ಗುರುವಾರ , ನವೆಂಬರ್ 26, 2020
21 °C

PV Web Exclusive | ಆಕಾಶ ಕಂದೀಲು ಹಚ್ಚುವ ಸಮಯ...

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದೀಪಾವಳಿಯ ಹೊಸ ವಸ್ತ್ರ ಧರಿಸಿದ ಸಡಗರದಲ್ಲಿದ್ದ ಶ್ರಾವಣಿಗೆ ಅಂಗಳದಲ್ಲಿ ಮಾವ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ. ಹೋಗಿ ಅವರ ಬಳಿ ಕುಳಿತು. ‘ಏನಿದು ಮಾವ?’ ಎಂದಳು. ‘ನೀನು ನೋಡುತ್ತಿರು’ ಎಂದರು.

ಬಿದಿರುಕಡ್ಡಿಗಳನ್ನು ಹರಡಿಕೊಂಡು ಕುಳಿತಿದ್ದ ಅವರು ನೋಡನೋಡುತ್ತಿದ್ದಂತೆ, ಆ ಕಡ್ಡಿಗಳನ್ನು ಜೋಡಿಸಿ ಸುಂದರ ನಕ್ಷತ್ರಾಕಾರದ ಬುಟ್ಟಿ ಸಿದ್ಧಪಡಿಸಿದರು. ಅದರಲ್ಲಿ ಒಂದು ಬಲ್ಬ್‌ ಅಳವಡಿಸಿದರು. ಉದ್ದನೆಯ ಗಳವೊಂದಕ್ಕೆ ಆ ಬುಟ್ಟಿಯನ್ನು ಕಟ್ಟಿ ಅಂಗಳದ ಕೊನೆಯಲ್ಲಿ ಆ ಗಳವನ್ನು ಹೂತಿಟ್ಟರು. ‘ಅರೆ ವ್ಹಾ.. ಇದು ಆಕಾಶ ಬುಟ್ಟಿಯಲ್ಲವೇ?’ ಎಂದು ಶ್ರಾವಣಿ ಚಪ್ಪಾಳೆ ತಟ್ಟಿ ಕುಣಿದಳು. ನಗರದ ತಮ್ಮ ಮನೆಯೆದುರು ಆಕಾಶ ಬುಟ್ಟಿ ಸಿಕ್ಕಿಸುವುದನ್ನು ಕಂಡಿದ್ದ ಅವಳು ಈ ಬಾರಿ ದೀಪಾವಳಿಗೆ ಅಜ್ಜನ ಮನೆಗೆ ಬಂದಿದ್ದರಿಂದ ಆಕಾಶಬುಟ್ಟಿ ಮಾಡುವುದನ್ನೂ, ಅದನ್ನು ಎತ್ತರದ ಕೋಲಿಗೆ ಸಿಕ್ಕಿಸುವುದನ್ನು ಕಂಡು ಹರ್ಷಪಟ್ಟಳು.

ಈಗಲೂ ಹಲವು ಹಳ್ಳಿಗಳಲ್ಲಿ ಗೂಡುದೀ‍ಪಗಳನ್ನು ಬಹುದೂರದಿಂದ ಕಾಣುವಂತೆ ಎತ್ತರದಲ್ಲಿ ಕಟ್ಟುವ ಇಂಥ ದೃಶ್ಯ ಕಂಡುಬರುತ್ತದೆ. ಕೆಲವೆಡೆ ಯಾರು ಎತ್ತರಕ್ಕೆ ಕಟ್ಟುವರು ಎಂಬ ಪೈಪೋಟಿಯೂ ಉಂಟಾಗುವುದಿದೆ. ದೀಪಾವಳಿಯ ಹಲವು ಸಂಭ್ರಮಗಳಲ್ಲಿ ಈ ಗೂಡುದೀಪಗಳ ಕೊಡುಗೆಯೇನೂ ಕಡಿಮೆಯಲ್ಲ. ರಾತ್ರಿ ಸಮಯದಲ್ಲಿ ಬಡಾವಣೆಗಳಲ್ಲಿ ಪ್ರತಿ ಮನೆಯೆದುರು ವಿವಿಧ ಆಕಾರ, ಬಣ್ಣಗಳ, ವಿನ್ಯಾಸಗಳಲ್ಲಿ ಬೆಳಗುವ ಈ ಬುಟ್ಟಿಗಳ ಅಂದ ನೋಡಲು ಎರಡು ಕಣ್ಣು ಸಾಲದಂತಿರುತ್ತವೆ. ರಂಧ್ರಗಳಿರುವ ಆಕಾಶಬುಟ್ಟಿಗಳು ಗೋಡೆಗಳ ಮೇಲೆ ಮೂಡಿಸುವ ಚಿತ್ತಾರಗಳು ಹಣತೆಯ ದೀಪಗಳೊಂದಿಗೆ ಸ್ಪರ್ಧೆಗಳಿದಂತೆ ಇರುತ್ತವೆ.

ಬಿದಿರು ಕಡ್ಡಿಗಳಿಂದ ಇಂಥ ಆಕಾಶದೀಪಗಳನ್ನು ಮಾಡುವ ಪದ್ಧತಿ ಪರಂಪರಾಗತವಾಗಿ ಬಂದಿದೆ. ಹಗುರವಾರ ತಂತಿಗಳನ್ನು ಬೇಕಾದ ಆಕಾರಕ್ಕೆ ಹೆಣೆದು ಅದಕ್ಕೆ ಬಣ್ಣದ ಕಾಗದಗಳನ್ನು ಅಂಟಿಸಿದರೂ ಸುಂದರ ಆಕಾಶಬುಟ್ಟಿಗಳು ಸಿದ್ಧವಾಗುತ್ತವೆ. ಸುಂದರ ವಿನ್ಯಾಸಗಳ ಬಟ್ಟೆಗಳ ತುಂಡುಗಳನ್ನಿಟ್ಟುಕೊಂಡು ಪ್ಯಾಚ್‌ವರ್ಕ್‌ ಮಾಡಿಯೂ ವಿನ್ಯಾಸ ಮಾಡಬಹುದು. ವಿವಿಧ ನಾರುಗಳನ್ನು ಹೆಣೆದು ಮಾಡಿರುವ ಗೂಡುದೀಪಗಳೂ ಬಂದಿವೆ. ವುಲನ್‌ ಹೆಣಿಗೆ ಗೊತ್ತಿರುವ ಮಹಿಳೆಯರು ಹೆಣಿಗೆಯಲ್ಲೇ ಆಕಾಶಬುಟ್ಟಿ ಸಿದ್ಧಪಡಿಸಿ ಪ್ರತಿ ವರ್ಷ ಅದನ್ನು ಮನೆಯೆದುರು ಹಾಕುವುದನ್ನೂ ಹಲವೆಡೆ ಕಾಣಬಹುದು. ಪ್ಲಾಸ್ಟಿಕ್‌ ವಯರ್‌ಗಳಲ್ಲಿ, ಕಸೂತಿ ದಾರಗಳಲ್ಲೂ ಇದನ್ನು ಸಿದ್ಧಮಾಡಬಹುದು. ಆಸಕ್ತಿಯೊಂದಿದ್ದರೆ ಕೈಗೆ ಸಿಗುವ ಯಾವುದೇ ಸಾಮಗ್ರಿಗಳಲ್ಲೂ ಆಕಾಶಬುಟ್ಟಿಗಳನ್ನು ಸಿದ್ಧಮಾಡಬಹುದು.

ಅಂಗಡಿಗಳಲ್ಲಿ ಕಾಗದ, ರಟ್ಟು, ಲೋಹ, ಗಾಜು, ಪ್ಲಾಸ್ಟಿಕ್‌, ಹೊಳೆಯುವ ಕಾಗದ, ಫೈಬರ್‌ ಹೀಗೆ ನೂರಾರು ಮಾದರಿಯ ಆಕಾಶಬುಟ್ಟಿಗಳು ಈಗ ಸಿಗುತ್ತವೆ. ಅಷ್ಟಕೋನ, ಷಟ್‌ಕೋನ, ವೃತ್ತಾಕಾರ, ಶಂಕುವಿನಾಕಾರ, ನಕ್ಷತ್ರ, ಸಿಲಿಂಡರ್‌... ಹೀಗೆ ವರ್ಷ ವರ್ಷವೂ ಇವುಗಳಲ್ಲಿ ಹೊಸ ಹೊಸ ಬಗೆ ಕಾಣಬಹುದು. ಹಲವರು ಈಗ ಮನೆಯಲ್ಲೇ ಸಿದ್ಧಪಡಿಸುವುದನ್ನು ಬಿಟ್ಟು ಅಂಗಡಿಗಳಲ್ಲಿ ಕೊಂಡುಕೊಳ್ಳುವುದಕ್ಕೆ ಆದ್ಯತೆ ನೀಡಿದ್ದಾರೆ. ಕಾರಣ ಸಮಯದ ಕೊರತೆ.

ಆಕಾಶ ಕಂದೀಲುಗಳನ್ನು ದೀಪಾವಳಿಯಿಂದ ಆರಂಭಿಸಿ ಕಾರ್ತಿಕ ಮಾಸದುದ್ದಕ್ಕೂ ಹಚ್ಚುವ ಪರಂಪರೆ ಇದೆ. ಇದಕ್ಕೊಂದು ಪೌರಾಣಿಕ ಹಿನ್ನೆಲೆಯೂ ಇದೆ. ಶ್ರೀರಾಮಚಂದ್ರ 14 ವರ್ಷಗಳ ವನವಾಸ ಮುಗಿಸಿ ಬಂದಾಗ ಅಯೋಧ್ಯೆಯ ನಿವಾಸಿಗಳು ಎಲ್ಲೆಡೆ ಆಕಾಶ ಕಂದೀಲು ಬೆಳಗಿ ಸ್ವಾಗತಿಸಿದ್ದರಂತೆ. ಹೀಗಾಗಿ ಇಂದಿಗೂ ಜನರು ಈ ಆಕಾಶದೀಪಗಳನ್ನು ಬೆಳಗಿಸಿ ರಾಮನನ್ನು ನೆನೆಯುತ್ತಾರೆ ಎಂಬ ಮಾತಿದೆ. ಕಾರ್ತಿಕ ಮಾಸದ ನಂತರ ಕ್ರಿಸ್‌ಮಸ್‌ ಹಾಗೂ ಹೊಸವರ್ಷದ ವೇಳೆ ಕ್ರಿಶ್ಚಿಯನ್ನರ ಮನೆಗಳೆದುರು ಮತ್ತೆ ಆಕಾಶದೀಪಗಳು ಪ್ರತ್ಯಕ್ಷವಾಗುತ್ತವೆ.


ಬೆಂಗಳೂರಿನ ಸಮರ್ಪಣ ಸಮಾಜ ಸೇವಾ ಸಂಸ್ಥೆಯವರು ಸಿದ್ಧಪಡಿಸಿದ ಆಕಾಶಬುಟ್ಟಿಗಳು.

ಸ್ವದೇಶಿ ಆಕಾಶದೀಪಗಳು

ವಿದೇಶಿ ಹಾಗೂ ಪ್ಲಾಸ್ಟಿಕ್‌ ಆಕಾಶದೀಪಗಳ ಭರಾಟೆ ಹೆಚ್ಚಾಗಿರುವ ಸಮಯದಲ್ಲೇ ಬೆಂಗಳೂರಿನ ‘ಸಮರ್ಪಣ ಸಮಾಜ ಸೇವಾ ಸಂಸ್ಥೆ’ ಮನೆಯಲ್ಲೇ ಮಾಡುವ ಆಕಾಶಬುಟ್ಟಿಗಳ ಬಗ್ಗೆ ಜನರ ಗಮನ ಸೆಳೆದಿದೆ.

‘8 ವರ್ಷಗಳಿಂದ ಚನ್ನಪಟ್ಟಣದ ಮೇದರ ಜನಾಂಗದವರಿಂದ ಬಿದಿರಿನ ಕಡ್ಡಿಗಳನ್ನು ತರಿಸಲಾಗುತ್ತಿದೆ. ಬೆಂಗಳೂರಿನ ಬಂಡಿರೆಡ್ಡಿ ವೃತ್ತದಿಂದ ಬಟ್ಟೆಗಳನ್ನು ಖರೀದಿಸುತ್ತೇವೆ. ಮಕ್ಕಳ ಮನಃ ಪರಿವರ್ತನ ಕೇಂದ್ರವೊಂದರಲ್ಲಿ ಆಕಾಶಬುಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ. ಬಿದಿರು ಕಡ್ಡಿಗಳು, ಬಟ್ಟೆ, ಮನೆಯಲ್ಲೇ ಮಾಡುವ ಗೋಂದು ಬಳಸಿ ಇವುಗಳನ್ನು ಸಿದ್ಧಪಡಿಸಲಾಗುತ್ತದೆ. ಆಕಾಶದೀಪ ತಯಾರಿಸಲು 32 ಬಿದಿರಿನ ಕಡ್ಡಿಗಳು ಬೇಕಾಗುತ್ತವೆ. ಅವುಗಳಲ್ಲಿ 4 ಕಡ್ಡಿಗಳು 12 ಇಂಚಿನವು. ಉಳಿದ 28 ಕಡ್ಡಿಗಳು 6 ಇಂಚಿನವು. 10ರಿಂದ 20 ಗ್ರಾಂ ಮನೆಯಲ್ಲೇ ತಯಾರಿಸಿದ ಗೋಂದು ಅಗತ್ಯ’ ಎಂದು ಸಮರ್ಪಣ ಸಮಾಜ ಸೇವಾ ಸಂಸ್ಥೆಯ ಶಿವಕುಮಾರ ಹೊಸಮನಿ ತಿಳಿಸಿದರು.

‘ನಮ್ಮ ಸಂಸ್ಥೆಯಿಂದ ಸಿದ್ಧವಾಗುವ ಆಕಾಶಬುಟ್ಟಿಗಳನ್ನು ಗರಿಷ್ಠ 4 ವರ್ಷ ಬಳಸಬಹುದು. ಕಡಿಮೆ ಲಾಭಾಂಶವಿರಿಸಿ ₹ 250ಕ್ಕೆ ಒಂದರಂತೆ ಮಾರಾಟ ಮಾಡಲಾಗುತ್ತದೆ. ಈ ಬಾರಿ ಇಂಥ 2,000 ಬುಟ್ಟಿಗಳನ್ನು ಸಿದ್ಧಪಡಿಸಿ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.


ಬೆಂಗಳೂರಿನ ಸಮರ್ಪಣ ಸಮಾಜ ಸೇವಾ ಸಂಸ್ಥೆಯ ಶಿವಕುಮಾರ ಹೊಸಮನಿ.

ಆಗಸದಲ್ಲಿ ತೇಲುವ ಗೂಡುದೀಪಗಳು

‘ಟ್ಯಾಂಗಲ್ಡ್‌’ ಎಂಬ ಅನಿಮೇಟೆಟ್‌ ಚಲನಚಿತ್ರದಲ್ಲಿ ಗಾಳಿಯಲ್ಲಿ ತೇಲುವ ಆಕಾಶಬುಟ್ಟಿಗಳನ್ನು ಸ್ವಾತಂತ್ರ್ಯಕ್ಕೆ ಹಂಬಲಿಸುವ ರಾಜಕುಮಾರಿ ರಫಂಜಲ್‌ಳ ಮನಸ್ಸಿನ ಪ್ರತಿಮೆಯಂತೆ ಬಳಸಲಾಗಿದೆ. ಇಂಥ ಬೃಹತ್‌ ಆಕಾಶಬುಟ್ಟಿಗಳನ್ನು ಈಗಲೂ ಜಗತ್ತಿನಾದ್ಯಂತ ಕೆಲವು ವಿಶೇಷ ಉತ್ಸವಗಳ ಸಂದರ್ಭದಲ್ಲಿ ಬಳಸುವುದನ್ನು ಕಾಣಬಹುದು. ಆಕಾಶಬುಟ್ಟಿಯೊಳಗೆ ಗಾಳಿ ಬಿಸಿಯಾದರೆ ಹಗುರವಾಗುತ್ತದೆ. ಆಗ ಅದು ವಾತಾವರಣದಲ್ಲಿ ಮೇಲೇರುತ್ತದೆ ಎಂಬ ವೈಜ್ಞಾನಿಕ ಸೂತ್ರವನ್ನಿರಿಸಿಕೊಂಡು ಇಂಥ ಆಕಾಶಬುಟ್ಟಿಗಳನ್ನು ಬಿಡುವುದನ್ನು ಕಾಣಬಹುದು. ಆದರೆ ಇದು ಬೆಂಕಿ ಅನಾಹುತಗಳನ್ನೂ ಉಂಟು ಮಾಡಿದ ಹಲವು ಘಟನೆಗಳು ನಡೆದ ಕಾರಣ ಹಲವು ದೇಶಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಲಾಗಿದೆ.

ನಮ್ಮ ದೇಶದಲ್ಲಿ ದೀಪಾವಳಿ ಹಾಗೂ ಕ್ರಿಸ್‌ಮಸ್‌ಗಳಲ್ಲಿ ಆಕಾಶದೀ‍ಪ ಹಚ್ಚುವ ಸಡಗರ ಕಂಡುಬರುತ್ತದೆ. ಅಲ್ಲಲ್ಲಿ ನವೀನ ಮಾದರಿಯ ಆಕಾಶಬುಟ್ಟಿ ತಯಾರಿಸುವ ಸ್ಪರ್ಧೆಗಳು ನಡೆದ ಉದಾಹರಣೆಗಳೂ ಇವೆ. ಆಗಸದಲ್ಲಿ ತೇಲುವ ಆಕಾಶಬುಟ್ಟಿಗಳು ಮಾತ್ರ ಇಲ್ಲಿ ಅಪರೂಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು