ಸಮಾಜ ಎಚ್ಚರಿಸುವ ಕಲಾಕೃತಿಗಳು

ಭಾನುವಾರ, ಜೂಲೈ 21, 2019
25 °C

ಸಮಾಜ ಎಚ್ಚರಿಸುವ ಕಲಾಕೃತಿಗಳು

Published:
Updated:

ಕಲಾವಿದ ಬಿ.ಕಿರಣ್‌ ಕುಮಾರ್‌ ಅವರು ರಚಿಸಿರುವ ಕಲಾಕೃತಿಗಳಲ್ಲಿ ಸಮಾಜವನ್ನು, ಮನುಷ್ಯನ ಸೂಕ್ಷ್ಮತೆಯನ್ನು ಕಾಣಬಹುದು. ಸಾಮಾಜಿಕ ಅನಿಷ್ಟದ ಬೇರನ್ನು ಕಿತ್ತೊಗೆಯುವ ಅಂಶ ಒಂದೆಡೆಯಾದರೆ, ಬೆಳಕಿನೆಡೆಗೆ ದಾರಿ ತೋರಿಸುವ ಅಂಶವು ಇಲ್ಲಿ ಜಾಗೃತಗೊಳ್ಳುತ್ತಿರುತ್ತದೆ.

ಬುದ್ಧ, ಬಸವ, ಅಂಬೇಡ್ಕರ್. ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಮಹನೀಯರ ಭಾವಚಿತ್ರಗಳನ್ನು ರಚಿಸುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನವ್ಯ ಪರಂಪರೆಯ ನಡೆಯಲ್ಲಿ ಸಾಮಾಜಿಕ ತಲ್ಲಣಗಳನ್ನು ತನ್ನ ಕ್ಯಾನ್ವಾಸ್‌ನಲ್ಲಿ ಅಭಿವ್ಯಕ್ತಿಸುವ ನೂರಾರು ಕಲಾಕೃತಿಗಳನ್ನು ಕಿರಣ್‌ಕುಮಾರ್ ರಚಿಸಿದ್ದಾರೆ. ಕಲಾಕೃತಿ ಕೇವಲ ಮಾರುಕಟ್ಟೆ ಮತ್ತು ಪ್ರದರ್ಶನದ ವಸ್ತುವಾಗದೆ, ಮಾನಸಿಕ ಪರಿವರ್ತನೆಯ ಸ್ವತ್ತಾಗಬೇಕು ಎನ್ನುತ್ತಾರೆ ಅವರು.

ಗ್ರಾಮೀಣ ಭಾಗದಿಂದ ಬಂದಿರುವ ಕಿರಣ್‌ಕುಮಾರ್, ಜಾನಪದ, ಸಾಂಪ್ರದಾಯಿಕ, ಸಮಕಾಲೀನ, ನವ್ಯ ಪರಂಪರೆಯ ಜಾಡು ಹಿಡಿದು ಬುದ್ಧನ ಸರಣಿ ಚಿತ್ರಗಳನ್ನು ಮತ್ತು ಕಾವಿ, ಕಿನ್ನಾಳ, ಗಂಜೀಫಾ, ಮೈಸೂರು ಶೈಲಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಕಲಾಕೃತಿ ರಚಿಸಿದ್ದಾರೆ. ಕಾವಾದಲ್ಲಿ ನಡೆದ 9ನೇ ರಾಷ್ಟ್ರೀಯ ಕಲಾಶಿಬಿರ, ಕಲಾನಿಕೇತನದಲ್ಲಿ ನಡೆದ ‘ಕಾವಿ’, ಕಿನ್ನಾಳ, ವ್ಯಕ್ತಿಚಿತ್ರ, ಭಾವಚಿತ್ರ, ನಿಸರ್ಗ ಚಿತ್ರ ಕಲಾಶಿಬಿರಗಳಲ್ಲಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ರಾಜ್ಯಮಟ್ಟದ ಗ್ರಾಫಿಕ್ ಕಲಾಕಮ್ಮಟ, ವಿದ್ಯಾರ್ಥಿ ಪರಿಷತ್‌ನ ಕಲಾಶಿಬಿರ, ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಗಂಜೀಫಾ ಕಲಾಶಿಬಿರದಲ್ಲಿ 
ಭಾಗವಹಿಸಿದ್ದಾರೆ.

ಬಿ.ಕಿರಣ್‌ಕುಮಾರ್‌ ಮೈಸೂರು ತಾಲ್ಲೂಕಿನ ಬೆನಗಹಳ್ಳಿಯವರು. ತಂದೆ ಬಸವಯ್ಯ, ತಾಯಿ ರಾಜಮಣಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೆನಗಹಳ್ಳಿ ಮತ್ತು ಸಾಲುಹುಂಡಿಯಲ್ಲಿ ಮುಗಿಸಿದ್ದಾರೆ. ಕಲೆಯಲ್ಲಿ ಆಸಕ್ತಿ ಇದ್ದುದರಿಂದ ಮೈಸೂರಿನ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಪದವಿ, ಕಾವಾದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದಾರೆ. 

ಈಗಾಗಲೇ ಶ್ರವಣಬೆಳಗೊಳ, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ, ಚಿತ್ರದುರ್ಗ, ಮೇಲುಕೋಟೆ, ಆದಿಚುಂಚನಗಿರಿ, ಮುಂತಾದ ಕಡೆಗಳಲ್ಲಿ ನಿರಂತರವಾಗಿ ನಿಸರ್ಗ ಚಿತ್ರ ರಚಿಸಿರುವುದರೊಂದಿಗೆ ಗ್ರಾಮೀಣ ಪ್ರದೇಶದ ಬವಣೆಯನ್ನು ಚಿತ್ರಿಸುವುದು ತುಂಬ ಇಷ್ಟವೆನ್ನುತ್ತಾರೆ.

ಜಲವರ್ಣ, ತೈಲವರ್ಣ ಮತ್ತು ಅಕ್ರಲಿಕ್‌ ವರ್ಣಗಳಲ್ಲಿ ಚಿತ್ರಿಸುವ ಕಿರಣ್‌ಕುಮಾರ್ ಅವರು, ಪೇಪರ್, ಕ್ಯಾನ್ವಾಸ್ ಮೇಲೆ ಬಣ್ಣವನ್ನು ಹರಡಿ ತನ್ನ ಭಾವನೆಗಳನ್ನು ಕಲಾಕೃತಿಯಲ್ಲಿ ಹುದುಗಿಸಿಡುವ ಪ್ರಯತ್ನ ಮಾಡಿದ್ದಾರೆ. ಸ್ವಚ್ಛ ಭಾರತ್ ಪರಿಕಲ್ಪನೆಯಲ್ಲಿರುವ ಭಾರತವನ್ನು ವಿಭಿನ್ನ ರೀತಿಯಲ್ಲಿ ನೋಡುವ, ಎಚ್ಚರಿಸುವ ಮತ್ತು ತಿದ್ದುವ ಇವರ ಕಲಾಕೃತಿಗಳಲ್ಲಿ ಮನುಷ್ಯನ ಮನಸ್ಸು ಸ್ವಚ್ಛಗೊಳ್ಳದ ಹೊರತು ಭಾರತ ಸ್ವಚ್ಛವಾಗುವುದಿಲ್ಲ. ಇದಕ್ಕೆಲ್ಲ ಶಿಕ್ಷಣವೇ ಮದ್ದು. ಆ ದಿಕ್ಕಿನಲ್ಲಿ ಎಲ್ಲಾ ಪ್ರಜ್ಞಾವಂತರು ಯೋಚಿಸಿ ಮನಸ್ಸನ್ನು ಪರಿವರ್ತಿಸಿಕೊಳ್ಳುವ ಮತ್ತು ದೇಶ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎನ್ನುವ ಹಂಬಲ ಇವರದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !