ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಥೆ: ನನ್ನದು ಅಲ್ಲ, ನಿನ್ನದು ಅಲ್ಲ

Published 26 ಮೇ 2024, 0:14 IST
Last Updated 26 ಮೇ 2024, 0:14 IST
ಅಕ್ಷರ ಗಾತ್ರ

‘ಕೆರೆ ಹಿಂದಿರೋ ಗದ್ದೆ ಭೂಮೀನ ಕ್ರಯಕ್ಕೆ ಕೊಡ್ತಾನೇನೋ, ಯಾರಾದರೂ ಹೋಗಿ ಕಾಳಾಚಾರಿಯನ್ನ ಕೇಳ್ಕಂಡ್‌ ಬನ್ರೊ...’ ಎಂದು ಪದೇ ಪದೇ ತನ್ನ ಮಕ್ಕಳಿಗೆ ಹೇಳುತ್ತಿದ್ದ ದೊಡ್ಡಮನೆ ನಾರಣಪ್ಪ ಇತ್ತೀಚೆಗೆ ಆ ವಿಷಯವನ್ನು ಮರೆತಿದ್ದ.

‘ನಮಗಿರೋ ಹೊಲ,ಗದ್ದೆಗಳನ್ನ ಉಳುಮೆ ಮಾಡಿ, ಬಿತ್ತನೆ ಮಾಡಿದರೆ ಸಾಕಾಗಿದೆ. ಸರ್ಕಾರ ಕೊಡೋ ಪುಗಸಟ್ಟೆ ಅಕ್ಕಿ ತಿಂದು ಬ್ಯಾಸಾಯದ ಕೆಲಸಗಳನ್ನ ಮಾಡ್ತಿದ್ದವರು ಬೆಂಡಿನಂತಾಗಿದ್ದಾರೆ!. ಅವರಿಗೆ ಹೊಲಗದ್ದೆಗಳಲ್ಲಿ ದುಡಿಯೋ ಶಕ್ತಿ ಇಲ್ಲ. ಗಳೇವು ಕೆಲಸಕ್ಕೆ ಬನ್ರೋ ದಿನಕ್ಕೆ ಆರುನೂರು ರುಪಾಯಿ ಕೊಡ್ತೀನಿ ಅಂದರೂ ಒಬ್ಬನೂ ಬರಲ್ಲ! ನನ್ನ ಮುಖ ಕಂಡರೆ ಸಾಕು ತಪ್ಪಿಸಿಕೊಂಡು ಹೋಗ್ತಾರೆ. ಮುಂದಿನ ದಿನಮಾನದಲ್ಲಿ ಆಳು ಮಕ್ಕಳನ್ನು ನಂಬಿಕೊಂಡು ಬ್ಯಾಸಾಯ ಮಾಡಿಸೋದು ಆಗಲ್ಲ...’ ಕಾಳಾಚಾರಿಯ ಗದ್ದೇನ ಖರೀದಿ ಮಾಡೋ ಆಸೆ ಬಿಟ್ಟು ರಾಮ,ಕೃಷ್ಣ ಅಂತ ಮನೆಯಲ್ಲಿರಿ. ಮನೆಯಲ್ಲಿರಕೆ ಆಗಲ್ಲ ಅನ್ಸಿದರೆ ಕಾಶಿಗೋ, ಇಲ್ಲಾ ರಾಮೇಶ್ವರಕ್ಕೋ ಹೋಗಿ ಬನ್ನಿ. ಹೋಗೋದಾದರೆ ಹೇಳಿ ನಾವು ವ್ಯವಸ್ಥೆ ಮಾಡ್ತೀವಿ ಎಂದು ನಾರಣಪ್ಪನ ಮಕ್ಕಳು ಅಪ್ಪನಿಗೆ ಆಗಾಗ ಹೇಳುತ್ತಿದ್ದರು. ಮಕ್ಕಳು ಅಂಥ ಮಾತಾಡಿದ ಸಂದರ್ಭಗಳಲ್ಲಿ ನಾರಣಪ್ಪ ‘ರೈತನ ಮಗ ಭೂಮಿಗೆ ಆಸೆ ಪಡದೆ ಬೆಳ್ಳಿ,ಬಂಗಾರಕ್ಕೇ ಆಸೆ ಪಡ್ತಾನೇನು. ಎಷ್ಟು ಜಮೀನೈತೆ ಅಂಬೋದರ ಮೇಲೆ ರೈತನ ವಜನ್ನು ಗೊತ್ತಾಗದು. ದುಡೀಬೇಕು, ದುಡಿದೇ ಉಣ್ಣಬೇಕು. ಕಾಯಕವೇ ಕೈಲಾಸ ಅಂತ ಅಣ್ಣನವರು ಸುಮ್ನೆ ಹೇಳಿ ಹೋದರೇನು? ಹೊಲ,ಗದ್ದೆಗಳಲ್ಲಿ ಮೈಮುರಿದು ದುಡಿಯೋದೇ ದೇವರ ಪೂಜೆ. ಅದರಲ್ಲೇ ಕಾಶಿ, ರಾಮೇಶ್ವರ ಕಾಣಬೇಕು...’ ಎಂದು ನಾರಣಪ್ಪ ಹೇಳುತ್ತಿದ್ದ.
 *
 ‘ಒಂದ್‌ ವಾರದಿಂದ ಮಾಮಯ್ಯ ಮನೆ ಬಿಟ್ಟು ಎಲ್ಲೂ ಹೋಗ್ತಿಲ್ಲ! ಯಾವಾಗ್ಲೂ ಪುಸ್ತಕ ಓದ್ಕಂಡ್‌ ಕುಂತರ‍್ತಾರೆ...’ ಎಂದು ಮನೆಯ ಹೆಂಗಸರು ಹೇಳಿದ್ದನ್ನು ಕೇಳಿ ನಾರಣಪ್ಪನ ಮಕ್ಕಳಿಗೆ ಆಶ್ಚರ್ಯ ವಾಗಿತ್ತು. ಅಪ್ಪಯ್ಯನಿಗೆ ಇನ್ನಷ್ಟು ಭೂಮಿ ಖರೀದಿ ಮಾಡೋ ಹುಚ್ಚು ಬಿಟ್ಟು, ಓದೋ ಹುಚ್ಚು ಹಿಡ್ಕಂಡಂಗಿದೆ ಅಂದುಕೊಂಡು ಸುಮ್ಮನಾಗಿದ್ದರು.

ರೈತ ಅಂದ ಮೇಲೆ ಭೂಮಿ ಕೊಳ್ತಾ ಇರಬೇಕೇ ಹೊರತು ಮಾರಬಾರದು ಎಂದು ನಾರಣಪ್ಪ ಊರಜನರಿಗೆ ಉಪದೇಶ ಮಾಡ್ತಿದ್ದ. ಆದರೆ ಅವನ ಗಮನ ಊರ ಸುತ್ತ ಇರೋ ಆಯಕಟ್ಟಿನ ಭೂಮಿಗಳ ಮೇಲಿತ್ತು. ಮಕ್ಕಳು, ಮರಿಗಳ ಮದುವೆ, ಮುಂಜಿ ಮತ್ತೊಂದಕ್ಕೆ ದುಡ್ಡಿಲ್ಲ ಅಂತ ಯಾವನಾದರೂ ಭೂಮಿ ಮಾರಬೌದು ಅಂತ ಸದಾ ಕಣ್ಣು, ಕಿವಿಗಳನ್ನು ತೆರೆದುಕೊಂಡೇ ಇರ‍್ತಿದ್ದ. ಭೂಮಿ ಉಳುಮೆ ಮಾಡದೆ ಬೀಳು ಬಿಟ್ಟವರನ್ನು ಮನೆಗೆ ಕರೆಸಿಕೊಂಡು ರೈತನ ಮಗ ಅಂದ ಮೇಲೆ ನಮ್ಮ ಕುಲಕಸುಬು ಬಿಡಬಾರದು ಮಗಾ. ಬ್ಯಾಸಾಯ ಕಷ್ಟ ಅಂತ ನೀನು ಸುಮ್ಮನಿದ್ದರೆ ಭೂಮ್ತಾಯಿ ಬಂಜೆಯಾಗ್ತಾಳೆ. ಗಳೇವು, ಬಿತ್ತನೆ ಬೀಜಕ್ಕೆ ದುಡ್ಡಿಲ್ಲದಿದ್ದರೆ ನನ್ನ ಕೇಳು, ಕೊಡ್ತೀನಿ. ಆದರೆ ಭೂಮೀನ ಬೀಳು ಬಿಡಬ್ಯಾಡ. ನಿನ್ನ ಕೈಲಿ ಆಗದಿದ್ದರೆ ನಂಗೆ ಕೊಡು. ಒಳ್ಳೇ ರೇಟು ಕೊಡ್ತೀನಿ. ಮಾರೋಕೆ ಮನಸ್ಸಿಲ್ಲದಿದ್ರೆ ಕೋರಿಗಾದರೂ ಕೊಡು. ನಾನು ಉಳುಮೆ ಮಾಡಿಸ್ತೀನಿ. ನಿನ್ನ ಭೂಮಿಯಲ್ಲಿ ಏನು ಹುಟ್ಟುತ್ತೋ ಅದರಲ್ಲಿ ನಿಂಗರ್ಧ, ನಂಗರ್ಧ...’ ಎಂದು ಹೇಳಿ ಒಪ್ಪಿಸೋಕೆ ನೋಡ್ತಿದ್ದ.

ನಾರಣಪ್ಪನ ಮಾತುಗಳಿಗೆ ಮರುಳಾದವನ ಕತೆ ಮುಗಿದುಹೋಗ್ತಿತ್ತು! ಸಾಲಗಾರ ಕೇಳಿದಷ್ಟು ದುಡ್ಡು ಕೊಡ್ತಿದ್ದ. ಅದನ್ನು ವಾಪಸ್‌ ಕೊಡು ಅಂತ ಕೇಳದೆ ಐದಾರು ವರ್ಷ ಸುಮ್ಮನರ‍್ತಿದ್ದ. ಅಸಲಿನ ಜತೆ ಬಡ್ಡಿ ದೊಡ್ಡದಾಗಿ ಬೆಳೆದ ಮೇಲೆ ಸಮಯ ನೋಡಿಕೊಂಡು, ಸಾಲಗಾರನನ್ನು ಊರ ಜನರ ನಡುವೆ ತಡೆದು ನಿಲ್ಲಿಸಿ ಸಾಲ ಇಸ್ಕಂಡ ಮೇಲೆ ವಾಪಾಸು ಕೊಡಬೇಕು ಅಂಬೋ ಗ್ಯಾನ ಇಲ್ಲವೇನಯ್ಯ? ಎಷ್ಟು ವರ್ಷಗಳಾದ್ವು ನನ್ನತ್ರ ದುಡ್ಡು ಇಸ್ಕಂಡು? ಈಗ್ಲೇ, ಇಲ್ಲೇ ನನ್ನ ದುಡ್ಡು ಕೊಟ್ಟು ಮುಂದಕ್ಕೋಗು ಅಂತ ಕೂಗಾಡಿ ಮಾನ ಕಳೆಯುತ್ತಿದ್ದ. ನಾರಣಪ್ಪನ ಬಚ್ಚಲುಬಾಯಿಗೆ ಹೆದರಿ ಸಾಲಗಾರರು ದುಡ್ಡು ಹೊಂದಿಸೋಕೆ ಆಗದೆ ಕೊನೆಗೆ ತಮ್ಮ ಭೂಮಿಯನ್ನು ಅವನಿಗೆ ರಿಜಿಸ್ಟರು ಮಾಡಿಕೊಟ್ಟು ಸಾಲದ ಋಣ ಕಳೆದು ಕೊಳ್ಳುತ್ತಿದ್ದರು. ಹೀಗೇ ಊರಿನ ಬಡ ಬಗ್ಗರ ಸಣ್ಣ ಪುಟ್ಟ ಜಮೀನುಗಳೆಲ್ಲ ಅನಾಯಾಸವಾಗಿ ನಾರಣಪ್ಪನ ಪಾಲಾಗಿದ್ದವು. ಅವನಿಗೆ ದಕ್ಕದೇ ಹೋದದ್ದು ಕೆರೆ ಕೋಡಿ ಸಮೀಪದಲ್ಲೇ ಇದ್ದ ಕಾಳಾಚಾರಿಯ ಮೂರು ಎಕರೆ ಗದ್ದೆ ಭೂಮಿ.
 
 ‘ಕೆರೆಯಲ್ಲಿ ನೀರಿದ್ದರೂ ಗದ್ದೇನ ಗೆಯ್ಮೆ ಮಾಡದೆ ಬೀಳುಬಿಟ್ಟಿದ್ದೀಯಲ್ಲೊ ಕಾಳಪ್ಪ. ಏನಾಗಿದೆ ನಿಂಗೆ? ಬ್ಯಾಸಾಯ ಮಾಡಕೆ ಆಗದಿದ್ರೆ ಯಾರಿಗಾದರೂ ಮಾರಿಬಿಡು. ನಾರಣಪ್ಪಾರಿಗೆ ಬೇಕಂತೆ, ಕೊಡೋದಾದರೆ ಹೇಳು ಒಳ್ಳೇ ರೇಟು ಕೊಡ್ತಾರೆ. ಮಾರೋಕೆ ಮನಸ್ಸಿಲ್ಲದಿದ್ರೆ ಅವರಿಗೆ ಕೋರಿಗಾದರೂ ಕೊಡು. ನಿಮ್ಮನೆಯವರೆಲ್ಲ ವರ್ಷವಿಡೀ ಕುಂತ್ಕಂಡು ತಿಂದರೂ ಮಿಗುವಷ್ಟು ನೆಲ್ಲೊ, ರಾಗೀನೊ ಬೆಳೆದು ಕೊಡ್ತಾರೆ...’ ಎಂದು ನಾರಣಪ್ಪನ ಕಡೆಯವರು ಆಗಾಗ ಕಾಳಾಚಾರಿಯ ಮನೆಗೆ ಬಂದು ಕೇಳುತ್ತಿದ್ದರು. ಬಂದವರಿಗೆ ನಾನು ಗದ್ದೆ ಮಾರಲ್ಲ ಅಂತ ಹೇಳಿ,ಹೇಳಿ ಕಾಳಾಚಾರಿಗೆ ಸಾಕಾಗಿ ಹೋಗಿತ್ತು. ಒಂದು ದಿನ ನಾರಣಪ್ಪನೇ ಜಮೀನು ಕೇಳಲು ಕಾಳಾಚಾರಿ ಮನೆಗೆ ಬಂದ! ಆಗ ಕಾಳಾಚಾರಿ ಮನೆಯಲ್ಲಿರಲಿಲ್ಲ. ಅವನ ಹಿರೀಮಗ ವಿಶ್ವಬ್ರಹ್ಮಚಾರಿ ಮನೆಯ ಪಡಸಾಲೆಯಲ್ಲಿ ಏನನ್ನೋ ಓದುತ್ತ ಕುಳಿತಿದ್ದ. ನಾರಣಪ್ಪನ ಮುಖ ಕಂಡದ್ದೇ, ರ‍್ರಿ ದೊಡ್ಡಪ್ಪ, ಎಂದು ಬಾಯಿ ತುಂಬಾ ಕರೆದು ಕುರ್ಚಿ ಹಾಕಿ ಕೂರಿಸಿದ. ಮೈಸೂರಲ್ಲಿ ಎಂಎ ಓದುವ ಆಚರ‍್ರ ಹುಡುಗ ತನ್ನನ್ನು ದೊಡ್ಡಪ್ಪ ಅಂತ ಕರೆದು ಗೌರವ ಕೊಟ್ಟದ್ದನ್ನು ನೋಡಿ ನಾರಣಪ್ಪನಿಗೆ ಸಂತೋಷವಾಯಿತು. ಬಂದ ಉದ್ದೇಶ ಮರೆತು ಯಾವಾಗ ಬಂದೆ ಬ್ರಮ್ಮಪ್ಪ? ನಿನ್ನ ಓದು ಹೆಂಗೆ ನಡೀತೈತೆ. ಮುಂದೇನು ಮಾಡ್ತೀಯ ಎಂದೆಲ್ಲ ವಿಚಾರಿಸಿದ.

‘ನನ್ನ ಮಕ್ಳಲ್ಲಿ ಒಬ್ಬನೂ ಮೈಸೂರ್‌, ಬೆಂಗಳೂರ್‌ ತನಕ ಓಗಿ ದೊಡ್ಡ ಓದು ಓದಲಿಲ್ಲ...’ ಅಂತ ನೊಂದುಕೊಂಡ. ವಿಶ್ವಬ್ರಹ್ಮನ ಕೈಯಲ್ಲಿದ್ದ ಪುಸ್ತಕದ ಕಡೆ ನೋಡುತ್ತ ಏನೋ ಓದ್ತಾ ಇದ್ದೀಯಾ? ಯಾವ ಪುಸ್ತಕ ಅದು ಎಂದು ಕೇಳಿದ. ವಿಶ್ವಬ್ರಹ್ಮ ತನ್ನ ಕೈಯಲ್ಲಿದ್ದ ಪುಸ್ತಕವನ್ನು ನಾರಣಪ್ಪನ ಕೈಗೆ ಕೊಡುತ್ತ, ಇದು ಎಲ್ಲರೂ ಓದಲೇ ಬೇಕಾದ ಪುಸ್ತಕ. ನಮ್ಮ ವಿಜಯನಗರ ಸಾಮ್ರಾಜ್ಯ ಹೆಂಗೆ ನಾಶವಾಯ್ತು ಅಂಬೋದನ್ನು ಇದರಲ್ಲಿ ಬರೆದಿದೆ. ಆರುನೂರು ವರ್ಷಗಳ ಹಿಂದೆ ಕೃಷ್ಣದೇವರಾಯರ ಕಾಲದಲ್ಲಿ ಈಗಿನ ನಮ್ಮ ದೇಶದ ಏಳು ರಾಜ್ಯಗಳು ವಿಜಯನಗರದ ಆಡಳಿತಕ್ಕೆ ಒಳಪಟ್ಟಿದ್ದವಂತೆ! ಅಂಥಾ ದೊಡ್ಡ ಸಾಮ್ರಾಜ್ಯ ಕೊನೆಗೆ ಹಾಳಾಗಿಹೋಯ್ತು. ವಿಜಯನಗರದ ವೈಭವದ ಕಾಲದಲ್ಲಿ ಹಂಪೆಗೆ ಬಂದಿದ್ದ ವಿದೇಶಿಯರು ಕಣ್ಣಾರೆ ಕಂಡು ಬರೆದಿಟ್ಟ ಅವರ ಅಭಿಪ್ರಾಯಗಳು ಈ ಪುಸ್ತಕದಲ್ಲಿವೆ ಅಂದ.

‘ಈ ಪುಸ್ತಕವನ್ನು ನಾನು ಓದಬೇಕಲ್ಲ...’ ಎಂದು ನಾರಣಪ್ಪ ಹೇಳುತ್ತಿದ್ದಂತೆ ವಿಶ್ವಬ್ರಹ್ಮ ತಗಂಡು ಹೋಗಿ ಓದಿ ಕೊಡಿ ದೊಡ್ಡಪ್ಪ ಅನ್ನುತ್ತ ಪುಸ್ತಕವನ್ನು ನಾರಣಪ್ಪನ ಕೈಗೆ ಕೊಟ್ಟ. ಸ್ವಲ್ಪ ಹೊತ್ತು ಪುಸ್ತಕ ತಿರುವಿ ಹಾಕುತ್ತ ಕೂತಿದ್ದ ನಾರಣಪ್ಪ ತಾನು ಬಂದ ಉದ್ದೇಶ ಮರೆತು ಕಾಳಾಚಾರಿ ಯಾವಾಗ ಬರ‍್ತಾನೆ ಅನ್ನೋದನ್ನೂ ಕೇಳದೆ ಎದ್ದು ಮನೆಗೆ ಹೋದ. ಒಂದೆರಡು ದಿನಗಳು ಕಳೆದ ಮೇಲೆ ಪುಸ್ತಕ ಓದಲು ಶುರು ಮಾಡಿದ. ಓದಿ ಮುಗಿಸಲು ಅವನಿಗೆ ಹದಿನೈದು ದಿನಗಳು ಬೇಕಾದವು. ಆಮೇಲೆ ಅದೇನಾಯಿತೋ ಮಂಕಾಗಿ ಬಿಟ್ಟ!
 *
 ‘ಹದಿನೈದು ದಿನಗಳಿಂದ ಮಾಮಯ್ಯ ಮಂಚ ಬಿಟ್ಟು ಕೆಳಗಿಳಿದಿಲ್ಲ! ಯಾರ ಜತಿಗೂ ಮಾತೂ ಆಡ್ತಿಲ್ಲ. ಊಟಕ್ಕೆ ರ‍್ರಿ ಅಮ್ತ ಕರೆದರೆ ಸುಮ್ಮನೆ ಬಂದು ಕುಂತ್ಗಂಡು ತಟ್ಟೆಗೆ ಹಾಕಿದ್ದನ್ನು ತಿಂದು ಕೈತೊಳೆದು ಎದ್ದು ಹೋಗ್ತಾರೆ! ಇನ್ನಷ್ಟು ಬೇಕು ಅಂತಾಗಲಿ, ಬ್ಯಾಡ, ಸಾಕು ಅಂತಾಗಲೀ ಕೇಳಲ್ಲ...’ ಎಂದು ಮನೆಯ ಹೆಂಗಸರು ಹೇಳಿದ್ದನ್ನು ಕೇಳಿ ನಾರಣಪ್ಪನ ಮಕ್ಕಳಿಗೆ ಆತಂಕವಾಯಿತು. ಬೆಳಿಗ್ಗೆ ಒಂಬತ್ತರ ಹೊತ್ತಿಗೆ ಮನೆಯಲ್ಲಿ ಏನು ಮಾಡರ‍್ತಾರೊ ಅದನ್ನು ತಿಂದು ಊರ ಪಕ್ಕದಲ್ಲೇ ಇರೋ ತನ್ನ ಐದಾರು ಹೊಲಗಳಲ್ಲಿ ಸುತ್ತಾಡಿ, ಹನ್ನೊಂದು ಗಂಟೆ ಹೊತ್ತಿಗೆ ತೋಟಕ್ಕೆ ಬಂದು ಅಲ್ಲೇ ಬಾವಿ ನೀರಲ್ಲಿ ಸ್ನಾನ ಮಾಡಿ ಒಂದು ಗಂಟೆ ಹೊತ್ತಿಗೆ ಮನೆಗೆ ಬಂದು ಗಡದ್ದಾಗಿ ಉಂಡು, ಸ್ವಲ್ಪ ಹೊತ್ತು ಮಲಗಿ ನಿದ್ದೆ ಮಾಡಿ, ಆಮೇಲೆ ಊರ ಜನರು, ಸಾಲಗಾರರನ್ನು ಮಾತಾಡಿಸಿ ಅವರಿಂದ ಬರಬೇಕಾಗಿರುವ ಬಾಕಿ ನೆನಪು ಮಾಡಿ ಮನೆಗೆ ಬರುತ್ತಿದ್ದ ನಾರಣಪ್ಪನ ದಿನಚರಿ ಬದಲಾಗಿದ್ದನ್ನು ಊರ ಜನರೂ ಗಮನಿಸಿದರು.
 

ಹದಿನೈದಿಪ್ಪತ್ತು ದಿನಗಳಿಂದ ನಾರಣಪ್ಪ ಮನೆ ಬಿಟ್ಟು ಹೊರಬಂದಿಲ್ಲ ಅನ್ನೋದನ್ನು ಅವನ ಸಾಲಗಾರನೊಬ್ಬ ಗಮನಿಸಿ ಅದನ್ನು ಊರವರಿಗೆ ಹೇಳಿದ. ಆಮೇಲೆ ಅನೇಕರಿಗೆ ಅವನು ಹೇಳಿದ್ದು ನಿಜ ಅನ್ನಿಸಿತು. ನಾರಣಪ್ಪನಿಗೆ ಏನೋ ಜಡ್ಡಾಗಿರಬಹುದು ಎಂದು ಊಹಿಸಿದರು.

‘ಸಾಲ ವಾಪಸ್‌ ಕೊಡಕೆ ಅಂತ ಮನೆ ಬಾಗಿಲಿಗೆ ಬಂದವರನ್ನೂ ನಾರಣಪ್ಪ ಮಾತಾಡಿಸ್ತಿಲ್ಲವಂತೆ! ಈಗ ನಂಗೆ ಪುರುಸೊತ್ತಿಲ್ಲ. ಹದಿನೈದ್‌ ದಿನ ಬಿಟ್ಕಂಡ್‌ ಬಾ ಅನ್ನು...’ ಅಂತ ಸಂಬಳದಾಳಿನ ಕೈಯಲ್ಲಿ ಹೇಳಿ ಕಳಿಸ್ತಾನೆ ಅಂದರೆ ನಾರಣಪ್ಪಗೆ ಏನೋ ಆಗಿದೆ ಎಂದು ಊರು ಮಾತಾಡಿಕೊಳ್ಳಲು ಶುರು ಮಾಡಿತು.

ಹೇಲಿನ ಮೇಲೆ ಬಿದ್ದ ಕಿಲುಬು ಕಾಸನ್ನೂ ಬಿಡದೆ ನಾಲಿಗೆಯಿಂದ ಎತ್ತಿಕೊಳ್ಳುವ ದುರಾಸೆಯ ನಾರಣಪ್ಪ, ಸಾಲ ವಾಪಸ್‌ ಕೊಡಬೇಕು ಅಂತ ಮನೆಬಾಲಿಗೆ ಹೋದವರನ್ನು ಹಿಂದಕ್ಕೆ ಕಳಿಸ್ತಾನೆ ಅಂದರೆ ಏನರ್ಥ? ಅವನಿಗೇನೊ ಆಗಿದೆ. ಬಾಯಿಗೆ ಲಕ್ವ ಹೊಡೆದಿರಬಹುದು ಎಂದು ಜನ ಮಾತಾಡಿಕೊಂಡರು. ನಾರಣಪ್ಪನ ಸಾಲಗಾರರು ಇಡೀ ದಿನ ಅವನ ಅನಾರೋಗ್ಯ ಕುರಿತು ಮಾತಾಡಿದರು. ಊರ ಮುಂದಿನ ಅರಳೀಕಟ್ಟೆಯ ಮೇಲೆ ದಿನವಿಡೀ ಮನೆ ಮನೆ ಸುದ್ದಿ ಮಾತಾಡುವವನೊಬ್ಬ ನಾರಣಪ್ಪನಿಗೆ ಕಾಳಾಚಾರ ಮಾಟ,ಗೀಟ ಮಾಡಿಸಿರಬೌದು ಅಂದ!. ಇದ್ದರೂ ಇರಬೌದು ಎಂದು ಇನ್ನಿಬ್ಬರು ಅವನ ಮಾತನ್ನು ಅನುಮೋದಿಸಿದರು.

‘ಏನ್ರಯ್ಯ ಬಾಯಿ ಇದೆ ಅಮ್ತ ಏನು ಬೇಕಾದರೂ ಹೇಳ್ತೀರಲ್ಲ. ಸುಳ್ಳು ಹೇಳಕೂ ಒಂದು ಮಿತಿ ಇರಬೇಕು. ಕಾಳಾಚಾರಿ ಹನುಮಂತರಾಯನ ಗುಡಿ ಪೂಜಾರಿ. ಅವನು ಕಾಲಜ್ಞಾನಿ ಪೋತಲೂರು ಬ್ರಹ್ಮಯ್ಯನವರ ಮಠಕ್ಕೆ ನಡಕೊಳ್ತಾನೆ. ತಿಂಗಳಿಗೊಂದ್ಸಲ ನಮ್ಮ ಗಂಡಿಹಳ್ಳಿ ಮಠಕ್ಕೂ ಹೋಗಿ ಹಣ್ಣು,ಕಾಯಿ ಕೊಟ್ಟು ಬರ‍್ತಾನೆ. ಅಂಥವನು ಮಾಟ, ಮಂತ್ರ ಮಾಡಿಸ್ತಾನೆ ಅಂದರೆ ಯಾರೂ ನಂಬಲ್ಲ....’ ಇಂಥ ಮಾತುಗಳನ್ನು ಆಡಬ್ಯಾಡ್ರಯ್ಯ. ನಿಮ್ಮ ಬಾಯಲ್ಲಿ ಉಳ ಬೀಳ್ತವೆ ಎಂದು ಅನೇಕರು ಎಚ್ಚರಿಸಿದರು.

ನಾರಣಪ್ಪನಿಗೆ ಏನೋ ಆಗಬಾರದ್ದು ಆಗಿದೆ ಎಂದು ಊರ ಜನ ಮಾತಾಡಿಕೊಳ್ತಿರೋದು ಅವನ ಮಕ್ಕಳ ಕಿವಿ ಮೇಲೆ ಬಿತ್ತು. ನಮ್ಮಪ್ಪಯ್ಯಂಗೆ ಏನೂ ಆಗಿಲ್ಲ. ಯಾರೋ ನಮಗೆ ಆಗದವರು ಅಪಪ್ರಚಾರ ಮಾಡ್ತಿದ್ದಾರೆ ಅಂತ ಎಲ್ಲರಿಗೂ ಹೇಳಬೇಕು ಎಂದು ನಾರಣಪ್ಪನ ಮಕ್ಕಳು ನಿರ್ಧರಿಸಿದರು. ಆದರೆ ಎಷ್ಟು ಜನಕ್ಕೆ ಅಂತ ಹೇಳದು? ನಾವು ಏನೇ ಹೇಳಿದರೂ ಕೆಲವರು ನಂಬಲ್ಲ. ಎಲ್ಲರಿಗೂ ತಾನಾಗಿಯೇ ಗೊತ್ತಾಗುವಂತೆ ಏನಾದರೂ ಮಾಡಬೇಕು ಎಂದು ಯೋಚಿಸಿದರು.

‘ಅಪ್ಪಯ್ಯ ಏನಾಗಿದೆ ನಿಮಗೆ? ಸಾಲ ವಾಪಸ್‌ ಕೊಡ್ತೀವಿ ಅಮ್ತ ಮನೆ ಬಾಗಿಲಿಗೆ ಬಂದವರನ್ನು ಹದಿನೈದು ದಿನ ಬಿಟ್ಟು ಬಾ ಅಮ್ತ ಸಂಬಳದಾಳಿನ ಕೈಯಲ್ಲಿ ಹೇಳಿ ಕಳಿಸ್ತಿದ್ದೀರಂತೆ? ನೀವು ಹಿಂಗೆ ಹೇಳ್ತಾ ಹೋದರೆ ನಮ್ಮ ಸಾಲ ವಸೂಲಾಗಲ್ಲ. ನಿಮಗೆ ಲಕ್ವ ಹೊಡೆದಿದೆ ಅಮ್ತ ಸಾಲಗಾರರು ಮಾತಾಡಿಕೊಳ್ತಿದ್ದಾರಂತೆ. ನಾಳೆ ನೀವೇ ಊರಲ್ಲಿ ಒಂದು ರೌಂಡು ಅಡ್ಡಾಡಿ ಬನ್ನಿ. ನಿಮಗೇನೂ ಆಗಿಲ್ಲ ಅಂಬದು ಊರ ಜನಕ್ಕೆ ಅದರಲ್ಲೂ ಸಾಲಗಾರರಿಗೆ ಗೊತ್ತಾದರೆ ಸಾಕು...’ ಎಂದು ಮಕ್ಕಳು ಹೇಳಿದರು. ಮಕ್ಕಳ ಮಾತು ಕೇಳಿಸಿಕೊಂಡ ನಾರಣಪ್ಪ ಸ್ವಲ್ಪ ಹೊತ್ತು ಸುಮ್ಮನಿದ್ದ. ಆಮೇಲೆ ಕ್ಷೀಣ ಧ್ವನಿಯಲ್ಲಿ ಸಾಲ ತಗಂಡವರು ಕಷ್ಟದಲ್ಲಿದ್ದಾರೆ. ಅವ್ರು ನನ್ನತ್ರ ತಂಗಂಡಿದ್ದಕ್ಕಿಂತ ಹೆಚ್ಚಾಗಿ ಬಡ್ಡಿ,ಚಕ್ರ ಬಡ್ಡಿ ಅಂತ ಅವರಿಂದ ಡಬ್ಬಲ್‌ ವಸೂಲು ಮಾಡಿದ್ದೀನಿ. ಇನ್ನೂ ಕೊಡಿ ಅಂದ್ರೆ ಎಲ್ಲಿಂದ ತಂದುಕೊಡ್ತಾರೆ ಎಂದು ಕೇಳಿ ಮಕ್ಕಳ ಮುಖ ನೋಡುತ್ತ ಪಿಳಿಪಿಳಿ ಕಣ್ಣು ಬಿಟ್ಟ. ಅಪ್ಪನ ಮಾತು ಕೇಳಿ ಮಕ್ಕಳು ದಂಗಾಗಿ ಹೋದರು.
 
 *
 ಹದಿನೈದು ದಿನಗಳು ಕಳೆದವು. ಒಂದು ಬೆಳಿಗ್ಗೆ ನಾರಣಪ್ಪ ತನ್ನ ದೊಡ್ಡಮಗ ಗೋವಿಂದನನ್ನು ಕರೆದು ನಂಗೆ ಹಂಪೆ ನೋಡಬೇಕು ಅನ್ನಿಸ್ತಿದೆ. ಶನಿವಾರ ಮನೆ ದೇವರಿಗೆ ಹೋಗಿ ಹಣ್ಣು ಕಾಯಿ ಕೊಟ್ಟುಬಂದು, ಭಾನುವಾರ ಹಂಪೆಗೆ ಹೋಗ್ತೀನಿ. ಯಾರಾದರೂ ಒಬ್ಬರು ನಂಜತೆ ಬಂದರೆ ಸಾಕು. ಹಂಪೆ ಎಲ್ಲಿದೆ, ಅಲ್ಲಿಗೆ ಹೋಗೋದೆಂಗೆ ಅಂಬದು ನಂಗೆ ಗೊತ್ತಾಗಲ್ಲ ಅಂದ. ಅಪ್ಪಯ್ಯನ ಈ ವಿಚಿತ್ರ ಬೇಡಿಕೆಯನ್ನು ಕೇಳಿಸಿಕೊಂಡ ಗೋವಿಂದನಿಗೆ ಏನು ಹೇಳಬೇಕು ಅನ್ನೋದು ತಕ್ಷಣಕ್ಕೆ ಗೊತ್ತಾಗಲಿಲ್ಲ.

‘ನಾವು ತಿರುಪತಿ ತಿಮ್ಮಪ್ಪನ ಒಕ್ಕಲು. ಹಂಪೆಯಲ್ಲಿರೋದು ವಿರೂಪಾಕ್ಷ ದೇವರು. ತಿರುಪತಿಗೆ ಹೋಗೋ ಬದಲು ಹಂಪೆಗೆ ಹೋಗ್ತೀನಿ...’ ಅಂತ ಅಪ್ಪಯ್ಯ ಹೇಳ್ತಿರೋದ್ಯಾಕೆ ಎಂದು ನಾರಣಪ್ಪನ ಮಕ್ಕಳು ಯೋಚಿಸಿದರು.

‘ಹಂಪೆಯಲ್ಲಿ ನೀವು ನೋಡುವಂಥದ್ದು ಏನೂ ಇಲ್ಲ. ಮುರಿದು ಬಿದ್ದಿರೊ ಗುಡಿಗಳು, ಒಡದು ಬಿದ್ದಿರೊ ದೇವರ ಕಲ್ಲು ಮೂರ್ತಿಗಳು, ಭಣಗುಡುವ ಬೀದಿಗಳು, ಮಂಟಪಗಳನ್ನು ಬಿಟ್ಟರೆ ಅಲ್ಲಿ ಇನ್ನೇನೂ ಇಲ್ಲ. ಅವನ್ನು ನೋಡಕೆ ಹೊರದೇಶಗಳ ಜನರನ್ನು ಬಿಟ್ಟರೆ ನಮ್ಮವರು ಯಾರೂ ಹೋಗಲ್ಲ...’ ಎಂಬ ಗೋವಿಂದನ ಮಾತಿಗೆ ನಾರಣಪ್ಪ ಉತ್ತರಿಸದೆ ಸ್ವಲ್ಪ ಹೊತ್ತು ಸುಮ್ಮನಿದ್ದ. ಆಮೇಲೆ ಯಾರಾದರೂ ನಂಜತೆ ಬಂದರೆ ಸರಿ, ಇಲ್ಲಾಂದ್ರೆ ಒಬ್ಬನೇ ಹೋಗ್ತೀನಿ ಎಂದು ಹೇಳುತ್ತ ಎದ್ದು ಮನೆಯ ಅಂಗಳಕ್ಕೆ ಹೋಗಿ ನಿಂತು ಆಕಾಶ ನೋಡ ತೊಡಗಿದ.

‘ಈ ವಯಸ್ಸಲ್ಲಿ ಅಪ್ಪಯ್ಯ ಒಬ್ರನ್ನೇ ಹಂಪೆಗೆ ಕಳ್ಸದು ಸರಿಯಲ್ಲ. ಆಸ್ತಿ ಪಾಲು ಮಾಡಿ ಕೊಡೋವರೆಗೆ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು. ತಮ್ಮಂದಿರ ಪೈಕಿ ಒಬ್ಬನ ಜತೆಯಲ್ಲಿ ಕಳಿಸೋದೂ ಬೇಡ. ಅವನು ಅಲ್ಲಿ ಅಪ್ಪಯ್ಯನಿಗೆ ಏನಾದರೂ ಹೇಳಿಕೊಟ್ಟು ತಲೆ ಕೆಡಿಸ್ತಾನೆ. ಅಮ್ಮಯ್ಯನ ಒಡವೆಗಳು, ಬಂಗಾರವನ್ನ ಮೂವರೂ ತಂಗಿಯರಿಗೆ ಹಂಚಿ ಕೊಡಿ, ಅವು ನಮಗೆ ಬ್ಯಾಡ ಅಂತ ಹೇಳಬೌದು...’ ಎಂದು ಗೋವಿಂದ ಯೋಚಿಸಿದ.

‘ನಂಗೆ ಬುದ್ದಿ ಬಂದಾಗಿಂದ ನೋಡ್ತಿದ್ದೀನಿ, ಅಪ್ಪಯ್ಯ ಊರು ಬಿಟ್ಟು ಎಲ್ಲೂ ಹೋದವರಲ್ಲ. ಈಗ ಹಂಪೆ ನೋಡಬೇಕು ಅಂತ ಅನ್ನಿಸಿರಬೌದು. ಹೋಗಿ ಬರಲಿ, ಮೂರ‍್ನಾಲ್ಕು ದಿನ ಅವರ ಜತೆ ಯಾರಾದರೊಬ್ಬರು ಹೋದರೆ ಇಲ್ಲಿ ಏನೂ ಕೊಳ್ಳೆ ಹೋಗಲ್ಲ...’ ಎಂದು ಎರಡನೇ ತಮ್ಮ ವೆಂಕಟಪ್ಪ ಹೇಳಿದ್ದನ್ನು ಕೊನೆಯ ತಮ್ಮ ಮೇಲಗಿರಿ ಅನುಮೋದಿಸಿದ. ಅಪ್ಪಯ್ಯನ ಜತೆ ನಾನೇ ಹೋಗ್ತೀನಿ, ನಾನು ಬರೋವರೆಗೆ ಹೊಲ, ಮನೆಯ ಕೆಲ್ಸ,ಕಾರ್ಯಗಳನ್ನು ನೀವಿಬ್ರೂ ನೋಡ್ಕಳಿ...’ ಎಂದು ಗೋವಿಂದ ಹೇಳಿದ. ಅಣ್ಣಯ್ಯ, ಅಪ್ಪಯ್ಯನ ಜತೆ ಹೋಗೋದು ತಮ್ಮಂದಿರಿಗೆ ಇಷ್ಟವಿರಲಿಲ್ಲ.

‘ನಾವ್ಯಾರೂ ಹೋಗದು ಬ್ಯಾಡ. ಅಪ್ಪಯ್ಯನ್ನ ಅನ್ವರ್‌ಸಾಬರ ಬಾಡಿಗೆ ಕಾರಿನಲ್ಲಿ ಕಳಿಸಣ. ಹೆಂಗೂ ಡ್ರೈವರ್‌ ಬರ‍್ತಾನೆ, ಸಹಾಯಕ್ಕೆ ನಮ್ಮ ಸಂಬಳದಾಳೊಬ್ಬ ಅಪ್ಪಯ್ಯನ ಜತೆ ಹೋದರೆ ಸಾಕು. ಹಂಪೆ ಯಾವುದೋ ದೇಶದಲ್ಲಿಲ್ಲ. ಇಲ್ಲಿಂದ ಇನ್ನೂರೈವತ್ತು ಕಿಲೊಮೀಟರು. ಹೊಸಪೇಟೆಯಲ್ಲಿ ನಂಗೆ ಪರಿಚಯದೋರು ಇದ್ದಾರೆ. ಅವರಿಗೆ ಫೋನ್‌ ಮಾಡಿ ಹೇಳ್ತೀನಿ, ಎಲ್ಲಾ ವ್ಯವಸ್ಥೆಗಳನ್ನು ಅವರೇ ಮಾಡ್ತಾರೆ...’ಎಂದು ಮೇಲಗಿರಿ ಹೇಳಿದ್ದು ಉಳಿದಿಬ್ಬರಿಗೂ ಒಪ್ಪಿಗೆಯಾಯಿತು.

ಶನಿವಾರ ಬೆಳಿಗ್ಗೆ ಮನೆದೇವರಿಗೆ ಹೋಗಲು ನಾರಣಪ್ಪ ಬಸ್‌ಸ್ಟಾಂಡಿಗೆ ಬಂದ. ಸಾವುಕಾರರ ಸವಾರಿ ಎಲ್ಲಿಗೆ ಅಂತ ಯಾರಾದರೂ ಕೇಳೋಕೆ ಮೊದಲೇ ನಾರಣಪ್ಪನೇ ಮನೆ ದೇವರಿಗೆ ಹೋಗಿ ಬರ‍್ತೀನಿ ಎಂದು ಅಲ್ಲಿದ್ದವರಿಗೆಲ್ಲ ಕೇಳುವಂತೆ ಹೇಳಿದ. ಭಾನುವಾರ ಬೆಳಿಗ್ಗೆ ನಾರಣಪ್ಪ, ಅನ್ವರ್‌ ಸಾಬರ ಕಾರಿನಲ್ಲಿ ಎಲ್ಲಿಗೋ ಹೊರಟಿದ್ದನ್ನು ನೋಡಿದವರಿಗೆ ಆಶ್ಚರ್ಯವಾಯಿತು. ನಾರಣಪ್ಪನನ್ನು ಆಸ್ಪತ್ರೆಗೆ ಕರಕಂಡು ಹೋಗ್ತಿರಬಹುದು ಎಂದು ಕೆಲವರು ಊಹಿಸಿದರು. ಮುಖ ನೋಡಿದರೆ ನಾರಣಪ್ಪನಿಗೆ ಯಾವುದೇ ಕಾಯಿಲೆಯ ಲಕ್ಷಣಗಳಿಲ್ಲ ಎಂದು ಅವರಿಗೆ ಅನ್ನಿಸಿತು. ‌ಸಂಜೆ ಹೊತ್ತಿಗೆ ನಾರಣಪ್ಪ ಹಂಪೆ ನೋಡೋಕೆ ಹೋದನಂತೆ ಎಂಬ ಸುದ್ದಿ ಊರವರಿಗೆ ಗೊತ್ತಾಯಿತು.

 ಸಂಜೆ ಐದರ ಹೊತ್ತಿಗೆ ಹಂಪೆ ತಲುಪಿದ ನಾರಣಪ್ಪ ಗೆಲುವಾಗಿದ್ದ. ವಿರುಪಾಕ್ಷ ಗುಡಿ ಹತ್ತಿರದಲ್ಲೇ ತುಂಗಭದ್ರಾ ಗೆಸ್ಟ್‌ ಹೌಸ್‌ ಅಂತ ಬೋರ್ಡು ಹಾಕಿಕೊಂಡಿದ್ದ ಮನೆಯೊಂದರ ಮುಂಭಾಗದ ಎರಡು ರೂಮುಗಳ ಪೈಕಿ ಒಂದರಲ್ಲಿ ನಾರಣಪ್ಪ, ಇನ್ನೊಂದರಲ್ಲಿ ಸಂಬಳದಾಳು ಮತ್ತು ಡ್ರೈವರು ಉಳಿದುಕೊಂಡರು. ಮುಸ್ಸಂಜೆ ಮಂಗಳಾರತಿ ಹೊತ್ತಿಗೆ ನಾರಣಪ್ಪ ಆಳು ಮಗನ ಜತೆ ವಿರುಪಾಕ್ಷಸ್ವಾಮಿ ಗುಡಿಗೆ ಹೋಗಿ ಬಂದ. ಅವನ ಮನಸ್ಸಿಗೆ ನೆಮ್ಮದಿ ಅನ್ನಿಸಿತು.

ಕೃಷ್ಣದೇವರಾಯರ ಕಾಲದಲ್ಲಿ ಮುತ್ತು, ರತ್ನಗಳನ್ನು ರಾಶಿ ಹಾಕ್ಕಂಡು ಮಾರಾಟ ಮಾಡ್ತಿದ್ದ ರಾಜಬೀದಿ ಇದೇ ಇರಬಹುದು ಅನ್ನಿಸಿ ದೇವಸ್ಥಾನದ ಬೀದಿಯ ಉದ್ದಕ್ಕೂ ಹೋಗಿ ಹಿಂದಕ್ಕೆ ಬಂದ. ಆರು ನೂರು ವರ್ಷಗಳ ಹಿಂದೆ ಈ ಬೀದಿಯಲ್ಲಿ ಮುತ್ತು,ರತ್ನಗಳನ್ನು ರಾಸಿ ಹಾಕ್ಕಂಡು ಮಾರಾಟ ಮಾಡ್ತಿದ್ದರಂತೆ ನಿಜವೇ ಅಂತ ಬೀದಿಯಲ್ಲಿದ್ದ ಒಬ್ಬನನ್ನು ಕೇಳಿದ. ಅವನು ‘ಆ ಬೀದಿ ಇದಲ್ಲ. ವಿಜಯವಿಠಲನ ಗುಡಿ ಹತ್ರ ಸೂಳೆ ಬಜಾರ್‌ ಅಂತ ಇನ್ನೊಂದು ಬೀದಿ ಇದೆ. ಅಲ್ಲಿ ಮಾರ್ತಿದ್ದರು ಅಂತ ಹೇಳೋದನ್ನು ಕೇಳಿದ್ದೀನಿ. ಯಾರಿಗೂ ಸರಿಯಾಗಿ ಗೊತ್ತಿಲ್ಲ. ವಿದೇಶಿಯರು ಹಂಗಂತ ಪುಸ್ತಕದಲ್ಲಿ ಬರೆದಿದ್ದಾರಂತೆ!. ನಾನು ಓದಿಲ್ಲ. ಓದಿದ ಬುದ್ದಿವಂತರು ಹೇಳಿದರು ಅಂತ ಎಲ್ಲರೂ ನಿಜ ಅಂದ್ಕಂಡಿದ್ದಾರೆ...’ ಎಂದು ಇನ್ನೊಬ್ಬ ಹೇಳಿದ್ದನ್ನು ಕೇಳಿ ನಾರಣಪ್ಪನಿಗೆ ನಿರಾಸೆ ಆಯಿತು.

ರಾತ್ರಿ ಮಲಗುವ ಹೊತ್ತಿಗೆ ದೊಡ್ಡ ಸಾಮ್ರಾಜ್ಯವೊಂದರ ರಾಜಧಾನಿಯಲ್ಲಿ ಇದ್ದೇನೆ ಎಂಬ ಭಾವ ನಾರಣಪ್ಪನ ಮೈಮನಗಳನ್ನು ಆವರಿಸಿಕೊಂಡಿತು. ಬಹಳ ಹೊತ್ತಿನ ತನಕ ನಿದ್ದೆ ಬರದೆ ಮಗ್ಗುಲು ಬದಲಾಯಿಸುತ್ತಲೇ ಇದ್ದ. ಐದಾರು ಶತಮಾನಗಳ ಹಿಂದೆ ಭವ್ಯವಾಗಿ ಬಾಳಿದ್ದ ಹಂಪೆ ಈಗ ಬಸವಳಿದು ಹೋಗಿದೆ. ಗುಡಿಯ ಸುತ್ತ ವಾಸದ ಮನೆಗಳು ತಲೆ ಎತ್ತಿವೆ. ವಾರಸುದಾರರಿಲ್ಲದ ಊರು, ದೇಶದಲ್ಲಿ ಹಿಂಗೆಲ್ಲ ಆಗದು ಸಹಜ ಅನ್ನಿಸಿತು. ತುಂಬಾ ಹೊತ್ತಿನ ತನಕ ಪುಸ್ತಕದಲ್ಲಿ ಓದಿದ್ದ ವಿಜಯನಗರ ರಾಜರುಗಳ ಕಾಲದಲ್ಲಿ ಆಚರಿಸುತ್ತಿದ್ದ ಮರ‍್ನವಮಿ ಹಬ್ಬ, ಯುದ್ಧಗಳು ಇತ್ಯಾದಿ ವಿವರಗಳನ್ನು ನೆನಪು ಮಾಡಿಕೊಳ್ಳುತ್ತ ಹಾಗೇ ನಿದ್ದೆಗೆ ಜಾರಿದ.

ಬೆಳಕು ಹರಿಯುತ್ತಿದ್ದಂತೆ ಸ್ನಾನ ಮಾಡಿ ಮತ್ತೆ ಗುಡಿಗೆ ಹೋದ. ಗುಡಿಯ ಪೌಳಿಯ ತುಂಬಾ ಓಡಾಡಿದ. ಗುಡಿಯ ಎರಡೂ ಗೋಪುರಗಳನ್ನು ನೋಡಿ ನಾರಣಪ್ಪನಿಗೆ ಆಶ್ಚರ್ಯವಾಯಿತು. ಅಷ್ಟು ಎತ್ತರಕ್ಕೆ ಇಟ್ಟಿಗೆ, ಕಲ್ಲು, ಗಾರೆಗಳನ್ನು ಸಾಗಿಸಿ ಗೋಪುರ ಕಟ್ಟಿದ್ದು ಹೆಂಗೆ ಅಂತ ತುಂಬಾ ಹೊತ್ತು ನಿಂತು ಯೋಚಿಸಿದ. ಅದು ಅವನಿಗೆ ಬಹುದೊಡ್ಡ ಸೋಜಿಗ ಅನ್ನಿಸಿತು. ವನವಾಸ ಕಾಲದಲ್ಲಿ ಸೀತಾ,ಲಕ್ಷ್ಮಣರ ಸಮೇತ ಹಂಪೆಗೆ ಬಂದಿದ್ದ ಶ್ರೀರಾಮಚಂದ್ರ ಪ್ರಭು, ವಿರುಪಾಕ್ಷಸ್ವಾಮಿಯ ದರ್ಶನ ಮಾಡಿದ್ದನಂತೆ! ಇದು ತ್ರೇತಾಯುಗಕ್ಕೂ ಮೊದಲೇ ಇದ್ದ ಗುಡಿ ಎಂದು ಅರ್ಚಕರೊಬ್ಬರು ಯಾರಿಗೋ ಹೇಳುತ್ತಿದ್ದದನ್ನು ಕೇಳಿಸಿಕೊಂಡ ನಾರಣಪ್ಪನಿಗೆ ಅಚ್ಚರಿಯಾಯಿತು. ಯುದ್ಧವೊಂದನ್ನು ಗೆದ್ದ ನೆನಪಿಗೆ ಕೃಷ್ಣದೇವರಾಯರು ಕಟ್ಟಿಸಿದ ಗೋಪುರ ಇದು. ಇದಕ್ಕೆ ರಾಯ ಗೋಪುರ ಅಂತಲೇ ಹೆಸರು ಬಂದಿದೆ ಎಂದು ಯಾರೋ ಹೇಳಿದ್ದನ್ನು ಕೇಳಿಸಿಕೊಂಡ. ಕೃಷ್ಣದೇವರಾಯರು, ಅವನ ರಾಣಿಯರು, ಅವನಿಗಿಂತ ಹಿಂದಿದ್ದ ರಾಜರು, ವಿದ್ಯಾರಣ್ಯ ಸ್ವಾಮಿಗಳು ಈ ದೇವಸ್ಥಾನಕ್ಕೆ ದಿನವೂ ಬರುತ್ತಿದ್ದರಂತೆ! ಅವರು ಇಲ್ಲೆಲ್ಲ ಓಡಾಡರ‍್ತಾರೆ ಎಂದು ಯೋಚಿಸಿದ. ರಾಜ, ಮಹಾರಾಜರು, ಸ್ವಾಮಿಗಳು, ಸಾಧು,ಸಂತರು ಓಡಾಡಿದ ನೆಲದಲ್ಲಿ ಹೊಸಳ್ಳಿಯ ನಾರಣಪ್ಪ ಅಂಬೋ ಹುಲುಮಾನವ ನಾನು ನಿಂತಿದ್ದೇನೆ. ಸೋಜಿಗ ಅಂದರೆ ಇದೇ ಅಲ್ಲವೇ ಅನ್ನಿಸಿ ಭಾವುಕನಾಗಿ ಬಿಟ್ಟ. ಅವನಿಗೆ ಅರಿವಾಗದೆ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ದೃಷ್ಟಿ ಮಂಜಾಗಿ, ಮನಸ್ಸು ಭಾರವಾಯಿತು.

ಗುಡಿಯಿಂದ ಹೊರಕ್ಕೆ ಬಂದ ಮೇಲೆ ಕೃಷ್ಣದೇವರಾಯರ ಅರಮನೆ, ಮಹಾಮಂತ್ರಿ ತಿಮ್ಮರಸಪ್ಪನ ಮನೆ, ಮಾನವಮಿ ದಿಬ್ಬ, ವಿಜಯ ವಿಠಲನ ಗುಡಿ, ಕಲ್ಲಿನ ತೇರು ಇರೋದು ಎಲ್ಲಿ? ಅಲ್ಲಿಗೆ ಹೋಗದು ಹೆಂಗೆ ಅಂತ ಅಲ್ಲಿದ್ದವರನ್ನು ವಿಚಾರಿಸುತ್ತಿರುವಾಗ ಗೈಡ್‌ ಅಂತ ಹೇಳಿಕೊಂಡವನೊಬ್ಬ ಬಂದ. ಈಗ ಅರಮನೆಗಳು ಉಳಿದಿಲ್ಲ. ಅವು ಇದ್ದ ತಾವಿನ ಕುರುಹು ಮಾತ್ರ ಇವೆ. ಅವನ್ನು ನೋಡಬೇಕು ಅಂದರೆ ಅಲ್ಲೀತನಕ ನಡಕೊಂಡು ಹೋಗಬೇಕು. ಎಲ್ಲವನ್ನೂ ನೋಡಕೆ ಮೂರು ದಿನಗಳು ಬೇಕಾಗುತ್ತೆ. ನನ್ನ ಜತೆ ಬರೋದಾದರೆ ಹೇಳಿ, ಕರಕಂಡು ಹೋಗಿ ತೋರಿಸ್ತೀನಿ ಅಂದ. ಅಲ್ಲೀತನಕ ರಸ್ತೆ ಚೆನ್ನಾಗಿದ್ದರೆ ನಮ್ಮ ಕಾರಿನಲ್ಲೇ ಹೋಗಬೌದು ಅಂತ ನಾರಣಪ್ಪ ಹೇಳಿದ. ಕಾರಿನಲ್ಲಿ ಹೋದರೆ ಸೀತಾಮಾತೆ ತನ್ನ ಸೀರೆಗಳನ್ನು ಒಣಗಲು ಹಾಕಿದ್ದ ಸೀತಮ್ಮನ ಸೆರಗು, ಕೋದಂಡ ರಾಮಸ್ವಾಮಿ ದೇವಸ್ಥಾನ, ಪುರಂದರ ಮಂಟಪ, ವಾಲಿ,ಸುಗ್ರೀವರಿಗೆ ಯುದ್ಧ ನಡೆದ ಸ್ಥಳ, ತುಂಗಭದ್ರಾ ನದಿ ಮಧ್ಯ ಇರೋ ಸೂರ್ಯದೇವರ ಮಂಟಪ, ತುಲಾಭಾರದ ಕಂಬಗಳನ್ನು ನೋಡಕಾಗಲ್ಲ ಎಂದು ಗೈಡ್‌ ಹೇಳಿದ ಮೇಲೆ ನಾರಣಪ್ಪ ಅವನ ಜತೆ ನಡೆದುಕೊಂಡು ಹೋಗಲು ಒಪ್ಪಿದ.
 *
 ನಾಲ್ಕನೇ ದಿನ ಹನ್ನೊಂದು ಗಂಟೆ ಹೊತ್ತಿಗೆ ಸಂಬದಾಳಿನಿಂದ ಗೋವಿಂದನಿಗೆ ಫೋನ್‌ ಬಂತು.‘ಗೋವಿಂದಣ್ಣ, ಅಪ್ಪಯ್ಯ ಹೆಂಗೆಂಗೋ ಆಡ್ತಿದ್ದಾರೆ! ಏನಿದ್ದರೇನು? ಯಾರಿದ್ದರೇನು? ಯಾವುದೂ ಸಾಶ್ವತ ಅಲ್ಲ. ಮುತ್ತು,ರತ್ನಗಳನ್ನು ರಾಸಿ ಹಾಕ್ಕಂಡು ಬೀದಿಗಳಲ್ಲಿ ಮಾರಾಟ ಮಾಡ್ತಿದ್ದ ಹಂಪೆ ಹಾಳು ಬಿದ್ದಿರುವಾಗ ನನ್ನ ಹೊಲ,ಮನೆಗಳು ಯಾವ ಲೆಕ್ಕ? ಹನ್ನೊಂದು ವರ್ಸ ಯುದ್ದ ಮಾಡಿ ಲಕ್ಷಾಂತರ ಎಕರೆ ಭೂಮಿ ಗೆದ್ಕಂಡು ಬಂದ ಕೃಷ್ಣದೇವಪ್ಪನಿಗೆ ಕೊನೆಯಲ್ಲಿ ಎಂಥಾ ದುರ್ಗತಿ ಬಂತು! ಮಂತ್ರಿ ತಿಮ್ಮರಸು ಕೊನೆಗಾಲದಲ್ಲಿ ಕಣ್ಣು ಕಳ್ಕಂಡು ತಿರುಪ್ತಿ ಗುಡಿ ಮುಂದೆ ಕುಂತ್ಕಂಡು ತಿರುಪೆ ಎತ್ತಿದ ಅಂದ ಮೇಲೆ ನನ್ನಂತವನ ಗತಿ ಏನಯ್ಯಾ....’ ಅಂತ ಹೇಳ್ತಿದ್ದಾರೆ! ಡ್ರೈವರ್‌ ಸುಭಾನ್‌ ಮುಖ ಕಂಡರೆ ಸಾಕು ಉರಿದು ಬೀಳ್ತಾರೆ. ಊರಿಗೆ ಓಗನ ನಡೀರಿ ಅಂದರೆ ನಾನೆಲ್ಲಿಗೂ ಬರಲ್ಲ. ಇಲ್ಲೇ ಇರ‍್ತೀನಿ. ಇಲ್ಲೇ ಮಣ್ಣಾಗ್ತೀನಿ ಅಂತಿದ್ದಾರೆ. ಇವತ್ತು ಬೆಳಿಗ್ಗೆ ತೊಟ್ಕಂಡಿರೊ ಅಂಗಿ ಅರ್ಕಂಡು, ಗುಡಿ ಮುಂದೆ ಟವಲ್ಲು ಹಾಸ್ಕಂಡು ಕುಂತ್ಕಂಡಿದ್ರು. ಅವರನ್ನು ಅಲ್ಲಿಂದ ಎಬ್ಬಿಸ್ಕಂಡು ಬರೋವಷ್ಟರಲ್ಲಿ ನಂಗೆ ಸಾಕಾಗಿಹೋಯ್ತು. ಅಲ್ಲಿದ್ದ ಜನ, ಪಾರಿನರುಗಳು ನಮ್ಮನ್ನೇ ನೋಡ್ತಿದ್ದರು. ನಿನ್ನೆ ರಾತ್ರಿ ನಾವು ಉಳಕಂಡಿರೊ ಮನೆ ಹತ್ರದಲ್ಲೇ ಇರೋ ಮಂಟಪದಲ್ಲಿ ಯಾರೋ ಗೋಸಾಯಿಗಳ ಜತೆ ಸೇರ್ಕಂಡು ಏನನ್ನೋ ಕುಡ್ದು, ಗಾಂಜಾ ಸೇದಿ ಬಂದಿದ್ದರು! ‘ಅಯ್ಯಪ್ಪನಿಗೆ ತಲೆ ಕೆಟ್ಟಿದೆ. ಮೊದ್ಲು ಅವರನ್ನ ಡಾಕ್ಟರಿಗೆ ತೋರಿಸಬೇಕು. ನೀವ್ಯಾರಾದರೂ ಇವತ್ತೇ ಬರ‍್ರಿ ಅಂತ ಹೇಳಿದ್ದನ್ನು ಕೇಳಿ ಗೋವಿಂದನ ಎದೆ ಧಸಕ್ಕೆಂದಿತು.

ಈ ವಿಷಯ ಗೊತ್ತಾಗುತ್ತಿದ್ದಂತೆ ಮನೆಯ ಹೆಂಗಸರು, ಮಕ್ಕಳು ಹೋ ಅಂತ ಅಳತೊಡಗಿದರು. ಕಡಪಾ ಕಲ್ಲಿನ ಮನೆಯ ಮಾಳಿಗೆ ಹಾರಿ ಹೋಗುವಂತಿದ್ದ ಅವರ ಸಾಮೂಹಿಕ ಅಳು ಅರ್ಧ ಊರಿಗೆ ಕೇಳಿಸುತ್ತಿತ್ತು. ನಾರಣಪ್ಪನಿಗೆ ಏನೋ ಆಗಿದೆ ಅಂತ ಅಕ್ಕ ಪಕ್ಕದ ಮನೆಗಳವರು ಮತ್ತು ಬೀದಿಯಲ್ಲಿದ್ದವರು ಅವನ ಮನೆ ಮುಂದೆ ಬಂದು ಜಮಾಯಿಸಿದರು. ನಾರಣಪ್ಪನಿಗೆ ಏನೋ ಆಗಿದೆ. ಅದಕ್ಕೇ ಅವನ ಮನೆಯವರು ಅಳ್ತಿದ್ದಾರೆ. ನಾರಣಪ್ಪ ಸತ್ತೇ ಹೋಗಿರಬಹುದು ಅಂತಲೂ ಕೆಲವರು ಅಂದಾಜು ಮಾಡಿದರು. ಊರಲ್ಲೇ ಇದ್ದ ನಾರಣಪ್ಪನ ಅಣ್ತಮ್ಮಗಳು, ಸಂಬಂಧಿಕರೆಲ್ಲ ಓಡೋಡಿ ಬಂದರು. ಆಮೇಲೆ ಗೊತ್ತಾಗಿದ್ದೆಂದರೆ ಹಂಪೆಗೆ ಹೋಗಿದ್ದ ನಾರಣಪ್ಪನಿಗೆ ಚಳಿಜ್ವರ ಬಂದಿದೆ ಅನ್ನೋದು!

ನಮ್ಮಪ್ಪಯ್ಯನಿಗೆ ನೂರಾಮೂರು ಡಿಗ್ರಿ ಜ್ವರವಂತೆ! ಸಂಬಳದಾಳು ಪೋನ್‌ ಮಾಡಿದ್ದ. ನಾವ್ಯಾರಾದರೂ ಇವತ್ತೇ ಹಂಪೆಗೆ ಹೋಗಿ ಅಪ್ಪಯ್ಯನ್ನು ಕರಕಂಡು ಬರ‍್ತೀವಿ ಎಂದು ಗೋವಿಂದ ಮನೆಯ ಮುಂದೆ ನಿಂತಿದ್ದವರಿಗೆ ಹೇಳುತ್ತ, ದಯವಿಟ್ಟು ಎಲ್ಲರೂ ಹೋಗುವಂತೆ ಎಲ್ಲರಿಗೂ ಕೈಮುಗಿದು ವಿನಂತಿ ಮಾಡಿಕೊಂಡ. ಜನ ಮನೆಯಿಂದ ಸ್ವಲ್ಪ ದೂರ ಹೋಗಿ ತುಂಬಾ ಹೊತ್ತಿನ ತನಕ ಅಲ್ಲಲ್ಲೇ ಮಾತಾಡುತ್ತ ನಿಂತಿದ್ದರು. ಮೂರು ಗಂಟೆ ಹೊತ್ತಿಗೆ ಗೋವಿಂದ, ವೆಂಕಟಪ್ಪ ಇಬ್ಬರೂ ಹಂಪೆಗೆ ಹೋದರು. ನಾಳೆ ಹಗಲೂಟದ ಹೊತ್ತಿಗೆ ನಾರಣಪ್ಪ ಬರ‍್ತಾನೆ. ಅವನೇನಾದರೂ ಆಗಿದ್ದರೆ ಬೆಳಗಿನ ಜಾವದ ಹೊತ್ತಿಗೆ ಹೆಣ ತಗಂಡು ಬರ‍್ತಾರೆ ಎಂದು ಊರು ಮಾತಾಡಿಕೊಂಡಿತು.
 *
 ಬೆಳಗಿನ ನಾಲ್ಕೂವರೆ ಹೊತ್ತಿಗೆ ಅನ್ವರ್‌ಸಾಬರ ಕಾರು ನಾರಣಪ್ಪನ ಮನೆಯ ಮುಂದೆ ಬಂದು ನಿಂತ ಸದ್ದು ಕೇಳಿ ಅಕ್ಕ ಪಕ್ಕದ ಮನೆಗಳ ಅಂಗಳ, ಜಗುಲಿ, ಮಾಳಿಗೆಗಳ ಮೇಲೆ ಮಲಗಿದ್ದವರು ಎದ್ದು ನೋಡಲು ಬಂದರು. ನಾರಣಪ್ಪನನ್ನು ಅವನ ಮಕ್ಕಳು ಕಾರಿನಿಂದ ಅನಾಮತ್ತಾಗಿ ಎತ್ತಿಕೊಂಡು ಮನೆಯೊಳಕ್ಕೆ ಹೋಗಿದ್ದನ್ನು ನೋಡಿದರು.

 ‘ಅಪ್ಪಯ್ಯಂಗೆ ನಿದ್ದೆ ಬರೊ ಇಂಜೆಕ್ಷನ್‌ ಕೊಟ್ಟಿದ್ದಾರೆ. ಮರ‍್ನಾಲ್ಕು ದಿನಗಳಿಂದ ಅವರು ನಿದ್ದೆ ಮಾಡಿಲ್ಲ. ಹಗಲೂಟದ ಹೊತ್ತಿಗೆ ಎಚ್ಚರವಾಗಬೌದು ಅಂತ ಡಾಕ್ಟರು ಹೇಳಿದ್ದಾರೆ. ಅವರನ್ನು ಯಾರೂ ಎಬ್ಬಿಸಬ್ಯಾಡ್ರಿ...’ ಎಂದು ಗೋವಿಂದ ಮನೆಯ ಹೆಂಗಸರು, ಮಕ್ಕಳಿಗೆ ಹೇಳಿದ. ಗಾಢ ನಿದ್ದೆಯಲ್ಲಿದ್ದ ನಾರಣಪ್ಪನನ್ನು ನೋಡಿ ಮನೆಮಂದಿಗೆ ಅಯ್ಯೋ ಅನ್ನಿಸಿತು.

ಒಂಬತ್ತು ಗಂಟೆ ಹೊತ್ತಿಗೆ ನಾರಣಪ್ಪನನ್ನು ನೋಡಲು ಊರ ಜನ ಗುಂಪು ಗುಂಪಾಗಿ ಬಂದರು. ನಾರಣಪ್ಪಣ್ಣನಿಗೆ ಏನೂ ಆಗಿಲ್ಲ. ಬರೀ ಜ್ವರ, ನಿಶಕ್ತಿ ಅಷ್ಟೇ. ಡಾಕ್ಟರು ನಿದ್ದೆ ಬರೊ ಇಂಜೆಕ್ಷನ್‌ ಕೊಟ್ಟು ಮಲಗಿಸಿದ್ದಾರೆ ಅಂತ ಸಂಬಂಧಿಕನೊಬ್ಬ ಮನೆಯ ಹೊರಗೆ ಬಂದು ನಿಂತಿದ್ದವರಿಗೆ ಹೇಳಿದರೂ ಯಾರೂ ಅಲ್ಲಿಂದ ಕದಲಲಿಲ್ಲ. ಹನ್ನೊಂದು ಗಂಟೆ ಹೊತ್ತಿಗೆ ಊರಿನ ಪ್ರೈಮರಿ ಹೆಲ್ತ್‌ ಸೆಂಟರಿನ ಬಾಬಾ ಬುಡನ್‌ ಡಾಕ್ಟರು ಬಂದು ನಾರಣಪ್ಪನನ್ನು ಪರೀಕ್ಷೆ ಮಾಡಿದರು. ಹೊಸಪೇಟೆ ಡಾಕ್ಟರು ಕೊಟ್ಟಿರುವ ಔಷಧಿ, ಮಾತ್ರೆಗಳು ಸರಿಯಾಗಿವೆ. ಯಜಮಾನರಿಗೆ ಎಚ್ಚರವಾದ ಮೇಲೆ ತಿನ್ನಲು ಏನಾದರೂ ಕೊಡಿ. ಆಮೇಲೆ ಇವೇ ಮಾತ್ರೆಗಳನ್ನು ನುಂಗಿಸಿ ಅಂತ ಹೇಳಿ ಹೋದರು. ಮೂರು ಗಂಟೆ ಹೊತ್ತಿಗೆ ನಾರಣಪ್ಪನಿಗೆ ಎಚ್ಚರವಾಯಿತಂತೆ. ಆಮೇಲೆ ಸ್ನಾನ ಮಾಡಿ, ಉಂಡು ಮತ್ತೆ ಮಲಗಿದ ಅಂತ ಯಾರೋ ಹೇಳಿದರು.

ಮುಸ್ಸಂಜೆ ಹೊತ್ತಿಗೆ ನಾರಣಪ್ಪನ ಮೂವರು ಹೆಣ್ಮಕ್ಕಳು, ಅಳಿಯಂದಿರು, ಅವರ ಮಕ್ಕಳು, ಮರಿಗಳು, ಬೀಗರು, ಬಿಜ್ಜರು ಬಂದರು. ಪಡಸಾಲೆಯಲ್ಲಿ ಮಂಚದ ಮೇಲೆ ಮಲಗಿದ್ದ ಅಪ್ಪಯ್ಯನನ್ನು ನೋಡುತ್ತಿದ್ದಂತೆ ಅವರು ಸತ್ತೇ ಹೋಗಿದ್ದಾರೆ ಎಂದು ಭಾವಿಸಿದ ನಾರಣಪ್ಪನ ಹೆಣ್ಮಕ್ಕಳು ಕಣ್ಣು, ಮೂಗಲ್ಲಿ ನೀರು ಬರೋವರೆಗೂ ಅತ್ತರು. ಅವರಿಗೆ ಸಮಾಧಾನ ಹೇಳುವಷ್ಟರಲ್ಲಿ ಮನೆ ಮಂದಿಗೆ ಸಾಕಾಗಿಹೋಯಿತು. ಅಪ್ಪಯ್ಯನನ್ನು ಸಂಬಳದಾಳಿನ ಜತೆಯಲ್ಲಿ ಹಂಪೆಗೆ ಕಳಿಸಿದ್ದಕ್ಕೆ ದೊಡ್ಡ ಮಗಳು ಇಂದಿರಮ್ಮ ತನ್ನ ಅಣ್ಣಂದಿರನ್ನು ತರಾಟೆಗೆ ತೆಗೆದುಕೊಂಡಳು. ಮನೆಯ ಜಗುಲಿಯ ಮೇಲೆ ನಡೆಯುತ್ತಿದ್ದ ನಾರಣಪ್ಪನ ಮಕ್ಕಳ ಜಗಳವನ್ನು ಊರ ಜನ ಬೀದಿಯಲ್ಲಿ ನಿಂತು ನಾಟಕದಂತೆ ನೋಡಿದರು. ನಾರಣಪ್ಪನಿಗೆ ಏನೂ ಆಗಿಲ್ಲ ಅಂದ ಮೇಲೆ ಅವನ ಮಕ್ಕಳು ಜಗಳ ಆಡ್ತಿರೋದೇಕೆ ಎಂದು ತಮ್ಮತಮ್ಮಲ್ಲೇ ಕೇಳಿಕೊಂಡರು.

ಸರಿ ಹೊತ್ತಿನ ತನಕ ಮಕ್ಕಳು, ಅಳಿಯಂದಿರು ಜಗುಲಿ ಮೇಲೆ ಕುಂತು ಮಾತಾಡಿದರು. ನಾರಣಪ್ಪನನ್ನು ಬೆಂಗಳೂರಿನ ದೊಡ್ಡಾಸ್ಪತ್ರೆಗೆ ಕರಕೊಂಡು ಹೋಗಿ ತೋರಿಸಿಕೊಂಡು ಬರುವ ನಿರ್ಧಾರಕ್ಕೆ ಬಂದರು. ನಾಡಿದ್ದು ಬೆಳಗಿನ ಜಾವ ಹೊರಡುವುದೆಂದು ತೀರ್ಮಾನವಾಯಿತು. ಯಾವ ಆಸ್ಪತ್ರೆಗೆ ಸೇರಿಸಬೇಕು ಅಂಬೋದನ್ನು ಬಾಬಾಬುಡನ್‌ ಡಾಕ್ಟರನ್ನು ಕೇಳಿ ನಿರ್ಧರಿಸಬೇಕು. ಸಾಧ್ಯವಾದರೆ ಅವರನ್ನೂ ಜತೆಯಲ್ಲಿ ಕರಕಂಡು ಹೋಗಬೇಕು. ಕಾರಿನಲ್ಲಿ ಹೋಗೋ ಬದಲು ದುರ್ಗದಿಂದ ಅಂಬುಲೆನ್ಸ್‌ ತರಿಸಿ ಅದರಲ್ಲಿ ಕರಕಂಡು ಹೋಗಬೇಕು ಎಂದು ತೀರ್ಮಾನಿಸಿ ಎಲ್ಲರೂ ಮಲಗುವ ಹೊತ್ತಿಗೆ ರಾತ್ರಿ ಒಂದು ಗಂಟೆ ದಾಟಿತ್ತು.

 *
 ಬೆಳಗಿನ ಜಾವದ ಕೋಳಿ ಕೂಗುವ ಮೊದಲೇ ಎದ್ದು ದನಕರುಗಳಿಗೆ ಹುಲ್ಲು ಹಾಕಿ ಬಂದ ಸಂಬಳದಾಳುಗಳಿಗೆ ನಾರಣಪ್ಪ ಮಂಚದ ಮೇಲಿಲ್ಲ ಅನ್ನೋದು ಗೊತ್ತಾಯಿತು! ಇಷ್ಟು ಬೇಗ ಎದ್ದು ಎಲ್ಲಿಗೋದರು? ಬಚ್ಚಲಿಗೆ ಹೋಗಿರಬಹುದೇ ಅಂತ ಹೋಗಿ ನೋಡಿದರೆ ಅಲ್ಲೂ ಇಲ್ಲ! ಆಳುಗಳ ಓಡಾಟದ ಗಡಿಬಿಡಿಯ ಸದ್ದು ಕೇಳಿ ಮನೆಯ ಜನಕ್ಕೆ ಎಚ್ಚರವಾಯಿತು. ಅಪ್ಪಯ್ಯ ಕಾಣ್ತ ಇಲ್ಲ ಅನ್ನೋದು ಗೊತ್ತಾದ ಮೇಲೆ ಮನೆ ಮಂದಿ ಗಾಬರಿಯಾದರು. ಇಷ್ಟು ಬೇಗ ಎಲ್ಲಿಗೋಗಿರಬಹುದು ಎಂದುಕೊಳ್ಳುತ್ತ ಪಡಸಾಲೆ, ರೂಮುಗಳು, ಹಜಾರ,ಅಡುಗೆ ಮನೆ, ದೇವರ ಮನೆ, ಕೊಟ್ಟಿಗೆ, ಹಿತ್ಲು, ಬಣವೆ ಹಿಂದೆ ಹೋಗಿ ನೋಡಿದರು. ಹಿತ್ತಲಲ್ಲಿದ್ದ ನೀರಿಲ್ಲದ ಬಾವಿಗೆ ಇಣುಕಿ ನೋಡಿದರು. ನಾರಣಪ್ಪ ಪತ್ತೆ ಇಲ್ಲ! ಆಳುಗಳ ಜತೆ ಮಕ್ಕಳೂ ಹುಡುಕಲು ಮನೆಯಿಂದ ಹೊರಹೋದರು. ಊರಲ್ಲಿ ಹಗಲಾಗುವ ಪ್ರಕ್ರಿಯೆ ಆರಂಭವಾಗಿತ್ತು.

ಮನೆಯವರು ಊರಿನ ಓಣಿಗಳು, ಅಣ್ತಮ್ಮಗಳ, ನೆಂಟರ ಮನೆಗಳಿಗೆ ಹೋಗಿ ವಿಚಾರಿಸಿದರು. ನಾರಣಪ್ಪ ಅಲ್ಲಿಗೂ ಬಂದಿಲ್ಲವಂತೆ! ಆಳುಗಳ ಜತೆ ನಾರಣಪ್ಪನ ಮಕ್ಕಳು ಕೆರೆ ಏರಿ ಕಡೆಗೆ ಓಡಿದರು. ನಾಲ್ಕೂವರೆ ಕಿಲೋ ಮೀಟರು ಉದ್ದದ ಕೆರೆ ಏರಿಯ ಮೇಲೆ ಓಡಾಡಿ ಹುಡುಕಿದರು. ನಾರಣಪ್ಪ ಅಲ್ಲೆಲ್ಲೂ ಕಾಣಲಿಲ್ಲ.

ಧರ್ಮರಾಯನ ಗುಡಿ ಹತ್ತಿರಕ್ಕೆ ಬರುವಷ್ಟರಲ್ಲಿ ಯಾರೋ ಹಾಡುತ್ತಿರುವ ಸದ್ದು ಕೇಳಿಸಿತು! ಹಾಡ್ತಿರೋದು ಅಪ್ಪಯ್ಯ ಇರಬಹುದೇ ಅಂದುಕೊಂಡರು. ಪಾಳು ಬಿದ್ದಿರೊ ಗುಡಿಗೆ ಇಷ್ಟೊತ್ತಲ್ಲಿ ಅಪ್ಪಯ್ಯ ಯಾಕೆ ಬರ‍್ತಾರೆ ಅಂದುಕೊಂಡು ಹಾಡಿನ ಜಾಡು ಹಿಡಿದು ಅಲ್ಲಿಗೆ ಹೋದರು. ಗುಡಿ ಒಳಗೆ ಮಬ್ಬುಗತ್ತಲಿತ್ತು. ಮುಗ್ಗುಲು ವಾಸನೆಯ ಜತೆಗೆ ಬಾವಲಿಗಳ ಹಿಕ್ಕೆಯ ಕಮಟು ವಾಸನೆ. ಸಹಿಸಿಕೊಂಡು ಗುಡಿಯೊಳಗೆ ಹೋಗಿ ಕಣ್ಣು ಕಿರಿದು ಮಾಡಿಕೊಂಡು ನೋಡಿದರು. ಗರ್ಭಗುಡಿ ಕಡೆ ಮುಖ ಮಾಡಿಕೊಂಡು ಯಾರೋ ಹಾಡುತ್ತ ಕೂತಿರೋದು ಕಾಣಿಸಿತು!. ಹಾಡುತ್ತ ಕೂತವನ ಮೈಮೇಲೆ ತುಂಡು ಬಟ್ಟೆಯೂ ಇಲ್ಲ! ಕೆಲವೇ ಕ್ಷಣಗಳಲ್ಲಿ ಇನ್ನಷ್ಟು ಜನ ಬಂದರು. ಅಷ್ಟರಲ್ಲಿ ಹಾಡುತ್ತಿದ್ದವನು ಬಾಗಿಲ ಕಡೆಗೆ ತಿರುಗಿದ. ಅರೇ ನಾರಣಪ್ಪ! ತಕ್ಷಣ ಆಳೊಬ್ಬ ತನ್ನ ಲುಂಗಿ ಬಿಚ್ಚಿ ನಾರಣಪ್ಪನ ಸೊಂಟಕ್ಕೆ ಸುತ್ತಲು ಯತ್ನಿಸಿದ. ತಪ್ಪಿಸಿಕೊಂಡ ನಾರಣಪ್ಪ ಗುಡಿಯಿಂದ ಹೊರಕ್ಕೆ ಓಡಿದ.

ಅಷ್ಟರಲ್ಲಿ ಬೆಳಕು ನಿಚ್ಚಳವಾಗಿ ಹರಿದಿತ್ತು. ನಾರಣಪ್ಪನಿಗೆ ತಾನೆಲ್ಲಿದ್ದೇನೆ ಎಂಬ ಧ್ಯಾಸ ಇರಲಿಲ್ಲ. ‘ನನ್ನದು ಅಲ್ಲ, ನಿನ್ನದು ಅಲ್ಲ ಪರಮೇಶನದೇ ಭೂಮಿಯಿದು ...’ಅಂತ ಜೋರಾಗಿ ಹಾಡಿಕೊಂಡು ಕುಣಿಯುತ್ತಿದ್ದ ನಾರಣಪ್ಪನನ್ನು ನೋಡುತ್ತ ಜನ ಗರ ಬಡಿದವರಂತೆ ನಿಂತುಬಿಟ್ಟರು!

ನಾರಣಪ್ಪನಿಗೆ ತಲೆ ಕೆಟ್ಟಿದೆ ಎಂದು ಯಾರೋ ಅಂದರು. ಅದು ಬಿರುಗಾಳಿಯೋಪಾದಿಯಲ್ಲಿ ಊರ ತುಂಬಾ ಪ್ರತಿಧ್ವನಿಸಿತು. ಬೆಳಗಿನ ಕೆಲಸಗಳನ್ನು ಬದಿಗೊತ್ತಿ ಊರ ಜನ ಧರ್ಮರಾಯನ ಗುಡಿ ಕಡೆಗೆ ಬರತೊಡಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT