ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್ ಸಿಹಿಮೊಗೆ ಅವರ ಕಥೆ | ವಿಜಾತಿ

Last Updated 14 ಜನವರಿ 2023, 19:30 IST
ಅಕ್ಷರ ಗಾತ್ರ

ಗೌರಮ್ಮಳಿಗೆ ವಿಮುಖ ಒಬ್ಬನೇ ಮಗ, ಇವನನ್ನು ಬಿಟ್ಟರೆ ಗೌರಮ್ಮಳಿಗೆ ಇದ್ದವರೆಂದರೆ ಅವಳ ದೊಡ್ಡ ತಮ್ಮ ಹಾಲೇಶಪ್ಪ ಮತ್ತು ಚಿಕ್ತಮ್ಮ ಮಂಜಪ್ಪ, ಗೌರಮ್ಮನ ತಾಯಿ ಸಿದ್ಧಮ್ಮ ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಹೇಗೋ ಅವರಿವರ ಮನೆಯ ಮುಸುರೆ ತಿಕ್ಕಿ ಮೂರು ಜನ ಮಕ್ಕಳನ್ನು ಸಾಕಿದ್ದಳು.

ಮಕ್ಕಳಲ್ಲಿ ದೊಡ್ಡವಳಾದ ಗೌರಮ್ಮನಿಗೆ ಒಂದು ಮದುವೆ ಮಾಡಿ ಕೈತೊಳೆದುಕೊಂಡರೆ ನನ್ನ ಜವಾಬ್ದಾರಿ ಕಳೆದಂತೆ ನೆಮ್ಮದಿಯಾಗಿ ಬದುಕಬಹುದೆಂದು ಪಕ್ಕದ ಮನೆಯ ತಿಮ್ಮಿಯ ಜೊತೆ ಆಗಾಗ ಹೇಳುತ್ತಿದ್ದಳು. ಗೌರಮ್ಮನನ್ನು ನೋಡಲು ಇದುವರೆಗೂ ಏನಿಲ್ಲವೆಂದರೂ ಸುಮಾರು ಐದು ಜನ ಗಂಡುಗಳು ಬಂದು ಹೋಗಿದ್ದರು, ಆದರೆ ಗಂಡಿನ ಕಡೆಯವರು ಕೇಳುತ್ತಿದ್ದ ವರದಕ್ಷಿಣೆಯ ಹಣವನ್ನು ಕೇಳಿಯೇ ಸಿದ್ಧಮ್ಮ ಕುಸಿದು ಬಿಡುತ್ತಿದ್ದಳು, ‘ಸಾಲಾನೋ ಸೋಲಾನೋ ಮಾಡಿ ಮದ್ವೆ ಮಾಡಿದ್ರು ಹುಡ್ಗ ನಮ್ಮುಡ್ಗಿನ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋಕೆ ಗ್ಯಾರಂಟಿ ಏನು? ತೆಗಿ ತೆಗಿ ಆಟೊಂದು ದುಡ್ಡು ಗಿಡ್ಡು ಕೊಟ್ಟು ನನ್ನ ಕೈನಾಗೆ ಮದುವೆ ಮಾಡೋಕೆ ಆಗ್ವಲ್ದು’ ಎಂದು ತಮ್ಮಂದಿರ ಬಳಿ ಸಿಡುಕಿನಿಂದ ಗೊಣಗೋಳು. ದೊಡ್ಡ ಕುರುಬರ ಬೀದಿನಾಗ ಸಿದ್ಧಮ್ಮ ಅಂದ್ರೆ ಜನಕ್ಕೆ ಕೂಡ ಗೌರವ, ‘ಅಲ್ಲಾ ಈ ಹೆಂಗ್ಸು ಗಂಡ ಸತ್ತೋದ್ ಮೇಲೆ ಹಠದಿಂದಾನೇ ಮಕ್ಳುನ್ನ ಸಾಕ್ ಬಿಟ್ಳಲ್ಲ. ಉಪ್ವಾಸ ಮಲ್ಗಿದ್ರು ನೆಂಟ್ರು ಮನೆ ಇರ್ಲಿ ಸರಿಕ್ರು ಮನೆ ಮುಂದೆ ಕೂಡ ಹೋಗಿ ಕೈ ಚಾಚ್ಲಿಲ್ಲ’ ಹಠಗಾತಿ ಸಿದ್ಧಮ್ಮ ಅಂತಾನೆ ಜನ ಮಾತಾಡೋರು. ಎಷ್ಟೇ ಹಠಗಾತಿಯಾಗಿದ್ರು ಮಗ್ಳು ಕೈಗೆ ಬಂದಾಗ ಅವ್ಳಿಗೊಂದು ಗಂಡು ಹುಡುಕಿ ಮದುವೆ ಮಾಡ್ಬೇಕು ಎಂದು ತಗ್ಗಿ ಬಗ್ಗಿ ನಡೆಯೋಳು. ಸಿದ್ಧಮ್ಮ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರೊಬ್ಬರಿಗೆ ಇವಳ ಮಗಳ ಮದುವೆಯ ವಿಚಾರ ತಿಳಿದ ಮೇಲೆ ಒಂದು ದಿನ ಸಿದ್ಧಮ್ಮನನ್ನು ಕರೆದು ‘ಸಿದ್ಧಮ್ಮ ನೀನೇನೂ ಯೋಚ್ನೆ ಮಾಡ್ಬೇಡ ನಿನ್ನ ಮಗಳಿಗೆ ಒಳ್ಳೆಯ ವರ ಹುಡುಕುವ ಜವಾಬ್ದಾರಿ ನಮ್ಮದು. ಇಷ್ಟು ದಿನ ನಮ್ಮ ಮನೆಯಲ್ಲಿ ಕೆಲಸ ಮಾಡಿದೀಯ ನಿನಗೆ ಅಷ್ಟು ಸಹಾಯ ಮಾಡದಷ್ಟು ಸಣ್ಣ ಮನುಷ್ಯರಲ್ಲ ನಾವು’ ಎಂದು ಹೇಳಿದ ಮೇಲೆ ಸಿದ್ಧಮ್ಮಳಿಗೆ ಇದ್ದ ಮೈಭಾರ ಕಡಿಮೆಯಾಗಿತ್ತು.

ಮಾರನೇಯ ದಿನ ಸಿದ್ಧಮ್ಮಳನ್ನು ಕರೆದ ಮನೆಯ ಯಜಮಾನ ‘ನೋಡು ಸಿದ್ಧವ್ವ ಒಬ್ಬ ಹುಡುಗ ಇದಾನೆ, ಊರು ಮೈಸೂರಂತೆ ಇಲ್ಲಿ ಕೆಲಸ ಮಾಡೋಕೆ ಬಂದಿದಾನೆ, ನಮ್ಗೂ ಹುಡ್ಗ ಒಳ್ಳೆಯವ್ನು ಅನಿಸ್ತಾ ಇದೆ, ನಿಂಗೂ ಬಡತನ ಇದೆ ಗೌರಮ್ಮಾನ ಅವನಿಗೆ ಕೊಟ್ಟು ಮದುವೆ ಮಾಡಿ ಮನೆ ಅಳಿಯನಾಗಿ ಮಾಡ್ಕೊಂಡ್ಬುಡು’ ಎನ್ನುವಾಗ ‘ಅವ್ನ ಜಾತಿ ಯಾವ್ದ್ರ?’ ಎಂದು ನಡುಗುವ ದನಿಯಲ್ಲಿ ಕೇಳಿದಳು, ‘ಅಲ್ಲಾ ಸಿದ್ಧವ್ವ ಮೊದ್ಲೇ ಬಡ್ತನ ಅಂತಿಯಾ ಈ ಜಾತಿಯಲ್ಲಾ ಬೇಕಾ ನಿಮ್ಗೆ? ಹುಡ್ಗ ಒಳ್ಳೆವ್ನಾದ್ರೆ ಸಾಕಾಗಲ್ವ’ ಎಂದಾಗ ‘ಹಂಗಲ್ಲ ಬುದ್ಧಿ ನಮ್ಮ ಕುಲುದವ್ರು ಸುಮ್ನೆ ಬುಟ್ಟಾರ ನಮ್ನ, ಬೇರೆ ಜಾತಿಯವ್ರಿಗೆ ಹೆಣ್ಣು ಕೊಟ್ರೆ! ಅಯ್ಯೋ ಬ್ಯಾಡ ಬುದ್ಧಿ ಬ್ಯಾಡ ಆ ಹುಡುಗನ ಜಾತಿ ಗೊತ್ತಾದ್ರೆ ಏನಾದ್ರು ಯೋಚ್ನೆ ಮಾಡ್ಬೋದು ಇಲ್ಲ ಕಷ್ಟ’ ಎಂದವಳೆ ಕೊಟ್ಟಿಗೆಯಲ್ಲಿ ದನಕ್ಕೆ ಹುಲ್ಲು ಹಾಕಲು ಹೋಗುತ್ತಾಳೆ. ‘ಓಹೋ ಇದೇನಾಪ ಸಿದ್ಧಮ್ಮಾನೇ ಜಾತಿ ಮಾಡ್ತಾವ್ಳೆ’ ಎಂದು ಯಜಮಾನ ಸುಮ್ಮನಾಗುತ್ತಾನೆ.

ಒಂದು ವಾರದ ನಂತರ ಯಜಮಾನನ ಬಳಿ ಬರುವ ಸಿದ್ಧಮ್ಮ ‘ಬುದ್ಧಿಯಾರ ಹುಡ್ಗುನ ಜಾತಿ ಯಾವ್ದು ಗೊತ್ತಾಯ್ತಾ’ ಅಂತಾಳೆ, ಇದನ್ನು ಕೇಳಿದ ಕೂಡಲೇ ‘ಅಲ್ಲಾ ಸಿದ್ಧವ್ವ ಈ ಜಾತಿ ಎಲ್ಲಾ ತಗಂಡು ಏನ್ ಮಾಡ್ತೀರಿ ನೀವು? ಹೇಳೋದು ಕೇಳಿಲ್ಲಿ ನಾನು ಹುಡುಗನ ಜಾತಿ ಬಗ್ಗೆ ಯಾರ್ಗು ಹೇಳೋದಿಲ್ಲ, ನೀನು ಬೇಕಾದ್ರೆ ನಿಮ್ಮವರೆ ಅಂತ ಹೇಳಿ ಮದುವೆ ಮಾಡ್ಬುಡು, ಹುಡುಗನ ಕಡೆಯವರು ಯಾರು ಇಲ್ಲಿಗೆ ಬರಲ್ಲ, ಮುಂದೆ ಏನಾದ್ರು ತಡೆಯಾದ್ರೆ ನಾನ್ ನೋಡ್ಕೋತೀನಿ ನೀನ್ ಯಾಕೆ ಹೆದ್ರುಕೋತಿಯವ್ವ ನಾನಿರುವಾಗ’ ಎಂದು ಧೈರ್ಯ ತುಂಬುತ್ತಾನೆ. ‘ಅದು ಸರಿ ಬುದ್ಧಿ ಸಮಾಜಕ್ಕೆ ಏನೋ ಹೇಳ್ಬೋದು ಆದ್ರೆ ನಂಗೂ ಸತ್ಯ ಗೊತ್ತಿರ್ಲಿ ನಂಗಾದ್ರು ಹುಡುಗನ ಜಾತಿ ಯೋಳಿ’ ಬಿಡದೆ ಮತ್ತೆ ಕೇಳುತ್ತಾಳೆ. ‘ನೋಡವ್ವ ಹುಡ್ಗ ಮೈಸೂರು ಅಯ್ಯಂಗಾರ ಜಾತಿಯವ್ನು, ಈಗ ಅವ್ರ ಜಾತಿನಾಗ ಹುಡುಗಿರ್ಗೆ ಇಂಜಿನಿಯರು ಡಾಕುಟ್ರೆ ಬೇಕಂತೆ ಮದುವೆ ಆಗೋಕೆ, ಅಡುಗೆ ಕೆಲಸ ಮಾಡೋ ಹುಡುಗನಿಗೆ ಹೆಣ್ಣು ಹೆಂಗೆ ತಾನೇ ಸಿಕ್ಕುತ್ತೆ, ಜಾತಿ ಬುಟ್ರು ಪರವಾಗಿಲ್ಲ ನಂಗೂ ಒಂದು ಮದುವೆ ಅಂತಾ ಆಗಿ ಜೀವ್ನ ಮಾಡ್ಬೇಕು ಅಂತಾನೆ ಹುಡ್ಗ’ ಹಿಂಗಾಗಿ ‘ಹುಡ್ಗಿ ಯಾವ್ ಜಾತಿಯಾದ್ರು ಪರವಾಗಿಲ್ಲ ಬಡವರಾದ್ರು ಪರವಾಗಿಲ್ಲ ಮದುವೆಯಾಗ್ತಿನಿ ಅಂತಾನೆ’ ಯೋಚ್ನೆ ಮಾಡ್ದೆ ಈ ಹುಡಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡ್ಬಿಡು. ‘ನೀವ್ ಯೋಳ್ದಂಗೆ ಆಗ್ಲಿ ಬುದ್ಧಿಯಾರ, ಒಳ್ಳೆ ದಿನ ನೋಡಿ ದೇವಸ್ಥಾನದಾಗ ತಾಳಿ ಕಟ್ಟಿಸಿಕೊಂಡು ಬರೋಣ’ ಅಂದವಳೇ ಹೇಳಿದ ಒಂದು ವಾರದಲ್ಲಿಯೇ ಧರ್ಮಸ್ಥಳಕ್ಕೆ ಹೋಗಿ ಮದುವೆ ಮಾಡಿಕೊಂಡು ಬಂದು ಬಿಡುತ್ತಾರೆ. ಗೌರಮ್ಮನನ್ನು ಮದುವೆಯಾದ ಶ್ರೀನಿವಾಸನು ಸುಮಾರು ಐದಾರು ವರ್ಷಗಳವರೆಗೂ ಚೆನ್ನಾಗಿಯೇ ಸಂಸಾರ ನಡೆಸುತ್ತಿರುತ್ತಾನೆ, ಆರು ವರ್ಷಗಳ ನಂತರ ಮೈಸೂರಿನಲ್ಲಿರುವ ತಂಗಿ ಮತ್ತು ನೆಂಟರ ಸಂಪರ್ಕ ಸಿಕ್ಕ ನಂತರ ಅವನ ನಡತೆಯಲ್ಲಿ ಕೊಂಚ ಬದಲಾವಣೆಗಳಾಗಿರುತ್ತವೆ, ಅಷ್ಟೊತ್ತಿಗಾಗಲೇ ಮಗ ವಿಮುಖ ಒಂದನೆಯ ತರಗತಿಯಲ್ಲಿ ಓದುತ್ತಿರುತ್ತಾನೆ, ಶಾಲೆಗೆ ವಿಮುಖನನ್ನು ಸೇರಿಸುವಾಗ ಜಾತಿ ಕಾಲಂನಲ್ಲಿ ಅಮ್ಮನ ಜಾತಿ ಕೊಡುವುದೋ ಇಲ್ಲ ಅಪ್ಪನ ಜಾತಿ ಕೊಡುವುದೋ ಎನ್ನುವಾಗ ಮಗನಿಗೆ ಅಪ್ಪನ ಕಡೆಯ ಜಾತಿಯೇ ಇರಲಿ ಎಂದು ಅಯ್ಯಂಗಾರ್ ಎಂದೇ ಶಾಲಾ ದಾಖಲಾತಿಯಲ್ಲಿ ನಮೂದಿಸಲು ಶಾಲೆಯವರಿಗೆ ಹೇಳುತ್ತಾನೆ. ಮನೆಯಲ್ಲಿ ಕ್ರಮೇಣ ಈ ವಿಷಯಕ್ಕೆ ತಾಕಲಾಟಗಳು ಶುರುವಾಗಿಬಿಡುತ್ತವೆ, ಕೊನೆಗೆ ಒಂದು ದಿನ ಮೈಸೂರಿಗೆ ಹೋಗಿ ಬರುವೆ ಎಂದು ಹೋದ ಶ್ರೀನಿವಾಸ ತಿರುಗಿ ಬರುವುದೇ ಇಲ್ಲ, ಬಡಪಾಯಿ ಹೆಣ್ಣು ಗೌರಮ್ಮ ಎಷ್ಟು ಅಂತಾ ಹುಡುಕ್ತಾಳೆ, ಹುಡುಕಲು ಹಣವು ಬೇಕಲ್ಲ! ಕೊನೆಗೆ ಒಂದು ಮೂರು ತಿಂಗಳಿನವರೆಗೂ ಹುಡುಕುವ ಪ್ರಯತ್ನ ಮಾಡಿದರು ದಿನ ಕಳೆದಂತೆ ನೆನಪುಗಳು ಮಸುಕಾಗಿ ಹೊಟ್ಟೆಗೆ ಆ ದಿನದ ಗಂಜಿ ಹುಟ್ಟಿಸಿಕೊಳ್ಳುವುದೇ ಕಷ್ಟವಾಗಿ ಬಿಡುತ್ತದೆ. ಕ್ರಮೇಣವಾಗಿ ಗೌರಮ್ಮ ಗಂಡ ಶ್ರೀನಿವಾಸನನ್ನು ಮರೆಯದೆ ಮರೆತಂತೆ ನಟಿಸುತ್ತಾ ಬದುಕಲು ಆರಂಭಿಸುತ್ತಾಳೆ. ಮಗ ವಿಮುಖ ದೊಡ್ಡವನಾಗಿ ಬಿ.ಎಸ್ಸಿ. ಪದವಿ ಮುಗಿಸಿದರು ಗೌರಮ್ಮನ ಗಂಡ ಮಾತ್ರ ವಾಪಾಸು ಬರಲೇ ಇಲ್ಲ, ಅವನ ಸುದ್ದಿಯು ಇಲ್ಲ. ದೊಡ್ಡವನಾಗುತ್ತಲೆ ವಿಮುಖನಿಗೆ ತನ್ನ ಜಾತಿಯ ವಿಷಯದಲ್ಲಿ ಒಂದಿಷ್ಟು ಇರುಸು ಮುರುಸು ಶುರುವಾಗಲು ಆರಂಭವಾಗಿರುತ್ತದೆ, ಕಾರಣ ಅವನು ಬೆಳೆದ ವಾತಾವರಣ ಎಲ್ಲಾ ದೊಡ್ಡ ಕುರುಬರ ಮನೆತನದ್ದು, ಆದರೆ ಕಾಲೇಜು ಶಾಲೆಯಲ್ಲಿ ಮಾತ್ರ ಜಾತಿ ಅಯ್ಯಂಗಾರ್, ಶಾಲಾ ಕಾಲೇಜಿನ ದಾಖಲಾತಿಯೋ ಅಥವಾ ಪರೀಕ್ಷೆಯ ಅರ್ಜಿ ತುಂಬಲೋ ಹೋಗಿರುವಾಗ ಅಲ್ಲಿ ಗೆಳೆಯರ ಎದುರಿಗೆ ಜಾತಿ ಕಾಲಂ ತುಂಬುವಾಗ ಯಾರಿಗೂ ಹೇಳಿಕೊಳ್ಳಲಾಗದ ಒಂದು ವಿಚಿತ್ರವಾದ ಸಂಕಟವನ್ನು ಅನುಭವಿಸುತ್ತಲೆ ಪದವಿಯನ್ನು ಮುಗಿಸುತ್ತಾನೆ.

ವಿಮುಖ ಈಗ ಪದವಿ ಮುಗಿಸಿ ಮದುವೆಯ ವಯಸ್ಸಿಗೆ ಬಂದಿದ್ದಾನೆ, ಮನೆಯಲ್ಲಿ ಹೆಣ್ಣು ಹುಡುಕುವಾಗ ಕುರುಬರ ಜಾತಿಯಲ್ಲಿ ಹೆಣ್ಣು ಹುಡುಕುವುದೋ ಇಲ್ಲ ಅಯ್ಯಂಗಾರ ಜಾತಿಯಲ್ಲಿ ಹುಡುಕುವುದೋ ಎಂಬ ಹೊರಗಿನ ಲೋಕದ ಮುಂದೆ ಹೇಳಿಕೊಳ್ಳಲಾಗದ ಸಂಕಟಕ್ಕೆ ಮನೆಯವರು ಸಿಲುಕಿಕೊಳ್ಳುತ್ತಾರೆ, ಇವನು ಬೆಳೆದ ವಾತಾವರಣ ಎಲ್ಲಾ ದೊಡ್ಡ ಕುರುಬರ ಮನೆತನದ್ದು ಹುಡುಗಿಯನ್ನು ಮಾತ್ರ ಅದು ಹೇಗೆ ಅಯ್ಯಂಗಾರ್ ಮನೆತನದಿಂದ ತರಲು ಸಾಧ್ಯ, ‘ಇಲ್ಲ ಇದು ಸಾಧ್ಯವಿಲ್ಲ’ ಎಂದು ಕಡ್ಡಿ ಮುರಿದ ಹಾಗೆ ಗೌರಮ್ಮನ ಚಿಕ್ತಮ್ಮ ಮಂಜಪ್ಪ ಅಂದು ಮನೆಯಲ್ಲಿ ಮದುವೆಯ ವಿಚಾರವಾಗಿ ಮಾತನಾಡಲು ಸೇರಿದ್ದ ಎಲ್ಲರ ಮುಂದೆ ಹೇಳಿಬಿಡುತ್ತಾನೆ. ಅದಕ್ಕೆ ದೊಡ್ತಮ್ಮ ಹಾಲೇಶಪ್ಪ ‘ಅದು ಸರಿ ಕನ ಆದ್ರೆ ಹುಡುಗನ ಶಾಲಾ ದಾಖಲಾತಿಯಲ್ಲಿ ಅಯ್ಯಂಗಾರ್ ಅಂತಿದಿಯಲ್ಲ, ಅದಕ್ಕೆ ಹುಡುಗಿಯ ಮನೆಯವ್ರಿಗೆ ಏನಂತ ಉತ್ರ ಕೊಡೋಕೆ ಆಗುತ್ತೆ? ಅದು ಹೇಳು ಮೊದ್ಲು’ ಅಂದವನೇ ಕಣ್ಣನ್ನು ಗೌರಮ್ಮನ ಕಡೆಗೆ ಹಾಯಿಸಿದ. ‘ನಮ್ಮವ್ವ ನನ್ನ ಜಾತಿ ಬುಟ್ಟು ಬೇರೆಯವ್ನಿಗೆ ಯಾಕಾದ್ರು ಕೊಟ್ಳೋ ಈಗ ಅನುಭವಿಸೋರು ನಾವು, ಇವೆಲ್ಲ ಕಥೆ ಹೇಳ್ಕೊಂಡು ಕೂರೋಕೆ ಆಗತ್ತಾ ಎಲ್ರಿಗೂ, ಅಯ್ಯೋ ಸಾಕ್ ಸಾಕಾಗಿ ಹೋಗ್ ಬುಡುತ್ತೆ, ಯಾರಿಗ್ ಬೇಕು’ ಎಂದು ತಲೆಯ ಮೇಲೆ ಕೈ ಹೊತ್ತು ಕೂತಳು ಗೌರಮ್ಮ.

ಕೆಲಸದ ವಿಷಯದಲ್ಲಿ ಬಹಳ ಕಟ್ಟು ನಿಟ್ಟಾಗಿದ್ದ ಲಾಯರ್ ಅನ್ನಪೂರ್ಣ ಹೊಸ ತಲೆಮಾರಿನ ಯುವಕರೆಂದರೆ ವಿಶೇಷ ಕಾಳಜಿ ವಹಿಸಿ ಮೃದು ಮಾತಿನಿಂದಲೇ ಅವರನ್ನು ಬರಮಾಡಿಕೊಂಡು ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದರು. ‘ಮೇಡಂ ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮೆಡಿಕಲ್ ಓದುತ್ತಿದ್ದ ಸುಪ್ರಿಯಾ ಅನ್ನುವ ಹುಡುಗಿಯೊಬ್ಬಳು ತನ್ನ ತಾಯಿಯ ಜಾತಿಯನ್ನು ಬಳಸಲು ಬಾಂಬೆಯ ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದಳು, ಆ ಕೇಸಿನ ತೀರ್ಪಿನಲ್ಲಿ ಹೈಕೋರ್ಟ್‌ ಹೇಳಿದೆ ‘ಅಂತರ್ ಜಾತಿಯ ಮದುವೆಯಾದ ದಂಪತಿಗಳ ಮಕ್ಕಳು ತಾಯಿಯ ಜಾತಿಯನ್ನು ಬೇಕಾದರೆ ತೆಗೆದುಕೊಳ್ಳಬಹುದು ಎಂದು’ ತನ್ನ ಮೊಬೈಲಿನಲ್ಲಿ ಈ ವಿಚಾರವಾಗಿ ಪ್ರಕಟವಾಗಿದ್ದ ತೀರ್ಪಿನ ಲೇಖನವನ್ನು ತೋರಿಸಿದ. ‘ಪರವಾಗಿಲ್ಲ ಕಣ್ರಿ ವಿಮುಖ ನೀವು ಬಹಳ ಚುರುಕಾಗಿದ್ದೀರ ನನ್ನ ಕೆಲಸವನ್ನು ನೀವೇ ಮಾಡ್ತಾ ಇದೀರಾ’ ‘ಸರಿ ಈಗ ನಿಮಗೆ ಏನಾಗಬೇಕು ಅದನ್ನು ಹೇಳಿ?’ ‘ಏನಿಲ್ಲ ಮೇಡಂ ಈಗ ನನ್ನ ಅಕಾಡೆಮಿಕ್ ದಾಖಲೆಗಳಲ್ಲಿಯೂ ಕೂಡ ನಮ್ಮ ತಾಯಿಯ ಜಾತಿಯನ್ನು ಸೇರಿಸಬೇಕು ಮತ್ತು ನಾನು ಬೆಳೆದ ವಾತಾವರಣ ಎಲ್ಲಾ ನನ್ನ ತಾಯಿಯ ಮನೆಯ ಕಡೆಯದು’ ಎಂದಾಗ ‘ನೈಸರ್ಗಿಕ ನ್ಯಾಯದ ಪ್ರಕಾರ ಹೇಳುವುದಾದರೆ ನೀವು ಹೇಳುವುದು ಸರಿಯಿದೆ. ಸರಿ ನಾನು ಈ ವಿಚಾರವಾಗಿ ನಿಮ್ಮ ಕೇಸನ್ನು ತೆಗೆದುಕೊಳ್ಳುತ್ತೇನೆ, ನಿಮ್ಮ ತಾಯಿಯವರ ಮನೆಯ ‘ವಂಶ ವೃಕ್ಷ’ ಮತ್ತು ನೀವು ಎಲ್ಲಿ ಎಲ್ಲಿ ಓದಿರುವಿರೋ ಆ ಶಾಲೆಯ ಕಾಲೇಜಿನ ವಿಳಾಸ ಮತ್ತು ಸಾಧ್ಯವಾದರೆ ವರ್ಗಾವಣೆ ಪತ್ರದ ನಕಲು ಪ್ರತಿಯನ್ನು ತಂದು ಕೊಡಿ’ ಎಂದರು. ಆದರೆ ಇದಕ್ಕೆ ಒಂದಷ್ಟು ತಿಂಗಳು ಹಿಡಿಯುತ್ತದೆ ನೀವು ತಾಳ್ಮೆಯಿಂದ ಇರಬೇಕು ಎನ್ನುವುದು ಮರೆಯಲಿಲ್ಲ. ಲಾಯರ್ ಅನ್ನಪೂರ್ಣ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಪಡೆದುಕೊಂಡ ನಂತರ ಜಿಲ್ಲಾ ಕೋರ್ಟಿನಲ್ಲಿ ಈ ವಿಚಾರವಾಗಿ ದಾವೆಯನ್ನು ಹೂಡಿದರು ಮತ್ತು ಕೋರ್ಟಿಗೆ ಈ ಹಿಂದೆ ಇದೇ ರೀತಿಯ ಪ್ರಕರಣಗಳಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ಸಾರಾಂಶವನ್ನು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನು ಆಲಿಸಿದ ಜಿಲ್ಲಾ ನ್ಯಾಯದೀಶರು ತಮ್ಮ ತೀರ್ಪಿನಲ್ಲಿ ‘ನನ್ನ ಪಾಲಿಗೆ ಇದೊಂದು ಬಹಳ ವಿಶೇಷ ಪ್ರಕರಣ. ಕಾರಣ ಹುಡುಗನೊಬ್ಬ ತನ್ನ ತಾಯಿಯ ಜಾತಿಯನ್ನು ಬಳಸಲು ಅರ್ಜಿ ಸಲ್ಲಿಸಿದ್ದಾನೆ. ಇದರಲ್ಲಿ ತಿಳಿಯುವ ವಿಷಯವೇನೆಂದರೆ ಜಾತಿ ವ್ಯವಸ್ಥೆ ಇನ್ನೂ ಈ ಸಮಾಜದಲ್ಲಿ ಹೇಗೆ ತನ್ನ ಪ್ರಭಾವವನ್ನು ಬೀರುತ್ತಿದೆ ಎಂದು ತಿಳಿಯಬಹುದು ಮತ್ತು ಅದಕ್ಕೆ ವಿಷಾದವಿದೆ. ಸಂಪ್ರದಾಯದಂತೆ ತಂದೆಯ ಜಾತಿಯನ್ನೇ ಮಕ್ಕಳು ಬಳಸಬೇಕು ಎನ್ನುವುದು ಸರಿ ಅಲ್ಲಾ, ಗಂಡು ಮತ್ತು ಹೆಣ್ಣಿಗೆ ನಮ್ಮ ಸಂವಿಧಾನವು ಸಮಾನ ಹಕ್ಕುಗಳನ್ನು ನೀಡಿದ ಮೇಲೆ ಅಂತರ್ ಜಾತಿ ವಿವಾಹವಾಗುವ ದಂಪತಿಗಳಿಗೆ ಹುಟ್ಟುವ ಮಕ್ಕಳು ತಮಗೆ ಬುದ್ಧಿ ಬಂದ ನಂತರ ಫೋಷಕರ ಅಥವಾ ತಾವು ಬೆಳೆದ ವಾತಾವರಣದ ಜಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಇದೇ ನ್ಯಾಯಬದ್ಧವಾದದ್ದು, ಅರ್ಜಿದಾರರಾದ ವಿಮುಖರಿಗೆ ಕೋರ್ಟು ತನ್ನ ತಾಯಿಯ ಜಾತಿಯನ್ನು ಬಳಸಲು ಮತ್ತು ಶಾಲಾ ದಾಖಲಾತಿಗಳಲ್ಲಿ ಜಾತಿಯನ್ನು ಬದಲಾವಣೆ ಮಾಡಲು ಅನುಮತಿ ನೀಡುತ್ತದೆ’ ಈ ರೀತಿಯಾಗಿ ಒಕ್ಕಣೆ ಬರೆದು ತಮ್ಮ ತೀರ್ಪನ್ನು ಪ್ರಕಟಿಸುತ್ತಲೇ ವಿಮುಖ ಮತ್ತು ಅವರ ಮನೆಯವರ ಆನಂದಕ್ಕೆ ಪಾರವೇ ಇರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT