ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನಾಡರ ಕೊನೆಯ ನಾಟಕ | ರಂಗಮಂಚದ ಮೇಲೆ ‘ರಾಕ್ಷಸ ತಂಗಡಿ’

Last Updated 21 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಗಿರೀಶ ಕಾರ್ನಾಡರ ಕೊನೆಯ ನಾಟಕವನ್ನು ರಂಗಭೂಮಿಗೆ ತರಲು ಬೆಂಗಳೂರಿನ ಖ್ಯಾತ ರಂಗ ನಿರ್ದೇಶಕ ಅರ್ಜುನ್ ಸಜನಾನಿ ಶ್ರಮಿಸುತ್ತಿದ್ದಾರೆ. ಈ ನಾಟಕ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕಾರ್ನಾಡರು ಮೊದಲ ಬಾರಿಗೆ ‘ಕ್ರಾಸಿಂಗ್‌ ಟು ತಾಳಿಕೋಟೆ’ ಹಸ್ತಪ್ರತಿ ಕಳುಹಿಸಿದಾಗ ‘ಇದು ಒಂದು ಚಲನಚಿತ್ರವಾಗಬೇಕಿತ್ತು’ ಎನ್ನುವುದು ಸಜನಾನಿ ಅವರ ಮೊದಲ ಉದ್ಗಾರವಾಗಿತ್ತಂತೆ.

ಕಾರ್ನಾಡರು 2018ರಲ್ಲಿ ಕನ್ನಡ ನಾಟಕ ‘ರಾಕ್ಷಸ ತಂಗಡಿ’ ಬರೆದಿದ್ದರು. ಅದರ ಇಂಗ್ಲಿಷ್ ಅನುವಾದ ಇದೇ ವರ್ಷ ಮೇ ತಿಂಗಳಲ್ಲಿ ಪ್ರಕಟವಾಗಿತ್ತು. ವಿಜಯನಗರ ಸಾಮ್ರಾಜ್ಯದ ಪತನ ಮತ್ತು ಅದರ ರಾಜ ಅಳಿಯ ರಾಮರಾಯನ ಸಾವು ‘ಕ್ರಾಸಿಂಗ್‌ ಟು ತಾಳಿಕೋಟೆ’ ನಾಟಕದ ವಸ್ತು.

ಇಡೀ ದಕ್ಷಿಣ ಭಾರತದ ಆಳ್ವಿಕೆ ನಡೆಸಿದವನು ವಿಜಯನಗರದ ರಾಜ ಕೃಷ್ಣದೇವರಾಯ. ಅವನ ಅಳಿಯನಾಗಿದ್ದ ರಾಮರಾಯ ಪರಿಸ್ಥಿತಿಯ ಶಿಶುವಾಗಿ ಆಡಳಿತದ ಚುಕ್ಕಾಣಿ ಹಿಡಿದ. ಆದರೆ, ಜನ್ಮತಃ ಪ್ರತಿಷ್ಠಿತನಲ್ಲ ಎನ್ನುವ ಕಾರಣಕ್ಕೆ ರಾಜಪಟ್ಟ ಸಿಗಲಿಲ್ಲ.

‘ಕ್ರಾಸಿಂಗ್‌ ಟು ತಾಳಿಕೋಟೆ’ ಗ್ರೀಕ್ ದುರಂತ ನಾಟಕಗಳಂತೆ ಅಲ್ಲ. ರಾಮರಾಯನ ಅತಿ ಆತ್ಮವಿಶ್ವಾಸದ ಜೊತೆಗೆ ದಕ್ಷಿಣ ಭಾರತದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿದೆ. ಈ ನಾಟಕವನ್ನು ರಂಗಭೂಮಿಗೆ ತರುವ ಹೊಣೆಯನ್ನು ಕಾರ್ನಾಡರು ಸಜನಾನಿ ಅವರಿಗೆ ವಹಿಸಿದ್ದರು. ಈ ಹಿಂದೆಯೂ ಅವರು ಕಾರ್ನಾಡರ ಹಲವು ನಾಟಕಗಳನ್ನು ರಂಗಭೂಮಿಗೆ ತಂದಿದ್ದರು.

