ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಕುಕ್ಕ ಮತ್ತು ಗೀಜಗ ಪಕ್ಷಿಗಳು

Last Updated 3 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಗುಡ್ಡದರಂಗೇನಹಳ್ಳಿಯ ಹೊರ ವಲಯದಲ್ಲಿ ಕೃಷ್ಣಪ್ಪನ ಕಟ್ಟೆ ಎಂಬ ನೀರಿನ ಒಡ್ಡು ಇತ್ತು. ಅದು ಬಹಳ ವಿಶಾಲವಾಗಿತ್ತು. ಅದರ ಏರಿಯ ಮೇಲೆ ಬೋರೆ ಮರವೊಂದು ಇತ್ತು. ಅದರಲ್ಲಿ ನೂರಾರು ಗೀಜಗ ಪಕ್ಷಿಗಳು ಗೂಡನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವಿಸುತ್ತಿದ್ದವು.

ಕಟ್ಟೆಯ ಹಿಂಭಾಗದ ಹೊಲಗಳಲ್ಲಿ ಇದ್ದ ಭತ್ತ, ಸಜ್ಜೆ, ರಾಗಿ, ನವಣೆ ಬೆಳೆಗಳು ಅವುಗಳ ಮೆಚ್ಚಿನ ಆಹಾರ ಆಗಿದ್ದವು. ಮುಂಜಾನೆ ಹಾಗೂ ಸಂಜೆ ಗೀಜಗ ಪಕ್ಷಿಗಳ ಇಂಚರ, ಸೂರ್ಯನ ಹೊನ್ನಿನ ಕಿರಣಗಳ ಸೊಬಗು, ಅಲ್ಲಿದ್ದ ಹಸಿರು, ಬಿದ್ದ ಎಲೆಗೆ ಮುಗಿಬೀಳುವ ಮೀನಿನ ಮರಿಗಳು ಎಂಥವರನ್ನೂ ಒಂದು ಕ್ಷಣ ನಿಂತು ನೋಡುವಂತೆ ಮಾಡುತ್ತಿದ್ದವು.

ಹೀಗೆ ಇರುವಾಗ ಬೋರೆ ಮರದ ಬಳಿ ಒಂದು ಇಲಿ ಬಂತು. ಅಲ್ಲಿದ್ದ ಗೀಜಗ ಪಕ್ಷಿಗಳ ಅನುಮತಿ ಪಡೆದು ಒಂದು ಬಿಲವನ್ನು ಮರದ ಬೊಡ್ಡೆಯ ಬಳಿ ತೋಡಿ ವಾಸ ಮಾಡತೊಡಗಿತು. ಗೀಜಗ ಪಕ್ಷಿಗಳು ಹಾಗೂ ಇಲಿಯ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಇಲಿಯು ಎಲ್ಲ ಗೀಜಗ ಪಕ್ಷಿಗಳ ಜೊತೆ ಒಳ್ಳೆಯ ಸ್ನೇಹಸಂಬಂಧ ಬೆಳೆಸಿಕೊಂಡಿತು. ಗೀಜಗಗಳೂ ಅದೇ ರೀತಿ ಮಾಡಿದವು.

ಕೆಲವೊಮ್ಮೆ ಇಲಿಯು ಎಳೆಯ ತೆನೆಗಳನ್ನು ಮರಿ ಗೀಜಗಗಳಿಗೆ ನೀಡುತ್ತಿತ್ತು. ದಿನಗಳು ಹೀಗೇ ಸಾಗುತ್ತಿದ್ದವು. ಕೆಲವು ವರ್ಷಗಳ ನಂತರ ಇಲಿಯು ಮರಿಗಳನ್ನು ಹಾಕಿತು. ಆಗ ಅದರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ಸಂತಸ ಬಹಳ ದಿನ ಉಳಿಯಲಿಲ್ಲ. ಅಲ್ಲಿಗೆ ಒಂದು ಮಧ್ಯಾಹ್ನ ಬಂದ ಘಟಸರ್ಪವೊಂದು ಇಲಿಯ ಮರಿಗಳನ್ನೆಲ್ಲ ತಿಂದುಹಾಕಿತು. ಆ ಹೊತ್ತಿನಲ್ಲಿ ಇಲಿಯು ಬಿಲದಲ್ಲಿ ಇರಲಿಲ್ಲ. ಸರ್ಪವು ಮರಿಗಳನ್ನು ತಿನ್ನದಂತೆ ತಡೆಯಲು ಬಂದ ಕೆಲವು ಮುದಿ ಗೀಜಗ ಪಕ್ಷಿಗಳನ್ನು ತನ್ನ ಹೆಡೆ ಬಿಚ್ಚಿ ಹೆದರಿಸಿತು.

ಆ ಬೋರೆ ಮರದ ಮೇಲೆ ಇದ್ದ ನೂರೆಂಟು ಹಕ್ಕಿ ಗೂಡುಗಳನ್ನು ಕಂಡ ಸರ್ಪವು ‘ಇಲ್ಲೇ ಇದ್ದರೆ ಹಲವು ದಿನಗಳವರೆಗೆ ಆಹಾರದ ಕೊರತೆಯಾಗದು’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿತು. ಇಲಿಯ ಬಿಲವನ್ನು ಸೇರಿಕೊಂಡಿತು. ಸಂಜೆ ಹೊತ್ತಿಗೆ ಇಲಿಯು ಹಿಂದಿರುಗಿ ಬಿಲದ ಬಳಿ ಬಂತು. ಆಗ ಅದನ್ನು ತಡೆದ ಗೀಜಗ ಪಕ್ಷಿಗಳು ನಡೆದ ವಿಷಯ ಹೇಳಿದವು. ಅದನ್ನು ಕೇಳಿ ಇಲಿ ಜೋರಾಗಿ ಅಳತೊಡಗಿತು. ಕೆಲವು ಗೀಜಗ ಪಕ್ಷಿಗಳು ಸಮಾಧಾನ ಮಾಡಿ ಇಲಿಯನ್ನು ಮರದ ಮೇಲೆ ಕರೆದುಕೊಂಡು ಹೋದವು.

ವಯಸ್ಸಾದ ಪಂಜುಳ್ಳಿ ಎಂಬ ಗೀಜಗವು, ಸರ್ಪವು ಬಿಲದಿಂದ ಹೋಗುವವರೆಗೆ ತನ್ನ ಗೂಡಲ್ಲೇ ಇರುವಂತೆ ಇಲಿಗೆ ಜಾಗ ಮಾಡಿ ಕೊಟ್ಟಿತು.

ಮಾರನೆಯ ದಿನ ಸರ್ಪವು ಗೀಜಗಗಳ ಮೊಟ್ಟೆಗಳನ್ನೂ ಮರಿಗಳನ್ನೂ ತಿನ್ನಲು ಮರ ಹತ್ತತೊಡಗಿತು. ತಕ್ಷಣವೇ ಹಲವು ಗೀಜಗಗಳು ಒಟ್ಟಾಗಿ ದಾಳಿ ಮಾಡಿದವು. ಪ್ರತಿದಾಳಿ ನಡೆಸಿದ ಸರ್ಪವು ಕೆಲವು ಗೀಜಗ ಪಕ್ಷಿಗಳನ್ನು ಕಚ್ಚಿ ಸಾಯಿಸಿತು. ಕೆಲವು ಗೂಡುಗಳಲ್ಲಿ ಇದ್ದ ಒಂದಿಷ್ಟು ಮರಿಗಳನ್ನು ನುಂಗಿಹಾಕಿತು. ಹಾವಿಗೂ ಸಣ್ಣಪುಟ್ಟ ಗಾಯಗಳಾಗಿತ್ತು, ದಾಳಿ–ಪ್ರತಿದಾಳಿಯ ನಂತರ ಹಾವು ಬಿಲ ಸೇರಿಕೊಂಡಿತು.

ಆ ದಿನವೇ ಪಕ್ಷಿಗಳೆಲ್ಲವೂ ಸಭೆ ಸೇರಿ ಚರ್ಚೆ ನಡೆಸಿದವು. ಇಲಿಯು ಗೀಜಗ ಪಕ್ಷಿಗಳನ್ನು ಉದ್ದೇಶಿಸಿ, ‘ನನ್ನ ಗೆಳೆಯ ಮರಕುಕ್ಕ ಎಂಬುವನಿದ್ದಾನೆ. ಅವನ ಬಳಿ ಹೋದರೆ ನಮಗೆ ಸಹಾಯ ಸಿಗಬಹುದು’ ಎಂದು ಸಲಹೆ ನೀಡಿತು. ಗೀಜಗ ಪಕ್ಷಿಗಳ ಮುಖಂಡರು, ಇಲಿಯೊಂದಿಗೆ ಮರಕುಕ್ಕನನ್ನು ಭೇಟಿಯಾಗಿ ನಡೆದ ವಿಷಯವನ್ನು ವಿವರಿಸಿದವು. ನಡೆದಿದ್ದೆಲ್ಲವನ್ನೂ ಕೇಳಿ, ಇಲಿ ಮತ್ತು ಪಕ್ಷಿಗಳ ಬಗ್ಗೆ ಕನಿಕರಗೊಂಡ ಮರಕುಕ್ಕ ತನ್ನಿಂದಾಗುವ ಸಹಾಯ ಮಾಡಲು ಒಪ್ಪಿತು.

ಬೋರೆ ಮರಕ್ಕೆ ಮರಳಿದ ಪಕ್ಷಿಗಳು ಮರಕುಕ್ಕನ ಅಣತಿಯಂತೆ ನೀರಿನ ಕಡೆ ಚಾಚಿದ್ದ ತೆಳ್ಳನೆಯ ರೆಂಬೆಗೆ ತೆರೆದ ಗೂಡನ್ನು ಕಟ್ಟಿದವು. ಅದರ ಒಳಗೆ ಹತ್ತಾರು ಮೊಟ್ಟೆಗಳನ್ನು ಇಟ್ಟವು, ಮರಕುಕ್ಕ ಆ ರೆಂಬೆಯನ್ನು ಚೂಪಾದ ಕೊಕ್ಕಿನಿಂದ ಕುಕ್ಕಿ ಒಂದು ಕಡೆ ಮತ್ತಷ್ಟು ತೆಳುವಾಗಿಸಿತು. ತಾನು ಕೂಡ ಆ ಮರದಲ್ಲೇ ಉಳಿದುಕೊಂಡಿತು. ಮಾರನೆಯ ದಿನ ಮುಂಜಾನೆ ಸರ್ಪವು ಬಿಲದಿಂದ ಹೊರಬಂದು ನಿಧಾನವಾಗಿ ಮರ ಹತ್ತುತ್ತಿರುವಾಗ ತೆರೆದ ಗೂಡು ಅದರ ಕಣ್ಣಿಗೆ ಬಿತ್ತು. ಆ ಗೂಡಿನತ್ತ ವೇಗವಾಗಿ ಧಾವಿಸಿ ಮೊಟ್ಟೆಗಳನ್ನು ನುಂಗಲು ಆರಂಭಿಸಿತು. ಈ ಸಮಯಕ್ಕಾಗಿ ಕಾಯುತ್ತಿದ್ದ ಮರಕುಕ್ಕ ಹಕ್ಕಿಯು ತೆಳುಮಾಡಿದ್ದ ರೆಂಬೆಯನ್ನು ಜೋರಾಗಿ ಕುಕ್ಕಿತು.

ಮೊದಲೇ ತೆಳುವಾಗಿದ್ದ ರೆಂಬೆ ಹಾವಿನ ಭಾರದಿಂದ ಮುರಿದು ದೊಪ್ ಎಂದು ನೀರಿನಲ್ಲಿ ಬಿತ್ತು. ಅಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ಮೊಸಳೆಯು ಕೆಲವೇ ಕ್ಷಣಗಳಲ್ಲಿ ಆ ಹಾವನ್ನು ಕತ್ತರಿಸಿ ತಿಂದಿತು. ಪ್ರತೀಕಾರ ತೆಗೆದುಕೊಂಡು ಗೀಜಗ ಪಕ್ಷಿಗಳು ಹಾಗೂ ಇಲಿ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟವು. ತಮಗೆ ಸಹಾಯ ಮಾಡಿದ ಮರಕುಕ್ಕ ಹಕ್ಕಿಗೆ ಧನ್ಯವಾದ ಸಮರ್ಪಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT