ಹೆಸರು ತತ್ತ್ವ... ತತ್ತ್ವಜ್ಞಾನಿ. (ತತ್ತ್ವಜ್ಞಾನಿಯಲ್ಲ!) ನಾನು ತತ್ತ್ವ, ಜ್ಞಾನಿ ಕುಟುಂಬದ ಹೆಸರು. ವಯಸ್ಸು ಮೂವತ್ತೆರಡು. ಹಿಮಾಚಲ ಕಡೆಯ ಜನಿವಾರಸ್ಥ ಹಿಂದೂ. ಉಪವೀತವನ್ನು ನಂಬುಗೆಯ ಹಾಗೆ ತೊಡುವವ... ವೈಟ್‍ಫೀಲ್ಡ್‌ನಲ್ಲಿ ಮನೆ. ಕೆಲಸವಂತ ಏನೂ ಇಲ್ಲ. ಮಾಡುತ್ತಿಲ್ಲ. ಬಲುಬಗೆಯ ಸಂಗೀತಾಸಕ್ತ. ಗಿಟಾರು ಮೀಂಟುವಷ್ಟೇ ಸಲೀಸಾಗಿ ಸಿಗರೇಟು ಹಿಡಿಯುವ ಬೆರಳುಳ್ಳವ... ಪಿಂಕ್ ಫ್ಲಾಯ್ಡ್ ಅಂದರೆ ಪ್ರಾಣ.

ರಿಕಿ ಮಾರ್ಟಿನ್ ಹಾಗೇ ಇನ್ನೊಬ್ಬ. ಅಷ್ಟೇ ಬಾಬ್ ಡಿಲನ್ ಸಾಹಿತ್ಯ ಕೂಡ. ಪಾಪ್‍ನಷ್ಟೇ ಪಾಪ್‍ಕಾರ್ನೂ ಇಷ್ಟ. ಅಷ್ಟಿಷ್ಟು ಹೆವಿ ಮೆಟಲ್ಲೂ... ದೃಪದ... ಸಾಕಷ್ಟು ತುಮ್ಹರಿ... ಕೋಕ್ ಸ್ಟುಡಿಯೋ ಕಾಯಂ. ‘ಕೃಷ್ಣ ನೀ ಬೇಗನೆ ಬಾರೋ...’ –ನೆಚ್ಚಿನ ರಚನೆ. ‘ಚಿನ್ನಂ ಜಿರುಕ್ಕಿಳಿಯೇ ಕಣ್ಣಮ್ಮ...’ - ಇಂಥದೇ ಇನ್ನೊಂದು.

ಅಮಿತಾವ್ ಘೋಷ್; ಹೊಗೆಯ ಹೊಳೆ ಮತ್ತು ಬೆಂಕಿಯ ನೆರೆ... ಅರಬ್ಬೀ ರಾತ್ರಿಗಳು. ಜಗತ್ತಿನ ನಿಷೇಧಿತ ಇತಿಹಾಸ. ನಡುರಾತ್ರಿಯ ಮಕ್ಕಳು. ಇಂಡಿಯಾಕ್ಕೊಂದು ರಹದಾರಿ... ಅಬ್ದುಲ್ ಕಲಾಂ. ಇಂದಿರಾ ಪ್ರಿಯದರ್ಶಿನಿ. ಜೂಲಿಯಸ್ ಸೀಸರ್... ಸ್ವಾದ: ಮಲ್ಪೋವಾ. ಕಾಂಚೀಪುರದ ಇಡ್ಲಿ. ಚೈನೀಸ್ ಚಾಪ್ಸು ಈ. ಪೇಯ: ಯಾವುದೇ ಆಲ್ಕೋಹಾಲು. ರಾಮನವಮಿ ಪಾನಕ... ಅಡುಗೆ ಸಂಗೀತದಷ್ಟೇ ಇಷ್ಟ.

ಅಡುಗೆಯೆಂದರೆ ತಪಸ್ಸು. ಅಡುಗೆ ಆರ್ಗ್ಯಾಸ್ಮಿಕ್ ಕೂಡ. ಎಸ್ಥೆಟಿಕ್ಸು: ಸಂಜಯ್ ಲೀಲಾ ಬನ್ಸಾಲಿ. ದೇವದಾಸ್, ಬಾಜಿರಾವ್ ಮಸ್ತಾನಿ, ಪದ್ಮಾವತ್... ಈ ಪರಿಯ ಶ್ರೀಮಂತ ಚೆಲುವು. ಸ್ಪೀಲ್‍ಬರ್ಗ್ ಇನ್ನೊಬ್ಬ. ಮಣಿರತ್ನಂ ಅಷ್ಟಿಷ್ಟು. ಬಾಲು ಮಹೇಂದ್ರನ ಚಿತ್ರಗ್ರಹಣ... ಜಿಮ್ಮು ಎರಡನೇ ಮನೆ. ದಿನ ಬಿಟ್ಟು ದಿನ ಯೋಗ... ಒಂದಿಷ್ಟು ಅಧ್ಯಾತ್ಮ... ಸ್ಪಿರಿಚುಅಲೀ ಆಡುವುದಾದರೆ ಅವಿವಾಹಿತ.

ಮದುವೆಯ ಇರಾದೆಯಿಲ್ಲ. ಒಂಟಿಯಿರುವುದೇ ಸಂತೋಷ. ಕಡಿವಾಣವಿಲ್ಲದ ಸಂಬಂಧಗಳಲ್ಲಿ ಆಸ್ಥೆ. ಹೆಣ್ಣು ಈ ಲೋಕದ ಅತ್ಯದ್ಭುತ ಸೃಷ್ಟಿ... ಎಲ್ಲಾದರೂ ಯಾವಾಗಲಾದರೂ ಮಾಡಬಹುದಾದದ್ದು- ಹಾಡು, ಗಿಟಾರು- ಮೀಂಟು, ಅಡುಗೆ, ಓದು... ಸ್ನಾನ... (ಮತ್ತು ಸೆಕ್ಸು!)

01

‘ಒಂದಿಷ್ಟು ತತ್ತ್ವ...’ ಎಂಬ ಬ್ಲಾಗಿನ ಮೇಲುಟಿಪ್ಪಣಿಯಲ್ಲಿ, ಇಲ್ಲಿ ಮೇಲ್ಗಾಣಿಸಿರುವಂತೆ ತನ್ನನ್ನು ತಾನೇ ಬಣ್ಣಿಸಿಕೊಂಡಿರುವ ಮತ್ತು ಕಂಡರಿತವರಿಗೆಲ್ಲ ಅತ್ಯುತ್ಕಟವಾಗಿ ಪರಮಾಧುನಿಕನೆಂದು ಅನಿಸಗೊಡುವ, ತತ್ತ್ವ ಅಂದರೆ ತತ್ತ್ವ ಜ್ಞಾನಿ, ಇವೊತ್ತು ತನಗೇ ಅನೂಹ್ಯವೆನಿಸುವಷ್ಟು ಹೆದರಿಹೋಗಿದ್ದಾನೆ. ತರ್ಕವಿರಲಿ, ತಕ್ಕ ಕಾರಣವೂ ಇಲ್ಲದೆ- ಯಾರೋ ತನಗೆ ‘ಏನೋ’ ಮಾಡಿಸಿಬಿಟ್ಟಿದ್ದಾರೆಂದು ಅಂದುಕೊಂಡಿದ್ದಾನೆ. ಸ್ನಾನ ಮಾಡಲಿಕ್ಕೆ ಹಿಂದೇಟು ಹೊಡೆಯುತ್ತಾನೆ. ನಿಜಕ್ಕೂ ಮೀಯುವುದಿರಲಿ, ಮೀಯುವ ಯೋಚನೆಗೂ ಭಯಂಕರ ಹಿಮ್ಮೆಟ್ಟುತ್ತಾನೆ. ಥರಥರ ಥರ ನಡುಗುತ್ತಾನೆ.

ತತ್ತ್ವನಿಗೆ ಸ್ನಾನವೆಂದರೆ ಬರೀ ಸ್ನಾನವಲ್ಲ. ಒನ್ನಮೂನೆ ಧ್ಯಾನ. ಶವರಿನಡಿ ನಿಂತರೆ ಸಾಕು, ನಿಂತಲ್ಲೇ ಮೈಮರೆಯುತ್ತಾನೆ. ಮೈಮೇಲೆ ನೀರಿಳಿಯಗೊಟ್ಟು- ಹಾಡು ಗುನುಗಿಕೊಂಡೋ, ಸ್ವರಪ್ರಸ್ತಾರದ ಮಟ್ಟು ಹೇಳಿಕೊಂಡೋ, ಗಂಟೆಗಟ್ಟಲೆ ಉಳಿಯುತ್ತಾನೆ. ಇಲ್ಲಾ, ಮೈಯನ್ನೇ ಗಿಟಾರಿನಂತಾಗಿಸಿ ಬೆರಳು ಮೀಟುತ್ತ, ರಾಗವೊಂದರ ಜಾಡು ಹಿಡಿದು ಪರವಶನಾಗುತ್ತಾನೆ.

ಹೆಗಲು ದಾಟಿ ಬೆನ್ನಿಗಿಳಿಬೀಳುವ ಹಿಂಗೂದಲಿನಲ್ಲಿ ತೊಟ್ಟಿಕ್ಕುವ ಗಂಗೆಯ ಟಿಸಿಲುಗಳನ್ನೇ ನೋಡಿಕೊಂಡು, ಇಹಪರಗಳ ಅರಿವನ್ನೇ ಮೀರುತ್ತಾನೆ. ಮುಡಿಯಲ್ಲಿಯೇ ಗಂಗೆಯನ್ನು ಕಟ್ಟಹೆಣಗುತ್ತ ಸ್ವಯಂ ಪರಶಿವನೇ ಆಗಿಬಿಡುತ್ತಾನೆ!

ಇಂತಹ ತತ್ತ್ವನಿಗೆ, ಇವೊತ್ತಿನ ದಿವಸ, ಇಂತಹ ಮಜ್ಜನವೇ ಆಗಿಬರುತ್ತಿಲ್ಲವೆಂದರೆ ನಂಬಲಾದೀತೆ?! ನಿಜವೇನೆಂದರೆ, ಇದನ್ನು ಖುದ್ದು ಅವನಿಗೇ ನಂಬಲಾಗುತ್ತಿಲ್ಲ!

02

ವಾರದೊಪ್ಪತ್ತಿಗೆ ಹಿಂದೊಂದು ಮುಂಜಾನೆ, ತತ್ತ್ವ, ಎಂದಿನಂತೆ ಸುಮಾರು ಕಾಲ ಮಿಂದು- ಶವರು ನಿಲ್ಲಿಸಿ, ಕೆಲ ಗಳಿಗೆ ಮೈಯಿಂದ ನೀರು ತೊಟ್ಟಿಕ್ಕಬಿಟ್ಟು, ಜನಿವಾರದಲ್ಲಿರುವ ನೀರನ್ನೂ ಕೊಡವಿ, ಒರೆಸಿಕೊಳ್ಳಲೆಂದು ಟವಲು ಸೋಕಿ(ಸಿ)ದನಷ್ಟೇ- ಪ್ರಮಾದವೇ ಜರುಗಿಹೋಯಿತು!

ಒಮ್ಮಿಂದೊಮ್ಮೆ ಬೆನ್ನಲ್ಲೇನೋ ಸಣ್ಣಗೆ ಚುಚ್ಚಿದಂತಾಯಿತು. ಮೆಲ್ಲಗೆ ಕಚ್ಚಿದಂತಾಯಿತು. ಸೊಳ್ಳೆ- ಕಡಿತಕ್ಕೂ ಸೂಕ್ಷ್ಮವಾದ ಕುಟುಕು. ಹೌದೋ ಅಲ್ಲವೋ... ಅನಿಸಗೊಟ್ಟ ಹೊರಗಿನೇತರದೋ ಇರಿತ. ನಿಜಕ್ಕೂ ಹೊರಗಿನದೋ, ಇಲ್ಲಾ, ಒಳಗಿನದೇ ಸೂಕ್ಷ್ಮಾತಿಸೂಕ್ಷ್ಮವು ಹೊಮ್ಮಿ ತೋರಿದ ನವೆಯೋ... ಫಕ್ಕನೆ ತಿಳಿಯಲಿಲ್ಲ. ವಿನಾಕಾರಣ ಕೆರೆತ. ಏನೆತ್ತವೇತಕ್ಕೆ ತಿಳಿಯದೆ ಪರಚಿಕೊಳ್ಳುವಂತಾಯಿತು. ನವೆಯುಂಟಾದ ಬೆನ್ನಿಗೆ ಕೈಯೆಟುಕದೆ, ಇತ್ತ ನವೆಯೂ ತೀರದೆ- ಇದ್ದಕ್ಕಿದ್ದಂತೆ ಛಳುಕಂತಹ ಉರಿ ಕಾರಿ, ಥಕಪಕನೆ ಕುಣಿಯುವಂತಾಯಿತು!

ಗಮನಿಸಿದ. ಅರರೇ... ಅದೇ ಬೆನ್ನಿನಲ್ಲಿ ಇನ್ನೊಂದೆಡೆ ಇನ್ನೊಮ್ಮೆ ನವೆ. ಇನ್ನೊಮ್ಮೆ ಉರಿ. ಅಲ್ಲೇ ಸ್ವಲ್ಪ ಈಚೆಗಿನ್ನೊಂದೆಡೆ ಇನ್ನೊಮ್ಮೆ ನವೆ. ಇನ್ನೂ ಒಮ್ಮೆ ಉರಿ. ಹಿಂದೆಯೇ ಈ ಕಡೆ. ಆ ಕಡೆ. ಅತ್ತ ಇತ್ತ... ಎತ್ತೆತ್ತವೆಂದರೆ ಅತ್ತತ್ತ... ಅಂತೆಲ್ಲ ಸುರುಗೊಂಡು, ನವೆಗೆ ನವೆಯೂ ಉರಿಗೆ ಉರಿಯೂ ಇಡೀ ಮೈಯನ್ನೇ ಸುತ್ತಿಬಿಟ್ಟವು!

ದಿಕ್ಕೇ ತೋಚದಾಯಿತು. ಬಾತ್‍ರೂಮಿನ ಮಿತಾವಕಾಶದಲ್ಲೇ ಥಾಥೈಯದ ತಾಂಡವವೇ ಮೊದಲಾಗಿಬಿಟ್ಟಿತು.

03

ತಡೆದೇ ತಡೆದ. ತಡೆದೇ ತಡೆದ.

ಮೈಸೌಷ್ಠವವನ್ನೂ, ಅಂಗಪಟುತ್ವವನ್ನೂ- ವಯಸ್ಸಿನ ಹುಡುಗಿಯರಿಗಿಂತಲೂ ಕಾಯಬಯಸುವ ತತ್ತ್ವ, ಎಷ್ಟೇ ಕಷ್ಟವಾದರೂ, ಮೈಗೆ ಉಗುರು ಸೋಕುವುದನ್ನು ತಡೆದ. ತಾಕಿ ರಕ್ತ ಕಿತ್ತೀತೆಂದು ‘ಟರ್ಕಿ’ಯಿಂದಲೇ ಮೈಯುಜ್ಜಿಕೊಂಡ. ಉಜ್ಜುವುದೆಂದರೆ ತೀರಾ ಉಜ್ಜುವುದೆಂತಲೂ ಅಲ್ಲ, ಸುಮ್ಮನೆ ಅಲ್ಲಿಲ್ಲಿ ಟವಲೊತ್ತಿಕೊಳ್ಳುವುದು ಅಷ್ಟೆ.

ಅಬ್ಬಾ! ಆ ಹೊತ್ತಿನಲ್ಲಿ, ಮೈ ತುರಿಸಿಕೊಳ್ಳುವಷ್ಟು ಆಪ್ಯಾಯಮಾನವಾದ ಸಂಗತಿಯೇ- ಈ ಜಗತ್ತಿನಲ್ಲಿ ಇಲ್ಲವೆಂದು ಅನ್ನಿಸಿಬಂತು!

ಅದು ತುರಿಸೇ ತುರಿಸುವ ತುರೀಯಾನುಭೂತಿ! ತುರಿಕಾನುಭೂತಿ!!

ಈ ನಡುವೆ, ಸುಮ್ಮಗೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡ. ತನಗೆ ತಾನೇ ಭಯಂಕರನನಿಸಿಬಿಟ್ಟ!

ಏನು ಹೇಳುವುದು?!

ಮೈಯಲ್ಲೆಲ್ಲ ಗಂಧೆ. ತಲಾ ಎಂಟಾಣೆ ಗಾತ್ರದ ಕೆಂಪನೆ ಬೊಕ್ಕೆಗಳು- ಅಂಗುಲಂಗುಕ್ಕೂ ಎದ್ದು, ತಿಳಿಗೆನೆ ಬಣ್ಣದ ಕ್ಯಾನ್ವಸಿನ ಮೇಲೆ ಪದೇ ಪದೇ ಕುಂಚದ ಕೆಂಪು ತಾಕಿಸಿ, ಅಲ್ಲಿಲ್ಲಿ ಕದಡಿ... ಇಲ್ಲಲ್ಲಿ ಕಲಕಿ... ದೇಹಕ್ಕೆ ದೇಹವೇ ಕಗ್ಗೆಂಡದ ಉರಿ ಕಾರುವ ರಕ್ತಾಕೃತಿಯಂತಾಗಿತ್ತು!

ಏನಾಯಿತೆಂದು ಪರೀಕ್ಷಿಸುವ ಸಲುವಾಗಿ, ಬೆರಳ ತುದಿಯಿಂದ ಸುಮ್ಮಗೆ ಒಂದು ಬೊಕ್ಕೆಯನ್ನು ಮುಟ್ಟಿದ.

ಅಸಾಧ್ಯ ಉರಿ! ಕೆಂಡ ಮುಟ್ಟಿದಂತಾಗಿ ಹಿಂತೆಗೆದ!!

ಸುಮ್ಮನೆ ಬೆರಳು ಸೋಕಿದ್ದಕ್ಕೆಲ್ಲ, ಮೈಯಲ್ಲೆಲ್ಲ ಉರಿಮಿಂಚು ಸಂಚರಿಸಿದಂತಾಗಿ ಹಬ್ಬಿಹೋಯಿತು. ಗಣ ಬಂದ ಮಂದಿಯ ಹಾಗೆ, ಕೆಂಬೊಕ್ಕೆಗಳು ತಾರಾಡಿದವು. ತತ್ತ್ವನನ್ನೂ ಹಾರಾಡಿಸಿದವು. ನೋಡುನೋಡುತ್ತಲೇ, ಜ್ವಾಲೆಯ ಸುತ್ತಲಿನ ಪ್ರಭೆಯ ಹಾಗೆ- ನೆರಳ ಸುತ್ತಲಿನ ಮಬ್ಬಿನ ಹಾಗೆ- ತಂತಮ್ಮ ಕೆಂಡದಂತಹ ಉರಿಗೆಂಪಿನ ಸುತ್ತ ನಸುಗೆಂಪಿನ ಮತ್ತೊಂದು ವಲಯವನ್ನು ಸೃಜಿಸಿ, ಥೇಟು, ಮುಂಬೆಳಗಿನ ಸೂರ್ಯದ ಹಾಗೆ ಅರಳಿಬಿಟ್ಟವು!

ಇಂತಹ ನೂರಾರು ಸೂರ್ಯಗಳು ಮೈಯಲ್ಲುದಿಸಿ ತತ್ತ್ವನನ್ನು ಕಂಗಾಲಾಗಿಸಿದವು. ಅವನ ಗೌರವರ್ಣದ ತನುವಿನಲ್ಲಿ ಕಡುಪಿಂಕಿನ ಕ್ರಾಂತಿಯನ್ನೇ ಉಂಟಾಗಿಸಿದವು!

ಕಡುಪಿಂಕೋ, ಅಥವಾ ಕಡುಕೆಂಪೋ? ಸಂದೇಹ ಹುಟ್ಟಿತು.

ಯಾವುದಾದರೇನು? ಎರಡೂ ಒಂದೇ ತಾನೇ? ಒಟ್ಟಾರೆ ಮೈಯಲ್ಲೆಲ್ಲ ರಕ್ತಕ್ರಾಂತಿ! ಕಮ್ಯುನಿಸ್ಟರು ಹೇಳುವ ಹಾಗೆ, ಕಡು ಕಡುವಾದ ಕೆಂಪುಕ್ರಾಂತಿ!!

04

ಅವೊತ್ತು, ತತ್ತ್ವನಿಗೆ ಕನ್ನಡದ ಹೊಸ ಸಿನೆಮಾಕ್ಕೆಂದು ಹಾಡುವುದಿತ್ತು. ಅಂದರೆ ಹಿನ್ನೆಲೆ ಗಾಯನ. ಸಾಹಿತ್ಯವನ್ನು ಹಿಂದಿಯಲ್ಲಿ ಬರೆದುಕೊಂಡು, ಇಡೀ ರಾತ್ರಿ ಉಚ್ಚಾರವನ್ನು ರಿಹರ್ಸು ಮಾಡಿದ್ದ. ಮ್ಯೂಸಿಕ್ಡೈರೆಕ್ಟರು ವಾಟ್ಸ್ಯಾಪಿನಲ್ಲಿ ಕಳಿಸಿದ್ದ ಟ್ಯೂನನ್ನು ಮತ್ತೆ ಮತ್ತೆ ಕೇಳಿಸಿಕೊಂಡು ಮನನಗೈದಿದ್ದ. ಬೆಳಿಗ್ಗೆ ಹನ್ನೊಂದಕ್ಕೆಲ್ಲ ಸ್ಟುಡಿಯೋದಲ್ಲಿರಬೇಕೆಂದು ಮಾತುಕತೆಯಾಗಿತ್ತು.

ಇವನಿರುವ ವೈಟ್‍ಫೀಲ್ಡಿನಿಂದ ಸ್ಟುಡಿಯೋ ಇರುವ ಕಾನುಗಂಗೆ ಕಡಿಮೆಯೆಂದರೂ ಒಂದೂವರೆ ತಾಸಿನ ಪ್ರಯಾಣ. ಸರಿ... ಎಂಟೂವರೆಯ ಸುಮಾರಿಗೆ ಜಿಮ್ಮ್ ಮುಗಿಸಿಬಂದು, ರೆಡಿಯಾಗೋಣವೆಂದು ಬಾತ್‍ರೂಮು ಹೊಕ್ಕರೆ- ಹೀಗಾಗಿಹೋಗುವುದೆ?!

ತುಂಬುಚಂದ್ರದ ಮೇಲೆ ರಾಹುವೆರಗಿದಂತೆ ಬಂದೊದಗಿದ ಗ್ರಹಚಾರವನ್ನು ಮನಸಾರೆ ಶಪಿಸಿದ ತತ್ತ್ವ, ತನ್ನೀ ಪರಿಸ್ಥಿತಿಯನ್ನು ಕೂಲಂಕಷ ವಿವರಿಸಿ- ಮ್ಯೂಸಿಕ್ ಡೈರೆಕ್ಟರಿಗೊಂದು ಮೆಸೇಜು ಕಳಿಸಿದ. ‘ಎಲ್ಲ ತಯಾರಿಯೂ ಆಗಿಹೋಗಿದೆ... ಕೊನೇ ಮೊಮೆಂಟಿನಲ್ಲಿ ಹೀಗೆ ಮಾಡಿದರೆ ಹೇಗೆ?’ ಎಂಬ ಉತ್ತರ ಬಂತು. ಏನೂ ತೊಟ್ಟಿರದ ಮೇಲುಮೈಯ ಒಂದು ಸೆಲ್ಫೀ ತೆಗೆದು ಪುರಾವೆಯಾಗಿ ಕಳಿಸಿದ.

‘ಓಹ್... ದಿಸ್ ಲುಕ್ಸ್ ಸೀರಿಯಸ್, ತತ್ತ್.... ಇನ್ನೊಂದು ವಾರ ನಿನಗೆ ಬರೋಕಾಗಲ್ಲವೇನೋ!’ ಎಂದು ಮೆಸೇಜು ಬಂತು. ‘ಅಲ್ಲೀವರೆಗೂ ಕಾಯೋಕಾಗಲ್ಲ... ಈ ಸರ್ತಿ ಸುಖೇಶ್‍ಚಂದ್ರನ್ ಹತ್ತಿರ ಹಾಡಿಸುತೀನಿ. ತಪ್ಪು ತಿಳೀಬೇಡ ಪ್ಲೀಸ್...’

ತತ್ತ್ವ, ತಕ್ಷಣ ಜಗತ್ತಿನ ದೇವರುಗಳನ್ನೆಲ್ಲ ಒಂದೆಡೆ ಕಲೆಹಾಕಿ ಒಂದೇ ಸಮ ಬೈದ.

ವಿಚಿತ್ರವೆಂದರೆ, ಇದ್ದಕ್ಕಿದ್ದಂತೆ ಎದ್ದು ಕಾಡಿದ ಬೊಕ್ಕೆಗಳೆಲ್ಲ ಮುಂದಿನದೊಂದು ತಾಸಿನಲ್ಲಿ ಹೇಳಹೆಸರಿಲ್ಲದೆ ಮಾಯವಾಗಿದ್ದವು!

05

ದುಡ್ಡು ದಕ್ಕಿಸುವ ಅಸೈನ್ಮೆಂಟು ಕಳಕೊಂಡ ತತ್ತ್ವ ತೀರಾ ಬೇಸರಕ್ಕೀಡಾದ. ಅದಕ್ಕಿಂತ ಹೆಚ್ಚು ಚಿಂತಾಕ್ರಾಂತನಾದ. ಮೈಯೊರೆಸಿದ ಟವಲಿನಲ್ಲೇನಾದರೂ ಐಬಿತ್ತೆ ಎಂದು ಶಂಕಿಸಿ, ವಾಷಿಂಗ್ಮೆಶೀನಿನಲ್ಲಿ ತುರುಕಿದ ಬಟ್ಟೆಗಳ ಗುಡ್ಡೆಯಿಂದ ಎಳೆದು ಅಮೂಲಾಗ್ರ ಪರೀಕ್ಷಿಸಿದ. ಏನೂ ಕಾಣಬರಲಿಲ್ಲ. ಸರಿ, ಸ್ನಾನದ ಮನೆಯ ಶವರಿನ ಪರದೆಯಲ್ಲೇನಾದರೂ ಹುಳಗಿಳವಿತ್ತೇ ಎಂದು ಕೊಡಕೊಡವಿ ತಡಕಿದ. ಅಥವಾ, ಸಣ್ಣಗೆ ಕಣ್ಣಿಗೆ ಕಾಣಿಸದ ಕ್ರಿಮಿಗಳೇನಾದರೂ ಇರಬಹುದೆಂದು, ಪರದೆಯನ್ನು ಬಿಚ್ಚಿ ಬಿಸಿಲಿನಲ್ಲಿ ಒಣಹಾಕಿದ.

ಬಚ್ಚಲುಮನೆಯ ಮೂಲೆ ಮೂಲೆಯನ್ನೂ, ಟೈಲು ಟೈಲನ್ನೂ, ಸೋಪು-ಶಾಂಪೂಗಳನ್ನೂ... ಹೀಗೆ, ಎಲ್ಲದರ ಮೇಲೂ ವಿಶದವಾಗಿ ನಿಗಾಹರಿಸಿ ನೋಡಿದ. ಸ್ನಾನಾಂತರದ ದೇಹೋಪಚಾರಕ್ಕೆಂದು ಲೋಶನು- ಮಾಇಶ್ಚರೈಸರು ಪೂಸಿಕೊಳ್ಳುತ್ತೇನಲ್ಲ, ಅದರಲ್ಲೇನಾದರೂ ಲೋಪವೇ... ಎಂದು ಬಾಟಲಿ ಬಾಟಲಿಯನ್ನೂ ನೋಡಿ, ಒಂದೊಂದರ ಎಕ್ಸ್ಪೈರಿಯ ತಾರೀಕನ್ನೂ ಚೆಕ್-ಗೈದ. ಪರ್ಫ್ಯೂಮು ಡಿಓಡರೆಂಟುಗಳಲ್ಲದೆ ಶೇವಿಂಗ್ಫೋಮು, ಆಫ್ಟರ್ಶೇವು... ಹಾಳುಮೂಳನ್ನೂ ಚಿಕಿತ್ಸಕವಾಗಿ ಕಂಡ. ಊಹ್ಞೂಂ... ಯಾತರಲ್ಲೂ ದೋಷ ತೋರಲಿಲ್ಲ.

ಹೀಗೆ ಹುಡುಕುತ್ತ ಹುಡುಕುತ್ತ ಇಡೀ ಅಪಾರ್ಟ್ಮೆಂಟಿನ ತಪಾಸಣೆಯಾಯಿತು. ಗಡುವು ತೀರಿದ್ದೂ, ಈವರೆಗೆ ವಿಸರ್ಜನೆಗೆ ಒಳಗೊಳ್ಳದ ಕಾಸ್ಮೆಟಿಕ್- ಪರಿಕರಕ್ಕೆಲ್ಲ ಈಗಲೊಂದು ಗತಿ ಕಾಣಿಸಿದ್ದಾಯಿತು. ಬಾಲ್ಕನಿಯಲ್ಲಿರುವ ಕುಂಡಗಳನ್ನೆಲ್ಲ ತೆಗೆದು ಶುಚಿಗೊಳಿಸಿದ್ದಾಯಿತು. ವಾರ್ಡ್‍ರೋಬಿನ ಮೂಲೆ ಮೂಲೆಯಲ್ಲೂ ನುಶಿಗುಳಿಗೆಗಳನ್ನು ಉಗ್ಗಿದ್ದಾಯಿತು... ಸಂದುಗೊಂದುಗಳಿಗೆಲ್ಲ ಸಾಂಬ್ರಾಣಿಯ ಹೊಗೆಯುರುಬಿದ್ದಾಯಿತು...

ಒಟ್ಟಿನಲ್ಲಿ ಮನೆಗೆ ಮನೆಯೇ ಜಪ್ತಿಯಾದರೂ, ಮೈಯಲ್ಲೆಲ್ಲ ನವೆಯುಂಟುಮಾಡಿದ ರಾಕ್ಷಸೀಯ ಸರಕೇನಂದು ಗೊತ್ತಾಗಲಿಲ್ಲ! ದೂಳೇ? ಕೀಟವೇ? ಸೂಕ್ಷ್ಮಾತಿಸೂಕ್ಷ್ಮ ಜೀವಿಯೇ? ಅಂಥದೇ ಒಂದು ನಿರ್ಜೀವಿಯೇ? ಊಹ್ಞೂಂ... ಏನೂ ತಿಳಿಯದೆ ಕೈಚೆಲ್ಲಿದನಾದರೂ ತತ್ತ್ವನಿಗೆ ಮನಸ್ಸು ಚೆಲ್ಲಲಾಗಲಿಲ್ಲ. ಯೋಚಿಸಿ ಯೋಚಿಸಿ ಹೈರಾಣಾದ.

ಇಷ್ಟೆಲ್ಲ ಮಾಡುವ ಹೊತ್ತಿಗೆ ತತ್ತ್ವನ ಮೈ ದಳಬಳನೆ ಬೆವರಿಹೋಗಿತ್ತು. ಇನ್ನೊಮ್ಮೆ ಮೀಯಬೇಕೆನಿಸಿತು. ಮತ್ತದೇ ಸಂಗತಿಯು ಪುನರಾವರ್ತನೆಯಾದರೆ... ಅನ್ನಿಸಿ ಕೊಂಚ ಬೆದರಿದ. ಆಗಿದ್ದಾಗಲಿ, ನೋಡೇ ಬಿಡುವಾ ಎಂದು ಮತ್ತೆ ಶವರಿನಡಿ ನಿಂತ. ಜಾಗರೂಕನಾಗಿ ನಿಂತ. ಕಣ್ಣಲ್ಲಿ ಕಣ್ಣಿಟ್ಟು ಸುತ್ತಮುತ್ತಲದನ್ನು ಗಮನಿಸುತ್ತಲೇ ಮಿಂದ.

ನೀರು ಹೊಮ್ಮುವ ಶವರಿನ ತಟ್ಟೆಯಲ್ಲೇನಾದರೂ ಉಂಟೇ ಎಂದು ಸೂಕ್ಷ್ಮವಾಗಿ ನೋಡಿದ. ಹಾಗೂ ಹೀಗೂ ಸ್ನಾನ ಮುಗಿಯಿತು. ಎಂದಿನಂತೆ, ಕೆಲ ಗಳಿಗೆಯಷ್ಟು ಮೈ-ತೊಟ್ಟಿಕ್ಕಗೊಟ್ಟು, ಜನಿವಾರವನ್ನು ತೊಟ್ಟಲ್ಲೇ ಅಲ್ಲಿಲ್ಲಿ ಒತ್ತಟ್ಟಿಸಿ ಹಿಂಡಿ, ಟವಲೆತ್ತಿಕೊಂಡು... ನಿಧಾನವಾಗಿ ಮೈ

ಗೊತ್ತಿನದನಷ್ಟೇ, ಪುನಃ ಅದೇ ರಾದ್ಧಾಂತವೇ ಮೊದಲಾಯಿತು. ಮೈಯಷ್ಟೂ ಕೆಂಪು ಕೆಂಪಗೆ ಹಣ್ಣಾಗಿ ಹೋಯಿತು! ಹುಣ್ಣೇ ಅನಿಸಿತೇನೋ!

06

ಸ್ನಾನಾನಂತರದ ಈ ತುರಿಕೆಯ ಪರಿಯು ಮರುದಿನವೂ ಮರುಕಳಿಸಿತಾಗಿ, ತತ್ತ್ವ ಕಂಗೆಟ್ಟುಹೋದ. ಕೂಡಲೇ ಡರ್ಮಟಾಲೊಜಿಸ್ಟನ್ನು ಹೋಗಿ ಕಂಡ. ‘ಒಂದು ನಮೂನೆ ಅಲರ್ಜೀ, ಮಿಸ್ಟರ್ ತತ್ತ್ವ...’ ಎಂದು ಚರ್ಮದ ವೈದ್ಯರು ತೀರ್ಪಿತ್ತರು. ಇದೇನಾದರೂ ತನ್ನ ಬಹು ದೇಹ ಸಂಗದ ಮೇರೆಗೆ ಆಗುತ್ತಿದೆಯೇ ಎಂದು ಮನಸಿನಲ್ಲಿ ಅನಿಸಿದ್ದನ್ನು ಡಾಕ್ಟರಲ್ಲಿ ಕೇಳಬೇಕೆನಿಸಿದರೂ, ಯಾಕೋ ಏನೋ, ನಾಚಿಗೆಯಿಂದ ಕೇಳದೆಯೆ ಉಳಿದ. ಅಲ್ಲದೆ, ಹಾಗೇನಾದರೂ ಲೈಂಗಿಕವಾದ ಸೋಂಕಿದ್ದಲ್ಲಿ ವೈದ್ಯರಿಗೆ ಗೊತ್ತಾಗುತ್ತಿತ್ತಲ್ಲವೆ ಎಂಬ ಸಮಜಾಯಿಷಿಯನ್ನೂ ತಾಳಿದ.

‘ಡಸ್ಟ್ ಅಂಡ್ಪೋಲನ್ ಆರ್ ಹೈಲೀ ಅಲರ್ಜಿಕ್ಟು ಸಮ್ಪೀಪಲ್... ಕೆಲವು ಹೂವಿನ ಪರಾಗ ಕೆಲವರಿಗೆ ಆಗಿಬರಲ್ಲ... ಕೆಲವು ವಾಸನೆಗಳು ಕೂಡ... ಆದಷ್ಟೂ ಕೇರ್ಫುಲ್ಲಾಗಿರಿ. ಹಾಗೇ ಹೇರ್ಕಟ್ಮಾಡಿಸಿಕೊಳ್ಳಿ. ಎಲ್ಲಿ ಏನು ಹೊಕ್ಕಿರುತ್ತೆ ಅಂತ ಹೇಳೋದು ಕಷ್ಟ...’ ಎಂದು ಡಾಕ್ಟರು ಹೇಳುವಾಗ ಸುಮ್ಮನೆ ನಕ್ಕು ಸುಮ್ಮಗಾದ.

ಡಾಕ್ಟರ ಸಲಹೆಯ ಮೇರೆಗೆ, ವರ್ಷಾನುಗಟ್ಟಲೆ ಬೆಳೆಸಿದ್ದ ಮುಡಿಗೆ ಕತ್ತರಿಯಿಕ್ಕಿ- ಕೊಚ್ಚಿದ ಎಳನೀರಿನ ಹಾಗೆ ಮಂಡೆ ಹೆರೆಸಿದ್ದೂ ಆಯಿತು. ಆದರೆ ಮೈತುರಿಕೆ ಮಾತ್ರ ನಿಲ್ಲಲಿಲ್ಲ. ವೈದ್ಯರು ಕೊಟ್ಟ ಯಾವ ಔಷಧಕ್ಕೂ ಬಗ್ಗಲಿಲ್ಲ. ಇನ್ನು ಕೈಗೊಂಡ ಮುಂಜಾಗ್ರತೆಯೆಲ್ಲ ವ್ಯರ್ಥವೇ ಆದವು. ದಿನದಿಂದ ದಿನಕ್ಕೆ, ಈ ಇಡೀ ತುರಿಕಾ ಪ್ರಸಂಗವು ಪುನರಾವರ್ತಿಸಿತೇ ಹೊರತು, ಇತ್ಯರ್ಥ ಕಾಣಲಿಲ್ಲ.

07

ತತ್ತ್ವ ಕಂಗೆಟ್ಟುಹೋದ. ಮೈನವೆಯ ವಿಚಾರವೇ ಸದಾ ಮನಸ್ಸು ಕೆದಕುವ ಸಂಗತಿಯಾಗಿ ಮಾರ್ಪಟ್ಟುಬಿಟ್ಟಿತು. ಕಾಟವೇ ಆಗಿಬಿಟ್ಟಿತು. ವಿನಾಕಾರಣ ಉಂಟಾಗುತ್ತಿರುವ ಈ ಪರಿಸ್ಥಿತಿಗೆ ಏನನ್ನುವುದು? ಯೋಚಿಸಿದ... ಡಾಕ್ಟರು ಹೇಳಿದ ಹಾಗೆ, ನಿಜಕ್ಕೂ ಅಲರ್ಜಿಯಿದ್ದಲ್ಲಿ ಒಂದಲ್ಲ ಒಂದಕ್ಕೆ ಬಗ್ಗಬೇಕಿತ್ತಲ್ಲವೆ? ಬಟ್ಟೆಬರೆಯಿಂದಲೇನಾದರೂ ಹೀಗಾಗುತ್ತಿದೆದ್ದೆ ಅನ್ನಲಿಕ್ಕೆ, ಇಡೀ ಮನೆಯನ್ನೇ ತಡಕಿ ಗೂರಾಡಿದ್ದಾಯಿತಲ್ಲವೆ? ಏನಾದರೂ ಸುಳುಹು ಸಿಗಬೇಕಿತ್ತಷ್ಟೆ? ಅಥವಾ, ಇದೇನು- ಸದಾ ಒಳಗೇ ಇದ್ದು, ತನ್ನ ಸ್ನಾನಾವಕಾಶವನ್ನೇ ಕಾದಿದ್ದು ಫಕ್ಕನುಂಟಾಗುವ ಮಾರಿಯೆ? ಮಾರಿಯೇ ಇದ್ದಲ್ಲಿ ಒಳಹೊಕ್ಕಿದ್ದಾದರೂ ಹೇಗೆ? ಆಹಾರದಲ್ಲೇನಾದರೂ ವ್ಯತ್ಯಯವಾಯಿತೆ? ಏನನ್ನಾದರೂ ಗೊತ್ತಿರದೆ ತಿಂದೆನೆ? ಅಥವಾ, ಯಾರಾದರೂ ಉಣಿಸಿಬಿಟ್ಟರೆ?

ಈ ಕೊನೆಯ ಯೋಚನೆ ತತ್ತ್ವನನ್ನು ಇನ್ನೂ ಕಂಗೆಡಿಸಿಬಿಟ್ಟಿತು. ಯಾರಾದರೂ ಮಾಡಿಸಿಬಿಟ್ಟಿದ್ದರೆ?! ಒಂದು ಸಲ ಈ ವಿಚಾರವು ಮನಸಿನಲ್ಲಿ ಮೂಡಿದ್ದಷ್ಟೆ, ಬೇರೂರಿ ಹೆಮ್ಮರವಾಗಿ ಬೆಳೆದುನಿಂತಿತು.

ಹಾಗಿದ್ದಲ್ಲಿ ಹಗೆ ಸಾಧಿಸುತ್ತಿರುವವರು ಯಾರು? ಈ ಪ್ರಶ್ನೆ ಮಿಕ್ಕುಳಿಯಿತು.

08

ಸ್ವಲ್ಪ ಹೊತ್ತಿನ ಹಿಂದೆ ತತ್ತ್ವನಿಗೊಂದು ಮೆಸೇಜು ಬಂತು. ಶ್ರಾವಣಿಯದು. ‘ಫ್ರೀ ಟುಮೀಟಪ್ಟುನೈಟ್?’ ಎಂದು ಬರೆದಿದ್ದಳು. ಶ್ರಾವಣಿ ತತ್ತ್ವನೊಡನೆ ಮೈಸಂಗ ಬಯಸುವ ಗೆಳತಿಯರಲ್ಲಿ ಒಬ್ಬಳು. ಎರಡು ಮೂರು ವಾರಕ್ಕೊಮ್ಮೆ ಹೀಗೆ ಮೆಸೇಜು ಬರೆಯುತ್ತಾಳೆ.

ಇವನಿಗೂ ಬಿಡುವಿದ್ದಲ್ಲಿ, ಕೋರಮಂಗಲದಲ್ಲಿ ಒಬ್ಬಳೇ ಇರುವ ಅವಳ ಫ್ಲ್ಯಾಟು ಹೊಕ್ಕು ಕೆಲಕಾಲವಿದ್ದು ವಾಪಸಾಗುವ ವಾಡಿಕೆಯಿದೆ. ಮುಸ್ಸಂಜೆಯಲ್ಲಿ ವೈನಿನಿಂದ ಸುರುಗೊಂಡು ಇಳಿರಾತ್ರಿಯಲ್ಲಿ ಪರಸ್ಪರ ಮೈಸವಿಯುವವರೆಗೂ, ಇಬ್ಬರ ವಿಜೃಂಭಣೆ ಜರುಗುತ್ತದೆ.

ತತ್ತ್ವ ಅವಳ ಮೆಸೇಜು ನೋಡಿದ್ದೇ, ಉತ್ತರಿಸಲು ಕೊಂಚ ಹೇಸಿದ. ತನ್ನೀ ಮೈಯಿಯದೇ ಒಂದು ಸಮಸ್ಯೆಯಾಗಿಬಿಟ್ಟಿದೆ... ಇವಳದೇನು ಮರ್ಜಿ ಅಂದುಕೊಂಡು ಸುಮ್ಮಗಾದ. ಆ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಅವನಿಗೆ ಇನ್ನೊಂದು ನೆನಪಾಯಿತು. ಅರೇ... ಮೊದಲ ಸಲ ಮೈಯಲ್ಲಿ ಅಲರ್ಜಿಯುಂಟಾಗುವ ಹಿಂದಿನ ರಾತ್ರಿಯನ್ನು ಇವಳೊಂದಿಗೆ ಕಳೆದೆನಲ್ಲವೆ? ಹೀಗನಿಸಿದ್ದೇ ಝಗ್ಗನೆ ಬೆಳಕು ಮಿಂಚಿ ಇನ್ನೂ ಒಂದು ಹೊಳೆದುಬಿಟ್ಟಿತು!

ಅವೊತ್ತು ಇಳಿರಾತ್ರಿಯಲ್ಲಿ ಮನೆಗೆ ಹೊರಡುವ ಮುಂಚೆ, ಎಲ್ಲದಕ್ಕೂ ಮೊದಲು, ಬಿಚ್ಚಿ ಬಿಸುಟಿದ್ದ ಉಡುಪುಗಳ ನಡುವಿನಿಂದ ಜನಿವಾರ ಹೆಕ್ಕಿ ತೊಟ್ಟಿದ್ದು ನೋಡಿ- ‘ಓಹ್... ಸ್ತ್ರೀಸಂಗ ಮಾಡಿದ ಮೇಲೆ ಜನಿವಾರ ಬದಲಿಸುತ್ತಾರಲ್ಲವಾ? ಈಗ ಮನೆಗೆ ಹೋಗಿ ಅದನ್ನೇ ಮಾಡುತೀಯಾ?’ ಎಂದು ಶ್ರಾವಣಿ ತಮಾಷೆ ಮಾಡಿ ನಕ್ಕಿದ್ದಳು. ಇವನೂ ವಾಪಸು ನಕ್ಕಿದ್ದ.

ಇದು ನೆನಪಾಗಿದ್ದೇ ಸೈ, ತತ್ತ್ವ, ತಕ್ಷಣ ತನ್ನ ಮೇಲಂಗಿಯನ್ನು ಬಿಚ್ಚಿ, ಜನಿವಾರವನ್ನು ವಿಸರ್ಜಿಸಿ- ಒಂದೇ ಸಮ ‘ಗಾಯತ್ರಿ’ಯನ್ನು ಪಿಟಿಪಿಟಿಸತೊಡಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.