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ‘ಸನ್ನಿಸ್’ ರೆಸ್ಟೊರೆಂಟ್‌ನ ಒಡೆಯರಾದ ಸಜನಾನಿ ಅವರದು ರಂಗಭೂಮಿಯಲ್ಲಿ ಚಿರಪರಿಚಿತ ಹೆಸರು. ‘ನಾಟಕ ಬರೆದವರೊಬ್ಬರು ನಮ್ಮನ್ನು ಗುರುತಿಸಿ, ನೀವೇ ನಿರ್ದೇಶನ ಮಾಡಬೇಕು ಎಂದು ಹೇಳುವುದೇ ನಮಗೆ ದೊಡ್ಡ ಗೌರವ. ಕಾರ್ನಾಡರು ‘ಫೈರ್‌ ಅಂಡ್‌ ರೇನ್ (ಅಗ್ನಿ ಮತ್ತು ಮಳೆ)’ ನಾಟಕದ ವಿಚಾರದಲ್ಲಿ ನನಗೆ ಅಂಥ ಗೌರವ ನೀಡಿದ್ದರು. ಇದೀಗ ‘ಕ್ರಾಸಿಂಗ್ ಟು ತಾಳಿಕೋಟೆ’ ವಿಚಾರದಲ್ಲಿಯೂ ಇಂಥದ್ದೇ ಗೌರವ ನನಗೆ ಸಿಕ್ಕಿತು’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ನಮ್ಮ ಗೆಳೆತನ ಎರಡು ದಶಕಗಳಷ್ಟು ಹಳೆಯದು. ‘ಎ ಡೇ ಇನ್ ಹಾಲಿವುಡ್ ಅಂಡ್ ಎ ನೈಟ್ ಇನ್ ಉಕ್ರೇನ್‌’ ನೋಡಿದ ನಂತರ ಕಾರ್ನಾಡರು ಸಜನಾನಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಸಜನಾನಿಯ ಉನ್ನತ ನಿರ್ಮಾಣ ತಂತ್ರಗಳು ಕಾರ್ನಾಡರಿಗೆ ಮೋಡಿ ಮಾಡಿದ್ದವು. ಇದಾದ ಒಂದೇ ವಾರದಲ್ಲಿ ‘ದಿ ಫೈರ್ ಅಂಡ್ ರೇನ್’ನ ಒಂದು ಪ್ರತಿ ಸಜನಾನಿ ಅವರಿಗೆ ತಲುಪಿತ್ತು.

2000ನೇ ಇಸವಿಯಲ್ಲಿ ಸಜನಾನಿ ಫೈರ್ ಅಂಡ್ ರೇನ್ ನಿರ್ದೇಶಿಸಿದ್ದರು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಈ ನಾಟಕದ ಪ್ರದರ್ಶನ ನಡೆದಿತ್ತು. ಕೆಲವು ನಾಟಕಗಳನ್ನು ಕಾರ್ನಾಡರು ಇಂಗ್ಲಿಷ್‌ನಲ್ಲಿಯೇ ಮೊದಲು ಬರೆದಿದ್ದರು. ಅದರ ಪೈಕಿ ‘ಬಲಿ–ದಿ ಸ್ಯಾಕ್ರಿಫೈಸ್’ ಸಹ ಒಂದು. ಈ ನಾಟಕವನ್ನೂ ಸಜನಾನಿ ನಿರ್ದೇಶಿಸಿದ್ದರು.

2002ರಲ್ಲಿ ಸಜನಾನಿ ‘ಅಗ್ನಿ ವರ್ಷ’ ನಾಟಕ ನಿರ್ದೇಶಿಸಿದ್ದರು. ಅದು ‘ದಿ ಫೈರ್ ಅಂಡ್ ದಿ ರೈನ್‌’ನ ಹಿಂದಿ ಅನುವಾದ. ಈ ನಾಟಕದಲ್ಲಿ ಸಿನಿಮಾ ನಟರಾದ ಮಿಲಿಂದ್ ಸೋಮನ್, ಸೊನಾಲಿ ಕುಲಕರ್ಣಿ, ಜಾಕಿ ಶ್ರಾಫ್, ರವೀನಾ ಟಂಡನ್ ಮತ್ತು ನಾಗಾರ್ಜುನ ಅಭಿನಯಿಸಿದ್ದರು. ಸಜನಾನಿ ಮತ್ತು ಕಾರ್ನಾಡ ಜೋಡಿಯ ನಾಲ್ಕನೇ ಪ್ರಯೋಗ ‘ಕ್ರಾಸಿಂಗ್ ಟು ತಾಳಿಕೋಟೆ’.

ಕನ್ನಡಿಗರಿಗೆ ವಿಜಯನಗರ ಸಾಮ್ರಾಜ್ಯ ಎಂದರೆ ಸಾಕು ‘ಶ್ರೀಕೃಷ್ಣದೇವರಾಯ’ ಸಿನಿಮಾದ ಡಾ.ರಾಜ್‌ಕುಮಾರ್ ಅವರೇ ನೆನಪಾಗುತ್ತಾರೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಸಂಪತ್ತು, ಅದರ ಪತನದ ಬಗ್ಗೆ ಕನ್ನಡಿಗರು ಸಾಕಷ್ಟು ಕಥೆಗಳನ್ನು ಕೇಳಿದ್ದಾರೆ. ‘ಕ್ರಾಸಿಂಗ್‌ ಟು ತಾಳಿಕೋಟೆ’ ನಾಟಕದ ಮೂಲಕ ಕಾರ್ನಾಡರು ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣವಾದ ಅಂಶಗಳನ್ನು ಕಾಲ್ಪನಿಕ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.

ರಿಹರ್ಸಲ್‌ನ ನೋಟ. ಮಧ್ಯದಲ್ಲಿ ಅರ್ಜುನ್‌ ಸಜನಾನಿ
ರಿಹರ್ಸಲ್‌ನ ನೋಟ. ಮಧ್ಯದಲ್ಲಿ ಅರ್ಜುನ್‌ ಸಜನಾನಿ

‘ಇದು ಕೇವಲ ರಾಜರ ಕಥೆಯಲ್ಲ. ಇನ್ನೂ ಸಾಕಷ್ಟು ವಿಷಯಗಳು ಅಡಗಿವೆ’ ಎನ್ನುತ್ತಾರೆ ಸಜನಾನಿ. ಆ ‘ಇನ್ನೂ ಸಾಕಷ್ಟು’ ಏನು ಎಂಬುದರ ಬಗ್ಗೆ ಅವರು ಏನನ್ನೂ ಹೇಳುವುದಿಲ್ಲ. ಆದರೆ ಈ ನಾಟಕದಲ್ಲಿ ಭಾವುಕ ಪಲ್ಲಟವೊಂದು ಅಡಗಿದೆ ಎಂದು ಮುಗುಮ್ಮಾಗಿ ಬಿಡುತ್ತಾರೆ. ‘ನಾಟಕ ಹಸ್ತಪ್ರತಿಯನ್ನು ಓದುವಾಗ ಅದರಲ್ಲಿರುವ ಭಾವುಕ ಪಲ್ಲಟ ನಿಮ್ಮನ್ನು ನೇರವಾಗಿ ತಾಗದಿರಬಹುದು. ಆದರೆ ನಾನು ಅದರಲ್ಲಿಯೇ ಮುಳುಗಿ ತೇಲಿದ ಮೇಲೆ ಭಾವುಕ ಎಳೆಯ ಸುತ್ತ ಇರುವ ಹತ್ತಾರು ಅರ್ಥಗಳು ಹೊಳೆದವು’ ಎನ್ನುತ್ತಾರೆ.

‘ಓರ್ವ ರಂಗ ನಿರ್ದೇಶಕನಾಗಿ ನನಗೆ ಇಂಥ ಎಳೆಗಳನ್ನು ಗುರುತಿಸಿ, ಪ್ರೇಕ್ಷಕರಿಗೆ ದಾಟಿಸುವುದು ಸವಾಲಿನ ಕೆಲಸ’ ಎನ್ನುತ್ತಾರೆ ಅವರು.

ವಿಜಯನಗರ ಸಾಮ್ರಾಜ್ಯ ಪತನಕ್ಕೆ ಐತಿಹಾಸಿಕ ಸಂಗತಿಗಳು ಕಾರಣ. ಆದರೆ ಇವು ಇತಿಹಾಸದ ಪಠ್ಯಗಳಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದಿಲ್ಲ. ವಿಜಯನಗರವನ್ನು ದಾಳಿಕೋರರು ಕೆಡವಿದ ಭವ್ಯ ಸಾಮ್ರಾಜ್ಯದ ಸೌಧ ಎಂದೇ ಇಂದಿಗೂ ವ್ಯಾಖ್ಯಾನಿಸಲಾಗುತ್ತಿದೆ.

ಈ ವಿಷಯವನ್ನು ಕಾರ್ನಾಡರು ಹಲವು ಮುಖಗಳಿಂದ ಪರಿಶೀಲನೆಗೆ ಒಳಪಡಿಸುತ್ತಾರೆ. ಯುದ್ಧಭೂಮಿಗೆ ಎರಡೂ ಧರ್ಮಗಳ ಸೈನಿಕರನ್ನು ಕರೆತರುತ್ತಾರೆ. ಆದರೆ ಅವರು ಕೇವಲ ಧಾರ್ಮಿಕ ಕಾರಣಗಳಿಗಾಗಿ ಹೋರಾಡುವುದಿಲ್ಲ ಎಂದು ಸ್ಪಷ್ಟಪಡಿಸಲು ಯತ್ನಿಸುತ್ತಾರೆ.

‘ಕಾರ್ನಾಡರ ಬಗ್ಗೆ ನನಗಿದ್ದ ಗೌರವ ಮತ್ತು ಮೆಚ್ಚುಗೆಈ ನಾಟಕ ಓದಿದ ನಂತರ ಹೆಚ್ಚಾಯ್ತು. ಕಥೆಯಲ್ಲಿ ಹಿಂದೂ–ಮುಸ್ಲಿಂ ನಾಯಕರು ಬರುತ್ತಾರೆ. ಕಾರ್ನಾಡರು ಅವರಿಬ್ಬರನ್ನೂ ಸಮಾನವಾಗಿ ಕಾಣುತ್ತಾರೆ. ಮಾತ್ರವಲ್ಲ, ಇದು ರಾಜಕೀಯ ಕಾರಣಗಳಿಗಾಗಿ ನಡೆದ ಯುದ್ಧ. ಧಾರ್ಮಿಕ ಹೋರಾಟವಲ್ಲ’ ಎಂದು ಸ್ಪಷ್ಟವಾಗಿ ಚಿತ್ರಿಸುತ್ತಾರೆ.

ನಾಟಕದಲ್ಲಿ ಅಭಿನಯಿಸುತ್ತಿರುವ 30 ಕಲಾವಿದರಲ್ಲಿ ಅಶೋಕ್ ಮಂದಣ್ಣ, ವೀಣಾ ಸಜನಾನಿ ಮತ್ತು ಸ್ವಾತಿ ಡೇ ಇದ್ದಾರೆ. ಪ್ರಕಾಶ್ ಸೊಂಟಕ್ಕೆ ಸಂಗೀತ ನಿರ್ದೇಶನ, ಪ್ರಿಯಾ ಬೆನಗಲ್ ಅವರ ಪ್ರಸಾಧನ ಇದೆ. ರಂಗಸಜ್ಜಿಕೆಯನ್ನು ಅರುಣ್ ಸಾಗರ್‌ ವಿನ್ಯಾಸ ಮಾಡಿದ್ದಾರೆ.

‘ನಾಟಕಕ್ಕಾಗಿ ಆನ್‌ಲೈನ್‌ನಲ್ಲಿ ಸಾಕಷ್ಟು ವಸ್ತುಗಳನ್ನು ಆರ್ಡರ್ ಮಾಡಿದ್ದೇವೆ’ ಎಂದು ಸಜನಾನಿ ಮುಗುಳ್ನಗುತ್ತಾರೆ. ಇತಿಹಾಸದ ಅದ್ಭುತ ಭಾಗವನ್ನು ಕಡಿಮೆ ವಸ್ತ್ರವಿನ್ಯಾಸ ಮತ್ತು ರಂಗಪರಿಕರಗಳನ್ನು ಬಳಸಿ ಜನರ ಎದುರು ಸಾದರಪಡಿಸುತ್ತೇವೆ. ನಾಟಕದ ನಡೆ ಸಿನಿಮೀಯವಾಗಿದ್ದರೂ, ರಂಗಮಂಚದಲ್ಲಿ ಜೀವಂತಿಕೆ ಕಾಯ್ದುಕೊಳ್ಳುತ್ತೇವೆ ಎನ್ನುವ ವಿಶ್ವಾಸ ಅವರಲ್ಲಿದೆ.

‘ಕ್ರಾಸಿಂಗ್‌ ಟು ತಾಳಿಕೋಟೆ’ ವಿಶ್ವದ ಮೊದಲ ಪ್ರದರ್ಶನವನ್ನು ನಂದನ್ ಮತ್ತು ರೋಹಿಣಿ ನೀಲೇಕಣಿ, ಕಿರಣ್ ಮಜುಂದಾರ್‌ ಶಾ ಪ್ರಾಯೋಜಿಸಿದ್ದಾರೆ.

ಇತಿಹಾಸದ ತ್ರಿವಳಿಗಳು
ಭಾರತೀಯ ಪೌರಾಣಿಕ ಕಥೆಗಳಲ್ಲಿ ಅಡಗಿರುವ ತಾತ್ವಿಕ ಪ್ರಶ್ನೆಗಳನ್ನು ಶೋಧಿಸುವುದು ಕಾರ್ನಾಡರ ಆಸಕ್ತಿ. ‘ಹಯವದನ’, ‘ನಾಗಮಂಡಲ’ ಮತ್ತು ‘ತುಘಲಕ್‌’ ನಾಟಕಗಳು ವ್ಯಾಪಕ ಮೆಚ್ಚುಗೆ ಮತ್ತು ಟೀಕೆಗಳನ್ನು ಏಕಕಾಲಕ್ಕೆ ಸಂಪಾದಿಸಿದ್ದವು. ಕಾರ್ನಾಡರು ಇತಿಹಾಸದ ವಸ್ತುಗಳನ್ನು ಮುಟ್ಟಿ ಅರಗಿಸಿಕೊಂಡವರು.

12ನೇ ಶತಮಾನದಲ್ಲಿ ವೈದಿಕಶಾಹಿಯನ್ನು ವಿರೋಧಿಸಿ ಮುನ್ನಡೆಗೆ ಬಂದ ಶರಣ ಚಳವಳಿಯ ಬಗ್ಗೆ ‘ತಲೆದಂಡ’ ನಾಟಕ ಬರೆದರು. ‘ಟಿಪ್ಪುವಿನ ಕನಸುಗಳು’ 18ನೇ ಶತಮಾನದ ಮೈಸೂರು ಸಂಸ್ಥಾನದ ಬಗ್ಗೆ ಗಮನ ಸೆಳೆದಿತ್ತು. ವಿಜಯನಗರ ಸಾಮ್ರಾಜ್ಯದ ಬಗ್ಗೆ ನಾಟಕ ಬರೆಯಬೇಕು ಎನ್ನುವ ಕಾರ್ನಾಡರ ಕನಸು ಇದೀಗ ‘ಕ್ರಾಸಿಂಗ್‌ ಟು ತಾಳಿಕೋಟೆ’ ಕೃತಿಯ ಮೂಲಕ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT