದವಡೆಗೆ ಒತ್ತಿಕೊಳ್ಳತೊಡಗಿದ್ದಳು. ನನ್ನನ್ನು ಕಂಡವಳೆ ‘ಎಲ್ಲಿ ಹೋಗಿದ್ಯೇ ಪಾಪಿ... ತಮ್ಮನ್ನ ನೋಡಲ್ಲೇನೇ...’ ಎಂದಳು. ನಾನು ಏನೊಂದು ಮಾತಾಡದೇ ಮೆಲ್ಲಗೆ ನಡೆಯುತ್ತಾ ಒಳ ಬಂದಾಗ ಅಮ್ಮನ ನಗು ಮುಖ ಕಂಡು ಎಂಥದೋ ನಿರಾಳತೆ ಆವರಿಸಿತು. ತಮ್ಮ ನಿರುಮ್ಮಳವಾಗಿ ಮಲಗಿದ್ದ.

ಅವಳು ಮಾತ್ರ ತನ್ನದೇ ಲೋಕಕ್ಕೆ ಮಾತ್ರ ತಾನು ಸ್ವಂತವೆನ್ನುವವಳಂತೆ, ತನ್ನ ಲೋಕದಲ್ಲೇ ತಾನು ವಿಹರಿಸುತ್ತಾ ತಾನು ಭೂಮಿಗೆ ತಂದ ಮಕ್ಕಳ ಸಂಖ್ಯೆಗೆ ಹೊಸದಾಗಿ ಒಂದನ್ನು ಕೂಡಿಸಿಕೊಂಡು ಎದ್ದು ಮನೆ ಕಡೆ ಹೊರಟಿದ್ದಳು. ಅಂತಹ ಆ ಅವಳು ಯಾವಾಗ ಹಳ್ಳಿಗೆ ಹೋದರೂ ಹಳ್ಳಿಯ ಯಾವುದೋ ಒಂದು ಮೂಲೆಯಲ್ಲಿ ಕತೆ ಹೇಳುತ್ತಾ ಇರುವವಳಾಗಿ ಕಾಣ ಸಿಗುತ್ತಿದ್ದಳು. ಅವಳಲ್ಲಿ ಅದೆಷ್ಟೋ ಹೆರಿಗೆ ಮಾಡಿಸಿದ ಕತೆಗಳು ಕಾವಿಗೆ ಕೂತಿರುತ್ತಿದ್ದವು. ಅವನ್ನೆಲ್ಲಾ ಅದೆಷ್ಟು ರೋಚಕವಾಗಿ ವರ್ಣಿಸುತ್ತಿದ್ದಳು ಅವಳು ಎಂದರೆ ಕೇಳುವವರು ಊಟ-ನಿದ್ರೆ, ಕೆಲಸ ಬೊಗಸೆ ಬಿಟ್ಟು ಕೇಳಬೇಕು ಅಷ್ಟು ವೈನಾಗಿ. ಅವಳಿಗೆ ಯಾವ ಬಸುರಿಗೆ ಯಾವಾಗ ಹೆರಿಗೆಯಾಗುತ್ತದೆ, ಈ ಬಾರಿ ಎಂಥ ಮಗು ಹುಟ್ಟುತ್ತದೆ, ಹುಟ್ಟಿದ ಮಗುವಿನ ಹಿಂದೆ ಎಂತಹ ಮಗು ಹುಟ್ಟುತ್ತದೆ ಎಂದೆಲ್ಲಾ ತಿಳಿದಿಬಿಡುತ್ತಿತ್ತು. ಅವಳೇನೂ ವೈದ್ಯ ಓದಿದವಳಲ್ಲ. ಅನುಭವದಿಂದ ಕಲಿತವಳು. ಅವಳ ಮಾತೆಂದರೆ ಸಾಕು ಎಲ್ಲರಿಗೂ ವೇದವಾಕ್ಯ. ಅವಳ ಕೈಗಳು ರಕ್ತದ ಕಲೆಗಳಿಗೆ ಎಷ್ಟು ಪರಿಚಿತವೋ ಹಸುಗೂಸಿನ ಸ್ಪರ್ಶಕ್ಕೂ ಅಷ್ಟೇ ಪರಿಚಿತ. ಅವಳ ನಿರ್ವಿಕಾರ ಮನಸ್ಥಿತಿಗೆ ಯಾರಾದರೂ ಅಚ್ಚರಿಪಡಲೇಬೇಕು. ಒರಟು ಮತ್ತು ಮೃದುತನಗಳ ಸಾಕಾರ ಮೂರ್ತಿ ಅವಳು. ನಯವಾಗಿ ಗರ್ಭದ ಬಾಗಿಲ ಬಡಿದು ಕೂಸನ್ನು ಹೊರತರುವುದು ಅವಳಿಗೆ ನೀರು ಕುಡಿದಷ್ಟೇ ಸಲೀಸು. ಗರ್ಭಗುಡಿಯಲ್ಲಿ ಕುಳಿತಿರುವ ಬಸವಣ್ಣನಿಗೆ ಎಷ್ಟು ನಿಷ್ಟೆಯಿಂದ ನಡೆದುಕೊಳ್ಳುತ್ತಾಳೋ, ಪ್ರತಿ ಗರ್ಭದೊಳಗೆ ಕೈ ಹಾಕುವಾಗುವಾಗಲೂ ಅದೇ ಭಕ್ತಿ ಅವಳ ಅಂತರಂಗದಲ್ಲಿರುತ್ತಿತ್ತು. ಕೂಸು ಹುಟ್ಟಿದ ಮೇಲೆ ಗರ್ಭದಿಂದ ಕಸವನ್ನೆಲ್ಲಾ ಹೊರತೆಗೆದು ಸ್ವಚ್ಛಮಾಡಿ ಸೊಂಟ ಬಿಗಿಯುವ ಅವಳ ಚಾತುರ್ಯಕ್ಕೆ ಯಾರಾದರೂ ತಲೆ ಬಾಗಲೇಬೇಕಿತ್ತು. ಜನರಂತೂ ಅವಳಿಗೆ ಕೈಯೆತ್ತಿ ಮುಗಿಯುತ್ತಿದ್ದರು. ಅವಳಿಗಾಗಿ ಏನನ್ನಾದರೂ ನೀಡಲು ಸಿದ್ಧವಿರುತ್ತಿದ್ದರು. ಆದರೆ ಅವಳಂತೂ ಸಣ್ಣದೊಂದು ಕಿಮ್ಮತ್ತನ್ನು ಹೊರತುಪಡಿಸಿ ಮತ್ತೇನಕ್ಕೂ ಎಂದೂ ಆಸೆ ಪಟ್ಟವಳೇ ಅಲ್ಲ. ಗರ್ಭದಿಂದ ಮಗುವನ್ನ ಭೂಮಿಗೆ ತರುವುದು ಒಂದು ಪುಣ್ಯದ ಕೆಲಸ. ಅದಕ್ಕೆ ಹಣ ಪಡೆದುಬಿಟ್ಟರೆ ಪುಣ್ಯಕ್ಕೇ ಮುಕ್ಕು ಎಂಬುದವಳ ಬಲವಾದ ನಂಬಿಕೆ. ಅವಳ ಇಂತಹ ನಿಸ್ವಾರ್ಥ ಸೇವೆಯಿಂದಾಗಿಯೇ ಜನ ಅವಳನ್ನು ಮೆಚ್ಚುತ್ತಿದ್ದದ್ದು, ನೆಚ್ಚುತ್ತಿದ್ದದ್ದು. ಕೂಸು ಹುಟ್ಟಿದ ನಂತರ ಬಾಣಂತಿ, ಮಗುವಿನ ಆರೈಕೆಯಲ್ಲೂ ಅವಳ ಹಾಜರಿ ತಪ್ಪದೇ ಬೀಳುತ್ತಿತ್ತು.

ಹಾಗಂತ ಅವಳ ಬದುಕು ಸುಗಮವಾಗಿತ್ತು ಎಂದು ಹೇಳಲು ಸಾಧ್ಯವಿರಲಿಲ್ಲ. ಆದರೆ ಯಾವ ದೊಡ್ಡ ಆಘಾತಗಳಿಲ್ಲದೆ ನಡೆದು ಬಂತು ಅನ್ನಲಿಕ್ಕೆ ಅಡ್ಡಿಯೂ ಇರಲಿಲ್ಲ. ಅವಳ ಎರಡನೆ ಮಗ, ಬಸವಣ್ಣನ ಗುಡಿಯಲ್ಲಿ ಪೂಜಾರಿಯಾಗಿದ್ದ. ಹಿರೀ ಮಗ ಇದ್ದ ಎರೆಡೆಕರೆ ಜಮೀನಿನ ಉಳುಮೆ ಮಾಡಿಕೊಂಡಿದ್ದ. ಮಗಳು ಗಂಡನ ಮನೆಯಲ್ಲಿ ಒಂದಷ್ಟು ವರ್ಷ ಸುಖವಾಗೇ ಜೀವನ ಮಾಡಿದ್ದಳು. ಆದರೆ ಆ ಸುಖ ಶಾಶ್ವತವಾಗುಳಿಯಲಿಲ್ಲ. ಆಗ ಮಾತ್ರ ಇವಳು ಒಂದಷ್ಟು ದಿನ ಕುಸಿದೇ ಹೋಗಿದ್ದಳು. ತನ್ನ ದುರಾದೃಷ್ಟವೇ ತನ್ನ ಮಗಳಿಗೂ ಬಡಿಯಿತಲ್ಲ ಎನ್ನುವ ಸಂಕಟ ಅವಳನ್ನು ಇನ್ನಿಲ್ಲದಷ್ಟು ಸೊರಗಿಸಿತ್ತು. ನಂತರ ತಾನೇ ಕುಸಿದರೆ ಮಗಳ ಪಾಡೇನು ಎಂದು ಅರಿತವಳೇ, ತಾನೂ ಎದ್ದು ಮಗಳನ್ನೂ ಧೈರ್ಯವಾಗಿ ಬದುಕುವಂತೆ ಮಾಡಿದ್ದಳು. ಇದ್ದುದರಲ್ಲೇ ಕೊನೆಯ ಮಗ ಹಾಗೂ ಹೀಗೂ ಓದಿ, ಡಿಗ್ರಿ ಮಾಡಿಕೊಂಡು ಯಾವುದೋ ಆಫೀಸೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಬದುಕು ಹೇಗೆ ಬಂದರೂ, ಹೆದರಿಸಲು ನೋಡಿದರೂ ಎದೆಗುಂದದೆ ಎದುರಿಸಿ ಹೋರಾಡುತ್ತಾ ಹೋರಾಡುತ್ತಾ ಯಾವಾಗ ಮುಪ್ಪು ಅವಳ ಮೈಯಪ್ಪಿತೋ ಅವಳಿಗೇ ತಿಳಿಯಲಿಲ್ಲ.

ನಿಧಾನವಾಗಿ ಕಾಲವೂ ಬದಲಾಯಿತು. ಊರೂರಿಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದವು. ವೈದ್ಯರುಗಳೂ ಸುಲಭವಾಗಿ ಸಿಗಹತ್ತಿದ ಮೇಲಂತೂ ಜನ ಇವಳನ್ನು ಮರೆಯತೊಡಗಿದರು. ಗುಳಿಗೆ ನುಂಗಿದರೆ ಗಳಿಗೆಯಲ್ಲೆ ನೋವು ಮಾಯವಾಗುವಾಗ ಇವಳ ನಾಟಿ ವೈದ್ಯವನ್ನು ನೆಚ್ಚಿಕೊಳ್ಳುವವರಾದರೂ ಯಾರು... ಅಲ್ಲದೆ ಈಗಿನ ಜನಕ್ಕೆ ಓದಿದ ಡಾಕ್ಟರುಗಳ ಮೇಲೆ ಇರುವಷ್ಟು ಭರವಸೆ ಇಂತಹ ಓದದ ಸೂಲಗಿತ್ತಿಯರ ಬಗ್ಗೆ ಹೇಗೆ ತಾನೆ ಬಂದಾತು. ಕ್ರಮೇಣ ಜನ ಇವಳನ್ನು ಮರೆಯತೊಡಗಿದರು. ಅವಳೂ ಮುಪ್ಪಿನೊಂದಿಗೆ ಹೆಜ್ಜೆ ಹಾಕುತ್ತಾ ಬಾಯಿ ಮಾತಿನ ಉಪದೇಶಗಳಿಗೆ ಸೀಮಿತವಾಗತೊಡಗಿದಳು...

ಈಗಂತೂ ಅವಳಿಗೆ ಎಂಭತ್ತರ ಆಸುಪಾಸು. ಆದರೂ ಸುಮ್ಮನೇ ಮೂಲೆಯಲ್ಲಿ ಬಿದ್ದಿರುವವಳಲ್ಲ. ಮಕ್ಕಳು ಸೊಸೆಯಂದಿರು ಎಷ್ಟೇ ಹೇಳಿದರೂ ಕೇಳದೆ ಹೊಲಕ್ಕೆ ಹೋಗುತ್ತಾಳೆ. ಏನೋ ತನಗೆ ಆದಷ್ಟು ಸಣ್ಣ ಪುಟ್ಟ ಕೆಲಸ ಮಾಡುತ್ತಾಳೆ. ಹೊತ್ತು ಇಳಿದ ಮೇಲೆ ಮನೆ ಸೇರುತ್ತಾಳೆ. ಇದು ಅವಳ ದಿನಚರಿ. ಅದೊಂದು ದಿನ ಹೀಗೆ ಸೊಸೆ ಎಷ್ಟು ಹೇಳಿದರೂ ಕೇಳದೆ ಹೊಲಕ್ಕೆ ಹೋಗಿದ್ದಾಳೆ. ಒಂದಷ್ಟು ಹೊತ್ತು ಕಳೆ ಕಿತ್ತಿದ್ದಾಳೆ. ನಂತರ ಸ್ವಲ್ಪ ಹೊತ್ತು ದಣಿವಾರಿಸಿಕೊಳ್ಳಲೆಂದು ಬದುವಿನ ಹೊಂಗೆ ಮರದಡಿ ಮಲಗಿದ್ದಾಳೆ. ಇನ್ನೇನು ಕಣ್ಣು ಮುಚ್ಚಿದ್ದಳೋ ಇಲ್ಲವೋ, ಯಾರೋ ಬಂದು ಮೈ ಮುಟ್ಟಿದಂತಾಗಿದೆ ಅವಳಿಗೆ. ಯಾರು ಎಂದು ನೋಡುವಷ್ಟರಲ್ಲೇ ಅದೆಲ್ಲಿಂದ ಬಂದಿದ್ದನೋ ಖದೀಮನೊಬ್ಬ ಅವಳ ಮೇಲೆರಗಿ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾನೆ. ಮೈಯಲ್ಲಿ ಕಸುವಿಲ್ಲದ ಮುಪ್ಪಾನು ಮುದುಕಿ ಜೋರಾಗಿ ಕೂಗಲೂ ಆರಳು... ನೋವಿನಲ್ಲಿ ಒದ್ದಾಡುತ್ತಾ ನರಳಿದಳು ಮಾತ್ರ. ರಕ್ತದ ಮುಡುವಿನಲ್ಲಿ ಬಿದ್ದಿದ್ದವಳನ್ನ ಎಷ್ಟೋ ಹೊತ್ತಿನವರೆಗೂ ಯಾರೂ ನೋಡಲೇ ಇಲ್ಲ. ಅಷ್ಟು ಹೊತ್ತಿಗೆಲ್ಲಾ ಅವಳು ಪ್ರಜ್ಞೆ ಕಳೆದುಕೊಂಡಿದ್ದಳು. ಅವಳನ್ನು ಆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಜನರಿಗೆ ದಿಗ್ಭ್ರಮೆಯಾಗಿಬಿಟ್ಟಿತ್ತು. ತನ್ನಿಡೀ ಬದುಕನ್ನೇ ಸೂಲಗಿತ್ತಿಯ ಕೆಲಸಕ್ಕೆ ಮುಡಿಪಾಗಿಟ್ಟ ಇವಳಿಗಾ ಹೀಗೆ ಆಗೋದು! ಎನ್ನುವ ವಿಪರ್ಯಾಸ ಒಂದು ಕಡೆ ಆದರೆ ಈ ವಯಸ್ಸಿನಲ್ಲಿ ಹೇಗಾದರೂ ಈ ದೈಹಿಕ ಮತ್ತು ಮಾನಸಿಕ ಆಘಾತವನ್ನ ಸಹಿಸಿಯಾಳು ಎನ್ನುವುದು ಮತ್ತೊಂದು ಕಡೆ... ‘ಯಾರವ್ವಾ ಹಿಂಗ್ ಮಾಡಿದ್ದು’ ಎಂದು ಜನ ಕೇಳಿದರೆ ಅವಳಿಗೆ ಏನೂ ಅರಿವಿಲ್ಲ, ‘ಯಾರೋ ಏನೋ ನಾ ಕಾಣೆನಪ್ಪಾ... ಹಿಂಗ್ ಮಾಡಿ ಹೋಗ್ಬುಟ್ಟಾ... ಎತ್ತಿಂದ ಬಂದನೋ ಎತ್ತ ಓದನೋ ಒಂದೂ ಕಾಣ್ಲಿಲ್ಲ... ಕಣ್ ಬೇರೆ ಸರಿಯಾಗಿ ಕಾಣಲ್ಲ... ನಾನೇನ್ ಮಾಡ್ಲಪ್ಪಾ...’ ಎನ್ನುತ್ತಲೇ ಮೂರ್ಛೆ ಹೋದಳು. ವಿಷಯ ಕೊರೋನಾಗಿಂತಲೂ ವೇಗವಾಗಿ ಊರೆಲ್ಲ ಹಬ್ಬತೊಡಗಿತು. ಯಾರೋ ಓಡಿ ಹೋಗಿ ಮನೆಯವರನ್ನು ಕರೆತಂದರು. ಹಡೆದ ಮಗನೇ ಅವಳನ್ನು ಕಂಡು ನೋಡಲೂ ಹೇಸಿಗೆ ಪಟ್ಟುಕೊಂಡ. ಸೊಸೆಯಂದಿರು ಅವಳನ್ನು ಸಂತೈಸುವ ಬದಲು, ‘ಎಷ್ಟು ಬೇಡ ಅಂದರೂ ಹೊಲುಕ್ ಬರ್ತಾಳೆ... ಕೊನೆಗೂ ನಮ್ ತಲೆಗೆ ತಂದ್ಲು ನೋಡು...’ ಎಂದು ಬಯ್ಯಲು ಶುರುಮಾಡಿದರು. ‘ಅಯ್ಯೋ ಏನ್ ಮಾಡಾಕಾಗ್ತತೆ... ಯಾವನೋ ತಲೆ ಮಾಸಿದವನ ಕೆಲಸಕ್ಕೆ ಆಯವ್ವ ಏನ್ ಮಾಡ್ತಾಳೆ... ನಡೀರಿ ಆಸ್ಪತ್ರೆಗೆ...’ ಅಂತ ಜನ ಜೋರು ಮಾಡಿದಾಗ ಅವಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆ ಸೇರುವ ಹೊತ್ತಿಗೆ ರಕ್ತ ಹರಿದು ಹರಿದು ನಿತ್ರಾಣಳಾಗಿಬಿಟ್ಟಿದ್ದಳು. ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದವಳು ಪ್ರಜ್ಞೆ ಬಂದಾಗ, ‘ಛೇ ಅದು ಉಳಿಯದಕ್ಕಿಂತ ಅಲ್ಲೆ ಸತ್ತಿದ್ದರೇ ಚೆನ್ನಾಗಿತ್ತು’ ಎಂದು ಮಗ ಮಾತನಾಡುತ್ತಿರುವುದನ್ನು ಕಾದ ಸೀಸದಂತೆ ಕೇಳಿಸಿಕೊಂಡಳು. ತಂದೆ ಇಲ್ಲದ ಮಕ್ಕಳನ್ನ ತಂದೆ ತಾಯಿ ಎರೆಡೂ ಆಗಿ ಬೆಳೆಸಿದ್ದಳಲ್ಲ, ಕರುಳು ಜ್ವಾಲೆಗೆ ಒಡ್ಡಿದ ಕೂದಲಿನಂತೆ ಚುರುಕ್ ಎಂದಿತು. ಅದು ಯಾವ ತಪ್ಪಿಗೆ ಅವಳು ಸಾಯಬೇಕಿತ್ತು!

ಊರೆಲ್ಲಾ ಹುಡುಕಾಡಿದರೂ ಇಂತಹ ಹಲ್ಕಾ ಕೆಲಸ ಮಾಡಿದ ಅವನ್ಯಾರೋ ಕೊನೆಗೂ ಸಿಗಲಿಲ್ಲ. ಹೈ ವೇನಲ್ಲಿ ಕೆಲಸ ಮಾಡುವವನಂತೆ. ಆ ಕಡೆಯಿಂದಲೇ ಬಂದು ಇಂಥ ಕೆಲಸ ಮಾಡಿ ಓಡಿಹೋಗಿದ್ದಾನಂತೆ ಎಂಬ ಅಂತೆಕಂತೆಗಳು ಪುಕಾರೆದ್ದವು. ಪೋಲೀಸ್ ಕಂಪ್ಲೇಂಟ್ ಕೊಡಲು ಹೋದರೂ ಕಂಪ್ಲೇಂಟ್ ಆಗಲಿಲ್ಲ. ಸುಮ್ಮನೇ ಯಾಕೆ ವಿಷಯ ದೊಡ್ಡದು ಮಾಡುವುದು! ಮತ್ತೆ ಅದೇ ದೊಡ್ಡ ನ್ಯೂಸ್ ಆಗಿ ತಲೆ ಎತ್ತಿಕೊಂಡು ಓಡಾವುದೇ ಕಷ್ಟವಾಗುತ್ತದೆ ಎಂದು ಊರಿನ ಜನ ಮಾತಾಡಿದರು. ಅದನ್ನೇ ಅನುಮೋದಿಸುವಂಥಾ ಮಾತು ಪೋಲೀಸರ ಬಾಯಿಂದಲೂ ಬಂತು. ಮನೆ ಜನಕ್ಕೆ ಅಷ್ಟು ಸಾಕಿತ್ತು. ಸುಮ್ಮನಾಗಿಬಿಟ್ಟರು. ಕೇಸನ್ನು ದರ್ಜಿಸಲೇ ಇಲ್ಲ. ಹೊಗೆಯೂ ಇಲ್ಲದಂತೆ ಬೆಂಕಿ ನಂದಿ ಹೋಯಿತು. ಆದರೆ ಅವಳಿಗೊಂದು ನ್ಯಾಯ ಕೊಡಿಸುವುದು, ಅವಳ ಬದುಕಿನ ಘನತೆಗೆ ಮುಖ್ಯ ಅಲ್ಲವಾ ಅಂತ ಯಾರೂ ಯೋಚಿಸಲಿಲ್ಲ.

ಪೋಲೀಸರಿಗೆ ಅವನ್ಯಾರು ಅಂತ ಗೊತ್ತಾಗಿದೆ. ಅವನ್ಯಾರೋ ಗಾಳಿಯಂತ್ರದ ಕೆಲಸಕ್ಕೆ ಬಂದಿರುವ ಕೆಲಸಗಾರನಂತೆ. ಗಾಳಿ ಯಂತ್ರದ ಕಡೆಯವರು ತಮಗೆ ಕೆಟ್ಟ ಹೆಸರು ಬರುತ್ತದೆ ಅಂತ ಪೋಲೀಸರಿಗೆ ದುಡ್ಡು ತಿನಿಸಿ ಕೇಸ್ ಆಗ್ದಂಗೆ ನೋಡ್ಕಂಡಿದಾರಂತೆ. ಪಾಪ ಬಡವ್ರಿಗೆ ನ್ಯಾಯ ಎಲ್ಲಿ ಸಿಗ್ತದೆ ಹೇಳಿ ಅಂತ ಆಡಿಕೊಳ್ಳುವವರೂ ಇದ್ದರು. ಮತ್ತೊಂದಷ್ಟು ಜನ ‘ಏ ಆವಜ್ಜಿ ಮಗ ಅವ್ರ ಕಡೆಯಿಂದ ದುಡ್ಡು ಇಸ್ಕಂಡಿದಾನಂತೆ ಅದ್ಕೆ ಸುಮ್ನಾಗಿರಾದು’ ಅಂತಲೂ ಆಡಿಕೊಂಡರು. ಆದರೆ ಯಾವುದಕ್ಕೂ ಪುರಾವೆ ಇರಲಿಲ್ಲ. ಇದೆ ಅಂದರೆ ಇದೆ. ಇಲ್ಲ ಎಂದರೆ ಇಲ್ಲ.

ಏನೇ ಆಗಲಿ ಅವಳ ನೋವಿಗೆ ಮುಲಾಮು ಇರಲಿಲ್ಲ. ಮೊದಲೆಲ್ಲ ಅವಳನ್ನು ಗೌರವದಿಂದ ಕಾಣುತ್ತಿದ್ದ ಜನ ಈಗ ಮುಜುಗರದಿಂದ, ಕನಿಕರದಿಂದ, ಅಸಹ್ಯದಿಂದ ನೋಡತೊಡಗಿದರು. ಬಹುಶಃ ಈ ಇಳಿ ವಯಸ್ಸಿನಲ್ಲಿ ತನ್ನ ಸುತ್ತಲಿನ ಜನರಿಂದ ಅವಳು ಏನನ್ನು ನಿರೀಕ್ಷಿಸುತ್ತಿದ್ದಳೋ ಅದು ಒಮ್ಮೆಲೆಗೆ ಇಲ್ಲವಾಗಿ ಹೋಗಿತ್ತು. ಅವಳನ್ನು ಎದುರಿಗೆ ಕಂಡರೆ ಮಾತನಾಡಿಸದೆ ಅರುಗಾಗಿ ಹೋಗುವುದು, ಕದ್ದು ಮುಚ್ಚಿ ಅವಳನ್ನು ನೋಡುವುದು, ಕೆಟ್ಟದಾಗಿ ನಗುವುದು ಮಾಡುತ್ತಿದ್ದರು. ಜನರ ಈ ವಿಚಿತ್ರ ವರ್ತನೆಯಿಂದ ರೋಸಿ ಹೋದಳು ಅವಳು. ಅವಳಿಗೀಗ ತಾನು ಯಾಕಾದರೂ ಬದುಕಿದೆನೋ, ಅಂದೇ ಸತ್ತುಹೋಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತಿತ್ತು. ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಾಗ ಸಾಯಲಿಲ್ಲ, ನಾಲ್ಕು ಮಕ್ಕಳನ್ನು ಸಾಕಿ ಬೆಳೆಸುವಾಗ ಸಾಯಲಿಲ್ಲ, ಮಗಳ ಬದುಕು ಹಾಳಾದಾಗ ಸಾಯಲಿಲ್ಲ... ಆದರೆ ತನ್ನ ತಪ್ಪೇ ಇಲ್ಲದ ಈ ಸಮಯದಲ್ಲಿ ತಾನೇಕೆ ಸಾಯಬೇಕು! ಅವಳ ಈ ಪ್ರಶ್ನೆಗೆ ಉತ್ತರ ಬೇಕಿತ್ತು ಅವಳಿಗೆ. ಆದರೆ ಉತ್ತರ ತಾನೆ ಯಾರಲ್ಲಿತ್ತು!? ಕೆಲವರಂತೂ ಅವಳನ್ನು ಕರೆಯುವಂತೆ ಮಾಡಿ, ಏನಾಯಿತು ಅವತ್ತು ಅಂತೆಲ್ಲಾ ಕೇಳಿ, ‘ಅಯ್ಯಾ ನಿಂತಾವ ಏನೈತೆ ಅಂತ ಅಂಗ್ ಮಾಡ್ದ ಆ ಲೋಫರ..’ ಎಂದು ವ್ಯಂಗ್ಯವಾಡುತ್ತಾ ನಗುತ್ತಿದ್ದರು. ಅವರ ಕರುಣೆ ಸಹಾನುಭೂತಿಗಾಗಿ ಬಾಯಾರಿ ಕೂತಿರುತ್ತಿದ್ದ ಇವಳು ಅದೇ ದಾಹ ಹೊತ್ತು ಮನೆ ದಾರಿ ಹಿಡಿಯುತ್ತಿದ್ದಳು.

ಈಗಂತೂ ಮನೆಯಿಂದ ಆಚೆಯೇ ಬರುವುದಿಲ್ಲ ಅವಳು. ಯಾರ ಕಣ್ಣಿಗೂ ಬೀಳುವುದಿಲ್ಲ. ತಾನಾಯಿತು ತನ್ನ ಕೋಣೆಯಾಯಿತು ಅಷ್ಟೇ. ಯಾರೊಂದಿಗೂ ಹೆಚ್ಚು ಮಾತಿಲ್ಲ ಕತೆಯಿಲ್ಲ. ಮೌನವ್ರತವೇನೋ ಎನಿಸುವಷ್ಟು ಮೌನ ಅವಳಲ್ಲಿ ಹೆಪ್ಪುಗಟ್ಟಿತ್ತು. ಅವಳ ನೋವು ಸಂಕಟವನ್ನು, ಮೌನ ರೋಧನೆಯನ್ನು ಅರಿಯುವ ಪ್ರಯತ್ನ ಸಹ ಯಾರೂ ಮಾಡಲಿಲ್ಲ. ಅವಳನ್ನು ಹಾಗೇ ಮೂಲೆಯಲ್ಲಿ ಇದ್ದೂ ಇಲ್ಲದಂತೆ ಇರಲು ಪರೋಕ್ಷವಾಗಿ ಪುಸಲಾಯಿಸಿದರು. ಅವಳಿಗೆ ಭ್ರಮನಿರಸನವಾಗಿತ್ತು. ಮತ್ತಷ್ಟು ಮತ್ತಷ್ಟು ಮೌನಿಯಾದಳು. ಅವಳ ಮಾತುಗಳು, ಪದಗಳು ಸವೆದು ಹೋದವು. ಪುಣ್ಯದ ಕೆಲಸ, ಪುಣ್ಯದ ಕೆಲಸ ಅಂತ ಜೀವಮಾನವಿಡೀ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಕೆಲಸಕ್ಕೆ ಭಗವಂತ ಇಂತಹ ಬಹುಮಾನವನ್ನೇ ಕೊಡೋದು! ಬಹುಶಃ ಅವನಿಲ್ಲವೇ ಇಲ್ಲ! ಇದ್ದಿದ್ದರೆ ಹೀಗಾಗಲು ಬಿಡುತ್ತಿದ್ದನೇ! ಅದೂ ನನಗೆ! ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತನಗೇ ಏಕೆ ಇಂತಹ ಕಷ್ಟ ಎಂದು ಯೋಚಿಸದವಳು ಇಂದು ಪರಿಪರಿಯಾಗಿ ಚಿಂತೆ ಮಾಡುತ್ತಾಳೆ. ಸದ್ದಿಲ್ಲದೇ ಕಣ್ಣೀರು ಸುರಿಸುತ್ತಾಳೆ. ಯಾಕಾದರೂ ಉಳಿದಳೋ, ಅಲ್ಲೇ ಸಾಯಬೇಕಿತ್ತು ಎನ್ನುವ ಮಾತನ್ನ ಮತ್ತೆ ಮತ್ತೆ ಸ್ವಂತ ಮಕ್ಕಳ ಬಾಯಿಂದಲೂ ಕೇಳಿದ ಮೇಲೆ, ತನಗಿರುವುದು ಅದೊಂದೇ ದಾರಿ ಅಂತಲೇ ಅನಿಸುತ್ತಿತ್ತು ಅವಳಿಗೆ. ಈ ಎಲ್ಲ ತಿರಸ್ಕಾರವನ್ನ ಅನುಭವಿಸುವುದಕ್ಕಿಂತ ಸತ್ತಿದ್ದರೇ ಚೆನ್ನಾಗಿರುತ್ತಿತ್ತು ಎಂದುಕೊಳ್ಳುವಳು. ಆದರೆ ಅಷ್ಟೊಂದು ಕರುಣೆ ಇರಬೇಕಲ್ಲ ಭಗವಂತನಿಗೆ...

ಜನ ಮಾತ್ರ ತಾವು ಹುಷಾರಾದರು. ಹೊಲದಲ್ಲಿ, ಕಣದಲ್ಲಿ ಒಬ್ಬಂಟಿಗರಾಗಿ ವಾಸ ಮಾಡುತ್ತಿದ್ದವರೆಲ್ಲ ಊರು ಸೇರಿಕೊಂಡರು. ಮುಪ್ಪಾನು ಮುದುಕಿಯನ್ನೇ ಬಿಡದವರು ತಮ್ಮಂಥ ಹರೆಯದ ಹೆಂಗಸರನ್ನು ಬಿಟ್ಟಾರೇ! ಎಂದು ತಮ್ಮ ತಮ್ಮ ಬಗ್ಗೆ ತಾವೇ ಹುಸಿ ಭಯ, ಸಹಾನುಭೂತಿ, ಹೆಮ್ಮೆಯನ್ನು ಹೊಂದುತ್ತಾ ಕೊನೆಯಲ್ಲಿ ಅವಳನ್ನು ಮೂದಲಿಸುವುದನ್ನು ಮರೆಯುತ್ತಿರಲಿಲ್ಲ. ಇವರ ಎಲ್ಲ ಮಾತಿನ ಸರಕಿಗೂ ಇವಳೇ ಯಾಕೆ ಬೇಕೋ ಎನ್ನುವುದು ಯಕ್ಷಪ್ರಶ್ನೆ. ಈಗಂತೂ ಅವಳು ಉಂಡರೂ ಉಪವಾಸಿದ್ದರೂ ಕೇಳುವವರು ಇರಲಿಲ್ಲ. ಅವಳಾದರೂ ಕೊಟ್ಟರೆ ಉಣ್ಣುತ್ತಾಳೆ. ಕೊಡದಿದ್ದರೆ ಸುಮ್ಮನೇ ಮಲಗುತ್ತಾಳೆ. ತನಗೊಂದು ಘನತೆಯ ಸಾವು ಬರಲಿ ಎಂದು ಮಾತ್ರ ಭಗವಂತನಲ್ಲಿ ಬೇಡಿಕೊಳ್ಳುತ್ತಾಳೆ. ಅಕ್ಷರಶಃ ಸಾವನ್ನು ಕಾಯುತ್ತಾಳೆ. ಆದರೆ ಸಾವಿಗೂ ಅವಳ ಮೇಲೆ ಕನಿಕರವಿಲ್ಲ...

ಅವತ್ತು ಬೆಳಗಿನ ಸಮಯ. ನಸು ಮುಂಜಾನೆ ಜಡಿಮಳೆಯಲ್ಲಿ ತೊಯ್ಯತೊಡಗಿತ್ತು. ಮನೆಯವರೆಲ್ಲ ಬಿತ್ತನೆ ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ಅವಳು ತನ್ನ ಕೋಣೆಯಲ್ಲಿ ಮಲಗಿದ್ದಳು. ಈಗೀಗ ಮನೆಯನ್ನು ಹೊರಗಿಂದ ಬೀಗ ಜಡಿದುಕೊಂಡು ಹೋಗುವುದು ಹೊಸ ರೂಢಿ. ಅವಳು ಏನೊಂದೂ ಏಕೆಂದೂ ಕೇಳುತ್ತಿರಲಿಲ್ಲ. ಹೊರಗೆ ಮಳೆ ದಟ್ಟವಾಗತೊಡಗಿತ್ತು. ಹೊಲಕ್ಕೆ ಹೋಗಿದ್ದ ಮಗ ಸೊಸೆ ತರಾತುರಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಕಾಫಿ ತಿಂಡಿ ಮುಗಿಸಿ ‘ಸಧ್ಯ ಒಳ್ಳೆ ಮಳೆ ಬರ್ತಾ ಇದೆ. ಈ ಸಾರಿನಾದ್ರು ಶೇಂಗ, ಉಳ್ಳಾಗಡ್ಡೆ ಚೆನ್ನಾಗಾದ್ರೆ ಸಾಕು’ ಎಂದುಕೊಂಡರು. ಮೊನ್ನೆ ಈ ಮುದುಕಿಯ ಕಾಲದಾಗೆ ಕೈಬಿಟ್ಟು ಹೋದ ದುಗ್ಗಾಣಿ ಮತ್ತೆ ಕೈಸೇರುವುದರ ಬಗ್ಗೆಯೇ ಅವರು ಎಷ್ಟೋ ಹೊತ್ತು ಮಾತನಾಡಿದರು. ಸೊಸೆಯಂತೂ ತನ್ನ ಅತ್ತೆಯ ಆಸ್ಪತ್ರೆ ಖರ್ಚಿಗೆ ಎಷ್ಟು ಹಣ ನೀರು ಹರಿದಂಗೆ ಹರಿಯಿತು, ಮಾನ ಮರ್ಯಾದೆಯೂ ಕೊಚ್ಚಿಕೊಂಡು ಹೋಯಿತು ಎನ್ನುವುದನ್ನು ಕೋಣೆಯಲ್ಲಿರುವ ಅತ್ತೆಗೆ ಕೇಳಿಸಲಿ ಎನ್ನುವಂತೆ ಗಟ್ಟಿಯಾಗಿ ಒತ್ತಿ ಒತ್ತಿ ಹೇಳುತ್ತಿದ್ದಳು. ಕೋಣೆಯಿಂದ ಯಾವ ಸದ್ದೂ ಬರಲಿಲ್ಲ. ಸದ್ದು ಬರುವುದೂ ಇಲ್ಲ. ಅವಳು ನಿಶ್ಯಬ್ಧಳಾಗಿ ತಿಂಗಳುಗಳೇ ಕಳೆದಿವೆ. ತನ್ನ ಮಾತಿನ ವರಸೆ ಮುಗಿಸಿ ಸಮಾಧಾನವಾದ ನಂತರ ಸೊಸೆ ತಟ್ಟೆಗೆ ಒಂದು ತುತ್ತು ಅನ್ನ, ಮುರುಕು ಮುದ್ದೆ, ಒಂದು ತೊಟ್ಟು ಸಾರು ಬಿಟ್ಟುಕೊಂಡು ಕೋಣೆಗೆ ಬಂದವಳೇ ಕಿಟಾರನೆ ಕಿರುಚಿದಳು.

ಘನತೆಯ ಸಾವಿನ ಕುಣಿಕೆಯಲ್ಲಿ ಮುದುಕಿಯ ಶವ ನೇತಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT