ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸೆಕಲೆ | ನಗರಕೆರೆಯ ಚಿತ್ರ ಕುಟೀರ

Last Updated 7 ಆಗಸ್ಟ್ 2020, 21:34 IST
ಅಕ್ಷರ ಗಾತ್ರ
ADVERTISEMENT
""

ಕುಟೀರ ಕಲ್ಪನೆಯಲ್ಲಿ ರೂಪಗೊಂಡಿರುವ ಆ ಮನೆಯ ಮೇಲ್ಮಹಡಿಯ ಗೋಡೆಗಳ ತುಂಬಾ ‘ಹಸೆಕಲೆ’ಯ ಚಿತ್ತಾರಗಳು. ಮನೆ ಪೂರ್ಣ ಆಧುನಿಕ ಆರ್‌ಸಿಸಿಯಿಂದ ಕಟ್ಟಿದ್ದರೂ, ಮಹಡಿಯ ಸೂರಿಗೆ ಮಾತ್ರ ಮಂಗಳೂರು ಹೆಂಚಿನ ಗುಡಾರ ಹೊದಿಸಿದ್ದಾರೆ. ಶ್ವೇತವರ್ಣದ ಗೋಡೆಗಳಿಗೆ ಅಕ್ರಿಲಿಕ್‌ ಮೂಲಕ ಮಣ್ಣಿನ ಬಣ್ಣದ ಹಸೆ ಬರೆಯಲಾಗಿದೆ. ಸುತ್ತಲೂ ಗಡಿರೇಖೆ, ಬಾಗಿಲುಗಳಿಗೆ ಭತ್ತದ ತೋರಣ, ಕಿಟಕಿ, ಬಲ್ಬ್‌, ಸ್ವಿಚ್‌ ಬೋರ್ಡ್‌ಗಳಿಗೂ ಚಿತ್ತಾರದ ಫ್ರೇಮ್‌ಗಳು... ಒಟ್ಟಾರೆ ಮನೆಯ ಮೇಲೊಂದು ‘ಚಿತ್ರಕುಟೀರ‘ವಿರುವಂತೆ ಕಾಣುತ್ತದೆ.

ಇದು ಮಂಡ್ಯಜಿಲ್ಲೆ ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದ ಕಲಾಪ್ರೇಮಿ ನ.ಲಿ.ಕೃಷ್ಣ ಅವರ ಹೊಸ ಮನೆಯ ‘ಚಿತ್ತಾರ ಕಥೆ’. ಕೃಷ್ಣ ಅವರು, ತಮ್ಮ ಮನೆಯ ಮಹಡಿಯ ಗೋಡೆಗಳನ್ನು ಅಪರೂಪದ ‘ಹಸೆಕಲೆ’ ಚಿತ್ರಗಳಿಗಾಗಿಯೇ ಮೀಸಲಿಟ್ಟಿದ್ದಾರೆ. ಮಂಡ್ಯದ ಖ್ಯಾತ ಚಿತ್ರಕಲಾವಿದ ಎಂ.ಎಲ್‌.ಸೋಮವರದ ಬಹಳ ಆಸ್ಥೆಯಿಂದ ಹಸೆ ಚಿತ್ತಾರವನ್ನು ರಚಿಸಿದ್ದಾರೆ. ಕಲಾಪ್ರೇಮಿ – ಕಲಾವಿದರ ಈ ಜೋಡಿ, ಬಹಳ ಹಿಂದೆ ಹಳ್ಳಿಗಳಲ್ಲಿದ್ದ ಹಸೆ ಕಲೆ ಸಂಸ್ಕೃತಿಗೂ ಜೀವ ತುಂಬುವ ಪ್ರಯತ್ನ ಮಾಡುತ್ತಿದೆ.

ಕೃಷ್ಣ ಅವರದ್ದು 41ಅಡಿ X 20 ಅಡಿ ಅಳತೆಯ ಮನೆ. ಆ ಮನೆಯ ಮಹಡಿ ಏರುತ್ತಿದ್ದಂತೆ, ಭತ್ತದ ತೋರಣ ಕಟ್ಟಿರುವ ಬಾಗಿಲು ನಿಮ್ಮನ್ನು ಸ್ವಾಗತಿಸುತ್ತದೆ. ಆ ಕೊಠಡಿಯೊಳಗೆ ಅಡಿಯಿಡುತ್ತಿದ್ದಂತೆ ಬಲಗೋಡೆಯ ಮೇಲಿರುವ ಪಲ್ಲಕ್ಕಿ ಚಿತ್ರ ಗಮನ ಸೆಳೆಯುತ್ತದೆ. ಕಲಾವಿದ ಸೋಮವರದ ಪಲ್ಲಕ್ಕಿಯ ಹಸೆಯಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಪಲ್ಲಕ್ಕಿಯ ಮೆರವಣಿಗೆ, ವಾದ್ಯಗಾರರ ಚಿತ್ರಗಳು ಗಮನ ಸೆಳೆಯುತ್ತವೆ.

ಕಿಟಕಿಗಳ ನಡುವೆ ಬಿಡಿಸಲಾಗಿರುವ ರಥಚಿತ್ರ ಗ್ರಾಮೀಣ ಭಾಗದ ಹಬ್ಬ, ಆಚರಣೆಗಳನ್ನು ನೆನಪಿಸುತ್ತದೆ. ರಥದ ನಡುವಿನ ದೇವರ ಪೀಠ, ಗೋಪುರ, ಸುತ್ತಲೂ ತೂಗು ಹಾಕಲಾಗಿರುವ ಪತಾಕೆಗಳು, ಅಲಂಕಾರಿಕ ಸಾಮಗ್ರಿ, ಕಳಶವನ್ನು ರೇಖೆಗಳಿಂದ ಸೃಷ್ಟಿಸಲಾಗಿದೆ. ಹುಲ್ಲಿನ ಬಣವೆಯನ್ನು ಸಂಕೇತಿಸುವ ಇನ್ನೊಂದು ಹಸೆಚಿತ್ರದ ಒಡಲಲ್ಲಿ ವಿಕಾಸವಾದದ ಸಂಕೇತವಿದೆ.

ದೀಪಗಳ ಜೊತೆ ಚಿತ್ರಿಸಲಾಗಿರುವ ಮತ್ತೊಂದು ಆರತಿ ಹಸೆಯಲ್ಲಿ ಕಲಾವಿದನ ಪ್ರತಿಭೆ ಅನಾವರಣಗೊಳ್ಳುತ್ತದೆ. ಒಂದೊಂದು ಹಸೆ ಚಿತ್ರ ರಚಿಸಲು ಐದಾರು ದಿನಗಳ ಸಮಯ ವ್ಯಯಿಸಿದ್ದಾರೆ ಚಿತ್ರಕಲಾವಿದ ಸೋಮವರದ.

‘ನನಗೆ ಮೊದಲಿನಿಂದಲೂಹಸೆಕಲೆ ಮೇಲೆ ಅತೀವ ಆಸಕ್ತಿ. ಈ ಕಲೆಯ ಮೂಲದ ಬಗ್ಗೆ ಅಧ್ಯಯನ ಮಾಡಿ ಹಲವು ಮಾದರಿಗಳನ್ನು ಸಂಗ್ರಹಿಸಿಟ್ಟಿದ್ದೇನೆ. ಮೊದಲು ಆಹ್ವಾನ ಪತ್ರಿಕೆಗಳ ಮೇಲೆ ಹಸೆಕಲೆ ಚಿತ್ರಿಸುತ್ತಿದ್ದೆ. ಈ ಕಲೆಯ ಮೇಲೆ ನ.ಲಿ.ಕೃಷ್ಣ ಅವರಿಗಿರುವ ಪ್ರೀತಿಯಿಂದ ಇದು ಸಾಧ್ಯವಾಯಿತು’ ಎಂದು ಕಲಾವಿದ ಎಂ.ಎಲ್‌.ಸೋಮವರದ ಹೇಳುತ್ತಾರೆ.

ಮಲೆನಾಡು ಶಿವಮೊಗ್ಗ ಜಿಲ್ಲೆಯ ಸಾಗರ–ಸೊರಬ ಭಾಗದಲ್ಲಿ ಪ್ರಚಲಿತದಲ್ಲಿರುವ ಹಸೆಕಲೆ ಚಿತ್ತಾರಗಳು ಕಲಾವಿದ– ಕಲಾಪ್ರೇಮಿಯ ಆಸಕ್ತಿಯಿಂದ ಮೈಸೂರು ಭಾಗಕ್ಕೂ ವಿಸ್ತರಣೆಯಾಗಿದೆ. ಗ್ರಾಮೀಣ ಹಸಕಲೆಗಳಿಗೆ ಜೀವಕೊಡುವ ಪ್ರಯತ್ನದಲ್ಲಿರುವ ಕಲಾವಿದ ಸೋಮವರದ (ಮೊ: 9743512174) ಇದರ ಬಗ್ಗೆ ಒಂದಷ್ಟು ಅಧ್ಯಯನಕ್ಕೂ ಮುಂದಾಗಿದ್ದಾರೆ.

ಈ ಮನೆಗೆ ಬಂದವರೆಲ್ಲ, ಮೊದಲು ಮಹಡಿಯಲ್ಲಿರುವ ಈ ಕೊಠಡಿಗೆ ಹೋಗಿ,ಗೋಡೆ ಮೇಲಿನ ಚಿತ್ತಾರಗಳನ್ನು ನೋಡಿ ಬರುತ್ತಿದ್ದಾರೆ. ಇನ್ನೂ ಕೆಲವರು ಇಂಥ ಚಿತ್ರಗಳನ್ನು ತಮ್ಮ ತಮ್ಮ ಮನೆಗಳಲ್ಲೂ ಬರೆಸಲು ಯೋಚನೆ ಮಾಡಿದ್ದಾರೆ.

ಚಿತ್ರಗಳು: ಸಂತೋಷ್‌ ಚಂದ್ರಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT