ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಯಿಂದ ಮೈಸೂರು ತನಕ...

ಶಿಲ್ಪಕಲೆಯ ಸಾಧಕ ವಿ.ಎ.ದೇಶ‍ಪಾಂಡೆ
Last Updated 16 ನವೆಂಬರ್ 2019, 9:36 IST
ಅಕ್ಷರ ಗಾತ್ರ

ನಾನು ಹುಟ್ಟಿದ್ದು 1955ರ ಏಪ್ರಿಲ್‌ 11. ತಾಯಿ ಲಕ್ಷ್ಮಿ ಬಾಯಿ, ತಂದೆ ಅನಂತರಾವ್‌ ದೇಶಪಾಂಡೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ದತ್ತಾತ್ರೇಯ ಗುಡಿ ಮುಂಭಾಗದಲ್ಲೇ ನಮ್ಮ ಮನೆ ಇತ್ತು. ಅನತಿ ದೂರದಲ್ಲಿದ್ದ ಗುಡ್ಡವನ್ನೇ ಕೊರೆದು ನಿರ್ಮಿಸಿದ ಗುಹಾಂತರ ದೇವಾಲಯ, ಮೇಣದ ಬಸದಿ ಮೇಲಿನ ಶಿಲ್ಪಗಳ ಬಗ್ಗೆ ನನ್ನ ಆಸಕ್ತಿ ಮೂಡಿತು. ಈ

ಶಾಲೆಯಲ್ಲಿ ಓದುತ್ತಿದ್ದ ವೇಳೆ ಪಠ್ಯಕ್ಕಿಂತ ಶಿಲ್ಪಕಲೆಯತ್ತಲೇ ನನಗೆ ಹೆಚ್ಚು ಆಸಕ್ತಿ. ಸಂಬಂಧಿಕರು, ಸ್ನೇಹಿತರು ಬಂದರೆ ದೇವಸ್ಥಾನಕ್ಕೆ ಕರೆದೊಯ್ದು ತೋರಿಸುತ್ತಿದೆ. ವಿರಾಮದ ಸಮಯದಲ್ಲಿ ಅಲ್ಲೇ ಕಾಲ ಕಳೆಯುತ್ತಿದ್ದೆನು. ಗಣೇಶ ಹಬ್ಬದ ವೇಳೆ, ’ಬಡಿಗೇರ‘ ಸಮುದಾಯದವರೇ ಮೂರ್ತಿ ನಿರ್ಮಿಸುವುದು ವಾಡಿಕೆ. ನಾನು ಅವರ ಮನೆಗೆ ತೆರಳಿ, ಕುತೂಹಲದಿಂದ ಮೂರ್ತಿ ತಯಾರಿಕೆಯನ್ನು ಗಮನಿಸುತ್ತಿದ್ದೆ. ಕ್ರಮೇಣ, ಅವರ ಬಳಿ ಜೇಡಿಮಣ್ಣು ಪಡೆದು ಸಣ್ಣದಾಗಿ ಮೂರ್ತಿ ತಯಾರಿಸುವುದನ್ನು ಕಲಿತುಕೊಂಡೆ.

ಹೈಸ್ಕೂಲಿನ ತನಕ ನಾನು ಬಾದಾಮಿಯಲ್ಲೇ ಶಿಕ್ಷಣ ಮುಗಿಸಿದೆ. ಅಷ್ಟೊತ್ತಿಗಾಗಲೇ, ನಾನು ಇದೇ ಕ್ಷೇತ್ರದಲ್ಲಿ ಮುಂದುವರಿಯುವುದು ಎಂದು ತೀರ್ಮಾನಿಸಿದ್ದೆ. ಎಸ್ಸೆಸ್ಸೆಲ್ಸಿ ನಂತರ ಧಾರವಾಡದ ಶ್ರೀ ಹಾಲಭಾವಿ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಡ್ರಾಯಿಂಗ್‌ ಟೀಚರ್‌ ಕೋರ್ಸ್‌ ಸೇರಿಕೊಂಡೆ. ಮುಂದೇನು ? ಎಂಬ ಪ್ರಶ್ನೆ ಎದುರಾದ ವೇಳೆ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಸೋದರಮಾವ ನಾರಾಯಣ ಕುಲಕರ್ಣಿ ಮಾರ್ಗದರ್ಶನ ಮಾಡಿದರು. ಅವರ ಸಲಹೆಯಂತೆ ಬರೋಡಾಕ್ಕೆ ತೆರಳಿದೆನು. ಇದು ನನ್ನ ಪಾಲಿನ ಪ್ರಮುಖ ತಿರುವು ಎಂದು ಪರಿಗಣಿಸಬಹುದು.

