ಶುಕ್ರವಾರ, ಫೆಬ್ರವರಿ 26, 2021
31 °C

ಕರೆದರೆ ಕೇಳುವ ಆರೋಗ್ಯಮಾತೆ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Deccan Herald

ಉದ್ಯಾನನಗರಿಯಲ್ಲಿ ಇರುವ ಕ್ಯಾಥೋಲಿಕರ ಅತ್ಯಂತ ಹಳೆಯ ಚರ್ಚ್ ‘ಸೇಂಟ್ ಮೇರಿ ಬೆಸಿಲಿಕಾ’. ಇದಕ್ಕೆ ಎರಡು ಶತಮಾನಕ್ಕೂ ಹಿಂದಿನ ಇತಿಹಾಸವಿದೆ. ಬೆಂಗಳೂರು ಮತ್ತು ರಾಜ್ಯದಲ್ಲಿ ಕ್ರೈಸ್ತಧರ್ಮದ ಬೆಳವಣಿಗೆ ಇದು ತನ್ನದೇ ಆದ ಕೊಡುಗೆ ನೀಡಿದೆ. ಇದು ನಗರದಲ್ಲಿರುವ ಕ್ರೈಸ್ತರ ಪ್ರಮುಖ ಪ್ರಾರ್ಥನಾ ಮಂದಿರ.

ಸುಮಾರು 215 ವರ್ಷಗಳಷ್ಟು ಹಳೆಯದಾದ ಈ ಚರ್ಚ್‌ ನಗರದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಒಂದು. ಕ್ರೈಸ್ತರ ಜತೆಗೆ ಕ್ರೈಸ್ತೇತತರರು ಇಲ್ಲಿ ಪ್ರಾರ್ಥಿಸುವುದು, ಹರಕೆ ಮಾಡಿಕೊಳ್ಳುವುದು ಹಿಂದಿನಿಂದ ನಡೆದು ಬಂದಿದೆ. ಈ ಚರ್ಚ್‌ ಕೆಲ ಬಾರಿ ನವೀಕರಣಗೊಂಡಿದೆ.

ನಗರದ ಕಂಟೋನ್ಮೆಂಟ್‌ ಭಾಗದ ಶಿವಾಜಿನಗರದಲ್ಲಿರುವ ಈ ಚರ್ಚ್‌ ಧರ್ಮ, ಜಾತಿ, ಭಾಷಿಗರನ್ನು ಬೆಸೆಯುವ ಸಾಮರಸ್ಯದ ಕೇಂದ್ರ. ಇಲ್ಲಿಗೆ ಇಂಗ್ಲಿಷ್‌, ಕನ್ನಡ, ಹಿಂದಿ, ತಮಿಳು, ಉರ್ದು, ಮಲಯಾಳಂ ಭಾಷೆ ಬಲ್ಲವರು, ವಿವಿಧ ಧರ್ಮೀಯರು ಬಂದು ಪ್ರಾರ್ಥಿಸುತ್ತಾರೆ. ಅವರಿಗೆ ಅನುಕೂಲವಾಗಲಿ ಎಂದು ಇಲ್ಲಿ ಪ್ರಮುಖವಾಗಿ ಕನ್ನಡ, ಇಂಗ್ಲಿಷ್‌ ಮತ್ತು ತಮಿಳು ಭಾಷೆಗಳಲ್ಲಿ ನಿತ್ಯ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ.

‘ಆರೋಗ್ಯಮಾತೆ’ ಎಂದೇ ಪ್ರಸಿದ್ಧಳಾದ ಯೇಸುವಿನ ತಾಯಿ ಮೇರಿಯ ಹೆಸರಿನಲ್ಲಿರುವ ಈ ಚರ್ಚ್‌ನ ಆಧಿದೇವತೆ ಸ್ವತಃ ಮೇರಿ ಮಾತೆ. ಪ್ರತಿ ಸೆಪ್ಟೆಂಬರ್‌ನಲ್ಲಿ ನಡೆಯುವ ಮೇರಿಯಮ್ಮನ ಜಾತ್ರೆ ಪ್ರಸಿದ್ಧವಾದದ್ದು. ವಿವಿಧ ಸಮುದಾಯದ ಜನರು ಇಲ್ಲಿ ಮೋಂಬತ್ತಿ ಹಚ್ಚಿ ಮೇರಿ ಮಾತೆಯ ದರ್ಶನ ಪಡೆದು ಪ್ರಾರ್ಥಿಸುತ್ತಾರೆ. ಒಂದು ವಾರ ನಡೆಯುವ ಈ ಉತ್ಸವ ಶಿವಾಜಿನಗರದ ಬಹುತೇಕ ಭಾಗದಲ್ಲಿ ಹಬ್ಬದಂತೆ ಕಂಡು ಬರುತ್ತದೆ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ ಕಳೆಗಟ್ಟುತ್ತದೆ.

ಚರ್ಚ್‌ನ ಇತಿಹಾಸ:

ಕ್ರಿ.ಶ 1799ರ (ಟಿಪ್ಪುವಿನ ಮರಣಾ) ನಂತರ ಫ್ರೆಂಚ್ ಪಾದ್ರಿ ಅಬ್ಬೆದ್ಯುಬುವಾ ಅವರ ಆಗಮನದೊಂದಿಗೆ ಕ್ರೈಸ್ತಧರ್ಮದ ಪುನರುಜ್ಜೀವನ ಕಾರ್ಯ ಮೈಸೂರು ಪ್ರಾಂತ್ಯದಲ್ಲಿ ನಡೆಯಿತು. ಮೈಸೂರು ಸೀಮೆಯಲ್ಲಿ ಪ್ರಥಮ ಬಾರಿಗೆ ಸಿಡುಬು ನಿರೋಧಕ ಲಸಿಕೆಯನ್ನು ಪರಿಚಯಿಸಿದವರು ಅಬ್ಬೆದ್ಯುಬುವಾ.

ಅವರ ಪ್ರಯತ್ನದಿಂದ ಕ್ರಿ.ಶ 1803ರಲ್ಲಿ ಬಿಳೇಕನಹಳ್ಳಿ ಅಥವಾ ಬಿಳಿ ಅಕ್ಕಿ ಹಳ್ಳಿಯಲ್ಲಿ (ಈಗಿನ ಶಿವಾಜಿನಗರ) ಪುಟ್ಟ ಚರ್ಚ್‌ ತಲೆಯೆತ್ತಿತು. ಕ್ರಿ.ಶ 1813ರಲ್ಲಿ ಬ್ರಿಟಿಷರು ತಮ್ಮ ನೌಕರರ ಬಳಕೆಗಾಗಿ ಈ ಬಿಳೇಕಹಳ್ಳಿಯ ಚರ್ಚ್ ಅನ್ನು ಮೇಲ್ದರ್ಜೆಗೇರಿಸಿದರು.

ಬಿಳೇಕಹಳ್ಳಿಯಿಂದ ಬ್ಲ್ಯಾಕ್‌ಪಲ್ಲಿ

ತಿಗಳ ಸಮುದಾಯದವರೇ ಹೆಚ್ಚಿದ್ದ ಈ ಭಾಗದಲ್ಲಿನ ಕ್ರೈಸ್ತರು ಬಿಳೇಕಹಳ್ಳಿಯನ್ನು ಬಿಳೇಕಪಳ್ಳಿ ಎಂದು ಕರೆಯುತ್ತಿದ್ದರು. ಪಾಂಡಿಚೇರಿಯಿಂದ ಇಲ್ಲಿಗೆ ಬಂದಿದ್ದ ಫ್ರೆಂಚ್ ಪಾದ್ರಿಗಳು ಬರೆದ ದಾಖಲೆಗಳಲ್ಲಿ ಇದು ‘ಬ್ಲ್ಯಾಕ್‌ಪಲ್ಲಿ’ ಎಂದು ನಮೂದಾಗಿದೆ. 1832ರಲ್ಲಿ ಈ ಭಾಗದಲ್ಲಿ ನಡೆದ ಜನಾಂಗ ಸಂಘರ್ಷದಲ್ಲಿ ಚರ್ಚ್‌ನ ಕಟ್ಟಡ ನೆಲಸಮವಾಯಿತು. ಫಾದರ್ ಕ್ಲೈನರ್ ಅವರು ಕ್ರಿ.ಶ 1875–82ರಲ್ಲಿ ಇಲ್ಲಿ ಭವ್ಯ  ಕಟ್ಟಡವನ್ನು ಕಟ್ಟಿಸಿದರು.

ಇದು ಬೆಂಗಳೂರಿನ ಮೊದಲ ಗೋಥಿಕ್ ಶೈಲಿಯ ಚರ್ಚ್. ಇದರಲ್ಲಿ ಒಳಗಿನ ಕಂಬಗಳಲ್ಲಿ ದ್ರಾಕ್ಷಾಬಳ್ಳಿಯ ಉಬ್ಬು ಚಿತ್ತಾರಗಳಿವೆ. ವರ್ಣರಂಜಿತ ಗಾಜಿನ ಕಿಟಕಿಗಳಿವೆ. ಗೋಡೆಗಳ ಮೇಲುಗಡೆ ವಿವಿಧ ಚಿತ್ತಾರಗಳ ಗಾಜಿನ ಫಲಕಗಳನ್ನು ಜೋಡಿಸಲಾಗಿದೆ. ಈ ಚರ್ಚ್‌ ಅನ್ನು 1882ರ ಡಿಸೆಂಬರ್‌ 8ರಂದು ಬಿಷಪ್‌ ಕಾಡೊ ಅವರು 35 ಪಾದ್ರಿಗಳೊಂದಿಗೆ ಸೇರಿ ಪ್ರತಿಷ್ಠಾಪಿಸಿದ್ದರು. ಇಲ್ಲಿರುವ ಮೇರಿ ಮಾತೆಯ ಸುಂದರ ಪ್ರತಿಮೆ ಇಟಲಿಯಿಂದ ತರಿಸಿದ್ದು. ಮೇರಿಯ ಎಡ ತೋಳಲ್ಲಿ ಹಸನ್ಮುಖಿ ಬಾಲಕ ಯೇಸು ಇದ್ದಾನೆ. ಇಲ್ಲಿನ ವರ್ಣರಂಜಿತ ಗಾಜಿನ ಕಿಟಕಿಗಳನ್ನು ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ತೆಗೆಯಲಾಗಿತ್ತು. 1947ರಲ್ಲಿ ಪುನಃ ವರ್ಣರಂಜಿತ ಗಾಜಿನ ಕಿಟಕಿಗಳನ್ನು ಅಳವಡಿಸಲಾಯಿತು.

1974ರಲ್ಲಿ ಈ ಭವ್ಯ ದೇವಾಲಯವನ್ನು ‘ಬೆಸಿಲಿಕಾ’ ಎಂದರೆ ಮಹಾದೇವಾಲಯದ ಶ್ರೇಣಿಗೆ ಸೇರಿಸಿ ಗೌರವಿಸಲಾಯಿತು.

ಪ್ರಶಾಂತ ಸ್ಥಳ

‘ಶಿವಾಜಿನಗರ ಎಂದೊಡನೆ ಜನದಟ್ಟಣೆ, ವ್ಯಾಪಾರ ವಹಿವಾಟು, ಸಂಚಾರ ದಟ್ಟಣೆ ನೆನಪಾಗುತ್ತದೆ. ಇವುಗಳ ನಡುವೆಯೇ ಇರುವ ಸೇಂಟ್‌ ಬೆಸಿಲಿಕಾ ಚರ್ಚ್‌ ಪ್ರವೇಶಿಸಿದರೆ ಸಾಕು ಪ್ರಶಾಂತ ಸ್ಥಳಕ್ಕೆ ಭೇಟಿ ನೀಡಿದ ಅನುಭವ ಆಗುತ್ತದೆ. ಎಲ್ಲ ಜಾತಿ, ಧರ್ಮ, ಭಾಷೆಯ ಭಕ್ತರು ಅಲ್ಲಿ ಪ್ರಾರ್ಥಿಸುವುದರಿಂದ ಇದನ್ನು ನಗರದ ಸಾಮರಸ್ಯದ ತಾಣ ಎನ್ನಬಹುದು. ಅಲ್ಲದೆ ಭಕ್ತಿ, ಭಾವ ಮತ್ತು ಆಧ್ಯಾತ್ಮದ ಮನೋಭಾವ ಹೊಂದಿರುವವರಿಗೆ ಇಲ್ಲೊಂದು ರೀತಿಯ ವೈಬರೇಷನ್‌ ಆಗುತ್ತದೆ’ ಎನ್ನುತ್ತಾರೆ ಇತಿಹಾಸಕಾರ ಸುರೇಶ್‌ ಮೂನ.

ಎತ್ತರದ ಗೋಪುರ

ಈ ಚರ್ಚ್‌ ಒಟ್ಟು 172 ಅಡಿ ಉದ್ದವಿದ್ದು 50 ಅಡಿ ಅಗಲವಿದೆ. ಅದರಲ್ಲಿನ ಗೋಪುರವೇ 160 ಅಡಿ ಎತ್ತರವಿದೆ. ಬಾಲಯೇಸುವನ್ನು ಕೈಯಲ್ಲಿ ಹಿಡಿದಿರುವ ಮೇರಿ ಮಾತೆಯ ಸುಂದರ ಪ್ರತಿಮೆ ಸುಮಾರು 6 ಅಡಿಗಳಷ್ಟು ಎತ್ತರದ್ದಾಗಿದೆ. ಇದಲ್ಲದೆ ಚರ್ಚ್‌ನ ಪ್ರವೇಶದ್ವಾರದಲ್ಲಿ ಮೇರಿ ಮಾತೆಯ ಮತ್ತೊಂದು ಪ್ರತಿಮೆ ಇದೆ. ಅಲ್ಲಿ ಭಕ್ತರು ಉಪ್ಪು, ಕಾಳು ಮೆಣಸು ಸುರಿದು ಹರಕೆ ಮಾಡಿಕೊಳ್ಳುತ್ತಾರೆ.

* ಬ್ರಿಟಿಷ್‌ ಮಿಲಿಟರಿ ಅಧಿಕಾರಿ ಬ್ಲಾಕಿಸ್ಟನ್‌ ಎಂಬುವರು ‘ಕಂಟೋನ್ಮೆಂಟ್‌’ನ ನಿರ್ಮಾಣಕ್ಕೆ ಕ್ರಿ.ಶ 1817ರಲ್ಲಿ ಯೋಜನೆ ಸಿದ್ಧಪಡಿಸಿದ್ದರು. ಬ್ಲಾಕಿಸ್ಟನ್‌ ಸ್ಮರಿಸಲು ತಮಿಳು ಭಾಷಿಗರು ಈ ಭಾಗಕ್ಕೆ ‘ಬ್ಲ್ಯಾಕ್‌ಪಲ್ಲಿ’ ಎಂದು ಕರೆಯುತ್ತಿದ್ದಿರಬಹುದು

– ಡಾ. ಎಸ್‌.ಕೆ. ಅರುಣಿ, ನಿರ್ದೇಶಕರು, ಐಸಿಎಚ್‌ಆರ್‌ ಬೆಂಗಳೂರು ವಲಯ

* ‘ಬೆಸಿಲಿಕಾ’ (ಮಹಾದೇವಾಲಯ) ಶ್ರೇಣಿಗೆ ಸೇರಿರುವ ದೇಶದ ಆರು ಚರ್ಚ್‌ಗಳಲ್ಲಿ ಬೆಂಗಳೂರಿನ ‘ಸೇಂಟ್‌ ಮೇರಿ ಬೆಸಿಲಿಕಾ‘ ಕೂಡ ಒಂದು ಎಂಬುದು ಹೆಮ್ಮೆಯ ವಿಷಯ. ದೇಶದ ಚರ್ಚ್‌ಗಳ ವಾಸ್ತುಶಿಲ್ಪದಲ್ಲಿ ಇದರ ಶೈಲಿ ವಿಶಿಷ್ಟ ಮತ್ತು ಮಹತ್ವದ್ದಾಗಿದೆ
– ಸುರೇಶ್‌ ಮೂನ, ಇತಿಹಾಸಕಾರ

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.