೧‘ಸಣ್ಣಮಕ್ಕಳಿಗೆ ಅನಾಥರು ಅನ್ನಬೌದು. ನಮ್ಮಂತ ಮೂವತ್ತು ವರ್ಷ ಆದೋರಿಗೆಲ್ಲ ಅನಾಥರು ಅಂತಾರಾ ಮ್ಯಾಡಮ್ಮು..’

‘ಯಾಕೇ ಪಾರ್ವತೀ’
‘ನನ್ನೂ ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸ್ಕಂತಾರಾ ಅಂತ..’
‘ಇಲ್ಲ ಕಣೇ..’
‘ವೃದ್ಧಾಶ್ರಮಕ್ಕಾದರೂ..’
‘ಏಯ್ ಹೋಗೇ.. ನಿಂದೊಳ್ಳೆ..’
ಇನ್ನೂ ಈ ಬೆಳಗ್ಗೆಯಷ್ಟೇ ನಗೆಚಾಟಿಕೆ ಮಾಡಿಕೊಂಡು ಅವಲಕ್ಕಿಗೆ ಮೊಸರು, ಮೊಸರಿಗೆ ಉಪ್ಪಿನಕಾಯಿ ವಿನಿಮಯ ಮಾಡಿಕೊಂಡಿದ್ದರು ವಸುಧಾ ಪಾರ್ವತಿ.

ಅನಾಥಾಶ್ರಮಕ್ಕೂ ವೃದ್ಧಾಶ್ರಮಕ್ಕೂ ಸೇರಲಾಗದ ಪಾರ್ವತಿಯದ್ದೇ ವಯಸ್ಸಿನ ಅನಾಥ ಹೆಂಗಸೊಬ್ಬಳ ಆತ್ಯಹತ್ಯೆಯ ಕೇಸು ನಡೆಯುತ್ತಿತ್ತು ಕೋರ್ಟಿನಲ್ಲಿ. ಜಜ್ ಎದುರು ಕಂಪ್ಯೂಟರ್ ಕೀಬೋರ್ಡ್ನ ಮುಂದೆ ಕೂತಿದ್ದಳು ವಸುಧಾ. ವಿಧವಿಧವಾಗಿ ವಾದವಿವಾದಗಳಾಗಿ ಸಕಾರಣ ಸಾಕ್ಷಿಗಳ ಕೊರತೆಗೆ ಮನುಷ್ಯತ್ವವೇ ಕೊನೆಗೊಳ್ಳುವಂತಹ ದೈನಂದಿನ ನ್ಯಾಯಾಲಯದ ಮೊದಲನೆಯ ಹಿಯರಿಂಗ್. ಎಲ್ಲ ಕೇಳಿಸಿಕೊಳ್ಳುತ್ತ ಜಜ್ ಹೇಳುವ ತೀರ್ಪಿನ ಮಾತುಗಳನ್ನು ಟೈಪಿಸುತ್ತ ಕೂತಿದ್ದ ವಸುಧಾಳಿಗೆ ಶ್ರಾವಣಿಯ ಸ್ಕೂಲಿನಿಂದ ಮೂರು ಕರೆಗಳು ಮಿಸ್ಸಾಗಿಹೋಗಿದ್ದವು.

‘ಅನಾಥ ಮಹಿಳೆಯ ಅನಾಥಶವ..’,
‘ಜೀತದಾಳಿನಂತೆ ಮನೆಕೆಲಸಕ್ಕಾಗೇ ಇಟ್ಟುಕೊಂಡ ಹೆಂಗಸು..’,
‘ನಿರ್ಗತಿಕ ಹೆಣ್ಣಿನ ಕೊಳೆತಸ್ಥಿತಿಯಲ್ಲಿ ದೊರೆತ ಹೆಣ...’
ಪದಗಳ ಟೈಪ್ ಮಾಡಲು ಕೈಬೆರಳುಗಳು ಸಹಕರಿಸಲಿಲ್ಲ.
ಬಾಲ್ಯದಿಂದಲೇ ಮನೆಗೆಲಸದ ಆಳುಗಳಾಗಿ ನಗರದ ಮನೆಗಳ ಸೇರಿಕೊಂಡು ಮೂಕವೇದನೆಯಲ್ಲಿ ದುಡಿದು ದುಡಿದೂ ವಯಸ್ಸಾಗಿದ್ದೇ ಅಲ್ಲಿಂದ ಹೊರದಬ್ಬಲ್ಪಟ್ಟು ಕಂಗಾಲಾಗಿ ಬಿಡುವ ಅಸಂಖ್ಯ ಹೆಣ್ಣುಮಕ್ಕಳ ಪರವಾಗಿ-ಲಾಯರ್ ನರವುಬ್ಬಿಸಿ ವಾದ ಮಾಡುತ್ತಿದ್ದ. ಒಂದೂವರೆ ಗಂಟೆ ಸರಿಯಿತು. ಅಂತೂ ಈ ಕೇಸಿನ ಎಂಟನೆಯ ಕೊನೆಯ ಹಿಯರಿಂಗ್ಗೆ ‘ಆತ್ಮಹತ್ಯೆ ಮಾಡಿಕೊಂಡದ್ದು ಅವಳದ್ದೇ ತಪ್ಪು.’ ಎಂದು ಕೋರ್ಟು ತೀರ್ಪು ಕೊಟ್ಟಿತು.

ಅವಳ ಆ ತಪ್ಪಿಗೆ ಮಾತ್ರ ಅವಳಿಗೆ ಶಿಕ್ಷೆ ಘೋಷಿಸಲಿಲ್ಲ.

ನ್ಯಾಯ ದೊರಕಿಸಲೆಂದು ಇಡಿಯ ಕೋರ್ಟ್ಬಲ್ಡಿಂಗ್ನಲ್ಲಿ ಒಂದುನೂರಾ ಅರವತ್ತು ಜನರಿದ್ದರು, ಮೂವತ್ತೆರೆಡು ಕೋಣೆಗಳಿದ್ದವು.. ನೂರಕ್ಕೂ ಮಿಕ್ಕಿ ಕಿಟಕಿಗಳಿದ್ದವು.. ಸಾವಿರಾರು ಕಾನೂನುಗಳಿದ್ದವು.. ಆದರೆ ಎಲ್ಲಿಂದಲೋ ನ್ಯಾಯ ಮಾತ್ರ ತೂರಿಹೋಗಿಬಿಡುತ್ತಿತ್ತು.. ಸದಾ.
ಅಂತೂ ಸತ್ತವಳ ಮತ್ತೆ ಸಾಯಿಸಿದವರೆಲ್ಲ ಲವಲವಿಕೆಯಲ್ಲಿ ಎದ್ದು ಹರಡಿಕೊಂಡು ಮಾಯವಾದರು. ಈವರೆಗೆ ಕಪ್ಪು-ಬಿಳಿಯಾಗಿ ಇಬ್ಬಾಗವಾಗಿ ಕಾಣುತ್ತಿದ್ದ ಕಾನೂನಿನ ಲೋಕ ಕರಗಿಹೋಯಿತು. ಮೂವತ್ತರ ವಯಸ್ಸಿಗೇ ಆಶ್ರಯಕ್ಕೆ ಆಶ್ರಮಗಳ ಅರಸುತ್ತಿರುವ ಪಾರ್ವತಿ ಕಣ್ಮುಂದೆ ಬಂದಳು.

ಕೆಲಸದಿಂದ ಮತ್ತೆ ಕೆಲಸಕ್ಕೆ ಹೊರಳಿಕೊಳ್ಳುವ ಮಾತಿನಲ್ಲೇ ಅಕ್ಕರೆ ಹರಿಸುವ ಬಡಕಲು ದೇಹದ ಹಳ್ಳಿಮೂಲದ ‘ಮ್ಯಾಡಮ್ಮೂ’ ಅಂತ ಕರೆಯುವ ಪಾರ್ವತಿ.. ಎಂಭತ್ತರ ಅಜ್ಜಿಯೊಬ್ಬಳನ್ನು ನೋಡಿಕೊಳ್ಳಲೆಂದೇ ಅವಳ ಕರೆತಂದು ಇಟ್ಟುಕೊಂಡಿದ್ದ ಆ ಮನೆಯವ.
ಹೊರಗೆ ಸಣ್ಣಮಳೆ. ಶ್ರಾವಣಿಯ ನೆನಪಾಯಿತು. ಚಕ್ಕನೆ ಮೊಬೈಲ್ ಕೈಗೆತ್ತಿಕೊಂಡು ಮಿಸ್ಡ್ ಕಾಲ್ಗಳಿದ್ದ ಶ್ರಾವಣಿಯ ಸ್ಕೂಲಿಗೆ ವಾಪಸ್ ಕರೆ ಮಾಡಿದಳು.

‘ಥರ್ಡ್ ಬಿ ಸೆಕ್ಷನ್ ಶ್ರಾವಣಿ ಪೇರೆಂಟಾ? ಸ್ವಲ್ಪ ಸ್ಕೂಲ್ ಕಡೆ ಬರ್ತೀರ?’ ಅಂತೊಂದು ದನಿ. ಇವಳು ‘ಹ್ಞುಂ.’ ಅಂದದ್ದೇ ಕರೆ ತುಂಡಾಯಿತು.

ಗಡಿಯಾರ ನೋಡಿದಳು. ಹನ್ನೊಂದೂವರೆ. ಹೊರಗೆ ಜಿಟಿಜಿಟಿ ಹಿಡಿದ ಜುಲೈ ತಿಂಗಳ ಮಳೆ. ಹನ್ನೊಂದನೆಯ ನಿಮಿಷಕ್ಕೆ ಶ್ರಾವಣಿ ಸ್ಕೂಲಿನ ಕಾಂಪೌಂಡಿನೊಳಗೆ ಸ್ಕೂಟಿ ಪಾರ್ಕ್ ಮಾಡಿದ ವಸುಧಾ, ನೂರಾಹನ್ನೊಂದನೆಯ ಯೋಚನೆಗೆ ತಲೆ ಸಿಡಿದುಹೋಗುವಷ್ಟರಲ್ಲಿ ಪ್ರಿನ್ಸಿಪಾಲ್ ಚೇಂಬರಿನೊಳಗೆ ಹೆಜ್ಜೆಯಿರಿಸಿದಳು.

ಅಪರಾಧ ಮಾಡಿದವಳಂತೆ ಕೂರಿಸಿಕೊಂಡಿದ್ದರು ಶ್ರಾವಣಿಯ. ಮೂಲೆಯಲ್ಲಿ ಬೆವೆತು ಮುದುಡಿ ಕುಳಿತುಕೊಂಡಿದ್ದವಳ ಅಮಾಯಕ ಕಣ್ಣುಗಳು ಪಿಳಿಪಿಳಿ ಹೊಳೆದವು. ಯಾರಿಗೋ ಕಚ್ಚಿಬಿಟ್ಟಳಾ.. ಟಿಸಿ ಕೊಟ್ಟರೇನು ಗತಿ.. ಇದು ಮೂರನೆಯ ಸ್ಕೂಲು.. ಕೂತಲ್ಲೇ ಕನಲಿದಳು ವಸುಧಾ.

‘ಸೀ, ಯುವರ್ ಡಾಟರ್ ಸ್ಟರ್ಟೆಡ್ ಹರ್ ಪೀರಿಯಡ್ಸ್.’ ಅಂದಳು ಪ್ರಿನ್ಸಿಪಾಲ್ ಮರುಕದ ದನಿಯಲ್ಲಿ.
ಕೂತ ಕುರ್ಚಿಯಲ್ಲೇ ಒದ್ದಾಡಿದಳು ವಸುಧಾ. ಹಿಂದೆ ಹೊರಳಿದಳು. ಶ್ರಾವಣಿಯ ಒದ್ದೆ ಚಡ್ಡಿಯಲ್ಲೇ ಕೂರಿಸಿರಬಹುದಾ ಇವರು... ಅವಳ ಚಿತ್ರ ಮಸುಕಾಯಿತು. ಎದ್ದುಬಂದು ಭುಜ ಹಿಡಿದು, ‘ಜಸ್ಟ್ ಬಿ ಕಾಷಿಯಸ್. ನಥಿಂಗ್ ಟು ವರಿ. ಟೇಕ್ ಹರ್ ಹೋಮ್ ಟುಡೇ..’ ಅಂದು ಹೊರಗೆ ನಡೆದಳು ಪ್ರಿನ್ಸಿಪಾಲ್.

ಮಾತಿನಮಲ್ಲಿ ಶ್ರಾವಣಿ ಮೌನದೇವತೆಯಂತೆ ಸ್ಕೂಟಿಯಲ್ಲಿ ಮುಂದೆ ನಿಂತಿದ್ದಳು. ಟ್ರಾಫಿಕ್ ಸಿಗ್ನಲ್ಲುಗಳಿಗೆ ‘ರೆಡ್ ಆಯ್ತು ನಿಲ್ಸಮ್ಮ’ ಅಂತ ಕೂಗುತ್ತಿದ್ದವಳು ಇವತ್ತು ಸುಮ್ಮನಿದ್ದಳು. ಸಿಗ್ನಲ್ಲುಗಳ ಜಾಮ್ಗಳ ದಾಟಿ, ತನ್ನ ಕಾಲೋನಿಯ ಒಳಗೆ ತಂದು ಸ್ಕೂಟಿ ನಿಲ್ಲಿಸಿದಳು ವಸುಧಾ. ಮೆಟ್ಟಿಲ ಸದ್ದಿಗೆ ಓಡಿಬಂದ ಪಾರ್ವತಿ ಕೈಹಿಡಿದು ‘ಪಾತೀ.. ಶ್ರಾವಣಿ ಆಗ್ಬಿಟ್ಟಿದ್ದಾಳೆ ಕಣೇ! ಸ್ವಲ್ಪ ಇವಳನ್ನ ನೋಡ್ಕೋಳೇ. ಮಧ್ಯಾಹ್ನದ ಮೊದನೇ ಹಿಯರಿಂಗ್ಗೆ ನಾನು ಇರಲೇಬೇಕು. ಮೂರು-ಮೂರುವರೆಗೆ ಬಂದ್ಬಿಡ್ತೀನಿ.. ಇವತ್ತೇ ಎಲ್ಲಾ ಕೇಸು ನನಗೇ ವಕ್ಕರಿಸಿಕೊಂಡಿದಾವೆ..’ ಅಂದು ಶ್ರಾವಣಿಗೆ ಮುದ್ದುಕೊಟ್ಟು ಸರಸರನೆ ಮೆಟ್ಟಿಲಿಳಿದಳು. ಕೋರ್ಟ್ನಿಂದ ಸ್ಕೂಲಿಗೆ, ಸ್ಕೂಲಿಂದ ಮನೆಗೆ, ಮನೆಯಿಂದ ಮತ್ತೆ ಕೋರ್ಟಿಗೆ ಉಸಿರುಗಟ್ಟಿ ಬಂದಿದ್ದವಳ ಉಸಿರು ಸಲೀಸಾಗುವುದರೊಳಗೆ..

‘ಸದರಿ ಆರೋಪಿಯು..’ ಅಂತ ಟೈಪ್ ಮಾಡತೊಡಗಿದ್ದಳು. ಬೆರಳುಗಳಿರಲಿ ದೇಹವೇ ಸ್ಪಂದಿಸಲಿಲ್ಲ. ಕೆಂಪಿನ ಹೊಸಲೋಕದಲ್ಲಿ ಕಂಗಾಲಾಗಿದ್ದವಳಿಗೆ ಈ ಜಜ್ ನಿರ್ದೇಶನದ ತೀರ್ಪಿನ ಮಾತುಗಳಲ್ಲಿನ ‘ರಕ್ತ’ವ ಟೈಪ್ ಮಾಡಲಾಗಲಿಲ್ಲ. ಇಡಿ ಕೋರ್ಟು ಗರ್ರಗರ್ರ ತಿರುಗತೊಡಗಿತು.
ಒಂಭತ್ತುವರ್ಷದ ಹೆಣ್ಣುಜೀವದ ಹೊಟ್ಟೆಯಲ್ಲೊಂದು ಚಕ್ರ ತಿರುಗಲು ಶುರುವಾಗಿತ್ತು. ಅದೃಶ್ಯ ಗಡಿಯಾರದ ಟಿಕ್ಟಿಕ್ ಕೂಡ. ಕೆಂಪುಹೆಜ್ಜೆಗಳನ್ನಿಟ್ಟುಕೊಂಡು ಮನೆಯ ಮೆಟ್ಟಿಲಿಳಿದು ಕೋರ್ಟಿನ ಕಟಕಟೆಗೆ ಬಂದು ನಿಂತಂತೆ ಭ್ರಮೆ.. ಬೆಚ್ಚಿ ಒಮ್ಮೆ ಮೈ ಕೊಡವಿದಳು ವಸುಧಾ. ಎಂತಾ ಕೆಟ್ಟ ದಿನವಿದು.. ಹಳಹಳಿಸಿದಳು.

೨‘ಇಷ್ಟಕ್ಕೆಲ್ಲ ಆಸ್ಪತ್ರೆಗೆ ಹೋಗ್ತಾರಾ ಮ್ಯಾಡಮ್ಮೂ?’

ಬಂದದ್ದೇ ಪಾರ್ವತಿಯ ಮೈಯೇರಿ ಕೂತಳು ಶ್ರಾವಣಿ. ಮನೆಗೆ ಬಂದದ್ದೇ ಶ್ರಾವಣಿಯ ಆಸ್ಪತ್ರೆಗೆ ಕರೆದೊಯ್ದಿದ್ದಳು ವಸುಧಾ.
‘ಹೋಗ್ತಿರಲಿಲ್ಲ ಪಾತೀ. ಆಮೇಲೆ ನಂಗೆ ಅನುಮಾನ ಬಂತು. ಸ್ಕೂಲಲ್ಲಿ ಅಕಸ್ಮಾತ್ ಶ್ರಾವಣಿ ಮೇಲೆ ಏನಾದ್ರೂ...’
‘ಥೂ! ಬಿಡ್ತು ಅನ್ನಿ.. ಸ್ಕೂಲಲ್ಲಿ ಹಂಗೆಲ್ಲಾದ್ರೂ ಆಗ್ತತ. ಅದೂ ಇಷ್ಟು ಸಣ್ಣಮಗು ಮೇಲೆ..’
‘ಸ್ಕೂಲಲ್ಲೇ ಆಗೋದು.. ನಿಂಗೊತ್ತಿಲ್ಲ...’
‘ದೇವರೇ..’
‘ಈ ಕೆಲ್ಸ ಬಿಡ್ತೀನಿ ಪಾತೀ. ಇಲ್ಲಾಂದ್ರೆ ಮಗಳ ಸ್ಕೂಲು ಬಿಡಿಸೇಬಿಡ್ತೀನಿ. ನನ್ ಕೈಲಿ ಆಗ್ತಿಲ್ಲ’
‘ಅಯ್ಯೋ ಯಾಕಿಂತಾ ಮಾತಾಡ್ತೀದ್ದಿರಿ..’
ಶ್ರಾವಣಿಯ ಟಿವಿಯ ಕಾರ್ಟೂನಿನಲ್ಲಿ ಇಲಿಯನ್ನು ಹುಡುಕುತ್ತಲೇ ಇತ್ತು ಬೆಕ್ಕು..
ಮೆಟ್ಟಿಲ ಬಳಿ ಸದ್ದಾಯಿತೆಂದು ಎದ್ದು ಹೋದಳು ಪಾರ್ವತಿ.
ವಸುಧಾಳ ತಲೆಯಲ್ಲಿದ್ದ ನೂರು ಯೋಚನೆ ಈಗ ಮುನ್ನೂರಾದವು. ಸ್ನಾನದ ನೆಪದಲ್ಲಿ ಮಗಳ ಬರಿಮೈಯ ಮೇಲಿನ ಕಚ್ಚಿದ ಗೀರಿದ ಗುರುತು ಹುಡುಕಿದಳು.
‘ಯಾರಾದ್ರೂ ನಿನ್ನ ಇಲ್ಲಿ ಮುಟ್ಟಿದ್ರಾ..’ ‘ನೀನು ಟಾಯ್ಲೆಟ್ ಮಾಡುವಾಗ ನೋಡಿದ್ರಾ..’
ಚಿತ್ರ-ವಿಚಿತ್ರ ಪ್ರಶ್ನೆಗಳಾದವು. ಹಸಿಗಣ್ಣಲ್ಲಿನ ವಸುಧಾಳಿಗೆ ತನ್ನ ಹೈಸ್ಕೂಲು ನೆನಪಾಯಿತು, ತನ್ನ ತಾಯಿ ನೆನಪಾದಳು.. ಬೆಳಗ್ಗೆಯ ಅನ್ನಕ್ಕೆ ಮೊಸರು ಕಲಸಿ ಶ್ರಾವಣಿಗೆ ತಿನ್ನಿಸಿ ಮಲಗಿಸಿಯಾಯಿತು.
ರಾತ್ರಿ ಹತ್ತಕ್ಕೆ ‘ಮ್ಯಾಡಮ್ಮೂ..’ ಕಿಟಕಿಯಲ್ಲಿ ಪಾರ್ವತಿ.
‘ಏನೇ..’
‘ಮ್ಯಾಡಮ್ಮು.. ನಮ್ ಶ್ರಾವಣಿನ ಕೂರಿಸ್ಬೇಕಿತ್ತು..’ ಪಿಸುದನಿಯಲ್ಲಿ ಶುರುಮಾಡಿದಳು.
‘ಹ್ಞಾಂ? ಅದನ್ನೆಲ್ಲ ಇಲ್ಲಿ ಎಲ್ಲಿ ಮಾಡೋಕಾಗತ್ತೆ? ಅದನ್ನ ಹೇಳೋಕೆ ನಿದ್ದೆಮಾಡೋದು ಬಿಟ್ಟು ಬಂದ್ಯ..’
‘ನಿದ್ರೆ ಬರಲ್ಲ ಬಿಡ್ರಿ.’
‘ನೀನು ನೋಡ್ಕಂತಿದ್ಯಲ್ಲ ಆ ಅಜ್ಜಿ ಸತ್ತು ದೆವ್ವ ಆಗಿದ್ದಾಳೇಂತ ಭಯಾನಾ..’
‘ದೆವ್ವದ್ದೆಲ್ಲ ಭಯ ಇಲ್ಲ. ಮನುಷ್ಯರದ್ದೇ..’
‘ಹ್ಞಾಂ!’
‘ಈಗ ಬಾಳೆಹಣ್ಣು, ಬೆಳಗ್ಗೆ ಕಣ್ಬಿಟ್ಟಾಗ ಸುಲಿದಬಾಳೆ ಹಣ್ಣು.. ಹಂಗಾಗೈತೆ ನನ್ ಕಥೆ..’
‘ಏನೇ ಹಂಗಂದ್ರೆ..’
‘ಅದು ಬಿಡ್ರಿ.. ಈ ಭಾನುವಾರ ಯೇಳ್ತೀನಿ. ನೀವು ಫ್ರೀ ಇರ್ತೀರಲ್ಲ ಅವಾಗ.’
ಹುಚ್ಚುಹಿಡಿಸಿದ ದಿನದ ದಣಿವು ವಸುಧಾಳ ಕಣ್ಣಿಗೂ ನಿದ್ರೆ ಕೊಡಲಿಲ್ಲ. ಕಣ್ಮುಚ್ಚಿದರೆ ಕೆಟ್ಟಕನಸಾದೀತೆಂದು ಹೆದರಿದಳು. ಡೈರಿ ತೆರೆದಳು.
‘ಚಕ್ರವಿದು..
ನಿಂತಲ್ಲೇ ತಿರುಗಿಸುವ..
ಬದುಕ ಚಲನೆ ತಪ್ಪಿಸುವ ಚಕ್ರ..’
ಯಾವಾಗಲೋ ಬರೆದಿಟ್ಟ ಕವನದ ಚೀಟಿ. ಹರಿದು ಎಸೆದಳು.

೩‘ಸತ್ಯವನ್ನು ಹೇಳುತ್ತೇನೆ.. ಸತ್ಯವನ್ನಲ್ಲದೆ...’

ಅಮ್ಮನ ತಾಳಿಯನ್ನು ಟ್ರೇನಲ್ಲಿ ಹಿಡಿದುತಂದು ಪ್ರಮಾಣ ಮಾಡಿಸಿಕೊಂಡು ಹೋದ ಅಟೆಂಡರ್. ‘ನಿನ್ನಮ್ಮನಿಗೆ ಮದುವೆಯೇ ಆಗಿಲ್ಲ ಅಂದ ಮೇಲೆ ನೀನು ಹೇಗೆ ಹುಟ್ಟಿದೆ? ಈ ತಾಳಿ ನಿಮ್ಮಮ್ಮನದು ಹೇಗಾಗುತ್ತದೆ?’ ಬೆನ್ನಿಗೆ ಸ್ಪೀಕರ್ ಕಟ್ಟಿಕೊಂಡು ಬಾಯಿಗೆ ದೊಡ್ಡಮೈಕು ಹಿಡಿದು ಕೇಳುತ್ತಿದ್ದ ಲಾಯರು ಬರಿಮೈಯಲ್ಲಿ ಚಡ್ಡಿಯಲ್ಲಿ. ಟೇಬಲ್ಲಿನ ಮೇಲೆ ಕುಕ್ಕುರು ಕೂತ ಜಜ್ ಜೋಕರ್ ಟೋಪಿಯಲ್ಲಿ.. ನ್ಯಾಯದೇವತೆಯ ಕಣ್ಪಟ್ಟಿ ಕೆಳಗಿಳಿದು ಬಾಯಿ ಮುಚ್ಚಿತ್ತು. ಕೋರ್ಟಿನಲ್ಲಿ ಮೊಣಕಾಲಮಟ್ಟದ ನೀರು! ನಿಂತೇ ಮಾತನಾಡುತ್ತಿದ್ದರು ಎಲ್ಲ. ಸಾಕ್ಷಿಗಳು ಅಂತ ಬರೆದಿದ್ದ ಬೀರು ವಾಲಿಕೊಂಡು ನೀರಿನಲ್ಲಿ ತೇಲಿಹೋಗುವುದರಲ್ಲಿತ್ತು. ‘ನಿನಗೂ
ಮದುವೆಯಾಗಿಲ್ಲ ಅಂದ ಮೇಲೆ ಇವಳು ನಿನ್ನ ಮಗಳು ಹೇಗಾಗುತ್ತಾಳೆ..’
ಮತ್ತೊಬ್ಬ ಲಾಯರೂ ಅದೇ ಅವತಾರದಲ್ಲಿ. ಶ್ರಾವಣಿಯ ಕುತ್ತಿಗೆಗೊಂದು ಅರ್ಧ ಅನಾಥೆ ಬೋರ್ಡು ಹಾಕಿ ತಂದು ಕಟಕಟೆಗೆ ನಿಲ್ಲಿಸಿದರು.

ಧಿಗ್ಗನೆದ್ದು ಕೂತಳು ವಸುಧಾ. ಹೊಟ್ಟೆನೋವೆಂದು ನರಳುತ್ತಿದ್ದಳು ಶ್ರಾವಣಿ.

೪‘ಮ್ಯಾಡಮ್ಮೂ ಎರಡು ಬಿಳೀಕೂದಲು!’

ಅಂತೂ ಪಾರ್ವತಿಯನ್ನು ಇರಿಸಿಕೊಂಡಿದ್ದ ಮನೆಯ ಯಜಮಾನ ಇಡೀ ದಿನ ಮಾಯವಾಗುವ ಭಾನುವಾರ ಬಂತು.ಇದೇ ಪಾರ್ವತಿ ಈ ಬಿಲ್ಡಿಂಗಿಗೆ ಹೊಸತಾಗಿ ಬಂದಾಗ ವಸುಧಾಳ ತಲೆಗೂದಲು ಹಾರಿ ಬಂತೆಂದು ಜಗಳ ತೆಗೆದಿದ್ದಳು.
‘ವಯಸ್ಸಾಯ್ತು ಕಣೇ.’
‘ಯಾರಾನಾ ನಂಬ್ತಾರಾ ಮ್ಯಾಡಮ್ಮೂ.. ಪ್ರಾಯ ಪುಟೀತೈತೆ..’ ಮುಂಗೈ ಗಿಲ್ಲಿದಳು.
‘ನಿಂದು?’
‘ನಮ್ದೆಲ್ಲಾ ಸೋರಿ ಹೋಗೈತೆ ಬಿಡ್ರಿ..’
‘ಸುಲಿದ ಬಾಳೆಹಣ್ಣು ಅಂದ್ರೇನು ಮೊದಲು ಹೇಳು..’
‘ಬೆಳಕಿಗೆ ಪೂರ್ತಿಬಟ್ಟೆ, ಕತ್ಲಿಗೆ ಅರ್ಧಬಟ್ಟೆ ಅನ್ನೋಥರ.’
‘ಪಾತೀ, ಆಯಪ್ಪ ನಿನ್ನ ಮೈಮುಟ್ತಾನೇನೇ!’ ಪಾರ್ವತಿಯ ಹಿಡಿದು ಅಲುಗಾಡಿಸಿದಳು.
‘ಏನಾಗ್ತೈತೆ ನನಗೂ ಗೊತ್ತಿಲ್ಲ ಮ್ಯಾಡಮ್ಮೂ. ಎಚ್ಚರಾದಾಗ ಮೈಮೇಲೆ ಬಟ್ಟೆ ಇರಲ್ಲ ಅಷ್ಟೆ.’
‘ಮತ್ತೇನ್ಮಾಡ್ತೀಯೇ?’
‘ಏನಿಲ್ಲ. ಆ ಅಜ್ಜಿ ಸಾಯ್ತಲ್ಲ. ಇನ್ನೊಂದು ತಿಂಗಳಿಗೆ ನನ್ನ ಹೊರಗೆ ಹಾಕ್ತಾನೆ. ಎಲ್ಲ ಮುಗದೋಗ್ತತೆ ಬಿಡ್ರಿ..’
‘ವಾಪಸ್ ಊರಿಗೋಗ್ತೀಯಾ..’
‘ನಂಗೆ ಊರು ಅಂತಾನೂ ಇಲ್ಲ, ಮನೆ ಅಂತಾನೂ ಇಲ್ಲ ಮ್ಯಾಡಮ್ಮೂ. ಪ್ಯಾಟೀನಾಗೇ ಮನೆಯಿಂದ ಮನೆಗೆ ಸೇವೆ ಮಾಡ್ತಾ ಕೆಲಸ ಮಾಡ್ತಾ ವಯಸ್ಸಾಗಿ ಸತ್ತೋಗದು, ನಮ್ಮಮ್ಮನಂಗೆ.. ಅಷ್ಟೇಯಾ.’
‘ಆಯಪ್ಪನಿಗೂ ನಿಂಗೂ ಸಂಬಂಧ ಕಟ್ಟಿ ಮಾತಾಡ್ತಿದಾರ ಈ ಬಿಲ್ಡಿಂಗಿನ ಹೆಂಗಸ್ರು..?’
‘ಇಲ್ಲ. ಅದಕ್ಕೆಲ್ಲ ನಾನು ತಲೆ ಕೆಡಿಸ್ಕಣಲ್ಲ..’
‘ಮತ್ತೆ..’
‘ನಂಗೂ ನಿಮಗೂ ಸಂಬಂಧ ಕಟ್ಟಿ ಮಾತಾಡಾಕತ್ತಾರಂತೆ..’
‘ಹ್ಞಾಂ!’
ಹೊರಗೆ ಸದ್ದಾಯಿತು. ಧಿಗ್ಗನೆದ್ದು ಹೊರಟ ಪಾರ್ವತಿಯ ಕೈಹಿಡಿದಳು. ‘ಹೌದೇನೇ!’
‘ಹ್ಞುಂ. ಅದಕ್ಕೇ ಎತ್ಲಾಗಾರಾ ದೂರ ಹೋಗ್ಬಿಡಣಾಂತಿದೀನಿ..’
ಮೂಗೇರಿಸುತ್ತ ನಡೆದುಹೋದವಳ ಬಡಕಲು ಬೆನ್ನಿನ ಮೇಲೆ ಅಸ್ಪಷ್ಟ ಗೀರುಗಳು.

೫
‘ಪ್ರತಿ ಮೂರುಗಂಟೆಗೆ ಒಂದು ರೇಪ್ ಆಗುತ್ತದಂತೆ ಉತ್ತರ ಪ್ರದೇಶದಲ್ಲಿ..’
‘ಇಲ್ಲೂ ಹೆಚ್ಚು ಕಡಿಮೆ ಅದೇ ಸ್ಥಿತಿ ಇದೆ..’
‘ಇನ್ ಇಂಡಿಯಾ ಎವೆರಿ ಥ್ರೀ ಹರ್ಸ್ ಒನ್ ವುಮೆನ್ ಈಸ್ ರೇಪ್ಡ್..’
‘ಇವತ್ತಿನ ನಾಲ್ಕೂ ಕೇಸು, ರೇಪ್ ಕೇಸೇ ತಗಳ್ರೀ..’
ಊಟವನ್ನೂ ಬಲವಂತದಿಂದ ಮಾಡುತ್ತ ಬಲಾತ್ಕಾರದ ಸುದ್ದಿಯನ್ನೇ ಉಂಡರು ಸಹೋದ್ಯೋಗಿಗಳು. ಖಾಯಂ ಉದ್ಯೋಗಿಗಳ ಧ್ವನಿ ಜೋರು, ಅರೆಕಾಲಿಕ ಉದ್ಯೋಗಿಗಳ ಉಸಿರಿಲ್ಲದ ಧ್ವನಿ.. ಅಲುಗಾಡುವ ಕುರ್ಚಿಯಲ್ಲಿ ಅಲುಗಾಡುತ್ತ ಕೂತ ವಸುಧಾ ತಾನು ತಂದಿದ್ದ ಚಿತ್ರಾನ್ನದಲ್ಲಿದ್ದ ಸೇಂಗಾಬೀಜ ಆರಿಸಿಡುತ್ತ ಒಮ್ಮೆ ನಕ್ಕಳು ಮತ್ತೆ ಅತ್ತಳು. ಟೈಮ್ ನೋಡಿದಳು. ಮೂರು ಗಂಟೆ. ಮಗಳ ಸ್ಕೂಲು ಬಿಡಲು ಇನ್ನೂ ಒಂದೂವರೆ ಗಂಟೆ. ಇನ್ನೊಂದು ಗಂಟೆ, ಇನರ್ಧ ಗಂಟೆ, ಇನ್ನು ಹತ್ತು ನಿಮಿಷ.. ಎಣಿಕೆಯೇ ಶುರುವಾಗಿಹೋಯ್ತು ವಸುಧಾಳಿಗೆ.
‘ಹದಿನೇಳು ವರ್ಷದ ಹುಡುಗ ಮೂವತ್ತೈದು ವಯಸ್ಸಿನ ಹೆಂಗಸನ್ನ ರೇಪ್ ಮಾಡಿದಾನಂತ್ರೀ..’
ವಸುಧಾ ನೀರು ಮೈಮೇಲೆ ಚೆಲ್ಲಿಕೊಂಡಳು.
‘ಈಗೇನು ಕಾಲೇಜು ಹುಡುಗರೂ ರೇಪ್ ಮಾಡಿಬಿಡ್ತಾರೆ, ಮೈಮರೆತರೆ..’

೬
‘ಕಾಂಗರೂ ಬಗ್ಗೆ ಹೇಳಮ್ಮಾ.. ಅದು ಮಗೂನ ಹೊಟ್ಟೇಲೇ ಇಟ್ಕೊಂಡಿರುತ್ತಂತೆ.. ನನ್ನೂ ಹಂಗೇ ಇಟ್ಕೊಂಡು ಹೋಗು ನಿನ್ನ ಡ್ಯೂಟಿಗೇ..’ ಅಂದಿದ್ದ ಮಗಳ ದಿಟ್ಟಿಸಿದಳು. ರಾತ್ರಿ ಹನ್ನೊಂದೂವರೆ.
ಕಾಂಗರೂಗೊಂಬೆ ಅವುಚಿಕೊಂಡೇ ಪಿಟಿಪಿಟಿ ತುಟಿಯಾಡಿಸುತ್ತ ಮಲಗಿದ್ದಳು. ಪ್ರಕೃತಿಯ ಅನಿವಾರ್ಯ ನೆತ್ತರಕ್ರವ ಸರಿದೂಗಿಸಲು ಮೈರಕ್ತ ಕಳೆದುಕೊಂಡ ಶ್ರಾವಣಿ ಮೂಕಪ್ರಾಣಿಯಂತೆಯೇ ಕಂಡುಬಂದಳು.. ಈಗ ಮಗುವೂ ಆಗದೇ ಹೆಣ್ಣೂ ಆಗದೆ ಮಗುವಿನ ದೇಹದಲ್ಲಿ ಹೆಣ್ಣಾಗುತ್ತ ಹುಣ್ಣಾದ ಗಾಯಕ್ಕೆ ಕನಲುತ್ತ ನಡುಗುತ್ತ...

ತಾಯಿಯಾಗದೆ ತಾಯಿಯನ್ನಾಗಿಸಿದ ಕಂದಮ್ಮನ ಮೈಮುಟ್ಟಿದಳು. ಮೆದುಪಾದಗಳ ಮೃದುವಾಗಿ ಒತ್ತಿದಳು. ಅಂಗಾತ ಮಲಗಿಸಿ ಬೆವೆತ ಕುತ್ತಿಗೆ ಒರೆಸಿ ಗಾಳಿಯೂದಿದಳು.

ಸ್ಕೂಲ್ ಎಂಬ ಅರ್ಥಹೀನ ವ್ಯವಸ್ಥೆಯೊಳಗೆ ಶ್ರಾವಣಿ ಹೊಂದಿಸಿಯೂ ಬರೆಯದೆ ಖಾಲಿಬಿಟ್ಟ ಸ್ಥಳಗಳನ್ನೂ ತುಂಬದೇ ಅಸಂಬದ್ಧ ಪ್ರಶ್ನೆಗಳಿಗೆ ಅಸಂಬದ್ಧ ಉತ್ತರಗಳ ಕಂಠಪಾಠ ಮಾಡದೇ - ದಡ್ಡಿಯಾದಳು. ಕೆಲವೊಮ್ಮೆ ಒರಟಾದಳು. ಪೇರೆಂಟ್ಸ್ ಮೀಟಿಂಗಿನಲ್ಲಿನ ಟೀಚರುಗಳ ರೆಡಿಮೇಡ್ ಪ್ರಶ್ನೆ. ‘ಶ್ರಾವಣಿ ಮೆಂಟಲಿರಿಟರ್ಡ್ ಇರಬಹುದಾ?’

ಕಾಂಗರೂ ಪ್ರಾಜೆಕ್ಟು ಫೇಲಾಗಿ ಬರಿ ಗೊಂಬೆಯಾಯಿತು, ‘ಐ ಲವ್ ಮೈ ಫಾದರ್’ ಅಸೈನ್ಮೆಂಟು ತೋಪಾಯಿತು, ಈಗ ಫ್ಯಾಮಿಲಿ ಟ್ರೀ ಬರೆದುಕೊಂಡು ಬರುವ ಹೋಮ್ವರ್ಕ್ನಲ್ಲಿ ಮಕಾಡೆ ಬಿದ್ದಿದ್ದಳು ಶ್ರಾವಣಿ. ನಿದ್ದೆ ಬಾರದೆ ಮಧ್ಯರಾತ್ರಿ ಎದ್ದು ಕೂತು ಮಗಳ ಸ್ಕೂಲ್ಬ್ಯಾಗು, ಡೈರಿ ಚೆಕ್ ಮಾಡಿದವಳಿಗೆ ಅಚ್ಚರಿಯಾದದ್ದು ಫ್ಯಾಮಿಲಿ ಟ್ರೀಯಲ್ಲಿ ‘ಅಪ್ಪ’ನ ಜಾಗದಲ್ಲಿ ಕೈಗೆ ಸಿಕ್ಕ ಪಾರ್ವತಿ ಯದ್ದೇ ಫೋಟೋ ಅಂಟಿಸಿಕೊಟ್ಟಿದ್ದು ವಾಪಸ್ಸು ಬಂದಿತ್ತು.

೭
‘ಮ್ಯಾಡಮ್ಮು ಇವತ್ತಿಗೆ ಶ್ರಾವಣಿದು ಏಳನೇ ದಿನ. ಅರಿಶಿಣ ಹಚ್ಚಿ ನೀರು ಹಾಕಬೇಕಿತ್ತು. ದೋಷ ರ್ತತೆ ನೋಡ್ರಿ ಮ್ಯಾಡಮ್ಮು ಮತ್ತೆ, ಹಂಗೆಲ್ಲ ಮಾಡ್ಲಿಲ್ಲಾಂದ್ರೆ..’ ಕಾಡಿಗೆಯ ಕಣ್ಣರಳಿಸಿದಳು.
ಶ್ರಾವಣಿಯ ಮೋಟುಕೂದಲಿಗೆ ಎರಡು ಸಣ್ಣಜಡೆ ಹಾಕಿ ಕೈಬಿಟ್ಟಳು ಪಾರ್ವತಿ.
‘ಪಾರ್ವತಿ ನಿಂಗೆ ನಿನ್ನಮ್ಮ ಎಲ್ಲಾ ಮಾಡಿದ್ಲಲ್ಲೇ.. ನಿಂಗ್ಯಾಕೆ ಒಳ್ಳೇದಾಗ್ಲಿಲ್ಲ.. ಹೇಳೇ...’
‘ನಂದು ಬಿಡ್ರಿ, ಎಲ್ಲಾ ಮುಗದೋಗೈತೆ..’
‘ಮೂವತ್ತನೇ ವಯಸ್ಸಿಗೆ ಎಲ್ಲಾ ಮುಗದೋಯ್ತಾ?’
‘ಮುಗದಿದ್ದು ಯಾವಾಗ ಸುರುವಾಗಿದ್ಯಾವಾಗ ಒಂದೂ ಗೊತ್ತಿಲ್ಲ ಬಿಡಿ ಮ್ಯಾಡಮ್ಮು..’
ಟವೆಲ್ಲು ಸುತ್ತಿ ಹೊರಬಂದು ನಿಂತ ವಸುಧಾಳ ದಿಟ್ಟಿಸಿ, ನಿಡುಸುಯ್ದಳು ಪಾರ್ವತಿ.
‘ಎಷ್ಟಂತ ತಣ್ಣೀರು ಸ್ನಾನ ಮಾಡ್ತೀರ, ಮ್ಯಾಡಮ್ಮು. ಒಂದ್ ಮದ್ವೆ ಆಗ್ರೀ..’
ಎದ್ದುಹೋದಳು ಪಾರ್ವತಿ. ಗರಬಡಿದಂತೆ ನಿಂತೇ ಇದ್ದಳು ವಸುಧಾ.
ರಿಜಿಸ್ಟ್ರಡ್ಡ್ ಪೋಸ್ಟ್ ಬಂದರೆ, ಗ್ಯಾಸ್ ಸಿಲಿಂಡರ್ ಬಂದರೆ, ಮಗಳ ಸ್ಕೂಲು ಬೇಗನೇ ಲೆಟ್-ಆಫ್ ಮಾಡಿದರೆ.. ಪಾರ್ವತಿಯೇ ನೋಡಿಕೊಳ್ಳಬೇಕಿತ್ತು. ವಸುಧಾ ಕೋರ್ಟಿನಿಂದ ಓಡೋಡಿ ಬರುವ, ಬಂದು ಅಲ್ಲಿ ಬೈಸಿಕೊಳ್ಳುವ ಪ್ರಮೇಯ ತಪ್ಪಿಸಿದ್ದಳು.

‘ಪಾರ್ವತಿ ಇದಾಳೆ, ಅವ್ಳು ಎಲ್ಲಾ ಮಾಡ್ತಾಳೆ..’ ವಸುಧಾಳ ಧೈರ್ಯದ ಮಾತು.
ದೇಖರೇಖಿಯ ಅಜ್ಜಿ ಸತ್ತು ಒಮ್ಮೆಲೆ ಫ್ರೀ ಆದ ಪಾರ್ವತಿ, ‘ಮ್ಯಾಡಮ್ಮು ನಾನಿದೀನಿ ಇನ್ಮೇಲೆ ನೀವು ಚಿಂತೆ ಬಿಡ್ರಿ’ ಅಂದ ದಿನವೇ ಹೊಸ ಜಜ್ ಬಂದ. ಕೋರ್ಟು ಬದುಕಿನ ಕಟಕಟೆಯಾಗಿಹೋಗಿತ್ತು. ದೈನಿಕ ತೀರ್ಪುಗಳಿಗೆ ಅರ್ಧಗಂಟೆ ಪರ್ಮಿಷನ್ನಿಗೆ ಮೇಲಧಿಕಾರಿ ಮುಂದೆ ಕೈಕಟ್ಟಿನಿಲ್ಲುವವಳು ‘ಅರೆಕಾಲಿಕ ಉದ್ಯೋಗಿ ಅರ್ಧಕಾಲಿನ ವಸುಧಾ’ ಆಗಿಹೋಗಿದ್ದಳು.

೮
ಸುಸ್ತಾಗಿ ಮಲಗಿ ಕಣ್ಮುಚ್ಚಿದ ವಸುಧಾ ಕಣ್ಬಿಟ್ಟಾಗ ಕತ್ತಲು.
ನೆಲದ ಎದೆಬಡಿತ ಕೇಳಿಸುವಂತೆ, ಹಸಿಮಣ್ಣಿನ ಮೇಲೆ ಮಲಗಿದಂತೆ.. ಕೈಯಾಡಿಸಿದರೆ ಜೇಡರಬಲೆ ಒಣಗಿದಬಳ್ಳಿ-ಮುಳ್ಳು.. ‘ಅಮ್ಮಾ..’ ಕೂಗಿದಳು ಬಾಲ್ಯದಲ್ಲಿ ಕೂಗಿದಂತೆ.. ಧ್ವನಿ ಮಾರ್ದನಿಸಿತು. ಇದು ಹಳ್ಳಿಮನೆಯ ಹಿತ್ತಿಲ ಬಾವಿ.. ಖಾತ್ರಿಯಾಯಿತು. ಮತ್ತೆ ಕೂಗಿದಂತೆ ಅದು ಮತ್ತೆ ‘ಅಮ್ಮಾ.. ಅಮ್ಮಾ..’ ಅಂತು. ಪಾಳುಬಾವಿಯೊಳಗೆ ಬಂದು ಬಿದ್ದೆನ.. ನಾನೇ ಇಳಿದುಬಂದು ಇಲ್ಲಿ ಮಲಗಿದೆನ.. ಹೆದರಿದಳು.. ಯಾರಾದರೂ ಬರುತ್ತಾರಾ.. ಈ ಬಾವಿಯೊಳಗೆ ಬಗ್ಗಿ ನೋಡುತ್ತಾರಾ.. ಕಾದಳು.. ಕತ್ತಲಲ್ಲೇ ನೋಡುತ್ತಿದ್ದವಳ ಮೇಲೆ ಬಾವಿಯ ವೃತ್ತಾಕಾರದ ಬಾಯಿ ಆಕಾಶ ತೋರಿಸಿತ್ತು.. ನಿಧಾನ ಬೆಳಕಾಯಿತು.. ಹೊರಗೆಲ್ಲ ಜನ ಮಾತಾಡುತ್ತಿರುವಂತೆ. ‘ಸತ್ತಿದ್ದಾಳೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..’ ಮಾತುಗಳು ಜೋರಾದವು. ಹೌದೌದೆಂದು ಮತ್ತಷ್ಟು ಧ್ವನಿಗಳು. ‘ಇಲ್ಲ ನಾನು ಬಿದ್ದಿಲ್ಲ.. ನಾನು ಸತ್ತಿಲ್ಲ..’ ಕೂಗಿದಳು.
‘ಈ ಬಾವಿ ಮುಚ್ಚಿಬಿಡಿ..’ ‘ಕಲ್ಲುಚಪ್ಪಡಿ ಎಳೆಯಿರಿ..’ ‘ಮಣ್ಣುತುಂಬಿ..’ ಮೇಲಿನ ವೃತ್ತಾಕಾರದ ಬೆಳಕಿನ ಕಡೆಯಿಂದ ಕತ್ತಲಮಾತುಗಳು.. ಪರಿಚಿತ ದನಿಗಳೇ.. ‘ಅಯ್ಯೋ.. ಅಮ್ಮಾ.. ಅಮ್ಮಾ.. ಕಾಪಾಡೀ’ ಚೀರತೊಡಗಿದಳು. ‘ಅಮ್ಮಾ ಅಮ್ಮಾ..’ ಆ ಕಡೆಯಿಂದಲೂ ಕೂಗು.. ಬಾವಿಯಲ್ಲಿ ಬಗ್ಗಿತೊಂದು ಮುಖ.. ಶ್ರಾವಣಿಯದು.
ಧಿಗ್ಗನೆದ್ದು ಕೂತಳು. ಪಕ್ಕದ ಹಾಸಿಗೆ ಹಸಿಯಾಗಿತ್ತು. ಶ್ರಾವಣಿಯ ಹೊರಳಿಸಿದಳು. ಚಂದಿರನ ಲೆಕ್ಕಕ್ಕೆ ಸಿಕ್ಕುಬಿದ್ದ ಮಗಳ ಮೇಲೆ ಕಿಟಕಿಯಿಂದ ಹುಣ್ಣಿಮೆಯ ಚಂದ್ರನ ಬೆಳಕು.

೯
ಕಥೆ ಹೇಳಮ್ಮ ಅಂತ ವಸುಧಾಳಿಗೆ ದುಂಬಾಲು ಬಿದ್ದಿದ್ದ ಶ್ರಾವಣಿ, ಪಾರ್ವತಿಯ ತೊಡೆಯ ಮೇಲೆ ನಿದ್ರೆ ಹೋಗಿ ಬಿಟ್ಟಿದ್ದಳು. ‘ಮ್ಯಾಡಮ್ಮು ಶ್ರಾವಣಿ ಮಕ್ಕಂಡೇಬಿಟ್ಲು. ನಂಗೇ ಕಥೆ ಹೇಳ್ರಿ, ಕೇಳ್ತೀನಿ.’
‘ನಿಂಗ್ಯಾವ ಕಥೆ ಹೇಳೋದೇ..’
‘ಅದೇ ನಿಮ್ಮ ಕೋರ್ಟಿನಲ್ಲಿ ದಿನಾ ನಡೀತಾವಲ್ಲ.. ಅವೇ ಕಥೆಗಳು..’ ಚಾಪೆ ಎಳೆದುಕೊಂಡು ಅದರ ಮೇಲೆ ಶ್ರಾವಣಿಯ ಮಲಗಿಸಿದಳು.
‘ಅಯ್ಯೋ! ಅದ್ಯಾವುದೂ ಚೆನ್ನಾಗಿರಲ್ಲ ಬಿಡು..’
‘ಅದೇ ಆ ಜಲಜಾಕ್ಷಮ್ಮನ ಕಥೆ.. ಹೇಳ್ರೀ..’
‘ನೀನೆಲ್ಲಿ ನೋಡಿದೆ ಆ ಕಥೇನಾ!’ ಕಂಗಾಲಾದಳು ವಸುಧಾ. ನಿಟ್ಟುಬೀಳುವಂತೆ ಕುಕ್ಕರು ಕೂಗಿತು.
‘ಫ್ಯಾಮಿಲಿ ಟ್ರೀ ಪ್ರಾಜೆಕ್ಟಿಗೆ ಡ್ಯಾಡಿ ಫೋಟೋ ಬೇಕೂಂತ ಡ್ರಾ ಎಲ್ಲಾ ತೆಗೆದು ಹಾಳೆ ಎಲ್ಲಾ ಕಿತ್ತಾಕಿ ಹುಡುಕಾಡ್ತಿದ್ಲು ಶ್ರಾವಣಿ.. ಅವಾಗ ಆ ಹಾಳೆ ಸಿಕ್ತು.. ಒಂದೆರೆಡು ಸಾಲು ಓದಿದೆ ಅಷ್ಟೆ.. ಅಲ್ಲೇ ಇಟ್ಟಿದ್ದೀನಿ ಮ್ಯಾಡಮ್ಮೂ.’ ಮುಖಚಿಕ್ಕದು ಮಾಡಿಕೊಂಡವಳ ತಲೆಗೆ ಮೊಟಕಿ, ‘ಸ್ಟುಪಿಡ್’ ಅಂದಳು.
‘ಸಾರಿ ಮ್ಯಾಡಮ್ಮು. ತಪ್ಪಾಯ್ತು. ನಿಮ್ ಡೈರಿದು ಹಾಳೇಂತ ಗೊತ್ತಿದ್ರೆ ಓದ್ತಿರಲಿಲ್ಲ.’ ಕೈಮುಗಿದಳು. ‘ಓದುವೆಯಂತೆ, ಒಂದು ದಿನ ಕೊಡ್ತೀನಿ. ಸರಿ ಬಿಡು ಅಳ್ಬೇಡ.’
‘ಹಂಗಾರೆ ಅದೇ ಕಥೆ ಹೇಳ್ರಿ..’ ಕಾಲಿಡಿದಳು.
‘ಅದು ಕಥೆಯಲ್ಲ, ವಿಷ. ಕುಡೀತಿಯಾ?’
‘ಹ್ಞುಂ’
ದೀರ್ಘ ಉಸಿರುತೆಗೆದುಕೊಂಡು ‘ಇಲ್ಲೇ ಇದೇ ಊರಲ್ಲಿ ಜಲಜಾಕ್ಷಿ ಅಂತೊಬ್ಬಳು ಇದ್ದಳು.’ ಶುರುಮಾಡಿದಳು.
‘ಹ್ಞುಂ’
‘ಬಡತನಾಂದ್ರೆ ಬಡತನ. ಅವರಿವರ ಮನೆ ಕಸ-ಮುಸುರೆ ಮಾಡಿಕೊಂಡು ಜೀವನ ಸಾಗಿಸೋದು. ಮೂವತ್ತೈದು ದಾಟಿದ್ರೂ ಮದ್ವೆ ಆಗಿರಲಿಲ್ಲ.’
‘ಹ್ಞುಂ. ನನ್ಹಾಂಗೇ ಅನ್ರೀ..’
‘ಸುಮ್ನೆ ಕೇಳೇ ಪಾತೀ.. ಅಡ್ಡಬಾಯಿ ಹಾಕ್ಬೇಡ..’
‘ತಪ್ಪಾತು ಹೇಳ್ರೀ..’
‘ಹಿಂಗೇ ಒಂದು ದಿನ ಒಬ್ರು ಮನೆಗೆ ಕೆಲಸ ಮಾಡೋಕೆ ಹೋದಾಗ..’
‘ಹೋದಾಗ.. ಹೇಳ್ರೀ..’
‘ಆ ಮನೇಲಿ ಯಾರೂ ಇರಲಿಲ್ಲ, ಒಬ್ಬನ್ನ ಬಿಟ್ಟು..’
‘ಹ್ಞುಂ..’
‘ನೀರು ಕೇಳಿದಳು. ಅವನು ಫ್ರಿಜ್ಜಿನಲ್ಲಿದ್ದ ಬಾಟಲಿ ಕೊಟ್ಟ.’
‘ಆಮ್ಯಾಕೆ?’
‘ನೀರು ಕುಡಿದದ್ದಷ್ಟೇ ನೆನಪು. ಮಲಗಿದೋಳು ಕಣ್ಬಿಟ್ಟಾಗ ಬೆತ್ತಲೆಯಾಗಿದ್ಲು..’
‘ಅಯ್ಯೋ ದೇವರೇ.. ಪಾಪ. ಆಮೇಕೆ?’
‘ಅಷ್ಟೇ. ಅಷ್ಟೆಲ್ಲ ಆದ್ಮೇಲೆ ಇನ್ನೇನಿರುತ್ತೆ...’
‘ರೇಪ್ ಮಾಡಿ ಸಾಯ್ಸೇ ಬಿಟ್ನಾ ಆ ಪಾಪಿ..’
‘ಸಾಯಿಸ್ಲಿಲ್ಲ.’
‘ಅವಳೇ ಆತ್ಮಹತ್ಯೆ ಮಾಡ್ಕಂಡ್ಲಾ?’
‘ಮಾಡ್ಕಳೋಕೆ ಬಹಳ ಟ್ರೈ ಮಾಡಿದ್ಲು. ಎಲ್ರ ಮನೆ ಕೆಲಸಾನೂ ಬಿಟ್ಲು. ಅಷ್ಟರಲ್ಲಿ..’
‘ಅಷ್ಟರಲ್ಲಿ? ಮುಂದೇನಾತು ಮ್ಯಾಡಮ್ಮು..’
‘ವಾಂತಿ ಮಾಡ್ಕಂಡ್ಲು..’
‘ಅಯ್ಯೋ! ಆ ಪಾಪಿಷ್ಟ? ಅವನೆಲ್ಲಿ ಹೋದ?’
‘ಅವ್ನು ಅವತ್ತೇ ಬೈಕ್ನಲ್ಲಿ ಹೋಗ್ಬೇಕಾದ್ರೆ ಸತ್ತೇ ಹೋದ. ವಿಪರೀತ ಕುಡಿದಿದ್ದನಂತೆ..’
‘ಅಯ್ಯ ಶಿವನೇ.. ಜೀವ ಜಲ್ ಅಂತು ನೋಡ್ರಿ ಕೇಳಿ..’
‘ಅದ್ಕೇ ಈ ಕಥೆ ಹೇಳೋದಿಲ್ಲ ಅಂದಿದ್ದು.. ಪಾತೀ’
‘ಮುಂದೆ.. ನಮ್ ಜಲಜಾಕ್ಷಮ್ಮನ ಕಥಿ ಏನಾತು..?’
‘ನೀನೇ ಹೇಳು..’
‘ಹೇಳಾದೇನು ಮ್ಯಾಡಮ್ಮು.. ಒಂದ್ಕಡೆ ಗರ್ಭಿಣಿ ಇನ್ನೊಂದ್ಕಡೆ ಆ ಮಗೀನ ತಂದೆ ಕಳಕಂಡಾಳೆ.. ಪಾಪ..’
‘ಅಷ್ಟೇ. ಮುಗೀತು ಕಥೆ.’
‘ಆ ಮಗೀನ ಏನ್ ಮಾಡಿದ್ಲು.. ತೆಗೆಸಾಕಿಬಿಟ್ಲಾ..?’
‘ನೀನೇ ಹೇಳು ಪಾತಿ, ಇಟ್ಕಂಡ್ರೆ ಸರಿನಾ? ತೆಗಸಾಕಿದ್ರೆ ಸರಿನಾ?’
ಮೆಟ್ಟಿಲ ಬಳಿ ಸದ್ದಾಯಿತು. ಮೂಗೇರಿಸುತ್ತ ಎದ್ದು ನಡೆದೇಬಿಟ್ಟಳು ಪಾರ್ವತಿ.

೧೦
‘ಕೋರ್ಟ್ನ ಸಾವಿರಾರು ಅರೆಕಾಲಿಕ ಉದ್ಯೋಗಿಗಳು ವಜಾ’
ಟೀ ಲೋಟ ಜಾರಿಬಿತ್ತು. ಟಿವಿ ಬಂದ್ ಮಾಡಿದಳು ವಸುಧಾ. ಎದ್ದು ನಡೆದರೆ ಮೂಲೆಯಲ್ಲಿದ್ದ ಪಾರ್ವತಿಯ ಬ್ಯಾಗು ಕಾಲಿಗಡ್ಡ ಸಿಕ್ಕುತ್ತಿತ್ತು. ವೃದ್ಧಾಶ್ರಮದಲ್ಲೂ ಅನಾಥಾಶ್ರಮದಲ್ಲೂ ಸೀಟು ಸಿಗದೇ. ಅಯ್ಯೋ ಪಾರ್ವತಿ ಇನ್ನು ಎರಡು ಮೂರು ದಿನಗಳ ಅತಿಥಿ. ತಲೆಗೂದಲು ಗಿಂಜಿಕೊಂಡಳು.
ಬಿಲ್ಡಿಂಗ್ ಬಾಡಿಗೆ ದುಪ್ಪಟ್ಟುಮಾಡಿದ್ದ ಲೆಟರೂ ಟೇಬಲ್ಲಿನ ಮೇಲಿತ್ತು.
ಸ್ಕೂಲಿನಿಂದ ಮೇಲೆ ಮೇಲೆ ಫೋನು.. ‘ನಿಮ್ಮ ಜಾತಿ, ಮಗುವಿನ ತಂದೆಯ ಹೆಸರು ಬೇಕು. ಆನ್ಲೈನ್ ಅಪ್ಲೋಡ್ ಮಾಡಬೇಕು. ಅರ್ಜೆಂಟ್ ಅರ್ಜೆಟ್.’
ರಜೆ ಬೇಕೆಂದು ತನ್ನ ಆಫೀಸಿಗೆ ಕರೆ ಮಾಡಿದಳು. ‘ಬರಲೇಬೇಕು ಕಣ್ರೀ.. ಇವತ್ತು ಅರ್ಜೆಂಟ್ ಮೂರು ಕೇಸಿವೆ.. ಖಾಯಂನೌಕರರಂಗೆ ನಿಮಗೆ ರಜೆ ಇರಲ್ಲ..’ ಮೇಲಧಿಕಾರಿ ಕೂಗಿದ.
ಕಂಗಾಲಾದ ವಸುಧಾಳ ಕನಸಿನ ಕತ್ತಲಬಾವಿ ಕರೆಯುತ್ತಿತ್ತು.
‘ಅಫೇರ್ಗೆ ಹುಟ್ಟಿದ ಮಕ್ಕಳೆಲ್ಲಾ ಜೋರಾಗರ್ತಾರೆ..’ ಸಹೋದ್ಯೋಗಿ ಮಾತೂ ಗುಂಯ್ಗುಡತೊಡಗಿತು. ‘ಮ್ಯಾಡಮ್ಮೂ ರೇಪ್ ಆದ ಮೇಲೆ ಹುಟ್ಟಿದ ಮಕ್ಳು ಎಲ್ಲಿ ಹೋಗ್ತಾರೆ’ ಪಾರ್ವತಿಯ ಪ್ರಶ್ನೆ ಕೊರೆಯುತ್ತಿತ್ತು. ಡೈರಿ ತೆರೆದಳು. ಜಲಜಾಕ್ಷಮ್ಮನ ಹಾಳೆ. ‘೧೭-೩೫’ ಶೀರ್ಷಿಕೆ. ಮುಚ್ಚಿಟ್ಟಳು.
ಕಣ್ಣೊರೆಸಿಕೊಂಡು, ಬಿಳಿಹಾಳೆ ತೆಗೆದು ಬರೆಯತೊಡಗಿದಳು.

೧೧
ಮುಂಬಯಿ. ಅಂಧೇರಿ ಈಸ್ಟ್. ಫ್ರೀಡಮ್ ಕಾಲನಿ. ಮೂರನೆಯ ಫ್ಲೋರ್.
ತಮ್ಮಿಡೀ ಜೀವನ ಹಿಡಿಸಿದ್ದ ಆರು ಬ್ಯಾಗುಗಳ ದಿಟ್ಟಿಸುತ್ತಿದ್ದರು ವಸುಧಾ ಪಾರ್ವತಿ. ಲಂಗಹಿಡಿದು ತಿರುಗುತ್ತಿದ್ದಳು ಶ್ರಾವಣಿ. ಬೆಳಕೋ ಬೆಳಕು.

‘ಆರ್ಡರ್ ಆರ್ಡರ್..’ ಸದ್ದು, ‘ರೇಪ್-ರೇಪ್’ ಪದಗಳು, ‘ಶ್ರಾವಣಿ ಬ್ಯಾಡ್ಗರ್ಲ್’ ಬಿಲ್ಡಿಂಗ್ ಮಕ್ಕಳ ಕೂಗು, ‘ನಿನಗೂ ಅವಳಿಗೂ ಏನು ಸಂಬಂಧ’ ಗಾಸಿಪ್ಪುಗಳು, ‘ಶ್ರಾವಣೀ, ನಿನ್ನಪ್ಪ ಎಲ್ಲಿದಾನೇ..’ ‘ವಸುಧಾ, ನೀನು ಡಿವರ್ಸೀನಾ, ವಿಡೊನಾ?’ ಸಹೋದ್ಯೋಗಿ ಪ್ರಶ್ನೆ...
ಏನೊಂದೂ ಕೇಳಿಸದಷ್ಟು ಕಾಣಿಸದಷ್ಟು ತಟ್ಟದಷ್ಟು ದೂರ ಬಂದಿದ್ದರು.
‘ದಾವಣಗೆರೆ, ಹುಬ್ಳಿ, ಪೂನಾ ದಾಟಿ.. ಬಾಂಬೇಗೆ ಬಂದ್ಬಿಟ್ವಲ್ಲ! ನನ್ನ ಎಲ್ಲೂ ಇಳಿಸಲಿಲ್ಲವಲ್ಲಾ ಮ್ಯಾಡಮ್ಮೂ..’ ಪಾರ್ವತಿಗೆ ಅಚ್ಚರಿ.
‘ಎಲ್ಲಿ ಇಳಿದುಹೋಗ್ತಿದ್ದೆ..’
‘ಗೊತ್ತಿಲ್ಲ.’
‘ಇನ್ಮೇಲೆ ನಿನ್ನ ನಿಲ್ದಾಣ ನನ್ ಜೊತೆಗೇ.’
‘ಇಲ್ಲಿಗೇ ಯಾಕೆ ಬಂದ್ರಿ ಮ್ಯಾಡಮ್ಮೂ..’
‘ಶುರುವಾದಲ್ಲಿಗೇ ಬಂದೆ, ಅಷ್ಟೇ ಪಾತೀ.’
ತಮ್ಮದೆನಿಸುವ ಜಾಗದಲ್ಲಿ ತಮ್ಮ ಲೋಕದಲ್ಲಿ ಓಡಾಡಿದರು. ಜೋಡಿಮೇಲೆ ಬಾಲ್ಕನಿಯಲ್ಲಿ ನಿಂತರು. ಹೊರಗೆ ಹೊಸಮಕ್ಕಳ ಜೊತೆ ಆಡಿ ಸುಸ್ತಾಗಿ ಬಂದಳು ಶ್ರಾವಣಿ. ಪಾರ್ಸೆಲ್ಲಿನ ಊಟವೂ ಆಯಿತು. ಕಥೆಗಾಗಿ ಹಪಹಪಿಸಿದ ಶ್ರಾವಣಿ ಮಲಗಿದಳು.
‘ಈ ಹೊಸಾಜಾಗದಾಗೆ ನಿದ್ರೆ ಬರ್ತಿಲ್ಲ. ಒಂದ್ ಕಥೆ ಹೇಳ್ರಿ..’ ವಸುಧಾಳ ಕೈಹಿಡಿದೆಳೆದಳು.
‘ಯಾವ್ ಕಥೆ.. ಆ ಜಲಜಾಕ್ಷಮ್ಮಂದಾ..’ ಅವಳ ದಿಟ್ಟಿಸಿದಳು.
‘ಯಾಕೆ, ನನ್ನ ಅಳಿಸಬೇಕೂಂತ ಮಾಡೀರಾ ಮ್ಯಾಡಮ್ಮೂ..’
‘ಇನ್ಮೇಲೆ ಅಳೋದಿರಲ್ಲ. ಕಣ್ಮುಚ್ಚಿ ಮಲಗು. ಬೆಳಗ್ಗೆ ಬೇಗ ಏಳಬೇಕು.’
‘ಡ್ಯೂಟಿಗಾ?’
‘ಎಸ್. ಇಂಪರ್ಟೆಂಟ್ ಡ್ಯೂಟಿ. ನಾಳೆ ಒಂದು ಸ್ಪೆಷಲ್ ಜಾಗಕ್ಕೆ ಕರಕೊಂಡುಹೋಗ್ತೀನಿ’

೧೨
‘ಅಬ್ಬಾ! ಈ ಗುಡ್ಡದ ಮ್ಯಾಲಿನ ಆಶ್ರಮ ಎಷ್ಟ್ ಚೆನಾಗೈತೇ...’
ಎದುರುಗಾಳಿಗೆ ಏದುಸಿರಿಗೆ ಹತ್ತಿದರು ಮೆಟ್ಟಿಲುಗಳ. ಶ್ರಾವಣಿಯ ಜೊತೆ ಕಾಂಗರೂಗೊಂಬೆಯೂ. ಹಾರಿಹೋಗುತ್ತಿದ್ದ ಪಾತಿಯ ಕೈಹಿಡಿದೆಳೆದುಕೊಂಡಳು. ಆಶ್ರಮ ಹತ್ತಿರವಾಯಿತು. ಮಾತುಕತೆಯಾಯಿತು. ಲೆಡ್ಜರಿನಲ್ಲಿ ಸಹಿಮಾಡಿದಳು ವಸುಧಾ.
‘ನೀನು ಕೇಳ್ತಿದ್ದೆಯಲ್ಲ.. ಆ ಮಕ್ಳೆಲ್ಲಿ ಹೋಗ್ತಾರೆ ಅಂತ.. ಅವರೆಲ್ಲ ಇಲ್ಲಿಗೆ ಬರ್ತಾರೆ.’
‘ಯಾವ ಮಕ್ಳು?’
‘ಯಾರಿಗೂ ಬೇಡವಾದ ಬಲಾತ್ಕಾರದಿಂದ ಹುಟ್ಟಿದ ಮಕ್ಕಳು.’
ಹೂಗಿಡಗಳ ಹಿಡಿದು ಸಾಲಿನಲ್ಲಿ ನಗುತ್ತ ಹೋದ ಮಕ್ಕಳ ಕಂಡಳು ಪಾರ್ವತಿ.
‘ಅಯ್ಯೋ! ಮಕ್ಳಿಲ್ಲದೋರು ಇಂತಾ ಒಂದೊಂದು ಮಗು ತಕಂಡೋದ್ರೆ ಎಲ್ರಿಗೂ ಒಂದೊಂದು ನೆರಳಾಗ್ತತೆ, ಅಲ್ಲಾ ಮ್ಯಾಡಮ್ಮೂ..’ ಅಲ್ಲಾಡಿಸಿದಳು ವಸುಧಾಳ, ಪಾರ್ವತಿ.
‘ಹ್ಞುಂ. ಅದ್ಕೇ ನಾನೂ ಇಲ್ಲಿಂದ ಒಂದು ತಗೊಂಡ್ಬಂದೆ.’
‘ಏನು ತಕಂಡ್ಬಂದ್ರಿ!’ ಪಾರ್ವತಿ ಎಡವಿದಳು.
‘ಈ ಕಾಂಗರೂಮರೀನ...’ ಗಂಟಲು ಕಟ್ಟಿಹೋಯಿತು ವಸುಧಾಳದ್ದು. ಕಾಂಗರೂ ಜೊತೆ ಶ್ರಾವಣಿಯೂ ಓಡಿಬಂದಳು. ಮಾತು ಶಕ್ತಿ ಕಳೆದುಕೊಂಡಿತ್ತು. ಬರೀ ಗಾಳಿಯಾಟ. ಮೆಟ್ಟಿಲಿಳಿಯತೊಡಗಿದರು.
‘ಪುಣ್ಯಕ್ಷೇತ್ರ ಇದು.. ಮ್ಯಾಡಮ್ಮೂ..’
‘ಇಷ್ಟ ಆಯ್ತ?’
‘ಹ್ಞುಂ. ಆ ಜಲಜಾಕ್ಷಮ್ಮಂಗೆ ಮಗೂ ಆಗಿದ್ರೆ ಇಲ್ಲೇ ಬಿಡಬಹುದಿತ್ತಲ್ವ.’
‘ಹೌದಲ್ವ..’
‘ಜಲಜಾಕ್ಷಮ್ಮ ಆ ಮಗೂನ ತೆಗ್ಸಿಸದಳಾ ಮ್ಯಾಡಮ್ಮೂ..’
‘ಆ ಜಲಜಾಕ್ಷಮ್ಮ ಆ ಮಗೂನ ತೆಗೆಸಿಹಾಕಿಬಿಟ್ಟಿದ್ರೆ...’
‘ತೆಗ್ಸಿದ್ರೆ?’
‘ನಿನ್ನ ಇಷ್ಟು ದೂರ ಯಾರೂ ಕರಕೊಂಡು ಬರಬೇಕಿತ್ತು, ನೀನೇ ಹೇಳು..’
‘ಅಯ್ಯೋ! ದೇವರೇ.. ಮ್ಯಾಡಮ್ಮೂ!!’ ಕುಸಿದು ಕೂತಳು ಪಾರ್ವತಿ.
‘ಅವಳ ಬದ್ಕು ಹಾಳಾದಾಗಲೇ ಇವ್ಳ ಜೀವ ಹುಟ್ಕಂಡಿದ್ದು ಕಣೇ.’
‘ಜಲಜಾಕ್ಷಮ್ಮನ ಕಥೆಯ ವಿಷಾನಾ ಇಷ್ಟುವರ್ಷ ಕುಡದೀರಲ್ಲ ಮ್ಯಾಡಮ್ಮೂ..’
ವಸುಧಾಳ ಅಂಗೈ ಹಿಡಿದು ಹಣೆಗೊತ್ತಿಕೊಂಡಳು. ಪಾರ್ವತಿಯ ಕಾಡಿಗೆಕಣ್ಣಿನಿಂದ ಕಪ್ಪನೆಯ ಕಣ್ಣೀರು ಸೋರತೊಡಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.