ಬರೋಡಾದ ಎಂ.ಎಸ್‌.ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಕಲಿಯುತ್ತಿದ್ದ ವೇಳೆ ನನ್ನ ಆಸಕ್ತಿಗೆ ಇನ್ನಷ್ಟು ಸ್ಫೂರ್ತಿ ಸಿಕ್ಕಿತ್ತು ಎನ್ನಬಹುದು. ಮೆಟಲ್‌ ಕಾಸ್ಟಿಂಗ್‌ ಕಲಿಸುತ್ತಿದ್ದ ರಜನಿಕಾಂತ್‌ ಮಾರ್ಗದರ್ಶನದಲ್ಲಿ ಸತತ ಅಭ್ಯಾಸ ನಡೆಸಿ ಒಂದು ಹಂತದ ನೈಪುಣ್ಯತೆ ಸಾಧಿಸಿದೆನು. ವಿದ್ಯಾರ್ಥಿಯಾಗಿದ್ದಾಗಲೇ ಗುಜರಾತ್‌ನ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿತ್ತು.

ತಾವು ರಚಿಸಿದ ಶಿಲ್ಪಕಲಾಕೃತಿಯೊಂದಿಗೆ ದೇಶಪಾಂಡೆ
ತಾವು ರಚಿಸಿದ ಶಿಲ್ಪಕಲಾಕೃತಿಯೊಂದಿಗೆ ದೇಶಪಾಂಡೆ

ಅವಕಾಶಗಳ ಬೆನ್ನತ್ತಿ...!

1981ರಲ್ಲಿ ಬರೋಡಾದಲ್ಲಿ ಶಿಕ್ಷಣ ಮುಗಿಸಿದ ಬಳಿಕ, ಹವ್ಯಾಸಿ ಕಲಾವಿದನಾಗಬೇಕೆಂಬ ಕನಸಿನೊಂದಿಗೆ ಬೆಂಗಳೂರಿಗೆ ಬಂದೆನು. ನಾನು ಕಲಿತಿದ್ದನ್ನು ಪ್ರದರ್ಶನ ಏರ್ಪಡಿಸಿದೆನು. ಆಗ ಬಾದಾಮಿ ಅವರೇ ಆದ ಆರ್‌.ಎಂ.ಹಡಪದ್‌ ಅವರು ಕೆನ್‌ಕಲಾಶಾಲೆಯಲ್ಲಿ ’ಶಿಲ್ಪಕಲೆ‘ ಕಲಿಸಲು ಸೇರಿಕೊಂಡೆನು. ಒಂದು ವರ್ಷದ ನಂತರ, ಹಾಸನದ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನ ವಾಸ್ತುಶಿಲ್ಪ ವಿಭಾಗಕ್ಕೆ ಸೇರಿಕೊಂಡೆ. ಅಲ್ಲಿ ನಾನು ಏರ್ಪಡಿಸಿದ್ದ ‍ಪ್ರದರ್ಶನವನ್ನು ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ ಮೊದಲ ಡೀನ್‌ ವಿ.ಎಂ. ಶೋಲಾರ್ಪುಕರ್‌ ಗಮನಿಸಿದರು. ಆಗ ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಹೊಸ ಸಂಸ್ಥೆ ಸೇರುವಂತೆ ಆಹ್ವಾನ ನೀಡಿದರು. ಹೀಗೆ ನನ್ನ ಪ್ರಯಾಣ ಹಾಸನದಿಂದ ಮೈಸೂರಿಗೆ ವರ್ಗಾವಣೆಯಾಯಿತು.

ಹಾಸನದಿಂದ ಮೈಸೂರಿನತ್ತ...

1983. (ಕಾವಾ)ದಲ್ಲಿ ಶಿಲ್ಪಕಲಾ ವಿಭಾಗಕ್ಕೆ ಉಪನ್ಯಾಸಕನಾಗಿ ಸೇರಿಕೊಂಡೆನು. ವಿಭಾಗಕ್ಕೆ ಬಂದ ಸಂದರ್ಭದಲ್ಲಿ ಯಾವುದೇ ಪರಿಕರ, ಸಲಕರಣೆಗಳು ಇರಲಿಲ್ಲ. ಹೀಗಾಗಿ ನಮ್ಮ ವಿಭಾಗಕ್ಕೆ ತಕ್ಕಂತೆ ಎಲ್ಲ ಪರಿಕರಗಳನ್ನು ವಿ.ಎಂ. ಶೋಲಾರ್ಪುಕರ್‌ ಸೇರಿ ವಿನ್ಯಾಸ ಮಾಡಿದೆನು. ಅದರಲ್ಲೂ ನಾವು ಸೇರಿ ರೂಪಿಸಿದ ಈಸಲ್‌, ಡಾಂಕಿಯ Sculpture Stand, Portrait Stand ಗಳು ಮನೆಮಾತಾದವು. ಇಂದು ರಾಜ್ಯದಲ್ಲಿರುವ ಬಹುಪಾಲು ಕಲಾಶಾಲೆಗಳಲ್ಲಿ ನಾವು ರೂಪಿಸಿದ ಮಾದರಿಯನ್ನು ಕಾಣಬಹುದು.

ಮುಂದೆ Metal, Stone, Wood Carving ಗಳನ್ನು ವಿಭಾಗದಲ್ಲಿ ಪರಿಚಯಿಸುತ್ತಾ ಹೋದೆವು. ನಾನು ಬರೋಡಾದಲ್ಲಿ ಕಲಿತಿದ್ದ ಪಠ್ಯದ ಮಾದರಿಯನ್ನೇ ಇಲ್ಲಿ ಕೂಡ ಅಳವಡಿಸಿಕೊಂಡೆವು. ಮುಂದೆ ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಮ್ಮಲ್ಲಿ ಕಲಿತ ಮಕ್ಕಳಿಗೆ ಪದವಿ ಕೊಡಲು ಆರಂಭಿಸಿದೆವು.

ಮೂರ್ತಿ ತಯಾರಿಕೆಯಲ್ಲಿ ತಲ್ಲೀನರಾಗಿರುವ ದೇಶ‍ಪಾಂಡೆ
ಮೂರ್ತಿ ತಯಾರಿಕೆಯಲ್ಲಿ ತಲ್ಲೀನರಾಗಿರುವ ದೇಶ‍ಪಾಂಡೆ

ನಾನು ಕಲಿತಿದ್ದ ಮೆಟಲ್‌ ಕಾಸ್ಟಿಂಗ್‌ ಅನ್ನು ಕಾರ್ಯರೂಪಕ್ಕೆ ತರಬೇಕು ಎಂದು ನಿರ್ಧರಿಸಿ ಹಿನಕಲ್‌ನ ಬಾಡಿಗೆ ಮನೆಯಲ್ಲೇ ಕಂಚಿನ ಪ್ರತಿಮೆಗಳನ್ನು ನಿರ್ಮಿಸಲು ಆರಂಭಿಸಿದೆನು. ಆರಂಭದಲ್ಲೇ ಮನೆಯೊಳಗೆ ಈ ಕೆಲಸ ಮಾಡುತ್ತಿದ್ದೆನು, ನಂತರ ಮನೆಪಕ್ಕದಲ್ಲೇ ಶೆಡ್‌ ನಿರ್ಮಿಸಿ, ಈ ಕೆಲಸ ಮಾಡಿದೆ. ಬೆಳಿಗ್ಗೆ ಕಾಲೇಜಿಗೆ ತೆರಳಿದರೆ, ಮನೆಗೆ ಬಂದು ರಾತ್ರಿ ತನಕವೂ ಕೆಲಸ ಮಾಡುತ್ತಿದ್ದೆನು. ಜಾಗ ಇಕ್ಕಟ್ಟು ಅನ್ನಿಸಿದಾಗ, ಈಗ ಇಲವಾಲದಲ್ಲಿರುವ ಜಾಗ ಖರೀದಿಸಿದ್ದೆನು.

ಅಲ್ಲೇ ’ಶಿಲ್ಪಕಲಾ ಸ್ಟುಡಿಯೊ‘ ಆರಂಭಿಸಿ ಕೆಲಸ ಮುಂದುವರಿಸಿದೆನು. ಮತ್ತೆ ಇಲ್ಲೇ ಮನೆ ಕಟ್ಟಿದೆವು. ಅಂದಹಾಗೆ ನಾನು ಮಾಡಿದ ಚೊಚ್ಚಲ ಪ್ರತಿಮೆ ಬಾಬು ಜಗಜೀವನ್‌ರಾಮ್‌ ಅವರದ್ದು. ಮೈಸೂರಿನ ರೈಲ್ವೆ ನಿಲ್ದಾಣದ ಮುಂದೆ ಇದನ್ನು ಪ್ರತಿಷ್ಠಾಪಿಸಲಾಗಿದೆ.

ಇದರ ಜೊತೆಜೊತೆಗೆ ಸರ್ವಜ್ಞ ಹಾಗೂ ರಾಣಿ ಅಬ್ಬಕ್ಕನ ಪ್ರತಿಮೆ ನಿರ್ಮಿಸುವ ಜವಾಬ್ದಾರಿ ನನ್ನ ಪಾಲಿಗೆ ಸಿಕ್ಕಿತು. ಅಬ್ಬಕ್ಕನ ಮೂರ್ತಿಯನ್ನು ಬೆಂಗಳೂರಿನ ಇಸ್ಕಾನ್‌ ದೇವಸ್ಥಾನ ಮುಂದೆ ಪ್ರತಿಷ್ಠಾಪಿಸಲಾಗಿದೆ. ಸರ್ವಜ್ಞನ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇದಾದ ನಂತರ ಒಂದೊಂದಾಗಿ ಅವಕಾಶಗಳು ಹುಡುಕಿಕೊಂಡು ಬಂದವು. ದಾವಣಗೆರೆಯಲ್ಲಿ ಜೆ.ಎಚ್‌.ಪಟೇಲ್‌, ಪುಸ್ತಕ ಬಾಬು ಜಗಜೀವನ್‌ರಾಂ ಅವರ ಪುತ್ಥಳಿ ನಿರ್ಮಿಸಿಕೊಟ್ಟೆನು. ಈ ವೇಳೆ ಜೆಎಸ್‌ಎಸ್‌ ಶಿಕ್ಷಣಸಂಸ್ಥೆಯವರು ಪರಿಚಯವಾದರು. ಈಗಿನ ಶಿವರಾತ್ರಿ ದೇಶಿಕೇಂದ್ರ ಅವರು ತಿಳಿಸಿದಂತೆ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಏಳು ಪ್ರತಿಮೆಗಳನ್ನು ನಿರ್ಮಿಸಿಕೊಟ್ಟಿದ್ದು, ಅವರ ಶಿಕ್ಷಣಸಂಸ್ಥೆ ಪ್ರತಿಷ್ಠಾಪಿಸಲಾಗಿದೆ.

ಇದಾದ ಬಳಿಕ ಸಚಿವೆಯಾಗಿದ್ದ ಲೀಲಾದೇವಿ ಆರ್‌ ಪ್ರಸಾದ್‌ ಸಲಹೆಯಂತೆ ’ಅಕ್ಕಮಹಾದೇವಿ‘ ಪ್ರತಿಮೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಸುತ್ತೂರು ಸ್ವಾಮೀಜಿ ಅವರ ಸೂಚನೆಯಂತೆ ಬಸವಣ್ಣನ ಮೂರ್ತಿ, ಶಾಸಕ ಉದಾಸಿ ಅವರ ಆಹ್ವಾನದಂತೆ ’ಹರ್ಡೀಕರ್‌‘ ಪ್ರತಿಮೆ ನಿರ್ಮಿಸಿದ್ದು, ನೂರಕ್ಕೂ ಹೆಚ್ಚಿನ ಪ್ರತಿಮೆಗಳು ದೇಶ–ವಿದೇಶಗಳಲ್ಲಿ ವಿರಾಜಮಾನವಾಗಿದೆ. ಅದೇ ರೀತಿ ಹಾಸನದ War Memorial ನಲ್ಲಿ ಸೈನಿಕರ ತ್ಯಾಗ ನೆನಪಿಸುವ ಸ್ಮಾರಕ ನಿರ್ಮಿಸಿದ್ದು ಹೆಚ್ಚು ಖುಷಿ ನೀಡಿದೆ.

ಸಾಮಾನ್ಯವಾಗಿ Portait ಮೂರ್ತಿಯನ್ನು ಒಂದೂವರೆ ತಿಂಗಳಲ್ಲಿ ನಿರ್ಮಿಸಿಕೊಟ್ಟಿದ್ದೇನೆ. 9 ಅಡಿಯ ನಿಂತ ಭಂಗಿ ಮೂರ್ತಿಗೆ ಸುಮಾರು ಆರು ತಿಂಗಳು ಕಾಲ ಸಮಯ ಬೇಕಾಗುತ್ತದೆ. ಹೀಗಾಗಿ ಅದರ ಗಾತ್ರಕ್ಕ ತಕ್ಕಂತೆ ಬೆಲೆ ನಿಗದಿಪಡಿಸುತ್ತೇನೆ.

ಪ್ರತಿ ವ್ಯಕ್ತಿಯ ದೇಹಚರ್ಯೆ ಭಿನ್ನವಾಗಿರುತ್ತದೆ. ತಾವು ಪ್ರತಿಷ್ಠಾಪಿಸುವ ಪ್ರತಿಮೆ ನೈಜತೆಗೆ ಹತ್ತಿರವಾಗಿರಬೇಕು ಎಂದು ಪ್ರತಿಯೊಬ್ಬರು ನಿರೀಕ್ಷಿಸುತ್ತಾರೆ. ಈ ಕಾರಣದಿಂದಲೇ, ಅವರ ಗುಣವನ್ನು ಪ್ರತಿಮೆಯಲ್ಲಿ ರೂಪಿಸಲು ಯತ್ನಿಸುತ್ತೇನೆ. ಈ ಕಾರಣದಿಂದ ಅವರ ಒಡನಾಡಿಗಳ ಸಲಹೆಗಳನ್ನು ಪಡೆದು, ಜೇಡಿಮಣ್ಣಿನಲ್ಲಿ ತಯಾರು ಮಾಡುತ್ತೇನೆ. ಇದರಲ್ಲಿ ಯಾವುದಾದರ ಬದಲಾವಣೆ ಮಾಡಿದ ನಂತರ, ಕಂಚಿನ ಎರಕ ಹೊಯ್ದು, ಪ್ರತಿಮೆ ನಿರ್ಮಿಸುತ್ತೇವೆ. ಪ್ರತಿ ಕೆಲಸ ಮಾಡಿದ ಮೇಲೆ ಜನರು ನೀಡಿದ ಮೆಚ್ಚುಗೆಗಳೇ ಹೆಚ್ಚು ಖುಷಿ ನೀಡಿದೆ.

ಈಗ ಕೊಡವ ಸಮಾಜದವರ ಸೂಚನೆಯಂತೆ, ಜನರಲ್‌ ಕಾರ್ಯಪ್ಪನವರ ಪ್ರತಿಮೆ ನಿರ್ಮಿಸಲಾಗುತ್ತಿದೆ. ಅಂತಿಮ ರೂಪ ಪಡೆದ ಬಳಿಕ, ಮೆಟ್ರೊಪೊಲ್‌ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಈ ಕಲೆಗೆ ಇಳಿದು 4 ದಶಕಗಳೇ ಕಳೆದಿವೆ, ಆದರೆ ಮೊದಲಿನ ಆಸಕ್ತಿ ಈಗಲೂ ಹಾಗೇ ಉಳಿದಿದೆ. ಯುವ ಜನಾಂಗ ಇದನ್ನೂ ಕಲಿಯಲು ಆಸಕ್ತಿ ಕಡಿಮೆಯಾಗುತ್ತಿದೆ. ಯಾರಾದರೂ ಕಲಿಯಲು ಇಷ್ಟಪಟ್ಟರೆ, ಕಲಿಸಲು ಸಿದ್ಧ.

ರಾಜಕುಮಾರ್
ರಾಜಕುಮಾರ್

ಕಾವಾದ ಕೆಲಸ ತೃಪ್ತಿಕೊಟ್ಟಿದೆ...

ಕಾವಾಕ್ಕೆ ನಾನು ಉಪನ್ಯಾಸಕನಾಗಿ ಸೇರಿಕೊಂಡೆ. ಅಲ್ಲಿಂದ ವಿಭಾಗದ ಮುಖ್ಯಸ್ಥನಾಗಿ ಜವಾಬ್ದಾರಿ, ರೀಡರ್‌ ಆಗಿ ನಂತರ ಡೀನ್‌ ಆಗಿ ಸಂಸ್ಥೆಯ ಮುಖ್ಯಸ್ಥನಾಗಿ ಜವಾಬ್ದಾರಿ ನಿರ್ವಹಿಸಿದ ಖುಷಿಯಿದೆ.

ಸಂಸ್ಥೆ ಆರಂಭವಾದ ಸಂದರ್ಭದಲ್ಲಿ ಕಾಲೇಜಿಗೆ ಸರಿಯಾದ ಕಟ್ಟಡವಿರಲಿಲ್ಲ. ಇದರಿಂದ ಒಂದಲ್ಲ ಒಂದು ರೀತಿಯಲ್ಲಿ ಅಡಚಣೆ ಎದುರಾಗುತ್ತಿತ್ತು. ಈ ಎಲ್ಲ ಒತ್ತಡದ ಮಧ್ಯೆಯೇ, ಸರ್ಕಾರದ ನೆರವಿನೊಂದಿಗೆ ಬನ್ನೂರು ರಸ್ತೆಯಲ್ಲಿರುವ ಜರ್ಮನ್‌ ಪ್ರೆಸ್‌ ಬಳಿ ಸಂಸ್ಥೆಗೆ ಶಾಶ್ವತ ಕಟ್ಟಡ ಒದಗಿಸಿದ್ದು ನನ್ನ ಪಾಲಿನ ಮರೆಯಲಾಗದ ನೆನಪು.

ಪತ್ನಿಯ ಸಹಕಾರ...

ನಾನು ಈ ಮಟ್ಟಿಗಿನ ಸಾಧನೆ ಮಾಡಲು ಪತ್ನಿ ಪ್ರಮೋದಿನಿ ದೇಶಪಾಂಡೆ ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ನಾನು ಕಾಲೇಜು ಕೆಲಸ ಮಾಡುತ್ತಿದ್ದ ವೇಳೆ, ಆಕೆ ಕೂಡ ನನ್ನ ಕೆಲಸಕ್ಕೆ ಕೈ ಜೋಡಿಸಿದ್ದಳು. ಆದ್ದರಿಂದಲೇ ನನ್ನ ಕೆಲಸ ಹಗುರವಾಯಿತು. ಈಗ ಆಕೆಯೇ ಸ್ವತಂತ್ರವಾಗಿ ಹಲವಾರು ಕಲಾಕೃತಿಗಳನ್ನು ರಚಿಸುತ್ತಾಳೆ ಎಂದು ಸಾಧನೆಯ ಕ್ರೆಡಿಟ್‌ ಅನ್ನು ನೀಡುವುದನ್ನು ಮರೆಯುವುದಿಲ್ಲ.

ಪ್ರಮೋದಿನಿ ಜೊತೆಗೆ ವ್ಯಾಸಮೂರ್ತಿ ಅನಂತರಾವ್ ದೇಶಪಾಂಡೆ
ಪ್ರಮೋದಿನಿ ಜೊತೆಗೆ ವ್ಯಾಸಮೂರ್ತಿ ಅನಂತರಾವ್ ದೇಶಪಾಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT