"ಬಯಲು"

"ಕೊಲೆ ಆರೋಪದ ಕಾರಣದಿಂದ ನಿನ್ನನ್ನ ಬಂಧಿಸಲಾಗುತ್ತಿದೆ"
ಹೀಗೆಂದು ಪೋಲೀಸ್ ಅಧಿಕಾರಿ ಹೇಳಿದಾಗ ಆತನಿಗೆ ತೀವ್ರ ಆಘಾತವಾಯಿತು. ಹೃದಯದ ಬಡಿತ ನಿಂತು ಹೋದಂತಾಗಿ ತಾನು ಇನ್ನೇನು ಬಿದ್ದೇಬಿಡುತ್ತೇನೆ ಎನ್ನಿಸಿತು. ಸಮಾಧಾನ.. ತಾಳ್ಮೆ ವತ್ಸಾ ತಾಳ್ಮೆ ಎಂದು ನಾಟಕೀಯವಾಗಿ ತನ್ನ ಮನಸ್ಸಿಗೆ ತಾನೇ ಹೇಳಿಕೊಳ್ಳುತ್ತ ಸಾವರಿಸಿಕೊಳ್ಳಲೆತ್ನಿಸಿದನಾದರು ದೇಹ ಸ್ಪಂದಿಸದೆ ಕಾಲುಗಳು ನಡುಗಿ ನರನರದಲ್ಲು ರಕ್ತ ಚಿಮ್ಮುತ್ತಿದ್ದಂತೆನ್ನಿಸಿತು. ಕಷ್ಟಪಟ್ಟು ಕತ್ತೆತ್ತಿ ಪೋಲೀಸ್ ಅಧಿಕಾರಿಯನ್ನ ನೋಡಿದ. ಅಧಿಕಾರಿಯ ಕಣ್ಣಲ್ಲಿ ಸಾವಿರಾರು ವೋಲ್ಟೇಜ್ಗಳ ಮಿಂಚು ಸಿಡಿಯುತ್ತಿದ್ದಂತಿತ್ತು. ಆ ಅಧಿಕಾರಿಯ ರಾಕ್ಷಸಾಕಾರದ ಪೊದೆಮೀಸೆ ಕೆಳಗಿನ ಬಾಯಿ ಹಸಿದ ಉದರದ ಕರೆಗಟ್ಟಿದ ಕೋರೆಹಲ್ಲುಗಳುಳ್ಳ ಸಿಂಹದ ಬಾಯಿಯಂತೆ ಕಾಣಿಸಿತು. ತನ್ನ ಮನಸ್ಥೈರ್ಯವನ್ನೆಲ್ಲ ಮತ್ತೊಮ್ಮೆ ಒಗ್ಗೂಡಿಸಿ ಧೈರ್ಯ ತಗೋಬೇಕು ವತ್ಸಾ ಎಂದುಕೊಳ್ಳುತ್ತ ಕೇಳಿದ:

"ಕೊಲೆ? ಯಾರ ಕೊಲೆ? ಏನು ತಮಾಷೆ ಮಾಡುತ್ತಿದ್ದೀರಾ?"
ಅರೆ! ದರ್ಪದ ಮೂರ್ತಿಯ ತುಟಿಯಲ್ಲು ಕಿರುನಗೆ ಮಿಂಚಿ ಮಾಯವಾಯಿತು. ಕ್ಷಣಮಾತ್ರ. ಮತ್ತೆ ದರ್ಪ ಮೊಗತುಂಬ ಹೊದೆದು ಹೂಂಕರಿಸಿತು: "ತಮಾಷೆ? ನಮಗೆ ತಮಾಷೆಗೆ ಸಮಯವಿಲ್ಲ, ಮಹನೀಯರೇ. ನೀನಾಗಿಯೆ ಬರುತ್ತೀಯೋ, ನಾಯಿಯಂತೆ ಬೇಡಿ ಹಾಕಿ ದರದರನೆ ಎಳೆದೊಯ್ಯಬೇಕೊ?"

ಅವನ ಕಡೆಯ ವಾಕ್ಯ ಬಹಳ ಕಟುದನಿಯಲ್ಲಿತ್ತು, ವ್ಯಂಗ್ಯಪೂರ್ಣವಾಗಿತ್ತು, ಮತ್ತು ಬಳಸಿದ ಸಂಯುಕ್ತ ಏಕವಚನ-ಬಹುವಚನಗಳು ಮಾತಿನ ತೀವ್ರತೆಗೆ ಪೋಷಕವಾಗಿತ್ತು: ವಿದ್ಯುದಾಘಾತವಾದಂತೆ ತತ್ತರಿಸಿ ಬೀಳಬೇಕು-ಹಾಗೆ. ತನಗೀಗ ರಕ್ಷಣೆ ಬೇಕು, ತಾನೊಬ್ಬನೆ ಇದನ್ನ ನಿಭಾಯಿಸಲಾರೆ ಎನ್ನುವ ಪ್ರಜ್ಞೆ ಧುತ್ತೆಂದು ಮೈ ಮನಸ್ಸನ್ನಾವರಿಸಿ ಮುಳುಗುತ್ತಿದ್ದವ ಪ್ರಾಣೋತ್ಕೃಮಣ ಸ್ಥಿತಿಯಲ್ಲಿ ಹುಲ್ಲುಕಡ್ಡಿ ಹಿಡಿದು ತೇಲಲು ಯತ್ನಿಸುವಂತೆ ಆತ ಸುತ್ತ ನೋಡಿದ. ಒಳಬಾಗಿಲ ಬಳಿ ಅವನ ಹೆಂಡತಿ ನಿರ್ಭಾವುಕಳಾಗಿ ನಿಂತಿದ್ದಳು. ಈ ನಿರ್ಭಾವುಕತನಕ್ಕೆ ಏನರ್ಥ- ತಿಳಿಯಲಿಲ್ಲ. ಹೊರಗಿನಿಂದ ಗಂಡಸರು ಬಂದಾಗ ವ್ಯವಹಾರದ ವಿಷಯ ಮಾತಾಡುವುದು ಸಾವಿರಾರು ಇರುತ್ತದೆ, ಬಾಗಿಲ ಬಳಿ ಬಂದು ನಿಲ್ಲಬೇಡ ಎಂದು ಮೊದಲೆಲ್ಲ ಗದರುವುದಿತ್ತು. ತೀರಾ ತರಲೆ ಹಿಡಿದು ಬಂದರೆ ಜಡೆ ಹಿಡಿದೆಳೆದು ಒಳಗೆ ತಳ್ಳುವುದಿತ್ತು. ಆದರೆ ನಿವೃತ್ತಿಯ ನಂತರ ವ್ಯವಹಾರ ಸಂಬಂಧ ಮಾತುಗಳಿಗೆ ಯಾರೂ ಬರುತ್ತಿರಲಿಲ್ಲವಾಗಿ ಅಥವಾ ಉದ್ಯೋಗವಿಲ್ಲದೆ ಬರಿದೆ ಸಮಯ ಕೊಲ್ಲುವ ಗಂಡುಸಾಗಿ ತನ್ನ ಪ್ರಾಮುಖ್ಯತೆ ನಶಿಸುತ್ತ... ಅವಳು ಹೊರಬಂದು ನಿಲ್ಲುವ ಧೈರ್ಯ ಮಾಡುತ್ತಿರಬೇಕು. ಏನಾದರು ಈಗ ಬಂದದ್ದು, ಬಾಗಿಲ ಬಳೀ ನಿಂದದ್ದು ಒಳ್ಳೆಯದೆ ಆಯಿತು ಎಂದುಕೊಂಡರೆ ಅವಳೇನೂ ಮಾತಾಡುತ್ತಿಲ್ಲ. ಗಂಡನನ್ನ ಆರೆಸ್ಟ್ ಮಾಡಲು ಪೋಲೀಸರು ಬಂದಿದ್ದಾರೆ ಎಂದರು ಏನೂ ಅನ್ನಿಸುತ್ತಿಲ್ಲವೆ ಇವಳಿಗೆ?... ಕ್ಲು ಮನಸ್ಸಿನವಳು. ಸಾಯಲಿ ಇವಳು. ಮಗಳಿರಬೇಕಲ್ಲ, ಎಲ್ಲಿ?.. … ಮುದ್ದಿನ ಮಗಳಿಗಾಗಿ ಕಣ್ಣಾಡಿಸಿದ. ಕಾಣುತ್ತಿಲ್ಲ. ಬಹುಶಃ ತನ್ನ ರೂಮಿನಲ್ಲಿ ಕಾದಂಬರಿಯೊಂದನ್ನ ಹಿಡಿದು ಓದುತ್ತ ಮಲಗಿರಬಹುದೆ... ಅಥವಾ ಕವುಚಿ ಮಲಗಿ ಲ್ಯಾಪ್ಟಾಪ್ ಬಿಚ್ಚಿಟ್ಟುಕೊಂಡೊ, ಫೋನಿನ ಹೊಟ್ಟೆ ಬಿರಿದೊ ಫೇಸ್ ಬುಕ್ನಲ್ಲಿ ಹೊಸ ಸ್ನೇಹಿತರು ಯಾರ್ಯಾರು ಸೇರಿಕೊಂಡಿದ್ದಾರೆ, ತನ್ನ ಹೊಸ ಪ್ರೊಫೈಲಿಗೆ ಎಷ್ಟು ಲೈಕುಗಳು ಬಂದಿವೆ.. ಎಂದು ಹುಡುಕಾಡುತ್ತಿರಬಹುದೆ.. ಅವಳು ಸಾಯಲಿ. ಹುಂ, ತಾನೇನು ಮಾತು ಬರದವನೆ, ತಾನೇ ಕೇಳುತ್ತೇನೆ-ಇದೇನು ಸರ್ವಾಧಿಕಾರದ ದೇಶವಾಯಿತೆ-ಯಾವ ಅಪರಾಧಕ್ಕಾಗಿ ಬಂಧಿಸುತ್ತೀರಿ, ಆಧಾರವೇನಿದೆ ಎನ್ನುವುದಾಗಿ ಕೇಳುತ್ತೇನೆ- ಎಂದು ತಿರುಗಿದವನಿಗೆ ಪೋಲೀಸ್ ಅಧಿಕಾರಿಯ ಕೈಯಲ್ಲಿ ಇದ್ದಕ್ಕಿದ್ದಂತೆ ಮಾರುದ್ದದ ಖಡ್ಗ ಕಂಡಂತಾಗಿ ಅದರ ಮೊನೆ ತನ್ನೆದೆಗೆ ಒತ್ತಿದಂತಾಗಿ ಚೀತ್ಕರಿಸಿದ. ಹಾಗೆಲ್ಲ ಭೀಕರ ಕನಸು ಬಿದ್ದು ಕೂಗಿದಾಗೆಲ್ಲ ಅವನ ಹೆಂಡತಿ ಅವನ ಹೆಸರು ಹಿಡಿದು ಅಲುಗಾಡಿಸಿ ಎಚ್ಚರಗೊಳಿಸಿ ಇದು ಕನಸೆಂದು ಸ್ಪಷ್ಟಪಡಿಸಿದ ಬಳಿಕ ನೀರು ಕುಡಿದು ಮಲಗುವುದು, ನಂತರವಷ್ಟೆ ನಿದ್ದೆ ಬರುತ್ತಿದ್ದುದು. ಈಗಲು ಅವಳು ಹಾಗೇ ಎಚ್ಚರಿಸಿ ಇದು ಕನಸೆಂದು ಸ್ಪಷ್ಟವಾಗಲಿ ಎಂದು ಕೂಗಿದ. ಇಲ್ಲ. ಅವಳು ಅಲ್ಲಿ ನಿಂತೇ ಇದ್ದಳು ಮತ್ತು ಎಲ್ಲ ಸ್ಪಷ್ಟವಾಗಿ ಕಾಣುತ್ತಿತ್ತು. ಅಥವಾ ತಾನಿನ್ನು ಕೂಗೇ ಇಲ್ಲವೆ, ಅವಳಿಗೆ ಎಚ್ಚರವಾಗಿಲ್ಲವೆ... … ಇನ್ಸ್ಪೆಕ್ಟರ್ ತನ್ನ ಸೋಟಾದಿಂದ ಗಟ್ಟಿಯಾಗಿ ಭುಜದ ಮೇಲೆ ತಟ್ಟಿದ. ನೋವಾಯಿತು. ಒಹ್ ಎಲ್ಲ ನಿಜವೇ, ಕನಸಲ್ಲ. ಮಗಳೂ ಮಲಗಿಲ್ಲವೇನೊ. ಅಷ್ಟಕ್ಕು ಈಗೇನು ಮಲಗುವುದು- ರಾತ್ರಿಯಲ್ಲ. ಹಗಲು. ಹೊರಗೆ ಬೆಳಕಿದೆ. ಒಳಗೆ ಲೈಟ್ ಹಾಕಿಲ್ಲ. ಪೋಲೀಸ್ ಅಧಿಕಾರಿ ಬಾಗಿಲು ಬಡಿದು ಒಳಗೆ ಬಂದಿದ್ದಾನೆ. ಕತ್ತಲೆಯಿರಲಿಲ್ಲ. ಬೆಳಕೂ ಇರಲಿಲ್ಲ. ತಾನೇ ಬಾಗಿಲು ತೆರೆದವನು. ಬಂದವನೆ ಕೊಲೆ ಅಪರಾಧಕ್ಕಾಗಿ ನಿನ್ನ ಆರೆಸ್ಟ್ ಮಾಡುತ್ತೇನೆ ಎಂದಿದ್ದಾನೆ, ಅಲ್ಲ ಗರ್ಜಿಸಿದ್ದಾನೆ. ತನಗೆ ಗುಡುಗಿನಂತೆ ಕೇಳಿಸಿದೆ.

ಮನೆಯ ಎಲ್ಲರಿಗು ಕೇಳಿಸಿರಬೇಕು. ಯಾಕೆ, ಯಾರೂ ಏನೂ ಮಾತಾಡುತ್ತಿಲ್ಲ? ಒಹ್ ಮನೆಯ ಯಜಮಾನ ತಾನು. ಗಾಳಿ ಬೀಸಿದರೆ ಎತ್ತರದ ಮರದ ತಲೆಯೆ ಮೊದಲು ಉರುಳುವುದು ಎಂದಲ್ಲವೆ ಅಪ್ಪ ಹೇಳುತ್ತಿದ್ದುದು? ತಾನಿರುವಾಗ ಬೇರೆಯವರು ಮಾತಾಡುವುದಿಲ್ಲ. ತಾನೇ ಸಂಭಾಳಿಸಬೇಕು...

"ಹೊರಡೋಣವೋ?" ಅಧಿಕಾರಿ ಪುನಃ ಹೂಂಕರಿಸಿದ.
"ಒಂದು ನಿಮಿಷ" ಗಂಟಲಲ್ಲಿ ಕಟ್ಟಿಕೊಂಡಿದ್ದ ಕಫ ಗಲಗಲ ಉಲಿಯಿತಿರಬೇಕು.
ಮಗಳ ಬಳಿಗೆ ಹೋಗಿ ಹೇಳಬೇಕೆಂದುಕೊಂಡ: ಅವಳ ಬಳಿ ಹೋಗಿ ಪ್ರೀತಿಯಿಂದ ಅವಳ ತಲೆ ನೇವರಿಸಿ ಆಪ್ತವಾಗಿ-"ಎನ್ನ ಮುದ್ದು ಕೂಸೆ, ನಿನ್ನ ಬಾಳನ್ನ ಚಂದ ಮಾಡಬೇಕೆಂದುಕೊಂಡಿದ್ದೆ- ನೀನು ಓದೋ ಅಷ್ಟು ಓದ್ಸಿ, ಚಂದದ ಗಂಡನ್ನ ಹುಡುಕಿ ಮದ್ವೆ ಮಾಡಿ-ದುಡಿದಿಟ್ಟ ಆಸ್ತಿನೆಲ್ಲ ನಿಂಗೆ ಬಿಟ್ಟು.. ….. ಹೌದು ನಾನು ದುಡಿದಿಟ್ಟಿದ್ದು ಮತ್ತೆ ಯಾರಿಗೆ ಹೇಳು.. ಆದರೆ ಈಗ ನೋಡು. ನನ್ನ ಆರೆಸ್ಟ್ ಮಾಡ್ತಿದಾರೆ… ನಿನ್ನ ಅಮ್ಮನು ಸುಮ್ನೆ ಇದಾಳೇ.."

ಆತ ಹೆಂಡತಿಯತ್ತ ನೋಡುತ್ತಿದ್ದಂತೆ ಆಕೆ ಪೋಲೀಸ್ ಇನ್ಸ್ಪೆಕ್ಟರ್ ಬಳಿ ಹೋದವಳೆ ಆತನ ಭುಜದ ಮೇಲೆ ಕೈಯಿರಿಸಿ, "ಕುಳಿತುಕೊಳ್ಳಿ, ಕಾಫಿ ತರುತ್ತೇನೆ, ಅಪರೂಪದವರು, ಮತ್ತೆ ಬರುವುದು ಯಾವಾಗಲೊ ಏನೊ"- ಎಂದು ಅಡುಗೆ ಮನೆಗೆ ಹೋದಳು. ಆತನಲ್ಲಿ ಒಮ್ಮೇಗೇ ಎರಡು ಪ್ರಶ್ನೆ ಉದ್ಭವವಾಯಿತು- ಮನೆಯ ಗೃಹಿಣಿಯಾಗಿ ತನ್ನ ಕರ್ತವ್ಯ ಮಾಡಿದ್ದೇನೆ ಎಂದು ತೋರಿಸಲು ಹೀಗೆ ಮಾಡಿದಳೆ? ಮತ್ತೆ ಪೋಲೀಸನ ಬಗ್ಗೆ ಇಷ್ಟು ಆತ್ಮೀಯತೆಯಿಂದ ಮಾತಾಡಲು ಅವನ ಪರಿಚಯ ಇವಳಿಗೆ ಮೊದಲೇ ಇದ್ದಿತ್ತೆ? ಏನಾದರಾಗಲಿ, ಉಸಿರಾಡಲು ಸಮಯ ಸಿಕ್ಕಿದೆ ಮತ್ತು ಒಳ್ಳೆಯ ಕಾಫಿ ಬರುತ್ತದೆ ಎಂದುಕೊಂಡವನು ಇನ್ಸ್ಪೆಕ್ಟರ್ ಬಳಿ ಹೋಗಿ ಅವರ ಹಿಂದೆ ನಿಂತು, "ಕಾಫಿ ಬರುತ್ತೆ, ಕುಡಿದು ಹೋಗಿ. ಅದು ಸರಿ, ಇಲ್ಲಿಗೆ ಈಗ ಬಂದದ್ದು ಯಾಕೆ ಅಂತ?" ಎಂದು ಹೆಣ್ಣಿನ ದನಿಯಲ್ಲಿ ಮೆತ್ತಗೆ ಕೇಳಿದ.

ತಟ್ಟನೆ ಸಾವಧಾನ್ನಲ್ಲಿ ಸೆಟೆದು ನಿಂತ ಅಧಿಕಾರಿ ಪೀಚೇಮೂಡ್ ಆಗಿ, "ಕೊಲೆ. ಕೊಲೆ ಆರೋಪ. ನಿನ್ನ ಮೇಲೆ ಕೊಲೆ ಆರೋಪ ಇದೆ. ಅದಕ್ಕೆ ಅರೆಸ್ಟ್ ಮಾಡಿ ಕರೆದೊಯ್ಯಲಿದ್ದೇನೆ. ಬೇಗನೆ ಹೊರಡುತ್ತೀಯೊ ಇಲ್ಲ ಬೇಡಿ ಹಾಕಿ ಎಳೆದೊಯ್ಯಬೇಕೊ?" ಎಂದು ಬಿರುಸಾಗಿ ನುಡಿದು ಮತ್ತೆ ತಿರುಗಿ ಅವಳು ತರುವ ಕಾಫಿಗಾಗಿ ಕಾಯುತ್ತ ಕುರ್ಚಿಯ ಮೇಲೆ ಗತ್ತಿನಿಂದ ಕುಳಿತ.

"ಬಂದೆ, ಒಂದು ನಿಮಿಷ' ಮೊದಲು ಹೇಳಿದಂತೆಯೆ ಹೇಳಿದ ಆತ ಮನೆಯ ಹೊಸಿಲು ದಾಟಿ ಒಳಗೆ ಹೋದ. ಸ್ಟೇಷನ್ನಿನಲ್ಲಿ ಇನ್ನೂ ದೊಡ್ಡ ಅಧಿಕಾರಿ ಇರುತ್ತಾನೆ- ಈ ಸಾದಾ ಅಂಗಿ ಪಂಚೆ ಬೇಡ ಎಂದುಕೊಂಡು ತಾನು ನೌಕರಿಯಲ್ಲಿದ್ದಾಗ ಧರಿಸುತ್ತಿದ್ದ ತನ್ನ ಮೆಚ್ಚಿನ ಬೂದು ಬಣ್ಣದ ಸಫಾರಿ ತೆಗೆದು ಧರಿಸಿದ. ತಟ್ಟನೆ ಯೋಚನೆ ಬಂತು. ಕೊಲೆ ಆರೋಪ ಎನ್ನುತ್ತಿದ್ದಾನೆ. ಅರೆಸ್ಟ್ವರೆಗೆ ಹೋಗಿದೆ ಎಂದರೆ ತಾನು ಕೊಲೆ ಮಾಡಿರಲೇಬೇಕು. ಯಾರ ಕೊಲೆ ಮಾಡಿದ್ದೇನೆ? ನೆನಪಿಗೆ ಬರುತ್ತಿಲ್ಲ. ಅನ್ನಿಸಿತು- ಈಗಿನದೆ ಆಗಬೇಕೆಂದಿಲ್ಲ. ಹಳೆಯದು.. … ಯಾವಾಗಲೊ ಮಾಡಿದ್ದು.. ಕೊಲೆ ಅಥವಾ ಕೊಲೆಯ ಪ್ರಯತ್ನ.. ..ನೆನಪನ್ನ ಹಿಂದೆ ಸರಿಸಿದ...

ನೆನಪು-ಒಂದು:
ಎಳೆವರೆಯದಲ್ಲಿ-ನಾಲ್ಕನೇ ಕ್ಲಾಸಿನಲ್ಲಿದ್ದಾಗ- ಮೇಲಿನಮನೆ ಶೀನನ ಮೇಲೆ ಸಿಟ್ಟಿತ್ತು. ಆತ ತನ್ನ ಗುಂಪಿನವರೊಂದಿಗೆ ʻಉಬ್ಬು ಹಲ್ಲಿನ ಸೀಳು ನಾಯಿʼ ಎಂದು ತನ್ನನ್ನ ಛೇಡಿಸುತ್ತಿದ್ದ. ಅವನನ್ನ ಬಡಿಯಲೇ ಬೇಕು ಎಂದು ಒಂದು ದಿನ-ಬಹುಶಃ ಶನಿವಾರ- ನಮ್ಮ ಮನೆಯ ಹಿಂಭಾಗದ ಬೆಟ್ಟದಲ್ಲಿ ಚಲೋ ಮುಳ್ಳೆಹಣ್ಣು ಬಿಡುತ್ತದೆ ಕೊಯ್ಯುವ ಬಾ ಎಂದು ಪುಸಲಾಯಿಸಿ ಕರೆದು ಕೊಂಡು ಹೋಗಿದ್ದೆ. ಮುಳ್ಳೆ ಹಣ್ಣು ಕೊಯ್ಯುವಾಗ ಬಳಿಯಲ್ಲಿದ್ದ ಕಾರೇಮಟ್ಟಿಗೆ ಅವನನ್ನ ದೂಡಿದ್ದೆ- ಕಾರೆಮುಳ್ಳು ಕೆಟ್ಟನಂಜು-ಬಹಳಷ್ಟು ಚುಚ್ಚಿದರೆ ಸತ್ತೇ ಹೋಗುತ್ತಾರೆ ಎಂದು ಅಜ್ಜಿ ಹೇಳಿದ ನೆನಪಿತ್ತು. ಅವನು ಬಿಡಿಸಿಕೊಳ್ಳಲು ಒದ್ದಾಡುತ್ತಿರುವಾಗ ಅವನನ್ನ ಕೋಲಿನಿಂದ ಮತ್ತಷ್ಟು ಒತ್ತಿ ಉಬ್ಬು ಹಲ್ಲು ಒತ್ತಿದರೆ ಹೇಗಿರುತ್ತೆ ನೋಡುತ್ತ ಸಾಯೋ ಸಾಯಿ ಮಗನೆ ಎಂದು ಬಂದಾಗಿತ್ತು. ಆತ ನಾಲ್ಕಾರು ದಿನ ಶಾಲೆಗೇ ಬರದಾದಾಗ ಖುಷಿಯಾಗಿತ್ತು. ಆತ ಹದಿನೈದು ದಿನವಾದರು ಬಾರದಾಗ ಸತ್ತೇ ಹೋದನೆ ಅನ್ನಿಸಿ ದಿಗಿಲಾಗಿತ್ತು. ಶಾಲೆಗೆ ಹೋಗುವಾಗೆಲ್ಲ ಯಾರೂ ನೋಡಬಾರದೆನ್ನುವಂತೆ ಮುಖಕ್ಕೆ ಪಾಟೀಚೀಲ ಅಡ್ಡ ಇರಿಸಿಕೊಂಡು ಹೋಗುತ್ತಿದ್ದೆ. ಕಡೆಗೇನೊ ತಿಳಿಯಿತು- ಆತ ಓದಲು ಮಾವನ ಊರಿನ ಶಾಲೆಗೆ ಹೋದ ಅಂತ. ಅಂದರೆ ಅವನ್ನ ಕೊಲೆ ಮಾಡಲಿಲ್ಲ. ಅವನಿಗು ಈಗ ತನ್ನಷ್ಟೆ ವಯಸ್ಸು. ಈ ಇಳಿವಯಸ್ಸಿನಲ್ಲಿ ಬಾಲ್ಯದ ನಂಜು ಕೆಣಕಿ ಸತ್ತು ಹೋಗುವ ಮುನ್ನ ಬಾಲ್ಯದಲ್ಲಿ ಹೀಗ್ಹೀಗೆ ಆಗಿತ್ತು- ನನ್ನ ಸಾವಿಗೆ ಇವನೆ ಕಾರಣ ಅಂತ ನನ್ನ ಹೆಸರನ್ನೇನಾದರು...

ನೆನಪು-ಎರಡು:
ಕಾಲೇಜಲ್ಲಿ ಓದುವಾಗ ರಜನಿ ಹಿಂದೆ ಬಿದ್ದಿದ್ದಳು. ಹೆಣ್ಣಿನ ಸ್ಪರ್ಶವೆ ರೋಮಾಂಚನ ಉಂಟು ಮಾಡುವ ಆ ದಿನಗಳಲ್ಲಿ ಅವಳೊಡನೆ ಒಂದಷ್ಟು ಲಲ್ಲೆ ಹೊಡೆದದ್ದು ನಿಜ. ಉಮೇದಿನಲ್ಲಿ ಮಜಾ ಮಾಡಿದ್ದೂ ನಿಜವೆ. ಎಚ್ಚರಿಕೆ ವಹಿಸಿಯಾಗಿತ್ತು. ಹಾಗಿದ್ದರೂ ನನ್ನನ್ನೆಲ್ಲ ಕಂಡಿದ್ದೀಯಲ್ಲ, ಇನ್ನು ಮದುವೆ ಮಾಡಿಕೊಳ್ಳಲೇಬೇಕು ಅಂತ ದುಂಬಾಲು ಬಿದ್ದಳು. ಆದರೆ ದೊಡ್ಡ ಬಾಯಿಯ ಹ್ವಾತ ಕಣ್ಣುಗಳ ಇವಳು ನನಗೆ ಸರಿ ಹೊಂದೊಲ್ಲ ಅಂತ ನೇರಾನೇರ ನಿರಾಕರಿಸಿದಾಗ ತಾನು ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಹೆದರಿಸಿದ್ದಳು. ಕಡೆಗೆ ಅವಳ ವಿಚಾರವೆ ಗೊತ್ತಾಗಲಿಲ್ಲ. ಆಕೆ ಬಹಳ ಭಾವುಕ ಹುಡುಗಿ, ಹಾಗೇ ಮಾಡಿಕೊಂಡುಬಿಟ್ಟು, ಅವಳ ಡೆತ್ನೋಟ್ ಈಗ ಸಿಕ್ಕಿ...

ನೆನಪು-ಮೂರು:
ಕೆಲವು ವರ್ಷಗಳ ಹಿಂದೆ, ಕುಮಟಾ ಶಾಖೆಯಲ್ಲಿ ಇದ್ದಾಗ, .. ..ಹೌದು, ಅಲ್ಲಿಯೇ. ವಸೂಲಿಗೆಂದು ಘಟ್ಟದ ಮೇಲಿನ ಊರೊಂದಕ್ಕೆ ಹೋಗಿ ಬರುವಾಗ ರಾತ್ರಿಯಾಗಿತ್ತು. ಅಷ್ಟಿಷ್ಟು ಡ್ರೈವಿಂಗ್ ಕಲಿತವನಿಗೆ ಡ್ರೈವ್ ಮಾಡೊ ಚಟ ಬಂದು, ಬ್ಯಾಂಕ್ ಜೀಪ್ ಡ್ರೈವರನ ಬಳಿ ನಾ ಡ್ರೈವ್ಮಾಡ್ತೇನೆ ಅಂತ ತಗೊಂಡು ಒಂದಿಷ್ಟು ದೂರ ಸ್ಟೈಲಿಶ್ ಆಗಿ ಘಟ್ಟದಲ್ಲಿ ಸ್ಟೇರಿಂಗ್ ತಿರುಗಿಸುತ್ತ ಹೋಗುತ್ತಿದ್ದಂತೆ ತಟ್ಟನೆ ಮೋಟಾರ್ ಬೈಕಿನವನೊಬ್ಬ ಎದುರು ಬಂದು ಜೀಪಿಗೆ ಗುದ್ದಿ ಪಕ್ಕದಲ್ಲಿ ಹಾರಿಬಿದ್ದಿದ್ದ. ಸುತ್ತಲು ರಾತ್ರಿ ಕತ್ತಲು. ಅದೃಷ್ಟಕ್ಕೆ ಬದಿಗೆ ಪ್ರಪಾತವೇನು ಇರಲಿಲ್ಲವಾಗಿ ಬೈಕಿನವ ರಸ್ತೆ ಬದಿಗಷ್ಟೆ ಬಿದ್ದಿದ್ದ. ಕೂಡಲೆ ಡ್ರೈವರ್, ಗಾಡಿ ನಿಲ್ಲಿಸಬೇಡಿ ಸಾರ್ ಹೋಗಿ, ಹೋಗಿ ಅಂದಿದ್ದ. ಕೈ ಕಾಲೆಲ್ಲ ನಡುಗುತ್ತಿದ್ದರು ವೇಗವಾಗಿ ಒಂದಿಷ್ಟು ದೂರ ಜೀಪು ತಂದವನೆ, ನಿಲ್ಲಿಸಿ, ಸ್ಟೇರಿಂಗನ್ನ ಡ್ರೈವರನಿಗೆ ಹಸ್ತಾಂತರಿಸಿ, ಅವನು ಪಡ್ಚಾನೇನೊ ಮಾರಾಯ, ನೋಡಬೇಕಾಗಿತ್ತು ಎಂದರೆ, ಇಲ್ಲ ಸಾರ್, ರಸ್ತೆ ಮಣ್ಣಿನ ಮೇಲೆ ಬಿದ್ದಿದಾನೆ, ಒಂದಿಷ್ಟು ತರಚಿರಬಹುದಷ್ಟೆ, ಅವನ ಗಾಡಿಗೆ ಒಂದಿಷ್ಟು ಜಖಂ ಆಗಿರಬಹುದು, ನಾವು ಗಾಡಿ ನಿಲ್ಲಿಸಿದ್ರೆ ಗಾಡಿ ರಿಪೇರಿ ಅದು ಇದು ಅಂತ 3-4 ಸಾವಿರ ವಸೂಲು ಮಾಡ್ತಾನೆ ಅಂತ ನಿಲ್ಲಿಸಬೇಡಿ ಅಂದೆ ಅಷ್ಟೆ ಎಂದು ತಿಪ್ಪೆ ಸಾರಿಸಿಬಿಟ್ಟ. ಮರುದಿನ ಪತ್ರಿಕೆ ನೋಡುವವರೆಗು ಧೈರ್ಯವಿರಲಿಲ್ಲ. ಪುಣ್ಯಕ್ಕೆ ಆ ಜಾಗದ ಅಪಘಾತದ ಸಾವಿನ ಸುದ್ದಿಯಂತು ಪತ್ರಿಕೆಯಲ್ಲಿ ಇರಲಿಲ್ಲ. ಅಥವಾ ಅವನು ಸತ್ತು ಹೋಗಿದ್ದನೆ- ಬೇರೆ ಪತ್ರಿಕೆಯಲ್ಲಿ ಬಂದಿತ್ತೆ- ಸಾಯುವ ಮುನ್ನ ತನ್ನ ಗುರುತು ಹೇಳಿದ್ದರೆ.. ಅಥವಾ ಗಾಡಿ ನಂಬರು ಕೊಟ್ಟಿದ್ದರೆ.. ತಾನೇನು ಆ ಗಾಡಿ ಡ್ರೈವರ್ ಅಲ್ಲವಲ್ಲ- ಹಾಗೆ ಬಂದರೆ ಬ್ಯಾಂಕ್ ಮ್ಯಾನೇಜರಾದ ತಾನೇಕೆ ಗಾಡಿ ಡ್ರೈವ್ ಮಾಡಲಿ ಎಂದರಾಯಿತು. ಅಷ್ಟಕ್ಕು ಇಷ್ಟು ದಿನದ ಮೇಲೆ ಅದ್ಹೇಗೆ ಬರುತ್ತೆ…. ಒಮ್ಮೆ ಬಂತು ಅಂತಾದರು ಅಪಘಾತ ಕೊಲೆ ಅಲ್ಲವಲ್ಲ…..

ನೆನಪು-ಮತ್ತೊಂದಿಷ್ಟು:
ಬ್ಯಾಂಕ್ ಮ್ಯಾನೇಜರಾಗಿದ್ದಾಗ ಎಷ್ಟು ಜನ ರೈತರನ್ನ ಬೈದಿಲ್ಲ? ಸಾಲ ವಸೂಲಿಗೆ ಅವರನ್ನ ಕೋರ್ಟಿಗೆ ಎಳೆದಿಲ್ಲ, ಮನೆ ಜಪ್ತು ಮಾಡಿಸಿಲ್ಲ? ಅವರಲ್ಲಿ ಕೆಲವರು ಆತ್ಮಹತ್ಯೇನು ಮಾಡಿಕೊಂಡಿರಬಹುದು. ಅಪ್ಪ ಎಂ. ಎ. ಓದಲು ಧಾರವಾಡಕ್ಕೆ ಕಳಿಸೋದಿಲ್ಲ ಎಂದಾಗ ದೊಡ್ಡಪ್ಪನ ಪ್ರೋತ್ಸಾಹದಿಂದ ಅಪ್ಪನ ಜೊತೆಗೆ ಜಗಳ ಮಾಡಿ, ನನ್ನ ಪಾಲಿಂದು ನನಗೇ ಕೊಟ್ಟುಬಿಡು ಅಂತ ಜಗಳವಾಡಿದ ದಿನವೇ ಅಪ್ಪನಿಗೆ ಮೊದಲ ಹೃದಯಾಘಾತವಾದುದು. ಬಳಿಕ ಅಪ್ಪ ಬಹಳ ದಿನ ಬದುಕಲಿಲ್ಲ ಕೂಡ. ಪರೋಕ್ಷವಾಗಿ ಅಪ್ಪನ ಸಾವಿಗೆ ಕಾರಣ ನಾನೆ ಅಂತ ಮನಸ್ಸು ಪಶ್ಚಾತ್ತಾಪಪಡುತ್ತೆ. ಹಾಗೆಂದು.. ..ಅಥವಾ.. ಶಾಲೆಯಲ್ಲಿರುವಾಗ ಮಾಸ್ತರು, ಉದ್ಯೋಗದಲ್ಲಿರುವಾಗ ಹಿರಿಯ ಅಧಿಕಾರಿಗಳು ಬೈದು ಭಂಗಿಸಿ, ಅವಮಾನ ಮಾಡಿದಾಗಲೆಲ್ಲ ಇವರು ಬೇಗನೆ ಸತ್ತು ಹೋಗಲಿ ಎಂದು ಶಾಪ ಹಾಕಿದ್ದಲ್ಲದೆ, ಅವರನ್ನ ಇರಿದು ಕೊಂದಂತೆ ಹಗಲುಗನಸು ಕಂಡದ್ದಿದೆ. ಇವಳು.. ಈ ಹೆಂಡತಿ.., ಈಗನ್ನಿಸುತ್ತೆ, ತನಗಾಗಿ ಅಪ್ಪ ಅಮ್ಮ ಎಲ್ಲರನ್ನ ಬಿಟ್ಟು ಬಂದವಳು, ಪಾಪ, ಅಂತ. ಆದರೆ ಬಂದ ಹೊಸದರಲ್ಲಿ ಏನೇನೆಲ್ಲ ಹಿಂಸೆ ಕೊಟ್ಟಾಗಿತ್ತು ಅವಳಿಗೆ….. ಕುಡಿತ, ಸಿಗರೇಟಿನ ಚಟ ವಿರೋಧಿಸಿದಾಗ, ಲವ್ ಮಾಡಿದವಳನ್ನ ಮದುವೆಯಾಗಲು ಬಿಡದೆ ಶನಿ ಹಾಗೆ ನೀನೆಲ್ಲಿ ಗಂಟು ಬಿದ್ದೆ ಅಂತ….. ಹೆಣ್ಣು ಹೆತ್ತೆ ಅಂತ.. ಇನ್ನು ನಿನ್ನ ಹೆಂಡತಿ ಗರ್ಭ ಧರಿಸಿದರೆ ಅಪಾಯ ಅಂತ ಡಾಕ್ಟರು ಹೇಳಿದಾಗ ಅವಳಿಗೆ ನಿನ್ನ ಸಾಯಿಸಿ ಬೇರೆ ಮದುವೆ ಮಾಡಿಕೊಳ್ತೇನೆ ಅಂತ….. ಕಡೆಗೆ ಮನೆ ಸರೀ ನೋಡಿಕೊಳ್ಳಲಿಲ್ಲ ಅಂತ ಸಣ್ಣ ಪುಟ್ಟದಕ್ಕೂ.. .. ಮನಶ್ಶಾಸ್ತ್ರಜ್ಞರು ಹೇಳ್ತಾರೆ- ಪ್ರತಿಯೊಬ್ಬನು/ಳು ಒಮ್ಮೆಯಾದರು ಮಾನಸಿಕ ಅತ್ಯಾಚಾರ ಮಾಡಿಯೆ ಇರುತ್ತಾರೆ ಅಂತ- ಹಾಗೆಂದು ಅವರನ್ನೆಲ್ಲ ಅಪರಾಧಿಗಳು ಅಂತ ಹೇಳೋಕಾಗುತ್ತ? ಮನಸ್ಸು ಲಗಾಮಿಲ್ಲದ ಕುದುರೆ.. ಅತ್ಯಾಚಾರಾನು ಮಾಡುತ್ತಿರುತ್ತೆ, ಕೊಲೇನು ಮಾಡುತ್ತಿರುತ್ತೆ, ಅದಕ್ಕೆಲ್ಲ ಅರೆಸ್ಟ್ ಎಂತದು.. ..

ನೆನಪುಗಳು ಧುಮ್ಮಿಕ್ಕುತ್ತವೆ, ಆದರೆ ವಿವೇಚಿಸುತ್ತ ಹೋದರೆ ಯಾವುದೂ ಸ್ಪಷ್ಟವಾಗೊಲ್ಲ ಎಂದುಕೊಂಡ.
ಅವಳು ತನ್ನ ದುಷ್ಮನ್ಗೆ ಕಾಫಿ ಉಪಚಾರದಲ್ಲಿ ತೊಡಗಿದ್ದಾಳೆ. ಅವಳಿಂದ ಉಪಯೋಗವಿಲ್ಲ. ಮಗಳು ವಿದ್ಯಾವಂತೆ, ಬುದ್ಧಿವಂತೆ. ಒಮ್ಮೆ ವಿಷಯ ತಿಳಿಯಿತು ಅಂತಾದರೆ ಕೂಡಲೆ ತನ್ನ ಸ್ನೇಹಿತರ ಮೂಲಕ ಒಳ್ಳೆ ವಕೀಲರ ಏರ್ಪಾಡು ಮಾಡುತ್ತಾಳೆ ಎಂದುಕೊಂಡವನು ಮಗಳ ರೂಮಿಗೆ ನಡೆದ. ಯಾವಾಗಿನ ಹಾಗೆ ಬಾಗಿಲು ತಟ್ಟದೆ ತೆರೆದರೆ ಸಿಟ್ಟುಗೊಳ್ಳುತ್ತಾಳೇನೊ ಎಂದು ಭಯಗೊಂಡು ಹೋದವನಿಗೆ ಮಗಳ ಕೋಣೆಯ ಬಾಗಿಲು ಮುಚ್ಚದೆ ಇರುವುದನ್ನ ಕಂಡು ಖುಷಿಯಾಯಿತು. ಹಾಗಿದ್ದರೆ, ಪೋಲೀಸ್ ಅಧಿಕಾರಿ ಬಂದ ವಿಚಾರ ಇವಳಿಗೆ ಗೊತ್ತಿರಬೇಕು-ಹೊರಗಿನ ಮಾತುಗಳು ಕೇಳಿಸಿರಬೇಕು- ಅಥವಾ ಫೇಸ್ ಬುಕ್ನಲ್ಲಿ ಮುಳುಗಿದ್ದಾಳೊ ಎಂದು ಕೊಂಡು ಒಳಹೊಕ್ಕರೆ ಆಕೆ ತನ್ನ ಮಂಚದ ಮೇಲೆ ಪದ್ಮಾಸನ ಹಾಕಿ ಕುಳಿತು ಏನೊ ಪಿಸುಗುಡುತ್ತಿದ್ದವಳು ಆತನ ಬರವು ಕಾಣುತ್ತಲೆ ದೊಡ್ಡದಾಗಿ ಹೇಳತೊಡಗಿದಳು:
ಓಂ, ತ್ರಯಂಬಕಂ, ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾತ್ ಮೃತ್ಯರ್ಮುಕ್ಷೀಯಮಾಮೃತಾತ್//
ತಡೆಯಿಲ್ಲದಂತೆ ಆಕೆ ಪುನಃ ಪುನಃ ಅದನ್ನೆ ಜೋರು ಜೋರಾಗಿ ಹೇಳತೊಡಗುತ್ತಿದ್ದಂತೆ ಭಯದಿಂದ ಹೊರಬಂದು ಕೈಗೆ ಬಿಸಿ ಕಾಫಿ ಲೋಟವಿರಿಸಿದ ಹೆಂಡತಿಯಲ್ಲಿ ಕೇಳಿದ: "ಯಾಕೆ- ಮಗಳು ಮೃತ್ಯುಂಜಯ ಜಪ ಮಾಡ್ತಿದಾಳೆ?"
"ಅವ್ಳಿಗೆ ಸಾವಿನ ಭಯ. ದಿನಾಲು ಹಿಂಗೆ" ಗರಮ್ಮಾಗಿ ನುಡಿದವಳ ಕಣ್ಣುಗಳನ್ನು ನೋಡಿದ. ಪೋಲೀಸಿನವನ ಕಣ್ಣ ಹಾಗೆಯೆ ಇದೆಯೆ.. ಛೆ! ಕೊಲೆ ಆಪಾದನೆ ಮೇಲೆ ಬಂಧಿಸುತ್ತಿರುವುದು ತನ್ನನ್ನ, ತನಗೆ ಮರಣದಂಡನೆ ಆಗಬಹುದು. ಮರಣ ಭಯ ಇರಬೇಕಾದ್ದು ತನಗೆ. ಎಲ್ಲಾ ಹುಚ್ಚರು. ಸಂಸ ಸತ್ತ ಮೇಲೆ ಇವಳೂ ಹೀಗಾದಳೇನೊ. ಸಾವಿನ ಭಯ. ಥೂ. ಯಾರಿಗಾಗಿ ತಾನೆಲ್ಲ ಮಾಡುವುದು? ಆಯಿತು ಎಲ್ಲಾ ತನಗೇ ಇರಲಿ. ಹೆಂಡತಿಯತ್ತ ನೋಡುತ್ತ ಕೇಳಿದ-'"ನೀನೂ ಆ ಹುಚ್ಚಿ ಪಕ್ಕ ಕುಳಿತು ಜಪ ಮಾಡು. ಯಾಕೆ-ನಿಂಗೆ ಸಾವಿನ ಭಯ ಇಲ್ವ?" "ಅದು ಇನ್ನೂ ಸಾಯದೆ ಇದ್ದವರಿಗೆ" ತಟ್ಟನೆ ಬಂತು ಉತ್ತರ.

"ಮಿಸ್ಟರ್ ಮೃತ್ಯುಂಜಯ, ಇನ್ನೂ ಸಿದ್ಧವಾಗಿಲ್ಲವೊ ಅಥವಾ ಹಿತ್ತಲ ಬಾಗಿಲಿಂದ ಪರಾರಿಯಾಗುವ ಯೋಚನೆಯೊ? ಅಲ್ಲೂ ಒಬ್ಬ ಪೋಲೀಸು ನಿಂತಿದ್ದಾನೆ, ನೆನಪಿರಲಿ"

ಹೊರ ಜಗುಲಿಯಿಂದ ದರ್ಪದ ದನಿ ಮತ್ತೆ ತೂರಿಬಂದಾಗ ಗಡಬಡಿಸಿ ಹೊರಬಂದ. ಈ ಪುಟಗೋಸಿ ಪಿಸಿಯಲ್ಲಿ ಏನು ಮಾತು- ಮೇಲಧಿಕಾರಿಯಲ್ಲಿ ಘಟ್ಟಿಸಿ ಕೇಳಿದರಾಯಿತು. ತಾನೂ ಒಂದು ಕಾಲದಲ್ಲಿ ಒಬ್ಬ ಗೆಜೆಟೆಡ್ ಆಫೀಸರೇ. ಏನಿದ್ದರು ಕಾನೂನಿಗೆ ತಲೆ ಬಾಗುವ, ಈ ದರ್ಪಕ್ಕೆ ಬೇಡ. ಏನು ಅಪರಾಧ, ಯಾಕೆ ಕರೆಸಿದ್ದು ಅಂತ ಕೇಳಿದರಾಯಿತು. ಯಾರನ್ನೊ ಕರೆದೊಯ್ಯಲು ಬಂದು ತನ್ನನ್ನ ಕರೆದೊಯ್ದನಾದರೆ ಅಲ್ಲೆ ಈ ಪೋಲೀಸನ ಬೆವರಿಳಿಸಿ.. ..

ಹೋಗುವಾಗ ಅವಳು ಬಾಗಿಲ ಬಳಿ ನಿಂತಿದ್ದಳು. "ವಕೀಲ ನಾರಾಯಣರಾಯರಿಗೆ ಫೋನ್ ಮಾಡು" -ಹೇಳಿದ.
ಜೀಪ್ ಬಂದಿರಬಹುದು ಎಂದುಕೊಂಡಿದ್ದರೆ ನಿರಾಶೆ ಕಾದಿತ್ತು. ಮುಂದೆಮುಂದೆ ನಡೆದ ಪೋಲೀಸ್ ಅಧಿಕಾರಿಯ ಹಿಂದೆಹಿಂದೆಯೆ ನಡೆದ. ಪರಿಚಿತ ರಸ್ತೆಯೇನೊ ಹೌದು, ಆದರೆ ಹಗಲೊ ರಾತ್ರಿಯೊ ಎನ್ನುವುದೆ ಸ್ಪಷ್ಟವಾಗದಷ್ಟು ಮಬ್ಬು. ನೆನಪಿರುವ ಹಾಗೆ ಒಂದು ಕಿಲೋಮೀಟರೆ ಆಗುತ್ತೇನೊ ಪೋಲೀಸ್ ಸ್ಟೇಷನ್ನಿಗೆ. ಹೊಸದಾಗಿ ತೊಳೆದು ಇಸ್ತ್ರಿ ಮಾಡಿರಿಸಿದ ಸಫಾರಿಯು ಧೂಳಾಗಬಹುದು... ಯಾಕೆ, ಜೀಪೊ ಬೈಕೊ ತರಲಿಲ್ಲವಾ ಎಂದು ಕೇಳಬೇಕೆಂದುಕೊಂಡು ಪೋಲೀಸ್ ಇನ್ಸ್ಪೆಕ್ಟರ್ ಕಡೆಗೆ ತಿರುಗಿದ. ಆತ ರಸ್ತೆಯನ್ನ ಒದೆಯುತ್ತ ಹೋಗುತ್ತಿದ್ದ. ಶುದ್ಧ ಒರಟ, ಇವನ ಬಳಿ ಏನು ಮಾತು ಅಂತ ಮನಸ್ಸು ಬರಲಿಲ್ಲ- ಅಥವಾ ಧೈರ್ಯ ಬರಲಿಲ್ಲವೊ, ಕೇಳಲಾಗಲಿಲ್ಲ. ಇವನ ಮೇಲಧಿಕಾರಿಯಲ್ಲಿಯೆ ಮಾತಾಡಿದರಾಯಿತು. ಆದರೆ ಏನು ಮಾತು?....... ತಾನು ಕೊಂದದ್ದು ಅಥವಾ ಕೊಲ್ಲುವ ಯತ್ನ ಮಾಡಿದ್ದು ಅಥವಾ ತನ್ನ ಕಾರಣದಿಂದ ಸತ್ತದ್ದು… ಯಾರಿರಬಹುದು? ಕಾರಣ ಅಂದರೆ ಸಂಸನ ಸಾವಿಗು, ತನಗು ತಳಿಕೆ ಹಾಕಿರಬಹುದೆ? ಹೇಗೆ ಪ್ರೂವ್ ಮಾಡಿಯಾರು- ಕೊಲೆ ಆಪಾದನೆ ಅಂದರೆ ಸಿಗರೇಟು ಸೇದಿ ಬಿಸಾಕಿದಂತೇನು? ವಕೀಲರಿರೊಲ್ಲವೆ? ಸಂಸ ಸಂಬಂಧಿಕನು ಅಲ್ಲ. ಇಪ್ಪತ್ತೈದು ವರ್ಷದ ಹಿಂದೆ ಮಕ್ಕಳಿಲ್ಲದ ಅಣ್ಣ ಅನಾಥ ಹುಡುಗನೊಬ್ಬನನ್ನ ತಂದು ಸಾಕಿಕೊಂಡ. ಅವನಿಗೆ ಉಪನಯನ, ವಿದ್ಯಾಭ್ಯಾಸ ಎಲ್ಲ ಮಾಡಿಸಿದ. ಆ ಸಂಸನೋ ಶುದ್ಧ ಪೋಲಿ ಅಂತ ತನಗನ್ನಿಸಿತ್ತು. ಯಾವ ಜಾತಿಯವನೊ ಏನು ಸುಡುಗಾಡೊ! ಆದರೆ ಅಣ್ಣನ ಇಷ್ಟ. ಮಾತಾಡುವಂತಿರಲಿಲ್ಲ. ಸಮಸ್ಯೆ ಬಂದದ್ದು ಅಣ್ಣ ಐದು ವರ್ಷದ ಹಿಂದೆ ಸತ್ತು ಹೋದಾಗ. ಈ ಪೋಲಿಯ ಕೈಲಿ ಅಣ್ಣನ ಜಮೀನು ಸಿಕ್ಕಿದರೆ ಉಳಿಯೋಲ್ಲ ಅನ್ನಿಸಿತು. ಅದಕ್ಕೆ ಮೊದಲಿನಿಂದಲೆ ಪ್ಲಾನ್ ಹಾಕಿ ಅಣ್ಣನ ಹೆಣದ ಕ್ರಿಯೆ ಹಿಡಿಯಲು ಅವನಿಗೆ ಅವಕಾಶ ಕೊಡಲಿಲ್ಲ. ಕಾನೂನು ರೀತ್ಯ ಅಥವಾ ಧಾರ್ಮಿಕವಾಗಿ ದತ್ತು ತೆಗೆದುಕೊಳ್ಳದವನು ಕ್ರಿಯೆ ಹಿಡಿಯುವಂತಿಲ್ಲ ಎಂದು ವಶೀಲಿ ಹಚ್ಚಿ ಕರೆತಂದ ಮಠದ ಪುರೋಹಿತರಿಂದ ಊರ ಜನರ ಮುಂದೆ ಘಂಟಾ ಘೋಷವಾಗಿ ಹೇಳಿಸಿ ಸಂಸನನ್ನ ದೂರ ಸರಿಸಿಯಾಗಿತ್ತು. ಸ್ವಂತ ಮಗಳೊಬ್ಬಳನ್ನ ಬಿಟ್ಟು ಉಳಿದವರೆಲ್ಲ ತನ್ನ ಧರ್ಮನಿಷ್ಟತೆಗೆ ಶಾಭಾಸ್ ಎಂದವರೆ. ಅವಳಿಗೆ ಮಾತ್ರ ಆ ಸಂಸ ಏನು ಮೋಡಿ ಮಾಡಿ ಬಿಟ್ಟಿದ್ದನೊ, ಅಣ್ಣ ಅಣ್ಣ ಅಂತ ಅವನ ಹಿಂದೆಯೆ ತಿರುಗೋಳು. ರಜೆ ಬಂದರೆ ದೊಡ್ಡಪ್ಪನ ಮನೆ ತೋಟಕ್ಕೆ ಓಡುತ್ತಿದ್ದವಳಿಗೆ ಅವನಲ್ಲಿ ಅಷ್ಟು ಸಲಿಗೆ ಬೆಳೆದು ಬಂದಿತ್ತೇನೊ. ಅಣ್ಣ ಸತ್ತ ಬಳಿಕ ಸಂಸ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿಬಿಟ್ಟ. ಎಲ್ಲೊ ಹೋಟೆಲು ಸೇರಿಕೊಂಡ ಎಂದರು ಕೆಲವರು; ಸಿನಿಮಾ ರಂಗದಲ್ಲಿ ಚಾಕರಿ ಮಾಡುತ್ತಾನೆ ಎಂದರು ಕೆಲವರು; ರೌಡಿಯಾದ್ನಂತೆ ಎಂದರು ಇನ್ನಷ್ಟು ಜನ; ನೌಕರಿ ಸಿಗದೆ ಭಿಕ್ಷೆ ಬೇಡ್ತಿದಾನೆ ಎಂದರು ಇನ್ನಷ್ಟು ಜನ- ಏನಾದರು ಪಟ್ಟಣದ ರುಚಿ ಕಂಡವನು ಇತ್ತ ಮತ್ತಿನ್ನೆಂದು ಬರುವುದಿಲ್ಲ, ಬಂದರು ಏನು ಮಾಡಿಯಾನು ಎಂದು ಉಡಾಫೆಯಲ್ಲಿದ್ದಾಗಲೆ ಮಾವ ಆ ಸಿಡಿಲಿನ ಸತ್ಯ ಹೊರಹಾಕಿದ್ದ: "ನೀನೆ ಪ್ರಚಂಡ ಅಂದ್ಕೋಬೇಡ. ನೀನು ತಿಳ್ಕೊಂಡ ಹಾಗೆ ಸಂಸ ಉಢಾಳ ಅಲ್ಲ, ಬುದ್ಧಿವಂತ, ಅಷ್ಟೆ ಸಾಧ್ವಿ. ಮತ್ತೂ ಒಂದು ವಿಷ್ಯ ತಿಳ್ಕೊ. ನಿನ್ನಣ್ಣ ಅವನ್ನ ಕಾನೂನುರೀತ್ಯನೆ ದತ್ತು ತಗೊಂಡಿದ್ದ. ಸಂಸನ ಹತ್ರ ದಾಖಲೇನು ಇದೆ. ಮತ್ತೇಕೊ ಅವತ್ತೆ ಈ ವಿಷ್ಯ ಹೇಳ್ಲಿಲ್ಲ ಕೇಳಿದ್ರೆ, ಅಂತ್ಯೇಷ್ಠಿ, ಉತ್ತರಕ್ರಿಯೆ ಇದ್ರಲ್ಲೆಲ್ಲ ತನಗೆ ನಂಬಿಕೆ ಇಲ್ಲ ಅಂದ್ಬಿಟ್ಟ"

"ನೋಡ್ದಯ, ನೋಡ್ದಯ, ನಮ್ಮ ಪಿತೃ ಸಂಸ್ಕಾರನೆ ಅಲ್ಲಗಳೆಯೋನಿಗೆ ಎಷ್ಟು ಸೊಕ್ಕು. ಹುಂ ಇರ್ಲಿ ಬಿಡು. ನನ್ನ ಬೆಂಬಲಕ್ಕೆ ಊರಿನ ಜನರಿದಾರೆ. ಮೂರೂ ಮಠದ ಸ್ವಾಮಿಗಳನ್ನ ಕರ್ಕೊಂಡುಬಂದು ಸಂಸ ವಾರಸ್ದಾರ ಅಲ್ಲ ಹೇಳಿಸ್ತೇನೆ.. ಕಾನೂನ್ ರೀತೀಲಿ ದತ್ತು ಮಗನ? ಎಲ್ಲ ಸೃಷ್ಟಿ ಅಷ್ಟೆ. ಇವಂದೆ ಸೃಷ್ಟಿ. ಸರೀ ಸಾಕ್ಷಿ ಇದ್ರೆ ಸತ್ಯ ಸಾಯ್ಸೋದು ಎಷ್ಟ್ ಹೊತ್ತಿನ ಕೆಲಸ? ಒಂದು ದಿನದಲ್ಲಿ ಕೇಸ್ ಹಾರಿಸ್ತೇನೆ ನೋಡು" ಎಂದೇನೇನೊ ಒದರಿ ಬಂದರು ಮನಸ್ಸನ್ನ ಒಂದು ಬಗೆಯ ಭೀತಿ ಆವರಿಸಿಕೊಂಡು ಮಠಕ್ಕೆ ಹೋಗಿ ಕುಳಿತು ಗುರುಗಳಲ್ಲಿ ಶಾಂತಿಗಾಗಿ ಧ್ಯಾನ ಕಲಿತದ್ದುಂಟು. ಅದೇನಾಯಿತೊ ಕಳೆದ ವರ್ಷ ಸಂಸ ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟನಂತೆ. ತನ್ನ ಮೇಲೂ ಅನುಮಾನ ಪಟ್ಟಿದ್ದರು, ಮನೆಯವರೂ ಸೇರಿ ಕೆಲವರು. ಆದರೆ ಆಧಾರ ಬೇಕಲ್ಲ? ಆತ್ಮಹತ್ಯೆ ಆತ್ಮಹತ್ಯೆಯೆ. ಅದಕ್ಕೆ ತಾನೇನು ಮಾಡಲಾದೀತು? ಅವರವರ ಕರ್ಮ ಅವರವರಿಗೆ. ಬುದ್ಧಿಯಿಲ್ಲದವರು ಹೇಳಿರಬಹುದು- ಇದಕ್ಕೆಲ್ಲ ತಾನೇ ಕಾರಣ, ಅಣ್ಣನ ಆಸ್ತೀನು ಹೊಡೆಯೊ ಪ್ಲಾನು ಮಾಡಿದ್ದ ಅಂತ……..

ಸ್ಟೇಷನ್ ಹತ್ತಿರ ಹತ್ತಿರ ಬರುತ್ತಿದ್ದಂತೆ ಹೆಜ್ಜೆ ಒಜ್ಜೆಯಾಗುತ್ತಿದ್ದಂತೆನ್ನಿಸಿತು. ಬಹುಶಃ ಯಾವ್ಯಾವ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲ ಒಮ್ಮೇಗೇ ತಲೆಯ ಮೇಲೆ ಹತ್ತಿ ಕುಳಿತುಬಿಟ್ಟವೋ ಏನೊ, ಎಷ್ಟು ಅವಮಾನ ಅನುಭವಿಸಬೇಕೊ ಎಂದು ಭೀತಿ ಅಮರಿ, ದೇವರೆ, ದೇವರೇ... ಇದ್ದಕ್ಕಿದ್ದಂತೆ ಈ ಪೋಲೀಸ್ ಸ್ಟೇಷನ್ನಿಗೆ ಬೆಂಕಿ ಹತ್ತಿ ಉರಿದು ಎಲ್ಲಾ ಸುಟ್ಟು ಸತ್ತು ಹೋಗಲಿ.. …..
ಏನೂ ಆಗಲಿಲ್ಲ.
"ಅಲ್ಲಿ ಕುಳಿತುಕೋ"
ಕರೆತಂದ ಪೋಲೀಸಿನವ ʻಧರ್ಮಪ್ಪನವರ್ ಪಿ.ಎಸ್. ಐ.” ಎಂದು ಬರ್ಡಿದ್ದ ಮೇಜಿನೆದುರಿನ ಕುರ್ಚಿ ತೋರಿಸಿ, ತಾನು ಬದಿಗೆ ಅಡ್ಡಾಗಿ ಇರಿಸಿದ ಟೇಬಲ್ ಬಳಿ ಹೋಗಿ ತನ್ನ ಕುರ್ಚಿಯಲ್ಲಿ ಆಸೀನನಾದ. ಆ ಟೇಬಲ್ ಮೇಲೆಯು ನಾಮಫಲಕವಿತ್ತು-'ಕರಿಯಪ್ಪ ಚಿತ್ರಂಗಡಿ-ಹೆಡ್ ಕಾನ್ ಸ್ಟೇಬಲ್'. ಅಬ್ಬ ಬರೀ ಹೆಡ್ ಕಾನ್ಸ್ಟೇಬಲ್ಗೆ ಈ ನಮೂನೆಯ ಪೊಗರೆ ಎಂದುಕೊಳ್ಳುತ್ತ ತಿರುಗಿದರೆ ಎದುರುಗಡೆ ಯಾರೂ ಇರಲಿಲ್ಲ. ಕಾಲಿ ಕುರ್ಚಿಯೆಡೆ ಕೈ ತೋರಿಸಿ ಹೆಬ್ಬೆರಳು ಮೇಲೆತ್ತಿ ಇವರೆಲ್ಲಿ ಎಂದು ಸನ್ನೆಯಿಂದಲೆ ಪ್ರಶ್ನಿಸಿದ. ಬರುತ್ತಾರೆ ಇರಿ, ಸ್ವಲ್ಪ ಎಂದು ಗದರಿಸಿ ಹೆಡ್ಡು ಮತ್ತೆ ತನ್ನ ಕಡತ ಬಿಚ್ಚಿ ಪುಟಗಳ ಮಧ್ಯೆ ಮುಚ್ಚಿಟ್ಟ ಗುಟಕಾ ಪೊಟ್ಟಣ ತೆಗೆದು ಪುಸಕ್ಕನೆ ಬಾಯಿಗೆ ಸುರಿದುಕೊಂಡ.

ಮುಕ್ತಾಯ-ಒಂದು:
"ಇವನೇ ಏನಪ್ಪ, ನೀನು ಕರೆತಂದವನು?" ಗೊಗ್ಗರು ದನಿ ಕೇಳಿ ತಲೆಯೆತ್ತಿದ. ಎದುರುಗಡೆ ಉದ್ದಉದರದ ಹಿಟ್ಲರ್ ಮೀಸೆಯ ಚೂಪು ಕಣ್ಣಿನ ಪಿ.ಎಸ್.ಐ ತನ್ನನ್ನ ಗುರುಗುಟ್ಟಿ ನೋಡುತ್ತಿದ್ದ. ವ್ಯಾವಹಾರಿಕ ನಗುವನ್ನ ಮುಖದ ಮೇಲೆ ತಂದುಕೊಳ್ಳುತ್ತ ಈತ "ನಮಸ್ಕಾರ ಸಾರ್, ಕರೆ ಕಳಿಸಿದಿರಂತೆ.. ನಾನು ಮೃತ್ಯಂಜಯ, ಮಿಸ್ಟರ್ ಎ.ಕೆ. ಮೃತ್ಯಂಜಯ ಬಿಕಾಂ, ಸಿಯೆಐಐಬಿ- ರಿಟೈರ್ಡ್ ಬ್ಯಾಂಕ್ ಮೇನೇಜರ್.. ಯಾಕೆ ಕರೆಸಿದಿರಿ ತಿಳಿಯಲಿಲ್ಲ." ಅಂದ.

ನಿನ್ನಂಥ ಎಷ್ಟೊ ಎಷ್ಟೊ ಬಚ್ಚಗಳನ್ನ ನೋಡಿದೇನೆ ಎನ್ನುವ ತಾತ್ಸಾರ ಮನೋಭಾವವನ್ನ ಮುಖದಲ್ಲಿಯೆ ವ್ಯಕ್ತಪಡಿಸುತ್ತ ಕುರ್ಚಿಯಲ್ಲಿ ಕುಳಿತ ಪಿಎಸ್ಸೈ ತನ್ನೆದುರಿಗಿಟ್ಟ ಫೈಲೊಂದನ್ನ ತೆರೆದು ಸಹಿ ಮಾಡಿ, ಬಳಿಕ ಓದತೊಡಗಿದ. ಕ್ಷಣಹೊತ್ತು ಕಾದ ಆತ ಮತ್ತೆ ತಡೆಯಲಾಗದೆ ಕೇಳಿದ-"ಸಾರ್, ಇವರು ತಪ್ಪಿ ಯಾರೋ ಅಂತ ತಿಳಿದು ನನ್ನ ಅರೆಸ್ಟ್ ಮಾಡಿದ ಹಾಗಿದೆ.. ನಾನಿನ್ನು ಹೋಗಬಹುದೆ?"
"ಇಲ್ಲ. ನಿನ್ನನ್ನೆ ಆರೆಸ್ಟ್ ಮಾಡಲಾಗಿದೆ" ತಲೆಯೆತ್ತದ ಪಿ.ಎಸ್.ಐ ದನಿ ಮೊಳಗಿತು. ಇನ್ನೇನು ತನ್ನ ವಕೀಲರು ಬರಬಹುದು. ಬರದಿದ್ದರು ಏನಂತೆ- ಇದೇನು ಸರ್ವಾಧಿಕಾರಿ ಆಡಳಿತವೊ? ಪ್ರಜಾಪ್ರಭುತ್ವ ರಾಷ್ಟ್ರ ಇದು. ಎಲ್ಲಾ ಏನು ತಿಳಿದಿದ್ದಾರೆ? .. ..ಸಫಾರಿಯನ್ನ ಸರಿಪಡಿಸಿಕೊಂಡ. ಎದೆ ಗಟ್ಟಿ ಮಾಡಿಕೊಂಡ.
"ಯಾಕೆ ನನ್ನ ಅರೆಸ್ಟ್? ಯಾವ ಆರೋಪದ ಮೇಲೆ?"
"ಕೊಲೆ ಮಾಡಿದ್ದಕ್ಕೆ" ತಲೆಯೆತ್ತದ ಪಿ. ಎಸ್. ಐ. ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಹೇಳಿದ.
"ನಾನು! ನಾನು ಕೊಲೆ ಮಾಡಿದೆನೆ? ಏನು ಹೇಳುತ್ತಿದ್ದೀರಾ? ಯಾರ ಕೊಲೆ ಮಾಡಿದೆ, ಯಾವಾಗ, ಎಲ್ಲಿ?
"ಅದನ್ನೆಲ್ಲ ಹೇಳಬೇಕಾದವನು ನೀನೇ"
"ಅಂದರೆ?"
"ಒಂದು ಪ್ರಶ್ನೆಗೆ ಸರಿಯಾಗಿ ಉತ್ತರ ಹೇಳು, ನೀನು ಯಾರು?"
"ನಾನು, ನಾನು "
"ಹುಂ ಹೇಳು"
"ನಾನು.. ನಾನು.. ಕೊಲೆಗಾರ.. .."
"ಸರಿ, ನಡೆ, ಸೆಲ್ ಒಳಗೆ ಹೋಗಿ ಬಾಗಿಲು ಹಾಕಿಕೋ. "

ಮುಕ್ತಾಯ-ಎರಡು
"ಸಾಹೇಬರು ಬರುತ್ತಿದ್ದಾರೆ"-ಹೊರಗಿನಿಂದ ಪೇದೆ ಕೂಗಿದ. ಹೆಡ್ಡು ಗಡಬಡೆಯಲ್ಲಿ ಗುಟಕಾ ನುಂಗಿ ಎದ್ದ. ಆತನೂ ತಟ್ಟನೆ ಎದ್ದು ನಿಂತು ಬಾಗಿಲತ್ತ ಕಣ್ಣು ಕೀಲಿಸಿದ. ಪಟ ಪಟ ಎನ್ನುವ ಹಲವು ಬೂಟುಗಳ ಸದ್ದಿನ ಜೊತೆಗೆ ಪೋಲೀಸ್ ದಿರಿಸಿನವರು ಒಬ್ಬೊಬ್ಬರಾಗಿ ಬರತೊಡಗಿದರು. ಆತ ನೋಡಿ ಬೆಚ್ಚಿದ. ಪೋಲೀಸ್ ಎಸ್ಸೈ ದಿರಿಸು ಧರಿಸಿದ ಅವನ ಹೆಂಡತಿ ಮುಂದೆ, ಅವಳ ಹಿಂದೆಯೆ ತನ್ನ ಅಪ್ಪ, ಮಗಳು, ಸಂಸ, ಶೀನ, ಮಾಸ್ತರು.. .. ಎಲ್ಲ ಎಲ್ಲ ಪೋಲೀಸ್ ದಿರಿಸಿನಲ್ಲಿ.. .. ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.