ಸೆಲ್ಲಾರೆಲ್ಲಾ ಮಕ್ಕಳಿಂದ ಪುಷ್ಕಳವಾಗಿ ಅರಳಿದ ಹೂದೋಟದಂತಿದೆ. ತರ ತರದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿರುವಂತೆ ಮಕ್ಕಳ ಚಿರಾಟ. ಆಟ, ಹಾಡು, ಕೇಕೇ ಗದ್ದಲವೇ ಗದ್ದಲ. ಪುಟ್ಟ ಪುಟ್ಟ ಸೈಕಲ್ಗಳು- ಕೊಡತೆ ಹುಳುಗಳಂತೆ. ಆ ಕೊಡತೆ ಹುಳುಗಳ ಮೇಲೆ ಪಾತರಗಿತ್ತಿಗಳಂತೆ ಮಕ್ಕಳು- ಜುಯ್ ಜುಯ್ ಎಂದು. ಸಡನ್ ಬ್ರೆಕ್ಗಳು- ನಗು- ಒಂದೇ ಸವನೇ ನಗು, ಬೆಚ್ಚಿಬಿದ್ದು, ಬಿದ್ದೂ ಬಿದ್ದೂ ಪಕ ಪಕಾ. ಅರಳಿದ ಹೂಗಳಂತಹ ಮುಖಗಳು. ಉದುರುತ್ತಿರುವ ಪರಾಗದಂತೆ ನಗುವಿನ ಹೊಳಪು.

ಸ್ಸುರ್ ಸ್ಸುರ್ ಟೀ ಉಕ್ಕಿ ಸ್ಟವ್ ಆರಿಹೋಯಿತು.

ಒಂದು ಕೈಯಲ್ಲಿ ಟೀ ಕಪ್ಪು- ಮತ್ತೊಂದು ಕೈಯಲ್ಲಿ ರಿಮೋಟ್.
ಕೂಡಿ ಹಾಡೋಣ ಎಂಬರ್ಥದ ಸಾಲನ್ನು, ‘ಕಲಸಿ ಪಾಡುದ್ದಾಂ’ ಎಂದು ಮಕ್ಕಳೊಂದಿಗೆ ಕೂಡಿ ಹಾಡುತ್ತಿರುವ ಹಿರೋ ಶೋಭನ್ಬಾಬು... ‘ಬಲಿ ಪೀಠ’ ಸಿನಿಮಾನಾ?
ಕಾಲಿಂಗ್ ಬೆಲ್ ಬದಲು, ರಿಧಮ್ಮಾಗಿ- ಬಾಗಿಲ ಮೇಲೆ ಬೆರಳ ಗಂಟಿನಿಂದ ಸದ್ದು.

ಹಾಡನ್ನು ಮ್ಯೂಟ್ನಲ್ಲಿ ಇಟ್ಟು ಬಾಗಿಲು ತೆರೆದೆ.
ಪಾತರಗಿತ್ತಿ ರೆಕ್ಕೆಗಳಿಂದ ನೆಯ್ದ ಫ್ರಾಕ್ ಧರಿಸಿದ ಹೂವಿನಂತೆ- ಮಗು.
ಎಂಟು ವರ್ಷಗಳಿರಬಹುದೇನೋ?

ಕಣ್ಣು ತುಂಬಾ ನಗು- ಉಕ್ಕಿ ಉಕ್ಕಿ ಚೆಲ್ಲುತ್ತಿದೆ. ಹಿಡಿಸಲಾರದಷ್ಟು ನಗುವನ್ನು ಬಾಯಿಯಲ್ಲಿ ತುರಕಿಕೊಂಡು, ಮತ್ತಷ್ಟು ನಗುವನ್ನು ಕೆನ್ನೆಯಲ್ಲಿ ಬಚ್ಚಿಟ್ಟುಕೊಂಡು... ಹೆಬ್ಬೆರಳನ್ನು ಎರಡು ತುಟಿಗಳ ನಡುವೆ ತರುತ್ತಾ... ಹೂ ತನ್ನ ನಿರಂತರ ತಾಜತನವನ್ನು ಕಾಯ್ದುಕೊಳ್ಳಲು ಸ್ವಲ್ಪ ನೀರು ಚಿಮುಕಿಸಿಕೊಳ್ಳಲು ಬಂದಂತಿದೆ.
ಒಳಗೆ ಬಾ ಎಂದಂತೆ ತಲೆ ಅಲುಗಾಡಿಸಿ, ಫ್ರಿಜ್ ಹತ್ತಿರಕ್ಕೆ ಹೋದೆ- ನನ್ನ ಹಿಂದೆ ಆ ಮಗು... ಹೂವಿನ ಪೊಕಳೆಗಳ ಪಾದಗಳಿಂದ ತುಸು ಮೇಲಕ್ಕೆ ಸುತ್ತಿಕೊಂಡ ಬೆಳ್ಳಿಯ ಚೈನಿಗಿರುವ ಗೆಜ್ಜೆಗಳೂ ಸಹ ಹಗುರವಾಗಿಯೇ ಮೊಳಗುತ್ತಿವೆ.

“ಆಂಟೀ ಆ ಪಾಟ್ನಲ್ಲಿಯ ವಾಟರ್ ಕೊಡುತ್ತಿರಾ?”
ಹೂ ಬುಟ್ಟಿಯಂತಹ ಬಾಯಿಯಿಂದ ಒಂದು ನಗೆ ಹೂ ತುಳಕಿ ಬಿತ್ತು.
ಕಣ್ಣುಗಳಲ್ಲಿ ಪುಟ್ಟ ಆಸೆ... ಪುಟ್ಟ ಇಷ್ಟ... ಬಹಳ ಪುಟ್ಟ ವಿನಂತಿ...

ನನಗೂ-ಮಡಿಕೆಗೂ ಮಧ್ಯ ಮೈಲು ದೂರವಿದ್ದು, ಆ ಮಧ್ಯದ ಹಾದಿಯಲ್ಲಿ ಕಲ್ಲು ಮುಳ್ಳುಗಳಿದ್ದು, ನನಗೆ ಚಪ್ಪಲಿಗಳಿಲ್ಲದಿದ್ದರೂ ಸಹ- ಹೋಗಿ ನೀರು ತಂದುಕೊಡುತ್ತಿದ್ದೆ!
ಮೇಲಿಂದ ಮೇಲೆ ಎರಡು ಗ್ಲಾಸ್ ನೀರು ಕುಡಿದಳು.

“ಥ್ಯಾಂಕ್ಯೂ ಆಂಟೀ... ಗೇಮ್ ಮಧ್ಯದಲ್ಲಿ ಬಂದಿರುವೆ” ಗ್ಲಾಸನ್ನು ಟೀಪಾಯಿ ಮೇಲೆ ಇಟ್ಟು- ಬಾಗಿಲು ಹೊರಗೆ ಬಿಚ್ಚಿಟ್ಟಿದ್ದ, ಅಚ್ಚುಕಟ್ಟಾದ ಹೈ ಹೀಲ್ ಹಕ್ಕಿ ಗೂಡುಗಳಲ್ಲಿ ಮರಿ ಪಾರಿವಾಳ ಪಾದಗಳನ್ನು ಸೇರಿಸಿ, ರೆಕ್ಕೆಗಳು ಮೂಡಿದ ಡಾಲ್ಫಿನ್ನಂತೆ ಹಾರುತ್ತಾ, ಈಜುತ್ತಾ ಮೆಟ್ಟಿಲ ಮೇಲಿಂದ ಪುನಃ ಸೆಲ್ಲಾರನ್ನ ಪ್ರವೇಶಿಸಿತು.

ಮಗು ನೀರು ಕುಡಿದಿಟ್ಟ ಗ್ಲಾಸಿನ ಪಕ್ಕದಲ್ಲಿಯೇ ಟೀ ಕಪ್ಪು- ಬಾಗಿ ತೆಗೆದುಕೊಂಡೆ. ಛಾನೆಲ್ ಬದಲಾಯಿಸಿದೆ. ಬ್ಲಾಕ್ ಅಂಡ್ ವೈಟ್ನಲ್ಲಿ ಕುಟ್ಟಿ ಪದ್ಮಿನಿ- ಕಣ್ಣು ತಿರುವುತ್ತಾ... `ಮಕ್ಕಳೂ ದೇವರೂ ಸತ್ಯಶಾಂತ ಮೂರ್ತಿಗಳೇ, ಸುಳ್ಳು ಮೋಸಗಳರಿಯದ ಕರುಣಾ ಮೂರ್ತಿಗಳೇ’ ಎಂಬರ್ಥದ ಸಾಲುಗಳನ್ನು ‘ಪಿಲ್ಲಲೂ ದೇವುಡೂ ಚಲ್ಲನಿವಾರೇ... ಕಲ್ಲ ಕಪಟಮೆರುಗನೀ ಕರುಣಾಮಯಲೇ’ ಎಂದು ಹಾಡುತ್ತಿದ್ದಾಳೆ.

ಕುಡಿಯಲು ಮಾಡಿಕೊಂಡ ‘ಟೀ’ ತಣ್ಣಗಾಗಿತ್ತು. ಟೀ ಬಿಸಿಯಾಗಿರುವಾಗಲೇ ಕುಡಿಯಬೇಕು. ಪುನಃ ಸ್ಟವ್ ಆನ್ಮಾಡಿದೆ ಟೀಗಾಗಿ... ಬಿಸಿ ಬಿಸಿ ಟೀ ಕಪ್ಪಿನಲ್ಲಿ ಹಾಕಿಕೊಂಡು ಬಂದು ಕುಳಿತುಕೊಳ್ಳುತ್ತಿರುವಾಗ ಪುನಃ ಅದೇ ಸದ್ದು- ಬಾಗಿಲ ಮೇಲೆ ಬೆರಳ ಗಂಟಿನಿಂದ...
ಬಲೂನಿನಲ್ಲಿ ಗಾಳಿ ತುಂಬಿದಂತೆ... ಕೆನ್ನೆತುಂಬ ನಗು ತುಂಬಿಕೊಂಡು ಪುನಃ ಅದೇ ಚಂದಮಾಮ.
ಈ ಸಾರಿ ಕಿರಿಬೆರಳನ್ನು ಉಗುರು ಕಾಣಿಸುವಂತೆ ಮೇಲ್ಕೆತ್ತಿ ಎರಡು ಕಣ್ಣುಗಳ ಮಧ್ಯ ನಿಲ್ಲಿಸುತ್ತಾ...
ಈ ಸಾರಿ ಇದಾ... ನಗು ಬಂತು. ಬಾತ್ರೂಮ್ ಕಡೆ ಕೈ ತೋರಿಸಿದೆ!

“ಯಾವಾಗಲು ಸುಸ್ಸು ಲೆಟ್ರಿನ್ನಿನಲ್ಲಿ ಮಾಡಬೇಕು. ಬಾತ್ರೂಮ್ನಲ್ಲಿ ಮಾಡಬಾರದು. ಮಮ್ಮಿ ಹೇಳಿದ್ದಾರೆ. ಈಗ- ನಾನು ಲೆಟ್ರಿನ್ನೊಳಗೆ ಹೋಗಲಿ?”
ಬೆಳದಿಂಗಳಲ್ಲಿ ಅದ್ದಿ ತೆಗೆದ ಎರಡು ಹೂ ರೆಕ್ಕೆಗಳಿಗೆ ಮಧ್ಯ ಮಧುಬಿಂದುವಿನಲ್ಲಿ ಅದ್ದಿದಂತೆ ಕಣ್ಣುಗಳು- ಅವುಗಳ ಮೇಲೆ ಬಾಗಿ ಬಳುಕಾಡಲು ತಡವರಿಸುತ್ತಿರುವ ಎರಡು ಕಡಜಗಳಂತೆ ದಟ್ಟವಾದ ಕೂದಲುಗಳಿಂದ ಕೂಡಿದ ಕಣ್ಣು ರೆಪ್ಪೆಗಳು... ಬೆವರು ಆವರಿಸಿದಂತೆ ಮುಖದ ತುಂಬ... ನಗು ಆವರಿಸಿದೆ.
“ಇವಳು ಸದಾ ಹೀಗೆ ನಗುತ್ತಿರುವಳಾ? ಇವಳ ಹೆಸರೇನಿರಬಹುದು? ಹಾಸಿನಿ? ಹಾಸ್ಯ? ಹಸಿತ? ಸ್ಮೈಲಿ...?”

“ಆಂಟೀ, ನಾನು ಸ್ವಲ್ಪ ಹೊತ್ತು ನಿಮ್ಮ ಜೊತೆ ಇಲ್ಲೇ ಇರಬಹುದಾ?
ಊರಲ್ಲಿ ನಮ್ಮ ತಾಳೆ ಎಲೆ ತಟ್ಟಿಯ ಬಾತ್ರೂಮ್ ಅಂಚಿಗೆ ಹಬ್ಬಿಕೊಂಡ ಹಚ್ಚನೆ ಬಳ್ಳಿ- ಸಾಯಂಕಾಲ ಸಮಯ ಅರಳಿದ ಅರಶಿಣ ಬಣ್ಣದ ಸುಂದರವಾದ ಈರೆ ಹೂ- ನಡೆದು ಬಂದು- ನನ್ನ ಈ ಕಾಂಕ್ರೀಟ್ ಕುಟೀರದಲ್ಲಿ ತನ್ನ ಪರಾಗ ತುಂತುರು ಹನಿಗಳ ನಗುವಿನಿಂದ ನನ್ನೊಂದಿಗೆ ಕಾಲ ಕಳೆಯುತ್ತೇನೆಂದರೆ ಬೇಡವೆನ್ನುವುದು ತರವೇ...?
“ಕುಳಿತುಕೋ, ನಿನ್ನ ಹೆಸರೇನು?”
“ಶ್ರಿಯ, ಫೋರ್ತ್ ಬಿ”
“ಯಾವ ಫ್ಲಾಟ್?”
“ಆಂಟೀ ನಮ್ಮದು ಗಾಂಧೀನಗರ. ಸೆಕೆಂಡ್ ಫ್ಲೋರ್ ಟೂ ಜೀರೋ ಟೂನಲ್ಲಿರುವ ಮೋಹನ್ರಾವ್ ಅವರು ನಮ್ಮ ಚಿಕ್ಕಜ್ಜ. ಅಂದ್ರೆ ನಮ್ಮ ಡ್ಯಾಡಿಗೆ ಚಿಕ್ಕ ಡ್ಯಾಡೀ ಅಂತ ಅರ್ಥ. ಇವತ್ತು, ನಾಳೇ ಹಾಲಿಡೇಸ್ ಅಲ್ವಾ, ಅದಕ್ಕೆ ಇಲ್ಲಿಗೆ ಬಂದೆ. ಮಾರ್ನಿಂಗ್ ನಮ್ಮ ಡ್ಯಾಡೀ ಡ್ರಾಪ್ ಮಾಡಿ ಹೋದರು.”
ಒಂದು ಕೇಬಲ್ ಕನೆಕ್ಷನ್... ನೂರು ಛಾನಲ್ಗಳು!
“ನೀವು ಜಾಬ್ ಮಾಡ್ತೀರಾ ಆಂಟೀ”
ಹೇಳಿದೆ. ವಿವರಗಳೂ ಸಹ.
“ಈಗ ನಮಗೆ ಸ್ಕೂಲ್ ಬಿಡುವ ಟೈಂ. ನಾನು ಮನೆಗೆ ಬರುವುದರೊಳಗೆ ಫೋರ್ ಫಿಫ್ಟೀನ್ ಆಗಿಬಿಡುತ್ತದೆ. ನಾನು ಮನೆಗೆ ಬಂದ ತಕ್ಷಣ ಫಸ್ಟ್ ನಮ್ಮ ಮಮ್ಮೀ ಹಾರ್ಲಿಕ್ಸ್ ಕೊಡುತ್ತಾಳೆ.”
ನನಗೆ ಟೀಗಾಗಿ ಪಾತ್ರೆಯನ್ನು ಒಲೆಯ ಮೇಲಿಟ್ಟು, ಅವಳಿಗೆ ಹಾರ್ಲಿಕ್ಸ್ ಕಲಿಸಿಕೊಟ್ಟೆ.
ರ್ಯಾಪರ್ ಸುತ್ತಿದ ಚಾಕ್ಲೆಟ್ ನಗು!

ಎರಡು ಕೈಗಳಿಂದ ಎಚ್ಚರದಿಂದ ಕಪ್ಪು ಹಿಡಿದುಕೊಂಡು ಬಹಳ ಇಷ್ಟಪಟ್ಟು ಕುಡಿಯುತ್ತಿದ್ದಾಳೆ. ಕೊನೆಯಲ್ಲಿ ಸ್ವಲ್ಪ ಉಳಿಸಿ ಎದ್ದು ನಿಂತು “ಅಪಾಂಗ್ ಜಪಾಂಗ್, ಬಪಾಂಗ್!!” ಎನ್ನುತ್ತಾ ಅಡ್ವರ್ಟೈಜ್ಮೆಂಟಿನಲ್ಲಿಯ ಮಗುವಿನಂತೆ ನಡುವು, ಕೈಯಲ್ಲಿಯ ಕಪ್ಪನ್ನು ತಿರುವುತ್ತಾ...

ಬಹಳ ನಗು ಬಂತು... ತಡೆಯಲಾಗಲಿಲ್ಲ. ಜೋರಾಗಿ ನಕ್ಕೆ.
ನಾನು ನಗು ಮುಗಿಸುವ ಮುನ್ನವೇ ನನ್ನ ಮತ್ತು ತನ್ನ ಕಪ್ಪನ್ನು ತೆಗೆದುಕೊಂಡು ಹೋಗಿ ಸಿಂಕಿನಲ್ಲಿ ಇಟ್ಟು ಬಂದಳು.
“ಯಾಕೆ ಆಂಟೀ ಹಾಗೆ ನೋಡುವಿರಿ? ನನಗೆ ಸುಮ್ಮನೆ ಕುಳಿತುಕೊಳ್ಳಲು ಇಷ್ಟವಿರಲ್ಲ. ಯಾವಾಗಲೂ ಏನಾದರೂ ಒಂದು ಕೆಲಸ ಮಾಡ್ತಾ ಇರ್ತೀನಿ. ನಮ್ಮ ಮನೆಯಲ್ಲಿಯೂ ಸಹ ಅಷ್ಟೇ. ಯಾವಾಗಲೂ ನಮ್ಮ ಮಮ್ಮಿಗೆ ಹೆಲ್ಪ್ ಮಾಡ್ತಿರುತ್ತೀನಿ... ಸೋ... ನನಗೇನಾದರೂ ಕೆಲ್ಸ ಹೇಳಿ...”
“ಹೇಳ್ತೀನಿ ಬಿಡು. ಬಾ. ಮೊದಲು ಇಲ್ಲಿ ಬಂದು ಕುಳಿತುಕೋ- ನಿಮ್ಮ ಮನೆ ಹತ್ತಿರ ನಿನಗೆ ಫ್ರೆಂಡ್ಸ್ ಇದ್ದಾರಾ?”
“ಓ... ತರುಣ್, ಆಷ್ತೋಷ್ ಲಾಲಸ... ಇವು ಫ್ರಿಜಿನಲ್ಲಿ ಜೋಡಿಸಬೇಕಾದ ತರಕಾರಿಗಳಾ?” ಬೆಳಿಗ್ಗೆ ರಿಲಯನ್ಸ್ನಿಂದ ತಂದ ಕವರ್ಗಳನ್ನು ತೋರಿಸುತ್ತಾ ಕೇಳಿದಳು.
ನಗುತ್ತಾ ಕವರ್ಗಳನ್ನು ಫ್ರಿಜ್ ಹತ್ತಿರಕ್ಕೆ ಸರಿಸಿ, ಇಬ್ಬರು ಅಲ್ಲಿಯೇ ಕುಳಿತೆವು.

ಅವಳು ಮಾತನಾಡುತ್ತಲೇ ಇದ್ದಾಳೆ. ಯಾವುದೇ ಮಾತು ತನ್ನಷ್ಟಕ್ಕೆ ತಾನೇ ಹೊರಬರುತ್ತಿಲ್ಲ. ಹಿಂದು ಮುಂದು ತುಸು ನಗುವಿನ ಜಲಕ್. ತರಕಾರಿಗಳನ್ನು ಆರ್ನಮೆಂಟುಗಳಂತೆ ಹೇಗೆ ಉಪಯೋಗಿಸಬಹುದು ಎಂದು ಹೇಳುತ್ತಲೇ ಪೀಲರ್, ಚಾಕು ತೆಗೆದುಕೊಂಡು ಅವುಗಳಿಂದ ಹೂಗಳನ್ನು ಪಕ್ಷಿಗಳನ್ನು ಮಾಡಲು ಮತ್ತೆ ಮತ್ತೆ ಪ್ರಯತ್ನ.

ಫೇಲಾದರೆ ಇದಕ್ಕೆ ರೆಕ್ಕೆ ಮುರಿದಿದೆಂದು, ಇದಕ್ಕೆ ಕಾಲು ಹೊಟ್ಟೆಯಲ್ಲಿಯೇ ಇದೆ- ಆಪರೇಷನ್ ಮಾಡಿ ಹೊರ ತೆಗೆಯಬೇಕೆಂದು ಆಲೋಚಿಸುತ್ತಾಳೆ. ಅವಳು ಹೇಳುವ ರೀತಿಗೆ, ಒಂದೇ ಸಮನೆ ನಗು, ತಡೆಯಲಾಗದು. ಒಂದು ನಗುವಿನಿಂದ ಮತ್ತೊಂದು ನಗುವಿನ ಮಧ್ಯ ಒಂದು ಶಾರ್ಟ್ ಬ್ರೇಕ್ ಸಹ ಇಲ್ಲದಂತೆ ನಗು.

ತರಕಾರಿ ಜೋಡಿಸುವುದು ಮುಗಿಯಿತು. ತಾನು ಎದ್ದು ನಿಂತು ನನಗೆ ಏಳಲು ಕೈ ಆಸರೆ ನೀಡಿದಳು. ಹಾಲ್ಗೆನೆಯಿಂದ ಮಾಡಿದಂತಹ ಕೈಬೆರಳು. ಬಹಳಷ್ಟು ಮೃದು. ಮುಟ್ಟಿದರೆ ನನ್ನ ಕೈಬೆರಳ ಮುದ್ರೆ ಮೂಡುತ್ತವೆನ್ನುವಷ್ಟು ನುಣಪಾಗಿ, ಟ್ರಾನ್ಸ್ಪರೆಂಟಾಗಿ ಮೃದುವಾಗಿ, ಆತ್ಮೀಯವಾಗಿ... ಆ ಕೈ ಬಿಡಬೇಕೆನಿಸಲಿಲ್ಲ- ನನ್ನ ಸ್ಪರ್ಶ ಆ ಮಗುವಿಗೆ ಏನನಿಸಿತೇನೋ, ತಲೆಯೆತ್ತಿ ನನ್ನ ಮುಖವನ್ನು ನೋಡುತ್ತಾ ನನ್ನ ನಡುವನ್ನು ಬಳಸಿ ಹಿಡಿದಳು.

ಹಾಲಿನ ಹೂಗಳನ್ನು ಅರಳಿಸಿಕೊಂಡ, ಹೂ ಬಳ್ಳಿಯಂತೆ ಮಗು! ನನ್ನ ಮನಸ್ಸು ಆ ಹೂ ಪೊಕಳೆಗಳ ಮತ್ತಿನಲ್ಲಿ ಮೈಮರೆಯಿತು.
ನನ್ನ ಹೃದಯದವರೆಗೆ ಬಂದ ಮಗುವಿನ ಮುಂಬೆರಳು ಮೇಲೆದ್ದು ನಗೆಯ ಕೆನ್ನೆಯಿಂದ ಕಿತ್ತು ತಂದ ಒಂದು ನೆಮ್ಮದಿಯ ಮುದ್ದನ್ನು ತುಟಿಗಳ ಮೇಲಕ್ಕೆ ಎಳೆದು ತಂದು ತೀರ ಎಳೆ ಎಳೆಯ ಹಸಿ ಹಸಿಯಾದದ್ದು, ನನ್ನ ಕೆನ್ನೆಯಲ್ಲಿ ನೆಟ್ಟಳು. ಅತ್ತ ಮನಸ್ಸು, ಇತ್ತ ಶರೀರ ಬಿಳಿ ಮೋಡದಲ್ಲಿ ತೂರಿ, ಅರ್ಧಚಂದ್ರನ ಅಂಚುಗಳನ್ನು ಹಿಡಿದ “ಉಯ್ಯಾಲೆ- ಜಂಪಾಲೇ” ಆಡುತ್ತಿವೆ.

ಇಬ್ಬರು ಅಲ್ಲಿಂದ ಹಾಲಿಗೆ ಬಂದೆವು. ನನ್ನ ಕೈಯೊಂದು ಆ ಮಗುವಿನ ಭುಜದ ಸುತ್ತ, ಅದರ ಕೈ ನನ್ನ ನಡುವಿನ ಸುತ್ತ.
“ಏನು ಮಡೋಣಾ?” ಕೇಳಿದೆ.
“ಒಂದು ಐಡಿಯಾ ಬಂತು! ಏನಾದರು ಕೆಲಸ ಮಾಡೋಣಾ!”
ಬಾಲ್ಕನಿಯಿಂದ ಒಣಗಿದ ಬಟ್ಟೆಗಳನ್ನು ತಂದು ದೀವಾನ್ ಮೇಲೆ ಹಾಕಿ ಮಡಿಸಲು ಮುಂದಾದೆವು. ಕರ್ಚೀಫ್ಗಳನ್ನು ಸಮೋಸಗಳಂತೆ ಮಡಿಸಿ ತಲೆ ಮೇಲೆ ಇಟ್ಟುಕೊಂಡು-

“ಏ... ಸಮೋಸಾ... ಸಮೋಸಾ...!” ಎಂದು ಕೂಗುತ್ತಾ ಮನೆಯಲ್ಲಾ ತಿರುಗುತ್ತಾ ಮಾರಾಟಮಾಡಿದಳು.

ಎರಡು ಏ.ಸಿ. ಕಿಸ್ಸುಗಳಿಗೆ ಒಂದು ಸಮೋಸಾ, ತಕ್ಷಣ ನಾನು ಕೊಂಡುಕೊಂಡೆನು.
“ಹೌದು, ನೀನು ಮತ್ತೆ ಆಟ ಆಡಲು ಹೋಗುವುದಿಲ್ಲಾ?”
“ಊಹೂ... ನಿಮ್ಮ ಜೊತೆನೇ ಇರುತ್ತೇನೆ” ಎಂದಳು ನಗುವಿಗೆ ಬೇಕಾದಷ್ಟು ಪ್ರೀತಿ ಬೆರಸಿ...
‘ಆಂ ಬೀಂ ಬುಷ್’ ಎಂದು ಮುದ್ದಿಗೆ ಒಂದು ರೂಪ ಸೃಷ್ಟಿಸಿದರೆ ಅದು ಈ ಮಗುವಿನ ಮುಖ.
“ಹಾಗೇ ಆಗಲಿ” ಎಂದೆನು.
“ಮತ್ತೇನಾದರೂ ಕೆಲಸ ಮಾಡೋಣಾ?” ಎಂದು ಕೇಳಿದಳು.
“ಒಂದು ಕೆಲಸ ಮಾಡೋಣ, ಏನಾದರೂ ಸ್ವಲ್ಪ ತಿನ್ನೋಣ” ಎಂದು, ಅಡುಗೆ ಮನೆಗೆ ಹೋಗಿ ಸ್ಕ್ವೇರ್ ಶೇಪ್ ಸ್ಟೀಲ್ ಸಾಸರ್ ತುಂಬ ಕಲ್ ಕಲ್ಸ್ ತುಂಬಿ ತಂದೆನು. ಅವುಗಳನ್ನು ನೋಡಿ ಕೇಳಿದಳು.
“ಮೆಗಾಸ್ಟಾರ್ ಫುಡ್ಡಾ”?
“ಯಾಕೇ? ಇವೆಂದರೆ ಚಿರಂಜೀವಿಗೆ ಇಷ್ಟನಾ?”
“ಊಹೂ ಗೊತ್ತಿಲ್ಲ. ಇಂಥ ತಿಂಡಿಗಳಿಗೆ ನಾವು ತೆಲುಗಿನಲ್ಲಿ ‘ಚಿರು ತಿಂಡಿ’ ಎನ್ನುತ್ತೇವೆಯಲ್ಲಾ. ಈ ವರ್ಡ್ನಲ್ಲಿನ ‘ಚಿರು’ವನ್ನು ಟ್ರಾನ್ಸ್ಲೇಟ್ ಮಾಡಿ ನಾನು ಇಟ್ಟ ಹೆಸರು.

ಇಬ್ಬರು ಪಕಪಕಾ ನಕ್ಕೆವು. ಆ ಮಗು ತನಗೆ ಯಾವ ಮೆಗಾಸ್ಟಾರ್ ಪುಡ್ ಇಷ್ಟವೋ ಲಿಸ್ಟು ಹೇಳಲು ಆರಂಭಿಸಿದಳು.
ಮಾರ್ಕೆಟ್ನಲ್ಲಿ ಬಣ್ಣ ಬಣ್ಣದ ಹೂಗಳನ್ನು ರಾಶಿ ರಾಶಿಯಾಗಿ ಸುರಿದಂತೆ - ನಗುವಿನ ಹೂಗಳನ್ನು ನನ್ನ ಮನೆ ತುಂಬಾ ಸುರಿದಳು. ಕ್ರಿಸ್ಮಸ್ ದಿನ ನಮ್ಮ ಮನೆ ಸೀಲಿಂಗಿಗೆ ಗೋಡೆಗಳಿಗೆ, ಬಾಗಿಲುಗಳಿಗೆ ಕಿಟಕಿಗಳಿಗೆ- ತರತರದ ಡಿಜೈನಗಳಿರುವ ರಂಗುರಂಗಿನ ಕಾಗದಗಳಂತೆ ನನ್ನ ಮನೆ ತುಂಬಾ ಈ ಮಗುವಿನ ಮಾತುಗಳೇ ಅಂಟಿಕೊಂಡು ಗಾಳಿಗೆ ತೂಗಾಡುತ್ತಿವೆ.

ಪಕ್ಕದ ಫ್ಲಾಟನಿಂದ ಗಟ್ಟಿಯಾಗಿ ಬಾಗಿಲನ್ನು ಬಾರಿಸುತ್ತಿರುವ ಸದ್ದು ಕೇಳುತ್ತಾ- ಕಣ್ಣುಬ್ಬುಗಳನ್ನು ಮೇಲಕ್ಕೆ ಮಾಡಿ “ಆಂಟೀ, ಆ ಸೌಂಡೇನು?” ಎಂದು ಕೇಳಿದಳು.
“ಪಕ್ಕದ ಮನೆಯವರರು, ಅವರ ಡಾಗನ್ನು ಒಳಗೆ ಹಾಕಿ ಲಾಕ್ ಮಾಡಿ ಹೊರಗೆ ಹೋಗುತ್ತಿರುತ್ತಾರೆ. ಮತ್ತೆ ಅವರು ಮರಳಿ ಬರುವವರೆಗೂ ಅದು ಹಾಗೇ ಮಾಡುತ್ತಿರುತ್ತದೆ. ಅದು ನಾಯಿ ಮಾಡುತ್ತಿರುವ ಸದ್ದು ಎಂದರೆ ಯಾರೂ ನಂಬುವುದಿಲ್ಲ. ಶುದ್ಧ ಮನುಷ್ಯರ ಹಾಗೆ, ಅದು ಮುಂಗಾಲಿನಿಂದ ಬಾಗಿಲನ್ನು ಆ ರೀತಿ ಬಾರಿಸುತ್ತಲೇ ಇರುತ್ತದೆ”

“ಪಾಪ ತಾನೇ, ಯಾಕೆ ಆ ರೀತಿ, ಅನಿಮಲ್ಗಳಿಗೆ ತೊಂದರೆ ಕೋಡೋದು?”
“.....” ಏನು ಹೇಳಬೇಕು?
“ಅನಿಮಲ್ಗಳಿಗೆ ತೊಂದರೆ ಮಾಡಿದರೆ ನನಗೆ ನೋಡೋಕೆ ಆಗಲ್ಲ. ಒಂದು ಸಾರಿ ಏನಾಯಿತು ಗೊತ್ತಾ ಆಂಟೀ? ನಾನು ಸ್ಕೂಲಿನಿಂದ ಆಟೋದಲ್ಲಿ ಬರುತ್ತಿದ್ದೆ. ಡ್ರೈವರ್ ಅಂಕಲ್ ಎಲ್ಲರನ್ನು ಅವರವರ ಮನೆಗಳ ಹತ್ತಿರ ಇಳಿಸಿದರು. ನಂದೆ ಲಾಸ್ಟ್ ಸ್ಟಾಪ್. ಇನ್ನೊಂದು ಫೈವ್ ಮಿನಿಟ್ಸ್ನಲ್ಲಿ ನಮ್ಮ ಮನೆ ಬರುತ್ತಿತ್ತು. ಮನೆ ದಾರಿಯಲ್ಲಿ ಆಟೋ ಹೋಗುತ್ತಿದ್ದರೆ ಒಂದು ಪಾಪು ಪಿಗ್ ನಮ್ಮ ಆಟೋ ಗಾಲಿಗೆ ಸಿಕ್ಕಿ ಬಿತ್ತು. ಅದರ ಕಾಲು ಮುರಿತು. ಆಟೋ ನಿಲ್ಲಿಸೆಂದರೆ ಅಂಕಲ್ “ಪರವಾಗಿಲ್ಲ ಹೋಗೋಣ” ಎಂದರು. ನಾನು ಜಗಳ ಮಾಡಿ ಅದನ್ನು ಆಟೋದಲ್ಲಿ ಹತ್ತಿಸಿಕೊಂಡು... ನನ್ನ ಕರ್ಚೀಫ್ನಿಂದ ಕಟ್ಟು ಕಟ್ಟಿದೆ. ತೊಡೆ ಮೇಲೆ ಕುಳ್ಳಿರಿಸಿಕೊಂಡು ನಾರಾಯಣಗೂಡ ಹಾಸ್ಪಿಟಲ್ಗೆ ಹೋಗಿ ಡಾಕ್ಟರಿಂದ ಕಟ್ಟು ಕಟ್ಟಿಸಿ, ಮತ್ತೆ ತಂದು ಅದೇ ಬೀದಿಯಲ್ಲಿ ಬಿಟ್ಟೆವು- ಅದರ ಅಮ್ಮನ ಹತ್ತಿರ...” ಹೊಳೆಯುವ ಮುಖಹೊತ್ತು ಕ್ಯಾಂಡಲಿನಂತೆ ನಿಂತು ಹೇಳುತ್ತಿದ್ದಾಳೆ.
“ಮತ್ತೆ ನೀನು ಸಮಯಕ್ಕೆ ಸರಿಯಾಗಿ ಮನೆಗೆ ಹೋಗದಿದ್ದಕ್ಕೆ ನಿಮ್ಮ ಅಮ್ಮ ಗಾಬರಿಯಾಗಲಿಲ್ಲಾ?”
“ಯಾಕೇ? ಡ್ರೈವರ್ ಅಂಕಲ್ ಸೆಲ್ಫೋನಿನಿಂದ ಫೋನ್ ಮಾಡಿ ಹೇಳಿದ್ದನಲ್ಲಾ?”
“ಮನೆಗೆ ಬಂದ ಮೇಲೆ ಆ ಪಾಪುಪಿಗ್ ನೆನಪಾಗಿ ಬೇಜಾರಾಗಿತ್ತು. ರಾತ್ರಿ ಟ್ವಲ್ವರೆಗೆ ಕುಳಿತು ಇದನ್ನೆಲ್ಲಾ ಡೈರಿನಲ್ಲಿ ಬರೆದೆ...”
“ಏನು? ನೀನು ಡೈರೀ ಬರಿತ್ತೀಯಾ?” ಬೇರೇನೋ ಹೇಳುತ್ತಿದ್ದರೆ ನಿಲ್ಲಿಸಿ ಸ್ವಲ್ಪ ಆಶ್ಚರ್ಯದಿಂದ ಕೇಳಿದೆ.
“ಹೌದಾಂಟೀ, ನಾನು ಪ್ರತಿದಿನ ಡೈರೀ ಬರೆಯುತ್ತೇನೆ. ನನಗಿದು ನಮ್ಮ ರಾಘವ ಮಾಮ ಕಲಿಸಿಕೊಟ್ಟಿದ್ದಾರೆ. ನನಗೆ ಸಿಸ್ಟರ್ಸ್, ಬ್ರದರ್ಸ್ ಇಲ್ಲವಲ್ಲಾ, ಒಬ್ಬಳೇ ಅಲ್ಲಾ, ಅದಕ್ಕೆ ಡೈರಿ ಜೊತೆ ಶೇರ್ಮಾಡಿಕೊಳ್ಳುತ್ತೇನೆ...”

ಹೊರಗೆ ಕತ್ತಲೆ ಆವರಿಸಿಕೊಂಡು ಬರುತ್ತಿದೆ. ನನ್ನ ಫ್ಲಾಟಿನಲ್ಲಿ ಮಾತ್ರ ಈ ಮೂರಡಿಗಳ ಎತ್ತರದ ಚಂದಮಾಮ ಬೆಳದಿಂಗಳನ್ನು ಸುರಿಸುತ್ತಲೇ ಇದೆ. ಕತ್ತಲೆಯನ್ನು ನುಸಳದಂತೆ ಬೆಳಕಿನ ನಗುವನ್ನು ಹರಡುತ್ತಲೇ ಇದೆ.

ಮಗುವಿನ ಮಾತುಗಳನ್ನು ಕೇಳುತ್ತಾ ಕ್ಯಾರೆಟ್ ಫ್ರೈ ಮಾಡಿದೆ. ಮೊಸರು ಬಜ್ಜಿ ಮಾಡಿದೆ. ಸ್ವಲ್ಪ ಮುದ್ದೆಪಲ್ಲೆ ಮಾಡಿದೆ. ಇವೆಲ್ಲವೂ ಮಗುವಿಗೆ ಇಷ್ಟವಾದ ಐಟಮ್ ಎಂದು ತಿಳಿದುಕೊಂಡು.
“ಊಟ ಮಾಡೋಣ?” ಕೇಳಿದೆ
“ಆಗಲೆನಾ? ಒಂದು ಕೆಲಸ ಮಾಡ್ತೀನಿ. ನಾನು ನಿಮ್ಮ ಜೊತೆನೇ ಊಟಮಾಡ್ತೀನಿ ಎಂದು ನಮ್ಮ ಅಜ್ಜಿಗೆ ಹೇಳಿ ಬರ್ತೀನಿ”
“ಬೇಗ ಬಂದುಬಿಡು!”

ಎರಡು ನಿಮಿಷಗಳ ತರುವಾಯ- ಬಾಗಿಲ ಹತ್ತಿರ ಚಪ್ಪಲಿ ಬಿಟ್ಟು, ಆ ಏಳೇಳು ಬಣ್ಣದ ಇಂಧ್ರಧನಸ್ಸು ಮೈತುಂಬ ನಗುವಿನ ತಳುಕನ್ನು ಮೆತ್ತಿಕೊಂಡು ಅಡಿ ಇಟ್ಟಿತು. ಬಲಗೈ ಮುಷ್ಠಿಗಟ್ಟಿ ಪುಟ್ಟ ಹೆಬ್ಬೆರಳನ್ನು ಎತ್ತಿ ತೋರಿಸಿ “ನನ್ನ ಊಟ ನಿಮ್ಮ ಜೊತೆನೇ” ಎನ್ನುತ್ತಾ ಒಮ್ಮೆಲೆ ಜಿಗಿದು ನನ್ನನ್ನು ಅಪ್ಪಿಕೊಂಡಿತು.
ಯಾವುದೋ ಸುವಾಸನೆ ಅವಳಿಂದ ನನ್ನ ಶರೀರವನ್ನು ಪ್ರವೇಶಿಸುತ್ತದೆ. ದೇಹದಿಂದ ಅಲ್ಲ ದೇಹದೊಳಗಿನಿಂದ! ಮನುಷ್ಯರನ್ನು ತನ್ನ ವಶಮಾಡಿಕೊಳ್ಳುವ ಯಾವುದೋ ಒಂದು ಪರಿಮಳ... ಮಕ್ಕಳ ದೇಹದಲ್ಲಿ ಸಹಜ ಸಿದ್ಧವಾಗಿಯೇ ಪ್ರವಹಿಸುತ್ತೆದೆ ಎಂದು ಭಾವಿಸುವೆ. ಹೃದಯ ತುಂಬಾ ಆ ಸುಗಂಧ ದ್ರವ್ಯವನ್ನು ಹೀರಿಕೊಂಡು ಪರವಶದಿಂದ ಮಗುವಿನ ಹಣೆ ಮೇಲೆ ಮುತ್ತಿಟ್ಟೆನು. ಇಬ್ಬರು ಕಿಚನ್ನೊಳಗೆ ಹೋದೆವು, ಪಾತ್ರೆಗಳನ್ನೆಲ್ಲ ಹಾಲಿನಲ್ಲಿಯ ಟೀಪಾಯಿಯ ಮೇಲಕ್ಕೆ ಸೇರಿಸುತ್ತಿದ್ದಾಳೆ.

ಬಾಲ್ಯದಲ್ಲಿ ನಮ್ಮ ಮನೆಯ ತಾಳೆಲೆ ಚಪ್ಪರದಿಂದ ತೂರಿಬಂದ ಕಾಂತಿಕಿರಣ ಸಗಣಿ ಸಾರಿಸಿದ ನೆಲದ ಮೇಲೆ ಬೆಳಕಿನ ವೃತ್ತವಾಗಿ- ಸ್ವಲ್ಪ ಸ್ವಲ್ಪ- ಸರಿಯುತ್ತಾ ಸರಿಯುತ್ತಾ ಹೋದಂತೆ ಈ ಮಗು ತನ್ನ ಬೆಳಕಿನ ಪಾದಗಳಿಂದ ಮನೆತುಂಬಾ ತಿರುಗುತ್ತಾ ನನ್ನ ಮನಸ್ತುಂಬಾ ಉಗುರು ಬೆಚ್ಚನೆ ಬೆಳದಿಂಗಳ ಹೂಗಳನ್ನು ಅರಳಿಸುತ್ತಿದೆ.

“ನಾಳೆ ಇವನಿಂಗ್ ಮನೆಗೆ ಹೋದ ಮೇಲೆ ನಿಮ್ಮ ಬಗ್ಗೆನೂ ನನ್ನ ಡೈರಿಯಲ್ಲಿ ಬರೆಯುತ್ತೇನೆ” ಪಾತ್ರೆಗಳಿಗೆ ಸವುಟುಗಳನ್ನು ಸೇರಿಸುತ್ತಾ... “ಹೌದು ನನ್ನ ಡೈರೀ ಕುರಿತು ನಿಮಗೊಂದು ಇಂಪಾರ್ಟೆಂಟ್ ವಿಷಯ ಹೇಳಲಿಲ್ಲವಲ್ಲಾ?”

“ಏನದು?” ಫ್ರಿಜಿನೊಳಗಿನಿಂದ ವಾಟರ್ ಬಾಟಲ್ ತೆಗೆದು ಅವಳ ಕೈಗೆ ಕೊಡುತ್ತಾ ಕೇಳಿದೆ.
“ನನಗೆ ಇಷ್ಟವಾದದ್ದು ಬ್ಲೂ ಇಂಕಿನಲ್ಲಿ ಬರೆಯುತ್ತೇನೆ, ನನಗೆ ಇಷ್ಟವಿಲ್ಲದವು, ಇಷ್ಟವಾಗಲಾರದವು ಬ್ಲಾಕ್ ಇಂಕಿನಿಂದ ಬರೆಯುತ್ತೇನೆ...”
“ಅಂದ್ರೆ ಪಾಪುಪಿಗ್ ಬಗ್ಗೆ ಬ್ಲಾಕ್ ಇಂಕಿನಲ್ಲಿ ಬರೆದಿರುವೆಯಾ?”
“ನೋ ನೋ... ಅದು ನನಗೆ ಬಹಳ ಇಷ್ಟವಾದ ಕೆಲಸ... ಒಂದು ಸಾರಿ ಮಹಿಮ ಅವರ ಮನೆಗೆ ಹೋಗಿ, ಅವರಮ್ಮ ಹಾಕಿಕೊಟ್ಟ ಟಿಫಿನ್ ಸಹ ತಿಂದಿದ್ದೆ... ಅದನ್ನು ಬ್ಲಾಕ್ ಇಂಕಿನಿಂದ ಬರೆದಿದ್ದೇನೆ... ಈ ಬೌಲಿನಲ್ಲಿದು ಏನಾಂಟೀ...?
“ಚಿಕೆನ್. ನಿನ್ನೆಯದು. ಫ್ರಿಜಿನಲ್ಲಿ ಇದ್ರೆ ತೆಗೆದು ತಂದೆ.”
“ಅದೇನಾಂಟೀ? ನೀವು ನಾನ್ವೆಜ್ ತಿಂತೀರಾ?” ಬಹಳ ಆಶ್ಚರ್ಯದಿಂದ... ಹಲವು ಅನುಮಾನಗಳಿಂದ.
ಅವಳ ಪ್ಲೇಟಿನಲ್ಲಿ ಅನ್ನ ನೀಡಿ ಮುದ್ದೆಪಲ್ಲೆ ನೀಡಿ, ಸ್ವಲ್ಪ ಕ್ಯಾರೆಟ್ ಫ್ರೈ ಬಡಿಸಿದೆ.
“ಹೌದು... ಯಾಕೆ?” ಎಂದೆ. ನನ್ನ ಪ್ಲೇಟಿನಲ್ಲಿ ಅನ್ನ, ಸ್ವಲ್ಪ ಹಣ್ಣುಮೆಣಸಿನ ಕಾಯಿಯ ಚಟ್ನಿ, ಎರಡು ಚಿಕನ್ ತುಂಡುಗಳನ್ನು ಹಾಕಿಕೊಳ್ಳುತ್ತಾ.
“ನೀವು ಬ್ರಾಮ್ಮಿನ್ಸ್ ಅಲ್ಲವೇ?” ಕಣ್ಣುಗಳಲ್ಲಿ ಸದಾ ಹೊಮ್ಮುವ ನಗುವು ಇದ್ದಕ್ಕಿದ್ದಂತೆ ಮಾಯವಾಗಿ ಕೇಳುತ್ತಿದ್ದಾಳೆ.
“ಅಲ್ಲ”
“ಚೌದರಿಗಳಾ?”
“ಅಲ್ಲ”
“ಮತ್ತೆ ರೆಡ್ಡಿಗಳಾ?”
“ಉಹೂ... ಅಲ್ಲಾ”
“ಮತ್ತೆ ಯಾರು?”
“ದಲಿತ್!” ಆ ಮಗುವಿಗೆ ಏನು ಹೇಳಬೇಕೋ ಹೇಗೆ ಹೇಳಬೇಕೋ ಅರ್ಥವಾಗುತ್ತಿಲ್ಲ.
“ಅಂದ್ರೆ... ಬೇರೆ ಹಿಂದೂಗಳಾ?”
“ಅಲ್ಲ. ಕ್ರಿಶ್ಚಿಯನ್ಸ್!”
“ಹರಿಜನ್ಸಾ? ಅಂದ್ರೆ ಮಹಿಮಾ ಅವರ ತರನಾ...?”
ಆರನೆಯ ತರಗತಿಯಲ್ಲಿ ಪಿ.ಇ.ಮೇಷ್ಟ್ರು ಗ್ರೌಂಡ್ನಲ್ಲಿ ಓಡು ಎಂದಾಗ ತೋರು ಬೆರಳಿನಷ್ಟು ಮುಳ್ಳು ಅಂಗಾಲಲ್ಲಿ ಕಸಕ್ಕನ ನಾಟಿ ತೂಮಿನ್ನತ್ತಿರ ಮುರಿದು ಹೋಗಿತ್ತು. ಈಗ ಅದೇ ಮುಳ್ಳು ಮರಳಿ ಎರಡುಪಟ್ಟಾಗಿ ನನ್ನ ಎದೆಯಲ್ಲಿ ಕಸಕ್ಕನೆ ನಾಟಿಕೊಂಡಿತು.
“ಮೊದಲು ಊಟ ಮಾಡು...” ಎಂದೆನು, ನಾನು ಅನ್ನವನ್ನು ಕಲಿಸುತ್ತಾ.
“ನಿಜ ಹೇಳಿ, ಹರಿಜನ್ಸಾ...?” ಮಗುವಿನ ಮುಖದಲ್ಲಿದ್ದ ಬಣ್ಣಗಳೆಲ್ಲಾ ಮಾಯವಾಗಿ, ನಿಧಾನವಾಗಿ ಬೂದಿಬಣ್ಣ ಆವರಿಸಿಕೊಳ್ಳುತ್ತಿದೆ.
“ಹೌದು... ಹೋಗಲಿ ಈಗ ಅವೆಲ್ಲಾ ಯಾಕೆ? ನಾವು ಫ್ರೆಂಡ್ಸೆಲ್ಲಾ, ನಮ್ಮ ಮಧ್ಯ ಅವೆಲ್ಲವೂ ಅಗತ್ಯನಾ?”
“ಊ... ನಮ್ಮ ಡ್ಯಾಡಿಗೆ, ನಮ್ಮ ಮಮ್ಮಿಗೆ ಹರಿಜನ್ಸ್ ಫ್ರೆಂಡ್ಸಿಲ್ಲಾ!” ನನಗೂ ಸಹ ಇಲ್ಲಾ! ಅಸಲು ನಮಗೆ ಅವರ ಜೊತೆ ಫ್ರೆಂಡ್ಶಿಪ್ ಲೈಕ್ ಆಗಲ್ಲ. ನನ್ನ ಫ್ರೆಂಡ್ಸೆಲ್ಲಾ ಬ್ರಾಮ್ಮಿನ್ಸ್, ಚೌದರೀಸ್, ರೆಡ್ಡೀಸ್, ಬೇರೆ ಹಿಂದೂಸ್...”

ಆಕಾಶದ ಅಂಚಿನವರೆಗೆ ಹಾರಿದ ಬಣ್ಣ ಬಣ್ಣದ ಗಾಳಿಪಟ ಪಟ್ಟನೇ ಹರಿದ ಸಪ್ಪಳ.
“ನಾನಂದ್ರೆ ನಿನಗೆ ಇಷ್ಟ ತಾನೆ...” ನನ್ನ ಕೈಯಲ್ಲಿಯ ಅನ್ನದ ಅಗಳುಗಳು ನಲುಗಿ ಮುದ್ದೆಯಾಗುತ್ತಿವೆ.
“ಇಷ್ಟವೇ...” ಮಗುವಿನ ಮುಖದಲ್ಲಿ ವಾಂತಿ ಉಬ್ಬಳಿಸಿಕೊಂಡು ಬರುತ್ತಿದ್ದರೆ, ಅತಿ ಕಷ್ಟದಿಂದ ತಡೆದುಕೊಂಡಂತಿದೆ.
“ಮತ್ತೆ, ಕುಳಿತುಕೋ. ಊಟ ಮಾಡೋಣ?”
ಕುಳಿತುಕೊಳ್ಳಲಿಲ್ಲ. ಹಾಗೆ ನಿಂತು ನನ್ನ ಕಡೆ ರೆಪ್ಪೆ ಅಲುಗಾಡಿಸದಂತೆ ನೋಡುತ್ತಿದ್ದಾಳೆ. ಬುಳುಬುಳು ಎಂದು ಸರಿದಾಡುತ್ತಿರುವ ಬೆಳ್ಳನೆ ಹುಳುಗಳನ್ನು ನೋಡುತ್ತಿರುವಷ್ಟು ಅಸಹ್ಯ ಆ ಮಗುವಿನ ಕಣ್ಣುಗಳಲ್ಲಿ.
“ಅಜ್ಜಿ ಕರೆಯುತ್ತಿದ್ದಂತೆ ಇದೆ” ಎಂದು ತಕ್ಷಣ ಸರಿದು, ಲಘುಬಗೆಯಿಂದಿ ಹೆಜ್ಜೆ ಹಾಕುತ್ತಾ ಹೊರಗೆ ಬಿಟ್ಟ ಚಪ್ಪಲಿಗೆ ಕಾಲುಸೇರಿಸಿಕೊಂಡು ಬಿದ್ದೆ ಎದ್ದೆ ಎಂಬಂತೆ ಫಾಸ್ಟಾಗಿ ಓಡಿ ಹೋದಳು.
ಇಲ್ಲಿಯವರೆಗಿನ ಬೆಳಕಿನ ವೃತ್ತ- ಭೂತಗನ್ನಡಿಯ ಬಿಂಬವಾಗಿ ನನ್ನ ಎದೆ ಮೇಲೆ ನಿಂತಿದೆ.
ಕೋಣೆ ತುಂಬಾ ತುಂಬಿಕೊಂಡಿದ್ದ ಬಣ್ಣ ಬಣ್ಣದ ಚಿಟ್ಟೆಗಳು ಕಂಬಳಿಹುಳುಗಳಾಗಿ ನನ್ನ ಮೇಲೆ ಹರಿದು ಬರುತ್ತಿವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.